ಮದುವೆಯ ದಿನ ಅಕ್ಷರಶಃ ನಿರುದ್ಯೋಗಿಯಾಗಿದ್ದೆ..


‘ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು’ ಎಂಬುದು ಸವಕಲು ಗಾದೆಯೇ ಸರಿ. ಏಕೆಂದರೆ ಸುಳ್ಳುಗಳು ಕೇವಲ ಮದುವೆಗೆ ನಿಲ್ಲುವುದಿಲ್ಲ. ಸಂಸಾರ ಸಾಗಿಸುವಾಗಲೂ ಅವುಗಳ ಸಹಾಯ ದೊಡ್ಡದೇ ಇದೆ.

ಹಾಗಾಗಿ ಈ ಗಾದೆಯನ್ನ ‘ ಸಾವಿರಾರು ಸುಳ್ಳು ಹೇಳ್ತಾ ಸಂಸಾರ ಮಾಡು’ ಎಂದು ಬದಲಾಯಿಸುವುದೇ ಉತ್ತಮ ಎನಿಸುತ್ತದೆ. ಆದರೆ ಸಂಸಾರದ ಸುಳ್ಳುಗಳಿಗೂ ಮದುವೆಯ ಸಂದರ್ಭದಲ್ಲಿ ಹೇಳಲಾಗುವ ಸುಳ್ಳುಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಇನ್ನು ಈ ಅರೇಂಜ್ ಮ್ಯಾರೇಜ್ ಗಳ ಸುಳ್ಳುಗಳದ್ದು ಒಂದು‌‌ ಕತೆಯಾದರೆ ಲವ್ ಮ್ಯಾರೇಜ್ ಅಥವಾ ಲವ್ ಕಮ್ ಅರೇಂಜ್ ಮ್ಯಾರೇಜ್ ಗಳದ್ದು  ಮತ್ತೊಂದು ಕತೆ.

ನಮ್ಮ ಸಮಾಜದಲ್ಲಂತೂ ಮದುವೆಯಾಗುವುದು ಒಂದು ಗಂಡು ಮತ್ತು ಒಂದು‌ ಹೆಣ್ಣು ಮಾತ್ರವಾದರೂ ಈ ಮದುವೆ ಸಂಬಂಧ ಒಪ್ಪಿತವಾಗುವುದೆಂದರೆ ಹುಡುಗನ ಮನೆಗೂ ಹುಡುಗಿಯ ಮನೆಗೂ, ಅವನ ಅಪ್ಪನಿಗೂ ಇವಳ ಅಪ್ಪನಿಗೂ, ಅವಳ ಅಮ್ಮನಿಗೂ ಇವನ ಅಮ್ಮನಿಗೂ, ಚಿಕ್ಕಪ್ಪ, ಚಿಕ್ಕಮ್ಮ, ಅಕ್ಕ, ಭಾವ , ಮಾವ- ಹೀಗೆ ಬಹುತೇಕ ಎರಡೂ ಮನೆಗಳ ಎಲ್ಲರಿಗೂ ತಾಳೆಯಾಗಬೇಕಾದ್ದು ಅನಿವಾರ್ಯ.

ಯಾರೇ ಒಬ್ಬರು ಅಸಮ್ಮತಿ ತೋರಿದರೂ ಮದುವೆ ಸಂಬಂಧ ಕೂಡುವುದು ಅಸಾಧ್ಯ. ಹೀಗಿರುವಾಗ ಮೇಲಿನ ಎಲ್ಲರೊಂದಿಗೆ ತಾಳೆಯಾಗಬೇಕಾದಾಗ ಕೆಲವು ಸುಳ್ಳುಗಳು ಅನಿವಾರ್ಯವಾಗಿಬಿಡುತ್ತವೆ. ಅವುಗಳಲ್ಲಿ ಕೆಲವು ಮದುವೆಯಾದಮೇಲೆ ಗೊತ್ತಾದರೆ ರಂಪಾಟವಾಗುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಆದರೆ ನಮ್ಮ ಮದುವೆ ದಿನ ಒಂದು ಬೃಹತ್ ಸುಳ್ಳು ಮಂಟಪದ ಒಳಗೇ ಇತ್ತಾದರೂ  ಯಾರಿಗೂ ತಿಳಿಯದೇ ಸರಾಗವಾಗಿ ಮದುವೆ ನಡೆದಿತ್ತು .

*                 *                   *                    *

ಅದು ಏನಾಯಿತೆಂದರೆ :

ನನ್ನ ಮತ್ತು ಪ್ರೇಮಾಳ ಸ್ನೇಹ ದಶಕಗಳದ್ದೇ ಆಗಿದ್ದರೂ ಅವರ ಮನೆಯವರಿಗೆ ನಾನು ಪರಿಚಿತನೇ ಆಗಿದ್ದರೂ ಅದಕ್ಕೂ ಮುನ್ನ ಸಾಕಷ್ಟು ಬಾರಿ ಅವರ ಮನೆಗೆ ನಾನು ಹೋದಾಗ ಗೌರವಯುತವಾಗಿ ನಡೆದುಕೊಂಡಿದ್ದರೂ ನಾವಿಬ್ಬರೂ ಪ್ರೀತಿಸುವ ವಿಷಯ ಪ್ರಸ್ತಾಪವಾದಾಗ ಸಾಮಾನ್ಯವಾಗಿ ಭಾರತೀಯ ಸಮಾಜದ ಕುಟುಂಬವೊಂದು, ಅದರಲ್ಲೂ ಹೆಣ್ಣು ಹೆತ್ತವರು ಎಂಬ ವಿಶೇಷಣದಿಂದ ಕರೆಯಲ್ಪಡುವ ಕುಟುಂಬದವರು ಹೇಗೆಲ್ಲಾ ಯೋಚಿಸಬೇಕೋ ಹಾಗೆಲ್ಲಾ ಯೋಚಿಸಲು ಪ್ರೇಮಾಳ ಪೋಷಕರು ಆರಂಭಿಸಿದರು.

ಮೊದಲು ಜಾತಿಯ ಬಗ್ಗೆ ವಿಚಾರಿಸಿ ಅದರಲ್ಲಿಯ Sub-caste difference ಗೆ ಕೋಪಗೊಂಡು ಸಾಧ್ಯವೇ ಇಲ್ಲ ಎಂಬಂತೆ ತೀರ್ಮಾನಕ್ಕೆ ಬರುವವರಿದ್ದರೇನೋ ಅಷ್ಟರಲ್ಲಿ  ಅವರಿಗೆ ಯಾವ ದೇವರ ಮೇಲೆ ವಿಪರೀತ ಭಕ್ತಿಯೋ ಆ ದೇವರಲ್ಲಿಯೇ ಇವಳೂ ಹರಕೆ ಕಟ್ಟಿ, ದೇವರನ್ನು ಕಟ್ಟಿ ಹಾಕಿ ಬಿಟ್ಟಿದ್ದರಿಂದ ಆ ದೇವರು ನಮ್ಮ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟುಬಿಟ್ಟಿತ್ತು. ಹಾಗಾಗಿ ಮೊದಲ ಹಂತದ ಮೆಟ್ಟಿಲನ್ನು ದಾಟಿಯಾಗಿತ್ತು. ಆದರೆ ಸಾಮಾನ್ಯವಾಗಿ ಜಾತಿ, ಧರ್ಮಗಳ ವಿಷಯಗಳಲ್ಲೇ ಮದುವೆಗಳನ್ನು ಮುರಿಯಲು ಪ್ರಯತ್ನಿಸಿ ಅದಾಗದಿದ್ದಾಗ ‘ವರ’ನ ‘ವರಮಾನ’ದ ವಿಚಾರಕ್ಕೆ ಬರಲಾಗುತ್ತದೆ. ‘ಬರೀ ಒಳ್ಳೆಯ ಹುಡುಗ ಆದ್ರೆ ಸಾಕಾಗೋದಿಲ್ಲ. ಒಳ್ಳೆಯ ಕೆಲಸ, ಸಂಬಳ ಮುಂತಾದವುಗಳ ವಿಚಾರಣೆ ಸಾಕಾಗುತ್ತದೆ. ಸರ್ಕಾರಿ ಕೆಲಸವಿದ್ದರೆ ಈ ವಿಷ್ಯವಾಗಿ ಹೆಚ್ಚಿನ ವಿವರಗಳೇನನ್ನೂ ಕೇಳಲಾಗುತ್ತಿರಲಿಲ್ಲವೇನೋ . ಅಂಥ ಸೌಬಾಗ್ಯ ನನಗೆ ಬಂದಿತ್ತಾದರೂ …

೨೦೦೯ ಡಿಸೆಂಬರ್ ೨೦ ರ ನಂತರದ ಯಾವುದೋ‌ ಒಂದು ದಿನ …

ಶಿವಮೊಗ್ಗದ ದುರ್ಗಿಗುಡಿ ಶಾಲೆ ರಸ್ತೆಯಲ್ಲಿರುವ ನವರಂಗ್ ನಲ್ಲಿ ಕದ್ದು ಕೂತು ನಾನು ಪ್ರೇಮ ಬಹುದೊಡ್ಡ ನಿರ್ಣಯವೊಂದನ್ನು ಮಾಡಲೇಬೇಕಾಗಿತ್ತು.‌ ಅದಾಗಲೇ ನಾನು ಇನ್ಫೋಸಿಸ್ ನ ಔಟ್ ಸೋರ್ಸಿಂಗ್ ವಿಭಾಗದ ಉದ್ಯೋಗಿಯಾಗಿ ಮೂರು ವರ್ಷಗಳಾಗಿತ್ತು.‌ ಇಂಥ ಸಂದರ್ಭದಲ್ಲಿ ಯಾಕೋ ಬೆಂಗಳೂರು ಸಾಕಪ್ಪ ಅನ್ನಿಸಿ ಮತ್ತೆ ಶಿವಮೊಗ್ಗಕ್ಕೆ ಹೋಗಬೇಕೆಂಬ ಹೆಬ್ಬಯಕೆ, ನನ್ನನ್ನು ಪೋಸ್ಟಲ್ ಡಿಪಾರ್ಟ್ಮೆಂಟ್ ನ ಜಾಬ್ ಒಂದಕ್ಕೆ ಅಪ್ಲೈ ಮಾಡಿ ಪರೀಕ್ಷೆ ಬರೆಯುವಂತೆ ಮಾಡಿತ್ತು.

ಅದರ ಪರಿಣಾಮವಾಗಿ ನಾನು ಎರಡನೇ ಸ್ಥಾನ ಪಡೆದು ಆಯ್ಕೆಯೂ ಆಗಿದ್ದೆ. ಆಗ ನಾವಿಬ್ಬರೂ ತೆಗೆದಕೊಳ್ಳಬೇಕಾದ ತೀರ್ಮಾನವೇ ಅದಾಗಿತ್ತು‌. ನಾನು ಇನ್ಫೋಸಿಸ್ ನಲ್ಲೇ ಇರುವುದಾ ಅಥವಾ ಸೆಂಟ್ರಲ್ ಗೌರ್ನಮೆಂಟ್ ಕೆಲಸಕ್ಕೆ ಸೇರಿ Ready to marry ಎಂಬ ಸ್ಟೇಟಸ್ ಗಳಿಸುವುದಾ ಎಂಬುದು.

ಪ್ರೀತಿಸುವಾಗ ಎಷ್ಟೋ ಎಮೋಷನಲ್ ಆಗಿದ್ದರೂ ಅದರ ಸಾರ್ಥಕತೆಯ ವಿಷಯ ಬಂದಾಗ ಪ್ರಾಕ್ಟಿಕಲ್ ಆಗಲೇಬೇಕಾಗುತ್ತದೆ. ‘ ನಮ್ಮ ಅಪ್ಪಾಜಿಗೂ ನನ್ನನ್ನು ಗವರ್ನಮೆಂಟ್ ಜಾಬ್ ಲ್ಲಿರೋರಿಗೆ ಕೊಡಬೇಕಂತ ಇಷ್ಟ ಇದೆ. ಹಾಗಾಗಿ ನೀನು ಈ ಜಾಬ್ ಗೆ ಬಂದುಬಿಡು’ ಎಂಬ ಸಲಹೆ ಪ್ರೇಮಾಳಿಂದ ಬಂತು. ನಮ್ಮ ಮದುವೆಗೆ ಇದು ಸಹಕಾರಿಯಾಗುತ್ತದೆ ಎಂಬುದಾದರೆ ಒಳ್ಳೆಯದೇ ಜೊತೆಗೆ ನನ್ನೆಲ್ಲ ಗೆಳೆಯರು ಶಿವಮೊಗ್ಗದಲ್ಲಿ ಇದ್ದಾರೆ ಮತ್ತೆ ಅವರೊಂದಿಗೆ ರಂಗಭೂಮಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬಹುದು ಎಂಬ ಕಾರಣವೂ ಸೇರಿ ನಾನು ಒಪ್ಪಿದೆ.

ಆದರೆ ಮೂರೇ ತಿಂಗಳಲ್ಲಿ ಆ ಕೆಲಸ ನನ್ನಿಂದಾಗದು ಎಂಬ ತೀರ್ಮಾನಕ್ಕೆ ಬರಬೇಕಾಯಿತು. ಆಗ ಮತ್ತೆ ಅದೇ ನವರಂಗ್ ನಲ್ಲಿ ಜ್ಯೂಸ್ ಕುಡಿಯುತ್ತಾ ಚರ್ಚೆ. ‘ಇಲ್ಲ. ಈ ಕೆಲಸ ನನ್ನಿಂಸ ಮಾಡೋಕೆ ಆಗ್ತಾ ಇಲ್ಲ. ಬೆಳಗ್ಗೆ ಎದ್ದು ಚೆನ್ನಗಿರಿಗೆ ಬಸ್ ಹತ್ತೋಕೆ‌ ನನಗೆ ಸಂಕಟ ಆಗ್ತಿದೆ’ ಎಂದೆ ‌‌. ಆಗ ಪ್ರೇಮ ಹೇಳಿದ್ದೇನೆಂದರೆ: ‘ನಾನು ಆವತ್ತು ಹೇಳಿದ್ದು ನಿಜ. ಹಾಗಂತ ನಿನಗೆ ಇಷ್ಟವೇ ಇಲ್ಲದ ಕೆಲಸವನ್ನ ಹೇಗೆ ಮಾಡೋಕ್ ಆಗುತ್ತೆ ಬಿಟ್ಬಿಡು. ಇನ್ನು ಎಷ್ಟೋ ವರ್ಷಗಳು ನೀನು ಹೀಗೆ ಕೊರಗ್ತಾ ಇರೋಕೆ ಆಗಲ್ಲ. ಮದುವೆ ವಿಷ್ಯ ಬಂದಾಗ ನೋಡ್ಕೊಂಡ್ರಾಯ್ತು’ ಈ ಮಾತುಗಳು ಆ ಸಮಯಕ್ಕೆ ನನಗೆ ದೊಡ್ಡ ಟಾನಿಕ್ ನಂತೆ ಭಾಸವಾದವು.

ಇತ್ತ ನನ್ನ ಈ ನಿರ್ಧಾರವನ್ನು ನನ್ನ ಪೋಷಕರೂ ವಿರೋಧಿಸಲಿಲ್ಲ. ಆದರೆ ‘ ಸಿಕ್ಕ ಗೌರ್ನಮೆಂಟ್ ಕೆಲಸ ಬಿಡೋ ಮೂರ್ಖನ್ನ ನಾವೆಲ್ಲೂ ನೋಡಿಲ್ಲ ಅಂತ ಅವರ ಬಳಿ ಹೇಳಿದ ಹಿತೈಷಿಗಳಿಗೇನು ಕಡಿಮೆ ಇರಲಿಲ್ಲ. ಅವರೂ ಈಗಲೂ ಅದನ್ನೇ ಹೇಳುತ್ತಲೂ ಇರಬಹುದು. ಇದಕ್ಕೆ ಕಾರಣ ಅವರಲ್ಲು ಕೆಲವರಿಗೆ ನನ್ನ ಸರ್ಕಾರಿ ನೌಕರಿ ಮೇಲೆ ಕಣ್ಣು ಬಿದ್ದಿರಲಿಕ್ಕೂ ಸಾಕು. ಅವರ ನಿರಾಶೆಗೆ ನಾನು ಹೊಣೆಗಾರನಾಗಲು ಸಿದ್ದನಿರಲಿಲ್ಲ. ಹೀಗಾಗಿ ಮರುದಿನವೇ ನಾನು ರಾಜೀನಾಮೆ ಪತ್ರ ಬರೆದು ಜಿಲ್ಲಾ ಕಛೇರಿಗೆ ಕಳಿಸಿದೆ‌.

ಇವೆಲ್ಲವನ್ನೂ ಧೈರ್ಯದಿಂದ ಮಾಡುತ್ತಿದ್ದೆನಾದರೂ ಒಳಗಿನ ಆತಂಕ ಅಷ್ಟಿಷ್ಟಾಗಿರಲಿಲ್ಲ. ಒಂದೆಡೆ ಮುಂದೇನು ಎಂಬ ಪ್ರಶ್ನೆಯಾದರೆ ಮತ್ತೊಂದೆಡೆ ಪ್ರೀತಿ ಕಳೆದುಕೊಳ್ಳಬೇಕಾದರೆ ಎಂಬ ಭಯ. ಸರಿಯಾಗಿ ಆಗಸ್ಟ್‌ ೧೪ ರಂದು ಚೆನ್ನಗಿರಿ ಪೋಸ್ಟ್ ಆಫಿಸ್ ನಿಂದ ನನ್ನನ್ನು ರಿಲೀವ್ ಮಾಡಲಾಯಿತು. ನಿಜಕ್ಕೂ ನನ್ನ ಪಾಲಿಗೆ ಅದೊಂದು ರೀತಿಯ ಸ್ವತಂತ್ರ ದಿನಾಚರಣೆಯೇ.

ನನ್ನ ಗೆಳೆಯರಿಗೆಲ್ಲ ಆಶ್ಚರ್ಯ. ನಮಗೆ ಮಾಡಲು ಸಾಧ್ಯವಾಗುವ ಕೆಲಸ ಇವನಿಗೇಕೆ ಆಗುತ್ತಿಲ್ಲ. ಇಂಜಿನಿಯರಿಂಗ್ ಓದಿದವರೇ ನಮ್ಮ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡ್ತಿದ್ದಾರೆ. ಒಳ್ಳೆಯ ಸಂಬಳವೂ ಇದೆ. ಆದರೆ ಇವನೇಕೆ ಹೀಗೆ ಮಾಡ್ತಿದ್ದಾನೆಂಬ ಕಾಳಜಿ ಅವರದ್ದು. ಆದರೆ ನಾನು ಗಮನಿಸಿದಂತೆ “ನಾವು ಬಿಟ್ಟುಬಂದ ಊರು ಮತ್ತೆ ಹೋದಾಗ ನಮ್ಮನ್ನು ಮೊದಲಿನಂತೆಯೇ ಸ್ವಗತಿಸುವುದಿಲ್ಲ. ಅಲ್ಲಿ ನಮ್ಮ ಅಲಭ್ಯತೆಯನ್ನು ತುಂಬುವ ಅನೇಕ ವ್ಯಕ್ತಿತ್ವಗಳು ಹುಟ್ಟಿಕೊಂಡಿರುತ್ತವೆ” ಹಾಗಾಗಿಯೇ ಅನ್ನಿಸುತ್ತೆ ನನಗೆ ಶಿವಮೊಗ್ಗ ಮೊದಲಿನ ಆಪ್ತತೆ ನನಗೆ ತೋರಲಿಲ್ಲ. ನಗರಕ್ಕೆ ನಾಗರಿಕನ ನೆನಪಿನ ಹಂಗೇಕೆ ಇರಬೇಕಲ್ಲವೆ?

ಪರಿಣಾಮವಾಗಿ ಯಾವ ಊರಿನ ಸಹವಾಸ ಬೇಡವೆಂದು ಹೋಗಿದ್ದೆನೋ ಅದೇ ಊರಿಗೆ ಮತ್ತೆ ಬಸ್ ಹತ್ತಬೇಕಾಯಿತು. ಕೆಲ ತಿಂಗಳುಗಳ ಹಿಂದೆಯಷ್ಟೇ ಮದುವೆಯಾಗಿದ್ದ ಅಣ್ಣನ ಮನೆಯನ್ನು ಸೇರಿದ್ದಾಯಿತು. ಸರ್ಕಾರಿ ಕೆಲಸ ಸೇರಲು ಮಧುರೈ ನಲ್ಲಿ ಟ್ರೈನಿಂಗ್ ಗೆಂದು ಹೋಗಿ ವಾಪಾಸ್ ಬಂದಾಗ ಅಣ್ಙನ ಮನೆಗೆ ಹೋಗಿದ್ದಾಗ ಸಿಕ್ಕಂಥ ಪ್ರತಿಕ್ರಿಯೆಗೂ ಈಗಿನದಕ್ಕೂ ವ್ಯತ್ಯಾಸವಿತ್ತು. ಆದರೆ ಮೇಲ್ನೋಟಕ್ಕೆ ಎಲ್ಲರೂ ನನ್ನ ನಿರ್ಧಾರವನ್ನು ಬೆಂಬಲಿಸುವಂತೆಯೂ, ನನ್ನಲ್ಲಿ ಅದೇನೋ ಪ್ರತಿಭೆಯಿದೆ ಏನಾದರೂ ಮಾಡುತ್ತೇನೆ ಎಂಬ ನಂಬಿಕೆ ಇರುವಂತೆಯೂ ನಟಿಸಿದರು . ನನಗೂ ಅದೇ ಬೇಕಿತ್ತು. ಮರುದಿನವೇ ಮತ್ತೆ ಕಂಪೆನಿಗಳ ಕಡೆ ಹೊರಟೆ. ಅದಾಗಲೇ ಈ ಫೀಲ್ಡ್ ಪರಿಚಿತವಾದ್ದರಿಂದ ಶಿವಮೊಗ್ಗದಲ್ಲಿರುವಾಗಲೇ ಸಂದರ್ಶನದ ವಿವರಗಳನ್ನು ಕಲೆ ಹಾಕಿದ್ದೆ. ಜಯದೇವ ಹಾಸ್ಪಿಟಲ್ ಎದುರು ಇರುವ ಕನ್ವರ್ಜಿಸ್ ಕಂಪನಿಗೆ ಇಂಟರ್ ವ್ಯೂ ಗೆ ಹೋದೆ. ಅಲ್ಲಿರುವ ಇಂಟರವ್ಯೂ ರೌಂಡ್ ಗಳನ್ನೆಲ್ಲ ಮುಗಿಸಿ ಸೆಲೆಕ್ಟ್ ಕೂಡ ಆದೆ. ಆ ಎಚ್ ಆರ್ ಬಂದು ಫೈನಲ್ ರೌಂಡ್ ಗೆ ಕರೆದಾಗ ಆದ ಖುಷಿ ಅಷ್ಟಿಷ್ಟಲ್ಲ.

ಹೇಗೂ ಕೆಲಸ ಸಿಕ್ಕ ಖುಷಿಯಲ್ಲಿ ಆರೇಳು ತಿಂಗಳು ಕಳೆದಿತ್ತೇನೋ ಅಷ್ಟರಲ್ಲಿ ಒಂದು ಸಂಜೆ ಪ್ರೇಮಾಳ ಮನೆಯಲ್ಲಿ ಅನಿವಾರ್ಯವಾಗಿ ನಮ್ಮ ಪ್ರೀತಿಯ ವಿಷಯ  ಬಹಿರಂಗವಾಗಿದೆ. ಆಗ ಈ ಪ್ರಾಥಮಿಕ ತನಿಖೆಗಳೆಲ್ಲ ನಡೆದು ಮದುವೆಗೆ ಒಪ್ಪಿಕೊಂಡಾದಮೇಲೆ ನಾನು ಸೆಂಟ್ರಲ್ ಗವರ್ನಮೆಂಟ್ ಜಾಬ್ ಬಿಟ್ಟು ಬಂದಿದ್ದೇ ನನ್ನ ದೊಡ್ಡ ಕ್ವಾಲಿಫಿಕೇಶನ್ ಏನೋ ಎಂಬಂತೆಯೂ ಮಾತಾಡಿಕೊಂಡವರಿದ್ದಾರೆ. ಸಣ್ಣಪುಟ್ಟ ಅಡೆತಡೆಗಳ ನಿವಾರಣೆಯಾಗಿ ಮದುವೆ ದಿನಾಂಕವೂ ಗೊತ್ತಾಯಿತು.

ಇತ್ತ ನನಗೆ ಈ ಬಿಪಿಓ ಕೆಲಸದಲ್ಲಿ ನಿಜಕ್ಕೂ ಆಸಕ್ತಿ ಇತ್ತೆ ಎಂದರೆ ಖಂಡಿತಾ ಇಲ್ಲ. ಐದು ದಿನ ಕೆಲಸ ಮಾಡುವ, ಕ್ಯಾಬ್ ಫೆಸಿಲಿಟಿ ಇರುವ, ಡಿಜೆ, ಟೀಮ್ ಔಟಿಂಗ್, ಪಾರ್ಟಿ ಮುಂತಾದ ಸವಲತ್ತುಗಳಿರುವ ಯಾವುದೇ ಗ್ಲಾಸ್ ಬಿಲ್ಡಿಂಗ್ ಗಳಲ್ಲಿ ಕೆಲಸ ನಿರ್ವಹಿಸುವವರನ್ನು IT Employees ಎಂದು ಸುಲಭವಾಗಿ ನಂಬಲಾಗುವುದರಿಂದ ನಾನೂ ಕೂಡ ಅದೇ ಮೂಢನಂಬಿಕೆಯಲ್ಲಿ ತೇಲಾಡುತ್ತಿದ್ದೆ. ಆದರೆ working amenities ನಿಂದಾಗಿ ಮಾತ್ರ ನಮ್ಮ ಕೆಲಸ ನಮ್ಮನ್ನು ಒಲಿಯುವುದಿಲ್ಲ. ಮೈಕ್ರೋಸಾಫ್ಟ್ ವಿಂಡೋಸ್ ಗೆ ಸಪೋರ್ಟ್ ಟೀಮ್ ಆಗಿ ಕೆಲಸ ಮಾಡುತ್ತಿದ್ದ ನನ್ನ ಕೆಲಸ ಎಷ್ಟು ಮನೋಟನಸ್ ಮತ್ತು ಬೋರಿಂಗ್ ಇತ್ತೆಂದರೆ ನಾನು ಅದರಲ್ಲಿ ಅನೇಕ ತಪ್ಪುಗಳನ್ನು ಮಾಡತೊಡಗಿದೆ. ಕ್ಲೈಂಟ್ ಕಡೆಯಿಂದ ನಾನು ಮಾಡಿದ್ದ ಎರರ್ ಗಳ ಬಗ್ಗೆ ಕಂಪ್ಲೇಂಟ್ ಬಂತು. It was just a warning.

ಇತ್ತ ಮದುವೆ ದಿನವೂ ಹತ್ತಿರ ಬಂದವೆಂಬ ಕಾರಣಕ್ಕೆ ನಾನೂ ಇನ್ನೂ ಟೆನ್ಷನ್ ಆಗುತ್ತಿದ್ದೆ. ಏನಿಲ್ಲವೆಂದರೂ ಒಂದು ತಿಂಗಳು ರಜೆ ಬೇಕಿತ್ತು . ಆ ದಿನ ರಜೆಯ ಬಗ್ಗೆ ಟೀಮ್ ಲೀಡರ್ ಪ್ಲೆನಾ ಸಾಂಕಿಲ್ ಬಳಿ ಮಾತನಾಡಬೇಕೆಂದು ನಿರ್ಧರಿಸಿ ಆಫೀಸಿಗೆ ಹೋದೆ. ‘ I am sorry to say this Shivkumar, but you will be terminated as you have committed a Noncompliance error even after the warning ‘ ಎಂದಳು ಪ್ಲೆನಾ. ಇದನ್ನು ಮತ್ತೊಂದು ಸ್ವಾತಂತ್ರೋತ್ಸವ ಎಂದು ಸಂಭ್ರಮಿಸುವ ಸ್ಥಿತಿ ನನ್ನದಾಗಿರಲಿಲ್ಲ. ಪಾರ್ಕಿಂಗ್ ಲಾಟ್ ಗೆ ಬಂದು ಪ್ರೇಮಾ ಗೆ ಕಾಲ್ ಮಾಡಿದೆ. ‘ಲೀವ್ ಸ್ಯಾಂಕ್ಷನ್ ಆಯ್ತಾ ?’ ಎಂದಳು ಪ್ರೇಮ. ‘ಹು ಪರ್ಮನೆಂಟ್ ಲೀವ್ ಸ್ಯಾಂಕ್ಷನ್ ಆಯ್ತು ಮದ್ವೆಗೆ ಅಂತಾನೆ’ ಎಂದು ಆ ಆಘಾತಕಾರಿ ವಿಷಯ ತಿಳಿಸಿದೆ.

ಕೊಂಚ ವಿಚಲಿತಳಾದರೂ, ಆತಂಕದಲ್ಲೇ ನನ್ನನ್ನು ಸಮಾಧಾನಪಡಿಸಿ ಮದುವೆಗೆಂದು ಅವಳು ಕೊಂಡ ಕೆಲವು ವಸ್ತುಗಳ ಬಗ್ಗೆ ಹೇಳಿದಳು. ನಿಜಕ್ಕೂ ಆಶ್ಚರ್ಯ ಪಟ್ಟೆ. ನನಗೆ ಕೆಲಸ ಇಲ್ಲ , ಕೆಲಸದಿಂದ Terminate ಮಾಡ್ತೀವಿ ಅಂತಿದಾರೆ ಅಂದಾಗಲೂ  ಗೊಂದಲಕ್ಕೊಳಗಾಗದೆ ಮದುವೆಯ ತಯಾರಿಯ ಬಗ್ಗೆ ಅವಳು ಮಾತಾಡಿದ್ದನ್ನು ನೋಡಿ ನನಗೆ ಯಾವ ಕಷ್ಟವೂ ಇಲ್ಲವೇನೋ ಎಂಬಂತೆ‌ ನೇರವಾಗಿ ಪ್ಲೆನಾ ಬಳಿ ಹೋಗಿ ‘ I am ready to quit’ ಎಂದೆ. ‘ You have two options Shivkumar. If you quit on your own immediately, it will not be a termination, otherwise they will have to force you to quit ‘ ಎಂದಳು. ಇದರಿಂದ ಟರ್ಮಿನೇಟೆಡ್ ಎಂಬ ಕಳಂಕ ಬರುವುದಾದರೂ ತಪ್ಪುತ್ತದೆಂದು ತಕ್ಷಣ ಕೆಲಸ ಬಿಡುತ್ತೇನೆಂದು ಒಪ್ಪಿಕೊಂಡೆ.

ಮನೆಯವರಿಗೆಲ್ಲ ಮದುವೆ ಕೆಲಸಗಳಿಗಾಗಿ ಒಂದು ತಿಂಗಳು ರಜೆ ಹಾಕಿರುವುದಾಗಿ ಹೇಳಿ ಹೊರಟೆ. ಆ ಬಾರಿ ಶಿವಮೊಗ್ಗೆಯ ಪ್ರಯಾಣ ತುಂಬಾ ದುಸ್ತರವೆನಿಸಿತ್ತು. ಮದುವೆಗೆ ಹೊರಟೆನೆಂದು ಖುಷಿ ಪಡುವುದೋ, ಮದುವೆಯ ಸಮಯದಲ್ಲಿ ಕೆಲಸವಿಲ್ಲದಾಯಿತಲ್ಲ ಎಂದು ದುಃಖ ಪಡುವುದೋ ತಿಳಿಯಲಿಲ್ಲ. ಆದರೆ ಪ್ರೇಮಳಿಗಿದ್ದ ಖುಷಿ ನನಗೂ ವರ್ಗಾವಣೆಯಾಯಿತು. ಈ ವಿಷಯವನ್ನು ನೀನು ಯಾರಿಗೂ ಹೇಳಬಾರದೆಂಬ ಮಾತನ್ನೇನು ನಾನು ಅವಳಿಗೆ ಹೇಳಿರಲಿಲ್ಲ. ಆದರೆ ಮದುವೆ ದಿನ ಅಲ್ಲಲ್ಲಿ ಹುಡುಗ ಏನ್ ಮಾಡ್ತಾನೆ ಎಂಬ ಪ್ರಶ್ನೆಗೆ ಅತ್ತೆ , ಮಾವ ಮತ್ತವರ ಕಡೆಯವರು ನನ್ನ ಗ್ಲಾಸ್ ಬಿಲ್ಡಿಂಗ್ ಕೆಲಸವನ್ನು ಅವರವರು ಗ್ರಹಿಸದ ಹಾಗೆ ಹೇಳುತ್ತಿದ್ದದು ಕಿವಿಗೆ ಬೀಳುತ್ತಿತ್ತು .

ಏನೋ ಅಪರಾಧ ಭಾವ ಕಾಡುತ್ತಿತ್ತು. ಆದರೆ ಪ್ರೇಮಾಳ ಮುಖ ನೋಡಿದಂತೆಲ್ಲ ನಾನೇನೂ ತಪ್ಪು ಮಾಡಿಲ್ಲ ಎಂದೆನ್ನಿಸುತ್ತಿತ್ತು. True , I was jobless on the day of my marriage. And what still intrigues me is, SHE didn’t even bothered about it in the least. ಅದನ್ನ ಪ್ರೀತಿಯಲ್ಲದೆ ಮತ್ಯಾವ ಹೆಸರಿನಿಂದ ಕರೆಯಲೂ ನನ್ನಿಂದ ಸಾಧ್ಯವಾಗುತ್ತಿಲ್ಲ. ನನ್ನ ದುಡುಕು, ಸಿಡುಕುಗಳಿಂದ ಎಷ್ಟೋ ವರ್ಷಗಳವರೆಗೆ ನಮ್ಮ ಪ್ರೀತಿಯನ್ನು ಕಾಪಿಟ್ಟುಕೊಂಡವಳು ಮದುವೆ ಮಂಟಪದಲ್ಲಿ ಹೇಗೆ ಬಿಟ್ಟಾಳು ಅಲ್ಲವೆ?  She made me win though I had lost.

ಒಂದು ತಿಂಗಳ ನಂತರ ಬೆಂಗಳೂರಿಗೆ ಬಂದು ಮೊದಲ ದಿನವೇ ನಾನು Ocween ಎಂಬ ಕಂಪನಿಯಲ್ಲಿ ಕೆಲಸಕ್ಕೆ ಸೇರಿದೆ. ಇದೂ ಕೂಡ ನನ್ನಿಷ್ಟದ ಕೆಲಸವಾಗಿರಲಿಲ್ಲ. ಅದರೆ ಕೆಲಸ ಅನಿವಾರ್ಯವಾಗಿತ್ತು.‌ ನನ್ನ ಇಬ್ಬಂದಿತನವನ್ನು ಗಮನಿಸಿದ ಆಕೆ ನನಗೆ ಉಪನ್ಯಾಸಕನಾಗಬೇಕೆಂಬ ಹಂಬಲವಿರುವುದನ್ನು ತಿಳಿದು ಪ್ರತಿ ಶನಿವಾರ ಕಾಲೇಜುಗಳಿಗೆ ರೆಸ್ಯೂಮ್ ಕೊಡಲು ಕರೆದೊಯ್ಯುತ್ತಿದ್ದಳು. ಹಾಗೆ ಹೋದಾಗಲೇ ನಾನು ಸಿಜಿ ಜೋಸೆಫ್ ಅವರ ರೆಫೆರೆನ್ಸ್ ನಿಂದಾಗಿ ಆರ್ ಎನ್ ಎಸ್ ಕಾಲೇಜಿಗೆ ಉಪನ್ಯಾಸಕನಾಗಿ ಸೇರಿಕೊಂಡೆ. ಕಳೆದ ಏಳು ವರ್ಷಗಳಿಂದ ಈ ವೃತ್ತಿಯನ್ನು ತುಂಬಾ ಖುಷಿಯಿಂದ ಮಾಡುತ್ತಿದ್ದೇನೆ. ಸಾಕಷ್ಟು ಕಲಿತಿದ್ದೇನೆ. ಅನೇಕ ಹೊಸ ಸ್ನೇಹಿತರನ್ನು ಗಳಿಸಿದ್ದೇನೆ. ನನ್ನಿಷ್ಟದ ಎಲ್ಲ ಕ್ಷೇತ್ರಗಳ ಅವಕಾಶಗಳನ್ನು ಶೋಧಿಸಿ ಮಾಡುತ್ತಿದ್ದೇನೆ. ಯಾವತ್ತೂ ಈ ಕೆಲಸಗಳು ಸ್ಟ್ರೆಸ್ ಅನ್ನಿಸಿಲ್ಲ. ದುಡಿಮೆ ಕೊಡುವ ಸುಖವೇ ಅಂತಹದ್ದು.

ಆದರೆ …

ಹಾಗೆ ಮದುವೆ ಮಂಟಪದಲ್ಲಿ ತನ್ನವನನ್ನು ಸಂಪೂರ್ಣವಾಗಿ ನಂಬಿ ಬಂದ ಹುಡುಗಿಗೆ ಅವಳ ಮನೋಭಿಲಾಷೆಯನ್ನು ಪೂರ್ಣಗೊಳಿಸಿದ್ದೇನೋ ಇಲ್ಲವೋ ಎಂಬ ಅಳುಕು ಆಗಾಗ ಕಾಡುತ್ತಲೇ ಇರುತ್ತದೆ. ಪ್ರೀತಿಯ ದಿನಗಳೇ ಬೇರೆ …ಈ ದಿನಗಳೇ ಬೇರೆ… ಜೊತೆಯಲ್ಲಿ ವಾಸಿಸುವಾಗ ಮನುಷ್ಯನ ಬೇಕು ಬೇಡಗಳ ಪರಿಚಯ ಚೆನ್ನಾಗಿ ಆಗುತ್ತದೆ. ಅಲ್ಲದೆ ಆಸೆಗಳು ಹುಟ್ಟುವುದೇ ಮನುಷ್ಯನನ್ನು ಸ್ಪರ್ಧೆಯತ್ತ ಕೊಂಡೊಯ್ಯಲು. ಸ್ಪರ್ಧೆಯಿಂದ ಮಾತ್ರ ಆತ ಮತ್ತೇನನ್ನೋ ಮಾಡಬಲ್ಲ ನಿಜ. ಆದರೆ ಯಾರನ್ನ ಯಾರೊಂದಿಗೆ ಸ್ಪರ್ಧೆಗಿಳಿಸುತ್ತೇವೆ ಎಂಬುದು ಮುಖ್ಯ ಅಷ್ಟೇ. ಏಕೆಂದರೆ ಮನುಷ್ಯ ಪ್ರೀತಿಯಿಲ್ಲದಿದ್ದರೂ ಬದುಕಬಲ್ಲನೇನೋ ಆದರೆ ‘ ಸಹಿಷ್ಣುತೆ’ ಇಲ್ಲದಿದ್ದರೆ ಬದುಕು ಕಠಿಣ. ಇದು ಎಲ್ಲ ವೈಯಕ್ತಿಕ ಸಂಬಂಧಗಳು ಮತ್ತು ಸಾರ್ವಜನಿಕ ಬದುಕಿಗೂ ಅನ್ವಯಿಸುವ ಸತ್ಯ. ಪ್ರೀತಿಯಿಲ್ಲದಿದ್ದರೂ ಜಗತ್ತು ನಡೆದೀತು.‌ಆದರೆ ಸಹಿಷ್ಣುತೆ ( Tolerance) ಮಾತ್ರ ಕಡ್ಡಾಯವಾಗಿ ಬೇಕೇ ಬೇಕು.

*            *               *                *                 *
ಪ್ರೀತಿಯ ಸಲುವಾಗಿ ಅವಳ್ಯಾವ ದೇವರಿಗೆ ಹರಕೆ ಕಟ್ಟಿದ್ದಳೋ ಅದೇ ದೇವಸ್ಥಾನಕ್ಕೆ ಇತ್ತೀಚಿಗೆ ಅವಳೊಂದಿಗೆ ಹೋಗಿದ್ದಾಗ ಯಾರೋ ಮಾತನಾಡುವ ದೇವರ ಬಳಿ ‘ನನ್ನ ತಂಗಿಗೆ ಮದುವೆ ಫಿಕ್ಸ್ ಆಗಿದೆ. ಹುಡುಗ ಪ್ರೈವೇಟ್ ಕಾಲೇಜ್ ಲೆಕ್ಚರರ್ . ಇವ್ರು ಮುಂದೆ ಸುಖವಾಗಿ ಇರ್ತಾರಾ ? ‘ ಎಂಬ ಪ್ರಶ್ನೆ ಕೇಳಿದರು. ಆಗ ನನ್ನನ್ನು ನೋಡಿ ಕಿರುನಗೆ ಬೀರಿದ್ದ ಪ್ರೇಮ ‘ಜನ ಎಷ್ಟೆಲ್ಲಾ ಕ್ಯಾಲ್ಕುಲೇಟೆಡ್ ಆಗಿ ಇರ್ತಾರಲ್ಲ. ನಮಗೆ ಅದೆಲ್ಲಾ ಯೋಚನೆನೆ ಬರಲ್ವಲ್ಲ ‘ ಅಂದಳು. ಮದುವೆ ಮಂಟಪದ ಪ್ರೇಮ ಬದಲಾಗಿಲ್ಲ ಇನ್ನೂ ಅಂದುಕೊಂಡೆ.

ಅವತ್ತು ಅವಳಿಗೆ ಆ ಪ್ರಶ್ನೆಗೆ ನಾನು ಉತ್ತರಿಸಿರಲಿಲ್ಲ. ಒಂದು ವೇಳೆ ಈಗ ಕೇಳಿದರೆ ಇಷ್ಟು ಹೇಳಬಲ್ಲೆ ;

“ಯಾವಾಗ ಮನುಷ್ಯರಿಗೆ, ಮನುಷ್ಯರ ಮೇಲಿನ ಪ್ರೀತಿ ಅಥವಾ ಆಸೆ ಕುಂಠಿತವಾಗಿ ವಸ್ತುಗಳ ಮೇಲೆ ಪ್ರೀತಿ ಅಥವಾ ವ್ಯಾಮೋಹ ಹೆಚ್ಚಾಗುತ್ತದೆಯೋ  ಆಗ,  ತಮ್ಮದೇ ಮನುಷ್ಯರು ಕೇವಲ ಆ ವಸ್ತುಗಳನ್ನು ಪೂರೈಸಿಕೊಡುವ ಕಚ್ಚಾ ವಸ್ತುಗಳಂತೆ( Raw Materials) ಕಾಣಿಸತೊಡಗುತ್ತಾರೆ. ಕಚ್ಚಾವಸ್ತುಗಳನ್ನು ಮಾರಿ-ಕೊಳ್ಳಬಹುದಲ್ಲದೆ ಅವುಗಳ ಜೊತೆಯಲ್ಲಿ ಜೀವಿಸಲಾಗುವುದಿಲ್ಲ”

Will you be my valentine?  ಎಂದು ಕೇಳಿದ ಯಾರೊಬ್ಬರಿಗೂ Please continue to remain as my valentine ಎಂದು ಅಂಗಲಾಚುವ ದಯನೀಯ ಸ್ಥಿತಿ ಬಾರದಿರಲಿ. ಪ್ರೀತಿ ಗೆಲ್ಲುತ್ತಲೇ ಇರಲಿ… ಪ್ರೀತಿಯನ್ನು ಪ್ರದರ್ಶಿಸುವ ಸರಕುಗಳು ಮಾತ್ರ ಗೆಲ್ಲದಿರಲಿ…

4 comments

Leave a Reply