ಕುವೆಂಪು ಸಾಹಿತ್ಯದಲ್ಲಿ ‘ಯುದ್ಧ’

ಸೂರ್ಯಕೀರ್ತಿ

ಯುದ್ಧವನ್ನು ದೂಷಿಸುವ ಗ್ರೀಕ್ ನ ಮಹಾಕವಿ ‘ಹೋಮರ್ ‘ ಯುದ್ಧವನ್ನೇ ಕುರಿತು ಎರಡು ಮಹಾಕಾವ್ಯಗಳ ಬರೆದ. ಇಲಿಯಡ್ ಮತ್ತು ಒಡೆಸ್ಸಿಗಳು ಪ್ರಪಂಚದ ಬಾಹ್ಯಬದುಕಿನ ದಿಗಂತಗಳು.

ಹೋಮರ್ ಹೇಳಿದಂತೆ ” ಯುದ್ಧವೆಂಬುದು ಮನುಷ್ಯ ಪ್ರಾಣಿಗಳಿಗೆ ಸಂಬಂಧಿಸಿದ್ದಲ್ಲ , ಇದು ಸಮನ್ವಯ ಜೀವನದ ಸಂಕೇತವಾಗಬೇಕೆ ಹೊರತು , ಕೊಲ್ಲುವ ಅಮಾನವೀಯ ಕೃತ್ಯಗಳಿಗೆ ಮನುಷ್ಯ ಕೈ ಹಾಕಬಾರದು ” ಎಂದು ಹೇಳಿದವನು ಮತ್ತೆ ಯಾಕೆ ಯುದ್ಧದ ಮಹಾಕಾವ್ಯಗಳನ್ನೆ ಬರೆದ ? ಎಂದು ಗ್ರೀಕ್ ಸಾಹಿತ್ಯದಲ್ಲಿ ಒಂದು ವೈಚಾರಿಕ ಸಾಹಿತ್ಯ ಚರ್ಚೆಯೇ ಆಯ್ತು. ಕೆಲವರು ಹೋಮರ್ ನ ಕೃತಿಗಳನ್ನು ಸುಟ್ಟು ಹಾಕಿ ಎಂದರು ,ಕೆಲವರು ಹೋಮರ್ ನ ಸಾಹಿತ್ಯವ ಒಪ್ಪಲಿಲ್ಲ. ಇದು ಅಥೇನ್ಸ್ ನಗರ ಉಚ್ಛ್ರಾಯ ಸ್ಥಿತಿಯಲಿ ಇದ್ದಾಗ ನಡೆದ ಸಂಗಂತಿ . ಮುಂದೆ ಪ್ಲೇಟೋ ಸೈದ್ಧಾಂತಿಕವಾಗಿ ಪ್ರತ್ಯುತ್ತರವನ್ನು ಕೊಡಲು ಮುಂದಾದ.ಆ ಕಾಲದ ಆಯೋನಿಯನ್ ದಾರ್ಶನಿಕರು ಹಾಗೂ ಪ್ರಬುದ್ಧ ವಿಮರ್ಶಕರೆಲ್ಲ ಹೋಮರ್ ನ ಸಾಹಿತ್ಯವನ್ನು ಟೀಕಿಸಿದರು .

ಪ್ಲೇಟೋ ” ತತ್ವ್ತ ಮತ್ತು ಮಹಾಕಾವ್ಯಗಳ ನಡುವಿನ ಬಹುಕಾಲದ ಜಗಳ ” ಎಂದು ಗ್ರೀಕ್ ನ ಸಾಹಿತ್ಯವ ತೆಗಳಿದ.

ಹೋಮರ್ ನ ಪ್ರಾರ್ಥನೆಯಿದು ” ಲೋಕದಿಂದ ಯುದ್ಧ ತೊಲಗಲಿ ” ಎಂದು ಹೇಳಿದವನು ಅದ್ಹೇಗೆ ಯುದ್ಧಗಳ ಕುರಿತು ಮತ್ತೆ ಅದರ ಸಾವು,ನೋವು, ದುಃಖಗಳ ನಡುವೆ ಕಾವ್ಯ ಕಟ್ಟಿ ಬರೆದ ಎಂದು ಕ್ರಿ.ಪೂ ಆರನೇಯ ಶತಮಾನದಲ್ಲಿ ಹೋಮರ್ ನ ಕಾವ್ಯಗಳು ವಿವಾದಕ್ಕೆ ಸೃಷ್ಟಿಯಾದವು .
ನನ್ನ ಪ್ರಕಾರ ಹೋಮರ್ ಒಬ್ಬ ಬೌದ್ಧಿಕ ಹಿನ್ನೆಲೆಯ ಕವಿಯಲ್ಲ ಮಹಾಕವಿ. ಒಂದು ಕಡೆ ಪ್ರಕೃತಿಯ ಆರಾಧಿಸುತ್ತಾನೆ, ಮತ್ತೊಂದು ಕಡೆ ಮಾನವೀಯ ಮೌಲ್ಯಗಳ ಹೇಗೆ ಉಳಿಸಿಕೊಳ್ಳಬೇಕೆಂದು ಆಧ್ಯಾತ್ಮಿಕ ನೆಲೆಯಲಿ ಹುಡುಕಲು ಶುರುಮಾಡಿದ ತತ್ವಜ್ಞಾನಿಯೇ ಇರಬಹುದು , ಆದರೆ ಯುದ್ಧವನ್ನು ತಿರಸ್ಕರಿಸಿದ ಹೋಮರ್ ಮತ್ತೆ ಯುದ್ಧಗಳ ಬಗ್ಗೆ ಏಕೆ ಕಾವ್ಯಗಳ ರಚಿಸಿದ ಎಂದರೆ ಅದರ ಜಾಗೃತಿ ಮೂಡಿಸಲು .

ಯುದ್ಧದಿಂದ ಆಗುವ ಪರಿಣಾಮಗಳು ಹಾಗೂ ಪ್ರಕೃತಿ ಅವನತಿಯ ಬಗ್ಗೆ ಎಚ್ಚರವಹಿಸಲು ಇವನ ಎರಡು ಮಹಾಕಾವ್ಯಗಳು ಬಹುಮುಖ್ಯವಾಗಿವೆ.
ಇದನ್ನು ಗ್ರೀಕ್ ವಿದ್ವಾಂಸರು ಜೀರ್ಣಿಸಿಕೊಳ್ಳಲು ಕಾಲಾವಕಾಶವೇ ಬೇಕಾಯಿತು.

ಹೋಮರ್ ತನ್ನ ಬದುಕಿನುದ್ದಕ್ಕೂ ಯುದ್ಧವನ್ನು ನಿರಾಕರಿಸಿ ನಿಂತವನು , ಅವನ ಕಾವ್ಯದಲ್ಲೂ ಕೂಡ ಯುದ್ಧದಿಂದ ಆಗುವ ಪರಿಣಾಮಗಳ ಗುರುತಿಸಿ ಮುಂದೆ ಮನುಷ್ಯಕುಲಕ್ಕೆ ಯುದ್ಧಗಳು ಬೇಡ ಶಾಂತಿ,ಸಹನೆ,ಮಮತೆ,ಐಕ್ಯತೆ,ಸಮಬಾಳು,ಸಮನ್ವಯಗಳೆ ಅವನ ಕಾವ್ಯಗಳ ಉದ್ದೇಶಗಳಾಗಿದ್ದವು.

ಹೋಮರ್ ,ಪ್ಲೇಟೋ, ಅರಿಸ್ಟಾಟಲ್, ಷೆಲ್ಲಿ, ವರ್ಡ್ಸ್ ವರ್ತ್, ಕೋಲ್ ರಿಜ್, ಟಿ ಎಸ್ ಎಲಿಯಟ್ , ಜಾನ್ ಕಿಟ್ಸ್ , ಥಾಮಸ್ ಹಾರ್ಡಿ,ಟಾಲ್ ಸ್ಟಾಯ್ , ಗಿಬ್ಸನ್ ಮುಂತಾದವರು ಯುದ್ಧದ ಪ್ರಮೇಯಗಳು ಮತ್ತು ಸಿದ್ಧಾಂತಗಳ ಬಗ್ಗೆ ತಮ್ಮ ಸಾಹಿತ್ಯದಲ್ಲಿ ಅರಿವಿನ ಪ್ರಜ್ಞೆಯೊಂದಿಗೆ ತೋರಿಸಿದ್ದಾರೆ.

ಹಾಗೆ, ಭಾರತೀಯ ಕವಿಗಳಲಿ ಪ್ರಮುಖರಾದ ರಾಷ್ಟ್ರಕವಿ ಕುವೆಂಪು ಅವರ ಯುದ್ಧ ನಿಲುವು ಕೂಡ ವಿಭಿನ್ನವಾಗಿತ್ತು.
ಋಷಿಯಲ್ಲದವನು ಕವಿಯಾಗಲಾರನೆಂಬ ಪುರಾತನ ನಂಬಿಕೆಯಿದೆಯಷ್ಟೇ, ಅದನ್ನು ಸಂಪಾದಿಸಿದ ಪ್ರಮೇಯ ಕುವೆಂಪು ಅವರ ಸಾಹಿತ್ಯದಲ್ಲಿ ಮನಗಾಣಬಹುದು. ಕಾವ್ಯತಪಸ್ಸಿನೊಂದಿಗೆ, ಸಂತತ ವೈಚಾರಿಕ ಚಿಂತನಗಳಿಗೆ ಬೆನ್ನೇರಿ ಹೊರಟವರು ಕುವೆಂಪು .

“ತಾಯ ಮೊಲೆಯಂದದಲಿ ತೋರ್ಪವಳ ಕಬ್ಬಿಣದ
ಹೇರದೆಯ ಕೆಚ್ಚಲನು ಬಾಯ್ಗಿಟ್ಟು,ತುಟಿ ಹರಿದು
ರಕಿತ ಸೋರುವ ನಮ್ಮನೊಲಿದು ಕಾಪಾಡಯ್ಯ !
ಭಾರತಿಯ ಮಕ್ಕಳಾಯುವ ರಕ್ಷಿಸಯ್ಯ !”
( ರಾಷ್ಟ್ರಕವಿ ಕುವೆಂಪು , ದೇಜಗೌ ,ಪುಟ ೩೫೦)
ಎಂದು ಕುವೆಂಪು ಭಾರತಾಂಬೆಯ ಪ್ರಾರ್ಥಿಸಿದ್ದಲ್ಲದೆ ಭಾರತದ ರಾಜಕೀಯ ವ್ಯವಸ್ಥೆಯನ್ನು ಕುರಿತು ತೆಗಳಿದರು.

ಕುವೆಂಪು ರಾಜಕೀಯದ ಅನಿಷ್ಟ ಸಂಕೋಲೆಗಳಿಗೆ ಸಿಕ್ಕಿದವರಲ್ಲ , ನೇರ ,ದಿಟ್ಟ, ನಿಷ್ಟೆಯಿಂದ ಹೇಳಲು ಮುಂದಾದವರು .

ಕುವೆಂಪು ಅವರಿಗೆ ಯುದ್ಧದ ಬಗ್ಗೆ ಅರಿವು ಮತ್ತು ಪರಿಪೂರ್ಣ ಪ್ರಜ್ಞೆಯೂ ಕೂಡ ಇತ್ತು .
ಜಾತಿ,ಧರ್ಮ,ಮತಗಳ ಆಚೆ ಬನ್ನಿ ಎಂದು ತಮ್ಮ ಸಾಹಿತ್ಯದ ಮೂಲಕ ಕೂಗಿಕೊಂಡವರು.
ಕೌಟುಂಬಿಕ ರಾಜಕಾರಣ, ಆರ್ಥಿಕ ರಾಜಕಾರಣ,ರಾಜಕೀಯ ರಾಜಕರಣ, ಪ್ರಭುತ್ವ ರಾಜಕರಣ, ಜಾತೀ ರಾಜಕಾರಣ, ಅಧಿಕಾರದ ರಾಜಕಾರಣ,ಧರ್ಮೀಯ ರಾಜಕಾರಣ ಮುಂತಾದ ಅನಿಷ್ಟ ರಾಜಕಾರಣಗಳ ಬಗ್ಗೆ ಕುವೆಂಪು ಅವರಲ್ಲಿ ತಿರಸ್ಕಾರ ಮನೋಭಾವವಿತ್ತು .

” ಸರ್ವ ಜನಾಂಗದ ಶಾಂತಿಯ ತೋಟ ,
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಜೈನರುದ್ಯಾನ ”
ಎಂದು ಭಾರತೀಯ ಐಕ್ಯತೆಯೊಂದಿಗೆ ಸಹಬಾಳ್ವೆಯ ಬಗ್ಗೆ ವಿವರಿಸಿದರು.

” The man he killed,
‘ yes ‘ quaint and curious war is!
You shoot a fellow down
You’d treat if met where any
Bar is!
Or help to half a crown!
– Thomas hardy
ಥಾಮಸ್ ಹಾರ್ಡಿ ಯುದ್ಧವನ್ನು ಕುರಿತು ಬರೆದ ಪದ್ಯ ನೆನಪಾಗುತ್ತದೆ.

ಕುವೆಂಪು ಅವರ ವಿಚಾರ ದೃಷ್ಠಿಕೋನಗಳು ವಿಭಿನ್ನ ಹಾಗೂ ವಿಶ್ವಪ್ರಜ್ಞೆಯ ವೈಚಾರಿಕ ವಿಶಾಲಕೋನಗಳು .
ಯುದ್ಧದ ಅರಿವಿನೊಂದಿಗೆ ಮನುಷ್ಯನ ಸ್ವಾರ್ಥ ಮತ್ತು ಅಧಿಕಾರದ ರಾಜಕೀಯವನ್ನು ಸಹಾ ಗಮನಿಸಿದವರು .

“ಮರ್ತ್ಯಜೀವನದ ತಾಟಸ್ಥ್ಯಮಂ ಕಡೆಕಡೆದು
ಶ್ರದ್ಧೆ ಸಂದೇಹಗಳನಿರದೆ ಹೊಡೆದೆಬ್ಬಿಸುವ
ಮೇಣ್ ಜನತಂ ಜನತೆಯೊಳ್ ಪಕ್ಷಪಕ್ಷಂಗಳಂ
ಕೆರಳಿಸುವ ಶತಶತ ಮತಂಗಳುಂ ತಾಮಲ್ಲಿ
ರಾರಾಜಿಸಿದುವಗ್ನಿವರ್ಣದ ವೃಕಂಗಳೋಲ್
ಜೋಲ್ವ ಜಿಹ್ವೆಯೊಳತಿ ಭಯಾನಕಂ “!
(- ಶ್ರೀರಾಮಾಯಣದ ದರ್ಶನಂ )

ಕುವೆಂಪು ಕೂಡ ಹೋಮರ್ ನಂತೆ ಯುದ್ಧದ ಪರಿವೇಷ್ಟೀತವನ್ನು ಕುರಿತು ಆಲೋಚಿಸಿಯೆ ಬರೆದವರು. ಯುದ್ಧ ಹೇಗೆ ಮನುಷ್ಯ ಕುಲಕ್ಕೆ ನಾಶವೋ ಹಾಗೇ ಅದರ ಹಿನ್ನೆಲೆಯ ರಾಜಕೀಯವೂ ಕೂಡ ದುರಂತ ಎಂಬುದನ್ನು ಗಮನದಲ್ಲಿಟ್ಟುಕೊಂಡವರು.

” ಅದೋ ನೋಡಿ, ರಷ್ಯಾ ಜಪಾನು ತುರ್ಕಿಗಳೆಲ್ಲ ,
ಪರೆಗಳಚಿ ಹೊರಟಿಹವು ಹೊಸಪಯಣಕೆ
ಬೆಳಗಿಹವು ನೆತ್ತರೆಣ್ಣೆಯ ತಿಳಿವಿನುರಿಯಲ್ಲಿ
ಕಿಚ್ಚಿಟ್ಟು ಹಳೆಕೊಳಕು ಬಣಗು ತೃಣಕೆ .
ಓ ಬನ್ನಿ, ಸೋದರರೆ ,ರಾಷ್ಟ್ರರಣಕೆ !

ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ
ಮತಿಯಿಂದ ದುಡಿಯಿರೈ ಲೋಕಹಿತಕೆ.
ಆ ಮತ ,ಈ ಮತ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜ ಮತಕೆ .
ಓ, ಬನ್ನಿ ಸೋದರರೆ ವಿಶ್ವಪಥಕೆ !
ಎಂದು ಭಾರತೀಯ ಯುವಕರನ್ನು ಮತ,ಧರ್ಮಗಳ ರಾಜಕೀಯದ ದಾಳದಿಂದ ಹೊರ ಬನ್ನಿ ಎಂದು ಯುವಕರನ್ನು ಎಚ್ಚರಿಸಿದವರು.

ಅವರ ಎರಡು ಕಾದಂಬರಿಗಳಲಿ ನಡೆಯುವ ಕೌಟುಂಬಿಕ ಹಾಗೂ ಬಂಡವಾಳಶಾಯಿ ರಾಜಕೀಯದ ಯುದ್ಧವನ್ನು ಕೂಡ ಒಂದು ಸೈದ್ಧಾಂತಿಕ ನೆಲೆಯಿಂದ ಸ್ಪಷ್ಟಪಡಿಸಿರುವುದನ್ನು ಕಾಣಬಹುದು .

ಅಲ್ಲಿನ ಪಾತ್ರಗಳು ಕೂಡ ವಾಸ್ತವ ಮತ್ತು ಬೌದ್ಧಿಕ ಸ್ಥಿರತೆಯಿಂದ ಕೂಡಿದರು ಕೂಡ ಕುಟುಂಬಗಳಲಿ ನಡೆಯುವ ಯುದ್ಧಗಳನ್ನು ಮನೋದೃಷ್ಠಿಯಲಿ ಚಿತ್ರಿಸಿದವರು . ಕುಟುಂಬ ಎಂದರೆ ಬರೀ ಒಂದು ಮನುಷ್ಯ ಕುಟುಂಬವಲ್ಲ ! ಪ್ರಾಣಿ,ಪಕ್ಷಿ, ಪ್ರಕೃತಿಗಳಲಿ ನಡೆಯುವ ಯುದ್ಧಗಳನ್ನು ಕೂಡ ಕುವೆಂಪು ಇವರ ಕಾವ್ಯಗಳಲಿ ಬಿಂಬಿಸಿರುವುದನ್ನು ಕಾಣಬಹುದು.

ಯುದ್ಧವೆಂಬುದು ಮನುಷ್ಯಕುಲಕ್ಕೆ ಅಲ್ಲದೆ ಹೇಗೆ ಪ್ರಕೃತಿಯ ವಿನಾಶಕ್ಕೆ ಕಾರಣ ಎಂಬುದನ್ನು ಕುವೆಂಪು ಹಲವಾರು ಕವಿತೆಳ ಮೂಲಕ ಎಚ್ಚರವನ್ನು ಕೂಡ ನೀಡಿದ್ದಾರೆ.

ಮನುಷ್ಯನ ಲಾಲಸೆಯಿಂದ ಉಂಟಾಗುವ ಈ ಯುದ್ಧಗಳು ಹೇಗೆ ಸಮಾಜಮುಖಿಯಾಗಿ ಯಾರಿಗೆ ಯಾರಿಂದ ಲಾಭ ಪಡೆಯುತ್ತವೆ ಹಾಗೂ ಅದರ ಉದ್ದೇಶ ಮತ್ತು ಉಪಯೋಗಗಳನ್ನು ಹೇಗೆ ರಾಜಕೀಯ ಸೃಷ್ಠಿಸುತ್ತದೆ ಎಂಬುದನ್ನು ಕುವೆಂಪು ಯುದ್ಧದ ಪ್ರಜ್ಞೆಯೊಂದಿಗೆ ಶ್ರೀರಾಮಾಯಣದಲ್ಲಿ ಬರುವಂತಹ ಯುದ್ಧ ಸನ್ನಿವೇಶಗಳನ್ನು ಮಹಾಕಾವ್ಯದಲ್ಲಿ ವಿರಾಟ್ ದರ್ಶನದ ಮೂಲಕ ತಿಳಿಸಿದ್ದಾರೆ.

“ರಸಜೀವನಕೆ ಮಿಗಿಲ ತಪಮಿಹುದೆ ?
ರಸಸಿದ್ಧಿಗಿಂ ಮಿಗಿಲೆ ಸಿದ್ಧಿ, ಪೊಣ್ಮದೆ ಸೃಷ್ಠಿ
ರಸದಿಂದೆ , ಬಾಳುತಿದೆ ರಸದಲ್ಲ ,ರಸದೆಡೆಗೆ
ಪರಿಯಿತಿದೆ ,ಪೊಂದುವುದು ರಸದೊಳೈಕ್ಯತೆವೆತ್ತು ತುದಿಗೆ
ರಸಸಾಧನಂ ಗೈಯ್ಯದಿರುವುದೆ ಮೃರ್ತ್ಯು,
ಆನಂದರೂಪಮಮೃತಂ ರಸಂ”!.

ಎಂದು ಪರಿಪೂರ್ಣತೆಯ ಮನುಷ್ಯನ ಆಗಮಿಕ ದಾರಿಯೊಂದಿಗೆ ಕಾವ್ಯದೃಷ್ಠಿ ಇಲ್ಲಿ ವಿಭಿನ್ನ ಹಾಗೂ ರಸಜೀವನದ ಚೌಕಟ್ಟನ್ನು ಕಟ್ಟಿಕೊಡುತ್ತಾರೆ.

ಕೊಲ್ಲುವುದು ಮತ್ತು ಹಿಂಸಿವುದು ಮನುಷ್ಯನ ಪ್ರಜ್ಞಾರೂಪಕತೆಗೆ ಸಮಾನವಲ್ಲ. ಮನುಷ್ಯ ಏನಿದ್ದರೂ ಪ್ರೀತಿಯ ರಸದೊಂದಿಗೆ ಬದುಕಬೇಕು , ಇಲ್ಲದಿದ್ದರೆ ಅದು ಸಾವು ಎಂದು ಕುವೆಂಪು ತಿಳಿಸುತ್ತಾರೆ.
“ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು.
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು ,
ಒಟ್ಟಿಗೆ ಬಾಳುವ ತೆರದಸಿ ಹರಸು “!

ಎನ್ನುವ ಕವಿತೆಯ ಸಾಲುಗಳಲಿ ಒಂದು ಪ್ರಜ್ಞಾಪೂರ್ವಕ ಸಂಬಂಧದ ನಡುವೆ ಜಾಗೃತಿಯ ಮೂಡಿಸುವ ಕತೆಯಿದೆ.

ಧರ್ಮಾಂಧರಾಗಿರುವವರನ್ನು , ಜಾತಿಯತೆಯಿಂದ ಕೂಡಿರುವವರನ್ನು, ಶೋಷಣೆಯಿಂದ ಬದುಕುತ್ತಿರುವ ಜನಾಂಗವನ್ನು, ಅಧಿಕಾರದ ಮದದಿಂದ ಮೆರೆಯುತ್ತಿರುವ ಅಧಿಕಾರಿಗಳನ್ನು ಎಚ್ಚರಿಸುವ ಸಂಕೇತದಿಂದ ಒಂದು ವೈಜ್ಞಾನಿಕ ದೈವತ್ವದೊಂದಿಗೆ ಗುರುವಿನ ಆರ್ಶೀವಾದದೊಂದಿಗೆ ಯಾವುದೇ ಭೇದ -ಭಾವವಿಲ್ಲದೆ ಎಲ್ಲರೂ ಒಟ್ಟಾಗಿ ಬಾಳುವಂತೆ ಹರಸು ಎಂದು ಕವಿಯ ಕೋರಿಕೆಯಾಗಿದೆ.

” ಶ್ರೀಮಂತರಿರಲಿಲ್ಲ,ಶ್ರೀಮಂತರೇ ಎಲ್ಲ !
ಆಳ್ವರಸರಲ್ಲಿಲ್ಲ , ಅರಸರೇ ಆಳ್ಗಳೆಲ್ಲ
ಹೆಚ್ಚು ಕಡಮೆಗಳಿಲ್ಲ, ಮೇಲು ಕೀಳುಗಳಿಲ್ಲ,
ಕೆಲಸವಿಲ್ಲದ ಅರಸಗಾರನಿಗೆ ಅಲ್ಲಿ ಕೂಳಿಲ್ಲ
ಕೆಲಸವೆಂದರೆ ಉಸಿರು! ಕೆಲಸವೇ ಬಾಳೆಲ್ಲ
ಆಳು ತನಗಾಗಿ ತಾ ದುಡಿಯಬಾರದು ಅಲ್ಲಿ
ದುಡಿಮೆಯನಿಬರಿಗಾಗಿ ,ತಾನೊಬ್ಬನನಿಬರಲ್ಲಿ
ಸರ್ವಮನುಜರಿಗಾಗಿ, ಸೃಷ್ಠಿ
ಎಂಬ ಸಮದೃಷ್ಟಿ!-
ಎಲ್ಲವರ ಸುಖಕಾಗಿ ಗೆಯ್ಯಬೇಕಲ್ಲ
ಆದರೂ ಸುಖಿಗಳೆನಗೊಬ್ಬರೂ ಕಾಣಲಿಲ್ಲ !?”
ಎನ್ನುವ ಕನಸಿನ ರೂಪಕದ ಕವಿತೆಯೊಳಗೆ ಕವಿ ಪ್ರವೇಶ ಪಡೆದು ಕೋಗಿಲೆ ಮತ್ತು ಸೋವಿಯಟ್ ರಷ್ಯಾ ಕವಿತೆಯಲಿ ಔಚಿತ್ಯಪೂರ್ಣದ ದೇಶದ ಚಿಂತನೀಯ ಸಂಘರ್ಷಗಳನ್ನು ಬಿಚ್ಚಿಡುತ್ತಾರೆ.

ಶ್ಮಶಾನ ಕುರುಕ್ಷೇತ್ರಂ ನಾಟಕದಲಿ ಕುವೆಂಪು ಅವರು ಹೇಳಿದಂತೆ ” ಇದೊಂದು ಪ್ರತಿಮಾಸೃಷ್ಟಿ , ಯುದ್ಧದ ದುರಂತತೆ, ಅನ್ಯಾಸ ,ಕೌರ್ಯ, ವಿನಾಶನ,ಅವಿವೇರ,ದುರ್ಲಂಘ್ಯ,ವಿಧಿ,ಸರ್ವವಿಫಲತೆ,ಸಂಸ್ಕೃತಿಯ ಸಾವು – ಇದಕ್ರೆ ಪ್ಪತಿಮೆ. ಒಂದೊಂದು ಯುದ್ಧವೂ ಪ್ರಾಪಂಭವಾಗುವಾಗ ಅದು ಯುದ್ಧವನ್ನೆ ಕೊನೆಗಾಣಿಲುವ ಜಗತ್ತಿನ ಕೊನೆಯ ಅನಿವಾರ್ಯ ಸಂಕಟವೆಂದು ಸಾರುತ್ಕದೆ. ಅನ್ಸಾಸವೆಲ್ಲ ತೊಲಗಿ ನ್ಯಾಯಸ್ಥಾಪನೆ ಸಾಗುವುದೆಂದು ಭಾವಿಸುತ್ತೇವೆ,ಕಲಿ ಹೋಗಿ ಕೃತಯುಗ ಪ್ರಾರಂಭವಾಗುತ್ತದೆಂದು. ಆದರೆ? ಮತ್ತೆ ! ವಿಶೇಷತೆಗಾಗಿ ಸಾಮಾನ್ಯರ ಆಹುತಿ . ಸಂಸ್ಕೃತಿ ನಾಗರಿಕತೆ ಪ್ರಗತಿ ಎಲ್ಲ ಶ್ಮಶಾನ ರದ್ರನ ಮೆಯ್ಗೆ ಭಸ್ಮಲೇಪನವಾಗುತ್ತದೆ “!.
ಎಂದು ನಾಟಕದ ಮುನ್ನುಡಿಯಲ್ಲಿ ಕುವೆಂಪು ತಿಳಿಸಿದ್ದಾರೆ.

ಕುವೆಂಪು ಸಾಹಿತ್ಯದಲ್ಲಿ ಯುದ್ಧದ ಪರಿಕಲ್ಪನೆ ಜಾಗತಿಕ ಹಾಗೂ ಜಾಗೃತಿಯ ಸೃಷ್ಟಿಕಾವ್ಯವಾದರೂ ಕೂಡ ಅದರಲ್ಲಿ ಕೌಟುಂಬಿಕ ಯುದ್ಧಗಳಿವೆ, ಅಧಿಕಾರದ ರಾಜಕೀಯ ಯುದ್ಧಗಳಿವೆ , ಸಾಮಾಜಿಕ ತಲ್ಲಣಗಳ ಯುದ್ಧಗಳಿವೆ, ಯುವ ಪೀಳಿಗೆಯ ಮನೋಭಾವನೆಗಳ ಯುದ್ಧಗಳಿವೆ, ಪುರಾಣಗಳೊಂದಿಗೆ ಬೆರತ ಐತಿಹ್ಯ ಯುದ್ಧಗಳಿವೆ , ಹಾಗೂ ಕೋಮುವಾದದ ಅರಿವಿನ ಒಳಯುದ್ಧಗಳಿವೆ , ಮಾನಸಿಕ ಸ್ತ್ರೀ ಸಂವೇದನೆಗಳ ಯುದ್ಧಗಳಿವೆ ಹೀಗೆ ಯುದ್ಧ ಎಂಬುದು ಒಂದು ಪ್ರತಿಮೆಯ ಮೂಲಕ ಹೆಣೆಯುವ ವಾಸ್ತವ ಮತ್ತು ನೈಜತೆಯಲ್ಲಿ ಅಡಗಿರುವ ಮನುಷ್ಯನ ಸ್ವಾರ್ಥದೊಂದಿಗೆ ಹೇಗೆ ಗಡಿಗಳು ಬೇರ್ಪಟ್ಟವು, ಸಂಕೋಲೆಗಳು ಕಟ್ಟು ಬಿದ್ದವು , ವಿಶ್ವಮಾನವನ ಕಲ್ಪನೆಯ ಮರೆತು ಅಲ್ಪಮಾನವನ ಸ್ಥಿತಿಗೆ ತಲುಪಿದ ಅಮಾನವೀಯ ಮನುಷ್ಯನ ಕೃತ್ಯಗಳು ಕುವೆಂಪು ಸಾಹಿತ್ಯದಲ್ಲಿ ನೋಡಬಹುದು.

ಒಟ್ಟಾರೆ,
ಕಿಂದರಿಜೋಗಿಯಲಿ ನಡೆಯುವಂತಹ ಸಾಮಾಜಿಕ ಯುದ್ಧ ಹಾಗೂ ಪರಸ್ಪರ ನಂಬಿಕೆಗಳ ಯುದ್ಧ ಬಹುಮುಖ್ಯವಾಗಿದೆ, ಅದೇ ರೀತಿ ಕುವೆಂಪು ಕಾವ್ಯಗಳಲ್ಲಿ ಬಹುಮುಖ್ಯವಾಗಿ ವಿರಹದ ಯುದ್ಧ ,ಪ್ರಣಯದ ಯುದ್ಧಗಳು ನವದಂಪತಿಗಳಲಿ ಸಂಧಿಸುವ ಸಕಾರಣಕೆ ಕುವೆಂಪು ಪ್ರೇಮಗೀತೆಗಳೊಂದಿಗೆ ವಿವರಿಸುತ್ತಾರೆ, ಜೇನಾಗುವಾ,ಚಂದ್ರ ಮಂಚಕೆ ಬಾ ಚಕೋರಿ ಮುಂತಾದ ಕವನಸಂಕಲನಗಳಲಿ ಪ್ರೇಮದ ವೈಫರೀತ್ಯಗಳ ಕುರಿತು ಹೇಳುತ್ತಾರೆ.ಕುವೆಂಪು ಅವರ ಸಣ್ಣಕತೆಗಳು ಮತ್ತು ವೈಚಾರಿಕ ಬರಹಗಳಲಿ ಜಾಗತೀಕರಣ ಹಾಗೂ ಆಧುನೀಕರಣದ ತೊಲೆಬಾಗಿಲನ್ನು ವಿವರಿಸುತ್ತಾ ಗ್ರಾಮೀಣ ಬದುಕುಗಳು ಹೇಗೆ ನಗರಗಳಾಗಿ ವಿರೂಪಗೊಂಡವು ಮತ್ತು ವಸಾಹತುಶಾಯಿಗಳ ಬೇಡಿಕೆಗಳು ಹೇಗೆ ಭಾರತದಲ್ಲಿ ಸೃಷ್ಟೀಕೃತವಾಯಿತೆಂದು ಕುವೆಂಪು ಅವರು ಸುವಿವರವಾಗಿ ಹೇಳಿದ್ದಾರೆ.”ಯಾರೂ ಅರಿಯದ ವೀರ,ದೆವ್ವದ ಕಾಟ,ಸಂನ್ಯಾಸಿ,ಧನ್ವಂತರಿ ಚಿಕಿತ್ಸೆ,ಸಾಲದ ಮಗು ಇತ್ಯಾದಿ ಕತೆಗಳಲಿ ಕೌಟುಂಬಿಕ ಯುದ್ಧಗಳೊಂದಿಗೆ ಸಾಮಾಜಿಕ ತಾರತಮ್ಯಗಳೂ ಕೂಡ ಕುವೆಂಪು ಅವರ ಎರಡು ಕಾದಂಬರಿಗಳಲಿ ಒಂದು ಪ್ರಕೃತಿ ಮತ್ತು ಮತ್ತೊಂದು ಮನುಷ್ಯ ಪ್ರಪಂಚವನ್ನು ತೆರೆದು ತೋರಿಸುವ ಕಥಾನಕ ,ಭಯಾನಕ ದೃಶ್ಯಗಳಾಗಿವೆ. ” ಕಾನೂರು ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು” ಕಾದಂಬರಿಗಳಲಿ ಉಂಟಾಗುವಂತಹ ಪ್ರೇಮದ ಬಯಕೆಗಳು ಹಾಗೂ ಆರ್ಥಿಕ ಯುದ್ಧಗಳೊಂದಿಗೆ ಸಂಬಂಧಗಳ ಅಸ್ಪಷ್ಟ ಚಿತ್ರಣಗಳನ್ನು ಕುವೆಂಪು ಈ ಎರಡು

ಮಹಾಕಾದಂಬರಿಗಳಲಿ ಚಿತ್ರಿಸಿದ್ದಾರೆ.
ಒಂದು ಧರ್ಮದ ಯುದ್ಧವಾದರೆ ಮತ್ತೊಂದು ಭಾಷೆ,ಸಂಸ್ಕೃತಿ ,ನೆಲ,ಜಲ,ಪ್ರಕೃತಿಯೊಳಗಿನ ಯುದ್ಧಗಳನ್ನು ಕುವೆಂಪು ಅವರ ಕಾದಂಬರಿಗಳಲಿ ನೋಡಬಹುದು.

ಅದೇ ರೀತಿ ನಾಟಕಗಳಲಿ ಒಂದು ವಿಶಿಷ್ಟ ಹಾಗೂ ಪುರಾಣದ ಕತೆಗಳನ್ನು ಆಧರಿಸಿ ಆದಂತಹ ಸಾಮಾಜಿಕ ಬದಲಾವಣೆಗಳಿಗೆ ಕುವೆಂಪು ಅವರ ವಿವಿಧ ದೃಷ್ಟೀಕೋನಗಳನ್ನು ನೋಡಬಹುದು.
ಶೂದ್ರತಪಸ್ವಿಯಲ್ಲಿ ನಡೆಯುವ ರಾಮ ಮತ್ತು ಶಂಭೂಕನ ಯುದ್ಧ , ಕಾನೀನದಲ್ಲಿ ನಡೆಯುವ ಪೌರುಷದ ಯುದ್ಧ, ಶ್ಮಶಾನ ಕುರುಕ್ಷೇತ್ರದಲ್ಲಿ ಸೃಷ್ಟಿಸಿರುವ ಸಾಮಾಜಿಕ ಹಾಗೂ ಪ್ರಪಂಚ ನಾಶದ ಪರಿಕಲ್ಪನೆಗಳೊಂದಿಗೆ ಕುವೆಂಪು ಯುದ್ಧದಿಂದ ಆಗುವ ಪರಿಣಾಮಗಳು ಹಾಗೂ ವಿನಾಶದ ಬಗ್ಗೆ ವಿವರಿಸುತ್ತಾರೆ.

ಯುದ್ಧ ಸಂಸ್ಕೃತಿ ಎಂಬುದು ವಿನಾಶವೇ ಸರಿ , ಹೌದು ಯುದ್ಧದಿಂದ ನಾವು ಗಳಿಸಿಕೊಳ್ಳುವ ಅಂಶವಾದರೂ ಏನು ? ಸಾವು ,ನೋವು,ದುಃಖ ,ಪರಸ್ಪರ ವಿಮುಖ ಚಲನೆಗಳು ಒಟ್ಟಾರೆಯಾಗಿ ಕೊಲ್ಲುವ ಒಂದು ಸಂಸ್ಕೃತಿಯೇ ನಮ್ಮ ಮುಂದೆ ತೆರೆದು ನಿಲ್ಲುತ್ತದೆ.
ಯುದ್ಧ ಬಡವರ ಯುದ್ಧವಲ್ಲ, ಉಳ್ಳವರ ಯುದ್ಧ ಅದಕ್ಕೆ ಹೋರಾಡುವವರು ಸಾಮಾನ್ಯ ಸೈನಿಕರು , ರಾಜನಾದವನು ಆಜ್ಞೆಯ ನೀಡಿದರೆ ರಾಜನೇ ಮುಂದೆ ನಿಂತು ಹೋರಾಡುವುದಿಲ್ಲ ಅಲ್ಲಿನ ಬಡ ಹಾಗೂ ಸಾಮಾನ್ಯ ಸೈನಿಕರು ನಿಂತು ಯುದ್ಧಗಳ ಮಾಡಬೇಕು .

ಜರ್ಮನ್,ಜಪಾನ್,ರಷ್ಯಾ ಮುಂತಾದ ಭಯಾನಕ ಯುದ್ಧಗಳು ನಮ್ಮ ಕಣ್ಣ ಮುಂದೆ ಬರುತ್ತವೆ. ಯುದ್ಧಗಳಿಂದ ಆದಂತಹ ಒಂದು ವಿನಾಶದ ಪರಿವು ಅರಿವಾಗಬೇಕೀಗ !

ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿಯೂ ಕೂಡ ಯುದ್ಧದ ಪ್ರಮೇಯವೇ ಬರುತ್ತದೆ, ಹೇಗೆ ಹೋಮರ್ ಯುದ್ಧದ ಚಿತ್ರಣದೊಂದಿಗೆ ಪ್ರಕೃತಿ ಹಾಗೂ ಮನುಷ್ಯ ಪ್ರಪಂಚ ವಿನಾಶವಾಯಿತೋ ಅದೇ ರೀತಿ ಈ ಜಾಗತೀಕರಣದ ಸಂದರ್ಭದಲ್ಲಿ ಸಶಸ್ತ್ರೀಕರಣಗಳೊಂದಿಗೆ ವಿವಿಧ ದೇಶಗಳು ಹೇಗೆ ಯುದ್ಧವನ್ನು ಸುಲಭವಾಗಿ ಅನುಸರಿಸುವವು ಹಾಗೂ ಜಾಗತಿಕ ಮಟ್ಟದ ಅಣುಬಾಂಬುಗಳು , ಗನ್ ಗಳು,ಸ್ಪೋಟಕ ಮಾದಕಗಳು ಹೇಗೆ ಮನುಷ್ಯ ಪ್ರಪಂಚಕ್ಕೆ ಮಾರಕ ಎಂಬುದನ್ನು ಕುವೆಂಪು ಸಾಹಿತ್ಯದಲ್ಲಿ ನೋಡಬಹುದು.

ಯುದ್ಧವೆಂಬುದು ವಿನಾಶವೇ ಹೊರತು ಅವಕಾಶವಲ್ಲ !

Leave a Reply