ಸಾರ್ ನನ್ನ ಹೆಸರಿನ ಹಿಂದೆ ಅಥವಾ ಮುಂದೆ ಒಂದು ಇನಿಶಿಯಲ್ ಇರಬೇಕಿತ್ತು..

“ಸಾರ್ ನನ್ನ ಹೆಸರಿನ ಹಿಂದೆ ಅಥವಾ ಮುಂದೆ ಒಂದು ಇನಿಶಿಯಲ್ ಇರಬೇಕಿತ್ತು” ಎಂದಷ್ಟೇ ಹೇಳಿದ ಅವನು, ಗಿರಾಕಿಯೊಬ್ಬರು ಕೂಗಿದ ಕೂಡಲೇ ಎಲ್ಲಾ ಮಾತುಗಳಿಗೂ ಅಲ್ಪವಿರಾಮವನ್ನಿಟ್ಟು ಓಡಿ ಹೋದ. ಅವನ ಸಂಕಟಗಳು ವಿಚಿತ್ರ ಎನ್ನುವುದನ್ನು ಅರ್ಥೈಸಿಕೊಳ್ಳುವುದಕ್ಕೆ ಅವನ ಅದೊಂದು ಮಾತು ಸಾಕಾಗಿತ್ತು. ಅವನ ಅದೊಂದು ಅಪೂರ್ಣವಾದ ಮಾತಿನಲ್ಲಿ ಸಾಂಧ್ರತೆ ಎನ್ನುವುದು ನಿಧಾನವಾಗಿ ಹೆಪ್ಪುಗಟ್ಟುತ್ತಿರುವಂತೆಯೂ ತೋರುತ್ತಿತ್ತು.

ಬೆಂಗಳೂರಿಗೆ ಒಲ್ಲದ ಮನಸ್ಸಿನಿಂದಲೇ ಅಂಟಿಕೊಂಡಿದ್ದೇನೆ ಎನ್ನುವಂತೆ ದಿನ ಕಳೆಯುತ್ತಿರುವ ಅವನು, ಯಾವುದೋ ಉದ್ದೇಶದೊಂದಿಗೆ ಬದುಕುತ್ತಿರುವವನಲ್ಲ. ಬದುಕಿನ ಯಾವುದೋ ಘನ ಉದ್ದೇಶ, ಸಿದ್ಧಾಂತ ಅಥವಾ ಸಾಕು ಎನ್ನುವಷ್ಟು ಹಣ ಮಾಡಿಟ್ಟುಕೊಳ್ಳುವ ಮೂಲಕ ಬದುಕಿನ ಮತ್ತಾವುದೋ ಸ್ತರಕ್ಕೆ ಜಿಗಿಯಬೇಕು ಎನ್ನುವ ಆಸೆಗಳ ಯಾವ ಗೆರೆಯೂ ಅವನ ಮಾತಿನಲ್ಲಿರಲಿಲ್ಲ. ಥೇಟು ತನ್ನ ಪಾಡಿಗೆ ತಾನು ಸುರಿದುಹೋಗುವ ಮಳೆಯಂತೆ ಬದುಕುತ್ತಿರುವ ಅವನು ಎದುರು ನೋಡುತ್ತಿರುವುದು ಅದೊಂದನ್ನು ಮಾತ್ರವೇ. ಅದು ಅವನ ಹೆಸರಿನ ಹಿಂದೆ ಅಥವಾ ಮುಂದೆ ಎಲ್ಲರಿಗೂ ಇರುವಂತೆ ಒಂದು ಇನಿಶಿಯಲ್ ಇರಬೇಕಿತ್ತು ಎನ್ನುವುದಷ್ಟೇ.

ಗುಪ್ಪೆಯಂತಹ ಗುಂಗುರು ಕೂದಲಿನ ಅವನನ್ನು ದೂರದಿಂದಲೇ ನಿಂತು ನೋಡಿದರೆ, ಟ್ರಾಫಿಕ್ ಸಿಗ್ನಲ್ ಮಗ್ಗುಲಿಗಿರುವ ಬಿಲ್ಡಿಂಗ್‍ನ ಕಡೆಯ ಮಹಡಿಯಲ್ಲಿರುವ ಹೋರ್ಡಿಂಗ್‍ನಲ್ಲಿನ ಅಪೂರ್ಣ ಕಾರ್ಟೂನ್ ಚಿತ್ರದಂತೆ ಕಾಣುತ್ತಾನೆ. ವಿಚಿತ್ರ ಕಮಟು ವಾಸನೆ ಹೊಮ್ಮಿಸುವ ಕಂದುಬಣ್ಣದ ನೆಸ್‍ಕೆಫೆ ಲೋಗೋ ಹೊಂದಿರುವ ಕಾಟನ್‍ ಶರ್ಟು, ಶತಮಾನದ ಹಿಂದಿನ ಕೊಳೆಯನ್ನು ಈಗಲೂ ಉಳಿಸಿಕೊಂಡಿರುವಂತೆ ತೋರುವ ನೀಲಿಪಂಚೆ ಅವನ ಬದುಕಿನ ಶೈಲಿಯನ್ನು ಕೇಳದೆಯೂ ಹೇಳುತ್ತವೆ. ಒಮ್ಮೆ ದಿಟ್ಟಿಸಿ ನೋಡಿದರೆ ಅವನ ಶರ್ಟು ಹಾಗೂ ಪಂಚೆಯಲ್ಲಿ ತುಂಬಿಹೋಗಿರುವ ಅಸಂಖ್ಯ ನಮೂನೆಯ ಬೆವರಿನ ಗೀಟುಗಳು ಈ ಮೊದಲು ಬಟ್ಟೆಗಳ ಅಸಲಿ ಬಣ್ಣಗಳು ಯಾವುದಾಗಿತ್ತು ಎನ್ನುವುದನ್ನು ಪ್ರಶ್ನೆಸಿಕೊಳ್ಳುವಂತೆ ಮಾಡಿಬಿಡುತ್ತವೆ.

ಅವನು ಓರ್ವ ಖಾಲಿ ಹಾಳೆಯಂತಹ ಸರಾಸರಿ ಮನುಷ್ಯ ಮಾತ್ರ. ಬೆಳಗ್ಗೆಯ ಮೊದಲ ಬೆಲ್ ಆಗುವುದರೊಳಗೆ ಕ್ಲಾಸ್‍ರೂಮ್ ಸೇರಿಕೊಳ್ಳುವ ಪ್ರೈಮರಿ ಸ್ಕೂಲಿನ ಮಗುವಿನಂತೆ, ಬೆಳಗ್ಗೆಯ ಒಂಬತ್ತು ಗಂಟೆಗೆಲ್ಲಾ ಯಶವಂತಪುರ ರೈಲು ನಿಲ್ದಾಣವನ್ನ ತಲುಪಿಬಿಡುವ ಅವನು ಆಳದಲ್ಲಿ ಪ್ರೈಮರಿ ಸ್ಕೂಲಿನ ಮಗುವಿನಂತೆಯೇ ತೋರುತ್ತಾನೆ. ಹದಿನೈದು ಲೀಟರ್ ನ ಫ್ಲಾಸ್ಕ್ ಒಂದರಲ್ಲ್ಲಿ ಟೀ ತುಂಬಿಕೊಂಡು ಮಾರುತ್ತಾ ಬದುಕುತ್ತಿರುವ ಅವನು, ಬೆಂಗಳೂರಿನ ಯಶವಂತಪುರ ರೈಲ್ವೇ ಸ್ಟೇಷನ್‍ನ ಪಾಲಿಗೆ ಮಾತ್ರ ಎಲ್ಲೂ ಚಲಿಸದೆ ಇದ್ದಲೇ ಉಳಿದುಹೋಗಿರುವ ನಿತ್ಯಯಾತ್ರಿಕ.

ರೈಲ್ವೇ ಸ್ಟೇಷನ್‍ನಲ್ಲಿ ತನ್ನ ಫ್ಲಾಸ್ಕ್ನಿಂದ ಟೀ ಬಸಿದುಕೊಂಡು ಕುಡಿಯುವವರು ಪ್ರಯಾಣಿಕರೋ ಅಥವಾ ಕೇವಲ ಗಿರಾಕಿಗಳೋ ಎನ್ನುವ ವಿಚಿತ್ರ ಅನುಮಾನವನ್ನ ಉಳಿಸಿಕೊಂಡಿದ್ದಾನೆ ಎನ್ನುವುದು ಅವನ ಕಣ್ಣುಗಳಲ್ಲಿ ಢಾಳುಢಾಳಾಗಿ ಕಾಣುತ್ತಲೇ ಇರುತ್ತದೆ. ರೈಲಿನೊಳಗಿರುವ ಗಿರಾಕಿಗಳು ಹಾಗೂ ಅವನ ನಡುವೆ ಪ್ರತಿದಿನವೂ ಚಹಾದ ಮೂಲಕ ನಡೆಯುವ ಅನುಸಂಧಾನಕ್ಕಿರುವ ತಂತು ಎಂದರೆ ಅದು ರೈಲಿನ ಭೋಗಿಯ ಕಿಟಕಿಗಳು.  ಭೋಗಿಯ ಕಿಟಕಿಗಳ ಮೂಲವೇ ಎಲ್ಲರನ್ನೂ ಮುಟ್ಟುತ್ತೇನೆ ಎನ್ನುವ ಹಠ ಪ್ರದರ್ಶಿಸುವ ಅವನು ನಿತ್ಯವೂ ಅದೊಂದು ಪ್ರಶ್ನೆಯ ದೆಸೆಯಿಂದಾಗಿ ಎಷ್ಟೋ ವರ್ಷಗಳಿಂದ ಒಳಗೇ ಬಡಿದಾಡುತ್ತಿದ್ದಾನೆ ಎನ್ನುವುದು ನಿಜಕ್ಕೂ ಕಂಗಾಲಾಗುವಂತೆ ಮಾಡುತ್ತದೆ.

ಬೆಂಗಳೂರನ್ನು ಮಹತ್ವದ ಗುಂಗಿನಲ್ಲಿ ಕಾಣುವ ಲಕ್ಷಾಂತರ ಜನರ ನಡುವೆ ಉಡಾಫೆಯಿಂದ ಕಾಣುತ್ತಾ, ಅದೊಂದು ರೀತಿಯಲ್ಲಿ ಬೆಂಗಳೂರನ್ನೇ ಬೆದರಿಸುತ್ತೇನೆ ಎನ್ನುವ ಪೈಕಿಯವನು ಈತ. ತನಗೆ ಬೇಕಾದಾಗ ಮಾತ್ರ ಮನಸೋ ಇಚ್ಛೆ ಸುರಿಯುತ್ತೇನೆ ಎನ್ನುವ ಹಠಮಾರಿ ಮಳೆಯಂತೆ ತನ್ನ ಪಾಡಿಗೆ ಬದುಕುತ್ತಿರುವ ಹಠಯೋಗಿಯಂತೆ ಕಾಣುವುದು ಅವನು, “ಸಾರ್ ನನ್ನ ಹೆಸರಿನ ಹಿಂದೆ ಅಥವಾ ಮುಂದೆ ಒಂದು ಇನಿಶಿಯಲ್ ಇರಬೇಕಿತ್ತು” ಎಂದಿದ್ದರ ಮಾತಿನ ಹಿಂದಿನ ಅರ್ಥವೇನು?

***

ಅವನು ಬೆಂಗಳೂರಿನ ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಟೀ ಮಾರುವವನು. ಅಷ್ಟೇನೂ ಹಿರಿಯನಲ್ಲ. ಬೆಳಗ್ಗೆ ಅಥವಾ ಸಂಜೆ ಈ ಯಾವುದಾದರೂ ಒಂದು ಹೊತ್ತಿನಲಿ ಕೇವಲ ಐದು ತಾಸುಗಳು ಮಾತ್ರವೇ ಕೆಲಸ ಮಾಡುವ ನಿಯಮವನ್ನ ಘೋಷಿಸಿಕೊಂಡಿರುವ ಅವನು ಅದೊಂದು ರೀತಿಯಲ್ಲಿ ಜಾಲಿಯ ಗುಣದವನು. ಕೈಗೆ ಎಟುಕಿದ ಎಲ್ಲವನ್ನೂ ಅನುಭವಿಸುತ್ತಾ, ತಾನು ದುಡಿಯುವುದು, ನೋಯುವುದು ಎಲ್ಲವೂ ತನಗಾಗಿ ಮಾತ್ರವೇ ಎನ್ನುವಂತೆ ಬದುಕುತ್ತಿದ್ದಾನೆ. ಕೆಲವೊಮ್ಮೆ ರೈಲಿನೊಂದಿಗೆ ಅದು ಹೊರಟ ಕಡೆಗೆ ಹೊರಟುಬಿಡುವ ಅವನು, ಬಹುತೇಕ ಸಾರಿ ರೈಲ್ವೇ ಫ್ಲಾಟ್‍ಫಾರಂನಲ್ಲ ಮಲಗಿಕೊಳ್ಳುತ್ತಾನೆ.

“ಒಂದು ಬಾಡಿಗೆ ರೂಮ್ ಇದೆ ಸರ್” ಎನ್ನುವ ಅವನು, ರೈಲ್ವೇ ಫ್ಲಾಟ್ ಫಾರಂನ್ನೇ ಸ್ವಂತದ ಮನೆಯಂತೆ ಉಪಯೋಗಿಸುತ್ತಾನೆ. ಈ ನಡುವೆ ಯಶವಂತಪುರ ರೈಲ್ವೇ ನಿಲ್ದಾಣಕ್ಕೆ ಪ್ರಯಾಣಿಕರಾಗಿ ಬಂದು, ಇವನಿಂದ ಟೀ ಬಸಿದುಕೊಂಡು ಕುಡಿಯುತ್ತ ಗಿರಾಕಿಗಳಾಗಿ ಮಾರ್ಪಾಡಾದವರನ್ನು ಎಷ್ಟೋ ವರ್ಷಗಳ ನಂತರವೂ ಗುರುತು ಹಿಡಿದು ಮಾತನಾಡುವಂತೆ ಕಾಣುತ್ತಾನೆ.

ಕೆಲವೊಮ್ಮೆ ಅಘೋಷಿತ ಸ್ಟೇಷನ್ ಮಾಸ್ಟರ್ ನಂತೆ ಗತ್ತಿನ ದನಿಯಲ್ಲಿ ಪ್ರಯಾಣಿಕರ ಟಿಕೆಟ್ ನೋಡಿ “ಎಲ್ಲಿಗ್ ಹೋಗ್‍ಬೇಕು ಸರ್”? “ನೀವಾ, ಫ್ಲಾಟ್ ಫಾರಂ ನಂಬರ್ ಮೂರಕ್ಕೆ ಹೋಗ್‍ಬಿಡಿ, ಟ್ರೈನ್ ಬರತ್ತೆ ಈಗ” ಎನ್ನುವಂತೆಯೇ, ದಿಕ್ಕು ತಪ್ಪಿಬಂದವರಿಗೆ, “ಅಯ್ಯೋ ಇಲ್ಲಿಗೆ ಯಾಕ್ ಬರೋಕ್ ಹೋದ್ರಿ, ಸುಮ್ನೆ ಮೆಜೆಸ್ಟಿಕ್‍ನಲ್ಲಿ ಹತ್ತಿಕೊಳ್ಳೋದು ತಾನೇ, ಆದರೂ ಪರವಾಗಿಲ್ಲ ಮೂರು ಗಂಟೆ ಒಂದು ಟ್ರೈನ್ ಇದೆ” ಎಂದು ಸಮಾಧಾನದ ದನಿಯಲ್ಲಿ ಮಾತನಾಡುತ್ತಾ ಅಪರಿಚಿತರಿಗೂ ಸಹಾನುಭೂತಿ ತೋರುತ್ತಾನೆ.

ಇದು ಅವನ ಸದ್ಯದ ಜೀವನಶೈಲಿ. ಮೂವತ್ತೈದು ವರ್ಷಕ್ಕೆ ಅರವತ್ತರ ಮುದುಕನಂತೆ ಕಾಣುವ ಅವನು ಬೆಂಗಳೂರನ್ನು ಒಪ್ಪದೆಯೂ ಅಪ್ಪಿಕೊಂಡು ಬದುಕುತ್ತಿದ್ದಾನೆ. ಎಲ್ಲವನ್ನೂ ನಿರುಕಿಸುವ ಕಣ್ಣಿನಲ್ಲಿ ನೋಡುತ್ತಾ ಉಳಿದುಹೋಗಿದ್ದರೂ ಏನೊಂದು ಅರ್ಥವಾಗಿರಲಿಲ್ಲ. ನಿಲ್ದಾಣದ ತಿರುವಿನಲ್ಲಿ ಕುಂಡೆ ತೋರುತ್ತ ಅಣುಕಿಸುವ ಮಗುವಿನಂತೆ, ಕಣ್ಮರೆಯಾಗುವ ಕಡೆಯ ಘಳಿಯಲ್ಲಿ ರೈಲು ಬಿಟ್ಟು ನಡೆಯುವ ಅವರ್ಣನೀಯ ಸದ್ದಿನಂತಹ ಕೊರಳ ದನಿಯಲ್ಲಿ ಮಾತನಾಡುವ ಅವನು, ಅವನದೇ ಲೋಕದಲ್ಲಿ ತೇಲುತ್ತಾ ಮುಳುಗುತ್ತಾ ಉಳಿದುಹೋಗಿದ್ದಾನೆ. ಹೀಗಿರುವಾಗಲೇ ಅವನು ಹೇಳಿದ ಅದೊಂದು ಮಾತು ಮತ್ತೆ ಮತ್ತೆ ಎದುರು ನೋಡುವಂತೆ ಮಾಡಿತ್ತು. ಅವನದು ಪ್ರಶ್ನೆಯೋ ಅಥವಾ ಬೇಡಿಕೆಯೋ ಎನ್ನುವುದನ್ನು ಸ್ಪರ್ಶಿಸುವುದು ಅಸಾಧ್ಯವಾಗಿ ಎದುರು ನಿಂತಿತ್ತು.

***

“ಸರ್ ನನ್ನ ಹೆಸರಿನ ಹಿಂದೆ ಅಥವಾ ಮುಂದೆ ಒಂದು ಇನಿಶಿಯಲ್ ಇರಬೇಕಿತ್ತು”.
ಗಿರಾಕಿಗಳನ್ನು ತ್ಯಜಿಸಿ ಬಂದವನಂತೆ ಟೀ ಫ್ಲಾಸ್ಕ್ ಹಿಡಿದು ಫ್ಲಾಟ್‍ಫಾರಂ ಬೆಂಚ್‍ನಲ್ಲಿ ಜತೆ ಕೂತವನು ಮತ್ತೆ ಅದೇ ಮಾತನ್ನು ಉಚ್ಛರಿಸಿದ. ಮಾಸಲು ಅಂಗಿಯವನ ಅದೊಂದು ಮಾತು ಮಾತ್ರ ಕೇಳಿಸಿಕೊಂಡಷ್ಟು ಲಘುವಾಗಿರಲಿಲ್ಲ. ಬದುಕಿನುದಕ್ಕೂ ಬೀದಿಯಲ್ಲೇ ಬೆಳೆದುಬಂದವನು ಹೀಗೆ ರೈಲ್ವೇ ಸ್ಟೇಷನ್‍ನ ಫ್ಲಾಟ್‍ಫಾರಂವೊಂದರಲ್ಲಿ ಉಳಿದುಹೋಗಿರುವುದು ಮತ್ತು ಎಷ್ಟೋ ವರ್ಷಗಳ ಹಿಂದೆ ಯಶವಂತಪುರ ರೈಲು ನಿಲ್ದಾಣದಲ್ಲಿ ಇವನ ಫ್ಲಾಸ್ಕ್ ನಿಂದ ಟೀ ಬಸಿದುಕೊಂಡು ಕುಡಿದವರನ್ನು ಗುರುತಿಟ್ಟುಕೊಂಡು ಮಾತನಾಡಿಸುವುದು ಸಹಜ ಎನ್ನುವಂತೆಯೇ ಕಾಣುತ್ತಿತ್ತು.

ಅವನ ಹಿಡಿಕೆಯಲ್ಲಿದ್ದ ಟೀ ಫ್ಲಾಸ್ಕ್ ನ ಕಿತ್ತು ಬದಿಗಿಟ್ಟು, ಗುಂಗುರು ಕೂದಲಿನ ಅವನನ್ನು ಅಲ್ಲೆಲ್ಲೋ ನಿಲ್ಲಿಸಿ ಒಳಗಣ್ಣಿನಿಂದ ನೋಡಿದರೆ ಅವನು ಯಾವುದೋ ಬಂಧದ ತಂತುವಿನೊಂದಿಗೆ ತನ್ನನ್ನು ಬೆಸೆದುಕೊಳ್ಳಲು ಹವಣಿಸುತ್ತಿರುವವನಂತೆ ತೋರುತ್ತಿದ್ದ.

ನಮ್ಮದು ಮೈಸೂರು, ಬೆಂಗಳೂರಿನ ನ್ಯೂಚ್ ಚಾನೆಲ್‍ನಲ್ಲಿ ಕೆಲಸ ಮಾಡುತ್ತಿದ್ದೇನೆ ಎನ್ನುವುದನ್ನು ಹೇಳುತ್ತಿದ್ದಂತೆ ಅರಳಿದ ದನಿಯಲ್ಲಿ ಇನ್ನಷ್ಟು ಮಾತನಾಡಿದ್ದ. “ನಮ್ಮದು ಚಾಮರಾಜನಗರ ಅಂತೇ ಸರ್” ಎಂದು ಉತ್ತರಿಸಿದ.
ಚಾಮರಾಜನಗರ ಅಂತೇ! ಎನ್ನುವುದಕ್ಕೆ ನಿಜವಾದ ಅರ್ಥವಾದರೂ ಏನು ಎನ್ನುವುದು ಆ ಕ್ಷಣಕ್ಕೆ ಹೊಳೆಯಲಿಲ್ಲ.
ಚಾಮರಾಜನಗರದಲ್ಲಿ ಎಲ್ಲಿ ನಿಮ್ಮೂರು? ಎನ್ನುವ ಪ್ರಶ್ನೆಗೆ ಉತ್ತರಿಸಲಿಲ್ಲ.

ಅವನು ಸುಮ್ಮನೇ ಎಂದರೆ ಸುಮ್ಮನಾಗಿದ್ದ. ಅವನ ಮೌನವನ್ನ ಕೆದಕಿದ ಬೆನ್ನಲ್ಲೆ, ಅವನ ಬೇಡಿಕೆಯಂತಹ ಪ್ರಶ್ನೆಗೆ ಉತ್ತರವೂ ದೊರೆದಿತ್ತು.

“ಸರ್ ನನ್ನ ಹೆಸರಿನ ಹಿಂದೆ ಅಥವಾ ಮುಂದೆ ಒಂದು ಇನಿಶಿಯಲ್ ಇರಬೇಕಿತ್ತು” ಎನ್ನುವ ಅವನದೇ ಪ್ರಶ್ನೆಗೆ ಉತ್ತರವೂ ಅವನೇ ಆಗಿಹೋಗಿದ್ದ.

ಚಾಮರಾಜನಗರವನ್ನ ಹದಿನೆಂಟು ವರ್ಷಗಳ ಹಿಂದೆಯೇ ಬಿಟ್ಟುಬಂದ ಇವನಿಗೆ, ಊರಿನಲ್ಲಿ ನಿಮ್ಮ ಮನೆ? ಅಣ್ಣತಮ್ಮ? ನೆಂಟರು ಯಾರಾದರೂ ಇದ್ದಾರಾ? ಎನ್ನುವ ಎಲ್ಲಾ ಪ್ರಶ್ನೆಗಳಿಗೂ ಇದೊಂದೇ ಎನ್ನುವಂತೆ ಎಲ್ಲವನ್ನೂ ಹೇಳಿ ಮೌನವಾಗಿಹೋಗಿದ್ದ.

***

ಆಗಿದ್ದಿಷ್ಟು. ಚಾಮರಾಜನಗರದ ಸಮೀಪದ ಸಣ್ಣ ಊರಿನ ಅರಳಿಕಟ್ಟೆಯ ಎದುರು ಮೂವತ್ತರ ಗಂಡಸೊಬ್ಬ ಕೀಟನಾಶಕ ಕುಡಿದು ಸತ್ತುಹೋಗಿದ್ದ. ಅವನ ಹೆಣದ ಸುತ್ತಲೂ ನೊಣಗಳು ಜಿರ್ರೆಂದು ಸದ್ದು ಮಾಡುತ್ತಾ ಹಾರಾಡುತ್ತಿರುವಂತೆ ನಾಯಿಗಳು ದೂರದಲ್ಲಿ ನಿಂತು ಬೊಗಳುತ್ತಿದ್ದವು. ಊರಿನ ಅರಳಿಕಟ್ಟೆಯ ಎದುರು ಹೆಣವಾಗಿ ಹೋಗಿದ್ದಕ್ಕೆ ಊರಿಗೆ ಊರೇ ಆಶ್ಚರ್ಯವಾಗಿಹೋಗಿತ್ತು. ಊರಿನ ಅರ್ಧದಷ್ಟು ಜನರು ಹೆಣವಾಗಿ ಹೋಗಿದ್ದವನ ಹಳೆಯ ದಿನಗಳ ಗುಣವನ್ನು ನೆನಪಿಸಿಕೊಂಡು ಗೋಳು ಕರೆಯುತ್ತಿರುವಾಗ, ಉಳಿದ ಜನರು ಹೆಂಗಸೊಬ್ಬಳನ್ನು ಹುಡುಕುತ್ತಿದ್ದರು. ಗಲಾಟೆ, ಬೈಗುಳ, ಶಾಪದ ಸುರಿಮಳೆಗಳು ಊರನ್ನು ತುಂಬಿಹೋಗಿತ್ತು.

ಬದುಕಿನ ಇನ್ನಷ್ಟು ದಿನಗಳನ್ನು ಕಾಣಬೇಕಾದ ಮೂವತ್ತರ ಅವನು, ಹೀಗೆ ನಡುರಾತ್ರಿಯಲ್ಲಿ ಹೊಲದ ಬೆಳೆಗೆಂದು ತಂದಿದ್ದ ಕೀಟನಾಶಕವನ್ನು ಕುಡಿದು ಸಾಯುವುದಕ್ಕೆ ಕಾರಣವಾಗಿದ್ದು ಊರಿನ ಅರ್ಧದಷ್ಟು ಜನರು ಹುಡುಕುತ್ತಿದ್ದ ಹೆಂಗಸು ಎನ್ನುವುದು ಹಲವರ ಮಾತಾಗಿತ್ತು.

ಅವನು ಹೀಗೆ ಕೀಟನಾಶಕ ಕುಡಿದು ಸಾಯುವ ಒಂದು ದಿನದ ಹಿಂದೆ ಊರಿನವರು ಹುಡುಕುತ್ತಿದ್ದ ಹೆಂಗಸು ಹಾಲು ಹಸುಳೆಯೊಂದನ್ನು ಕಂಕುಳಿನಲ್ಲಿರಿಸಿಕೊಂಡು ಸತ್ತುಹೋಗಿದ್ದವನ ಮನೆಗೆ ಬಂದಿದ್ದಳು. ಮಗು ಕಣ್ಣನ್ನು ಆಗಾಗ ತೆರೆದು ಮುಚ್ಚಿ ಮಾಡುತ್ತಾ ಸೂಜಿಮೊನೆಯಂತೆ ಅಳುತ್ತಿರುವಾಗಲೇ ಅದನ್ನ ನೆಲದಲ್ಲಿಟ್ಟು ಇದು ಈ ಮನೆಗೆ ಸೇರಬೇಕಾದ ಮಗು ಎಂದುಬಿಟ್ಟಿದ್ದಳು.

ಗುರುತೇ ಇರದ ಹೆಂಗಸೊಬ್ಬಳು ಹೇಳಿದ ಮಾತುಗಳು ಎಲ್ಲರನ್ನೂ ಕಣ್ಣುಬಾಯಿ ಬಿಡುವಂತೆ ಮಾಡಿಬಿಟ್ಟಿತ್ತು. ಮನೆಯಲ್ಲಿರುವ ಮೂರು ಗಂಡು ಮಕ್ಕಳಲ್ಲಿ ಇಬ್ಬರಿಗೂ ಮದುವೆಯಾಗಿದೆ. ಅದರಲ್ಲಿ ಈ ಮಗು ಯಾರದು ಎನ್ನುವುದನ್ನ ಮನೆಯವರೆ ಎದೆಬಡಿದುಕೊಂಡು ಕೇಳಿಕೊಳ್ಳುತ್ತಿರುವಾಗಲೂ ಹೆಂಗಸು ಮಾತ್ರ ಅದೇ ಸ್ಥಿತಿಯಲ್ಲಿ ಉಳಿದುಹೋಗಿದ್ದಳು.

ಮಾತುಗಳು ಗದ್ದಲದ ಪೋಷಾಕು ತೊಟ್ಟುಕೊಳ್ಳುತ್ತಿರುವಾಗ, “ಈ ಮಗು ಯಾರದು? ಸರಿಯಾಗಿ ಹೇಳು? ಎನ್ನುವ ಹಿರಿಯರೊಬ್ಬರ ಪ್ರಶ್ನೆಗೆ ಅವಳು ಇನ್ನೂ ಮದುವೆಯಾಗದೆ ಮನೆಯಲ್ಲಿ ಉಳಿದುಹೋಗಿದ್ದ ಕೊನೆಯ ಮಗನನ್ನು ಬೆರಳು ಮಾಡಿ ತೋರಿಬಿಟ್ಟಿದ್ದಳು. ಅವಳ ಅದೊಂದು ಬೆರಳ ಗುರುತು ಎಲ್ಲವನ್ನೂ ಎಲ್ಲರ ಪ್ರಶ್ನೆಗಳನ್ನು ಅಳಿಸಿಹಾಕಿತ್ತು. ಅವಳು ಬೆರಳು ತೋರುತ್ತಿದ್ದಂತೆ ಮಾತನ್ನು ಉಚ್ಛರಿಸಲಾರದೆ ಒದರಾಡಿಹೋಗಿದ್ದ. ಹುಡುಗನ ಅಪ್ಪ ಕಿರುಚುತ್ತಿರುವಾಗಲೇ, ಅವನ ಅಮ್ಮ ನೆಲದಲ್ಲಿ ಬಿದ್ದು ಅವಮಾನದಿಂದ ಒದ್ದಾಡುತ್ತಿದ್ದಳು.

ಈ ಎಲ್ಲಾ ಗದ್ದಲದ ನಡುವೆಯೂ ಹಜಾರದ ನೆಲದ ಮೇಲೆ ಮಲಗಿದ್ದ ಮಗು ಅಷ್ಟೇ ವೇಗದ ಅಳುವನ್ನು ಹೊರಡಿಸುತ್ತಿತ್ತು. ಅವಳಿಂದ ಬೆರಳು ಮಾಡಿಸಿಕೊಂಡ ಅವನು ಯಾರ ಪ್ರಶ್ನೆಗೂ ಉತ್ತರವನ್ನು ನೀಡಲಾರದೆ ಕಲ್ಲುಬಂಡೆಯಂತೆ ನಿಂತುಕೊಂಡಿದ್ದ. ಅವಳು ಮಾತ್ರ ಊರಿನ ಹಿರಿಯರು ಕೇಳಿದ ಪ್ರತಿ ಪ್ರಶ್ನೆಗಳಿಗೂ ಒಂದಿಷ್ಟು ಕದಲದೆ ಅವನನ್ನೇ ಉತ್ತರ ಎನ್ನುವಂತೆ ತೋರಿಸಿ ನಿಂತುಬಿಟ್ಟಿದ್ದಳು.

ಕಡೆಗೆ ಊರಿನವರೇ ಎಲ್ಲರನ್ನೂ ಸಮಾಧಾನಿಸಿದ್ದರು. ಮನೆಯವರನ್ನ ಅವರದೇ ರೀತಿಯಲ್ಲಿ ಸಂತೈಸಿ, “ಈಗ ರಂಪ ಮಾಡುವುದು ಬೇಡ, ನಾವೇ ತೀರ್ಮಾನ ಮಾಡ್ತೀವಿ” ಎನ್ನುವ ಮಾತನ್ನು ಹೇಳಿಹೊರಟು ಹೋಗಿದ್ದರು.

ಎಲ್ಲಾ ರಂಪಾಟುಗಳು ನಡೆದ ಒಂದೇ ರಾತ್ರಿಯೊಳಗೆ ಅವರಿಬ್ಬರು ಕಾಣೆಯಾಗಿದ್ದರು. ರಾತ್ರಿ ಕಳೆಯುವುದರೊಳಗೆ ಅವನು ಕೀಟನಾಶಕ ಸೇವಿಸಿ ಊರಿನ ಅರಳಿಮರದ ಎದುರು ಹೆಣವಾಗಿದ್ದರೆ, ಎಳೆಯ ಮಗುವನ್ನು ಕಂಕುಳಿನಲ್ಲಿಟ್ಟುಕೊಂಡು ಬಂದಿದ್ದ ಹೆಂಗಸು ಊರಿನ ಕೆರೆಯ ಎದುರು ಹೆಣವಾಗಿ ಪತ್ತೆಯಾಗಿದ್ದಳು. ನಡುವೆ ಮಗು ಮಾತ್ರ ಈ ಯಾವುದರ ಅರಿವೂ ಇರದೇ ಅದೇ ಮನೆಯ ಹಜಾರದಲ್ಲಿ ನಿಡುಸುಯ್ದು ಮಲಗಿತ್ತು.

ಅದೊಂದು ಘಟನೆಯಿಂದ ಇಡೀ ಊರು ತಲ್ಲಣಿಸಿಹೋಗಿತ್ತು. ಎಲ್ಲರಲ್ಲೂ ಪ್ರಶ್ನೆ ಹಾಗೂ ಅಂದಾಜುಗಳಿದ್ದವೇ ಹೊರತು ಉತ್ತರ ಎನ್ನುವುದು ಯಾರಲ್ಲಿಯೂ ಇರಲಿಲ್ಲ. ಅವರಿಬ್ಬರ ಶವದ ಸಂಸ್ಕಾರಗಳು ಹತ್ತಾರು ಲೆಕ್ಕಾಚಾರ, ಹೊಡೆದಾಟ, ಅನುಸಂಧಾನ ಹಾಗೂ ಷರತ್ತುಗಳ ನಡುವೆ ಜರುಗಿ ಹೋಗಿದ್ದವು.

ಈ ಎಲ್ಲವೂ ಸರಾಗವಾಗಿಯಲ್ಲದಿದ್ದರೂ ಪ್ರಯಾಸದಿಂದಲೇ ಕೊನೆಯಾಯಿತು ಎಂದುಕೊಳ್ಳುತ್ತಾ ಮುಂದಿನ ದಿನಗಳಿಗೆ ಹೊರಳಿಕೊಳ್ಳಬೇಕು ಎನ್ನುವಾಗಲೆ, ಅದೊಂದು ಪ್ರಶ್ನೆ ಧುತ್ತೆಂದು ಕುತ್ತಿಗೆಗೆ ಬಿಗಿದುಕೊಂಡಿತ್ತು.

ಈ ಮಗು ನಿಜವಾಗಿಯೂ ಯಾರದು?

ಈಗ ಮಗುವನ್ನು ಯಾರು ನಿಗಾವಹಿಸಬೇಕು. ಅವಳು ಯಾರು? ಅವಳ ಜಾತಿ ಯಾವುದು? ಈಗ ಈ ಮಗುವಿನ ಜಾತಿ ಯಾವುದು? ಈ ಮಗು ಯಾವ ಮನೆಗೆ ಸೇರಬೇಕು? ಈ ಎಲ್ಲಾ ಅವಾಂತರಗಳು ಕಣ್ಣೆದುರು ನಡೆಯುತ್ತಿರುವಾಗ ಮಗನಾಗಿ ಅವನು ಏಕೆ ಮಾತನಾಡಲಿಲ್ಲ. ಹಾಗಾದರೆ ನಿಜಕ್ಕೂ ಅವನು ತಪ್ಪು ಮಾಡಿದ್ದನೇ? ಜನ್ಮಸಹಜ ಮುಜುಗರದ ಹುಡುಗನಾಗಿದ್ದವನು ಇದೀಗ, ಇದ್ದಕ್ಕಿದ್ದಂತೆ ಎದುರಾದ ಆರೋಪವನ್ನ ಎದುರಿಸಲಾರದೇ ಸತ್ತುಹೋದನಾ?

ಈ ಹುಡುಗಿಯಾದರೂ ಯಾರು? ಅಷ್ಟು ಗಟ್ಟಿಯಾಗಿ ನಿಂತಿದ್ದವಳು ಅದೇ ಸತ್ತುಹೋಗಿದ್ದು ಏಕೆ?

***

ಆ ಯಾವ ಪ್ರಶ್ನೆಗಳಿಗೂ ಇಂದಿಗೂ ಉತ್ತರ ಎನ್ನುವುದು ಸಿಕ್ಕಿಲ್ಲ. ಆವತ್ತು ಸೂಜಿ ಮೊನೆಯಂತೆ ಅಳುತ್ತಾ ಆ ಮನೆಯ ಹಜಾರದ ನೆಲದ ಮೇಲೆ ಮಲಗಿದ್ದ ಮಗುವಾಗಿದ್ದ ಅವನು, ಇದೀಗ ಬೆಂಗಳೂರಿನ ಯಶವಂತಪುರ ರೈಲ್ವೇ ನಿಲ್ದಾಣದ ಫ್ಲಾಟ್‍ಫಾರಂನ ಬೆಂಚುಗಳ ಮೇಲೆ ಹೊರಳಾಡುತ್ತಿದ್ದಾನೆ.

ಆವತ್ತು ಮನೆಯವರು ಅವನ ಅಮ್ಮನ ಸಂಸ್ಕಾರಕ್ಕೆ ಒಪ್ಪುವ ಮೊದಲು, “ಈ ಮಗು ನಮ್ಮ ಮನೆಯದಲ್ಲ. ಈ ಮಗುವಿಗೆ ಮನೆಯಲ್ಲಿ ಜಾಗವಿಲ್ಲ” ಎನ್ನುವುದನ್ನು ಊರಿನವರ ಎದುರು ಅಂಗೀಕರಿಸಿಕೊಂಡೇ ಎಲ್ಲವನ್ನ ಮುಗಿಸಿದ್ದರು. ಊರಿನವರ ಯಾವ ಪುಸಲಾಯಿಕೆಗೂ ಮನೆಯವರು ಬಗ್ಗದೆ ಕ್ಚಚಿತ್ತಾಗಿ ಮಗುವನ್ನು ಕೈಬಿಟ್ಟಿದ್ದರು.

ಊರಿನವರೇ ಮಗುವನ್ನು ಕೊಳ್ಳೆಗಾಲದಲ್ಲಿ ಬಿದಿರು ನಡಿಕೆ, ಕೇರುವ ಮೊರ ನೇಯುವವರಿಗೆ ಕೊಟ್ಟಿದ್ದರಂತೆ. ಓದು, ಸ್ಕೂಲು ಎಂದರೆ ಮೂಗು ಮುರಿಯುತ್ತಲೆ ಬೆಳೆದ ಅವನು ಈ ಎಲ್ಲವನ್ನೂ ಅದು ಯಾರಿಂದ ಕೇಳಿದ್ದು ಎನ್ನುವುದನ್ನು ಕೇಳವ ಮನಸ್ಸಿರಲಿಲ್ಲ. ಅವನ ಯಾವ ಮಾತುಗಳಲ್ಲೂ ಉತ್ಪೇಕ್ಷೆಯ ಲವಲೇಶವೂ ಇರಲಿಲ್ಲ.

ಚಾಮರಾಜನಗರವನ್ನ ಬಹಳ ಎಳೆಯ ವಯಸ್ಸಿನಲ್ಲೇ ತೊರೆದು ಬಂದು ಬೆಂಗಳೂರು ಸೇರಿಕೊಂಡಿದ್ದ. ಕೂಲಿಯಿಂದ ಕೆಲಸ ಆರಂಭಿಸಿ ಇದೀಗ ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಟೀ ಮಾರುತ್ತ ಅವನೇ ಲೋಕದಲ್ಲಿ ಉಳಿದುಹೋಗಿದ್ದಾನೆ. ಅವನ ಯಾವ ಪ್ರಶ್ನೆಗಳಿಗೂ ನಿಖರವಾದ ಉತ್ತರಗಳನ್ನು ಕಾಣಲಾರದೆ ಬದುಕುತ್ತಿದ್ದಾನೆ.

ಅಪ್ಪ ಹಾಗೂ ಅಮ್ಮನ ಯಾವ ಗುರುತನ್ನು ಕಾಣದ ಅವನಿಗೆ ತನ್ನ ಹೆಸರಿನ ಹೊರತಾಗಿ ಉಳಿದ ಏನೊಂದು ನಿಖರವಾಗಿ ತಿಳಿದಿಲ್ಲ. “ಸಾರ್ ಈ ದೇಶದಲ್ಲಿ ನನಗೆ ಮಾತ್ರ ರೇಶನ್ ಕಾರ್ಡ್, ಆಧಾರ್ ಕಾರ್ಡ್ ಸಿಗಲ್ಲ ಗೊತ್ತಾ? ಎನ್ನುವ ಅವನ ದನಿಯಲ್ಲಿ ಅಕ್ಷರಕ್ಕೆ ಸಿಗದ ಅದೊಂದು ಅವ್ಯಕ್ತ ಸಂಕಟವಿದೆ ಎನ್ನುವುದು ಮಾತ್ರ ಸತ್ಯ. ಆದರೆ ಈ ಯಾವುದನ್ನು ತಿಳಿಯದ ಅವನು, “ತನ್ನ ಹೆಸರಿನ ಮುಂದೆ ಒಂದು ಇನಿಶಿಯಲ್ ಇರಬೇಕಿತ್ತು” ಎನ್ನುವ ಹುಡುಕಾಟವನ್ನು ಆರಂಭಿಸಿದ್ದಾರೂ ಏಕೆ?

2 comments

    • Olleya baraha… title chennagide…. samaajakke horeyaagade badukuva avana jeevana nijakku spoorthidaayaka….

Leave a Reply