ಇರಲಿ ಬಿಡು ಗೆಳತಿ..

ನನ್ನವಳಿಗೊಂದು ಕವಿತೆ

ಡಾ ತಿರುಮಲೇಶ್ 

ನನಗೂ ಅಷ್ಟೇ ಪ್ರಿಯೆ,
ಚಂದಮಾಮನ ಬೆಳದಿಂಗಳನ್ನು
ಬೊಗಸೆಯಲ್ಲಿಡಿದು ತಂದು ನಿನ್ನ ಮೈಮೇಲೆ ಸುರಿಯಬೇಕೆಂಬಾಸೆ
ಮಲ್ಲಿಗೆಯ ಮೊಗ್ಗು ಸುರಿದಂತೆ

ಅಂದು ನೀ ಬಯಸಿದಂತೆ
ಇಂದು ನನಗೂ ಆಸೆ ಎನ್ನ ಬೆನ್ನ ಮೇಲೆ ನಿನ್ನನಿರಿಸಿ
ಬಾನಾಡಿಗಳ ಬೆನ್ನ ಮೇಲೆ ನನ್ನನಿರಿಸಿ
ಆಗಸಕೆ ಹಾರಿ ನಕ್ಷತ್ರಗಳ ಹಾರಿಸಿ ತಂದು ಪೋಣಿಸಿ ನಿನ್ನ
ಕೊರಳಿಗೆ ತೊಡಬೇಕೆಂದು

ಕಾಣುವ ಕನಸಂತೂ ಎಂದೂ ಒಂದೇ
ಉದಯಿಸುತ್ತಿರುವ ರವಿ ಮೇಲೆ ನಿಂತು
ನೀ ಮತ್ತು ನಾ ನರ್ತಿಸುವುದೂ
ಜಗದ ಜನರೆಲ್ಲಾ ನಮ್ಮ ನೋಡಿ ನಲಿಯುವುದು

ನೀ ಮಡಿಲಲ್ಲಿ ಮಲಗಿದಂತೆ
ನಾ ತಲೆ ಬಾಚಿ ಹೂ ಮುಡಿದಂತೆ
ನೀ ಕಂಡ ಕನಸು ಅಂದು ಹುಸಿಯಾದರೂ
ಎಂದಾದರೊಂದು ದಿನ
ಆಗುವುದಾದರೇ ಪ್ರತೀ ದಿನ
ನಿನ್ನ ಕೇಶ ರಾಶಿ ಜೊತೆ ಹೂ ಪೋಣಿಸುವಾಸೆ

ಇರಲಿ ಬಿಡು ಗೆಳತಿ
ಈ ದಿನಕೆ ಆಗಲಿಲ್ಲವೆಂದರೇನಾಯಿತು
ನನಗೂ ನಿನಗೂ ಇಂದು ಮಾತ್ರವಲ್ಲ
ಪ್ರತಿ ನಿತ್ಯವೂ ಪ್ರೇಮಿಗಳ ದಿನವೇ
ನಿನಗೂ ಶುಭಾಶಯ, ನನಗೂ ಶುಭಾಶಯ

1 comment

  1. ನಿನ್ನೆ ಎಟುಕದಿದ್ದರೇನು
    ನಾಳಿನ ಕನಸ ಹಿಡಿದು ನಿಲಿಸುವುದೇ ಪ್ರೀತಿ
    ಆಶಾವಾದವೇ ನಿಜವಾದ ಶುಭಾಶಯ

Leave a Reply