ಮಾಸ್ತಿಯವರೂ- ಸನ್ಯಾಸತ್ವವೂ

ಮಾಸ್ತಿ- ಕನ್ನಡದ ಆಸ್ತಿ ಎಂಬುದು ಬೀಸು ಹೇಳಿಕೆಯಾಗಿರಬಹುದು.ಆದರೆ ಬದುಕಿನ ಬಗೆಗೆ,ಧರ್ಮದ ಬಗೆಗೆ ಮಾಸ್ತಿಯವರಲ್ಲಿದ್ದ ಸೂಕ್ಷ್ಮತೆ, ಎಚ್ಚರ,ಅನುಮಾನಗಳನ್ನು ಅವರ ಸಣ್ಣ ಕತೆಗಳು ಅನಾವರಣಗೊಳಿಸುತ್ತವೆ.

ಮಾಸ್ತಿಯವರ ವ್ಯಕ್ತಿತ್ವವನ್ನು ತಿಳಿಸುವ ಒಂದು ನಿಜ ಘಟನೆಯನ್ನು ‘ ವಿದ್ಯಾಭೂಷಣರು ತಮ್ಮ ಆತ್ಮಕತೆ ‘ ನೆನಪೇ ಸಂಗೀತ’ ದಲ್ಲಿ ದಾಖಲಿಸಿದ್ದಾರೆ. -ಎಚ್ ಎಸ್ ರೇಣುಕಾರಾಧ್ಯ 

ಪೇಜಾವರ ಶ್ರೀಪಾದರು ಆಗತಾನೇ ಕೆನ್ನೆಗಳಲ್ಲಿ ಹಾಲು ಆರದ,ಮೀಸೆ ಮೂಡದ ವಟುವೊಬ್ಬನನ್ನು ತಮ್ಮ ಉತ್ತರಾಧಿಕಾರಿಯೆಂದು ಆಯ್ಕೆ ಮಾಡಿ, ಸಂನ್ಯಾಸ ನೀಡಿ ತಮ್ಮ ಜೊತೆಗಿರಿಸಿಕೊಂಡಿದ್ದರು. ಬಾಲಯತಿಯ ಮುಖದಲ್ಲಿ ಅಪೂರ್ವ ತೇಜಸ್ಸು. ಅವರದು ಅಪೂರ್ವ ಪ್ರತಿಭೆಯೂ ಹೌದು.

ಪೇಜಾವರ ಶ್ರೀಪಾದರನ್ನು ಭೇಟಿಯಾಗಲೆಂದು ಶತಾಯುಷ್ಯ ಸಮೀಪಿಸುತ್ತಿದ್ದ, ಕನ್ನಡದ ಆಸ್ತಿ- ಮಾಸ್ತಿಯವರು ಬಂದಿದ್ದರು. ಶ್ರೀಪಾದರ ಜೊತೆ ನಾನೂ ಇದ್ದೆ. ಮಾಸ್ತಿಯವರಿಗೆ ನಮ್ಮೆಲ್ಲರನ್ನು ಶ್ರೀಪಾದರು ಪರಿಚಯಿಸಿದರು. ಜೊತೆಗೆ ಹೊಸ ಸ್ವಾಮಿಗಳನ್ನೂ.

ಮಾಸ್ತಿಯವರು ಹೊಸ ಸ್ವಾಮಿಗಳನ್ನು ದಿಟ್ಟಿಸಿ ನೋಡಿದರು- ಮತ್ತೂ ನೋಡಿದರು! ‘ ಅಯ್ಯೋ ಪಾಪ’ ಎಂದುಸುರಿ ಸುಮ್ಮನಾದರು.

ಕೂಡಲೇ ಹಿರಿಯ ಶ್ರೀಪಾದರು ಪ್ರತಿಕ್ರಿಯಿಸುತ್ತ. “ಇಲ್ಲ ಇಲ್ಲ ಅವರಿಗೆ ಒಳ್ಳೆಯ ತರಬೇತಿ- ಶಿಕ್ಷಣ ನೀಡುವೆವು. ಪಾಠ ಪ್ರವಚನ ಮಾಡಿ ಯೋಗ್ಯ ರೀತಿಯಿಂದ ಅವರನ್ನು ಸಿದ್ಧಪಡಿಸುವೆವು” ಎಂದರೆ ಮಾಸ್ತಿಯವರಾದರೋ “ಇಲ್ಲ ಇಲ್ಲ ನನಗಿದರಲ್ಲಿ ನಂಬಿಕೆಯಿಲ್ಲ – ಸರಿ ಸರಿ ಇರಲೀ” ಎನ್ನುತ್ತಾ ಸ್ವಲ್ಪ ಹೊತ್ತು ಸುಮ್ಮನಾಗಿ- ಕೈಯಾಡಿಸಿ ವಿಷಯಾಂತರಗೊಂಡರು! ನಾನೂ ನೋಡುತ್ತಲೇ ಇದ್ದೆ.

– “ನೆನಪೇ ಸಂಗೀತ” ಆತ್ಮಕತೆಯಿಂದ ಆಯ್ದಭಾಗ.

Leave a Reply