ವಿಜಯಕ್ಕನ ‘ಅಕಾಶ’ದ ಫೋಟೋ ಆಲ್ಬಂ

ಚಿತ್ರಗಳು: ಸುರೇಶ ಕಿಣಿ ಹಾಗೂ ‘ಅವಧಿ’ಟೀಮ್ 

‘ಅಜ್ಜಿಮನೆ’ ಎನ್ನುವ ಹೆಸರನ್ನು ತಮ್ಮ ಬಗಲಿನಲ್ಲಿಯೇ ಇಟ್ಟುಕೊಂಡಿರುವ, ಎಲ್ಲರಿಂದಲೂ ‘ಅಕ್ಕ’ ಅಂದು ಕರೆಸಿಕೊಳ್ಳುವ ಕಾರಣಕ್ಕೆ ವಿಜಯಕ್ಕ ಆಗಿರುವ ವಿಜಯಾ ಅವರ ಹೊಸ ಉತ್ಸಾಹಕ್ಕೆ ಸುಚಿತ್ರಾ ಸಭಾಂಗಣ ಸಾಕ್ಷಿಯಾಗಿ ಹೋಗಿತ್ತು.

ಪುಟಾಣಿಗಳಿಗಾಗಿ ಒಂದು ಗೂಡು ಸ್ಥಾಪಿಸುವ ಹುಮ್ಮಸ್ಸಿನಿಂದ ಹೋರಾಟ ವಿಜಯಕ್ಕ ಅದಕ್ಕೆ ಅಜ್ಜಿಮನೆ ಎನ್ನುವ ಹೆಸರು ಕೊಟ್ಟಿದ್ದರು. ಅಜ್ಜಿಮನೆಯಲ್ಲಿ ಸಿಗುವ ಪ್ರೀತಿ ವಾತ್ಸಲ್ಯಗಳು ಪ್ರತೀ ಮಗುವಿಗೆ ಕೊಡಬೇಕು ಎನ್ನುವುದು ಅವರ ಆಶಯವಾಗಿತ್ತು. ಅಂದಿನಿಂದ ಆ ಅಜ್ಜಿಮನೆ ಹೆಸರು ವಿಜಯಕ್ಕ ಹೆಸರಿನ ಜೊತೆ ತಳುಕು ಹಾಕಿಕೊಂಡಿತು.

ಆ ನಂತರ ವಿಜಯಕ್ಕನವರ ಉತ್ಸಾಹಕ್ಕೆ ಹಿಂಜರಿಕೆಯೇ ಇರಲಿಲ್ಲ. ಅಲ್ಲಿಂದ ಮುಂದುವರಿದ ಪಯಣ ಹತ್ತಾರು ದಾರಿ ಸುತ್ತಿ ಮೊನ್ನೆ ‘ಒಂದು ಮುಷ್ಟಿ ಆಕಾಶ’ ಎನ್ನುವ ಕಿರುಚಿತ್ರ ರೂಪಿಸುವವರೆಗೆ ಕರೆ ತಂದಿದೆ.

ಒಳಗಿನ ಖಾಲಿತನವನ್ನು ಬಿಂಬಿಸುವ ಉದ್ಧೇಶ ಹೊತ್ತ ಒಂದು ಮುಷ್ಟಿ ಆಕಾಶ ಅದರ ಜೊತೆ ಅನೇಕ ಇನ್ನೂ ಮುಖ್ಯವಾದ ಸಂಗತಿಗಳನ್ನು ಮಾತನಾಡುತ್ತದೆ. ೨೦ ನಿಮಿಷದ ಈ ಕಿರುಚಿತ್ರ ಕನ್ನಡ, ತುಳು ಹಾಗೂ ಕೊಂಕಣಿ ಮೂರೂ ಭಾಷೆಯಲ್ಲಿ ತಯಾರಾಗಿದೆ. ವಿಜಯಕ್ಕ ಈ ಕಥೆಯ ಹಿಂದೆ ಬಿದ್ದು ಅಚ್ಚುಕಟ್ಟಾಗಿ ಅದನ್ನು ತೆರೆಗೆ ತಂದಿದ್ದಾರೆ.

ಇದರ ಮೊದಲ ಪ್ರದರ್ಶನವನ್ನು ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಹಮ್ಮಿಕೊಂಡಾಗ ನೋಡಲು ದೊಡ್ಡ ದಂಡೇ ನೆರೆದಿತ್ತು. ಖ್ಯಾತ ಚಿತ್ರ ತಜ್ಞ ಬಿ ಸುರೇಶ ಹಾಗೂ ಕವಯತ್ರಿ, ಚಿತ್ರ ಸಾಹಿತಿ ಪಿ ಚಂದ್ರಿಕಾ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರೀತಿ ತುಂಬಿದ ಮಾತುಗಳನ್ನಾಡಿ ವಿಜಯಕ್ಕನವರ ಉತ್ಸಾಹ ಇಮ್ಮಡಿಯಾಗುವಂತೆ ಮಾಡಿದರು.

ಚಿತ್ರ ಪ್ರದರ್ಶನ ಮುಗಿಯುವ ವೇಳೆಗೆ ಅನೇಕರ ಕಣ್ಣಲ್ಲಿ ನೀರು. ಸಭಾಂಗಣ ಅಕ್ಷರಶಃ ಸ್ಥಬ್ಧವಾಗಿತ್ತು. ನಂತರ ಸಂವಾದದಲ್ಲಿ ಮಾತನಾಡಿದ ಅನೇಕರು ಕಣ್ಣುತುಂಬಿಕೊಂಡೇ ಮಾತನಾಡಿದರು.

ಇಡೀ ಕಾರ್ಯಕ್ರಮ ಮುಗಿದ ನಂತರ ಅಜ್ಜಿಮನೆ ವಿಜಯಕ್ಕ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಬರೆದುಕೊಂಡಿದ್ದು ಹೀಗೆ –

ನೀವು ನನ್ನ ಮೇಲಿಟ್ಟ ಪ್ರೀತಿ,ಅಭಿಮಾನ.. ತುಂಬಿದ ಬ್ಯಾಂಕ್ ಬ್ಯಾಲೆನ್ಸ್ ಸ್ಟೇಟ್ಮೆಂಟ್ ನೋಡಿದ ಹಾಗಾಯ್ತು .. ಥ್ಯಾಂಕ್ಸ್ ನಿಮಗೆಲ್ಲರಿಗೂ .💐💐. ಕಷ್ಟಗಳನ್ನು ಎದುರಿಸಿ, ಜೀರ್ಣ ಮಾಡಿಕೊಳ್ಳುವ ಅಭ್ಯಾಸ ಇತ್ತು.. ಸುಖ, ಸಂತೋಷದ ಇಷ್ಟು ದೊಡ್ಡ ಸೈನ್ಯವನ್ನು ಎದುರಿಸುವ ಶಕ್ತಿ ನನ್ನಲ್ಲಿ ಯಾಕೆ ಸಾಧ್ಯವಾಗಿಲ್ಲ?

Leave a Reply