ನಿನ್ನದೇ ಪಾದಗಳು..

ನಾಗರಾಜ ಹರಪನಹಳ್ಳಿ 

ಬರೀ ನೆನಪುಗಳು
ಹಾದಿ ಉದ್ದಕ್ಕೂ ಪಿಸುಮಾತುಗಳು
ಜನ ಜಂಗುಳಿಯಲ್ಲೂ ಎದೆಗೆ ಬಿದ್ದ ಒಲವು
ಪಲ್ಲವಿಸುತ್ತಲೇ ಇದೆ
ಹಕ್ಕಿಕೊರಳ ಹಾಡಾಗಿ
ಅದಕ್ಕೆ ಇರಬೇಕು
ಕವಿತೆಯ ತುಂಬಾ ನಿನ್ನವೇ ಮಾತು

ದೂರ ಹೋಗಿರಬಹುದು
ಮರೆತೋ ಮರೆಯದೆಯೋ
ನೆನಪಿಸಿಕೊಳ್ಳುತ್ತಿರಬಹುದು
ವಿರಹದಲ್ಲೂ ಪ್ರೇಮದ ತರಂಗಗಳನ್ನ
ಅದಕ್ಕೆ ಇರಬೇಕು
ಕವಿತೆಯ ತುಂಬಾ ನಿನ್ನದೇ ಬಿಸಿಯುಸಿರು


ಕಡಲದಂಡೆಗೂ ನಿನ್ನದೇ ನೆನಪು
ಚೆಲ್ಲಿದ ಒಲವು ಕಪ್ಪೆಚಿಪ್ಪಿನಲ್ಲಿ ಅಡಗಿದೆ
ದಂಡೆಯಲ್ಲಿ ಬಿತ್ತಿದ ಕನಸು
ಯಾರದೋ ಮನೆಯ ಕಪಾಟು ಅಲಂಕರಿಸಿ ನಗುತಿದೆ
ಅದಕೆ ಇರಬೇಕು
ಕವಿತೆಯ ತುಂಬಾ ನಿನ್ನದೇ ಪಾದಗಳು

ಒಲವು ಮತ್ತೆ ಸಿಗಬಹುದೆಂದು
ಹುಡುಕುತ್ತಲೇ ಇದ್ದೇನೆ
ದಂಡೆಯಲ್ಲಿ ಆಕಾಶದಿ ನಗುವ ಚೆಂದಿರನಲ್ಲಿ
ಕನಸುಗಳ ತುಟಿಗಂಟಿಸಿಕೊಂಡು
ಎದೆಯ ತುಂಬಾ ಹೂಗಳನ್ನು ಹಿಡಿದು
ಕಾಯುತ್ತಿದ್ದೇನೆ…
ಅದಕೆ ಇರಬೇಕು…
ಕವಿತೆಯ ತುಂಬಾ ನಿನ್ನವೇ ಕನವರಿಕೆಗಳು

Leave a Reply