ಒಂದು ಹಳೆಯ ನೆನಪು…

ಅಡುಗೆ ಮನೆಯಲ್ಲಿ ಕುಕ್ಕರ್ ವಿಷಲ್ ಮಾಡುವುದು, ಗಂಡ ಹೆಂಡತಿ ಇಬ್ಬರೂ ಒಮ್ಮೆಲೇ ಕೆಮ್ಮುವುದು ಏಕಕಾಲಕ್ಕೆ ಜರುಗಿತು. ಇಬ್ಬರೂ ಮುಖ ನೋಡಿಕೊಂಡು ಮುಗುಳು ನಕ್ಕರು. ‘ಏನೋ ನೆನಪಾಯ್ತು’ ಎಂದು ಮೆಲುದನಿಯಲ್ಲಿ ಅವನಿಗೆ ಕೇಳಬಾರದೆಂಬಂತೆ ಹೇಳಿದಳಾಕೆ .’ನನಗೂ ಅಷ್ಟೇ ಏನೋ ನೆನಪಾಯ್ತು’ ಅಂದನಾತ. ಆಗ ಅವಳ ಧ್ವನಿ ಜೋರಾಯ್ತು. ‘ಏನು ಹೇಳು’ ಎಂದು ಕೇಳಿದಳು.
ಮತ್ತೊಂದು ವಿಷಲ್ ಆಗುವಷ್ಟರಲ್ಲಿ ಇಬ್ಬರೂ ಆ ವಿಷಯ ಮರೆತರು. ಅಲ್ಲಲ್ಲ, ಮರೆತಂತೆ ನಟಿಸಿದರು.‌

*               *                *              *           *
ಮರೆತದ್ದೇ ಮತ್ತೆ ನೆನಪಾಗುವಾಗ ಮರೆತಂತೆ ನಟಿಸಿದ್ದು ನೆನಪಾಗದೇ ಇರುತ್ತದೆಯೇ? ಅವರಿಬ್ಬರಿಗೂ ಅದೇ ಆಯಿತು.

ಅವನ ನೆನಪು ;

ಒಂದು ದಿನ ಚಿಕ್ಕವನಿದ್ದಾಗ ಅಪ್ಪ ಯಾಕೋ ಸಪ್ಪಗೆ ತಮ್ಮ ಹಳ್ಳಿ ಮನೆಯ ಕಟ್ಟೆಯ ಮೇಲೆ ಕೂತದ್ದನ್ನು ಗಮನಿಸಿದವನು ಅಡುಗೆ ಮನೆಯಲ್ಲಿದ್ದ ಅಮ್ಮನನ್ನು ಹೋಗಿ ನೋಡಿದ್ದ.‌ ಇದರ ಬಗ್ಗೆ ಏನೂ ತಿಳಿಯದಂತೆ ಇದ್ದವಳನ್ನು ಕಂಡು ಮನೆಯ ಮುಂದಿನ ಗಿಡದಲ್ಲಿದ್ದ ಗುಲಾಬಿ ಹೂವೊಂದನ್ನು ಕಿತ್ತು ತಂದು ಅಪ್ಪನ ಕೈಗೆ ಥೇಟ್ ಪ್ರೇಮ ನಿವೇದನೆ ಮಾಡುವ ಯುವಕನೋರ್ವನಂತೆ ಕೊಟ್ಟಿದ್ದ. ತೀರ ಸಹಜವಾಗಿ ಆ ಹೂವನ್ನು ಪಡೆದ ಅಪ್ಪ, ಯಾವುದೇ ಪ್ರತಿಕ್ರಿಯೆ ನೀಡದೆ ಅದನ್ನು ಜಗುಲಿಯ ಕಿಟಕಿಯಲ್ಲಿಟ್ಟು ಹಿತ್ತಲಿಗೆ ಹೋದ.‌ ಆ‌‌ ರಾತ್ರಿ ಮಂಚದಲ್ಲಿ ಮಲಗಿದ್ದ ಅಪ್ಪ ಬೆಳಗ್ಗೆ ಏಳಲಿಲ್ಲ. ಅಮ್ಮನೂಂದಿಗೆ ಆ ರಾತ್ರಿ ಮಾತಾಡಿದ್ದನ್ನೂ ಅವನು ನೋಡಿರಲಿಲ್ಲ.

ಸಾಯುವ ದಿನ ಅಪ್ಪನಿಗೆ ಗುಲಾಬಿ ಹೂವು ಕೊಟ್ಟ ಮಗ ಮತ್ಯಾರಾದರೂ ಇರಲಿಕ್ಕೆ ಸಾಧ್ಯವೇ ? ಹೂವುಗಳು ಸಾವು ತರಬಲ್ಲವೆ ? ಹೂವಿನೊಂದಿಗೆ ಇರುವ ಮುಳ್ಳುಗಳು ವಿಷಕಾರಿಯೇ? ನಾನು ಬರೀ ಹೂವು ಮಾತ್ರ ಕೊಟ್ಟಿದ್ದಲ್ಲವೆ? ಅದರ ಜೊತೆ ಮುಳ್ಳು ಇರಲಿಲ್ಲ ಅಲ್ಲವೆ ? ಅಪ್ಪನ ಸಾವಿಗೆ ಈಗ ದುಃಖಿಸಲೂ ಆಗದಷ್ಟು ದೂರ ಬಂದಾಗಿದೆ. ಅಮ್ಮ ಗಟ್ಟಿಗಿತ್ತಿ ಎಲ್ಲವನ್ನೂ ನಿಭಾಯಿಸಿದಳು. ಅಷ್ಟಲ್ಲದೆ ನನ್ನನ್ನು ಒಬ್ಬ ಸರ್ಕಾರಿ ಅಧಿಕಾರಿಯಾಗಿ ಮಾಡಲು ಸಾಧ್ಯವಿತ್ತೆ ?

ಎಂದು ಯೋಚಿಸುತ್ತಲೇ ತನ್ನ ಕಛೇರಿಯ ಮೆಟ್ಟಿಲುಗಳನ್ನು ಹತ್ತಿದ.

*              *                *                 *                    *

ಅವಳ ನೆನಪು ;

ಅವನು ಡ್ಯೂಟಿಗೆ ಹೊರಟ ತಕ್ಷಣವೇ ಇವಳು ಬೆಳ್ಳಂಬೆಳಗ್ಗೆ ಮೆಲ್ಲಗೆ ತನ್ನ ಸೂಟ್ ಕೇಸ್ ನಲ್ಲಿಟ್ಟಿದ್ದ ಆಟೋಗ್ರಾಫ್ ತೆಗೆದೆಳು. ನೇರವಾಗಿ ಅದೊಂದು ಪುಟದಲ್ಲಿ ಕಣ್ಣು ನೆಟ್ಟಳು. ಅಲ್ಲಿದ್ದುದು ಈ ನಾಲ್ಕು ಸಾಲುಗಳು :

” ಗೆಳತಿ,
ನಿನ್ನ ನೆನಪು,
ಅದು ,
ನಿನ್ನದೇ ಎರಡು ನೆನಪುಗಳ
ನಡುವಿನ ಜಾಹೀರಾತು ”
‎            – ಅನಾಮಿಕ ಕವಿ.

ಈ ಸಾಲುಗಳ ಹೊರತಾಗಿ ಆ ಪುಟದಲ್ಲಿ ಕೇವಲ ಒಂದು ಸಹಿ ಇತ್ತಷ್ಟೇ. ಆ ಕವಿಯಂತೆಯೇ ಆಟೋಗ್ರಾಫ್ ಬರೆದವನು ಸಹ ಅನಾಮಿಕತೆ ಬಯಸಿದ್ದ. ಅದಕ್ಕೆ ಕಾರಣವು ಅವಳ ನೆನಪಿನಲ್ಲಿತ್ತು. ಆಟೋಗ್ರಾಫ್ ಮುಚ್ಚಿಟ್ಟು, ಆ ದಿನ ನಡೆದದ್ದನ್ನು ಯೋಚಿಸಿದಳು. ಅದು ಕಾಲೇಜ್ ನ ಕೊನೇದಿನ. ಯಾರಿಗೂ ಶತೃಗಳಂತೆ ಬೀಳ್ಕೊಡಲು ಇಷ್ಟವಿರಲಿಲ್ಲ.ಈಗಾಗಲೇ ಪ್ರೇಮಿಗಳಂತೆ ಓಡಾಡಿಕೊಂಡವರಿಂದ ಹಿಡಿದು, ಇನ್ನೂ ಹೇಳಬೇಕಿದ್ದವರು, ಭಗ್ನ ಪ್ರೇಮಿಗಳೂ ಎಲ್ಲರೂ ಉತ್ಸಾಹದಲ್ಲೇ ಇದ್ದರು. ಗೆಳತಿಯರ ಗುಂಪಲ್ಲಿದ್ದ ಅವಳ ಬಳಿ ಬಂದವನೊಬ್ಬ ಒಂದು ಗುಲಾಬಿಯನ್ನು ಅವಳ ಮುಂದೆ ಹಿಡಿದು ನಿಂತ.

ಗುಲಾಬಿಯ ಸೌಂದರ್ಯ ಅವನಿಗೂ ಪಸರಿಸಿತ್ತು. ಅವಳಿಗೆ ಆ ಹೂವನ್ನು ತಿರಸ್ಕರಿಸಲು ಮನಸ್ಸಾದರೂ ಎಲ್ಲಿಂದ ಬರಬೇಕು? ‘ಥ್ಯಾಂಕ್ಸ್. ಸೋ ಕೈಂಡ್ ಆಫ್ ಯೂ’ ಎಂದವಳೇ ತಕ್ಷಣ ತನ್ನ ಕೈಯಲ್ಲಿದ್ದ ಆಟೋಗ್ರಾಫ್ ಕೊಟ್ಟು ‘ಇದರಲ್ಲಿ ಏನಾದರೂ ಬರೀರಿ’ ಎಂದಳು. ಆಗ ಅವನು ಈ ಮೇಲಿನ ಸಾಲುಗಳನ್ನು ಬರೆದುಕೊಟ್ಟು ಹೋದನು. ಇವಳೋ, ಅಪರಿಚಿತನಾದ ಅವನೇನು ಬರೆದಿರಬಹುದೆಂದೂ ಕೂಡ ನೋಡಿರಲಿಲ್ಲ. ಆಮೇಲೆ ಪೂರ್ತಿ ಆಟೋಗ್ರಾಫ್ ಓದಿದಾಗ ಬೇರೆಲ್ಲರೂ ತಂತಮ್ಮ ಹೆಸರು, ವಿಳಾಸ ಬರೆದಿದ್ದರಿಂದ ಈ ಅನಾಮಿಕನ ಬರಹ ಸುಲಭವಾಗಿ ಪತ್ತೆಹಚ್ಚಲಾಯಿತು.

ಆದರೆ ಅದುವರೆಗು ಒಮ್ಮೆಯೂ ಮಾತನಾಡಿಸದ, ಯಾರೆಂದೂ ತಿಳಿಯದವ ಅಷ್ಟು ಗಾಢವಾದ ಸಾಲುಗಳನ್ನು ನನಗೇಕೆ ಬರೆದ? ಆ ದಿನ ಅದೇಕೆ ಹೂವು ಕೊಟ್ಟು ಹೋದ. ತನ್ನ ಅನಾಮಿಕತೆಯಿಂದಲೇ ತನ್ನೆಡೆಗೆ ಸೆಳೆತ ಹುಟ್ಟು ಹಾಕಿ ಹೋಗಿದ್ದೇಕೆ? ಎಂದು ಅವಳು ಮೊದಲೆಲ್ಲ ಭಾಳ ಯೋಚಿಸುತ್ತಿದ್ದಳು. ಕ್ರಮೇಣ ಅದು ಕಡಿಮೆಯಾಯಿತು. ಆದರೆ‌ ಅನಾಮಿಕನಾಗಿ ಉಳಿದವನ ಬಗ್ಗೆ ಕುತೂಹಲ ಇಟ್ಟುಕೊಳ್ಳುವುದು ತನಗೆ ಸರಿಕಾಣಲಿಲ್ಲ ಎಂಬ ಕಾರಣಕ್ಕೆ  ಆ ಅನಾಮಿಕ ಇನ್ಯಾರೂ ಅಲ್ಲ ತನ್ನ ಪತಿಯೇ ಎಂಬ ತೀರ್ಮಾನಕ್ಕೆ ಬಂದಳು. ತನ್ನನ್ನು ಅಷ್ಟೊಂದು ಕಾಳಜಿಯಿಂದ, ಪ್ರೀತಿಯಿಂದ ನೋಡಿಕೊಳ್ಳುವ ಪತಿಯೇ ಆ ಅನಾಮಿಕ ಆಗಿರಲಿಕ್ಕೆ ಸಾಕು ಎಂದು ನಿರ್ಧರಿಸಿದ್ದರಿಂದಾಗಿ ಆ ದಿನ ಬೆಳಗ್ಗೆ  ಕುಕ್ಕರ್ ವಿಷಲ್ ಹಾಕುವುದಕ್ಕೂ ಮೊದಲು ಆಕೆ ‘ರೀ ಇವತ್ತು ಬರೋವಾಗ ನನಗೊಂದು ಗುಲಾಬಿ ಹೂವು ತರ್ತೀರಾ?’ ಎಂದು ಕೇಳಿದ್ದಳು. ಆಗಲೇ ಇಬ್ಬರೂ ಒಟ್ಟಿಗೆ ಕೆಮ್ಮಿದ್ದು ಕೂಡ.

*                  *                      *                       *
ಹೀಗೆ ಇಬ್ಬರೂ ತಂತಮ್ಮ ನೆನಪುಗಳನ್ನು ಮೆಲುಕು ಹಾಕಿದ್ದನ್ನು ಗೌಪ್ಯವಾಗಿಟ್ಟುಕೊಂಡೆವು ಎಂದುಕೊಂಡರು.‌

ಆದರೆ ‘ಗುಲಾಬಿ ಹೂವು ಕೊಟ್ಟು ಅಪ್ಪನನ್ನು ಕಳೆದುಕೊಂಡದ್ದು ನೆನಪಾದವನಿಗೆ ಆಕೆಯ ಬೇಡಿಕೆ ಈಡೇರಿಸುವುದೆಂತು ಎಂಬ ದಿಗಿಲಾದರೆ ಅವಳಿಗೆ ಆ ಸಾಲುಗಳಲ್ಲಿ ಅವನು ನಿಜಕ್ಕೂ ಬರೆದದ್ದು ಯಾರ ನೆನಪಿನ ಬಗ್ಗೆ ಎಂಬ ಸಂಶಯ ಮೂಡಿ ‘ಇವನು ಸಂಜೆ ಹೂವು ತರದಿದ್ದರೆ ಸಾಕು’ ಎಂದುಕೊಂಡಳು.

ಅಲ್ಲಿಗೆ ‘ಗುಲಾಬಿ ಹೂವಿನಿಂದಾಗಿ ಮತ್ತೊಮ್ಮೆ ಬರಬಹುದಾದ ಸಾವನ್ನು ತಪ್ಪಿಸಿಯೇ ತೀರುತ್ತೇನೆ ‘ಎಂಬ ಸಮಾಧಾನ ಅವನದ್ದಾದರೆ,ಆ ಅನಾಮಿಕ ಕೊಟ್ಟ ಹೂವಿನ  ನೆನಪು ಹಾಗೆಯೇ ಅನಾಮಿಕವಾಗಿಯೇ ಉಳಿಯಲಿ ಎಂಬ ಮಧುರ ಭಾವ ಅವಳದ್ದು.

ಒಂದೇ ಗುಲಾಬಿ. ಎರಡು ನೆನಪು. ಒಂದು ಹೂವು; ಮತ್ತೊಂದು ಮುಳ್ಳು !

3 comments

  1. ಉಫ್‌….
    ಪರಸ್ಪರರ ಮಧ್ಯ ಅನ್ಯೋನ್ಯತೆಯ ಜೊತೆಗೆ ಮಧುರ ನೆನಪುಗಳನ್ನೂ ಮನಃಪೂರ್ವಕವಾಗಿ ಹಂಚಿಕೊಳ್ಳುವಂತಹ ಸ್ನೇಹಮಯ ಸಂಬಂಧ ಮೊಳೆತರೆ ಇಂತಹ ದುಗುಡ, ದಿಗಿಲು, ದುಮ್ಮಾನಗಳನ್ನು ಎದುರಿಸುವುದು ಅದೆಷ್ಟು ಸುಲಭವಲ್ಲವೆ? ಯಾವುದೋ ಕಾಲದಲ್ಲಿ ಅಂತರಂಗದೊಳಗೆ ಹೊಕ್ಕ ನೆನಪೊಂದು ಇನ್ಯಾವುದೋ ಕಾಲದಲ್ಲಿ ಆತಂಕವಾಗಿ ಪೀಡಿಸುವ, ಪರಿಸ್ಥಿತಿಯನ್ನೇ ಬದಲಯಾಸುವ ಸ್ಥೈರ್ಯ ಒದಗಿಸುವ, ದಿಗಿಲಾಗಿ ಪೀಡಿಸುವ ಮಧುರ/ಕಠೋರ ನೆನಪುಗಳಿಗೆ ನನ್ನದೊಂದು ಸಲಾಂ!

Leave a Reply