ಇವರ ಕವಿತೆಗಳ ಮೌನಕ್ಕೆ ನೀವು ಸೋಲದಿದ್ದರೆ ಕೇಳಿ..

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಈ ವಾರದ POET OF THE WEEK ನಲ್ಲಿ ಶೋಭಾ ಹಿರೇಕೈ  ಕಂಡ್ರಾಜಿ ಅವರ ಕವನಗಳ ಗುಚ್ಚ ನಿಮಗಾಗಿ..

ಶೋಭಾ ಹಿರೇಕೈ  ಕಂಡ್ರಾಜಿ

ಸದಾ ನದಿಯ ಹುಳು ಜುಳು ಕೇಳುತ್ತಲೇ ಬೆಳದ ಹುಡುಗಿ ಶೋಭಾ. ಒಂದೆಡೆ ರಮಿಸುವ ನದಿ, ಇನ್ನೊಂದೆಡೆ ಅಬ್ಬರಿಸುವ ಸಮುದ್ರ ಎರಡರ ನಡುವೆ ಜೀಕುಯ್ಯಾಲೆಯಾಡುತ್ತಾ ಇದ್ದ ಹುಡುಗಿ ಕಾಲೇಜು ಮೆಟ್ಟಿಲು ಹತ್ತಿದ್ದಾಗ ಹಿಂಬಾಲಿಸಿ ಬಂದದ್ದು ಕವಿತೆ. 

ಶೋಭಾ ಯಾವಾಗ ತಮ್ಮ ಹೆಸರಿಗೆ ಹಿರೇಕೈ ಕಂಡ್ರಾಜಿ ಹೆಸರನ್ನು ಸೇರಿಸಿಕೊಂಡರೋ ಅಂದಿನಿಂದಲೇ ಇವರ ಕವಿತೆಗಳು ನದಿಯನ್ನು ಮುದ್ದಿಸುತ್ತಾ, ಕಡಲನ್ನು ಸಂತೈಸುತ್ತಾ ಹೆಜ್ಜೆ ಹಾಕಲು ಶುರು ಮಾಡಿದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರಾದ ಇವರು ಇನ್ನಷ್ಟು ಹೆಜ್ಜೆ ಹಾಕಿ ಸಿದ್ದಾಪುರ ಸೇರಿಕೊಂಡಾಗ ಇವರ ವೃತ್ತಿಯಾಗಿ ಕೈಯಲ್ಲಿ ಪಠ್ಯ ಪುಸ್ತಕವನ್ನೂ ಮನದಲ್ಲಿ ಕವಿತೆಯನ್ನೂ ಹೊತ್ತು ನಡೆದರು.

ಸಿದ್ದಾಪುರ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕಿಯಾದ ಶೋಭಾ ಅವರ ಮುಂದಿನ ಹೆಜ್ಜೆಗಳು ಎಷ್ಟು ಭರವಸೆ ಹುಟ್ಟಿಸುತ್ತವೆ ಎನ್ನುವುದಕ್ಕೆ ಇಲ್ಲಿರುವ ಕವಿತೆಗಳೇ ಸಾಕ್ಷಿ . ಇವರ ಕವಿತೆಗಳ ಮೌನಕ್ಕೆ ನೀವು ಸೋಲದಿದ್ದರೆ ಕೇಳಿ 

ಇಲ್ಲಿನ ಕವಿತೆಗಳನ್ನು ಕುರಿತು ಮುಂದಿನ ವಾರ ವಿಮರ್ಶಕಿ ಡಾ ಶ್ವೇತಾರಾಣಿ ಮಹೇಂದ್ರ ತಮ್ಮ ಅನಿಸಿಕೆಯನ್ನು ಬರೆಯಲಿದ್ದಾರೆ.

 

 ಕಡಲು ಮತ್ತು ನದಿ

‘ಕಡಲು’ ಪದವೇ… ರೋಮಾಂಚನ!
ನೆನೆದಾಗಲೇಳುವ ಒಲವಿನಲೆಗಳಿಗೆ
ತಡೆಗೋಡೆಯುಂಟೆ?

ನಾನೋ ಕಾಡೂರವಳು
ಬ್ಯಾಗು ಬಗಲಿಗೇರಿಸಿಕೊಂಡ ದಿನಗಳಿಂದಲೂ.. ತುಂಬಿದ
ಹಳ್ಳ ಕೊಳ್ಳ ದಾಟಿ
ಗುಡ್ಡ ಬೆಟ್ಟ ಹತ್ತಿಳಿದು
ದಡದೀಚೆ ಬಂದವಳು.

ಎರಡು ಹೆಣಗಳ ಹೊತ್ತೊಯ್ದಿದ್ದ
ನದಿಯ ಕಣ್ಣಾರೆ ಕಂಡು
ನಾಲ್ಕು ದಿನದ ಮುನಿಸು ಬಿಟ್ಟರೆ
ನನಗೂ.. ನದಿಗೂ ಜನ್ಮ ಜನ್ಮಗಳ ನಂಟು

ಒಮ್ಮೊಮ್ಮೆ ಅನ್ನಿಸಿದ್ದುಂಟು
ನಮ್ಮೂರ ಹೊಳೆಯೇ..
ಕಡಲಾಗಿ ಬಿಡಬೇಕೆಂದು
ಉಪ್ಪಾಗಲಾರದು ಸಿಹಿಯೊಡಲು
ನನ್ನವನ ಮೈ ಬೆವರೂ .. ಹಿತವೆನ್ನುವಂತೆ

ಗೊತ್ತು ನದಿ ಕಡಲಾಗದೆಂದು
ಬರ ಬಿಸಿಲ ಕಳೆದು ಸಂಜೆಯಲ್ಲೊಮ್ಮೆ
ನಾನೇ ಘಟ್ಟ ಇಳಿಯಬೇಕು ಅದರೊಂದಿಗೆ

ಅಲ್ಲಿ ಕಡಲಿನೆದೆಗೊರಗಿ ಮುಖವದ್ದಿ
ಮಿಂದು ನೆಂದು
ಭರತವಿಳಿತಗಳಲಿ ಈಜಾಡಿ ಅಲೆಯ ಹೊದ್ದು ನಿದ್ದೆ ಹೋಗಬೇಕು

ನೊರೆಯ ಭೋರ್ಗರೆತಕೂ..
ಅಲೆಗಳೇದುಸಿರಿಗೂ..
ಚಿಪ್ಪಿನೊಳಗಿನೊಂದೊಂದು ಕತೆಗೂ..
ಕಿವಿಯಾಗಬೇಕು

ದಂಡೆಯ ಮರಳಿನ ಮೇಲೆ
ಹೊಸ ತಾವೊಂದ ಹುಡುಕಿ
ನನ್ನ ಹೆಜ್ಜೆಯನ್ನೊಮ್ಮೆ ಊರಿ ಬರಬೇಕು
ಕಡಲೂರಿಗೆ ಹೋದ ನೆನಪಿಗಾಗಿ.

ಮಸುಕಾಗುವ ಸಂಕಟ

“ಪಕ್ಕಾ ಇಷ್ಟೇ … ಇಷ್ಟಿವೆ ನೋಡು”ಎಂದು
ನಾನುಟ್ಟ ಸೀರೆ ನೆರಿಗೆಯ ಲೆಕ್ಕ
ನೀ ಕೊಟ್ಟ ದಿನವೇ
ಆ ಸೀರೆಯೆಂದರೆ ಪಂಚ ಪ್ರಾಣವಾಯಿತು ನೋಡು.

ಉಳಿದವಕ್ಕೂ ಒಂದೊಂದು ನೆಪ
ನೀ ಹೇಳಿದಷ್ಟು ಸುಲಭವಲ್ಲ
ಎತ್ತಿ ಮೂಲೆಗಿಡುವುದು.

ಹಳದಿ ಸೀರೆ ಮಕ್ಕಳಿಗಿಷ್ಟ
ನೀಲಿ ನನಗೆ
ದೊಡ್ಡ ಬಾರ್ಡರ್ ನಿನ್ನದೇ
ಮೊದಲ ಕೊಡುಗೆ
ತಿಳಿ ಗುಲಾಬಿ ” ನೀನೇ.. ಉಡು ನಿನಗೇ ಒಪ್ಪುತ್ತದೆ ” ಎಂದು ಅವ್ವ ಕೊಟ್ಟಿದ್ದು

ಕಪ್ಪೋ.. ಮೊದಲ ಸಂಬಳದ ನೆನಪು
ಕೆಂಪಂಚಿನ ಇಳಕಲ್ ಅತ್ತೆಯ ಪ್ರೀತಿಗೆ
ಹಸಿರಲ್ಲಿ ಸೀಮಂತದ ಬಯಕೆ
ಅಚ್ಚ ನೇರಳೆಯಲ್ಲಿ ತೊಟ್ಟಿಲ ಲಾಲಿ

ಅದಕ್ಕೇ.. ಯಾವುದನ್ನು ಎತ್ತಿಡಲಿ ಹಳೆಯವೆಂದು ??
ನೀ ಹೇಳಿದಸ್ಟು ಸಲೀಸೆ?
ಎತ್ತಿ ಬದಿಗಿಡುವುದು.

ಮೈಯ್ಯನಪ್ಪಿ ಬೆವರಿಗಂಟಿ ಸರಸರನೆ
ಎದೆಗಿಳಿದ ಸೀರೆಗಳಿಂದು
ಸುಕ್ಕಾಗಿರಬಹುದು
ನೆನಪು ಮಾಸಲೇ?

ಈಗೀಗ ನನಗೂ… ಗೊತ್ತಾಗುತ್ತಿದೆ
ಮಸಕು ಮಸುಕಾಗುವ ಸಂಕಟ.

ತವರು ತಾರಸಿಯಾಗುತ್ತಿದೆ

‘ಮನೆಕಂಬಳ’ ಮುಗಿಸಿ ಕರಿ ಹೊತ್ತು
ಕತ್ತು ನೋವೆದ್ದ
ದಿನಗಳೆಲ್ಲಾ ಕಳೆದು
ಹಂಚಿನ ಮಾಡೊಂದ
‘ಮನೆ ಕೋಳು’ ಕಂಡಕ್ಷಣ
ಅವ್ವ “ಈ ಜನ್ಮಕ್ಕಿಷ್ಟು ಸಾಕು”ಎಂದಿದ್ದಳಂತೆ
ಅವಳ ಬಸಿರಲ್ಲಿ ನಾನು ಮಿಂದೆದ್ದು
ಮುಳುಗೇಳುತ್ತಿದ್ದುದನ್ನು ಮರೆತು

ಆ ಸಗಣಿ ಸಾರಣೆಯ
‘ನಂದ ಗೋಕುಲದಲ್ಲೇ’… ನನ್ನ
ಬಾಲ್ಯ ಜಾರಿ ಬಾಳೆದಿಂಡಾಗಿ
ಬಿತ್ತಕ್ಕಿ ಬೀರಿ ನಾ ಹೊರಟ ಘಳಿಗೆ
ಬಿಕ್ಕಿ ಉಮ್ಮಳಿಸಿದ್ದೆ
ಮನೆಯೇ.. ತವರಾದುದನ್ನು ಅರಿತು

ತವರೀಗ ತಾರಸಿಯಾಗುವ ಹೊತ್ತು
ಇಳಿಸಬೇಕಿದೆ ಒಂದೊಂದೇ.. ನೆನಪುಗಳನ್ನು
ಸೇರಿಸಿಟ್ಟ ಬೈನೆ ಅಟ್ಟದಿಂದ

ಬಿದಿರು ತೊಟ್ಟಿಲೊಳಗಿನ ನನ್ನ
ಹಾಲು ಬಟ್ಟಲಿಗೆ ತಾವಿದ್ದೀತೆ?
ತಾರಸಿಯ ನುಣುಪು ನಾಗಂದಿಗೆಯೊಳಗೆ?

ಅಜ್ಜನ ಕೋಲು, ಅಜ್ಜಿಯ ಕುಟ್ಟೊರಳು
ಮಜ್ಜಿಗೆ ಕಡಗೋಲು, ಬೆತ್ತದ ಕಣಜಕೆ
ಅಲ್ಲ್ಯಾವ ಮೂಲೆ?
ಬೀಸೋ-ತಿರಿಸೋ ಕಲ್ಲು ಸೇರಿ
ಅವ್ವನ ಈಚಲು ಚಾಪೆಯ
ಒಪ್ಪಿಕೊಂಡೀತೇ.. ಅಣ್ಣನ ಗ್ರ್ಯಾನೈಟು ನೆಲ?

ಹೌದು,
ಆಚೆ ಎತ್ತಿ ಈಚೆಗಿಡುವುದು
ಒಂದೇ.. ಎರಡೇ..
ತವರೆಂದರೆ ಬರಿ ಹಂಚಿನದೊಂದು ಮಾಡೇ?

ಯಾವುದಕ್ಕೂ.. ಹಳೆ ಮನೆಯ
ಕೋಳಿಳಿಸುವ ಮೊದಲೊಮ್ಮೆ
ಹೋಗಿ ಬರಬೇಕು
ಅಟ್ಟವನೊಮ್ಮೆ ಏರಿ
‘ ಕೋಳು ಗಂಬಕೆ’ ಕಟ್ಟಿದ
ನನ್ನ ‘ ಸಿರಿ ದೊಂಡಲಿನ’ ಮುತ್ತು ಮಣಿಗಳನ್ನೆಲ್ಲ
ಒಂದೊಂದೂ.. ಬಿಡದೇ
ಆರಿಸಿ ತರಬೇಕು.

ನಿನ್ನ ಬರುವಿಗೆ ಕಾದು

ನೀ… ಬರುವುದು
ಖಾತ್ರಿಯಾದಾಗಿನಿಂದ
ಕನಸುಗಳು ಬಣ್ಣ ಹಚ್ಚಿಕೊಳ್ಳುತ್ತಿವೆ

ರಂಗೋಲಿ ಕಟ್ಟೆಯಲ್ಲಿ
ಚುಕ್ಕಿಗಳ ಸಾಲು
ಸೇರಿಯಾಗಿದೆ

ಗೂಡಲ್ಲಿದ್ದ ಮುದ್ದು ಗಿಳಿಯು
ಮೊದ್ದು ಮೊದ್ದಾಗಿ
ಮಾತು ಕಲಿಯುತ್ತಿದೆ

ಗುಲಾಬಿ ಗಿಡದ ಚಿಗುರುಗಳು
ಮಾತಾಡಿಕೊಳ್ಳುತ್ತಿವೆ
ನೀ… ಬಂದ ದಿನವೇ….
ಮೊಗ್ಗೊಡೆಯುವೆವೆಂದು

ನೀನೋ…..
ಹೂಬಿಸಿಲು ಮಳೆಯಿರುವ
ದಿನವೇ.. ಬಂದುಬಿಡು
ಗಲ್ಲಿಗಳ ಶೃಂಗರಿಸಲು
ಮಳೆಬಿಲ್ಲೂ… ಬೇಕಲ್ಲ

ಯುದ್ಧ-ಬುದ್ಧ

ಮತ್ತೇ….
ಯುದ್ಧವಂತೆ ಬುದ್ಧ
ಯಾವ ಬಂದೂಕಿಗೆ
ಬಾಯ ತುರಿಕೆಯೋ ಕಾಣೆ
ಮತ್ತೆ ಬಂದಿದೆಯಂತೆ
ನರ ಬೇಟೆಯ ಸಮಯ

ಸಿದ್ಧ ಮಾಡುತ್ತಾರಲ್ಲಿ
ಹೆರವರ ಮಕ್ಕಳನ್ನು
ಬಲಿ ಕೊಡುವ ಪೀಠಕ್ಕೆ
ಇಲ್ಲಿಎದೆಯ ಕರಿಮಣಿಯನ್ನೊಮ್ಮೆ
ಮುಟ್ಟಿ ಮುಟ್ಟಿ ಅವಚುತ್ತಾರಿವರು

ಇನ್ನೋರ್ವರೆಲ್ಲೋ…
ಖುರ್ಚಿಯ ಕಾಲುಗಳನ್ನು
ಗಟ್ಟಿ ಮಾಡಿಸಿ ಕೊಳ್ಳುತ್ತಾರೆ
ಮುಂದಿನ ರಂಗದ
ಭರ್ಜರಿ ತಾಲೀಮಿನೊ0ದಿಗೆ

ನೀ ಬರಲು ,
ಈಗಲೇ… ಸರಿಯಾಗಿದೆ ಕಾಲ
ಬಂದುಬಿಡು
ಬೆರಳೇ… ಬೇಕೆಂದವನಿಗೆ
ನೀ ಹೇಳಿದ ಕಥೆಯನ್ನೊಮ್ಮೆ ಹೇಳಿಬಿಡು
ಯುದ್ಧ ನಿಂತರೂ ನಿಲ್ಲಲಿ ಇಲ್ಲಿ.

ನಾವು ಮತ್ತು ಅವರು

ಇಲಿ ಕೊರೆದ ಮನೆ ಗೋಡೆಗೆ
ಮಣ್ಣ ಮೆತ್ತಿಯೇ ಬಂದಿದ್ದಾರಿಲ್ಲಿ
ಮಹಡಿ ಮನೆಗೆರಡು
ಕಂಬ ಎಬ್ಬಿಸಲು

ಅವರ ಮೈ ಬೆವರಿಗಿಷ್ಟು
ಕೂಡಿಸಿ ಕಳೆದು ಲೆಕ್ಕ ಹಾಕಿ
ಕೂಲಿ ಕೊಡುವ ನಾವುಗಳು
ನಮ್ಮ ಮೈ ಬೆವರನ್ನು
ಹೇಳಿದಷ್ಟು ಕಟ್ಟಿ ಇಳಿಸಿ ಬರುತ್ತೇವೆ

ಸಂಜೆ ಮೀನು ಮತ್ತು
ಮಾರುದ್ದ ಜಡೆಯ ಮಗಳಿಗೆರಡು
ರಿಬ್ಬನ್ನು ಒಯ್ಯುವಾಗ
ನಗುತ್ತವೆ ಅವರ ಕೈಯಲ್ಲಿ
ನಾವೇ.. ಕೊಟ್ಟ ನೋಟುಗಳು
ಇಲ್ಲಿಯ ಬರಕತ್ತಿನ ಬದುಕ ಕಂಡು

ಕೊನೆಗೂ… ಕಂಡದ್ದೇನು ಇಲ್ಲಿ?
ಮುಚ್ಚಿದ ಬಾಗಿಲ ಒಳಗಡೆ
ಕೋರೈಸುವ ಗ್ಲಾಸು ಹೊಳೆಯುವ ಟೆರೇಸು
ಬಿಟ್ಟರೆ ಹಸಿರ ಕೊಂದು
ಜಾರುವ ನೆಲ ಹಾಸು

ದುಡಿದು ರಾತ್ರಿ ಮನೆ ಸೇರಿದ ಅವರೋ
ಜೋಗುಳ ಕೇಳಿಸಿ ಕೊಂಡಂತೆ
ನಿದ್ದೆ ಹೋಗುತ್ತಾರಲ್ಲಿ ಜೋಪಡಿಯಲ್ಲಿ

ನಾವೋ…
ದಿಂಬಿನ ಜೊತೆ ನಿದ್ದೆಯನ್ನೂ ಮಾರುವವರಿಗಾಗಿ ಬರ ಕಾಯುತ್ತಿದ್ದೆವಿಲ್ಲಿ
ಈ ಮಹಡಿ ಮನೆಯಲ್ಲಿ.

 ಗುರ್ ಮೆಹರ್ ಅಂತರಂಗ

ಅವರಿವರ ಬಂದೂಕ ತುದಿಯಲ್ಲಿ
ಹೂವಿನ ಮೊನಚಿತ್ತೇ?
ಇಲ್ಲವಲ್ಲ?
ಮತ್ತೇ…
ಯುದ್ಧವನ್ನು ಯುದ್ಧವಲ್ಲದೇ
ಇನ್ನೇನನ್ನಲಿ?

ಯಾವ ಕಣಿವೆ ಮರಳಿಸುವುದು
ನಾ ಕಳಕೊ0ಡ ವಾತ್ಸಲ್ಯವನ್ನು?
ಯಾವ ಕುರ್ಚಿಯ ಬಳಿ
ಕೇಳಲಿ ನ್ಯಾಯ?

ಬೇಕೇ?
ನಮ್ಮ ಬಿಸಿ ರಕ್ತಕೂ
ಕೊಳಚೆಯ ಗಬ್ಬು
ಕಪ್ಪು ಕೇಸರಿಗಳ ಜಿದ್ದಾ ಜಿದ್ದು.

ಬಣ್ಣದ ಮೇಲೂ.. ರಾಡಿಯ
ಎರಚುತ್ತಿರುವವರಾರು?

ಈಚೆಗಿರುವುದೇ… ಆಚೆ
ಆಚೆಗಿರುವುದೇ.. ಈಚೆ

ಈಚೆ ಆಚೆಗಳ ನಡುವೆ
ಅದೇ.. ಮಣ್ಣು ಅದೇ ನೀರು
ಅದೇ.. ಗಂಧ, ಅದೇ ಗಾಳಿ
ರಕ್ತ ಬೇರೆಯೇ ಮತ್ತೇ?

ಬೇಕೆ ಯುದ್ಧ?
ನನ್ನಂಥ ತಬ್ಬಲಿಗಳ ಕೇಳಿ

ಹೇಳು ಅಶೋಕ?
“ಕಳಿಂಗ” ನಿನ್ನ ಕಾಡಿದಂತೆ
“ಕಾರ್ಗಿಲ್ ” ನನ್ನ ಕಾಡುತ್ತಿದೆ
ಯುದ್ಧವನ್ನು ಯುದ್ಧವಲ್ಲದೇ
ಇನ್ನೇನನ್ನಲಿ?

ಬದಿಗಿಟ್ಟ ಬಟ್ಟೆ

ಅವಳೋ.. ಮುಟ್ಟಿನ ಬಟ್ಟೆಯಂತವಳು
ಹೊರ ಜಗುಲಿಗೆ
ನಿಷಿದ್ಧವಾದೊಂದು ಕೈ ಚೌಕದ ಚಿಂದಿ

ತಿಂಗಳಿಗೊಮ್ಮೆ ಬಳಸಿ
ಹಂಚಿನ ಸಂದಿಯಲ್ಲೆಲ್ಲೋ…
ತೂರಿಸಿ ಬಿಟ್ಟರೆ
ಮರು ಮಾಸದವರೆಗೆ
ಆ ಸಂದಿಯೊಳಗಿನ ಬಂಧಿ!

ಕರವಸ್ತ್ರದಂತೆ ಅಂಗಳದ
ಗಣೆಯ ಮೇಲೆಲ್ಲ
ಮೈಚೆಲ್ಲಿ ಹಾರಾಡಬೇಕು
ಬಯಲ ಗಾಳಿಯನೊಮ್ಮೆ ಉಸಿರಾಡಬೇಕೆನ್ನುವ ಅವಳ ಕನಸುಗಳಿಗೆಲ್ಲ
ಅಘೋಷಿತ ಕರ್ಫ್ಯೂ..

ಅವನೋ…?
ಬಂದಾಗಲೆಲ್ಲ ಸ್ವರ್ಗದ
ಕಥೆಯನ್ನೇ… ಹೇಳುವುದು
ಸ್ವರ್ಗಕ್ಕಿನ್ನು ಮೂರೇ ಗೇಣೆನ್ನುವಾಗ
ಗಂಟಲ ಪಸೆಯಾರಿ, ಬಾಯಾರಿ
ಇವಳ ನರಕದ ಕಥೆಗಳದ್ದು
ಮೌನ ಸಮಾಧಿ

ಉಂಡು ತಿಂದು ಸದ್ದಿಲ್ಲದೆ
ಎದ್ದು ಹೋಗುವ ಅವನೊಬ್ಬ
‘ತಿಂಗಳ ಪ್ರವಾದಿ’
ಇವಳವನ ಕೈದಿ

39 comments

 1. ಚೆಂದದ ಕವನಗಳು… ಇಲ್ಲಿ ಯುದ್ಧ ಇದೆ, ಬೆವರು ಇದೆ, ಮುಟ್ಟಿದೆ, ಮೈಲಿಗೆಯಂತಾದ ಅವಳ ಬದುಕಿದೆ, ಜಟಿಲಗೊಂಡಿರುವ ಖುರ್ಚಿಯ ತಹತಹವನೆಲ್ಲ ಎಳೆದು ಬಯಲಲ್ಲಿಟ್ಟಿದ್ದಾರೆ. ಜೊತೆಗೆ ಕನಸುಗಳ ಪುಟಿದೇಳಿಸಿ, ಮನಸ್ಸು ಹಗುರ ಗೊಳಿಸುತ್ತ ಜೊತೆಗೆ ಕರೆದೊಯ್ಯುವ ತಾಯ್ತನವಿದೆ. ಕವಿಗೆ ಅಭಿನಂದನೆ. ಓದಿದ ನೀವೆಲ್ಲರೂ ಸ್ನೇಹಿತರಿಗೂ ಓದಿಸಿ.
  ಯಮುನಾ ಗಾಂವ್ಕರ್

  • ಮೇಡಂ ತುಂಬಾ ಚಂದ ಪ್ರತಿಕ್ರಿಯಿಸಿದ್ದೀರಿ. ತುಂಬಾ ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ.

  • ಧನ್ಯವಾದಗಳು ಮೇಡಂ. ನಿಮ್ಮ ಪ್ರೋತ್ಸಾಹಕ್ಕೆ

 2. ಶೋಭಾ..ಮೊದಲ ಮೂರು ಕವಿತೆಗಳಂತೂ ಬಾರಿ ಬಾರಿ ಓದುವಂತೆ ಪ್ರೇರೇಪಿಸಿದವು..ನನಗೆ ನನ್ನದೇ ಕವಿತೆಯೇನೋ ಎಂಬಷ್ಟು ಹತ್ತಿರವಾದವು..ಕವಿತೆ ಎಂಬುದು ಹಳ್ಳ ಕೊಳ್ಳ ಬೆಟ್ಟ ಸಮುದ್ರದ ಜೊತೆಗೆ ಒಟ್ಟೊಟ್ಟೊಗೆ ಅನುಸಂಧಾನ ಮಾಡುತ್ತ ಬದುಕುತ್ತಿರುವ ನಮಗೆ ಒಂದು ಹಸಿರು ತುಂಬಿದ ನಮಗಾಗಿಯೇ ಇರುವಂತಿರುವ ಒಂಟಿ ಕಾಲುಹಾದಿಯಷ್ಟು ಆಪ್ತ…ಹಾಗಾಗಿ ಸದಾ ಕವಿತೆಯನ್ನೇ ಉಸಿರಾಡುತ್ತೇವೆ ನಾವು.ಬಹುದಿನಗಳ ನಂತರ ಒಳ್ಳೆಯ ಕವಿತೆ ಓದಿದೆ..ಶುಭಹಾರೈಕೆಗಳು ನಿನಗೆ

  • ರೇಣು ಮೇಡಂ ಪ್ರೀತಿಯ ವಂದನೆಗಳು ನಿಮ್ಮ ಚಂದ ಪ್ರತಿಕ್ರಿಯೆಗೆ ಮತ್ತು ಪ್ರೋತ್ಸಾಹಕ್ಕೆ

 3. ತುಂಬ ಒಳ್ಳೆಯ ಕವಿತೆಗಳು ಹೇಳಬೇಕಾದ್ದನ್ನು ಸದ್ದಿಲ್ಲದೇ ಹೇಳಿ ಸೀದ ಎದೆಯೊಳಗೆ ಹೊಕ್ಕು ಗಹನವಾಗುತ್ತ ಆವರಿಸಿಕೊಳ್ಳುತ್ತವೆ

  • ತುಂಬಾ ಧನ್ಯವಾದಗಳು ಮೇಡಂ. ನಿಮ್ಮ ಪ್ರೋತ್ಸಾಹಕ ನುಡಿಗೆ

 4. ತುಂಬಾ ಚೆನ್ನಾಗಿವೆ‌ ಕವಿತೆಗಳು…… ಅಭಿನಂದನೆಗಳು

 5. ಸಣ್ಣ, ಸೂಕ್ಷ್ಮ , ವಿಷಯಗಳು ಕೂಡಾ ಕವಿತ್ವಕ್ಕೆ ಕಾಲುದಾರಿಯಾಗಿದ್ದು ಆಪ್ಯತೆಗೆ ಕಾರಣವಾಗಿವೆ. ..ಎಲ್ಲವೂ ಇಸ್ಟವಾದ್ವು…..

  • ಥ್ಯಾಂಕ್ ಯೂ ಸರ್ ಪ್ರೋತ್ಸಾಹಕ್ಕೆ

 6. ತುಂಬಾ ಒಳ್ಳೆಯ ಕವಿತೆಗಳು, ತಾವು ಒಂದು ಹೆಣ್ಣಗಿದ್ದರು ಸಹ ನೇರವಾಗಿ ಅಭಿವ್ಯಕ್ತಪಡಿಸಿದ್ದರಿ ಶುಭಾಶಯಗಳು ತಮಗೆ….
  ಮಹಾಂತೇಶ ಹೊದ್ಲೂರ
  ಬಾಗಲಕೋಟ

  • ಥ್ಯಾಂಕ್ ಯೂ ಸರ್ ಪ್ರತಿಕ್ರಿಯೆಯ ಪ್ರೋತ್ಸಾಹಕ್ಕೆ

 7. ತುಂಬಾ ಚೆಂದದ ಕವನಗಳು.ಎದೆಯಾಳದ ಭಾವನೆ ಗಳ ಕಡಲು ಭೋರ್ಗರೆದು ಉಬ್ಬರಿಸುವಂತೆ , ಆ ಭಾವನೆಗಳ ಸುಂದರ ಜೀಕು.ಮಸುಕಾಗುವ ನೆನಪು, ತವರಿನ ತಾರಸಿ ಒಂದೊಂದೂ ಈ ಜೀವನದ ಬದಲಾಗುವ ಮಜಲುಗಳ ಮೌನ ರಾಗ!

  • ಥ್ಯಾಂಕ್ ಯೂ ಮೇಡಂ ಪ್ರತಿಕ್ರಿಯೆಯ ಪ್ರೋತ್ಸಾಹಕ್ಕೆ

 8. ಗುರ್ ಮೆಹರ್ ಅಂತರಂಗ,‌ಯುದ್ಧ ಮತ್ತು ಬುದ್ಧ ಇಷ್ಟದ ಕವಿತೆಗಳು. ‌ತಣ್ಣನೆಯ ಪ್ರತಿರೋಧ ಈ ಕವಿತೆಗಳಲ್ಲಿ ಇದೆ.‌ ಇನ್ನುಳಿದ ಕವಿತೆಗಳಲ್ಲಿ ಕನಸು ಕನವರಿಕೆ, ಸಂಭ್ರಮ, ಸಣ್ಣ ವಿಷಾಧವೂ ಇದೆ. ಶಬ್ದಗಳ ಜೊತೆ ಹೆಚ್ಚು ಗುದುಮುರಗಿ ಬೀಳದ ಕವಯತ್ರಿ ನವಿರಾಗಿ ಹೇಳುತ್ತಾ ಹೋಗುತ್ತಾರೆ…ತನ್ನೊಂದಿಗೆ ತಾನೇ ಸಂಭಾಷಣೆ ಮಾಡಿದಂತೆ….
  ಬೆಳಕಿನ ಬೆರಗು ಇಲ್ಲಿನ ಕವಿತೆಗಳಿಗಿದೆ.

  • ಸದಾ ನನ್ನ ಕವಿತೆಗಳಿಗೆ ನಿಮ್ಮ ಪ್ರೋತ್ಸಾಹದ ಎರಡು ನುಡಿ ಬರೆಯಲು ಪ್ರೇರಣೆ ಸರ್. ಧನ್ಯವಾದಗಳು ಪ್ರೋತ್ಸಾಹದಾಯಕ ನುಡಿಗೆ

 9. ಒಂದೊಂದು ಕವಿತೆಯದು ಒಂದೊಂದು ಅಂತರಂಗ. ಸರಳ ಪದಗಳ ಭಾವಪೂರ್ಣ ಕವಿತೆ.
  ಯುದ್ಧ ಆಕ್ರೋಶದ ಹಿಂದೆ ಸಾಮಾನ್ಯರ ಚಟಪಟಿಕೆ ಹಿಡಿದ್ದಿಟ್ಟಿರುವುದು,ತವರು,ಕಡಲು,ನದಿ,…ಎಲ್ಲದರ ಆಪ್ತತೆಯಿದೆ……ಒಳ್ಳೆಯ ಕವನಗಳನ್ನು ನೀಡಿದ್ದಿಯಾ ಶೋಭಾ.ಅಭಿನಂದನೆಗಳು.

  • ಎಷ್ಟು ಚೆಂದದ ಕವಿತೆಗಳು.ಅಭಿನಂದನೆಗಳು ಶೋಭರವರೇ

  • ಥ್ಯಾಂಕ್ ಯೂ ಗೆಳತಿ ನಿನ್ನ ಪ್ರೋತ್ಸಾಹಕ್ಕೆ.

  • ಸ್ಮಿತಾ ಮೇಡಂ . ತುಂಬಾ ಖುಷಿ . ನಿಮ್ಮ ಪ್ರತಿಕ್ರಿಯೆಗೆ

 10. ಕವಿತೆಗಳು ಇಷ್ಟವಾದವು, ಅಭಿನಂದನೆಗಳು .

  • ಥ್ಯಾಂಕ್ ಯೂ ಸರ್ ಪ್ರೋತ್ಸಾಹಕ್ಕೆ

 11. ಬಾಲ್ಯದ ಆಪ್ತತೆಯಿಂದ ವರ್ತಮಾನದ ವರೆಗೂ ಬೆಸೆದುಕೊಂಡಿರುವ ಕವಿತೆಗಳು…. ಒಡಲೊಳಗಿಂದಲೇ ಬಂದು ಒಡಲನ್ನೇ ತಲುಪಿ ಆಪ್ತವಾಗುತ್ತವೆ.ಶುಭಾಶಯಗಳು.

  • ಥ್ಯಾಂಕ್ ಯೂ ಸರ್ ,ನಿಮ್ಮ ಆಪ್ತ ಹಾರೈಕೆಗೆ

 12. ತುಂಬ ಒಳ್ಳೆಯ ಕವಿತೆಗಳು.
  ‘ ಅವಧಿ’ ಯದೊಂದು ಒಳ್ಳೇ ಪ್ರಯೋಗ.

  • ಅವಧಿಗೂ.. ನಿಮಗೂ.. ಇಬ್ಬರಿಗೂ ವಂದನೆ.

 13. ನಿಮ್ಮ ಕವಿತೆ ಗಳ ಮೌನ ಕ್ಕೆ ನಿಜಕ್ಕೂ ಸೋತಿದ್ದೇನೆ . ಮನಕ್ಕೆ ಹತ್ತಿರ ವಾಗುವ ಕವಿತೆ ಗಳು.
  ಅಭಿನಂದನೆಗಳು

 14. ನಿಮ್ಮ ಕವಿತೆ ಗಳ ಮೌನ ಕ್ಕೆ ನಿಜಕ್ಕೂ ಸೋತಿದ್ದೇನೆ.
  ಅಭಿನಂದನೆಗಳು

 15. ಒಂದಕ್ಕಿಂತ ಒಂದು ಚಂದ ಇದೆ.. ಮೌನವಾಗೇ ಕಾಡ್ತಿವೆ.

 16. ತವರು ತಾರಸಿ ಆಗುತ್ತಿದೆ ..ಇಂತಹ.. ಚೆಂದ ಕವಿತೆ…..ಎಲ್ಲವನ್ನು ಓದಿದೆ ಎಂದೋ ಸ್ಕ್ರೀನ್ ಕೋನೆಯಾದಾಗಲೇ ತಿಳಿದದ್ದು…. ಇನ್ನು ಹೆಚ್ಚು ಸಾಹಿತ್ಯ ಕೃಷಿ ನಿಮ್ಮಿಂದ ಆಗಲಿ…

 17. ಸುಂದರ ಕವನಗಳನ್ನುಓದಿಸಿದಕ್ಕೆ ಧನ್ಯವಾದಗಳು

 18. ತುಂಬಾ ಚೆನ್ನಾಗಿ ಬರೆದಿರುವಿರಿ.
  ನನಗಂತೂ ತುಂಬಾ ಖುಷಿಯಾಗಿದೆ.

Leave a Reply