ಹಾಳಾದವನ ಹೆಸರು ಗೀಚಿ ಹೋಗಿದ್ದಾಳೆ..

ಹೆಸರು
ರೇಣುಕಾ ರಮಾನಂದ / ಅಂಕೋಲ

ಯಾರೂ ಕಾಣದ ಹೊತ್ತಿನಲ್ಲಿ
ಅವಳು
ತನ್ನ ಅಂಗೈ ಮೇಲೆ
ಹಳೆಯ ನೋಟ್‌ಪುಸ್ತಕದ
ಬಾಕಿ ಪುಟಗಳ ಮೇಲೆ
ಅವನ ಹೆಸರು ಬರೆಯುತ್ತಾಳೆ
ಅಕ್ಕಪಕ್ಕ ಒಂದೆರಡು ಹೂವು ಬಳ್ಳಿ
ಇತ್ಯಾದಿಯೆಲ್ಲ ಬಿಡಿಸಿ
ಅದನ್ನು ಅಲಂಕರಿಸಿ ನೋಡುತ್ತಾಳೆ

ದಿನಸಿ ಅಂಗಡಿಯ ಚೀಟಿ
ಬಸ್ಸಿನ ಟಿಕೇಟು
ವೈಕುಂಠ ಸಮಾರಾಧನೆಯ ಆಮಂತ್ರಣದ ಬೆನ್ನು
ಸ್ಯಾನಿಟರಿ ನ್ಯಾಪ್ಕಿನ್ನಿನಿಂದ
ಅಂಟು ಕಳೆದುಕೊಂಡು
ಕೆಳಗೆ ಬಿದ್ದ ಹಾಳೆ ಎಲ್ಲದರ
ಮೇಲೂ ಹೀಗೆಯೇ

ಯಾರೂ ಏಳದ ಮುಂಜಾವಿನಲ್ಲಿ
ಉಪ್ಪು ಹಾಕಿದ ಹಿಟ್ಟು ತಿರುವಿ
ಕಾದ ಕಾವಲಿಯ ಮೇಲೆ
ಸದ್ದು ಮಾಡುತ್ತ ಹೊಯ್ಯುತ್ತಾಳೆ
ಮೊಟ್ಟ ಮೊದಲಿಗೆ ಅವನದೇ ಹೆಸರಿನ ದೋಸೆ
ಕೆಂಪಗೆ ಗರಿಗರಿ ಬೆಂದ ಮೇಲೆ
ಮೆಲ್ಲುತ್ತಾಳೆ ನಿಧಾನವಾಗಿ
ತುಟಿಗೊತ್ತಿ
ಒಂದೊಂದೇ ಅಕ್ಷರಮಾಲೆ

ಮಾರ್ಕೆಟ್ಟಿನ ಹಾದಿಯ ಗ್ಯಾರೇಜಿನಲ್ಲಿ
ಧೂಳು ತುಂಬಿದ ಹಳೆಯ ಟ್ರಕ್ಕುಗಳು
ಬಾಗಿಲು ಹಿಸಿದ ಕಾರುಗಳು
ತಟ್ಟು ಫೋರ್ ನಾಟ್ ಸೆವೆನ್‌ಗಳು
ಅವಳ ಕಾಲು ಸುತ್ತುತ್ತವೆ
ರಾತ್ರಿ ನಿದ್ರೆ ಬೀಳುವುದೇ ತಡ ಕನಸಿಗೆ ಬಂದು
ಬಾ ಇಲ್ಲಿ ಬರೆದು ಹೋಗು ನಿನ್ನವನ
ಹೆಸರು ಎಂದು ಗೋಳು ಹೊಯ್ಯುತ್ತವೆ

ಹಿತ್ತಲ ಕದ ಮುಂದುಮಾಡಿ ಕೊಡಪಾನ ಹಿಡಿದು
ನಾಚಿಕೆಮುಳ್ಳು ತುಂಬಿದ ಕಾಲುದಾರಿಯಲ್ಲಿ
ಹತ್ತು ಮಾರು ನಡೆದರೆ
ಒಂದು ಸೀಯಾಳದ ನೀರಿನ ಬಾವಿ
ಕಟ್ಟೆ ತುಂಬ ಅವನದ್ದೇ ಹೆಸರು
ಶೆಟ್ಟರಂಗಡಿಯ ಬಣ್ಣದ ಖಡುವಿನ ತುಂಡುಗಳು
ನೇರ ಬಾವಿ ಜಗಲಿಗೆ

ಕಾಮತರ ಅಂಗಡಿಯಲ್ಲಿ ಇವನು
ಬಟಾಟೆ ವಡೆ ಮುರಿಯುತ್ತ
ಸಿಂಗಲ್ ಚಹಾಕ್ಕೆ ತುಟಿಯಿಟ್ಟಾಗ
ನೋಡು ನಿನ್ನ ಹೆಂಡತಿ
ಕವುಚಿಟ್ಟ ತೋಪಿನ ಮಸಿಯ ಮೇಲೆ
ಹಾಳಾದವನ ಹೆಸರು
ಗೀಚಿ ಹೋಗಿದ್ದಾಳೆ
“ಹೋಗುವ ಕಾಲ ಬಂದಿದೆ ಅವಳಿಗೆ
ಉಪವಾಸ ಹಾಕು ಬುದ್ದಿ ಬರುತ್ತದೆ”
ಟೇಬಲ್ ಒರೆಸುವ ಈ ತಲೆಮಾರಿನ ಹುಡುಗರು
ನೇರಾನೇರ ಉಗಿಯುತ್ತಾರೆ
ಮತ್ತೆ ಒಳಗೆ ಹೋಗಿ ಬೇಡದಿದ್ದರೂ
ಕಿಸಿಕಿಸಿ ನಗುತ್ತಾರೆ

ಏನಾದರಾಗಲಿ ಇಂದು ಚಂಡಿಕೆ ಕೊಯ್ದು ನಾಲ್ಕು
ಇಕ್ಕದೇ ಬಿಡುವವನಲ್ಲ ಹೂಂಕರಿಸುತ್ತ
ಸರಿರಾತ್ರಿ ಅದೆಷ್ಟೋ ಹೊತ್ತಿಗೆ
ಅಗುಳಿಹಾಕದ ಕದ ದೂಡಿ
ಬಂದವನಿಗೆ ಕೆಂಡಕ್ಕೆ ಗಾಳಿ ಹಾಕುತ್ತ
ತನಗಾಗಿ ಬಂಗುಡೆ ಸಾರು ಬಿಸಿಯಾಗಿರುವಂತೆ
ಇದುವರೆಗೂ ನೋಡಿಕೊಂಡು
ಉಣ್ಣದೇ ಕುಳಿತಿರುವ ಅವಳ
ಕುರಿತಾಗಿ ಪಾಪ ಅನ್ನಿಸುತ್ತದೆ
‘ರಂಡೆ ಎಷ್ಟು ಬಾರಿ ಮಲಗಿದ್ದಿ ಅವನೊಂದಿಗೆ’
ಎಂದೆಲ್ಲ ಚುಚ್ಚಿ ಹಾದರದ ಮಾತಾಡಬೇಕು
ಅಂದುಕೊಂಡಿದ್ದವನಿಗೆ
ತಾನೀಗ ಎಲ್ಲಿಂದ ಬಂದದ್ದು ಎಂಬುದು ನೆನಪಾಗಿ
ಬಾಯಿ ಕಟ್ಟಿಹೋಗುತ್ತದೆ

ಹೆಸರು ಹಾಗೇ ಉಳಿದು
ಅಂಗಳದ ಜೀವಂತ ದಾಸಾಳವಾಗುತ್ತದೆ

ಶಾಲ್ಮಲೆಯ ತಟದ ಅಂಬಿಗನ ಕೂ…….
ದನಿಯಾಗುತ್ತದೆ..

14 comments

  • ವಿದ್ಯಾ ಪುಟ್ಟೀ.ಥ್ಯಾಂಕ್ಯೂ

 1. ವಾಹ್! ಕವನ ಸೊಗಸಾಗಿದೆ. ರೇಣುಕಾ , ಆ ತಟ್ಟು‌‌ ಫೋರ್ ನಾಟ್ ಸೆವೆನ್ಗಳು ಅಂದರೆ ಏನು?

  • ಅಕ್ಕಾ..407 ಅನ್ನೋದು ಗಾಡಿ ಅಂದ್ರೆ ಮೆಟಡೋರ್ ಹೆಸರು…ಸಾಮಾನ್ಯ 108 ಮಾದರಿಯಲ್ಲಿರ್ತವೆ. ನಮ್ ಕಡೆ ಮೀನು ತುಂಬಿ ಬೇರೆ ಕಡೆ ಒಯ್ಯಲು ಹೆಚ್ಚು ಬಳಸ್ತಾರೆ..ಆದರೂ ಈಗ ಬಳಕೆ ಕಡಿಮೆಯಾಗಿದೆ..ಈಗವು ಗ್ಯಾರೇಜಿನಲ್ಲಿ..

 2. ವಾವ್ಹ್ ಕವಿತೆ….
  ಕಥನ ಕವನ ಮಾದರಿ ಈ ಕವಿತೆ ಪ್ರೇಮದ ನೆನಪುಗಳನ್ನು ಅತ್ಯಂತ ಉಲ್ಲಾಸದಿಂದ, ಉತ್ಸಾಹದಿಂದ ದಾಖಲಿಸಿದರೂ, ಅಲ್ಲೊಂದು ನನಸಾಗದ ನಿತ್ಯ ವಿರಹದ ನೋವಿದೆ. ಜೀವನ ಸಂಗಾತಿಯಾದವನ ಕೋಪವನ್ನು ತಣಿಸುವ ಮುಗ್ಧತೆಯೂ ಇದೆ. ನಿಯತ್ತು ಇದೆ. ಕವಿತೆ ವಿಸ್ತರಿಸುವ , ವಿಸ್ತರಿಸುತ್ತಾ ಕಟ್ಟುವ ಶೈಲಿ ರೇಣುಕಾ ಅವರಿಗೆ ಒಲಿದಿದೆ. ಕಾವ್ಯ ಪ್ರೇಮಿಯಾದ ಅವರು ಕನ್ನಡದ ಕಾವ್ಯದ ಪ್ರೇಮ ಪರಂಪರೆಯನ್ನು ಹಿಡಿದಿದ್ದಾರೆ. ಹೆಣ್ಣಿನ ಅಂತರಂಗದ ಅಭಿವ್ಯಕ್ತಿ ರೇಣುಕಾ ಅವರಲ್ಲಿ ಸಶಕ್ತವಾಗಿದೆ…..
  ಕವಿತೆಯಲ್ಲಿ ಕವಯತ್ರಿಯ ಗೆಲುವು ಸಹ ಇದೆ..

 3. ಓದಿಸಿಕೊಂಡು ಹೋಗುವ ಪದ್ಯ.ಮಧ್ಯದಲ್ಲಿ ಅವಲ ಮೇಲೆ ಅನುಮಾನ ಬಂದಂತೆ ಅನಿಸಿದರೂ, ಅಂತ್ಯದಲ್ಲಿ ಎಲ್ಲವೂ ಅನಾವರಣ.ನೆನಪುಗಳೆಂದೂ ಸಾಯವು.ನೆನಪುಗಳೊಂದಿಗೆ ಈಗಿನ ಜೀವನ ಹಾಳು ಮಾಡಿಕೊಳ್ಳದೇ, ಹೇಗಾದರು ಇರಲಿ ಅವನೊಂದಿಗೆ ಬದುಕುವ ಛಲವಿದೆಯಲ್ಲಾ, ಅದು ಗುರಿ.ಗಂಡನಿಗೆ
  ತಪ್ಪು ಅರಿವಾಯಿತಲ್ಲಾ ಎಂಬುದೇ ಓದುಗನ ನಿಟ್ಟುಸಿರು.ಚೆಂದಾಗಿ ಬರೆದಿರುವಿರಿ.

Leave a Reply