ದೇಶಭಕ್ತಿಯ ನುಗ್ಗಾಟದಲ್ಲಿ ಕೊಚ್ಚಿಹೋಯಿತು ಕಾಡ ಕಣ್ಣೀರು..

ಒಂದು ದೇಶದ ಮೂಲನಿವಾಸಿ ಜನಸಮುದಾಯ ತನ್ನದೆ ನೆಲದಲ್ಲಿ ಪರಕೀಯರಾಗಿ ಬದುಕುವುದು, ತನ್ನ ಹಕ್ಕುಗಳನ್ನು ಕಳೆದುಕೊಂಡು ಅನಾಥರಾಗುವುದು ಅಥವಾ ಪ್ರಭುತ್ವದ ಕ್ರೌರ್ಯಕ್ಕೆ ತುತ್ತಾಗುವುದು ಅದು ಆ ದೇಶದ ರಾಜಕೀಯ ವ್ಯವಸ್ಥೆ ಯಾವುದೋ ಒಂದು ಅಮಾನವೀಯ ಶಕ್ತಿ ಅಥವಾ ವ್ಯಕ್ತಿಯ ಕೈಯಲ್ಲಿ ಸಿಲುಕಿದೆ ಎಂಬ ಅಪಾಯದ ಸೂಚಕವಾಗಿರುತ್ತದೆ.

ಪುಲ್ವಾಮದಲ್ಲಿ ಪಾಕ್ ಪ್ರೇರಿತ ಉಗ್ರರ ಕುಕೃತ್ಯಕ್ಕೆ 40 ಯೋಧರ ಪ್ರಾಣಾಹುತಿ ನಡೆದ ಬೆನ್ನಲ್ಲೆ ಇತ್ತ ತನ್ನದೆ ನೆಲದ ಸವೋಚ್ಛ ನ್ಯಾಯಪೀಠ 11 ಲಕ್ಷಕ್ಕೂ ಹೆಚ್ಚಿನ ಆದಿವಾಸಿ ಬುಡಕಟ್ಟು ಜನ ಸಮುದಾಯವನ್ನು ಅರಣ್ಯದಿಂಚಿನಿಂದ ಹೊರತಬ್ಬುವಂತೆ ತೀರ್ಪುನ್ನು ಪ್ರಕಟಿಸಿತು. 40 ಸೈನಿಕರ ಹತ್ಯೆಯ ಸೂತಕ ಮತ್ತು ದೇಶಪ್ರೇಮದ ಉನ್ಮಾದಲ್ಲಿ ಮುಳುಗಿ ಹೋದವರಿಗೆ 11.72 ಲಕ್ಷ ಜನ ಆದಿವಾಸಿಗಳು ಕಾನೂನು ಬದ್ದ ನಿರ್ಗತಿಕರಾಗಿ ಬೀದಿಪಾಲಾಗುವ ಸಂಕಟ ಮಾತ್ರ ಗೋಚರಿಸಲಿಲ್ಲ.

ಈ ದೇಶದ ಕಾಡನ್ನೆ ತಮ್ಮ ಬದುಕಿನ ಅವಿಭಾಜ್ಯ ಅಂಗವನ್ನಾಗಿಸಿಕೊಂಡು ಬದುಕಿರುವ ಪಾರಂಪರಿಕ ಅರಣ್ಯವಾಸಿಗಳು, ಆದಿವಾಸಿ ಬುಡಕಟ್ಟುಗಳ ಜೊತೆ ನಡೆದುಕೊಂಡು ಬಂದಿರುವ ಅನ್ಯಾಯಕ್ಕೆ ಒಂದು ಚರಿತ್ರೆಯೇ ಇದೆ. ಹೆಚ್ಚು ಆದಿವಾಸಿ ಬುಡಕಟ್ಟು ವಾಸಿಗಳ ಹೊಂದಿರುವ ದೇಶಗಳ ಸಾಲಿನಲ್ಲಿ ಭಾರತ 13 ನೇ ಸ್ಥಾನದಲ್ಲಿದೆ. ದೇಶದ ಕಾಡಂಚು ಮತ್ತು ಕಾಡಿನೊಳಗೆ ಒಟ್ಟಾರೆ 25ಕೋಟಿ ಜನ ಬದುಕುತ್ತಿದ್ದು, ಇವರುಗಳ ಬದುಕಿನ ಹಕ್ಕಿಗಾಗಿ ಶತಮಾನಗಳಿಂದ ಕೂಗು ಕೇಳಿ ಬರುತ್ತಲೇ ಇದೆ.

ಅದಕ್ಕಾಗಿ ಸಶಸ್ಟ್ರ ಹೋರಾಟಗಳು ನಡೆದಿವೆ ಮತ್ತು ನಡೆಯುತ್ತಲೂ ಇವೆ. ಆದರೆ ಭಾರತದ ಅರಣ್ಯ ಕಾಯ್ದೆ ಬ್ರಿಟೀಷರ ಪ್ರಭಾವಳಿಯಲ್ಲೆ ಮುಂದುವರೆದಿದ್ದು, ಅರಣ್ಯ ರಕ್ಷಣೆಯ ಹೆಸರಿನಲ್ಲಿ ಅರಣ್ಯ ಇಲಾಖೆ ಈ ಜನಸಮುದಾಯವನ್ನು ಪರಿಪರಿಯಾಗಿ ಕಾಡುತ್ತಾ ಬಂದಿದೆ. ಒಂದೆಡೆ ಬಂಡವಾಳಶಾಹಿಗಳು, ಗಣಿಗಾರಿಕೆ, ಮೋಜು ಮಸ್ತಿಯ ರೆಸಾರ್ಟ್ ನಿರ‍್ಮಾಣ ಮತ್ತು ಅಭಿವೃದ್ದಿ ಹೆಸರಿನಲ್ಲಿ ಕಾಲಿಡುವ ಜಾಗತಿಕ ಮಾಫಿಯಾ ಕಾಡನ್ನು ಲೂಟಿ ಹೊಡೆಯಲು ಕೆಂಪು ಹಾಸು ಹಾಕಿ ಸ್ವಾಗತಿಸುವ ಅರಣ್ಯ ಇಲಾಖೆ, ಸರ್ಕಾರಗಳು ಅದೇ ಕಾಡಿನ ಅವಿಭಾಜ್ಯ ಅಂಗವಾಗಿಯೇ ಸಾಮಾಜಿಕ, ಸಾಂಸ್ಕೃತಿಕ ಸಮೃದ್ದಿಯಿಂದ ಕಾಡನ್ನು ಪ್ರೀತಿಸುತ್ತಾ, ಉಳಿಸುತ್ತಾ ಬಂದಿರುವ ಆದಿವಾಸಿ-ಬುಡಕಟ್ಟು ಸಮುದಾಯಗಳನ್ನು ಕಾನೂನು ನೆಪ ಮತ್ತು ಬಲದಲಿ ಒಕ್ಕಲೆಬ್ಬಿಸುವ, ಬೀದಿಗೆ ತಳ್ಳುವ , ಆದಿವಾಸಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗುವ ಕೆಲಸಗಳು ನಡೆಸುತ್ತಾ ಬಂದಿವೆ.

ಆದಿವಾಸಿಗಳ ಹಕ್ಕಿನ ಕೂಗು ಅರಣ್ಯರೋಧನವೇ ಸರಿ, ಹಕ್ಕುಗಳಿಗಾಗಿ ನಡೆವ ಹೋರಾಟಗಳನ್ನು ಪ್ರಭುತ್ವದ ವಿರುದ್ದದ ವಿಧ್ವಂಸಕ ಹೋರಾಟ , ರಾಷ್ಟದ್ರೋಹದ ಹೋರಾಟ ಎಂಬ ಪಟ್ಟಕಟ್ಟಿ ಹತ್ತಿಕ್ಕುವ, ಹೋರಾಟಗಾರರನ್ನು ಕೊಲ್ಲುವ, ನೇಣಿಗೇರಿಸುವ ಕೆಲಸಗಳು ನಡೆಯುತ್ತಿವೆ. ಇದಕ್ಕೆ ಅನೇಕ ಉದಾಹರಣೆಗಳು ನಮ್ಮ ಕಣ್ಣಮುಂದೆ ಇವೆ.

ಆದಿವಾಸಿ, ಪಾರಂಪರಿಕ ಅರಣ್ಯವಾಸಿಗಳ ಬದುಕಿನ ಹಕ್ಕಿನ ಮೇಲೆ ನಡೆಯುತ್ತಾ ಬಂದ “ಚಾರಿತ್ರಿಕಅನ್ಯಾಯ” (historical injustice)ವನ್ನು ತೊಡೆದು ಹಾಕಲೆಂದೆ 2006 ರಲ್ಲಿ ಅಂದಿನ ಪ್ರಧಾನಮಂತ್ರಿ ಡಾ. ಮನಮೋಹನಸಿಂಗ್ ನೇತೃತ್ವದ ಯುಪಿಎ ಸರ್ಕಾರ “ಅನುಸೂಚಿತ ಬುಡಕಟ್ಟು ಹಾಗೂ ಇತರೆ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕು(ಮಾನ್ಯತೆ) ಕಾಯ್ದೆ-2006” ನ್ನು ರೂಪಿಸಿ ಜಾರಿಗೆ ತಂದಿತು.

ಇದೊಂದು ಬಹುದೊಡ್ಡ ಕ್ರಾಂತಿಕಾರಿ ನಿರ್ಧಾರ. ಕಾಡಿನೊಂದಿಗೆ ಪರಂಪರಾಗತವಾಗಿ ಅವಿನಾಭಾವ ನಂಟು ಹೆಣೆದುಕೊಂಡ ಅರಣ್ಯವಾಸಿಗಳ ಬಹುದಿನದ ಕೂಗಿಗೆ ಪರಿಹಾರವೊಂದು ನಾಗರೀಕರ ಸರ್ಕಾರ ಕೊಟ್ಟಂತಾಗಿತ್ತು. ಆದರೆ ಈ ಕಾಯ್ದೆಯ ಅನುಷ್ಠಾನ ಕನ್ನಡಿಯೊಳಗಿನ ಗಂಟಿನಂತೆ ಸಿಕ್ಕಿನಿಂದ ಕೂಡಿದ್ದು ಅವುಗಳನ್ನು ಬಿಡಿಸುವಲ್ಲಿ ಪಕ್ಷಾತೀತವಾಗಿ ಕಳ್ಳಾಟ ನಡೆದಿದೆ.

“ಅನುಸೂಚಿತ ಬುಡಕಟ್ಟು ಹಾಗೂ ಇತರೆ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕು(ಮಾನ್ಯತೆ) ಕಾಯ್ದೆ-2006” ಯಂತೆ ಕಾಡಂಚಿನ ಅಥವಾ ಕಾಡಿನೊಳಗೆ ವಾಸವಿದ್ದು, ಜೀವನಾಧರಕ್ಕಾಗಿ ಅರಣ್ಯಭೂಮಿ ಸಾಗುವಳಿ (2005 ಹಿಂದಿನ ಐದು ವರ್ಷವೆರೆಗೆ) ಮಾಡಿಕೊಂಡಿರುವ ಪರಿಶಿಷ್ಟ ಬುಡಕಟ್ಟು ಸಮುದಾಯಕ್ಕೆ 4 ಹೆಕ್ಟೇರ್ ಗೆ ಸೀಮಿತವಾಗಿ ಭೂಮಿ ಹಕ್ಕು ಮಾನ್ಯ ಮಾಡುವುದು ಮತ್ತು ಇತರೆ ಪಾರಂಪರಿಕ ಆದಿವಾಸಿ ಬುಡಕಟ್ಟುಗಳು ಮೂರು ತಲೆಮಾರು ಅಥವಾ 75 ವರ್ಷಗಳ ಕಾಲ ತಮ್ಮ ಅರಣ್ಯ ವಾಸದ ಬಗ್ಗೆ ಸಾಕ್ಷಿಗಳನ್ನು ಮಂಡಿಸಿ ಭೂಮಿ ಹಕ್ಕನ್ನು ಪಡೆಯುವುದು ಈ ಕಾಯ್ದೆಯ ಮೂಲ ನಿಯಮ.

ಈ ಭೂಮಿ ಮಾರಾಟ ಮಾಡುವಂತಿಲ್ಲ. ಅದನ್ನು ವಂಶಪಾರಂಪರಗತವಾಗಿ ಅನುಭವಿಸುವ ಹಕ್ಕು ಮಾತ್ರ. ಅದರಂತೆ ದೇಶದಲ್ಲಿ ಬುಡಕಟ್ಟು, ಆದಿವಾಸಿಗಳಿಗೆ ಹಲವು ರಾಜ್ಯಗಳಲ್ಲಿ ಹಕ್ಕು ಪ್ರಾಪ್ತಿಯಾಗಿದ್ದರೂ 75 ವರ್ಷದ ಬದುಕಿನ ದೃಢೀಕರಣ ದಾಖಲೆಯ ಕೊರತೆಯಿಂದಾಗಿ ಇಂದು ಲಕ್ಷಾಂತರ ಪಾರಂಪರಿಕ ಅರಣ್ಯವಾಸಿಗಳು ಅಡಕತ್ತರಿಗೆ ಸಿಲುಕಿದ್ದು, ಕಾಡಿನಿಂದ ಹೊರತಳ್ಳಲ್ಪಡುವ ಆತಂಕವನ್ನು ಎದುರಿಸುತ್ತಿದ್ದಾರೆ. ಸರ್ಕಾರ ಇಂತಹದ್ದೊಂದು ಜನಪರ ಎನ್ನಬಹುದಾದ ಕಾಯ್ದೆ ಜಾರಿಗೆ ತಂದಿದ್ದರೂ 75ವರ್ಷದ ಸಾಕ್ಷಿ ಯ ಷರತ್ತಿನಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

‘ಗ್ರಾಮ ಅರಣ್ಯಹಕ್ಕು ಸಮಿತಿ’ಗಳು ಅರಣ್ಯ ಹಕ್ಕು ಮಾನ್ಯ ಮಾಡುವಲ್ಲಿ ಈ ಷರತ್ತಿನ ದಾಖಲೆ ಕೊರತೆಯಿಂದ ಲಕ್ಷಾಂತರ ಆದಿವಾಸಿಗಳ ಅರ್ಜಿಯನ್ನು ವಜಾಗೊಳಿಸಿದ್ದು ಆದಿವಾಸಿಗಳು ಕೇವಲ ಭೂಮಿಯನ್ನಷ್ಟೆ ಅಲ್ಲ ಕಾಡಿನ ಮೇಲಿನ ಹಕ್ಕು, ಬದುಕನ್ನು ಕಳೆದುಕೊಂಡು ನಿರ್ಗತಿಕರಾಗುವ, ತನ್ನದೇ ನೆಲದಲ್ಲಿ ನಿರಾಶ್ರಿತ ಸಮುದಾಯವಾಗಿ ಬದುಕುವ ಸ್ಥಿತಿ ಎದುರಾಗಿದೆ. ಸುಪ್ರೀಂ ಕೋರ್ಟು ಮುಂದೆ ಈ ವಿಷಯವಿದ್ದಾಗಲೂ ಈ ದೇಶದ ಸರ್ಕಾರ ಸಮರ್ಥವಾಗಿ ನ್ಯಾಯಪೀಠಕ್ಕೆ ಕಾಯ್ದೆಯ ಉದ್ಧೇಶವನ್ನು ವಿವರಿಸುವಲ್ಲಿ, ಅಗತ್ಯ ತಿದ್ದುಪಡಿ ತರುವಲ್ಲಿ ಕಿಂಚಿತ್ತೂ ಗಮನಕೊಡದೆ ಹೋದ ಪರಿಣಾಮವೇ ಇಂದು ನ್ಯಾಯಪೀಠ ದೇಶ 11 ಲಕ್ಷಕ್ಕೂ ಹೆಚ್ಚಿನ ಆದಿವಾಸಿಗಳನ್ನು ಕಾಡಿನಿಂದ ಹೊರನೂಕುವಂತೆ ತೀರ್ಪು ನೀಡಿದೆ  (ಸದ್ಯಕ್ಕೆ ಅದೇ ಪೀಠ ತಡೆಯಾಜ್ಞೆ ನೀಡಿದೆ.ಇದು ತಾತ್ಕಾಲಿಕ).

ಇದಕ್ಕೂ ಮುಂಚೆ “ಅನುಸೂಚಿತ ಬುಡಕಟ್ಟು ಹಾಗೂ ಇತರೆ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕು(ಮಾನ್ಯತೆ) ಕಾಯ್ದೆ-2006”ಯಲ್ಲಿನ ಷರತ್ತೊಂದು ಅರಣ್ಯ ಇಲಾಖೆ ಮತ್ತು ಆದಿವಾಸಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದರೆ ಪಾರ್ಲಿಮೆಂಟ್‌ನಲ್ಲಿ ಯಾವೊಬ್ಬ ಜನಪ್ರತಿನಿಧಿಯೂ ಉಸಿರೆತ್ತದೆ ಮೌನವಹಿಸಿದ್ದರು. ಸುಪ್ರೀಂ ಕೋರ್ಟು ನ್ಯಾಯಪೀಠ ಲಕ್ಷಾಂತರ ಜನರ ಆದಿವಾಸಿಗಳನ್ನು ಹೊರಹಾಕುವ ತೀರ್ಪು ನೀಡಿರುವುದರ ಹಿಂದೆ ಕೇಂದ್ರ ಸರ್ಕಾರದ ವೈಫಲ್ಯ ಎದ್ದುಕಾಣುತ್ತಿದೆ

‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ಆಡಳಿತ ಘೋಷವಾಕ್ಯ ವನ್ನು ಹೊಂಕರಿಸುವವರಿಗೆ ಈ ದೇಶದ ಮೂಲನಿವಾಸಿಗಳ ರೋಧನ ಕೇಳಿಸದೇ ಹೋದದ್ದು ದೊಡ್ಡ ವಿಪರ್ಯಾಸ. ಪುಲ್ವಾಮದಲ್ಲಿ 40 ಸೈನಿಕರ ಹತ್ಯೆಯಷ್ಟೇ ಈ ದೇಶ 16 ರಾಜ್ಯಗಳ 11 ಲಕ್ಷ ಆದಿವಾಸಿಗಳ ಬದುಕು ಮೌಲ್ಯಯುತವಾದದ್ದು ಎಂಬುದನ್ನು ಯಾರೊಬ್ಬರೂ ಹೇಳಲಿಲ್ಲ. ಕೇಂದ್ರ ಸರ್ಕಾರ ಕಾಯ್ದೆಯ ಉದ್ಧೇಶ, ಆಶಯವನ್ನು ನ್ಯಾಯಪೀಠದ ಮುಂದೆ ಭಿನ್ನಹಿಸಿಕೊಳ್ಳಲಿಲ್ಲ. ಯಾವ ಭಾದಿತ ರಾಜ್ಯಸರ್ಕಾರಗಳು ಸುಪ್ರೀಂ ಕೋರ್ಟ್ ನ ಮುಂದೆ ಜನರಿಗಾಗಿ ಕೈ ಮುಗಿದು ನಿಲ್ಲಲಿಲ್ಲ. ಮಾಧ್ಯಮಗಳಲ್ಲಿ ಚರ್ಚೆ -ಸಂವಾದಗಳು ಅಬ್ಬರಿಸಲಿಲ್ಲ. ನಮ್ಮ ಮಾಧ್ಯಮ ಪ್ರಭೂತಿಗಳು ಅಧಿಕಾರಸ್ಥರ ಮೂತಿ ತಿವಿದು ಮಾತಿನ ಕುಲುಮೆಯಲ್ಲಿ ಉರಿದು ಮುಕ್ಕಲಿಲ್ಲ. ಪೊಳ್ಳು ದೇಶಭಕ್ತಿಯ ಭೋರ್ಗರೆತೆದಲ್ಲಿ ಎಲ್ಲರೂ ಮೀಯುವಾಗ ಪ್ರಭುತ್ವದ ತಣ್ಣನೆಯ ಕ್ರೌರ್ಯ ತನ್ನದೆ ನೆಲದ ಮೂಲನಿವಾಸಿಗಳನ್ನು ಕಾಡಹೆಣ ಮಾಡುವ ಶಕುನವೊಂದು ನುಡಿಯುತ್ತಿದೆ.

ಒಬ್ಬ ವಿಫಲ ನಾಯಕನ ಜೈಕಾರದಲ್ಲಿ ಮುಳುಗಿಹೋದ, ನೆರೆಯ ಶತ್ರು ನಾಶಕ್ಕೆ ಹಾತೊರೆಯುತ್ತಿದ್ದ ಭಕ್ತಸಮೂಹ ತನ್ನದೆ ನೆಲದ ಮೂಲ ನಿವಾಸಿಗಳು ನಾಶದ ಪ್ರಪಾತಕ್ಕೆ ತಳ್ಳಲ್ಪಟ್ಟ ಭಯಾನಕತೆ ಅರಿವಿದ್ದರೂ ಅರಿವಿಲ್ಲದೆಂತೆ ಮರೆತಹೋದದ್ದು ದುರಂತವೇ ಸರಿ. ಮಾಧ್ಯಮಗಳು ಯುದ್ಧ……ಯುದ್ಧ ಎಂದು ರಕ್ತ ಪಿಪಾಸುಗಳಂತೆ ಅರಚುತ್ತಿರುವಾಗ ಕಾಡಿಂಚಿನ ಜನರ ರಕ್ತ ಕಣ್ಣೀರು ಬಚ್ಚಲ ನೀರಿಂತೆ ಕಂಡಿರಬೇಕು.

ಕರ್ನಾಟಕದಲ್ಲಿ ಕಾಗೋಡು ತಿಮ್ಮಪ್ಪ ಎಂಬ ಹಿರಿಯ ಜೀವವೊಂದು “ಅನುಸೂಚಿತ ಬುಡಕಟ್ಟು ಹಾಗೂ ಇತರೆ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕು (ಮಾನ್ಯತೆ) ಕಾಯ್ದೆ-2006”ಯ ಅಸ್ತ್ರ ಹಿಡಿದು ಆದಿವಾಸಿ ಬುಡಕಟ್ಟು ಜನರಿಗೆ ಭೂಮಿ ಹಕ್ಕು ದಕ್ಕಿಸಲು ಹೆಣಗಾಡಿದ ಏಕೈಕ ನಾಯಕ. “ಹೇ ಕೇಳ್ರಿ ಇಲ್ಲಿ, ಈ ದೇಶದ ಕಾನೂನು, ಕಟ್ಟಳೆಗಳ ಅಂತಿಮ ಗುರಿ ಈ ನೆಲದ ಜನರ ಕಲ್ಯಾಣವೇ ಆಗಿದೆ. ಇದರ ವಿರುದ್ದವಾಗಿ ಯಾವುದೇ ಕಾನೂನಿದ್ದರೆ ಅದನ್ನು ಬೆಂಕಿಗೆ ಹಾಕಬೇಕು. ಭೂಮಿಯ ಹಕ್ಕಿಗಾಗಿ ಬಂದೂಕು ಕೈಗೆತ್ತಿಕೊಳ್ಳಬೇಕಾ?” ಎಂದು ಅಧಿಕಾರಿಗಳ ಸಭೆಯೊಂದರಲ್ಲಿ ಕಾಗೋಡು ತಿಮ್ಮಪ್ಪ ಅವರ ಆಕ್ರೋಶ ಈ ವ್ಯವಸ್ಥೆಯ ಲೋಪವನ್ನು ಬೆತ್ತಲು ಮಾಡಿತ್ತು.

ಈ ದೇಶದ ಆದಿವಾಸಿಗಳ, ದಲಿತರ, ದಮನಿತರ ಬದುಕು ಅಷ್ಟು ಸಲೀಸಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಕಾಡುಮಕ್ಕಳ ಮೇಲೆ ಕತ್ತಿ ತೂಗುತ್ತಿದೆ, ಎಚ್ಚರ!

2 comments

  1. ಮಾಧ್ಯಮಗಳು ಯುದ್ಧ……ಯುದ್ಧ ಎಂದು ರಕ್ತ ಪಿಪಾಸುಗಳಂತೆ ಅರಚುತ್ತಿರುವಾಗ ಕಾಡಿಂಚಿನ ಜನರ ರಕ್ತ ಕಣ್ಣೀರು ಬಚ್ಚಲ ನೀರ0ತೆ ಕಂಡಿರಬೇಕು.

  2. ಕಾಗೋಡು ತಿಮ್ಮಪ್ಪ ನವರಿಂದ ಯಾವ ಪ್ರಯೋಜನವೂ ಆಗುವುದಿಲ್ಲ ಎನ್ನುವುದು ಮೊದಲೇ ಗೊತ್ತಿರುವ ಸಂಗತಿ. ಮೂರು ತಲೆಮಾರು ಎನ್ನುವ ಕಟ್ಟಳೆ ಬದಲಾಯಿಸ ಬೇಕಾದ್ದು ಕೇಂದ್ರ. ಇದು ಕಾಗೋಡು ಅವರಿಗೂ ಗೊತ್ತಿತ್ತು. ಗೊತ್ತಿದ್ದರೂ ತಪ್ಪುದಾರಿಗೆಳೆದರೆ?

Leave a Reply