“Next” ಎಂದು ಕೂಗಿ ಅವನ ಪ್ರಾಣ ಉಳಿಸಿದರು.. 

ಅನುಷಾ ಗೋಪಾಲಕೃಷ್ಣ

೬೦ ಜನರ ಮಧ್ಯದಲ್ಲಿ ಮಾತನಾಡಲು ನಿಂತಿದ್ದ ೬ ನೇ ತರಗತಿಯ ಅರವಿಂದನ ಕೈಕಾಲುಗಳು ನಡುಗುತ್ತಿದ್ದವು, ಹೃದಯ ಜೋರಾಗಿ ಬಡಿಯುತ್ತಿತ್ತು, ನಾಲಿಗೆ ತೊದಲುತ್ತಿತ್ತು, ಧ್ವನಿ ನಡುಗುತ್ತಿತ್ತು.

ಬಾಗಕೋಟೆ ಜಿಲ್ಲೆಯ ಪಟ್ಟದಕಲ್ಲಿನ ಉದ್ಯಾನವನದಲ್ಲಿ ಖಾಸಗಿ ಶಾಲೆಯೊಂದರಿಂದ ಪ್ರವಾಸಕ್ಕೆ ಬಂದ, ಸುಮಾರು ೬೦-೭೦ ವಿದ್ಯಾರ್ಥಿಗಳು ಸೇರಿದಂತೆ ೭ ಜನ ಶಿಕ್ಷಕರಿರುವ ಗುಂಪು ನೆರೆದಿದೆ. ಪಠ್ಯಪುಸ್ತಕದಲ್ಲಿ ಕಂಡ ಕರ್ನಾಟಕದ ವಿಸ್ಮಯಿ ತಾಣಗಳೆಲ್ಲದರ ನೇರ ದರ್ಶನ ಮಾಡಿಸುವ ೧೦ ದಿನಗಳ ಯೋಜನೆ ಆ ಶಾಲೆ ಕೈಗೊಂಡಿತ್ತು.

೭ ಜನ ಶಿಕ್ಷಕರ ಪೈಕಿ ಹಿರಿಯರಾದ ಇತಿಹಾಸದ ಶಿಕ್ಷಕಿಯೊಬ್ಬರು ಪ್ರತಿ ತಾಣಕ್ಕೆ ಭೇಟಿನೀಡಿದ ನಂತರ ಅದರ ಕುರಿತಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಪ್ರತ್ಯೇಕವಾಗಿ ವಿವರಿಸಬೇಕು ಕಂಡದ್ದನ್ನು ಬಣ್ಣಿಸಬೇಕು, ಅನುಭವವನ್ನು ಕಲೆಹಾಕಬೇಕೆಂಬ ಸವಾಲೊಂದನ್ನ ನೀಡಿದ್ದಾರೆ. ಪ್ರಯಾಣದ ಅಂತ್ಯದಲ್ಲಿ ಒಟ್ಟಾರೆ ಎಲ್ಲ ಸ್ಥಳಗಳನ್ನು ಅತ್ಯತ್ತಮವಾಗಿ ವರ್ಣಿಸಿದ ವಿದ್ಯಾರ್ಥಿಗೆ ಬಹುಮಾನವೂ ಘೋಷಿಸಿದ್ದರು.

“ಸುಂದರವಾಗಿ ಶಿಲ್ಪಗಳನ್ನು ಕೆತ್ತನೆ ಮಾಡಿದ ದೇವಾಲಯಗಳನ್ನ ನೋಡಿ ಸಂತೋಷವಾಯಿತು”.
“ಗೆಳೆಯರೊಂದಿಗೆ ಆಟವಾಡಿದ್ದು ಮೋಜು ತಂದಿತು” ಎಂದು ಹೇಳುತ್ತಿರುವ ಅನೇಕರಿಗೆ ಚಪ್ಪಾಳೆಗಳು ಬೀಳುತ್ತಿದ್ದವು.

ಅರವಿಂದನಿಗೆ ಬಹುಮಾನದ ಆಸೆ ದೂರದ ಮಾತು, ಈ ಚಟುವಟಿಕೆಯಲ್ಲಿ ಭಾಗವಹಿಸದೆ ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಹುಡುಕುತ್ತಿದ್ದ.
ಶಾಲೆಯಲ್ಲಿ ಪ್ರಬಂಧ ಲೇಖನದಲ್ಲಿ ಮೊದಲ ಸ್ಥಾನ ಪಡೆದರೂ, ಪ್ರಶಸ್ತಿ ಸ್ವೀಕರಿಸಲು ವೇದಿಕೆಯ ಮೇಲೆ ಹೋಗಬೇಕೆಂಬ ಕಾರಣಕ್ಕೆ ಹೊಟ್ಟೆ ನೋವು ಎಂಬ ನೆಪ ಹೇಳಿ ಮನೆಯಲ್ಲೇ ಉಳಿದುಕೊಳ್ಳುವಷ್ಟು ಅಧೈರ್ಯ, ಮುಜುಗರ. ಅಪ್ಪಟ ಅಂತರ್ಮುಖಿ ಅರವಿಂದ .

ಪಟ್ಟದಕಲ್ಲಿನಲ್ಲಿ ಧ್ವನಿ ನಡಗಿಸುತ್ತ ನಿಂತ ಅವನ ಪರಿಸ್ಥಿತಿಗೆ ಸ್ಪಂದಿಸಿದ ಶಿಕ್ಷಕಿ “Next” ಎಂದು ಮುಂದಿನ ವಿದ್ಯಾರ್ಥಿಯನ್ನು ಕೂಗಿ ಅವನ ಪ್ರಾಣ ಉಳಿಸಿದರು.

ಅಂದು ಕೊನೆಯ ದಿನ. ಪ್ರವಾಸದುದ್ದಕ್ಕೂ ಲಕೋಟೆಯಲ್ಲಿರಿಸಿದ ಕಾಗದಗಳನ್ನು ತೆಗೆದು ಬಿಡುವಾದಾಗಲೆಲ್ಲ ಅಲ್ಲಿನ ಸೌಂದರ್ಯ ಸಂಪತ್ತನ್ನು ಅಕ್ಷರಗಳಲ್ಲಿ ಹಿಡಿದಿಟ್ಟುಕೊಳ್ಳುವಲ್ಲಿ ತಮ್ಮನ್ನೇ ಹಿಂಬಾಲಿಸುತ್ತಿದ್ದ ಅರವಿಂದನನ್ನು ಗಮನಿಸಿದ ಶಿಕ್ಷಕಿ, ಆ ಎಲ್ಲ ಪತ್ರಗಳನ್ನು ಅವಚಿಟ್ಟುಕೊಳ್ಳುತ್ತಿದ್ದ ಅರವಿಂದನಿಂದ ಜಪ್ತಿ ಮಾಡಿ ಎಲ್ಲರ ಸಮ್ಮುಖದಲ್ಲಿ ಓದಲು ಆರಂಭಿಸುತ್ತಾರೆ.

”ಓ ವಿಜಯನಗರದ ಹೆಮ್ಮೆಯೇ, ಹೊಯ್ಸಳರ ರಾಣಿಯೇ, ಕಂಡ ಕಂಡವರೆಲ್ಲ ನಿನ್ನ ಸಂಪತ್ತಿಗಾಗಿ ಸಮರ ಸಾರಿ, ಸೆಣಸಾಡಿ ಸುಸ್ತಾದರೂ ಸಂಬಂಧವಿಲ್ಲದಂತೆ ಶತಮಾನಗಳುರುಳಿದರೂ ಸರಿದಾಡದೆ ನಿಂತಿರುವೆಯಾ ಹಂಪಿ ‘ಎಂಬಂತಹ ಅನೇಕ ಸಾಲುಗಳಿಂದ ಶಿಕ್ಷಕಿ ಸಂತೃಪ್ತರಾದರು.

ಕಲೆಯನ್ನು ಹರಿಬಿಡಲು ಎಲ್ಲರಿಗು ತಮ್ಮದೇ ಆದ ಶೈಲಿ ಇದ್ದು, ನಮ್ಮ ದೃಷ್ಟಿಕೋನವನ್ನು ಚುರುಕಾಗಿಸಿಕೊಳ್ಳಬೇಕು ಎಂಬಂತೆ ಮನವರಿಕೆ ಮಾಡಿಕೊಂಡರು .ಅರವಿಂದನಿಗಂದು ಬಹುಮಾನ ವಿತರಿಸಿ “It’s still ok to be an introvert” ಎಂಬಂತೆ ಸಮಾಧಾನ ಹೇಳಿದರು.

Leave a Reply