ಡಾ. ಎಂದು ಬರೆದುಕೊಳ್ಳದ ‘ಬಸು ಬೇವಿನಗಿಡದ’

ಕನ್ನಡದ ಮಾಲ್ಗುಡಿ ಡೇಸ್…

ಗಿರೀಶ್ ಜಕಾಪುರೆ 

ಹಂಪಿ ವಿವಿಯಿಂದ ಡಾಕ್ಟರೇಟ್ ಪಡೆದರೂ ತಮ್ಮ ಹೆಸರ ಮುಂದೆ ಡಾ. ಎಂದು ಬರೆದುಕೊಳ್ಳದ ತುಂಬ ಸಂಕೋಚದ, ವಿನಯವಂತಿಕೆಯ ಬರಹಗಾರ ಬಸು ಬೇವಿನಗಿಡದ.

ಇತ್ತೀಚಿಗೆ ನನ್ನ ಕೃತಿಯೊಂದು ಬಿಡುಗಡೆ ಮಾಡಿ ಮಾತಾಡಿದ ಅವರು ನನ್ನ ಮೇಲೆ ಮತ್ತೂ ತಮ್ಮ ವಾಗ್ಝರಿಯ ಛಾಪು ಮೂಡಿಸಿದರು. ಅಂದು ಅವರು ಆತ್ಮೀಯತೆಯಿಂದ ನೀಡಿದ ‘ಓಡಿಹೋದ ಹುಡುಗ’ ಎಂಬ ಅವರ ಕೃತಿಯನ್ನು ಓದಿದಾಗ ಇದು ಕನ್ನಡದ ‘ಮಾಲ್ಗುಡಿ ಡೇಸ್’ ಎಂದೆನಿಸಿತು. ಆರ್. ಕೆ. ನಾರಾಯಣ ಅವರ ‘ಸ್ವಾಮಿ ಆಂಡ್ ಹಿಸ್ ಫ್ರೆಂಡ್ಸ್’ ಎಂಬ ಕ್ಲಾಸಿಕ್ ಕೃತಿಯೊಂದು ನೀಡುವಂತಹ ಓದಿನ ಅನುಭವವನ್ನು ‘ಓಡಿಹೋದ ಹುಡುಗ’ ನೀಡಿತು.

ಈಗಾಗಲೇ ಮಕ್ಕಳ ಸಾಹಿತ್ಯದಲ್ಲಿ ತೊಡಗಿಕೊಂಡಿರುವವರಲ್ಲಿ ಪ್ರಮುಖರಾಗಿ ಗುರುತಿಸಿಕೊಂಡ ಬಸು ಬೇವಿನಗಿಡದ ಅವರು ಡಾ. ಆನಂದ ಪಾಟೀಲರ ಒಡನಾಡಿ. ಈ ಇಬ್ಬರೂ ಸೇರಿದರೆ ಮಕ್ಕಳ ಸಾಹಿತ್ಯದ ಪೂರ್ವ-ಪರಗಳೂ ಒಂದೆಡೆ ಸೇರಿದಂತೆ. ೨೦೧೫ ರಲ್ಲಿ ಕಸಾಪ ಪ್ರಕಟಿಸಿದ ಬಸು ಅವರು ಸಂಪಾದಿಸಿದ ‘ಮಕ್ಕಳ ಸಾಹಿತ್ಯದ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ’ ಬಹಳ ಮಹತ್ವದ ಕೃತಿ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ ಪಡೆದಿರುವ ಬಸು ಬೇವಿನಗಿಡದ ಅಷ್ಟೇ ಸೌಜನ್ಯಶೀಲರೂ ಕೂಡ. ಮಕ್ಕಳ ಸಾಹಿತ್ಯದ ಬಗ್ಗೆ ಅಪಾರ ಕಾಳಜಿ ಹೊಂದಿರುವ ‘ಅಭಿನವ ಪ್ರಕಾಶನ’ ಪ್ರಕಟಿಸಿದ ಈ ಕೃತಿಯಲ್ಲಿ ಆನಂದ‌ ಪಾಟೀಲರು ಬರೆದ ಚಿತ್ರಗಳೂ ಒಳಗೊಂಡು ಇನ್ನಷ್ಟು ಮೆರಗು ಹೆಚ್ಚಿಸಿವೆ.

ಮಕ್ಕಳ ಮನೋಲೋಕ ಹಲವಾರು ಅನೂಹ್ಯಗಳಿಂದ ಕೂಡಿರುತ್ತದೆ. ಮಕ್ಕಳಲ್ಲಿ ಮಗುವಾದಾಗಲೇ ಅವುಗಳ ಅನಾವರಣ ಸಾಧ್ಯ. ‘ಓಡಿಹೋದ ಹುಡುಗ’ ಕೃತಿಯಲ್ಲಿ ಬಸು ಅವರು ಮಗುವಾಗಿಯೇ ಮಕ್ಕಳ ಲೋಕವನ್ನು ಗಮನಿಸಿದ್ದಾರೆ ಹಾಗೂ ತಮಗೆ ಕಾಡಿದ ಅನುಭವಗಳನ್ನು ಇಲ್ಲಿ ದಾಖಲಿಸಿದ್ದಾರೆ. ಈ ಕೃತಿಯಲ್ಲಿ ಬರುವ ಗಜ್ಯಾನ ಪಾತ್ರ ಬಹಳ ವಿಶಿಷ್ಟವಾಗಿದೆ. ಏಕೆಂದರೆ ಈ ಕೃತಿಯ ಓದಿದ ನಂತರ ಎಲ್ಲ ಮಕ್ಕಳು ತಾನೂ ಗಜ್ಯಾನ‌ ರೀತಿಯಲ್ಲಿಯೇ ಚಟುವಟಿಕೆಯಿಂದ ಇರಬೇಕು ಹಂಬಲಿಸುವುದು ಖಂಡಿತ. ಅವನೇ ಕೃತಿಯ ಹೀರೋ. ಊರು, ಕೇರಿಯ, ಶಾಲೆಯ, ಗೆಳೆಯರ ಕಣ್ಮಣಿ. ಜೊತೆಗೆ ಆಲದ ಮರದ ಅಜ್ಜ, ಸೋಮು, ಮುಕುಂದ ಇವರದೂ ಮಾದರಿಯ ಪಾತ್ರಗಳು. ಅಲ್ಲದೆ ಗಜ್ಯಾನ ಸೈಕಲ್ ಕೂಡ ಒಂದು ಜೀವಂತ ಪಾತ್ರವೇ ಆಗಿದೆ.

ಇಲ್ಲಿನ ಕಥೆಗಳು ವಾಸ್ತವದ ನೆಲೆಯಲ್ಲಿ ರಚಿತವಾಗಿದ್ದು ವಿನೋದ, ಫ್ಯಾಂಟಸಿ, ಪರಿಸರ ಪ್ರೀತಿ, ಮಾನವೀಯ ಮೌಲ್ಯಗಳು ಹೀಗೆ ವಿವಿಧ ಮಜಲುಗಳನ್ನು ಸ್ಪರ್ಶಿಸುತ್ತ ಮನದಾಳಕ್ಕೆ ಇಳಿಯುತ್ತವೆ. ಪಂಚತಂತ್ರ, ಅಲ್ಲಾದಿನ್, ಅಲಿಬಾಬಾ ಕಥೆಗಳು ಸಮಕಾಲೀನ ಸಮಸ್ಯೆಯಿಂದ, ವಾಸ್ತವದಿಂದ ದೂರ ಇವೆ. ಆದರೆ ಓಡಿಹೋದ ಹುಡುಗ ಕೃತಿಯಲ್ಲಿನ ಕಥೆಗಳು ನಿಜ ಜೀವನದ ಏರಿಳಿತಗಳನ್ನು ಒಳಗೊಂಡಿದ್ದು ಮಕ್ಕಳನ್ನು ಮಾನಸಿಕವಾಗಿ ಸಬಲಗೊಳಿಸುವ ಸಿದ್ಧತೆ ಮಾಡುತ್ತವೆ.

ಇಲ್ಲಿನ ಸರಳವಾದ ಹಾಗೂ ಗ್ರಾಹ್ಯವಾದ ಭಾಷೆ, ಸುಲಲಿತವಾದ ನಿರೂಪಣೆ, ವಿಭಿನ್ನ ಕಥಾಹಂದರ, ಕುತೂಹಲಕಾರಿ ಸನ್ನಿವೇಶಗಳು, ಮನಮಿಡಿಯುವ ಪ್ರಸಂಗಗಳು, ಮೊನಚಾದ ಸಂಭಾಷಣೆ, ಸಂದರ್ಭದಕ್ಕೆ ತಕ್ಕಂತೆ ಬಳಸಿದ ನುಡಿಗಟ್ಟುಗಳು ತಾನಾಗಿಯೇ ಕೃತಿಯನ್ನು ಓದಿಸಿಕೊಂಡು ಹೋಗುತ್ತವೆ. ಗ್ರಾಮೀಣ ಸೊಗಡಿನ ಈ ಕಥೆಗಳು ಮಕ್ಕಳ ಮನಸ್ಸನ್ನು ಅರಳಿಸುತ್ತವೆ.

ಇಡೀ ಕೃತಿ ಗಜ್ಯಾನ ಸುತ್ತಲೂ ಸುತ್ತುತ್ತಿರುವ ಸಂದರ್ಭದಲ್ಲಿ ಅಚಾನಕಾಗಿ ಗಜ್ಯಾ ಕಾಣೆಯಾಗುತ್ತಾನೆ, ಎಲ್ಲಿಯೋ ಓಡಿಹೋಗುತ್ತಾನೆ. ಆಕಸ್ಮಿಕವಾಗಿ ಊರೆಲ್ಲ ಗುಲ್ಲಾಗುತ್ತದೆ, ವಿಷಾದ, ಚಿಂತೆ, ಹುಡುಕಾಟ ಏಕಕಾಲಕ್ಕೆ ನಡೆದು ನಿರಾಶೆ ಮಡುಗಟ್ಟಿ ಮೌನವಾಗುತ್ತದೆ. ಹೀಗಿರುವಾಗ ಅಂಬಾಸಿಡರ್ ಕಾರೊಂದು ಎಂಟ್ರಿ ಆಗುತ್ತದೆ. ಗಜ್ಯಾ ಮರಳಿಬರುತ್ತಾನೆ. ಅಜ್ಜನ ಸಹಾಯದಿಂದ ಚಲನಚಿತ್ರದಲ್ಲಯೂ ನಟಿಸುತ್ತಾನೆ. ಹೀಗೆ ವಿಶಾಲ ಕಥಾಹಂದರ ಹೊಂದಿರುವ “ಓಡಿಹೋದ ಹುಡುಗ” ಕೃತಿ ಕನ್ನಡದ ಮಟ್ಟಿಗೆ ಮಾಲ್ಗುಡಿ ಡೇಸ್ ಎಂದು ಹೇಳಬಹುದು.

ಹಲವಾರು ಮಹತ್ವದ ಕೃತಿಗಳನ್ನು ಕನ್ನಡದ ಸಾರಸ್ವತ ಲೋಕಕ್ಕೆ ನೀಡಿರುವ ಬಸು ಅವರ ಈ ಕೃತಿಯೂ ಓದುಗರಿಗೆ ತುಂಬ ಹಿಡಿಸುತ್ತದೆ ಎಂಬ ನಂಬಿಕೆಯಿದೆ.

Leave a Reply