ಹೆಂಡದ ಗಡಂಗಿನ ಕೂಡಲಸಂಗಮ..

ಡಾ.ವಡ್ಡಗೆರೆ ನಾಗರಾಜಯ್ಯ

ಶನಿವಾರ ಅಕ್ಕಿರಾಂಪುರದ ಸಂತೆಯ ದಿನ. ಅವತ್ತು ಸಂತೆಗೆ ಬರಲಿದ್ದ ನನ್ನ ತಾತನ ಜೊತೆಯಲ್ಲಿ ಅಮ್ಮನ ತವರೂರಾದ ಚಿಕ್ಕನಹಳ್ಳಿಗೆ ನನ್ನನ್ನು ಕಳಿಸಿಕೊಡುವುದಾಗಿ ನಿರ್ಧಾರವಾಗಿತ್ತು. ಏರೊತ್ತು ಮುಗಿದು ಹೊತ್ತಿಳಿಯುವಾಗ ಎರಡು ಮೈಲಿ ದೂರದ ಅಕ್ಕಿರಾಂಪುರಕ್ಕೆ ಅಪ್ಪ ಮತ್ತು ನಾನು ಕಾಲುದಾರಿ ಹಿಡಿದು ನಡೆದುಕೊಂಡು ಹೊರಟೆವು.

ಹೋಗುವ ದಾರಿಯಲ್ಲಿ ದಟ್ಟೈಸಿ ಬೆಳೆದ ಹೊಂಗೆ ತೋಪಿನ ತಂಪು ನೆರಳು! ಅಮ್ಮ ನನ್ನ ತಲೆಗೆ ಹಚ್ಚಿದ್ದ ಬೇಯಿಸಿದ ಅರಳೆಣ್ಣೆ ನೆತ್ತಿ ಮೇಲಿಂದ ಕಿವಿಗಳ ಪಕ್ಕದಲ್ಲಿ ಇಳಿಸುರಿಯುತ್ತಿತ್ತು. ನನ್ನ ಹಣೆಗೂ ಕನ್ನೆಗೂ ಹಚ್ಚಿದ್ದ ಕಪ್ಪು ಸಾಧುಬೊಟ್ಟು 3 ನೇ ತರಗತಿಯಿಂದ 4 ನೇ ತರಗತಿಗೆ ಪಾಸಾದ ಕಳೆಯನ್ನು ಮತ್ತಷ್ಟು ಹೆಚ್ಚುಗೊಳಿಸಿತ್ತು. ಅಜ್ಜಿ –ತಾತನ ಊರಿಗೆ ಹೋಗುತ್ತೇನೆಂದು ನೆನೆದರೂ ಸಾಕು ನನ್ನಲ್ಲಿ ಪರಿಶೆಯ ತೇರು ನೋಡುವಷ್ಟು ಸಂತೋಷ ತುಂಬಿಕೊಳ್ಳುತ್ತಿತ್ತು.

ಸಂಜೆ ಮೂರು ಗಂಟೆಯಷ್ಟೊತ್ತಿಗೆ ಸಂತೆ ಬಯಲು ಸೇರಿದೆವು. ನನ್ನ ಅಮ್ಮನ ಸೋದರ ಸಂಬಂಧಿ ಅಣ್ಣಂದಿರಾದ ‘ಕಾಫಿಗಿಡದ’ ತಿಮ್ಮಯ್ಯ, ದೊಡ್ಡಜೂಲಪ್ಪ, ಚಿಕ್ಕಜೂಲಪ್ಪ, ಚಿಕ್ಕತಿಮ್ಮ, ತಿಮ್ಮಾಜಪ್ಪ ಮುಂತಾದವರು ‘ಉದ್ಯಾಗ’ದ ಮೇಲೆ ಸಂತೆಗೆ ಬಂದಿದ್ದರು. ಈ ನನ್ನ ಸೋದರ ಮಾವಂದಿರು ಸಂತೆ ಬೀದಿಯ ಮರದ ಕೆಳಗೆ ‘ಉದ್ಯಾಗ’ ಮಾಡುತ್ತಾ ಕುಳಿತಿದ್ದರು. ಕಿತ್ತೋದ ಕೆರಗಳ ರಿಪೇರಿ ಕೆಲಸ ಮತ್ತು ಹೊಸ ಮೆಟ್ಟುಗಳನ್ನು ತಯಾರಿಸಿ ಮಾರುವುದನ್ನು ‘ಉದ್ಯಾಗ’ ಎನ್ನುತ್ತಿದ್ದೆವು. ಬಿಟ್ಟಿ ಚಾಕರಿಯ ಕುಳವಾಡಿ ಕೆಲಸ ಮಾಡುತ್ತಿದ್ದ ಅವರು ಸಂತೆಯ ಉದ್ಯಾಗದಿಂದ ನಾಲ್ಕು ಪುಡಿಗಾಸುಗಳ ಮುಖ ನೋಡಬಲ್ಲವರಾಗಿದ್ದರು. ಸಂತೆಯ ದಿನದ ಹೊರತು ಉಳಿದ ದಿನಗಳಲ್ಲಿ ಸುತ್ತಮುತ್ತಲ ಊರುಗಳಿಗೆ ಉದ್ಯಾಗಕ್ಕೆ ಹೋದಾಗ ಅವರಿಗೆ ದವಸ ಧಾನ್ಯ ಮಾತ್ರ ಸಿಗುತ್ತಿತ್ತು.

ಈ ನನ್ನ ಸೋದರ ಮಾವಯ್ಯಗಳು ಇಳಿ ಸಂಜೆಯೊತ್ತಿಗೆ ಉದ್ಯಾಗ ಕೈಬಿಟ್ಟು, ಅಡಪಗಳನ್ನೆಲ್ಲಾ ಪೆಟಾರಿಗಳಿಗೆ ತುಂಬಿ ಮೇಲೆದ್ದು ನಿಂತು ಸುತ್ತಲೂ ಸಂತೆಯ ಜನರನ್ನೊಮ್ಮೆ ದಿಟ್ಟಿಸಿ ನೋಡುತ್ತಾ, ಸೊಂಟದ ಉಡುದಾರಕ್ಕೆ ಪುಟಗೋಸಿಗಳನ್ನು ಭದ್ರಪಡಿಸಿಕೊಂಡು, ತಲೆಗೆ ಸುತ್ತಿದ ಒಲ್ಲಿ ಪೇಟಗಳನ್ನು ಬಿಚ್ಚಿ, ಗಸಗಸನೆ ಮುಖ ಸೀಟಿಕೊಂಡು, ಒಲ್ಲಿಗಳನ್ನು ಹೆಗಲ ಮೇಲೆ ಎಸೆದುಕೊಂಡು ಹೆಂಡದಹಟ್ಟಿಯ ದಾರಿ ಹಿಡಿಯುತ್ತಿದ್ದರು. ಹಸಿರು ಈಚಲ ಗರಿಗಳನ್ನು ಸಿಕ್ಕಿಸಿದ್ದ ಎಲ್ಲಮ್ಮನ ಘಟೆಗೆ ನಮಸ್ಕರಿಸಿ, ಈಚಲ ಹೆಂಡದ ಗಡಂಗಿನ ಮುಂದೆ ಕುಳಿತು ಉದ್ಯಾಗದಿಂದ ಬಂದ ದುಡ್ಡಿನಲ್ಲಿ ಶಕ್ತ್ಯಾನುಸಾರ ಕುಡಿಯುವುದು ವಾರದ ಕಡ್ಡಾಯ ನೇಮವಾಗಿತ್ತು. ಹೆಂಡ ಕುಡಿಯುವುದರಲ್ಲಿ ನಿಸ್ಸೀಮರಾಗಿದ್ದ ಇವರು ಬಾಡು ತಿನ್ನುವುದರಲ್ಲಿ ಅಷ್ಟೇ ರುಸ್ತುಮರಾಗಿದ್ದರು. ‘ಅಪ್ಪನದು ಮೂರು ಬುರೆಯಾದರೆ ಮಗನದು ಆರು ಬುರೆ’ ಎಂಬಂತೆ ಎಲ್ಲರೂ ಪೈಪೋಟಿಗೆ ಬಿದ್ದು ನಾಮುಂದು ತಾಮುಂದೆಂದು ಬುರೆಗಟ್ಟಳೆ ಈಚಲ ಹೆಂಡ ಬಗ್ಗಿಸುತ್ತಿದ್ದರು. ತೆಗದಾರಿಗಳಾಗಿದ್ದ ಅವರು ಕುಡಿಯಲು ಕುಳಿತಾಗ ನೆಂಚಿಕೊಳ್ಳಲು ಉರಿದ ಬಾಡು- ಉರಿಗಾಳು- ಕರಿದ ಮೀನು ಕೊಳ್ಳಲು ಬಲು ತೆಗವು ತೋರಿಸುತ್ತಿದ್ದರು.

3 ನೇ ತರಗತಿಯಿಂದ 4 ನೇ ತರಗತಿಗೆ ನಾನು ಪಾಸಾಗಿದ್ದೇನೆಂದು ಫಲಿತಾಂಶ ಬಂದಿದ್ದರಿಂದಾಗಿ ಸಂತೋಷದಿಂದ ಅಮ್ಮನ ತವರೂರಿಗೆ ಕಳಿಸಿಕೊಡಲು ಮನೆಯಲ್ಲಿ ಒಪ್ಪಿದ್ದರು. ನನ್ನನ್ನು ಊರಿಗೆ ಕರೆದುಕೊಂಡು ಹೋಗುವ ಸಲುವಾಗಿ ನನ್ನ ಅಜ್ಜ ಆ ದಿನ ಅಕ್ಕಿರಾಂಪುರದ ಸಂತೆಗೆ ಬಂದಿದ್ದ. ಅವನು ಕೂಲಿಕುಂಬಳಿ ಮಾಡಿ ವಾರದ ಸಂತೆಗೆ ದುಡ್ಡು ಹೊಂದಿಸಿಕೊಂಡು ತಂದಿದ್ದ. ಅವನದ್ದು ಸಣ್ಣಕರುಳು. ಹೆಂಗರುಳಿನ ಅವನು ಒಂದು ಬುರೆಯಷ್ಟು ಹೆಂಡದ ಮೇಲೆ ಜಪ್ಪಯ್ಯ ಅಂದರೂ ಒಂದು ಹನಿ ಮುಟ್ಟುತ್ತಿರಲಿಲ್ಲ. ಅರ್ಧ ಬೀಡಿ ಸೇದಿ ಉಳಿದರ್ಧ ಬೀಡಿಯನ್ನು ಕಿವಿಗೆ ಸಿಕ್ಕಿಸಿಕೊಂಡಿರುತ್ತಿದ್ದ. ಎಗ್ಗುಸಿಗ್ಗು ಎಗಟು ಮಾನಾಪಮಾನ ಬಿಂಕಬಿಗುಮಾನ ಪೆಗ್ಗೆಪೆಡಸು ಯಾವುದನ್ನೂ ಅಂಟಿಸಿಕೊಳ್ಳದ ಸಂತ ಅವನು. ಕುಡಿದಾಗ ಮೊದಲಿಗಿಂತಲೂ ರವಷ್ಟು ಧ್ವನಿ ಎತ್ತರಿಸಿ ಕೊರಳ ಸೆರೆಯುಬ್ಬಿಸಿ ಹಾಡುಗಳನ್ನು ಪಲುಕುತ್ತಿದ್ದ.

ನಮ್ಮ ಮನೆಯಲ್ಲಿ ಸಾಕುತ್ತಿದ್ದ ಕೋಳಿಗಳನ್ನು ಆಗೀಗ ಸಂತೆಯಲ್ಲಿ ಮಾರಾಟ ಮಾಡಿ, ಆ ಹಣದಿಂದ ನನ್ನ ಅಪ್ಪ ಸಂತೆ ಸಾಮಾನು ಕೊಂಡು ತರುತ್ತಿದ್ದನು. ಹಿಂದಿನ ಶುಕ್ರವಾರದ ರಾತ್ರಿಯೇ ಅಪ್ಪನ ಸೂಚನೆಯಂತೆ ನಾನು ಒಂದೇ ಬೀಡಿನ ಒಂದೇ ಜಪಾತಿಯ ನಾಲ್ಕು ಐನಾತಿ ಹುಂಜಗಳನ್ನು ಹಿಡಿದು ಮಂಕರಿ ಕೆಳಗೆ ಕೌಚಿ ಹಾಕಿದ್ದೆನು. ಸಂತೆ ಖರ್ಚಿಗೆ ಮಾರಾಟ ಮಾಡಬೇಕಾದ ಹುಂಜಗಳವು. ಅವತ್ತು ಅಪ್ಪ ಸಂತೆಯಲ್ಲಿ ಆ ಐನಾತಿ ಹುಂಜಗಳನ್ನು ಹನ್ನೆರಡು ರೂಪಾಯಿಗಳಿಗೆ ತೂರಿಹಾಕಿ ಹೆಂಡದಹಟ್ಟಿ ದಾರಿಯಲ್ಲಿ ನಡೆಯುತ್ತಿದ್ದ ತನ್ನ ಮಾವಯ್ಯಗಳ ಮುಂದೆ ದಿಮ್ಮಲೆರಂಗ ಎಂದು ಪುಟಗೋಸಿ ಬಿಗಿಮಾಡಿಕೊಂಡು ನಗುನಗುತ್ತಾ ನೋಟುಗಳನ್ನು ತೋರಿಸಿದ್ದ. ಅಂತೂ ಸಂತೆಯಲ್ಲಿ ಸಿಕ್ಕಿದ ಅಜ್ಜನ ಕೈಹಿಡಿದುಕೊಂಡು ಅವರೆಲ್ಲರೊಂದಿಗೆ ನಾನು ಹೆಂಡದ ಹಟ್ಟಿಯ ಗಡಂಗಿನ ಮುಂದೆ ಕುಳಿತಿದ್ದೆ!

ಅಕ್ಕಿರಾಂಪುರದ ಹೆಂಡದ ಹಟ್ಟಿಯಲ್ಲಿ ಶನಿವಾರದ ಸಂತೆಯ ದಿನ ಸಂತೆಗೆಂದು ಬಂದಿದ್ದ ಸುತ್ತಮುತ್ತಲ ಊರುಗಳ ಹೆಂಡಪ್ರಿಯರು ಅಣಿನೆರೆದಿದ್ದರು. ಕುಲೇಳು ಹದಿನೆಂಟು ಜಾತಿ ಮತಗಳ ಜನ ಅಲ್ಲಿದ್ದರು. ಒಬ್ಬರು ಕುಡಿದ ಎಂಜಲು ಸೀಸೆ – ಎಂಜಲು ಬುರೆಗಳಲ್ಲಿಯೇ ಮತ್ತೊಬ್ಬರು ಕುಡಿಯುತ್ತಿದ್ದರು. ಎಂಜಲೆಂಬ ಜಾತಿಯೆಂಬ ಗಂಡುಹೆಣ್ಣೆಂಬ ಹಿರಿಕಿರಿಯರೆಂಬ ಯಾವುದೇ ಭೇದವಿಲ್ಲದೆ ಒಟ್ಟುಗೂಡಿ ಕುಡಿಯುತ್ತಿದ್ದ ಕೂಡಲಸಂಗಮ ಅದು.

ಮಧ್ಯ ವಯಸ್ಕ ಸೀನಪ್ಪ, ಒಣಮರದ ಗುಂಬ ಕೊರೆದು ತಯಾರಿಸಿದ ಸುರೆಬಾನಿಯ ನೆತ್ತಿಗೆ ಹಸಿರು ಈಚಲ ಗರಿಗಳನ್ನು ಮುಡಿಸಿ, ಹೊರಮೈ ಹಲಗೆ ಮೇಲೆ ವಿಭೂತಿ ಪಟ್ಟೆಗಳನ್ನು ಎಳೆದು ಕುಂಕುಮವನ್ನಿಟ್ಟು ಪೂಜಿಸಿ ಸಿದ್ಧಪಡಿಸಿರುತ್ತಿದ್ದನು. ಅವನು ಆ ಹೆಂಡದ ಗಲ್ಲಾದಿಂದ ಬುರೆಗಳಲ್ಲಿ ಹೆಂಡ ತುಂಬಿಸಿ ಸೀಸೆಗಳಿಗೆ ಬಗ್ಗಿಸಿ ಕೊಡುತ್ತಿದ್ದರೆ, ಅವನ ಹೆಂಡತಿ ಕೆಂಚಮ್ಮ ಸೆರಗನ್ನು ಸೊಂಟಕ್ಕೆ ಬಿಗಿದುಕಟ್ಟಿ ಸೀಸೆಗಳನ್ನು ತಂದು ಕೊಡುವ, ಹಣ ವಸೂಲಿ ಮಾಡುವ, ಉದ್ರಿ ಲೆಕ್ಕವನ್ನು ಬರೆಯಿಸಿಡುವ ಕೆಲಸ ಮಾಡುತ್ತಿದ್ದಳು. ಹೆಂಡದ ಹಟ್ಟಿಯ ಬಾಗಿಲಿನಲ್ಲಿಯೇ ಚಾಕಣ ಉರಿಬಾಡು ಮೀನು ಬೇಯಿಸಿ ಮಾರುತ್ತಿದ್ದ ಸಾಬರ ಜಬೀಬಯ್ಯಾ ನೋಟ್ ಪುಸ್ತಕವೊಂದರಲ್ಲಿ, ತನ್ನ ಕಿವಿಗೆ ಸಿಕ್ಕಿಸಿಕೊಂಡಿದ್ದ ಸೀಸದ ಕಡ್ಡಿಯನ್ನು ತೆಗೆದು ಲೆಕ್ಕ ಬರೆದಿಡುತ್ತಿದ್ದನು.

ಈಚಲ ಹೆಂಡದ ಗಡಂಗಿನ ಮುಂದೆ ಕುಳಿತಿದ್ದ ನಾನು ಸುತ್ತಲೂ ಕಣ್ಣಾಡಿಸಿ ನೋಡಿದೆ.

ನಮ್ಮೂರಿನ ಜೈನರ ಪ್ರಕಾಶ, ಹೊಲೆಯರ ಲಕ್ಷ್ಮೀನಾರಾಯಣ, ಮಾದಿಗರ ಕರೇತಿಮ್ಮ, ನಾರದ ನಾಗಣ್ಣ, ಲಂಬಾಣಿಗರ ಸೇವ್ಯಾನಾಯ್ಕ, ಚೆನ್ಯಾನಾಯ್ಕ, ರಮ್ಕಿಬಾಯಿ, ಕುಂಚಿಟಿಗರ ತ್ಯಾಗರಾಜ, ಕುರುಡುಗಾನಹಳ್ಳಿಯ ಪಲ್ಲಗಪ್ಪ, ಮಠದ ಈರಗ್ಯಾತಪ್ಪ, ಚೀಲಗಾನಹಳ್ಳಿಯ ನರಸೀಯಪ್ಪ, ಕೊರಮರ ಜುಮ್ಮಯ್ಯ, ಮುಖವೀಣೆ ಅಂಜಿನಪ್ಪ ಇನ್ನೂ ಮುಂತಾದವರಿದ್ದರು. ನನ್ನ ಅಪ್ಪನ ಕೆಲವು ಆತ್ಮೀಯರು ಉರಿಗಾಳು ಉರಿಬಾಡು ಮೀನಿನ ತುಂಡನ್ನು ನನ್ನ ಮುಂದಕ್ಕೊಡ್ಡಿ ತಿನ್ನುವಂತೆ ಪ್ರೀತಿ ತೋರಿಸಿದರು. ನನ್ನ ಅಜ್ಜ ನನಗಾಗಿ ಜಬೀಬಯ್ಯಾನಿಂದ ಮುತ್ತುಗದ ಎಲೆಯಲ್ಲಿ ಉರಿದ ಮಾಂಸ ತಂದುಕೊಟ್ಟಿದ್ದ. ನನ್ನ ಸೋದರ ಮಾವಯ್ಯಗಳು ಮತ್ತು ತಾತ ನನ್ನನ್ನು ಮುದ್ದು ಮಾಡುತ್ತಾ ಹೆಚ್ಚೂಕಮ್ಮಿ ಅರ್ಧ ಸೀಸೆಯಷ್ಟು ಈಚಲ ಹೆಂಡ ಕುಡಿಸಿದ್ದರು. ಮಣ್ಣಿನ ಗಡಿಗೆ ಮಡಕೆಗಳಲ್ಲಿ ತುಂಬಿರಿಸಿದ್ದ ಈಚಲ ಹೆಂಡ ಮಣ್ಣಿನ ಕಮ್ಮನೆಯ ಪರಿಮಳದೊಂದಿಗೆ ನನ್ನ ಹೊಟ್ಟೆ ಸೇರಿ ಜೀವಕ್ಕೆ ತಂಪು ನೀಡಿತ್ತು.

ನಾನು ಒಂದನೇ ತರಗತಿಯ ಹುಡುನಾಗಿದ್ದಾಗ ಅದೇ ಹೆಂಡದ ಹಟ್ಟಿಯಲ್ಲಿ, ಅದಾಗಲೇ ಒಂದು ಲೋಟದಷ್ಟು ಈಚಲ ಹೆಂಡ ಕುಡಿದು ಮತ್ತೇರಿ ಮತ್ತಷ್ಟು ಕುಡಿಯಬೇಕೆಂದು ಹಠ ಹಿಡಿದು ಕಳ್ಳೇಪುರಿಯನ್ನು ಚೆಲ್ಲಾಡಿಕೊಂಡು ಹೆಂಡದ ಹಟ್ಟಿಯ ತುಂಬಾ ಬಿದ್ದು ಒದ್ದಾಡಿದ್ದೆನಂತೆ. ಹಾಗೆಂದು ನನ್ನ ಅಮ್ಮ ಅಪ್ಪ ಅಜ್ಜಿ ತಾತ ಆಗಾಗ ನನಗೆ ನೆನಪು ಮಾಡುತ್ತಿದ್ದರು. 3 ನೇ ತರಗತಿ ಪಾಸಾಗಿರುವ ಸುದ್ದಿಯ ಸಂತೋಷದಿಂದ ಈ ಸಲ ನನಗೆ ಸ್ವಲ್ಪ ಹೆಚ್ಚಿಗೆಯೇ ಕುಡಿಸಿದ್ದರು. ಎಲ್ಲರೂ ಹೆಂಡ ಕುಡಿದ ಬಳಿಕ ಹೊತ್ತು ಮಾಲುವುದರೊಂದಿಗೆ ವಾಲಾಡಿಕೊಂಡು ಓಲಾಡಿಕೊಂಡು ಹೆಂಡದ ಹಟ್ಟಿಯಿಂದ ಆಚೆಗೆ ಕದಲತೊಡಗಿದ್ದರು.

ಕೋಳಿ ಮಾರಿದ ದುಡ್ಡಿನಿಂದ ಸಂತೆ ಸಾಮಾನು ಖರೀದಿಸಿ ಉಳಿದ ದುಡ್ಡನ್ನು ಹೆಂಡದಂಗಡಿಯಲ್ಲಿ ಚುಕ್ತಾ ಮಾಡಿದ್ದ ಅಪ್ಪ. ನನ್ನನ್ನು ತಾತ ಮತ್ತು ಸೋದರ ಮಾವಯ್ಯಗಳ ಕೈಗೊಪ್ಪಿಸಿ ವಡ್ಡಗೆರೆಯ ದಾರಿ ಹಿಡಿದಿದ್ದ. ನಾನು ಅಕ್ಕಿರಾಂಪುರದ ಕೆರೆ ಏರಿ ಮೇಲೆ ತಾತನ ಕೈಹಿಡಿದು, ಅವನ ಹಾಡುಗಳನ್ನು ಆಲಿಸುತ್ತಾ ಚಿಕ್ಕನಹಳ್ಳಿಯ ಕಡೆಗೆ ಹೆಜ್ಜೆ ಹಾಕುತ್ತಿದ್ದೆ.
ತಾತ ಹಾಡುತ್ತಲೇ ಇದ್ದ  “ಎಲ್ಲಿಂದ ನೀ ಬಂದೆ…. ಅಲ್ಲಿಂದ ಏನ್ ತಂದೆ ….. ಇಲ್ಲಿಂದ ಏನ್ ಹೊಯ್ವೆ ಮನಸಾ ….?”

 

 

2 comments

  1. ಆತ್ಮೀಯ ನಾಗರಾಜಯ್ಯನವರೇ…
    ನೀವು ಅದೆಷ್ಟು ಹೃದ್ಯಂಗಮವಾಗಿ ಬರೆದಿದ್ದೀರಿ ಎಂದರೆ ನನಗೀಗ ನಿಜಕ್ಕೂ ಹೊಂಗೆ ತೋಪಿನ ನೆರಳನ್ನು ವಾಸ್ತವದಲ್ಲಿ ಅನುಭವಿಸಬೇಕೆಂಬ ಆಸೆ ಉಂಟಾಗುತ್ತಿದೆ. ಸುರೆಬಾನಿಯ ನೆತ್ತಿಗೆ ಹಸಿರು ಈಚಲು ಗರಿಗಳನ್ನು ಮುಡಿಸಿದ ವೈಭವವನ್ನು ಕಣ್ಣಾರೇ ಕಾಣಬೇಕೆನಿಸುತ್ತಿದೆ. ಗಡಂಗಿನ ಹೆಬ್ಬಾಗಿಲಿನಲ್ಲಿ ಒಂದು ಬಾರಿ ಒಡ್ಡೋಲಗ ನಡೆಸಬೇಕು ಎನಿಸುತ್ತಿದೆ. ಸಂತೆ ಸುತ್ತಿ ನೆರೆದ ಜನರ ಮನಃಪಟಲಗಳನ್ನು ತಾಕಬೇಕೆನ್ನಿಸುತ್ತಿದೆ.
    ಕಾಲಘಟ್ಟ, ಪರಿಸರ, ಪರಿಸ್ಥಿತಿ, ಸಂತೆ–ಬದುಕು, ಸಂಬಂಧಗಳಲ್ಲಿನ ಅಪ್ಯಾಯಮಾನತೆ, ಉದ್ಯಾಗ, ನಾಮ ವಿಶೇಷಣಗಳು, ಎಲ್ಲರೂ ಒಟ್ಟಾಗಿ ಹೆಂಡ ಹೀರಿ ಖುಷಿ ಪಡುವ ಆ ಮೋದ ಇದೆಲ್ಲವನ್ನೂ ಸ್ಫಟಿಕದಷ್ಟೆ ಸ್ಪಷ್ಟವಾಗಿ ಕಣ್ಮುಂದೇ ಸುಳಿದಾಡುವಂತೆ ಕಟ್ಟಿಕೊಟ್ಟಿದ್ದೀರಾ.
    ಧನ್ಯವಾದಗಳು.
    ಹೀಗೆ ಬರೀತಾ ಇರಿ!

Leave a Reply