ಸಿಂಗಾಪುರ್ ಗೆ ಈಗಲೇ ಬಂತು ದೀಪಾವಳಿ

ಮತ್ತೆ ಬಂತು ದೀಪಾವಳಿ. ಎಲ್ಲೆಲ್ಲೂ ಸಡಗರ, ಸಂಭ್ರಮ. ಪಟಾಕಿಗಳ ಸುರಿಮಳೆ, ಎಲ್ಲಿ ನೋಡಿದರೂ ಬಣ್ಣ ಬಣ್ಣದ ದೀಪಗಳು ಹೊಸ ಉಡುಗೆ ತೊಡುಗೆಯಲ್ಲಿ ಸಿಂಗರಿಸಿದ ನಾಡಿನ ಜನತೆ.

ಅರೆ ಇದೇನಿದು ? ದೀಪಾವಳಿ ಈಗೆಲ್ಲಿ ಬಂತು ಅಂದುಕೊಂಡ್ರಾ. ಇಷ್ಟೇ ದೊಡ್ಡ ಹಬ್ಬದ ಸಡಗರದಲ್ಲಿ ಇದೀಗ ಚೀನಿಯರು ಬ್ಯುಸಿ. ವರ್ಷದ ಅತಿ ದೊಡ್ಡ ಹಬ್ಬ ಚೈನೀಸ್ ನ್ಯೂ ಈಯರ್ ಗೆ ಸಿಂಗಾಪುರ ರಂಗು ರಂಗಾಗಿ ಸಿಂಗಾರಗೊಂಡಿದ್ದು ಆಯಿತು. ವಿಶೇಷವಾಗಿ ಇದರ ಸೌಂದರ್ಯವನ್ನು ಸವಿಯಲು ಸಿಂಗಾಪುರದ “ಚೈನಾ ಟೌನ್” ಗೆ ಭೇಟಿ ನೀಡಬೇಕು.

ಈ ಪ್ರದೇಶದ ರಸ್ತೆಯುದ್ದಕ್ಕೂ ಒಂದು ರೌಂಡ್ ಸುತ್ತಬೇಕು. ಚೀನಿಯರ ಹೊಸ ವರ್ಷದ ಹಬ್ಬದ ತಯಾರಿ, ಖರೀದಿಗಳು, ಪೂಜಾ ಕೈಂಕರ್ಯಗಳು, ತಿನಿಸುಗಳು, ಉಡುಗೆ – ತೊಡುಗೆಗಳು ಎಲ್ಲವುದರ ಚಿತ್ರಣ ನಮಗೆ ಲಭ್ಯವಾಗಲಿದೆ. ರಸ್ತೆಯ ಆರಂಭದಿಂದ ಕೊನೆಯವರೆಗೂ ಕೆಂಪು ಬಣ್ಣದ್ದೇ ಅಧಿಪತ್ಯ. ಇವುಗಳ ಮಧ್ಯೆ ಹಾದು ಹೋಗುವ ಡ್ರ್ಯಾಗನ್ ನೃತ್ಯಗಳು, ಸಂಗೀತ ರಸ ಸಂಜೆಗಳಿಗೆ ಲೆಕ್ಕವೇ ಇಲ್ಲ.

ಈ ಚೈನಾ ಟೌನ್ ಇಷ್ಟಕ್ಕೆ ಸೀಮಿತವಾಗಿಲ್ಲ. ಇನ್ನೂ ಅನೇಕ ಕುತೂಹಲಕಾರಿ ವಿಚಾರಗಳು ಇಲ್ಲಿವೆ. ಅಂದ ಹಾಗೆ ಪ್ರತಿಯೊಬ್ಬ ವ್ಯಕ್ತಿಗೆ ತನ್ನ ದೇಶದ ಮೇಲೆ ಅಭಿಮಾನ, ಪ್ರೀತಿ ಸಹಜ. ಆದರೆ ವಿದೇಶದ ಮೇಲೆ..? ಆತನ ಯೋಚನೆ, ಅಭಿಲಾಷೆ ಕೊಂಚ ಅಧಿಕನೆ ಸರಿ. ತನ್ನ ಆರ್ಥಿಕ ಪರಿಸ್ಥಿತಿ ಸುಧಾರಿಸಿಲೋ, ಅಥವಾ ಇನ್ನಿತರ ಕಾರಣಕ್ಕೋ ವಿದೇಶಕ್ಕೆ ಕಾಲಿಟ್ಟಿರುತ್ತಾನೆ. ವಿಶೇಷವೆಂದರೆ ಅಲ್ಲೂ ಆತನ ಪ್ರಯತ್ನ, ತನ್ನ ನಾಡಿನವರನ್ನ, ತನ್ನ ಸಮುದಾಯದವರನ್ನ ಹುಡುಕೋದರಲ್ಲೇ ಇರುತ್ತದೆ. ಇನ್ನೂ ಅದೆಷ್ಟೋ ಕಾಲದ ಹಿಂದೆ ವಲಸೆ ಬಂದವರ ಕಥೆ ಗಳು ಮತ್ತಷ್ಟು ವಿಭಿನ್ನವಾಗಿರುತ್ತವೆ. ಒಂದು ನಿರ್ದಿಷ್ಟ ಪ್ರದೇಶ ತುಂಬಾ ಅವರದ್ದೇ ಸಮುದಾಯ ತುಂಬಿ ಹೋಗಿದ್ದರೆ, ಅಂತಹ ಸ್ಥಳವೂ ಕೂಡ ಅದೇ ಹೆಸರಿನಿಂದ ನಾಮಕರಣವಾಗಿ ಬಿಡುತ್ತದೆ.

ಇದೇ ಹಿನ್ನಲೆಯಲ್ಲಿ ಸೃಷ್ಟಿಯಾದ ಸ್ಥಳ ಈ “ಚೈನಾ ಟೌನ್”.  ಬಹುತೇಕ ಚೀನೀಯರಿಂದಲೇ ಕೂಡಿರೋ ಸಿಂಗಾಪುರದಲ್ಲಿ ಚೈನಾ ಟೌನ್ ಗೆ ವಿಶೇಷ ಸ್ಥಾನ. ಬ್ರಿಟಿಷರಿಂದ ಪಡೆದ ಈ ಹೆಸರು, ಈಗಲೂ ಮುಂದುವರಿದಿದೆ. ಚೀನಿ ಭಾಷೆಯಲ್ಲಿ ಇದನ್ನ “ನಿವ್ ಚೆ ಶುಯಿ” ಅಂತ ಕರೀತಾರೆ. ಅಂದರೆ “ಬುಲ್ ಕಾರ್ಟ್ ವಾಟರ್” ಎಂಬುದಾಗಿದೆ. 19ನೇ ಶತಮಾನದಲ್ಲಿ ಚೈನಾ ಟೌನ್ ಗೆ ಎತ್ತಿನ ಗಾಡಿ ಮೂಲಕ ಶುದ್ದ ನೀರು ಸರಬರಾಜು ಮಾಡಲಾಗುತ್ತಿತ್ತು. ಸುತ್ತಮುತ್ತಲಿನ ಹಲವು ಪ್ರದೇಶಗಳೊಂದಿಗೆ ಸಂಯೋಜನೆಗೊಂಡಿರುವ ಚೈನಾ ಟೌನ್, ಈ ಹಿಂದೆ ಹಲವಾರು ಒಪ್ಪಂದಗಳಿಗೆ ಕೇಂದ್ರ ಬಿಂದುವಾಗಿತ್ತು.

ವ್ಯೆವಿಧ್ಯತೆಯಲ್ಲಿ ಏಕತೆ ಅನ್ನೋ ಪದಕ್ಕೆ ಚೈನಾ ಟೌನ್ ಉತ್ತಮ ಉದಾಹರಣೆ. ಚೀನಿಯರ ದೇವಾಲಯ, ಮುಸ್ಲಿಂರ ಮಸೀದಿ, ಹಿಂದೂಗಳ ದೇಗುಲ.  ಇಲ್ಲಿನ ಪ್ರತಿಯೊಂದು ಬೀದಿಯೂ, ಒಂದೊಂದು ಇತಿಹಾಸವನ್ನು ಸಾರಬಲ್ಲುದು. ಅವುಗಳ ವಿವರ ಇಲ್ಲಿದೆ.

ಮೊದಲಿಗೆ, ” ಬುದ್ಧ ಟೂತ್ ರೆಲಿಕ್ ಟೆಂಪಲ್ ಅಂಡ್ ಮ್ಯೂಸೀಯಮ್ ” –  ದಕ್ಷಿಣ ಬ್ರಿಗೇಡ್ ರೋಡ್ ನಲ್ಲಿರುವ ಈ ದೇಗುಲ, ಟ್ಯಾಂಗ್ ರಾಜವಂಶದ ವಾಸ್ತು ಶೈಲಿಯಲ್ಲಿದೆ. ಸುಮಾರು 75 ಮಿಲಿಯನ್ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಬೌದ್ಧರ ಪವಿತ್ರ ದೇಗುಲ ಇದಾಗಿದೆ. ಬುದ್ಧನ ಕಲಾಕೃತಿಗಳ ಅನಾವರಣವನ್ನ ಮ್ಯೂಸೀಯಮ್ ನಲ್ಲಿ ಕಾಣಬಹುದು. ಅದರಲ್ಲೂ ಮೂಳೆ ಮತ್ತು ನಾಲಿಗೆಯ ಸ್ಮಾರಕ ವಿಶೇಷವಾಗಿದೆ. ಇಲ್ಲಿರುವ ಬುದ್ಧನ ಸ್ತೂಪ 3.5 ಟನ್ ತೂಕವಿದ್ದು, ೩೨೦ ಕೆಜಿ ಬಂಗಾರದಿಂದ ನಿರ್ಮಿಸಲಾಗಿದೆ. ಇಲ್ಲಿಗೆ ಬೌದ್ಧ ಸನ್ಯಾಸಿಗಳಿಗೆ ಮಾತ್ರ ಪ್ರವೇಶವಿದ್ದು, ಪ್ರವಾಸಿಗರು ಸಾರ್ವಜನಿಕ ಪ್ರದೇಶದಲ್ಲಿ ಈ ಮೂರ್ತಿಯನ್ನು ವೀಕ್ಷಿಸಬಹುದಾಗಿದೆ. 27 ಅಡಿ ಎತ್ತರದ ಮೈತ್ರೇಯ ಬುದ್ಧನ ಮೂರ್ತಿ, ಬುದ್ಧ ಶಕ್ಯ ಮುನಿಯ ಹಲ್ಲು ಈ ಮ್ಯೂಸೀಯಮ್ ನಲ್ಲಿದೆ. ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಚರ್ಚೆಗಳು ನಡೆಯುತ್ತದೆ.

ಮಾಸ್ಕ್ಯೂ ಸ್ಟ್ರೀಟ್ – ಈ ಬೀದಿಯಲ್ಲಿ ದಕ್ಷಿಣ ಭಾರತದ ಕೋರಮಂಡಲ ತೀರದ ಚುಲಿಯ ಮುಸ್ಲಿಂರು 1830 ನಲ್ಲಿ ಜಮಯಿ ಮಸೀದಿಯನ್ನ ನಿರ್ಮಿಸಿದ್ದಾರೆ. ಸಿಂಗಾಪುರದ ಅತ್ಯಂತ ಹಳೆಯ ಮಸೀದಿ ಇದಾಗಿದ್ದು, ಇಲ್ಲಿನ ವಾಸ್ತುಶಿಲ್ಪ ವಿಭಿನ್ನ ದೇಶಗಳ ಮಿಶ್ರಣದೊಂದಿಗೆ ರಚಿಸಲಾಗಿದೆ. ವಿಶೇಷವೆಂದರೆ, ಇಲ್ಲಿ ಧಾರ್ಮಿಕ ತರಗತಿಗಳು ಈಗಲೂ ತಮಿಳು ಭಾಷೆಯಲ್ಲಿ ನಡೆಯುತ್ತದೆ.

ಟೆಂಪಲ್ ಸ್ಟ್ರೀಟ್ –  ಶ್ರೀ ಮಾರಿಯಮ್ಮ ದೇವಾಲಯ ಇಲ್ಲಿದೆ. ಹಿಂದೂ ಸಮುದಾಯದ ಈ ದೇಗುಲ ಅತ್ಯಂತ ಹಳೆಯದ್ದು. 1827 ರಲ್ಲಿ ನಾಗಪಟ್ಟಣ ಹಾಗೂ ಕೂದ್ದಲೋರಿನಿಂದ ಬಂದ ವಲಸಿಗರು ಇದನ್ನ ಕಟ್ಟಿಸಿದ್ದಾರೆ. ಪ್ರತೀ ವರ್ಷ ನಡೆಯುವ ” ಬೆಂಕಿಯಲ್ಲಿ ನಡಿಗೆ” ಆಚರಣೆ ಈ ದೇವಾಲಯದ ವಿಶೇಷ.

ಸಾಗೋ ಸ್ಟ್ರೀಟ್ – 1850 ರಲ್ಲಿದ್ದ ಸಾಗೋ ಕಾರ್ಖಾನೆಗಳಿಂದಾಗಿ ಈ ಬೀದಿಗೆ ಸಾಗೋ ಎಂದು ಹೆಸರು ಬಂದಿದೆ. ಸ್ಪಂಜ್ ನಂತೆ ಮೆದುವಾದ ಉಷ್ಣವಲಯದ ಪಾಮ್ ಕಾಂಡವನ್ನು ಹೊಂದಿರುವ ಸಾಗೋ ಗಿಡದಿಂದ ಒಂದು ಬಗೆಯ ಹಿಟ್ಟನ್ನು ತಯಾರು ಮಾಡಲಾಗುತಿತ್ತು. ಅದನ್ನ ಕೇಕ್ ತಯಾರಿಕೆಗೆ ಬಳಸಲಾಗುತಿತ್ತು. ಹುಳಿ ಹಾಗೂ ಸಿಹಿ ಮಿಶ್ರಿತ ಕೇಕ್ ಇದಾಗಿತ್ತು. ಈ ಬೀದಿಯಲ್ಲಿದ್ದ ಸುಮಾರು 30 ಕಾರ್ಖಾನೆಗಳಿಂದ ಸುಮಾರು 8,000 ಟನ್ ಗಳಷ್ಟು ಹಿಟ್ಟನ್ನು ತಯಾರು ಮಾಡಲಾಗುತಿತ್ತು.

ಸ್ಮಿತ್ ಸ್ಟ್ರೀಟ್  – ಯುರೋಪಿಯನ್ ವ್ಯಕ್ತಿ ಸೆನಿಲ್ ಕ್ಲೆಮಂಟಿ ಸ್ಮಿತ್ ಅವರ ಹೆಸರಿನಿಂದ ಈ ಬೀದಿಯನ್ನ ಕರೆಯಲಾಗುತ್ತದೆ. ಚೀನಿ ವಿದ್ವಾಂಸರಾಗಿದ್ದ ಇವರು,  ಸಿಂಗಾಪುರದಲ್ಲಿ ಆ ಕಾಲದಲ್ಲಿದ್ದ “ಸೀಕ್ರೆಟ್ ಸೊಸೈಟೀ” ಯ ಸಮಸ್ಯೆಗಳನ್ನು ಬಗೆಹರಿಸುವ ಜವಾಬ್ದಾರಿಯನ್ನು ಹೊಂದಿದ್ದರು. “ಸೀಕ್ರೆಟ್ ಸೊಸೈಟೀ” ಅಂದರೆ ಸಣ್ಣ ಸಣ್ಣ ಗುಂಪುಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಇದರ ಸದಸ್ಯರು ಕಾನೂನು ಬಾಹಿರ ಅಂದರೆ ಹಿಂಸಾಚಾರ, ಸುಲಿಗೆ, ದುರಾಚಾರಗಳಲ್ಲಿ ತೊಡಗಿದ್ದರು.

ನೈಟ್ ಮಾರ್ಕೆಟ್ – ರಾತ್ರಿ ವೇಳೆಯಲ್ಲಿ ಮಾತ್ರ ಚಾಲನೆಯಲ್ಲಿರೋದು ಈ ಮಾರ್ಕೆಟ್ ನ ಸ್ಪೆಶ್ಯಾಲಿಟೀ. ಓಪನ್ ಏರ್ ಮಾರ್ಕೆಟ್ ಇದಾಗಿದ್ದು, ಶಾಪಿಂಗ್, ಈಟಿಂಗ್, ಎಲ್ಲವೂ ಇಲ್ಲಿ ಲಭ್ಯ. ಇದನ್ನ ” ಪಾಸರ್ ಮಾಲಾಮ್” ಅಂತಲೂ ಕರೀತಾರೆ. ಮಲಯ್ ಭಾಷೆಯಲ್ಲಿ ಪಾಸರ್ ಅಂದ್ರೆ  ಬಜ಼ಾರ್, ಮಾಲಾಮ್ ಅಂದ್ರೆ ರಾತ್ರಿ ಎಂದರ್ಥ.

ಇವುಗಳಷ್ಟೆ ಅಲ್ಲದೆ ವಿಭಿನ್ನ ಗಿಡಮೂಲಿಕೆಗಳು ದೊರೆಯುವ “ ಮೆಡಿಕಲ್ ಹಾಲ್” ಇಲ್ಲಿ ತುಂಬಾ ಫೇಮಸ್. ಚೀನಿಯರಲ್ಲಿ ಬಹುತೇಕ ಮಂದಿ ಅಲೋಪತಿಗೆ ಮೊರೆ ಹೋಗದೆ, ಈಗಲೂ ಔಷದಿಯುಕ್ತ ಗಿಡಮೂಲಿಕೆಗಳನ್ನ ಮುಂದುವರಿಸಿದ್ದಾರೆ.

ಆಧುನಿಕ ಸಿಂಗಪುರದಲ್ಲಿ ಚೈನಾ ಟೌನ್, ತನ್ನ ಇತಿಹಾಸ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪರಂಪರೆಯಿಂದ ಬಂದಂತಹ ಬ್ರ್ಯಾಂಡ್ ಗಳು ಈಗಲೂ ಕಾಣಬಹುದು. ಸಿಂಗಾಪುರದ ನಂಬರ್ ಒನ್ ಬ್ರ್ಯಾಂಡ್ “ಆರ್ಚರ್ಡ್ ಚಾಪ್ ಸ್ಟಿಕ್” ಇಲ್ಲಿ ತಯಾರಾಗುತ್ತದೆ.  ರೇಷ್ಮೆ, ಸಾಂಪ್ರದಾಯಿಕ ಕರಕುಶಲತೆ, ಬಂಗಾರ ಹಾಗೂ ಪಚ್ಚೆ ಕಲ್ಲಿನ ಆಭರಣಗಳನ್ನ ಇಲ್ಲಿ ತಯಾರು ಮಾಡಲಾಗುತ್ತದೆ.

ವೇಗದ ಬೆಳವಣಿಗೆಯಲ್ಲೂ ಪರಂಪರೆಯ ಶ್ರೀಮಂತಿಕೆಯನ್ನ ಇಲ್ಲಿ ಕಾಣಬಹುದು. “ಫುಕ್ ಟಕ್ ಚಿ” ಮ್ಯೂಸೀಯಮ್ , ಎನ್ನ್ ಯು ಎಸ್ ಬಾಬ ಹೌಸ್,  ಚೈನಾಟೌನ್ ಹೆರಿಟೇಜ್ ಸೆಂಟರ್, ಸಿಂಗಪುರ್ ಸಿಟೀ ಗ್ಯಾಲರೀ, ಟಿಯಾನ್ ಹಾಕ್ ಕೆಂಗ್ ಟೆಂಪಲ್,  ಪಿನಾಕಲ್ ಅಟ್ ಡಕ್ಸನ್, ಸ್ಕೈ ಬ್ರಿಡ್ಜ್, ಚೈನೀಸ್ ಎಂಪೋರೀಯಮ್ “ಯೂ ಹ್ವ” ಚೈನಾಟೌನ್ ನಲ್ಲಿದೆ.  ಅಲ್ಲದೆ, ಇಡೀ ಚೈನಾ ಟೌನ್ ನಲ್ಲಿ ಉಚಿತ Wi- Fi ಸೌಲಭ್ಯ ಇರೋದ್ರಿಂದ ಯಾವುದೇ ಮಾಹಿತಿಯನ್ನ ತಮ್ಮ ಮೊಬೈಲ್ ನಲ್ಲಿ ಥಟ್ಟನೆ ಪಡೆದುಕೊಳ್ಳಬಹುದಾಗಿದೆ.

ಒಟ್ಟಾರೆ, ಸಾಂಪ್ರದಾಯಿಕ ವ್ಯಾಪಾರ ಅಭಿವೃದ್ಧಿ ಹೊಂದುತ್ತಿದೆಯೋ ಅಥವಾ ಆಧುನಿಕ ವ್ಯಾಪಾರವು ಸಾಂಪ್ರದಾಯಿಕ ಪ್ರಭಾವಕ್ಕೊಳಗಾಗಿದೆಯೋ. ಆಧುನಿಕ ಚೈನಾ ಟೌನ್ ಉದ್ದಕ್ಕೂ ಕಲೆ, ಸಾಹಿತ್ಯ, ಸಂಸ್ಕೃತಿ ಅನಾವರಣಗೊಂಡಿದೆ.

ಅಂದ ಹಾಗೆ, ಎಲ್ಲರಿಗೂ ” 新年快乐 “..

{ ಚೀನೀ ಹೊಸ ವರ್ಷದ ಶುಭಾಶಯಗಳು}

Leave a Reply