ಬುದ್ಧ ನಗೆ
ಸಂತೆಬೆನ್ನೂರು ಫೈಜ್ನಟ್ರಾಜ್
ಎದೆಯ
ಮಟನ್ ಅಂಗಡಿಯಲ್ಲಿ
ನಿನ್ನ ನೆನಪುಗಳ ನೇತುಹಾಕಿದ್ದೇನೆ;
ತೊಡೆಯಾಗಿ
ಕಾಲಾಗಿ
ಹಸಿಮಾಂಸದ ತೊಲೆಯಾಗಿ
ತೂಗುತಿದೆ- ರಕ್ತ
ಕಣ್ಣಲ್ಲಿ ನೀರಾಗಿ ತೊಟ್ಟಿಕ್ಕುತಿದೆ!
ಮುದ್ದಾಗಿ
ಸಾಕಿ
ಬೆಳೆಸಿದ ಪ್ರೀತಿ
ಬಕರಾ ನಿನ್ನ ನಿರ್ಗಮನದ
ಚಾಕುವಿನಿಂದ ಹಲಾಲ್ ಆಗಿದ್ದು
ಸುತ್ತಲಿನ
ಗಿರಾಕಿಗಳಿಗೂ ಗೊತ್ತು!
ಮಾತಿಲ್ಲದ ತಲೆ
ಅಲ್ಲಲ್ಲ ಮನಸು
ಅಗೋ ಅಲ್ಲಿ ಗದರಿಸಿಕೊಂಡ
ಮಗುವಂತೆ ಬಿಕ್ಕಳಿಕೆಯ ಮೌನ.
ಸಮಯ ಕಳೆದಂತೆ
ನೆನಪಾಗಿ ನೇತಾಡೋ
ಮಾಂಸ
ಅಥವಾ ನೀನು
ಮರೆಯಾಗಬಹುದು…ಆದರೆ ಅಂಗಡಿ
ಎಂದಿಗೂ
ನೀನಿದ್ದರೂ
ನೆನಪಿಲ್ಲದಿದ್ದರೂ
ಬುದ್ಧನ ನಗೆಯಂತೆ ಸದಾ ಚೇತನಮಯಿ!
Good
Kavana arthagarbithavagide