ಜಯಶ್ರೀ ದೇಶಪಾಂಡೆ ‘ಹ್ಯಾಟ್ರಿಕ್’

ಜಯಶ್ರೀ ದೇಶಪಾಂಡೆಯವರ ಮೂರು ಕೃತಿಗಳು ಇದೇ ಭಾನುವಾರ ಬಿಡುಗಡೆಯಾಗುತ್ತಿವೆ.

ಕಳೆದ ಇಪ್ಪತ್ತೈದು ವರ್ಷಗಳಿಂದ ತಮ್ಮ ಕಾದಂಬರಿ, ಕತೆ, ಕವಿತೆ, ಹಾಸ್ಯಲೇಖನ, ಪ್ರಬಂಧ, ಚಿಂತನ, ಪ್ರವಾಸ ಲೇಖನ, ಹಾಗೂ ಸ್ಮೃತಿಲಹರಿಗಳೊಂದಿಗೆ ತಮ್ಮ ಜೀವನದ ಅನುಭವ-ಅನುಭಾವಗಳನ್ನು ಓದುಗರೊಡನೆ ಹಂಚಿಕೊಳ್ಳುತ್ತಾ ಬಂದಿದ್ದಾರೆ. ಜಯಶ್ರೀಯವರ ಏಳು ಕಾದಂಬರಿಗಳು, ನೂರಕ್ಕಿಂತ ಹೆಚ್ಚು ಕತೆಗಳನ್ನು ಬರೆದಿದ್ದಾರೆ.

ಪ್ರಪಂಚದ ಮೂರು ಭೂಖಂಡಗಳ ಉದ್ದಗಲಕ್ಕೆ ಸಂಚರಿಸಿರುವ ಜಯಶ್ರೀಯವರು ಅಲ್ಲಿನ ಭಾಷೆ, ಸಂಸ್ಕೃತಿ, ಜನಜೀವನ, ಪರಿಸರ ಹಾಗೂ ಇತಿಹಾಸಗಳ ಬಗ್ಗೆ ಓದುಗರ ಕಣ್ಮುಂದೆ ನಿಲುಕುವಂತೆ ಭಿತ್ತಿಚಿತ್ರ ಮೂಡಿಸುವ ಹವ್ಯಾಸವನ್ನು ಕಳೆದ ಹದಿನಾರು ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ.

ಜಯಶ್ರೀಯವರು ‘ಕೆಂಪು ಹಳದಿ ಹಸಿರು’, ‘ದೂರ ದಾರಿಯ ತೀರ’, ‘ಕಾಳಿಂದಿ’, ‘ಚಕ್ರವಾತ’, ‘ಸರಸ್ವತಿ ಕಾಯದ ದಿನವಿಲ್ಲ’, ‘ಬೇವು’, ‘ಧರಾಶಯ್ಯಿ’ ಎಂಬ ಕಾದಂಬರಿಗಳನ್ನು ಬರೆದಿದ್ದು, ಇದರಲ್ಲಿ ಮೊದಲ ಆರು ಕಾದಂಬರಿಗಳು ಕನ್ನಡದ ಪ್ರಮುಖ ನಿಯತಕಾಲಿಕೆಗಳಲ್ಲಿ ಧಾರಾವಾಹಿಯಾಗಿ ಮೂಡಿ ಬಂದಿವೆ. ‘ಪದ್ಮಿನಿ’, ‘ಮೂರನೆಯ ಹೆಜ್ಜೆ’, ‘ರೇಖೆಗಳ ನಡುವೆ’ ಎಂಬ ಮೂರೂ ಕಥಾಸಂಕಲನಗಳನ್ನು ಈ ಹಿಂದೆ ಪ್ರಕಟಿಸಿದ್ದಾರೆ. ‘ಹೌದದ್ದು ಅಲ್ಲ, ಅಲ್ಲದ್ದು ಹೌದು’ ಎನ್ನುವುದು ಇವರ ಲಲಿತ ಬರಹಗಳ ಸಂಕಲನ.

ಇವರ  ಹಲವಾರು ಕತೆಗಳು ತೆಲುಗು, ಮರಾಠಿ ಮತ್ತು ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ.ಪ್ರಥಮ್ ಬುಕ್ಸ್ ಸಂಸ್ಥೆಯ ‘ರೀಡ್ ಇಂಡಿಯಾ’ ಮಕ್ಕಳ ಬಹುಭಾಷಾ ಪುಸ್ತಕದ ಮಾಲಿಕೆಯಡಿಯಲ್ಲಿ ಇಂಗ್ಲಿಷ್, ಮರಾಠಿ ಹಾಗೂ ಹಿಂದಿಯಿಂದ ಇವರು ನಲವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ಈ ಮಾಲಿಕೆಯಲ್ಲಿ ಇವರು ಬರೆದ ಕನ್ನಡ ಕತೆಗಳು ಭಾರತದ ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ.

ಅಕ್ಷರ ಫೌಂಡೇಶನ್ ನವರ ‘ಕಲಿಕಾ ಏಣಿ’ ಎಂಬ ಮಕ್ಕಳ ಶೈಕ್ಷಣಿಕ ಮಾಲಿಕೆಯಲ್ಲಿ ಮಕ್ಕಳು ಕಲಿಯುವ ಕನ್ನಡ ಭಾಷೆಯ ಸರಳ, ಸುಧಾರಿತ ಆವೃತ್ತಿಯ ಸಲುವಾಗಿ ಕೆಲಸ ಮಾಡಿದ್ದಾರೆ.

2 comments

Leave a Reply