ಕತೆಯಾದವರು…


” ಇನ್ಮೇಲೆ ನನಗೆ ನೀವು ಯಾವುದೇ ಪುಸ್ತಕ ಓದಲು ಕೊಡಬೇಡಿ ”

ಎಂದು ಬಿರುಸಾಗಿ ಹೇಳಿದ ಕವಿತಾ‌ ಇದಕ್ಕೆ ನರಹರಿ ಏನಾದರೂ ಪ್ರತಿಕ್ರಿಯೆ ನೀಡುತ್ತಾನಾ ಎಂಬುದನ್ನೂ ಕೇಳಿಸಿಕೊಳ್ಳದೆ ಹೋಗಿ ತನ್ನ ಕ್ಯಾಬೀನ್ ನಲ್ಲಿ ಕೂತಳು. ನರಹರಿಗೆ ಇಂತಹದ್ದೊಂದು ವರ್ತನೆಯ ಊಹೆ ಇತ್ತಾದರೂ ಅದನ್ನು ತೋರ್ಪಡಿಸಿಕೊಳ್ಳದೆ ಮುಗ್ದನಂತೆ ಪೆಚ್ಚಾಗಿ ನಿಂತ. ವೀಕೆಂಡ್ ಕಳೆದು ಸೋಮವಾರ ಬೆಳ್ಳಂಬೆಳಗ್ಗೆ ಲಾಗಿನ್ ಆಗುವ ಮೊದಲು ಪ್ಯಾಂಟ್ರಿಯಲ್ಲಿ ಕಾರ್ಡಮಮ್ ಟೀ ಕುಡಿಯಲಿಕ್ಕೆಂದು ನಿಂತಿದ್ದ ಅವನಿಗೆ ವಾರದ ಪ್ರಾರಂಭ ಹೀಗೆ ಆಗುತ್ತದೆಂಬ ಯೋಚನೆ ಇದ್ದಿರಲಿಲ್ಲ.

ನರಹರಿ ಮತ್ತು ಕವಿತಾ ಒಂದೇ ಟೀಮ್ ನಲ್ಲಿ ಕೆಲಸ ಮಾಡುವವರು. ಅವರಿಬ್ಬರ ನಡುವೆ ಒಂದೊಳ್ಳೆಯ Rapport ಉಂಟಾಗಿದ್ದೇ ಇಬ್ಬರಲ್ಲೂ ಇದ್ದ ಪುಸ್ತಕ ಓದುವ ಹವ್ಯಾಸದಿಂದಾಗಿ. ತಮ್ಮ ಯಾಂತ್ರಿಕ ಮತ್ತು ಬಿಡುವಿರದ ಕೆಲಸದ ನಡುವೆ ಅವರಿಗಿದ್ದ ಏಕೈಕ solace ಎಂದರೆ ಓದು.

ಅನೇಕ ವರ್ಷಗಳಿಂದ ತಾವು ಓದಿದ ಪುಸ್ತಕಗಳ ಬಗ್ಗೆ ಪರಸ್ಪರರು ಚರ್ಚಿಸುತ್ತಾರೆ. ತಮ್ಮ ಬಳಿ ಇದ್ದ ಪುಸ್ತಕಗಳನ್ನ ವಿನಿಮಯ ಮಾಡಿಕೊಂಡು ಓದಿದ್ದಾರೆ. ಅವನು ಹೊಸದಾಗಿ ಒಂದು ಪುಸ್ತಕ ತಂದರೆ ಅದನ್ನು ಮೊದಲೇ ಇವಳು ಓದುವ, ಇವಳೊಂದು ಪುಸ್ತಕ ಕೊಂಡರೆ ಇವಳಿಗಿಂತ ಮೊದಲು ಅದನ್ನು ಅವನೇ ಕಸಿದುಕೊಂಡು ಓದಿದ್ದೂ ಅನೇಕ‌ ಬಾರಿ ಆಗಿತ್ತು.

ಇಂಥದ್ದೊಂದು ಪುಸ್ತಕ ಪ್ರೀತಿ ಅವರ ನಡುವೆ ಹುಟ್ಟಿದ್ದು ಸೋಜಿಗವೇ. ನರಹರಿಯೋ ಸಂಸ್ಕೃತದ ವಿದ್ಯಾರ್ಥಿಯಾಗಿದ್ದವನು. ವಿದ್ಯಾಭ್ಯಾಸದ ದಿನಗಳಿಂದಲೂ ಪುಸ್ತಕ ಓದುವ ಗೀಳು ಅವನಿಗಿತ್ತು. ಆದರೆ ವಿಜ್ಞಾನದ ವಿದ್ಯಾರ್ಥಿಯಾಗಿದ್ದ ಕವಿತಾ ಸಿಲಬಸ್ ಗೆಂದು ಇದ್ದ ಭಾಷಾ ಪುಸ್ತಕಗಳನ್ನು ಬಿಟ್ಟರೆ ಇತರೆ ಪುಸ್ತಕಗಳನ್ನು ಓದಿದವಳೇ ಅಲ್ಲ. ಆ ಅಭ್ಯಾಸ ಅವಳಲ್ಲಿ ಹುಟ್ಟು ಹಾಕಿದವನು ಮಾತ್ರ ನರಹರಿಯೇ. ಮೊದಮೊದಲು ತನ್ನೊಂದಿಗೆ ಕಂಪನಿ ಬಸ್ ನಲ್ಲಿ ಬರುವ ಅನೇಕರು ಗಂಟೆಗಟ್ಟಲೆ ಹಿಡಿಯುವ ತಮ್ಮ ಕಮ್ಯೂಟಿಂಗ್ ಟೈಮ್ ನ್ನು ಕಿಲ್ ಮಾಡಲು ಪುಸ್ತಕ ಕೈಯಲ್ಲಿ ಹಿಡಿದು ಕೂರುವುದನ್ನು ನೋಡಿ ತಾನೂ ಹಾಗೆ ಮಾಡಬಹುದೇನೋ ಎಂದು ಶುರು ಮಾಡಿದ್ದವಳು ನರಹರಿಯಿಂದಾಗಿ ಅದನ್ನೊಂದು ಬದ್ದತೆ ಎಂಬಂತೆ ಪರಿಗಣಿಸಿದ್ದಳು.

ಪುಸ್ತಕದ ನೆಪದಿಂದಲೇ ಗೆಳತನ ಬೆಸೆದಿದ್ದ ಇವರಿಬ್ಬರ ಬಗ್ಗೆ ಯಾರೂ ಅನ್ಯಥಾ ಭಾವಿಸಿರಲಿಲ್ಲ. ಹಾಗಿದ್ದಮೇಲೆ ಕವಿತಾ ಏಕೆ ಹೀಗೆ ವರ್ತಿಸಿದಳು ಎಂಬುದು ಅಲ್ಲಿದ್ದ ಕೆಲವರಿಗೆ ಆಶ್ಚರ್ಯ ತಂದಿತ್ತು. ಅವರ ಆಶ್ಚರ್ಯಕ್ಕಿದ್ದ ಬಹುಮುಖ್ಯ ಕಾರಣವೆಂದರೆ ಅಷ್ಟೊಂದು ಅನ್ಯೋನ್ಯತೆಯಿಂದ ಏಕವಚನದಲ್ಲಿ ಸಂಬೋದಿಸುತ್ತಿದ್ದವನನ್ನು ಆಕೆ ‘ ನೀವು’ ಎಂದು ಕರೆದದ್ದು.

*                  *                     *                     *

‘ಯಾಕೋ ಅವಳು ಹಾಗೆ ಹೇಳಿದ್ಲು ? ಅಂಥಾ ಪುಸ್ತಕ ಯಾವುದು ಕೊಟ್ಟಿದ್ದೆ ? ಸೆಕ್ಸ್ ಬುಕ್ ಏನಾದರೂ ಕೊಟ್ಟಿದ್ಯೇನೋ ಮಿಸ್ ಆಗಿ ‘ ಎಂದು ನರಹರಿಯ ಗೆಳೆಯ ವಿನೋದ್ ಸ್ಮೋಕಿಂಗ್ ಝೋನ್ ನಲ್ಲಿ ಕೇಳಿದ. ‘ಡೋಂಟ್ ಬಿ ಚೀಪ್ ವಿನೋದ್’ ಎಂದಷ್ಟೇ ಹೇಳಿ ತಪ್ಪಿಸಿಕೊಳ್ಳಲು ನೋಡಿದ ನರಹರಿಯನ್ನು ವಿನೋದ್ ಮತ್ತೆ ಕೆಣಕಿದ . ‘ಏನೂ ಚೀಪ್ ಆಗಿರೋ ಬುಕ್ ನೀನು ಕೊಟ್ಟಿಲ್ಲದೆ ಅವಳ್ಯಾಕೋ ಹೀಗೆ ಹೇಳ್ತಾಳೆ? ಇಷ್ಟು ದಿನ ನೀನು ಕೊಟ್ಟ ಎಲ್ಲ ಕತೆಗಳನ್ನು ಓದಿದವಳಿಗೆ ಈ ಪುಸ್ತಕ ಓದಿ ನಿನ್ನ ಮೇಲೆ ಕೋಪ ಬಂದಿದೆ ಎಂದಾದರೆ ನೀನೇ ಅರ್ಥ ಮಾಡಿಕೋ’

‘ಹೌದು . ತಪ್ಪು ನನ್ನದೇ. ನಾನವಳಿಗೆ ಈ ಬಾರಿ ಕೊಟ್ಟ ಪುಸ್ತಕದಿಂದ ಇಂಥದ್ದೇನಾದರೂ ಆಗುತ್ತದೆ ಅಂತ ಊಹಿಸಿಯೂ ಕೊಟ್ಟಿದ್ದು ತಪ್ಪು”ಅಂದರೆ . ನಿನಗೆ ಅವಳು ಯಾಕೆ ಹಾಗೆ ಹೇಳಿದ್ದಾಳೆ ಅನ್ನೋದು ಸ್ಪಷ್ಟವಾಗಿ ಗೊತ್ತಿದೆ ಅಂತಾಯಿತು.’ ‘ಹೌದು. ಊಹಿಸಿದ್ದೆ. ಆದರೆ ಬೇರೆ ರೀತಿಯ ಪ್ರತಿಕ್ರಿಯೆ ನಿರೀಕ್ಷಿಸಿದ್ದೆ’
‘ಯಾವ ಪುಸ್ತಕ ಕೊಟ್ಟಿದ್ದೆ?’
‘ಸಮಾಗಮ’
‘ಓಹ್ . ಅದೇ ನಿನ್ನ ಫೇವರೇಟ್ ಕತೆಗಾರ ಶ್ರೀನಿವಾಸ ಅವರ ಹೊಸ ಪುಸ್ತಕ ತಾನೆ ?’
‘ಹೌದು ‘
‘ಅದರಲ್ಲಿ ಹಾಗೆ ಅವಳು ರಿಯಾಕ್ಟ್ ಮಾಡುವಂತದ್ದೇನಿತ್ತು ?’
‘ಶೀರ್ಷಿಕೆ ಕತೆಯಾದ ‘ಸಮಾಗಮ’ ವೇ ಇದಕ್ಕೆ ಕಾರಣ’
‘ಅದ್ಹೇಗೆ?’
‘ಹೋಗ್ಲಿ ಬಿಡು,ಅದೆಲ್ಲಾ ಈಗ್ಯಾಕೆ .‌ ಎಲ್ಲ ಮುಗೀತು.‌‌bಸುಮ್ಮನೆ ಅದರ ಬಗ್ಗೆ ಮಾತು ಬೇಡ’
‘ಇಲ್ಲ, ನನಗೆ ಗೊತ್ತಾಗ್ಲೇಬೇಕು. ಏನಿತ್ತು ಆ ಕತೆಯಲ್ಲಿ ? ‘
‘ಹೇಳಲೇಬೇಕಾ ?’
‘ಹೌದು. ಪೂರ್ತಿ ಅಲ್ಲದಿದ್ದರೆ ಕತೆಯ ಜಿಸ್ಟ್ ಆದರೂ ಹೇಳು ಮಾರಾಯ’

‘ಏನು ಹೇಳಲಿ ? ಅದು ನಮ್ಮದೇ ಕಥೆ ‘
‘ಅಂದರೆ ?’
‘ಹೌದು ಅದರಲ್ಲಿಯ ಇಬ್ಬರು ಐಟಿ ಕಂಪೆನಿಯ ಉದ್ಯೋಗಿಗಳು ನಮ್ಮಂತೆಯೇ ಪುಸ್ತಕ ವಿನಿಮಯ ಮಾಡಿಕೊಂಡು ಓದುತ್ತಿರುತ್ತಾರೆ’
‘So what ? ‘
‘ಒಂದು ದಿನ ಅದರಲ್ಲಿಯ ಕಥಾನಾಯಕ ಅವಳಿಗೆ ಒಂದು ಪುಸ್ತಕ ಓದಲು ಕೊಟ್ಟು ಅದರಲ್ಲಿದ್ದ  ‘ಒಂದು ಆಸೆ’ ಎಂಬ ಕತೆಯನ್ನು ಹೆಸರಿಸಿ ಅದನ್ನು ಅವಳು ಮೊದಲು ಓದಬೇಕು ಎಂದು ತಾಕೀತು ಮಾಡುತ್ತಾನೆ. ಪುಸ್ತಕ ಒಯ್ದವಳು ಅತೀ ಕಾತರದಿಂದ ಅದನ್ನೋದುತ್ತಾಳೆ.’

‘ಆ ಕತೆಯಲ್ಲಿರುವ ಬರುವ ಹುಡುಗನೊಬ್ಬ ತನ್ನೊಂದಿಗೆ ಸಲುಗೆಯಿಂದಿದ್ದ ಗೆಳತಿಯೋರ್ವಳ ಬಳಿ ಇದ್ದಕ್ಕಿಂದಂತೆ ಬಂದು ‘ಈ ಕ್ಷಣ ನಾನು ನಿನ್ನನ್ನು ಪ್ರೀತಿಸುತ್ತೇನೆ.‌ ಇದು ಸತ್ಯ. ಅಲ್ಲದೆ ನಿನ್ನನ್ನು ಚುಂಬಿಸಬೇಕೆಂಬ ನನ್ನ ಬಹುದಿನಗಳ ಮನದಾಸೆಯನ್ನು ಈ ದಿನ ನೀನು ಈಡೇರಿಸಲೇಬೇಕು. ನಿನಗಾಗಿ ಈ ಸಂಜೆ ನಾನು ಪಾರ್ಕಿನ ಗೇಟ್ ಪಕ್ಕದಲ್ಲಿರುವ ಬೆಂಚಿನ ಮೇಲೆ ಕೂತು ಕಾಯುತ್ತಿರುತ್ತೇನೆ. ಇದನ್ನು ನೀನು ಕೇವಲ ನನ್ನ ದೈಹಿಕ ವಾಂಛೆ ಎಂದಷ್ಟೇ ಪರಿಗಣಿಸಬಾರದು. ನಮ್ಮ ನಡುವಿನ ಭಾವನಾತ್ಮಕ ಸಂದರ್ಭಗಳನ್ನು ನೀನು ಮರೆತಿಲ್ಲ ಎಂದು ನಾನು ಭಾವಿಸುತ್ತೇನೆ. ಈ ಸಂಜೆಯಿಂದ ನಾವು ಪ್ರೇಮಿಗಳಾಗುತ್ತೇವೆ ಎಂಬ ಭರವಸೆಯಿಂದಲೇ ನಾನು ಪಾರ್ಕಿಗೆ ಬರುತ್ತೇನೆ.ಎಂದು ಹೇಳಿ ಅವಳ ಉತ್ತರಕ್ಕೂ ಕಾಯದೆ ಹೊರಟು ಹೋಗುತ್ತಾನೆ.

‘ಆಮೇಲೆ ಏನಾಯ್ತೋ ? ಅವಳು ಪಾರ್ಕಿಗೆ ಹೋಗ್ತಾಳಾ?’ ವಿನೋದ್ ಗೆ ಕುತೂಹಲ ಹೆಚ್ಚಾಗಿತ್ತು.

‘ಹೌದು. ಪಾರ್ಕಿಗೆ ಹೋಗ್ತಾಳೆ. ಒಂದು ಸುಂದರ ಸಂಜೆಯಲ್ಲಿ ಅವರಿಬ್ಬರ ಪ್ರೇಮ ನಿವೇದನೆಗೆ ಮನ್ನಣೆ‌ ಸಿಗುತ್ತದೆ. ಕತ್ತಲಾವರಿಸುತ್ತಿದ್ದಂತೆ ಆತ ಅವಳನ್ನು ರಸ್ತೆಯಲ್ಲಿಯೇ ಚುಂಬಿಸುತ್ತಾನೆ.‌ ಅದಕ್ಕವಳಿಂದ ಯಾವ ಪ್ರತಿರೋಧವೂ ಬರುವುದಿಲ್ಲ. ಎಲ್ಲವೂ ಸುಖಾಂತ್ಯವಾಗಿ ಅವರಿಬ್ಬರು ಸುಖವಾಗಿ ಬಾಳಿದರು ಎಂಬ ಜಾನಪದ ಕತೆಯ ಕೊನೆ ಸಾಲಿನಂತೆ ಕತೆ ಮುಗಿಯುತ್ತದೆ.’

‘ಅಯ್ಯೋ ಒಳ್ಳೆಯದೇ ಆಯ್ತಲ್ಲ. ಆ ಕತೆ ಓದಿ ಅವಳ್ಯಾಕೋ ನಿನ್ನ ಮೇಲೆ ಸಿಟ್ಟು ಮಾಡ್ಕೋಬೇಕು ? ಇಂತಹ ಲವ್ ಸ್ಟೋರಿಗಳನ್ನ ಕತೆಗಾರರು ಬೇಕಾದಷ್ಟು ಬರ್ದಿರ್ತಾರೆ. ಅದಕ್ಕೆ ಬುಕ್ ಕೊಟ್ಟ ನೀನ್ಹೇಗೋ ಹೊಣೆ ಆಗ್ತೀಯಾ ?’ ಎಂದ ವಿನೋದ್.

‘ಅದಕ್ಕೂ ಒಂದು ಕಾರಣ ಇದೆ. ಆ ಕತೆಯಲ್ಲಿದ್ದ ಪಾತ್ರಗಳ ಹೆಸರು’

‘ಹಾಗಾದರೆ ಆ ಪಾತ್ರಗಳ ಹೆಸರೇನು ?’

‘ನರಹರಿ ಮತ್ತು ಕವಿತಾ …’

ಎಂದು ನರಹರಿ ಹೇಳುತ್ತಿದ್ದಂತೆಯೇ ವಿನೋದ್ ಸಿಗರೇಟ್ ನ ಕೊನೆಯ ಪಫ್ ಎಳೆದು ಅಲರ್ಟ್ ಆದವನಂತೆ ‘ಹೇ …ಅದ್ಹೇಗೋ ಸಾಧ್ಯ ? ಯಾವುದಾದರೂ ಒಂದು ಹೆಸರು ಮ್ಯಾಚ್ ಆದ್ರೆ ಓಕೆ ಅನ್ಬೋದಪ್ಪ. ಎರಡೂ ಹೆಸರುಗಳೂ ಅದೂ ಒಂದೇ ಕತೆಯಲ್ಲಿ. ಅದರಲ್ಲೂ ಬುಕ್ ಎಕ್ಸ್ಚೇಂಜ್ ಮಾಡಿಕೊಳ್ಳುವವರೇ ಕತೆಯ ಪಾತ್ರಗಳಾಗೋದು.‌ ಅವರಿಬ್ಬರ ಹೆಸರುಗಳೂ ನಿಮ್ಮಿಬ್ಬರ ಹೆಸರುಗಳಿಗೆ ಯಥಾವತ್ತಾಗಿ ಮ್ಯಾಚ್ ಆಗುವುದು ಎಂಥಾ ವಂಡರ್ ಅಲ್ವೇನೋ ?’ ಎಂದು ವಿನೋದ್ ನರಹರಿಯನ್ನು ಹುರಿದುಂಬಿಸಿದ .

‘ವಂಡರ್ ಅಲ್ವೋ ಇದು ನಾನು ಮಾಡಿದ ಬ್ಲಂಡರ್’  ಎಂದ ನರಹರಿ .

‘ಯಾಕೆ ? ಇದಕ್ಕೆಲ್ಲ ನೀನ್ಯಾಕೆ ಕಾರಣನಾಗುತ್ತೀಯಾ ? ಯಾರೋ ಕತೆಗಾರ ತನ್ನ ಕತೆಯೊಳಗೆ ನಿನ್ನ ಹೆಸರಿನ ಪಾತ್ರ ಸೃಷ್ಟಿಸಿದ ಕಾರಣಕ್ಕೆ ಅದು ಇನ್ಯಾರದ್ದೋ ಹೆಸರಿನೊಂದಿಗೆ ಮ್ಯಾಚ್ ಆದ ಕಾರಣಕ್ಕೆ ಅದರಲ್ಲಿ ನಿನ್ನ ತಪ್ಪೇನಿದೆ ? ‘ ಎಂದು ವಿನೋದ್ ಮರುಪ್ರಶ್ನೆ ಹಾಕಿದ.

‘ಆ ಹೆಸರುಗಳನ್ನೇ ಕೊಡಬೇಕೆಂದು ಸೂಚಿಸಿದವನು ನಾನೇ ‘
‘ವಾಟ್ ?  ಯಾರಿಗೆ ಸೂಚಿಸಿದ್ದು ನೀನೆ ?’
‘ಕತೆಗಾರ ಶ್ರೀನಿವಾಸ ಅವರಿಗೆ. ವಿನೋದ್, ನಿನ್ನ ಹತ್ರ ಇನ್ನು ಮುಚ್ಚಿಡೋದರಲ್ಲಿ ಅರ್ಥ ಇಲ್ಲ. I love Kavitha. ಅವಳಿಗೆ ಹೇಳೋ ಧೈರ್ಯ ನನ್ನ ಬಳಿ ಇಲ್ಲ. ಪುಸ್ತಕಗಳ ಬಗ್ಗೆ ಅವಳ ಬಳಿ ಗಂಟೆಗಟ್ಟಲೆ ಮಾತನಾಡುವಾಗ ಇರುವ ಹುಮ್ಮಸ್ಸು ಪ್ರೀತಿಯ ಬಗ್ಗೆ ಮಾತನಾಡಲು ಬಂದರೆ ಠುಸ್ ಎನ್ನುತ್ತದೆ. ಹಾಗಾಗಿ ಅವಳ ಬಳಿ ಹೇಳಲು ಧೈರ್ಯ ಬಾರದೆ ನಾನೇ ಕತೆಗಾರ ಶ್ರೀನಿವಾಸ ಅವರ ಬಳಿ ಹೋಗಿ ನಮ್ಮಿಬ್ಬರ ಪುಸ್ತಕ ಪ್ರೀತಿಯ ಬಗ್ಗೆ ಹೇಳಿ, ತಾನು ಅವಳಲ್ಲಿ ಪ್ರೀತಿ ಹೇಳಿಕೊಳ್ಳಲು ಪೇಚಾಡುತ್ತಿರುವುದನ್ನೂ ಹೇಳಿ‌, ತಮ್ಮ ಮುಂದಿನ ಪುಸ್ತಕದ ಕತೆಯೊಂದರಲ್ಲಿ ನಮ್ಮ ಹೆಸರುಗಳನ್ನು ಬಳಸುವಂತೆ, ಅದೊಂದು ಸಾರ್ಥಕ ಪ್ರೇಮಕತೆಯಾಗಿದ್ದರೆ ಖುಷಿಯೆಂತಲೂ ಹೇಳಿ‌, ಅವರಿಗೆ ತಾನೆಂಥ ಕಟ್ಟಾ  ಓದುಗ ಅಭಿಮಾನಿ ಎಂಬುದನ್ನು ಮನವರಿಕೆ ಮಾಡಿಸಿ ಈ ವಿನಂತಿಯಿಟ್ಟು ಬಂದಿದ್ದೆ. ಪಾಪ, ಅವರು ನನ್ನ ಕೋರಿಕೆಯನ್ನು ಈ ಪುಸ್ತಕದಲ್ಲಿಯೇ ಈಡೇರಿಸಿದರು. ಅದರಲ್ಲೂ ಪುಸ್ತಕದ ಶೀರ್ಷಿಕೆಯ ಕತೆಯಾದ ‘ಸಮಾಗಮ’ದ ಪಾತ್ರಗಳಿಗೇ ನಮ್ಮ ಹೆಸರು ಇಟ್ಟರು.‌ ಆದರೆ ನಮ್ಮ ಸಮಾಗಮವಾಗುವುದರ ಬದಲು ಅವಳು ನನ್ನಿಂದ ಶಾಶ್ವತವಾಗಿ ನಿರ್ಗಮನ ಆಗುವ ಹಾಗಾಯಿತು ನೋಡು’ ಎನ್ನುತ್ತಾ ಬಿಕ್ಕಿಬಕ್ಕಿ ಅಳತೊಡಗಿದ ನರಹರಿಯನ್ನು ನೋಡಿ ವಿನೋದ್ ಕೂಡ ಭಾವುಕನಾದ.

ಯಾರಾದರೂ ಜಗತ್ತಲ್ಲಿ ಇಂತಹದ್ದೊಂದು ವಿನೂತನ ರೀತಿಯ ಪ್ರಪೋಸ್ ಮಾಡಿರಬಹುದಾ ಎಂದು ಯೋಚಿಸುತ್ತಲೇ ವಿನೋದ್ ತನ್ನ ಕ್ಯಾಬಿನ್ ಗೆ ಮರಳಿದ. ನರಹರಿ ಮತ್ತೊಂದು ಸಿಗರೇಟ್ ಸೇಯುತ್ತ ಸ್ಮೋಕಿಂಗ್ ಝೋನ್ ನಲ್ಲೇ ಉಳಿದ…

*                *                   *                      *

“Why were you so harsh on Narahari ? You both are good friends. Was it really required to shout at him like that ? ” ಫುಡ್ ಟರ್ಮಿನಲ್ ನಲ್ಲಿ ಮಧ್ಯಾಹ್ನ ಊಟ ಮಾಡುತ್ತಿರುವಾಗ ಸ್ನೇಹ ಎರಡು ಬಾರಿ ಹೀಗೆ  ಕೇಳಿದ ಮೇಲೆ ಕವಿತಾ ಉತ್ತರಿಸಲೇಬೇಕಾಯಿತು.

‘ಈಡಿಯಟ್ ಕಣೇ ಅವ್ನು. ನಿಜವಾಗಲೂ ಎಷ್ಟು ಖುಷಿ ಪಟ್ಟಿದ್ದೆ ಅವನು ಆ ಪುಸ್ತಕ ಕೊಟ್ಟು ಅದರಲ್ಲೊಂದು ಸರ್ಪ್ರೈಸ್ ಇದೆ ನೀನು ಓದಿ ನಿನ್ನ ಅಭಿಪ್ರಾಯ ಹೇಳು ಅಂದಾಗ. ಯಾವಾಗಲೂ ನಾನು ಶೀರ್ಷಿಕೆ ಕತೆಗಳನ್ನೇ ಮೊದಲು ಓದೋದು. ಅಂತೆಯೇ ಸಮಾಗಮ ಕತೆ ಓದಲು ಕುಳಿತಾಗ :
‘ನರಹರಿ ಮತ್ತು ಕವಿತಾ ಎಂಬಿಬ್ಬರ ಪುಸ್ತಕ ಪ್ರೀತಿ ಬೆರೆತ ರೀತಿ’ ಎಂಬ ಸಾಲು ಓದಿ ಉಬ್ಬಿ ಹೋದೆ.’ ಎಂಥಾ ಕಾಕತಾಳೀಯವಲ್ಲವೆ ? ನಮ್ಮಿಬ್ಬರ ಹೆಸರೂ ಒಂದೇ ಕತೆಯಲ್ಲಿ ಬಳಸಲಾಗಿದೆ ಎಂಬ ವಿಷಯ ನನಗೆ ಅದೆಷ್ಟು ಖುಷಿ ಕೊಟ್ಟಿತು. ಇದನ್ನೇ ಅಲ್ಲವೆ ಅವನು ಸರ್ಪ್ರೈಸ್ ಅಂದಿದ್ದು. ನಮ್ಮಿಬ್ಬರ ಪುಸ್ತಕ ಪ್ರೀತಿಯ ಬಗ್ಗೆ ಒಂದು ಕತೆ. ಅದರಲ್ಲೂ ಪಾತ್ರಗಳ ಹೆಸರೂ ಕೂಡ ನಮ್ಮವೇ. ಆ ಕತೆಯಲ್ಲಿನ ಇಬ್ಬರ ನಡುವೆ ಸಲುಗೆ ಪ್ರೇಮಕ್ಕೆ ತಿರುಗುವ ರೀತಿ , ಅಲ್ಲಿರುವ ಪ್ರಿಯಕರನಿಗೆ ತನ್ನವಳಿಗೆ ಈ ದಿನ ಮುತ್ತಿಡಲೇಬೇಕೆಂಬ ಚೋರ ಚುಂಬನದ ಹಂಬಲ … ಕೊನೆಯಲ್ಲಿ ಇಬ್ಬರ ಪ್ರೀತಿಯ ಸಾರ್ಥಕತೆ’

‘ಎಷ್ಟು ನವಿರಾದ ಭಾವವಿತ್ತು ಗೊತ್ತಾ ಆ ಕಥೆಯಲ್ಲಿ‌. ನಿಜ ಹೇಳಬೇಕೆಂದರೆ ಆ ಕತೆ ಓದುತ್ತಾ ನನ್ನ ಮನದ ತುಂಬಾ ನರಹರಿಯೇ ಆವರಿಸಿಬಿಟ್ಟಿದ್ದ. ಹೌದಲ್ಲವಾ? ನಾವೂ ಆ ಪಾತ್ರಗಳಂತೆಯೇ ಇದ್ದೇವೆ . ನರಹರಿಯೂ ಹೀಗೆಯೇ ಯೋಚಿಸಿರಬಹುದು. ಅವನಿಗೆ ಈ ಪುಸ್ತಕ ಹಿಂತಿರುಗಿಸುವಾಗ ಅದರಲ್ಲೊಂದು ಪತ್ರ ಇಟ್ಟು ನನ್ನ ಮನಸ್ಸಲ್ಲಿದ್ದಿದ್ದನ್ನು ಬರೆದುಕೊಡಬೇಕು ಎಂದು ತೀರ್ಮಾನ ಮಾಡಿದ್ದೆ ಕಣೇ . ಆದರೆ …”

‘ಆದರೆ ಹಾಗೆ ಮಾಡದೆ ಬೆಳಿಗ್ಗೆ ಬಂದು ಎಲ್ಲರ ಎದುರು ಕೂಗಾಡಿ ಅವನನ್ನು ಬೈದೆ. ಅಂತಾದ್ದೇನಾಯಿತು ? ‘ ಸ್ನೇಹ ಗೊಂದಲದಿಂದ ಕೇಳಿದಳು.

‘ಸಮಾಗಮ ಕತೆ ಓದಿ ಖುಷಿಗೊಂಡ ನಾನು ಈ ಬಗ್ಗೆ ಕತೆಗಾರರಾದ ಶ್ರೀನಿವಾಸರ ಬಳಿ ಮಾತಾಡಬೇಕೆಂಬ ಆಸೆಯಿಂದ ಪುಸ್ತಕದ ಟೆಕ್ನಿಕಲ್ ಪೇಜ್ ತೆಗೆದು ನೋಡಿದೆ. ಅದರಲ್ಲಿ ಅವರ ನಂಬರ್ ಇತ್ತು. ಈ ಕಾಕತಾಳೀಯದ ಬಗ್ಗೆ ಅವರ ಗಮನಕ್ಕೆ ತಂದು ನನ್ನ ಮತ್ತು ನರಹರಿಯ ಬಗ್ಗೆ , ನಮ್ಮ ಸ್ನೇಹದ ಬಗ್ಗೆ , ಪುಸ್ತಕ ಪ್ರೀತಿಯ ಬಗ್ಗೆ ಅವರಿಗೆ ಹೇಳಿ ನಮ್ಮ ಹೆಸರು ತಮ್ಮ ಪುಸ್ತಕದಲ್ಲಿ ಬಳಸಿದ್ದಕ್ಕೆ ಧನ್ಯವಾದ ಹೇಳೋಣ ಎಂದು ತಕ್ಷಣ ಕಾಲ್ ಮಾಡಿದೆ.

ನನ್ನ ಪರಿಚಯ ಮಾಡಿಕೊಂಡ ತಕ್ಷಣ ಶ್ರೀನಿವಾಸ ಅವರು ಕಾಲ್ ರಿಸೀವ್ ಮಾಡಿ ;
“ನಿಮ್ಮ ಗೆಳೆಯ ನರಹರಿಯವರು ಆ ದಿನ ಮನೆಗೆ ಬಂದಾಗ ನಿಮ್ಮ ಬಗ್ಗೆ ಭಾಳ ಹೇಳಿದರು. ನನ್ನ ಪುಸ್ತಕದ ಕತೆಯಲ್ಲಿ ನಿಮ್ಮಿಬ್ಬರ ಹೆಸರು ಬರಬೇಕೆಂದೂ, ಅದರಿಂದ ನಿಮ್ಮನ್ನು ಖುಷಿಪಡಿಸುವ ಅವರ ಇಚ್ಛೆಯನ್ನೂ ಹೇಳಿಕೊಂಡರು. ಬಹತೇಕ ಬಾರಿ ನಾವು ಬರೆವ ಕತೆಗಳ ಪರಿಣಾಮ ಏನಾಗುತ್ತದೆ ಎಂದು ತಿಳಿಯುವುದೇ ಇಲ್ಲ . ಹಾಗಿರುವಾಗ ನನ್ನ ಓದುಗರೊಬ್ಬರ ಮನದಾಸೆಗೆ ಒಂದು ಕತೆ ನೆರವಾಗೋದಾದರೆ ಖಂಡಿತಾ ಆಗಲಿ ಎಂಬ ಕಾರಣಕ್ಕೆ ನಾನು ನಿಮ್ಮಿಬ್ಬರ ಕತೆ ಹೇಳುವ ಸಮಾಗಮ ಕತೆಯೊಳಗೆ ‘ಒಂದು ಆಸೆ’ ಎಂಬ ಕತೆ ಬರುವಂತೆ ಬರೆದೆ. ನಿಮಗೆ ಶುಭವಾಗಲಿ ” ಎಂದು ಹತ್ತಾರು ಪುಸ್ತಕ ಪ್ರಕಟಿಸಿರುವ ಗಂಭೀರ ಕತೆಗಾರನಿಗೆ ತಕ್ಕಂತೆಯೇ ನಿರ್ಭಾವುಕರಾಗಿ ಹೇಳಿ ಕಾಲ್ ಕಟ್ ಮಾಡಿದರು.

ಅವರ ಬಳಿ ಮಾತಾಡಲು ನನಗೂ ಏನೂ ಉಳಿದಿರಲಿಲ್ಲ. ಆನಂದದ ತುದಿಯಲ್ಲಿದ್ದವಳನ್ನು ಯಾರೋ ಪ್ರಪಾತಕ್ಕೆ ತಳ್ಳಿದಂತಾಯಿತು. ನರಹರಿಯ ಮೇಲೆ ಇದ್ದ ಪ್ರೀತಿಯಿರಲಿ, ಗೌರವವೂ ನಾಶವಾಯಿತು. ಕೇವಲ ನನ್ನ ಪ್ರೀತಿ ಗಳಿಸಲು ಇಂತಹ ಮೋಸ ಮಾಡಿಬಿಟ್ಟನೆ ಎಂದೆನ್ನಿಸಿತು. ಅವನ ಮೇಲೆ ಅಸಹ್ಯ ಹುಟ್ಟಿತು ಸ್ನೇಹ. ಸಂತೋಷವೆಂಬುದು ಸಂತೋಷದ ಮೂಲ ತಿಳಿದಾಗ ಇಲ್ಲವಾದಂತೆ ಇವನ ಚೀಪ್ ಗಿಮಿಕ್ ಗೆ ಬೇಸರ ಮೂಡಿತು. ಎಂಥ ಆಟ ಆಡಿಬಿಟ್ಟ ನನ್ನ ಮನಸ್ಸಿನೊಂದಿಗೆ. ಬಿಡೇ,  ಇದರ ಬಗ್ಗೆ ಇನ್ನೇನೂ ಮಾತಾಡುವುದು ಬೇಡ.” ಎನ್ನುತ್ತಾ ಕವಿತಾ ಕೈ ತೊಳೆಯಲು ವಾಷ್ ರೂಂ ಗೆ ಹೋದವಳು, ವಾಪಾಸ್ ಬರುವಾಗ ಕಣ್ಣೊರೆಸಿಕೊಳ್ಳುತ್ತ ಹೊರ ಬಂದಳು.

*                 *                     *                     *

ಇತ್ತ ಸ್ಮೋಕಿಂಗ್ ಝೋನ್ ನಲ್ಲಿದ್ದ ನರಹರಿ, ಐದನೇ ಸಿಗರೇಟು ಸುಟ್ಟ ನಂತರವೂ ಕವಿತಾಗೆ ಆ ಕತೆ ಏಕೆ  ಇಷ್ಟವಾಗಲಿಲ್ಲ ಎಂದು ದೀರ್ಘ ಯೋಚಿಸತೊಡಗಿದ. ‘A writer must not know who his readers are.  Lest he should start writing for them’ ಎಂದು ಯಾವಾಗಲೂ ಹೇಳುತ್ತಿದ್ದ ಕವಿತಾ ಶ್ರೀನಿವಾಸರಿಗೆ ಕಾಲ್ ಮಾಡಿಯಾಳು ಎಂಬ ಕಿಂಚಿತ್ ಊಹೆ ಕೂಡ ಅವನಿಗಿರಲಿಲ್ಲ … ಈಗ ಅವನ ಕಿವಿಯಲ್ಲಿ ಗುಂಯ್ ಗುಡುತ್ತಿದ್ದದ್ದು ಒಂದೇ ಮಾತು,”ಇನ್ಮೇಲೆ ನನಗೆ ನೀವು ಯಾವುದೇ ಪುಸ್ತಕ ಓದಲು ಕೊಡಬೇಡಿ ”

*                   *                      *                     *

ಇದಾದನಂತರ ನರಹರಿ ಮತ್ತು ಕವಿತಾಳ ನಡುವೆ ವಿನಿಮಯಗೊಳ್ಳಲಿಕ್ಕಾದರೂ ಏನಿತ್ತು ?
ಪ್ರೀತಿಯೋ …?
ಪುಸ್ತಕವೋ ?

9 comments

  1. ‘ಕತೆಯಾದವರು’- ಖುಷಿಕೊಟ್ಟ ಕಥೆ.ಬದುಕನ್ನು ಹೀಗೂ ನೋಡಬಹುದೇ ಎಂದು ಯೋಚಿಸುವಂತೆ ಮಾಡಿತು.ಲೇಖಕರಿಗೆ ಹಾಗೂ ‘ಅವಧಿ’ಗೆ ಧನ್ಯವಾದ.

  2. ಸುಂದರ ನಿರೂಪಣೆ ಶಿವು…
    ಅದಾಗ್ಯೂ, ಈ ಕವಿತಾ ಕ್ಷಣ ಮಾತ್ರದ ಆಕ್ರೋಶಕ್ಕೆ ಒಳಗಾಗಿ ಧುತ್ತೆಂದು ಇಂಥದೊಂದು ನಿರ್ಧಾರ ತಳೆದದ್ದು ಸಮಂಜಸವಲ್ಲ. ಸಮಾಗಮದ ಓದಿನ ಲಹರಿಯಲ್ಲಿ ನರಹರಿಯನ್ನು ತಾನು ಇಷ್ಟಪಟ್ಟಿದ್ದೇನೆ ಎಂಬುದನ್ನು ಕೂಡ ಮರೆತು ಕಟು ನಿರ್ಧಾರಕ್ಕೆ ಜೋತು ಬಿದ್ದಿದ್ದು ಖಂಡಿತ ನ್ಯಾಯವಲ್ಲ. ಪ್ರೀತಿ ಹುಟ್ಟುವುದೇ ಹಾಗೆ. ಬದುಕಿನ ಯಾವುದೋ ತಿರುವಿನಲ್ಲಿ ಹಲವು ಬಾರಿ ಅವಿರ್ಭವಿಸಿದ ಬಳಿಕವಷ್ಟೇ ಅದು ಕೊನರುತ್ತದೆ. ಹೀಗೆ ನರಹರಿಯು ತನ್ನೊಳಗೆ ಪ್ರಜ್ವಲಿಸಿದ ಪ್ರೇಮವನ್ನು ವಿಶ್ವದ ಅತ್ಯಂತ ವಿಭಿನ್ನ ಶೈಲಿಯಲ್ಲಿ ಕವಿತಳಿಗೆ ನಿವೇದಿಸಿಕೊಳ್ಳುವ ಪ್ರಯತ್ನ ಮಾಡಿದ್ದನಷ್ಟೆ. ಅದ್ಯಾವ ಮಹಾಪರಾಧವೊ? ಅದನ್ನು ಇವಳು ಅಪಾರ್ಥ ಮಾಡಿಕೊಳ್ಳುವುದು ಎಷ್ಟು ಸರಿ? ಒಲಿದ ಜೀವ ಜೊತೆಯಲಿರದೆ ಅವಳಾದರೂ ಹೇಗೆ ನೆಮ್ಮದಿಯಿಂದ ಬದುಕಿಯಾಳು? ತಾನು ಮಾಡಿದ ಪ್ರಮಾದವೊಂದು ನಿಷ್ಕಲ್ಮಶ ಹೃದಯವೊಂದಕ್ಕೆ ಅದೆಷ್ಟು ಘಾಸಿ ಮಾಡಿರಬಹುದೆಂಬ ಅಂದಾಜಿನಿಂದಲಾದರೂ ಅವಳು ಬದುಕಿನಾದ್ಯಂತ ಸ್ವತಃ ಹೃದಯಾಂತರಾಳದಲ್ಲಿ ದಹಿಸಲಾರಳೇ?
    ಇನ್ಯಾವತ್ತಾದರೂ ಅವಕಾಶ ಸಿಕ್ಕಾಗ ಇವರಿಬ್ಬರನ್ನೂ ಒಂದುಗೂಡಿಸಿ ಪ್ಲೀಸ್…!
    – ಈನಿಂಪಾ

    • ಧನ್ಯವಾದಗಳು ‌ನಿಮ್ಮ ಅಭಿಪ್ರಾಯಕ್ಕೆ.‌.. ಸೇರಿಸಲು ಪ್ರಯತ್ನಿಸುತ್ತೇನೆ . .. ಅವಳಲ್ಲಿ ಆಗಲೂ ಅವನ‌ ಬಗ್ಗೆ ಪ್ರೇಮ ಇದ್ದಲ್ಲಿ… ಅವನಲ್ಲಿಯೂ ಅವಳು ಉಳಿದಿದ್ದಲ್ಲಿ

Leave a Reply