ಸೇತು ಬಂಧನ: ಇದು ಸ್ವಯಂವರ ಲೋಕದ ಮುಂದಿನ ಕಾಲ

ವಿಕ್ರಮ ನಾಯಕ್, ಕಾರ್ಕಳ

ನೀನಾಸಂ ತಿರುಗಾಟದ ಈ ವರ್ಷದ ಎರಡನೇ ನಾಟಕ ‘ಸೇತು ಬಂಧನ’. ಸುಮಾರು ಹನ್ನೊಂದು ವರ್ಷಗಳ ಹಿಂದೆ ಕೆ ವಿ ಅಕ್ಷರ ಅವರು ‘ಸ್ವಯಂವರ ಲೋಕ’ ನಾಟಕವನ್ನು ಬರೆದು ನಿರ್ದೇಶಿಸಿದ್ದರು. ಆ ಕಥೆ ನಡೆಯುವುದು ಸಾಗರದ ಒಂದು ಹಳ್ಳಿಯೊಂದರಲ್ಲಿ. ನಾಟಕದಲ್ಲಿ ಅದಕ್ಕೆ ಹಳೆಯೂರು ಎಂದು ನಾಮಕರಣ ಮಾಡಿದ್ದರು.

ಹಳ್ಳಿಯಲ್ಲಿ ಬೆಳೆದ ಮಕ್ಕಳು ವಿದ್ಯಾಭ್ಯಾಸವನ್ನು ಪೂರೈಸಿ  ಬೆಂಗಳೂರಿನಂತಹ ದೊಡ್ಡ ನಗರ ಸೇರಿ ಅಲ್ಲಿ ತಮ್ಮ ಜೀವನವನ್ನು ಕಳೆಯುತ್ತಾರೆ. ಹಳ್ಳಿಗೆ ಮಾತ್ರ ವರ್ಷಕ್ಕೊಮ್ಮೆ ಬಂದು ತಮ್ಮ ಕರ್ತವ್ಯ ಮೆರೆದ ಸಮಾಧಾನವನ್ನು ಪಟ್ಟುಕೊಳ್ಳುತ್ತಾರೆ ಎಂಬ ಸಂದೇಶ ಆ ನಾಟಕ ಸಾರುತ್ತಿತ್ತು. ಅಷ್ಟೇ ಅಲ್ಲದೇ, ಹಳ್ಳಿಯಲ್ಲೇ ಬೆಳೆದ ಯುವಕರು (ಬ್ರಾಹ್ಮಣರು) ಬೇಸಾಯವನ್ನು ತಮ್ಮ ಜೀವನೋಪಾಯವನ್ನಾಗಿ ಮಾಡಿಕೊಂಡರಂತೂ ಅಂಥವರಿಗೆ ಮದುವೆಯ ಭಾಗ್ಯವೇ ಇರುವುದು ಅನುಮಾನ ಎಂದು ನಾಟಕ ಪ್ರಸ್ತುತ ಪಡಿಸುತ್ತದೆ.

ಜೋಯಿಸರ ದೂರದ ಸಂಬಂಧಿ ಕೃಷ್ಣಮೂರ್ತಿ ಶರ್ಮ (ಕಿಟ್ಟು) ತನ್ನ ಅಣ್ಣಂದಿರು ಮುಳುಗಡೆಯ ನಂತರ ಊರು ಬಿಟ್ಟು ಹೋದ ಮೇಲೆ ಜೋಯಿಸರ ಮನೆಯಲ್ಲೇ ಉಳಿದುಕೊಂಡು ವ್ಯವಸಾಯ ಮಾಡುತ್ತಾನೆ. ಭಾಮೆಯ ಮದುವೆಗೆಂದು ಅಂತರ್ಜಾಲದಲ್ಲಿ ಆಕೆಯ ಪ್ರೊಫೈಲ್ ಹಾಕಿದಾಗ ಪ್ರಪಂಚದ ಗಂಡುಗಳೆಲ್ಲಾ ಸ್ವಯಂವರಕ್ಕೆ ಬಂದರೂ, ಕೊನೆಗೆ ನಡೆಯುವ ವಿಚಿತ್ರ ಸನ್ನಿವೇಶವೊಂದು ಭಾಮೆಯ ಗಂಡ ಕಿಟ್ಟನೇ ಆಗಬೇಕೆಂಬ ಸೂಚನೆಯನ್ನು ಕೊಡುತ್ತದೆ. ಭಾಮೆಯ ಮದುವೆಯ ನಂತರ ಜೋಯಿಸರು ಬದರಿನಾಥ ಯಾತ್ರೆ ಮಾಡಲು ಹೋಗುತ್ತಾರೆ.

ಮೇಲಿನದು ಸ್ವಯಂವರ ಲೋಕದ ಕಥೆ ಆದರೆ ಸೇತುಬಂಧನ, ಜೋಯಿಸರು ಎರಡೂವರೆ ವರ್ಷಗಳ ನಂತರ ಮರಳಿ ಊರಿಗೆ ಬರುವುದರೊಂದಿಗೆ ಆರಂಭವಾಗುತ್ತದೆ. ಊರು ತುಂಬಾ ಬದಲಾಗಿದೆ. ಅದರ ಜೊತೆ ಮನುಷ್ಯರೂ ಬದಲಾಗಿದ್ದಾರೆ ಎಂಬ ಮಾತನ್ನು ಕಿಟ್ಟು ಆರಂಭದಲ್ಲಿ ಹೇಳಿ ಬೋಟಿನಲ್ಲಿ ಬರುವ ಮಾವನಿಗಾಗಿ ಕಾಯುತ್ತಿರುತ್ತಾನೆ.

ಸ್ವಯಂವರ ಲೋಕದಲ್ಲಿ ಊರು ಬಿಟ್ಟು ಬೆಂಗಳೂರು ಸೇರಿದ ತನ್ನ ಇಬ್ಬರು ಗಂಡು ಮಕ್ಕಳ ಬಗ್ಗೆ ಜೋಯಿಸರಿಗೆ ಅದೇನೋ ಹೇಳಿಕೊಳ್ಳಲಾಗದ ಸಿಟ್ಟು ಇರುತ್ತದೆ. ಆದರೆ ಈಗ ಬಹುಶಃ ದೇಶ ಪರ್ಯಟನೆ ಮಾಡಿ ಪ್ರಪಂಚದ ವ್ಯವಹಾರಗಳನ್ನೆಲ್ಲಾ ಅರಿತು ಮಾಗಿರಬೇಕು. ಮೊದಲಿನ ಸಿಟ್ಟು, ಬೇಸರ ಅವರಲ್ಲಿ ಇದ್ದಂತೆ ಕಾಣುತ್ತಿಲ್ಲ. ಆದರೆ ಅವರ ಎಲ್ಲಾ ಗುಣಗಳು ಕಿಟ್ಟುವಿಗೆ ವರ್ಗಾವಣೆ ಆದಂತೆ ಕಾಣುತ್ತದೆ.

ಹೊಳೆಗೆ ಸೇತುವೆ ಕಟ್ಟುತ್ತಾರೆ ಎಂಬ ಸಮಾಚಾರ ಊರೆಲ್ಲಾ ಹರಿದಾಡುತ್ತಿದ್ದಂತೆ ಅಲ್ಲಿ ಸುತ್ತಲಿರುವ ಭೂಮಿಯ ಬೆಲೆಯೂ ಜಾಸ್ತಿ ಆಗುತ್ತದೆ. ಜನರು ಬೇಸಾಯವನ್ನು ಬಿಟ್ಟು ತಮ್ಮ ಭೂಮಿಯನ್ನು ಮಾರಿ ಬೇರೆ ವ್ಯವಹಾರ ಹಾಗೂ ರಾಜಕೀಯದಲ್ಲಿ ತೊಡಗುತ್ತಾರೆ. ಶೆಟ್ಟಿ ಅಕ್ರಮ ಮರಳುಗಾರಿಕೆ ಮಾಡಿ ಊರಿನಲ್ಲೇ ದೊಡ್ಡ ಕುಳ ಆಗುತ್ತಾನೆ. ಹಸಲರ ತಿಮ್ಮ ತನ್ನ ಜಮೀನಿನ ಒಂದು ಭಾಗವನ್ನು ಮಾರಿ ಬಂದ ಹಣದಿಂದ ಒಂದು ಹೊಸ ಮನೆಯನ್ನು ಕಟ್ಟಿ ಶೆಟ್ಟಿಯ ಬಲಗೈ ಬಂಟನಾಗುತ್ತಾನೆ. ಈ ಮೂಲಕ ತಿಮ್ಮ ಅಂತ ಇದ್ದ ಆತನ ಹೆಸರು ತಿಮ್ಮಪ್ಪ ನಾಯ್ಕರು ಎಂದು ಬದಲಾಗುತ್ತದೆ. ಚೌಡಿ ದೈವದ ಕಲ್ಲಿಗೆ ಪೂಜೆ ಮಾಡಿ  ಜೀವನ ನಡೆಸುತ್ತಿದ್ದ ಪೂಜಾರಿಯೊಬ್ಬ, ಆ ಪ್ರದೇಶ ಪ್ರವಾಸಿ ತಾಣವಾಗಿ ಬದಲಾಗುತ್ತಿದ್ದಂತೆ ಅದಕ್ಕೊಂದು ದೇವಸ್ಥಾನವನ್ನೇ ಕಟ್ಟಿ, ಆ ದೇವರಿಗೆ ಚಾಮುಂಡೇಶ್ವರಿ ದೇವಿ ಎಂದು ನಾಮಕರಣ ಮಾಡಿ ತಾನು ಧರ್ಮದರ್ಶಿ ಎನ್ನಿಸಿಕೊಳ್ಳುತ್ತಾನೆ.

ಈ ಎಲ್ಲಾ ಬೆಳವಣಿಗೆಗಳು ಕಿಟ್ಟುವಿಗೆ ಸಹಿಸಲಸಾಧ್ಯವಾಗುತ್ತದೆ. ಮೇಲ್ನೋಟಕ್ಕೆ ಇದು ಕೆಳ ವರ್ಗ ಹಾಗೂ ಮೇಲ್ವರ್ಗದವರ ನಡುವಿನ ಅಂತರ ಕಡಿಮೆ ಆಗಿ ನಡೆಯುವ ಸಂಘರ್ಷದಂತೆ ಕಂಡು ಬಂದರೂ, ಇದರಿಂದ ದೇಶದ ಆತ್ಮವಾಗಿರುವ ಬೇಸಾಯಕ್ಕೂ ಕುತ್ತು ಬಂದಿರುತ್ತದೆ. ವ್ಯವಸಾಯವನ್ನೇ ತನ್ನ ಜೀವನೋಪಾಯವನ್ನಾಗಿಸಿದ ಕಿಟ್ಟ, ತನ್ನ ತೋಟಕ್ಕೆ ಕೊಳೆ ರೋಗ ಬಾರದಂತೆ ತಡೆಯಲು ಔಷಧಿಯನ್ನು ಸಿಂಪಡಿಸಲು ಕೆಲಸಕ್ಕೆ ಯಾರನ್ನು ಕರೆದರೂ ಎಲ್ಲರೂ ನಿರಾಕರಿಸುತ್ತಾರೆ. ಕಾರಣ ಮರಳುಗಾರಿಕೆಯಂಥ ದಂಧೆಯಲ್ಲಿ ಅವರಿಗೆ ಇದಕ್ಕಿಂತ ಕಡಿಮೆ ಸಮಯವನ್ನು ವ್ಯಯಿಸಿದರೆ ಇದರ ದುಪ್ಪಟ್ಟು ಹಣ ಸಿಗುತ್ತದೆ. ಇದರಿಂದ ಕಿಟ್ಟು ತನ್ನ ಬೆಳೆ ಹಾಳಾಗುವುದನ್ನು ಅಸಹಾಯಕನಾಗಿ ನೋಡುತ್ತಾ ನಿಂತಿರಬೇಕಾಗುತ್ತದೆ. ಹಾಗಾಗಿ ಈ ಎಲ್ಲಾ ಬೆಳವಣಿಗೆಗಳ ಮೇಲೂ ಆತನ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತದೆ. ಹಾಗೆಯೇ ಕುಡಿತದ ಚಟವನ್ನೂ ಬೆಳೆಸಿಕೊಳ್ಳುತ್ತಾನೆ.

ಬುದ್ಧಿ ತಿಳಿದ ಮೇಲೆ ಒಮ್ಮೆಯೂ ಹಳ್ಳಿಯ ಕಡೆಗೆ ತಲೆ ಹಾಕದ ಜೋಯಿಸರ ಮೊಮ್ಮಗ ಮದನ, ಬೆಂಗಳೂರಿನ ಅನೇಕ ಟೆಕ್ಕಿಗಳಂತೆ ಜ್ಞಾನೋದಯವಾದವನಂತೆ ತನ್ನ ಮುಂದಿನ ಜೀವನವನ್ನು ಹಳ್ಳಿಯಲ್ಲೇ ಕಳೆಯಬೇಕೆಂದುಕೊಂಡು ಬರುತ್ತಾನೆ. ವ್ಯವಸಾಯ ಮಾಡುವುದು ಅಷ್ಟು ಸರಳವಲ್ಲ ಎಂದು ಕಿಟ್ಟು ಮದನನಿಗೆ ಹೇಳಿದರೂ, ಕಿಟ್ಟುವಿಗೂ ವ್ಯವಸಾಯ ಬಿಟ್ಟರೆ ಬೇರೆ ಯಾವ ಪರ್ಯಯವೂ ಇರಲಿಲ್ಲ. ಭಾಮೆಯೂ ಕೂಡ ತಾನು ಏನೇ ಆದರೂ ಹಳೆಯೂರಲ್ಲೇ ಬದುಕುವವಳು ಎಂದು ದೃಢ ನಿರ್ಧಾರ ತಾಳುತ್ತಾಳೆ.

ಜೋಯಿಸರು ಕಿಟ್ಟು ಮತ್ತು ಭಾಮೆಗೆ ತಮ್ಮದೇ ಜೀವನದ ನಾಟಕವನ್ನೊಂದನ್ನು ಆಡುವಂತೆ ಹೇಳಿ ಮದನನಿಗೆ ಹಿನ್ನೆಲೆ ಸಂಗೀತ ನೀಡುವಂತೆ ಹೇಳುತ್ತಾರೆ. ಕಿಟ್ಟು ಮತ್ತು ಭಾಮೆ, ಜೋಯಿಸರು ಊರಿಗೆ ಬರುವ ಮುನ್ನ ತಮ್ಮ ನಡುವೆ ನಡೆದ ಸಂಭಾಷಣೆಯನ್ನು ನಡೆಸಿದರೂ ಅದು ಮುಗಿಯುವಾಗ ಬೇರೆಯೇ ಸಂಭಾಷಣೆಯಾಗಿ ಕೊನೆಗೊಳ್ಳುತ್ತದೆ. ಆಗ ಜೋಯಿಸರು, ಯಾರೂ ಕೂಡ ತಮ್ಮದೇ ಜೀವನವನ್ನು ಇನ್ನೊಮ್ಮೆ ಬದುಕಲಾರರು ಎನ್ನುವ ಜೀವನ ಸತ್ಯವನ್ನು ಹೇಳುತ್ತಾರೆ. ಊರು ಬದಲಾಗುವ ಮುನ್ನ ನಾವು ಬದಲಾಗಬೇಕೆಂದು ಹೇಳುವ ಜೋಯಿಸರು ಅದು ಹೇಗೆ ಎಂದು ತಿಳಿಸದೆ ಸಾವನ್ನಪ್ಪುತ್ತಾರೆ. ಆದರೆ ತಮ್ಮ ಡೈರಿಯಲ್ಲಿ ಕಿಟ್ಟು, ಭಾಮೆ ಹಾಗೂ ಮದನನಿಗೆ ಊರಿನಲ್ಲೇ ಉಳಿಯುವ ನಿರ್ಧಾರ ಸರಿಯಾಗಿದೆಯೆಂದು ಬರೆದಿಟ್ಟಿರುತ್ತಾರೆ. ಜೋಯಿಸರ ಈ ಆಶೀರ್ವಾದದಿಂದ  ಭಾಮೆಯ ನಿರ್ಧಾರ ಇನ್ನಷ್ಟು ಅಚಲವಾಗುತ್ತದೆ.

‘ಸ್ವಯಂವರ ಲೋಕ’ ನಾಟಕದಂತೆ ಈ ನಾಟಕದಲ್ಲೂ  ಆಗಾಗ ಪಾತ್ರಗಳು ಕಥೆಯನ್ನು ಹೇಳುವುದುಂಟು. ಆ ಕಥೆಗಳು ಕೇವಲ ಕಥೆಗಾಗಿ ಮಾತ್ರವಲ್ಲದೇ ಎದುರಿನಲ್ಲಿ ಇರುವ ವ್ಯಕ್ತಿಗೆ ಒಮ್ಮೆ ಸಮಜಾಯಿಷಿಯಾಗಿಯೋ, ಇನ್ನೊಮ್ಮೆ ನೇರವಾಗಿ ಹೇಳುವ ಮಾತನ್ನು ಅಪರೋಕ್ಷವಾಗಿ ಹೇಳುವ ಉದ್ದೇಶಕ್ಕಾಗಿಯೋ, ಕೊಂಕಿನ ಮಾತಾಗಿಯೋ ಇರುತ್ತದೆ. ಈ ರೀತಿ ಪಾತ್ರಗಳು ಹೇಳುವ ಯಾವ ಕಥೆಯೂ ನಾಟಕದ ಕಥೆಯ ಚೌಕಟ್ಟಿನಿಂದ ಹೊರ ಹೋಗದೇ ಹೆಚ್ಚು ಪ್ರಸ್ತುತವೆನಿಸುತ್ತದೆ.

‘ಸ್ವಯಂವರ ಲೋಕ’ ದಲ್ಲಿ ಕಿಟ್ಟು ಹಾಗೂ ಭಾಮೆಯ ಮದುವೆಯ ಸೂಚನೆ ಹಾಗೂ ಜೋಯಿಸರು ಬದರಿನಾಥ ಯಾತ್ರೆಗೆ ಹೋಗುವುದರೊಂದಿಗೆ ನಾಟಕ ಬಹುಮಟ್ಟಿಗೆ ತಾರ್ಕಿಕವಾಗಿ ಅಂತ್ಯವಾಗುತ್ತದೆ. ‘ಸೇತು ಬಂಧನ’ದಲ್ಲಿ ಊರಿನಲ್ಲಿ ನಡೆಯುವ ರಾಜಕೀಯ, ಹಾಗೂ ಅದರಿಂದ ಉಂಟಾದ ಸ್ಥಿತ್ಯಂತರಗಳಿಗೆ ಬೆಂಗಳೂರಿನಿಂದ ಬಂದ ಹೊಸ ತಲೆಮಾರಿನ ಹುಡುಗ ಮದನ ಆಶಾಕಿರಣವಾಗಿ ಒದಗುತ್ತಾನೋ ಎಂದು ನಾಟಕದ ಮಧ್ಯದಲ್ಲಿ ಭಾಸವಾಗುತ್ತಿತ್ತು. ಆದರೆ ಲೇಖಕರು ಇದಕ್ಕೆ ಅಷ್ಟೊಂದು ನಾಟಕೀಯ ಅಂತ್ಯವನ್ನು (ಜೋಯಿಸರ ಸಾವನ್ನು ಹೊರತುಪಡಿಸಿ) ನೀಡದೇ ಊರಿನ ಸ್ಥಿತಿಗತಿಗಳು ಮುಂದೇನಾಗಬಹುದು ಎಂದು ವೀಕ್ಷಕರಿಗೇ ಬಿಟ್ಟು ಬಿಡುತ್ತಾರೆ.

ಸ್ವಯಂವರ ಲೋಕದಂತೆ ಕೆ ವಿ ಅಕ್ಷರ ಅವರ ಈ ನಾಟಕವೂ ನನಗೆ ಅಪ್ಯಾಯಮಾನವಾಗಿದೆ. ಮಂಜು ಕೊಡಗು ಅವರ ಸಹ ನಿರ್ದೇಶನ ಹಾಗೂ ವಿನ್ಯಾಸ ನಾಟಕಕ್ಕೆ ಪೂರಕವಾಗಿದೆ. ನಾಟಕದ ಪಾತ್ರಧಾರಿಗಳೆಲ್ಲರೂ ಚೆನ್ನಾಗಿ ನಟಿಸಿದರು ಎನ್ನುವುದಕ್ಕಿಂತ ಆಯಾ ಪಾತ್ರಗಳನ್ನೇ ಜೀವಿಸುತ್ತಿದ್ದರು ಎನ್ನುವುದು ಹೆಚ್ಚು ಸೂಕ್ತ. ಸುಮಾರು ಎರಡು ಮುಕ್ಕಾಲು ಗಂಟೆಗಳಷ್ಟು ಸುದೀರ್ಘವಾಗಿರುವ ಈ ನಾಟಕ ಪ್ರೇಕ್ಷಕರನ್ನು ಆರಂಭದಿಂದ ಕೊನೆಯವರೆಗೂ ಹಿಡಿದಿಟ್ಟುಕೊಂಡಿತ್ತು.

Leave a Reply