ಪ್ರತಿ ಬಾರಿ ಚಹಾ ತುಟಿಗಿರಿಸಿದಾಗ..

ಶಿಲ್ಪಶ್ರೀ

ಕತ್ತಲ ಸೆರಗು ಜಾರಿ
ಬೆಳಕು ಮೂಡುವ ಹೊತ್ತು
ಬಾಲ್ಕನಿಯಲ್ಲಿ ಗಿಳಿಗಳ
ಎಣಿಸುತ್ತಾ ನಿಂತವಳಿಗೆ
ಬಿಸಿ ಚಹಾದ ಹಬೆಯಲ್ಲಿ
ಅವನ ಚಹರೆ ಇಣುಕಿ
ಛೇಡಿಸುವುದೇಕೋ..

ಅಂದೆಂದೋ ಅವನೊಟ್ಟಿಗೆ
ಹಂಚಿಕೊಂಡ
ಅರ್ಧ ಕಪ್ಪು ಚಹಾ
ಪ್ರತಿ ಬಾರಿ ಚಹಾ
ತುಟಿಗಿರಿಸಿದಾಗ ನೆನಪಾಗಿ
ಪ್ರತಿ ಗುಟುಕಿನಲ್ಲಿ
ಅವನೇ ಒಳಸೇರಿದ ಭಾವ..

ಬೆರಳುಗಳು ಬೆಸೆದ ಬಗೆಗೆ
ಮನದಿ ಶುರುವಾದ ಪುಳಕ
ದೇಹವಿಡೀ ವ್ಯಾಪಿಸಿ
ಅಧರಗಳು ಅದುರಿ
ಗುಟ್ಟು ಬಿಟ್ಟುಕೊಟ್ಟಂತೆ
ಕೆನ್ನೆ ಕೆಂಪೇರಿದಾಗ
ಮುಸಿನಗು ಸೂಸಿತ್ತು
ತಣ್ಣಗಾದ ಚಹಾ ಕಪ್ಪು!!

7 comments

  1. ಬಹಳ ಸೊಗಸಾಗಿದೆ.
    ಕೊನೆಯ ಸಾಲುಗಳಂತು ಚೆಂದವಾಗಿ ಪೋಣಿಸಿಟ್ಟ ಮಲ್ಲಿಗೆ ಹೂವು…

Leave a Reply