ಕುಪ್ಪಲಿ ಪದ್ಮ ಅವರ ‘ಸೆಕೆಂಡ್ ಹಸ್ಬೆಂಡ್’


ಮೂಲ ತೆಲಗು : ಕುಪ್ಪಿಲಿ ಪದ್ಮ

ಬದರಿ ನಾರಾಯಣ್ ಬಿಸಿಲುನಾಡು ಬಳ್ಳಾರಿಯ ರೂಪನಗೂಡಿಯವರು. ಅಭಿಯಂತರರಾಗಿರುವಾಗ ನೆಚ್ಚಿನ ಬರಹದಲ್ಲಿ ತೊಡಗಲು ಆಗಲಿಲ್ಲ ಎಂಬ ಕೊರಗು ಇವರನ್ನು ಸದಾ ಕಾಡುತ್ತಿತ್ತು. ಇದು ನೀಗಿದ್ದು ವೃತ್ತಿಗೆ ವಿದಾಯ ಹೇಳಿರುವ ಈ ಸಮಯದಲ್ಲಿ. ಇವರು ವಸುದೇಂದ್ರ ಅವರ ಎರಡು ಕಥೆಗಳನ್ನು ತೆಲುಗಿಗೆ ಅನುವಾದಿಸಿದ್ದಾರೆ.

ಕನ್ನಡಕ್ಕೆ : ಬದರಿ ರೂಪನಗುಡಿ

ಅದು ಭವ್ಯವಾದ ಜಗಮಗಿಸುವ ಐದುನಕ್ಷತ್ರಗಳ ಹೋಟೆಲ್. ವಿಶಾಲವಾದ ಬಫೆ ಬ್ರೇಕ್ಫಾಸ್ಟ್ ಲಾಂಜ್ನಲ್ಲಿ ಕುಳಿತಿದ್ದಳು ದಕ್ಷಿಣ. ಎಂಟು ಘಂಟೆಯಾಗಲಿಕ್ಕೆ ಇನ್ನೂ ಐದುನಿಮಿಷ ಬಾಕಿಯಿತ್ತು., ಅಲ್ಲಿನ ಫ್ರೆಂಚ್ ವಿಂಡೋದಿಂದ ಬೆಳಗಿನ ಎಳೆಬಿಸಿಲು ಮಸುಕು ಮಸುಕಾಗಿ ಕಾಣುತ್ತಿತ್ತು. ಹೊರಗೆ ಗೋಡೆಯ ಕಡೆಗೆ ವಾಲಿದಂತಿದ್ದ ಮಾವಿನಮರದ ಕೊಂಬೆಗಳಿಗಿದ್ದ ಮಾವಿನಕಾಯಿ ಸಹ ಕಿಟಕಿಯೊಳಗಿಂದ ತಿಳಿಹಸಿರು ಬಣ್ಣದಲ್ಲಿ ಅಂದವಾಗಿ ಕಾಣ್ತಿದ್ದವು.
ಇಲ್ಲಿಂದ ಹೊರಗೆ ನೋಡಿದರೆ ಎಲ್ಲಾ ಮಸುಕು ಮಸುಕಾಗಿ ಕಾಣ್ತಿದೆ. ಈಗಾಗಲೇ ಬದುಕು ಜಡಿಮಳೆಯಲ್ಲಿ ತೊಯ್ದ ಹಾಗಾಗಿದೆ. ಈಗ ಬರುವವನಿಂದಾದರೂ ಜೀವನದಲ್ಲಿ ನಾನು ಬಯಸಿದ ಬೆಳಕು ಬರಲಿ ತಂದೆ ಶ್ರೀರಾಮ ಚಂದ್ರ ಪ್ರಭೂ. ಟೈಮು ಎಂಟಾಗ್ತಿದೆ. ಅನಿಲ್ ಎಂಟಕ್ಕೆ ಬರ್ತೀನಿಂದಿದ್ದ. ಅವನು ಹದಿನೈದು ವರ್ಷ ಅಮೆರಿಕದಲ್ಲಿದ್ದೋನು ಸಮಯ ಪಾಲನೆ ರೂಡಿಯಾಗಿರುತ್ತದೆ. ಆದರೆ, ಹೀಗೆ ಮೊದಲೇ ಬಂದು ಕಾಯ್ತಿದ್ದರೆ ಈ ವಿಚಾರಕ್ಕೆ ನಾನು ತುಂಬಾ ಡೆಸ್ಟರೇಟ್ ಆಗಿದ್ದೀನಿ ಅಂದುಕೊಳ್ತಾರಾ? ಒಂಚೂರು ಲೇಟಾಗಿ ಬಂದಿದ್ರೆ? ಹಾಗೆ ಲೇಟ್ ಮಾಡಿ ಬಂದ್ರು, ಇವಳಿಗೆ ಟೈಮ್ ಸೆನ್ಸ್ ಇಲ್ಲಾ ಅಂದುಕೊಂಡರೆ?’

ಎಲ್ಲಾವೂ ಹಾಗಾದ್ರೆ, ಹೀಗಾದ್ರೇ ಅನ್ನೋ ಅನುಮಾನಗಳೇ. ಯೋಚನೆಗಳ ಸುಳಿ ಹೀಗೇ ಸುತ್ತುತ್ತಿರುವಾಗಲೇ ಅನಿಲ್ ಅವಳೆದುರು ಬಂದು ನಿಂತು ಹಲೋ ಅಂದ. ಅವಳೂ ನಗುತ್ತಾ ಹಲೋ ಅಂದಳು. ಅವನು ಎದುರಿನ ಕುಚರ್ಿಯಲ್ಲಿ ಕೂತ. ಕೆಲವೇ ಕ್ಷಣ ಅವಳನ್ನು ನೋಡಿ, ಎದ್ದುನಿಂತು ಬನ್ನಿ ಅನ್ನುತ್ತಾ ಪ್ಲೇಟುಗಳಿಟ್ಟಿದ್ದ ಕಡೆಗೆ ನಡೆದ. ಬೇಕಾದ ಪದಾರ್ಥ ಒಂದೊಂದಾಗಿ ಪ್ಲೇಟಿನಲ್ಲಿಟ್ಟುಕೊಂಡು ಟೇಬಲ್ ಹತ್ತಿರ ಬಂದು ಕೂತರು.
ಸೋ… ನಾವಿಬ್ಬರೂ ಈಗ ಮುಖಾಮುಖಿ ಭೇಟಿಯಾಗಿ ಒಬ್ಬರನ್ನೊಬ್ಬರು ನೋಡಿದ ಹಾಗಾಯ್ತು. ನನಗೆ ನೀವು ಒಪ್ಪಿಗೆಯಾಗಿದ್ದೀರಿ. ನನ್ನ ಬಗ್ಗೆ ಎಲ್ಲಾ ವಿಷಯಗಳು ಈಗಾಗಲೇ ಚಾಟಿಂಗ್ನಲ್ಲಿ, ಸ್ಕೈಪ್ನಲ್ಲಿ ತಿಳಿಸಿದ್ದೀನಿ. ನನಗಿಬ್ಬರು ಮಕ್ಕಳು. ಹೆಂಡತಿ ತೀರಿಕೊಂಡು ಆರು ತಿಂಗಳಾಯ್ತು. ನಾನೀಗ ಇಂಡಿಯಾಗೆ ವಾಪಸ್ ಬಂದ್ಬಿಟ್ಟಿದ್ದೀನಿ. ಬಿಜಿನೆಸ್ ಎಲ್ಲಾ ಇಲ್ಲೇ ಇನ್ಮೇಲೆ. ನನ್ನ ಪೇರೆಂಟ್ಸ್ ನಂಜೊತೇಲೇ ಇರ್ತಾರೆ. ಇನ್ನೂ ನೀವೇನಾದ್ರೂ ಕೇಳ್ಬೇಕಂತಿದ್ರೆ ಕೇಳ್ಬೋದು ಅಂದ ಅನಿಲ್.
ಹೀಗೆ ಹೇಳಬೇಕಂದುಕೊಂಡಿದ್ದು ನೇರವಾಗಿ ಯಾವುದೇ ಸಂಕೋಚವಿಲ್ಲದೇ ಪಟ ಪಟಾಂತ ನೇರವಾಗಿ ಹೇಳ್ಬಿಡೋದು ಅಮೆರಿಕದಲ್ಲಿದ್ದಾಗ ರೂಡಿಯಾಗಿತ್ತೋ ಏನೋ? ಅಥವಾ ಇವನ ಸ್ವಭಾವವೇ ಹೀಗಾ…? ಅಂತ ಮನಸ್ಸಿನಲ್ಲೇ ಅಂದುಕೊಂಡ್ಲು.
ನನ್ನ ಬಗ್ಗೆ ಹೇಳ್ಬೇಕಂದ್ರೆ…, ನಿಮಗೆ ಈಗಾಗ್ಲೇ ತಿಳಿಸಿದಂತೆ ನಾನು ಪ್ರೀತಿಸಿ ಮದುವೆಯಾಗಿದ್ದೆ. ದುರಾದೃಷ್ಟಕ್ಕೆ ಅವರು ತೀರಿಕೊಂಡ್ರು. ನಾನು ಒಬ್ಬಂಟಿಯಾದೆ. ನನ್ನ ತಂದೆ ತಾಯಿ ಇದೇ ಊರಲ್ಲಿರ್ತಾರೆ ಅಂದಳು ದಕ್ಷಿಣ.
ಹಾಗಾದ್ರೆ… ನಿಮ್ಮ ಮದುವೆ ಆದಾಗಿನಿಂದಾ ಈಗಿರೋ ಮನೆಯಲ್ಲೇ ನೀವೊಬ್ಬರೇ ಇದ್ದೀರಲ್ವಾ? ನಿಮ್ಮ ಪೇರೆಂಟ್ಸ್ ಜೊತೆ ಅಲ್ಲ ತಾನೆ ಕೇಳಿದ ಅನಿಲ್.
ಹೌದು
ಸರಿ.. ನಿಮಗೆ ನನ್ನ ಜೊತೆ ಮದುವೆ ಒಪ್ಪಿಗೆಯಾದ್ರೆ, ರಿಜಿಸ್ಟರ್ ಮ್ಯಾರೇಜ್ ಮಾಡ್ಕೊಳ್ಳೋಣ. ನಾನು ಇಂಡಿಯಾಗೆ ವಾಪಸ್ ಬಂದ್ಮೇಲೆ ಮಾಡ್ಕೊಂಡ ಮನೆ ಫುಲ್ಲೀ ಫರ್ನಿಷ್ಡ್. ನಾನೇ ನಿಂತು ಎಲ್ಲಾ ವ್ಯವಸ್ಥೆ ಮಾಡಿದ್ದೀನಿ. ನೀವು ನಿಮ್ಮ ಬಟ್ಟೆಗಳನ್ನು ತಂದ್ಕೊಂಡ್ರೆ ಸಾಕು. ಎಂದ.ದಕ್ಷಿಣ ಮೆಲ್ಲಗೆ ನಕ್ಕಳು.
ನಿಜವಾಗ್ಲೂ ನೀವು ಆ ಮನೆಯಿಂದ ಅವುಗಳನ್ನು ಕೂಡಾ ತರೋ ಅವಶ್ಯಕತೆ ಇಲ್ಲ. ಹೊಸ ಬಟ್ಟೇನೆ ಷಾಪಿಂಗ್ ಮಾಡೋಣ ಎನ್ನುತ್ತಾ ಆದ್ರೆ.. ನಿಮ್ಮಿಷ್ಟ ಎಂದ ನಗುತ್ತಾ.
ಒಂದು ಕ್ಷಣ ಸುಮ್ಮನಿದ್ದು ಇಷ್ಟಕ್ಕೂ ನಿಮ್ಮ ಉಳಿತಾಯದ ಹಣ ಎಲ್ಲದಕ್ಕೂ ನಾಮಿನಿಯಾಗಿ ಯಾರ ಹೆಸರು ಬರೆಸಿದ್ದೀರಿ ಅಂತ ಕೇಳಿಬಿಟ್ಟ.
ವಿಶ್ವಾಸ್ ಹೆಸರು ಬರೆಸಿದ್ದೆ ಅಂದಳು. ಓಕೆ. ಓಕೆ.. ನಾನೂ ಸಹ ನಾಮಿನಿಯಾಗಿ ಗೌರಿ ಹೆಸರಿಟ್ಟಿದ್ದೆ. ಈಗವೆಲ್ಲಾ ಮಕ್ಕಳ ಹೆಸರಿಗೆ ಬದಲಾಯಿಸಿದ್ದೀನಿ. ಮದುವೆಯಾದ್ರೆ ನೀವೂ ಸಹಾ ನಾಮಿನಿ ಹೆಸರು ಬದಲಾಯಿಸ ಬೇಕಲ್ವಾ. ನಿಮಗೆ ಅಭ್ಯಂತರ ಇಲ್ಲಾಂದ್ರೆ ನೀವೂ ಮಕ್ಕಳ ಹೆಸರಿಗೆ ಬದಲಾಯಿಸಬಹುದು. ಅದು ನಿಮ್ಮಿಷ್ಟ ಅಂದ.
ಹೀಗೆ ಇದ್ದಕ್ಕಿದ್ದ ಹಾಗೆ ಇಷ್ಟು ಸೂಕ್ಷ್ಮವಾದ ವಿಚಾರ ಯಾವುದೇ ಪೀಠಿಕೆಯಿಲ್ಲದೆ ಪ್ರಸ್ತಾಪ ಮಾಡಿದ್ದಕ್ಕೆ ಅವಳಿಗೆ ಒಮ್ಮೆಲೆ ಏನುತ್ತರ ಕೊಡಬೇಕೋ ತೋಚದೇ ಗಲಿಬಿಲಿಯಾಯಿತು. ಅವಳ ಮುಖದಲ್ಲಿ ಕಾಣಿಸಿದ ಸಣ್ಣ ಅನುಮಾನದ, ಅಸಹನೆಯ ಎಳೆಯನ್ನು ಗಮನಿಸಿದ ಅನಿಲ್. ಇದೇನಪ್ಪಾ, ಇವರು ಹೀಗೆ ಮಾತಾಡ್ತಿದ್ದಾರೆ ಅಂತ ಅನಿಸಿರಬೇಕು ನಿಮಗೆ. ಮನಸಿನಲ್ಲಿದ್ದದ್ದು ಸಂಕೋಚವಿಲ್ಲದೆ ಹೇಳಿಬಿಡೋದು ನನ್ನ ಸ್ವಭಾವ. ಅದಿರ್ಲೀ.. ಫೋಟೊಗಳಲ್ಲಿ, ವಿಡಿಯೋಗಳಲ್ಲಿ ಕಾಣೋದಕ್ಕಿಂತಾ ನೀವು ಇನ್ನೂ ಚೆನ್ನಾಗಿ ಕಾಣ್ತೀರ. ನೀವು ಬಹಳ ಸುಂದರವಾಗಿದ್ದೀರ. ಅಲ್ಲದೆ ನಿಮ್ಮ ಹೆಸರು ‘ದಕ್ಷಿಣ’ ವಿಷೇಶವಾಗಿದ್ದು ಬಹಳ ಚೆನ್ನಾಗಿದೆ ಅಂದ.
ಬಹಳ ದಿನಗಳ ನಂತರ ಒಬ್ಬ ಗಂಡಸಿನಿಂದ ಕೇಳಿದ ಮೆಚ್ಚುಗೆಗೆ ಅವಳಿಗೆ ಸಣ್ಣಗೆ ನಾಚಿಕೆ, ಖುಷಿ ಅನಿಸಿತ್ತು.
ಈಗ ಹೇಳಿ, ನಿಮಗೆ ಮದುವೆ ಒಪ್ಪಿಗೆನಾ…?
ಅವಳು ಒಪ್ಪಿಗೆಯನ್ನುವಂತೆ ಸಣ್ಣಗೆ ನಕ್ಕಳು.


ಬಲಗಾಲಿಟ್ಟು ಒಳಗೆ ಬಾಮ್ಮಾ… ಎಂದರು ಅನಿಲ್ ತಾಯಿ ಹೈಮವತಿ.
ದಕ್ಷಿಣ ಬಲಗಾಲಿಟ್ಟು ಮನೆಯೊಳಗೆ ಬಂದಳು. ದೇವರ ಮನೆ ಹತ್ತಿರ ನಿಂತು ಅನಿಲ್, ದಕ್ಷಿಣ ಇಬ್ಬರೂ ಕೈಮುಗಿದರು. ಅಲ್ಲಿಂದ ಚಕಚಕನೆ ಹೆಜ್ಜೆ ಹಾಕಿ ಹಾಲಿನಲ್ಲಿದ್ದ ದೊಡ್ಡ ಫೋಟೋ ಮುಂದೆ ಬಂದು ನಿಂತ ಅನಿಲ್. ಗೋಡೆ ಮೇಲೆ ಗುಲಾಬಿ ಹೂವಿನ ದೊಡ್ಡ ಹಾರ ಹಾಕಿದ್ದ ಆಳೆತ್ತರದ ಫೋಟೋ. ದಕ್ಷಿಣ ಸಹಾ ಅವನ ಜೊತೆ ಬಂದು ನಿಂತಳು. ಅನಿಲನ ಮೊದಲ ಹೆಂಡತಿ ಗೌರಿಯ ಫೋಟೋಗೆ ಇಬ್ಬರೂ ನಮಸ್ಕಾರ ಮಾಡಿದರು.
ಮದುವೆಗೆ ಇಬ್ಬರ ಕಡೆಯಿಂದ ಹತ್ತಿರದ ಬಂಧುಗಳು, ಸ್ನೇಹಿತರು ಬಂದಿದ್ದರು. ಅನಿಲ್ ಮಗಳಿಗೆ ಏಳು ವರ್ಷ. ಮಗನಿಗೆ ನಾಲ್ಕು ವರ್ಷ. ಅನಿಲ್ ಅವರಿಬ್ಬರನ್ನು ಕೂಡಿಸಿಕೊಂಡು ಈ ಮದುವೆ ಬಗ್ಗೆ, ಮನೆಗೆ ಬರ್ತಿರೋ ಹೊಸ ಅಮ್ಮನ ಬಗ್ಗೆ ವಿವರವಾಗಿ ತಿಳಿಸಿದ್ದ. ಮಗಳು ಈ ಹೊಸ ಅಮ್ಮನನ್ನು ಒಪ್ಪಿಕೊಂಡ ಹಾಗೆ ಇತ್ತು. ಚಿಕ್ಕವನಿಗೆ ಇದೆಲ್ಲಾ ಇನ್ನೂ ಅರ್ಥವಾದಂತಿದ್ದಿಲ್ಲ.

***
ಮದುವೆಯಾಗಿ ಮೂರುವಾರ ಕಳೆದಿತ್ತು.
ಹೈಮವತಿಯವರು ಟೀವಿ ನೋಡ್ತಿದ್ರು. ಅನಿಲ್ ಕೋಣೆಯಿಂದ ಬಂದು ಅಮ್ಮಾ, ಈ ಸೀರಿಯಲ್ ಮುಗಿದ ಕೂಡಲೆ ಊಟಕ್ಕೆ ರೆಡಿ ಮಾಡು. ಕಾರು ರೋಡಿನ ಮೇಲಿದೆ. ಒಳಗಡೆ ಪಾರ್ಕ್ ಮಾಡಿ ಬರ್ತೀನಿ. ಹೂ ಕಣೋ ಅಂದರವರು. ಅತ್ತೆಯವರ ಜೊತೆಯಲ್ಲಿ ಟೀವಿ ನೋಡುತ್ತಾ ಕೂತಿದ್ದ ಸುಮ್ನೆ ದಕ್ಷಿಣ ಈ ಮನೆಯವರನ್ನು, ಅರ್ಥಮಾಡಿಕೊಳ್ಳೋಕೆ ಪ್ರಯತ್ನ ಮಾಡ್ತಿದ್ದಳು. ತಮ್ಮಿಬ್ಬರಿಗೂ ಇದು ಎರಡನೇ ಮದುವೆ. ಮೊದಲ ಮದುವೆಯಾದಾಗ ಗಂಡ ವಿಕಾಸ್ ಮುಂಚೇನೇ ಪರಿಚಯವಿದ್ದು ಸಮಸ್ಯೆ ಇರಲಿಲ್ಲ. ಈಗ ಎಲ್ಲವೂ, ಎಲ್ಲರೂ ಹೊಸತು.
ಅಷ್ಟರಲ್ಲಿ ಅತ್ತೆಯವರಿಗೆ ಫೋನ್ ಬಂತು.
ಹಲೋ.. ದಮಯಂತೀ… ಹೇಗಿದ್ದೀಯಾ? ಹಾ… ಚೆನ್ನಾಗಿ ನಡೀತು. ಹೌದು.. ಅವರು ನಮ್ಮವರೇ, ಆದ್ರೆ ಇನ್ನೂ ಹೊಸತು. ಗೊತ್ತಾಗ್ಬೇಕು. ಇಲ್ಲಿವರೆಗೂ ನಾನೇ ಅಡಿಗೆ ಮಾಡ್ತಿದ್ದೀನಿ. ಹೌದು.. ಇನ್ನೂ ಡಿನ್ನರ್ ಆಗಿಲ್ಲ. ಟಿವಿ ಸೀರಿಯಲ್ ನೋಡ್ತಿದ್ದೀವಿ.. ಹೀಗೆ ಸ್ವಲ್ಪ ಹೊತ್ತು ಮಾತಾಡಿ ಫೋನ್ ಕಟ್ ಮಾಡಿ ದಕ್ಷಿಣಳನ್ನು ನೋಡ್ತಾ, ನನ್ನ ನಾದಿನಿ ಫೋನ್ ಮಾಡಿದ್ದು. ಮಗಳ ಹೆರಿಗೆಗೆ ಅಮೆರಿಕಾದ ಅಂಟ್ಲಾಂಟಕ್ಕೆ ಹೋಗಿದ್ದಾಳೆ. ನಿದಾನಕ್ಕೆ .. ಒಬ್ಬೊಬ್ಬರು ಪರಿಚಯ ಆಗ್ತಾರೆ ಬಿಡು
ಅಷ್ಟರಲ್ಲಿ ಒಳಗೆ ಬರ್ತಿದ್ದ ಅನಿಲ್ನನ್ನು ನೋಡಿ ಊಟಕ್ಕೆ ಬನ್ನಿ ಅನ್ನುತ್ತಾ ಡೈನಿಂಗ್ ಟೇಬಲ್ ಕಡೆ ನಡೆದರು.
ತನ್ನೆದುರಿಗೇ ಫೋನಿನಲ್ಲಿ ಅಷ್ಟೆಲ್ಲಾ ಮಾತಾಡಿದ್ದು ಕೇಳ್ತಿದ್ದ ದಕ್ಷಿಣ ಅತ್ತೆಯವರು ಪರೋಕ್ಷವಾಗಿ ತನಗೇನಾದರೂ ಹೇಳ್ತಿದ್ದಾರಾ ಅಂದುಕೊಂಡಳು.
ದಿನಾ ಬೆಳಿಗ್ಗೆ ದೇವರ ಪೂಜೆಯಾದ ಮೇಲೆ ಗೌರಿಯ ಫೋಟೋಕ್ಕೆ ಹಾರ ಹಾಕಿ ದೀಪ ಹಚ್ಚಿಡ್ತಿದ್ದ ಅನಿಲ್. ಮಗಳು, ಮಗ ಸದಾ ಸ್ಕೂಲ್ಗೆ ಹೋಗೋ ಮುಂಚೆ ತಾಯಿಯ ಫೋಟೋಗೆ ನಮಸ್ಕಾರ ಮಾಡಿ ಹೊರಡೋರು. ಅತ್ತೆ ಹೈಮವತಿ ದಿನಾಲು ಆ ಫೋಟೋ ಹತ್ತಿರ ಅಗರಬತ್ತಿ ಹಚ್ಚೋರು.
ಅಗಲಿದ ಗೌರಿಯವರನ್ನು ಆ ಮನೆಯವರು ಹೀಗೆ ನೆನಪು ಮಾಡಿಕೊಳ್ಳೋದು, ಇಷ್ಟಪಡೋದು ನೋಡಿ ದಕ್ಷಿಣಾಗೆ ಅವರೆಲ್ಲರ ಬಗ್ಗೆ ಗೌರವ ಹೆಚ್ಚಾಯಿತು.
ಮದುವೆಗೆ ಅಂತ ಹಾಕಿದ್ದ ಹದಿನೈದು ದಿನದ ರಜೆ ಮುಗೀತಿದ್ದಂತೆ ಮತ್ತೆ ಆಫೀಸಿಗೆ ಹೊರಡ್ತೀನಿ ಅಂತ ಅನಿಲ್ಗೆ ಹೇಳಿದ್ಲು.
ಇನ್ನೂ ಸ್ವಲ್ಪ ದಿನ ರಜೆ ಹಾಕ್ಬೋದಲ್ವಾ ಅಂದ. ಯಾಕೆ? ಮನೆಯಲ್ಲಿದ್ದರೆ ಅವಳಿಗೂ ಬೋರ್ ಆಗುತ್ತೆ. ಹೋಗಲಿ ಬಿಡು ಅಂದ್ರು ಅತ್ತೆಯವರು. ತನ್ನ ಯಜಮಾನಿಕೆಯ ಮನೆಯಲ್ಲಿ ಹೊಸ ಸದಸ್ಯೆ ಬಂದು ಇದ್ದಿದ್ದು, ಅತ್ತೆಯವರಿಗೂ ಸ್ವಲ್ಪ ಹೊಸದಾಗಿನಿಸಿ, ಅವರಿಗೂ ಸ್ವಲ್ಪ ನಿರಾಳವಾಗಿಬೇಕು ಅನಿಸಿರಬೇಕು. ದಕ್ಷಿಣಳಿಗೂ ಯಾವಾಗ ಆಫೀಸಿಗೆ ಹೋಗಿ, ಮತ್ತೆ ತನ್ನ ಹಳೆಯ ಪರಿಸರದಲ್ಲಿ ಇರ್ತೀನೋ ಅನಿಸಿತ್ತು. ಇನ್ನು ರೂಢಿಯಾಗಬೇಕಿದ್ದ ಮನೆಯಿಂದ ಸ್ವಲ್ಪ ಹೊರಗಡೆ ತಿರುಗಾಡಿದಂತಾಗಬೇಕಾಗಿತ್ತು.
ದಕ್ಷಿಣ ಕಚೇರಿಯಲ್ಲಿ ಕಾಲಿಡಬೇಕಾದರೆ ಸ್ವಲ್ಪ ಮುಜುಗರವೆನಿಸಿತ್ತು. ತಾನು ಮತ್ತೆ ಮದುವೆ ಮಾಡಿಕೊಂಡಿದ್ದರ ಬಗ್ಗೆ ಸಹೋದ್ಯೋಗಿಗಳಲ್ಲಿ ಬೇರೆ ಬೇರೆ ಅಭಿಪ್ರಾಯಗಳಿದ್ದದ್ದು ಗೊತ್ತಿತ್ತು. ಆದರೂ ಅವೆಲ್ಲಾ ಮರೆತು ಸಹಜವಾಗಿ ಇರೋ ಪ್ರಯತ್ನ ಮಾಡಿದಳು.
ಕಲೀಗ್ ರೇವತಿ ಬಂದು, ಕಂಗ್ರಾಟ್ಸ್ ಕಣೆ, ಹ್ಯಾಗಿದೆ ಹೊಸ ಜೀವನ? ಕೇಳಿದಳು.
ಚೆನ್ನಾಗೇ ಇದೆ
ಬೇರೆ ಇನ್ನಾರಿಗೂ ಮಾತಾಡಲು ಅವಕಾಶ ಕೊಡದೆ, ಕೆಲಸದಲ್ಲಿ ಮುಳುಗಿ ಬಿಟ್ಟಳು.
ಸಂಜೆ ತನ್ನ ಆತ್ಮೀಯ ಗೆಳತಿ ಸ್ವಾತಿ ಫೋನ್ ಮಾಡಿ, ಹೇಗಿದೆಯೇ ಅಲ್ಲಿ? ಕೇಳಿದಳು.
ಇನ್ನೂ ಎಲ್ಲಾ ಹೊಸತುಕಣೇ ಅಂದು ಮನೆಯ ವಿಚಾರವೆಲ್ಲಾ ಅವಳಿಗೆ ಹೇಳಿಕೊಂಡಳು. ಅದಕ್ಕೆ ಸ್ವಾತಿ ಹೌದು ಈಗ ನಿನಗೆಲ್ಲ ಹೊಸದು ಅನ್ಸುತ್ತೆ. ಅದರಲ್ಲೂ ಬರೀ ನೀವಿಬ್ಬರು, ಮಕ್ಕಳು ಅಂದ್ರೆ ನಿನಗೆ ಇಷ್ಟೊತ್ತಿಗೆ ಸ್ವಲ್ಪನಾದ್ರೂ ರೂಢಿಯಾಗಿರೋದು, ನಿಮ್ಮತ್ತೆಯವರು ಅಲ್ಲಿ ತನ್ನದೇ ಆದ ಸ್ಥಾನವನ್ನು ಕಾಪಾಡಿಕೊಳ್ತಿದ್ದಾರೆ ಅನಿಸುತ್ತೆ. ಅದಕ್ಕೆ ನಿನಗೆ ಇನ್ನೂ ಸ್ವಲ್ಪ ಹೆಚ್ಚಿನ ಸಮಯ ಬೇಕಾಗಬಹುದು. ಮಕ್ಕಳ ಜೊತೆ ಸ್ವಲ್ಪ ಹೆಚ್ಚಿನ ಸಮಯ ಕಳಿತಾ ಇರು ಅಂತ ಸಲಹೆ.
ವಿಶ್ವಾಸ್ ತೀರಿಕೊಂಡಾಗ ದಕ್ಷಿಣಾಳಿಗೆ ಇನ್ನೂ ಇಪತ್ತೆಂಟು ವರ್ಷ ವಯಸ್ಸು. ಅದಾದ ಎರಡು ವರ್ಷಕ್ಕೆ ಅವಳಿಗೆ ಮತ್ತೆ ಮದುವೆಯಾಗುವಂತೆ ಸಲಹೆ ಕೊಟ್ಟಿದ್ದು ಸ್ವಾತಿ. ಆದ್ರೆ ದಕ್ಷಿಣ ಮೊದಲಿಗೆಲ್ಲಾ ಮತ್ತೆ ಮದುವೆ ಬಗ್ಗೆ ಯೋಚನೆ ಮಾಡೊಕ್ಕೊ ಮುಜುಗರ ಪಡ್ತಿದ್ಲು. ವಾರದ ದಿನಗಳೆಲ್ಲಾ ಆಫೀಸು, ಮನೆ ಅಂತ ಬಿಜಿಯಾಗ್ತಿದ್ಲು. ಆದರೆ ಭಾನುವಾರ ಬಂದ್ರೆ ಸಮಸ್ಯೆಯಾಗೋದು. ಅಕ್ಕ, ತಮ್ಮ, ಸ್ನೇಹಿತರು ಎಲ್ಲಾ ಅವರವರ ಕುಟುಂಬದ ಜೊತೆ ಇರೋದ್ರಿಂದಾ ಇವಳಿಗೆ ಒಬ್ಬಂಟಿತನ ಕಾಡೋದು. ಹೀಗೇ ಇದ್ರೆ ಮುಂದಿನ ಭವಿಷ್ಯ ಪೂತರ್ಿ ಒಂಟಿತನ ಬೇಸರದಿಂದಾ ತುಂಬಿರುತ್ತೆ ಅನಿಸಿತು. ಇದಕ್ಕೆ ಪರಿಹಾರವೆಂದೇ ತನಗೂ ಒಬ್ಬ ಸಂಗಾತಿ ಬೇಕೆನಿಸಿ ಮತ್ತೆ ಮದುವೆಯಾಗೋ ನಿರ್ಧಾರಕ್ಕೆ ಬಂದಳು. ಅವಳೇ ಮಾಟ್ರಿಮೋನಿಯಲ್ ಕಾಲಮ್ಗಳನ್ನು ನೋಡಲು ಶುರುಮಾಡಿದಳು. ಗೆಳತಿ ಸ್ವಾತಿ ಸಹ ಇವಳಿಗೆ ಗಂಡು ಹುಡುಕೋಳು. ಹಾಗೆ ಹುಡುಕಿದಾಗ ಸಿಕ್ಕಿದ್ದೇ ಅನಿಲ್ ಸಂಬಂಧ. ಈ ವಿಷಯವನ್ನು ದಕ್ಷಿಣಾಳ ಮನೆಯವರ ಹತ್ತಿರ ಸ್ವಾತಿ ಖುದ್ದಾಗಿ ಮಾತಾಡಿ ಒಪ್ಪಿಸಿದ್ದಳು. ಹೀಗೆ ಎಲ್ಲರೂ ಒಪ್ಪಿಗೆ ದಕ್ಷಿಣಾಳ ಎರಡನೇ ಮದುವೆ ನಡೆದಿತ್ತು.
ಆದರೂ, ಈ ಎಲ್ಲಾ ಒಪ್ಪಿಗೆಗಳು, ಆಲೋಚನೆಗಳು, ಸಲಹೆ ಸೂಚನೆಗಳ ನಂತರವೂ ದಕ್ಷಿಣಾಳಿಗೆ ಯಾವುದೋ ಕಾಣದ ತೊಡಕು, ಇಕ್ಕಟ್ಟಿನ ಭಾವನೆ ಕಾಡ್ತಿತ್ತು. ಈ ಹೊಸ ಬದುಕನ್ನು ಇನ್ನೂ ಸುಂದರವಾಗಿ, ಸಂತೋಷವಾಗಿಟ್ಟುಕೊಳ್ಳಬಹುದು ಅನಿಸೋದು. ಆದರೆ, ಹೇಗೆ?
ಅವತ್ತು ಸಂಜೆ ದಕ್ಷಿಣ ಆಫೀಸಿನಿಂದ ಮನೆಗೆ ಬಂದಾಗ ಹೈಮವತಿ ಬಂಧು ಬಳಗಕ್ಕೆ, ಸ್ನೇಹಿತರಿಗೆ ಫೋನ್ ಮಾಡಿ ಊಟಕ್ಕೆ ಕರೀತಿದ್ರು. ಅನಿಲ್ ಸಹ ಕೆಲವು ಬಾಕ್ಸ್ಗಳನ್ನು ಮನೆಯಲ್ಲಿ ಒಂದುಕಡೆ ಇಡಿಸುತ್ತಿದ್ದ. ಇದೆಲ್ಲವನ್ನು ಅಚ್ಚರಿಯಿಂದ ನೋಡ್ತಿದ್ದ ದಕ್ಷಿಣಾಳಿಗೆ ನಾಳೆ ಗೌರಿ ಹುಟ್ಟಿದ ದಿನ. ಬೆಳಿಗ್ಗೆ ನಾವೆಲ್ಲಾ ಸಾಯಿಬಾಬಾ ದೇವಸ್ಥಾನದಲ್ಲಿ ಗೌರಿ ಹೆಸರಲ್ಲಿ ಅರ್ಚನೆ ಮಾಡಿಸ್ಬೇಕು. ಅನಾಥಶ್ರಮದ ಮಕ್ಕಳಿಗೆ ಪುಸ್ತಕ, ಸ್ಲೇಟ್ ನಮ್ಮ ಮಕ್ಕಳ ಕೈಲಿ ಕೊಡಿಸಬೇಕು. ಈ ಬಾಕ್ಸ್ಗಳಲ್ಲಿರೋದು ಬುಕ್ಸ್. ನಾಳೆ ಬೆಳಿಗ್ಗೆ ಸ್ಲೇಟು ಬರುತ್ತೆ. ನಾಳೆ ಪೂಜೆ ನಂತರ ಹತ್ತಿರದವರಿಗೆ ಸ್ನೇಹಿತರಿಗೆ ನಮ್ಮ ಮನೇಲಿ ಡಿನ್ನರ್, ನಾಳೆ ನೀನು ಆಫೀಸಿಗೆ ರಜೆ ಹಾಕು ಅಂದ ಅನಿಲ್.
ದಕ್ಷಿಣ ಸರಿಯೆನ್ನುವಂತೆ ತಲೆಯಾಡಿಸಿದಳು. ಬೆಳಗಾಗಿದ್ದು ತಲೆಸ್ನಾನ ಮಾಡಿ ನೈವೇದ್ಯಕ್ಕೆ ಪಾಯಸ ಮಾಡಿದಳು. ಗೌರಿ ಫೋಟೋವನ್ನು ಹೂವಿನಿಂದ ಅಲಂಕಾರ ಮಾಡಿ, ಪೂಜೆಗೆ ಎಲ್ಲಾ ಸಿದ್ಧತೆ ಮಾಡಿಟ್ಟಳು. ಮಕ್ಕಳನ್ನು ತಯಾರು ಮಾಡಿ ಎಲ್ರೂ ಸಾಯಿಬಾಬಾ ದೇವಸ್ಥಾನಕ್ಕೆ ಹೋದರು. ಅಲ್ಲಿಂದ ಅನಾಥಾಶ್ರಮದ ಮಕ್ಕಳಿಗೆ ಪುಸ್ತಕ, ಸ್ಲೇಟು ಕೊಡಿಸಿದರು.
ಸಂಜೆ ಗೌರಿಯ ತಂದೆ, ತಾಯಿ ಮನೆಗೆ ಬಂದ್ರು. ಮಕ್ಕಳಿಬ್ಬರು ಅಜ್ಜಿ ತಾತನ ಜೊತೆ ಖುಷಿಖುಷಿಯಾಗಿ ಮಾತಾಡ್ತಾ ಇದ್ದರು. ಮಕ್ಕಳು ಕೇಕ್ ಕಟ್ ಮಾಡಿ ಮೊದಲು ಅಪ್ಪನಿಗೆ ಕೊಟ್ಟರು.
ಈ ಮದುವೆ, ಈ ಮನೆ, ಈ ಮನೆಯ ಜನರು ಇನ್ನೂ ರೂಢಿಯಾಗಿರದೆ, ಹೊಸ ಹೊಸದಾಗಿ ಇದ್ದು, ಇಂಥಾ ಸನ್ನಿವೇಶದಲ್ಲಿ ತನ್ನ ಪಾತ್ರ ಏನು, ಹೇಗೆ ಗೊತ್ತಾಗದೆ ಸುಮ್ನೆ ನಿಂತಿದ್ದಳು. ಗೌರಿಯ ತಾಯಿ ಗಂಗಾದೇವಿಯವರು ಇದನ್ನು ಗಮನಿಸಿದರು. ಇದೆಲ್ಲಾ ಇವರು ಯಾಕೆ ಮಾಡ್ತಿದ್ದಾರೋ ನನಗೂ ಅರ್ಥವಾಗ್ತಾ ಇಲ್ಲ. ಗೌರಿಯನ್ನು ನೆನಪಿಸಿಕೊಳ್ತಿರೋದು, ಅವಳ ತಾಯಿಯಾಗಿ ನನಗೆ ಖುಷೀನೇ, ಆದ್ರೆ ನಿನಗೆ ಇದರಿಂದ ಮುಜುಗರವಾಗಬಹುದು ಅಂದುಕೊಳ್ತಿದ್ದೀನಿ. ಇದೆಲ್ಲಾ ಅವರಿಗೆ ನಿಧಾನಕ್ಕೆ ತಿಳೀಬಹುದು. ಇಷ್ಟೆಲ್ಲಾ ಆರ್ಭಟವಿಲ್ಲದೇನೂ ಗೌರೀನ ನೆನಪಿಸಿಕೋಬಹುದಲ್ಲ ಅಂದ್ರು.
ಛೆ, ಛೆ ಹಾಗೇನಿಲ್ಲಮ್ಮ ನನಗಿಲ್ಲಿ ಇನ್ನೂ ಹೊಸತಲ್ವೇ. ಬರೋ ವರ್ಷಕ್ಕೆಲ್ಲಾ ನನಗೂ ಇಲ್ಲಿ ರೂಢಿಯಾಗಿರುತ್ತೆ. ಹೀಗೆ ಎಲ್ಲರೂ ಗೌರಿಯವರನ್ನು ನೆನಸಿಕೊಳ್ಳೋರು ಒಳ್ಳೇದೇ ಅಲ್ವಾ. ನೀನು ಹೀಗೆ ಯೋಚಿಸ್ತಿರೋದು ಖುಷಿ ಅನ್ಸುತ್ತೆ. ನಿನಗೆ ಯಾವಾಗ, ಯಾವುದೇ ವಿಷಯಕ್ಕೆ ಮಾತಾಡಬೇಕೆನಿಸಿದರೂ ಫೋನ್ ಮಾಡು. ಮಕ್ಕಳ ಬಗ್ಗೆ ನಿನಗೆ ಪ್ರೀತಿ ಇದೆ. ಆ ವಿಚಾರದಲ್ಲಿ ನನಗೆ ಚಿಂತೆಯಿಲ್ಲ, ನಿಧಾನಕ್ಕೆ ನಿನಗೆ ಇಲ್ಲಿಯ ಅಡಚಣೆಗಳೆಲ್ಲಾ ಕಡಿಮೆಯಾಗ್ಬಹುದು ಅಂದರು ಗಂಗಾದೇವಿ.
ಕೆಲವು ದಿನಗಳ ನಂತರ..
ದಕ್ಷಿಣಾ.. ದಕ್ಷಿಣಾ… ಮನೆಗೆಲ್ಲಾ ಕೇಳ್ಸೋ ಹಾಗೆ ಜೋರಾಗಿ ಕಿರುಚ್ತಿದ್ದ ಅನಿಲ್. ಇದನ್ನು ಕೇಳಿಸಿಕೊಂಡ ದಕ್ಷಿಣ, ಹೈಮವತಿ ಇಬ್ಬರೂ ಪೂಜೆಯ ಕೋಣೆಗೆ ಬಂದ್ರು.
ಏನಿದು..? ಅನಿಲ್ ಸಿಟ್ಟಿನಿಂದ ಕೇಳಿದ. ಹೈಮವತಿಯವರು ದಕ್ಷಿಣ ಕಡೆಗೆ ನೋಡಿದರು. ಅನಿಲ್, ಇದು ವಿಶ್ವಾಸನ ಫೋಟೋ. ಇವತ್ತು ವಿಶ್ವಾಸ್ ತೀರಿಕೊಂಡ ದಿನ. ಅದಕ್ಕೆ ಇಲ್ಲಿ ಅವನ ಫೋಟೋ ಇಟ್ಟು ಹೂವು ಹಾಕಿದ್ದೀನಿ. ಯಾರ್ದೋ ಫೋಟೋ ಅಂತ ನೀವು ಗಾಬರಿಯಾದಿರಿ ಇವತ್ತೊಂದು ದಿನ, ನಾಳೆ ತೆಗೆದುಬಿಡ್ತೀನಿ. ಸಾರಿ ಮೊದಲೆ ನಿಮಗೆ ತಿಳಿಸಬೇಕಾಗಿತ್ತೇನೋ
ನನಗೆ ತಿಳಿಸದೆ ಇದೆಲ್ಲಾ ಮಾಡೋಕ್ಕೆ ಎಷ್ಟು ಧೈರ್ಯ ಅನ್ನೋ ಹಾಗೆ ಕೋಪದಿಂದ, ದುರುಗಟ್ಟಿ ನೋಡ್ತಿದ್ದ ಅನಿಲ್.
ಮಗ ಸಿಟ್ಟಿನಲ್ಲಿ ಏನಾದರೂ ಅನ್ನೋವಷ್ಟರಲ್ಲಿ ಪರಿಸ್ಥಿತಿಯನ್ನು ನಿಭಾಯಿಸಬೇಕಂತ ಇದ್ದಕ್ಕಿದ್ದಂತೆ, ಯಾರೋ ಹೊಸಬರ ಫೋಟೋ ಪೂಜೆಯ ಕೋಣೆಯಲ್ಲಿ ಪ್ರತ್ಯಕ್ಷವಾದ್ರೆ ಯಾರಿಗಾದ್ರೂ ಗಾಬರಿಯಾಗೊಲ್ವಾ? ಮುಂಚೇನೇ ಒಂದು ಮಾತು ಹೇಳಿದ್ರೆ ಚೆನ್ನಾಗಿತ್ತು. ಸರಿ, ನಾಳೆ ತೆಗೆದುಬಿಡು ಅಂದ್ರು ಹೈಮವತಿಯವರು.
ಅನಿಲ್ ಇನ್ನೂ ತನ್ನ ಕೋಪದಲ್ಲೇ ಇದ್ದದ್ದು ಗಮನಿಸಿ ಸರಿ ಸರಿ ನಿನ್ನ ಪೂಜೆ ಮುಗಿಸಿ ಬಾ.. ಅಂದರು. ಅನಿಲ್ ಇಷ್ಟು ತೀವ್ರವಾಗಿ ಕೋಪಗೊಂಡಿದ್ದು ಯಾಕೆ ಅಂತ ದಕ್ಷಿಣಾಳಿಗೆ ಗೊತ್ತಾಗಲಿಲ್ಲ.
ಇದೇನಿದು, ಇಷ್ಟೊಂದು ಧೈರ್ಯ ಹೇಳದೆ ಕೇಳದೇ, ವಿಶ್ವಾಸ್ನ ಫೋಟೋ ಇಟ್ಟಿದ್ದಾಳೆ. ಇನ್ನೂ ವಿಶ್ವಾಸ್ನ ಮರೆತಿಲ್ಲವಾ.. ಇನ್ನೂ ಏನೇನು ನೆನೆಸಿಕೊಳ್ತಾಳೋ.. ಅಂತ ಯೋಚಿಸಿ ಕಸಿವಿಸಿಗೊಳ್ತಿದ್ದ ಅನಿಲ್.
ಅಮ್ಮ ಮೊದಲೇ ಹೇಳಿದ ಹಾಗೆ ತಾನು ಇನ್ನೂ ಮದುವೆಯಾಗಿಲ್ಲದ ಹುಡುಗಿಯನ್ನು ನೋಡಬೇಕಿತ್ತಾ? ಆದರೆ, ಅಂತವಳನ್ನು ಮಾಡಿಕೊಂಡರೆ ಮಕ್ಕಳನ್ನು ಹ್ಯಾಗೆ ನೋಡಿಕೊಳ್ತಾಳೋ ಅನ್ನೋ ಆತಂಕ. ಜೀವನದಲ್ಲಿ ದುಃಖ ಪಡ್ತಿರೋ ಹುಡುಗಿಯನ್ನು ಮದುವೆಯಾದರೇ, ಅವಳಿಗೂ ಬಾಳು ಕೊಟ್ಟ ಹಾಗಾಗುತ್ತೆ ಅಲ್ಲದೆ, ಕೃತಜ್ಞತೆಯಿಂದ ಮಕ್ಕಳನ್ನೂ ಚೆನ್ನಾಗಿ ನೋಡಿಕೊಳ್ತಾಳೆ, ಅಂದುಕೊಂಡಿದ್ದೆ. ಆದರೆ ಇದೇನಿದು, ಹಳೇ ಗಂಡನ ಫೋಟೋ ಮನೆಗೆ ತಂದಿದ್ದಾಳೆ ಅನಿಲ್ನ ಆಕ್ರೋಶ ಇನ್ನೂ ಹೆಚ್ಚಾಗ್ತಿತ್ತು.


ಇನ್ನೊಂದು ಕಡೆ ಈ ದಕ್ಷಿಣ ಇಷ್ಟು ದಡ್ಡ ಹುಡುಗೀನಾ? ಯಾವ ಗಂಡಸು ಹೀಗೆ, ಹೆಂಡತಿಯ ಮೊದಲ ಗಂಡನ ಫೋಟೋ ಪೂಜೆಯ ಕೋಣೆಯಲ್ಲಿ ನೋಡಿ ಸುಮ್ಮನಿರ್ತಾನೆ.ಅಸಲಿಗೆ ಅವಳ ಆಲೋಚನೆಯಾದ್ರೂ ಏನು? ದಕ್ಷಿಣಾಳಿಗೆ ತನ್ನ ಮೊದಲ ಗಂಡನ ಮೇಲೆ ಪ್ರೀತಿ, ನೆನಪು ಇರಬಹುದು. ಹಾಗಂತ ಅದನ್ನು ಇಲ್ಲಿ ಪ್ರದರ್ಶನಕ್ಕಿಡಬಹುದಾ? ಹೀಗೆ ಪಬ್ಲಿಕ್ಕಾಗಿ ಫೋಟೋ ಇಟ್ಟು ಪೂಜೆ ಮಾಡಿದ್ರೆ ಅನಿಲ್ ಸಹಿಸಿಕೊಂಡಿರಕ್ಕೆ ಸಾಧ್ಯಾನಾ? ಇವಳಿಗೆ ಸ್ವಲ್ಪ ತಿಳಿಸಿ ಹೇಳಬೇಕು ಅಂದಕೊಂಡರು ಹೈಮವತಿ. ಪೂಜೆ ಮುಗಿಸಿದ ಅನಿಲ್ ಅಮ್ಮಾ, ಬ್ರೇಕ್ಫಾಸ್ಟ್ ಅಂತ ಕೂಗಿದ. ಅವನ ದಿನಲ್ಲಿನ ಕೋಪ, ಬೇಸರ, ದಕ್ಷಿಣಾ, ಹೇಮವತಿ ಇಬ್ಬರಿಗೆ ಸ್ಪಷ್ಟವಾಗಿ ಕೇಳಿಸಿತು.
ಆಫೀಸಿಗೆ ಹೊರಡುವ ಮುಂಚೆ ದಕ್ಷಿಣ ಎಂದಿನಂತೆ ಕೈಮಗಿಯಲು ಪೂಜೆ ಕೋಣೆಯೊಳಕ್ಕೆ ಹೋದಳು. ಅಲ್ಲಿ ವಿಶ್ವಾಸ್ ಫೋಟೋ ಕಾಣಲಿಲ್ಲ. ಯಾರು ತೆಗೆಟ್ಟಿರಬಹುದು? ಅನಿಲ್ ಏನಾದರೂ ತೆಗೆದನಾ? ಆಲೋಚನೆಯಲ್ಲೇ ಅಡುಗೆ ಮನೆ ಕಡೆ ಬಂದವಳು ಅತ್ತೆಯವರನ್ನು ಫೋಟೋ ಬಗ್ಗೆ ಕೇಳಿದಳು. ಅವರು ಈ ಮಾತು ಎಲ್ಲಿ ಮಗನ ಕಿವಿಗೆ ಬೀಳುತ್ತೋ ಅನ್ನೋ ಭಯದಲ್ಲಿ ಬಾಗಿಲ ಕಡೆ ನೋಡಿ ನಾನೇ ತೆಗೆದಿಟ್ಟಿದ್ದೀನಿ ಆಮೇಲೆ ಕೊಡ್ತೀನಿ ಅಂದರು ಮೆಲ್ಲಗೆ.
ಅಲ್ಲ.. ನಾಳೆ ತೆಗೆದಿಡುವಂತೆ ಅಂತ ನೀವೇ ಹೇಳಿದ್ರಿ.. ಈಗಲೇ ತೆಗೆದಿಟ್ಟಿದ್ದೀರಿ..? ಅಂದಳು. ಅವಳಿಗೆ ಗೊತ್ತಿಲ್ಲದ ಹಾಗೆ ಅವಳೂ ದನಿ ತಗ್ಗಿಸಿ ಮಾತಾಡಿದ್ದಳು. ಆಮೇಲೆ ಮಾತಾಡೋಣ ಗುಸುಗುಸು ಅಂತ ಕಿವಿಯಲ್ಲಿ ಹೇಳಿದರು ಹೈಮವತಿ.
ಅನಿಲ್ ಹೊರಗಡೆ ಹೊರಟವನು ಎಲ್ಲೋ ನೋಡಿಕೊಂಡು ಬೈ ಅಂದು ಹೊರಟ.
ಅವನು ಹೊರಡೋಕೆ ಕಾಯ್ತಿದ್ದ ಹೈಮವತಿಯವರು ನಿನಗೆ ಬುದ್ದಿ ಇದೆಯಾ? ಯಾರಾದರೂ ಹೀಗೆ ಹೊಸಗಂಡನ ಮನೆಯಲ್ಲಿ ಹಳೆ ಗಂಡನ ಫೋಟೋ ಇಟ್ಟು ಪೂಜೆ ಮಾಡ್ತಾರಾ? ಅನಿಲ್ಗೆ ಬೇಜಾರಾಗಲ್ವಾ? ಅಂದರು.
ಇದರಲ್ಲಿ ತಪ್ಪೇನಿದೆ? ಇವತ್ತು ವಿಶ್ವಾಸ್ ತೀರಿಕೊಂಡಿದ್ದ ದಿನ. ಇವತ್ತೂ ಅವನ ಫೋಟೋಗೆ ಹೂವಿಟ್ಟು ನಮಸ್ಕಾರ ಮಾಡಬಾರದಂದ್ರೆ ಹ್ಯಾಗೆ? ಅಂತ ಕೇಳಿಬಿಟ್ಟಳು ದಕ್ಷಿಣ.
ನೋಡಮ್ಮಾ ದಯವಿಟ್ಟು ನಿನ್ನ ಹಳೆ ಜೀವನವನ್ನು, ಅದರ ನೆನಪುಗಳನ್ನು ಮನೆಯೊಳಗೆ ತರಬಾರದು. ನಿನಗೆ ಎರಡನೇ ಮದುವೆಯಾದ್ರೂ ಅನಿಲ್ ನಿನ್ನ ಒಪ್ಪಿ ಮದುವೆಯಾಗಿದ್ದಾನೆ. ಒಂದೇ ರೀತಿಯಲ್ಲಿ ನೀನು ಲಕ್ಕೀ ಅನ್ನಬಹುದು. ಅಸಲಿಗೆ ಯಾವುದೇ ತೊಂದರೆ ಬರಬಾರದು ಅಂತಲೇ ಇನ್ನೂ ಮದುವೆಯಾಗದೆ ಹುಡುಗಿಯನ್ನೇ ನೋಡಕ್ಕೆ ಅನಿಲ್ಗೆ ಹೇಳಿದ್ದೆ. ಆದರೆ ಅವನು ನಿನ್ನ ಒಪ್ಪಿದ್ದ ನಾವು ಅದಕ್ಕೇನೂ ಅಡ್ಡಿಪಡಿಸಲಿಲ್ಲ ಅಂದರು ಹೈಮವತಿ, ಖಡಾಖಂಡಿತವೆನಿಸೋ ಧನಿಯಲ್ಲಿ. ಒಂದು ವೇಳೆ, ಹೌದಾ? ಹಾಗಿದ್ರೆ ನಿಮ್ಮ ಮೊದಲ ಸೊಸೆ ಗೌರಿಯ ಫೋಟೋ ಮಾತ್ರ ಇಡಬಹುದಾ? ಅಂತೇನಾದ್ರೂ ದಕ್ಷಿಣಾ ಕೇಳಿದ್ರೆ ಅದಕ್ಕೆ ಉತ್ತರ ಕೊಡಕ್ಕೆ ತಯಾರಾಗಿದ್ರು ಹೇಮವತಿಯವರು. ಆದ್ರೆ ದಕ್ಷಿಣಾ ಹಾಗೇನೂ ಕೇಳಲಿಲ್ಲ. ಅಸಲಿಗೆ ಹಾಗೆಲ್ಲಾ ಕೇಳಬೇಕಂತಲೂ ಅವಳು ಯೋಚಿಸಲಿಲ್ಲ.
ದಕ್ಷಿಣ ಆಫೀಸಿಗೆ ಹೊರಟಳು. ಮನಸೆಲ್ಲಾ ಖಾಲಿ ಖಾಲಿ ಎನಿಸಿತ್ತು. ವಿಶ್ವಾಸ್ ತೀರಿಹೋದ ದಿನದ ನೆನಪಿನಿಂದಲ್ಲ, ಅನಿಲ್ನ ಅಸಮಾಧಾನದಿಂದ, ನಡವಳಿಕೆಯಿಂದ ಹಾಗಾಗಿತ್ತು. ಅನಿಲ್ ನನ್ನ ಅವನ ಪರಿಸ್ಥಿತಿಯನ್ನು ತಾನು ಅರ್ಥಮಾಡಿಕೊಂಡು ಹೊಂದಿಕೊಳ್ತಿರೋ ಹಾಗೆ ಅವನ ಕಡೆಯಿಂದ ತನ್ನನ್ನ ತಿಳಿದುಕೊಳ್ಳೋ ಯಾವ ಪ್ರಯತ್ನಾನೂ ಆಗಿರಲಿಲ್ಲ. ತಾನು ಬರೋ ಮುಂಚೆ ಹ್ಯಾಗಿತ್ತೋ, ಅವನ ದಿನಚರಿ ಈಗಲೂ ಹಾಗೇ ಇತ್ತು. ಅವನ ಮಂಚದಲ್ಲಿ ತನಗೂ ಜಾಗ ಸಿಕ್ಕಿತ್ತು. ಅಷ್ಟೇ. ಒಮ್ಮೊಮ್ಮೆ ಮೈಮರೆತು, ಅಲ್ಲೂ ಗೌರೀ ಅಂದು ಬಿಡ್ತಾನೆ. ತಾನು ಮುಜುಗರ ಪಡದೆ, ಅರ್ಥಮಾಡಿಕೊಳ್ಳೋ ಪ್ರಯತ್ನ ಮಾಡ್ತಾನೆ ಇದ್ದಾಳೆ. ಅವನ ಭಾವನೆಗಳಿಗೆ ರೂಢಿಗಳಿಗೆ ಎಲ್ಲದಕ್ಕೂ ಗೌರವಕೊಟ್ಟು ತಾನು ಹೊಂದಿಕೊಳ್ಳೋ ಪ್ರಯತ್ನ ಮಾಡ್ತಿದ್ದರೇ, ಇವತ್ತಿನ ಒಂದೇ ಒಂದು ವಿಷಯಕ್ಕೆ ಅನಿಲ್ ಎಷ್ಟು ಅಸಹನೆಯನ್ನು ಹೊರಹಾಕಿಬಿಟ್ಟ. ಏನಿದ್ದರೂ, ನಿಧಾನಕ್ಕೆ ಹೇಳಬಹುದಾಗಿತ್ತು. ನನಗೆ ನನ್ನ ಭಾವನೆಗಳಿಗೆ ಬೆಲೆನೇ ಕೊಡಲಿಲ್ಲ.
ಹೇಗೋ ಆಫೀಸಿನಲ್ಲಿ ಕೆಲಸದಲ್ಲಿ ಮುಳುಗೆದ್ದಾಯಿತು. ಸಂಜೆ ದೇವಸ್ಥಾನಕ್ಕೆ ಹೋಗಿ ವಿಶ್ವಾಸ್ ಹೆಸರಲ್ಲಿ ಅರ್ಚನೆ ಮಾಡಿಸಿದಳು. ಹೊರಗೆ ಬಂದು ಮೊಬೈಲ್ನ ಯಾಕ್ಟಿವ್ ಮೋಡ್ಗೆ ಹಾಕಿ ನೋಡಿದರೆ ಅನಿಲ್ನಿಂದ ಎಂಟು ಮಿಸ್ಡ್ ಕಾಲ್ಗಳು. ಮತ್ತೊಂದು ಕಾಲ್ ಬರ್ತಾ ಇತ್ತು. ಏನಾಗಿದೆಯೋ ಪಾಪ ಇಷ್ಟೊಂದು ಕಾಲ್ ಮಾಡ್ತಿದ್ದಾನೆ ಅಂದುಕೊಂಡು ಫೋನ್ ತೆಗೆದಳು.
ನಿಮ್ಮ ಆಫೀಸ್ ಕಡೆಯಿಂದ ಬರ್ತಿದ್ದೆ, ನಿನ್ನ ಕೆಲಸ ಮುಗಿದಿದ್ದರೆ ಜೊತೆಗೆ ಹೋಗೋಣಾಂತ ಆವಾಗಿಂದ ಕಾಲ್ ಮಾಡ್ತಿದ್ದೆ ಅಂದ ಅನಿಲ್.
ಸಾರಿ, ಫೋನ್ ಸೈಲೆಂಟ್ನಲ್ಲಿಟ್ಟಿದ್ದೆ. ಆದ್ರೂ ನಾನು ಆಫೀಸಲಿರ್ಲಿಲ್ಲ
ಮೊಬೈಲ್ ಸೈಲೆಂಟಲ್ಲಿತ್ತಾ? ಯಾಕೆ? ದನಿಯಲ್ಲಿ ಸಣ್ಣ ಅನುಮಾನದ ಎಳೆ.
ದೇವಸ್ಥಾನಕ್ಕೆ ಬಂದಿದ್ದೆ
ಓ… ದೇವಸ್ಥಾನಕ್ಕಾ? ಹೇಳ್ಲೇ ಇಲ್ಲಾ…
ದಕ್ಷಿಣಾಳಿಗೆ ಈ ಮಾತಲ್ಲಿ ಇಣುಕಿದ ಅಸಹನೆಯಿಂದ ಉಸಿರುಗಟ್ಟಿದ ಹಾಗಾಯಿತು, ಸಾವರಿಸಿಕೊಂಡು ಉತ್ತರ ಕೊಡೋಷ್ಟರಲ್ಲಿ ಆ ಕಡೆ ಫೋನ್ ಕಟ್ ಮಾಡಿದ್ದ. ಆಗಾಗ ಆಫೀಸಿನಿಂದಾ ಸೀದಾ ದೇವಸ್ಥಾನಕ್ಕೆ ಹೋಗಿ ಬರೋದು ದಕ್ಷಿಣಾಳಿಗೆ ರೂಢಿಯಿತ್ತು. ಈ ವಿಚಾರ ಮನೆಯವರಿಗೆ, ಅನಿಲ್ಗೂ ಗೊತ್ತಿತ್ತು. ಆದರೆ, ಇವತ್ತು ಯಾಕೆ ದೇವಸ್ಥಾನಕ್ಕೆ ಹೋಗಿರ್ತಾಳೋ ಅನಿಲ್ಗೆ ತಿಳಿದಿರುತ್ತೆ ಅನ್ನೋದು ದಕ್ಷಿಣಾಳಿಗೆ ಅರ್ಥವಾಯಿತು. ಅವಳಿಗೆ ಒಮ್ಮೆಲೆ ನಿಸ್ಸಹಾಯಕಳು ಅನಿಸಿಬಿಡ್ತು.
ಅವಳಿಗೆ ವಿಶ್ವಾಸ್ನ ಗೆಳೆಯರಾದ ಪ್ರದೀಪ್, ಅನನ್ಯ ನೆನಪಾದರು. ಅವರ ಮನೆಗೆ ಹೊರಟುಬಿಟ್ಲು. ಅಚಾನಕ್ಕಾಗಿ ಬಂದ ದಕ್ಷಿಣಾಳನ್ನು ನೋಡಿ ಅವರಿಗೆ ಆಶ್ಚರ್ಯ ಖುಷಿ ಆಯಿತು. ಅವತ್ತು ವಿಶ್ವಾಸ್ನ ತೀರಿಕೊಂಡ ದಿನವೂ ಹುಟ್ಟಿದ ದಿನವೂ ಹೌದೆಂದು ನೆನಪಾಯಿತು. ಅವರ ಮನೆಯ ಹಾಲ್ನಲ್ಲಿ ಪ್ರದೀಪ್, ಅನನ್ಯ ಹಾಗೂ ವಿಶ್ವಾಸ್ ಕಾಲೇಜ್ ದಿನಗಳ ಮದುವೆಯ ಫೋಟೋಗಳಿದ್ದವು. ಅವೆಲ್ಲಾ ನೋಡ್ತಾ, ವಿಶ್ವಾಸ್ ಬಗ್ಗೆ ಮಾತಾಡ್ತಾ ಒಂದು ಗಂಟೆ ಕಳೆದರು. ಆಗ ದಕ್ಷಿಣಾ ಮನಸ್ಸಿಗೆ ಸ್ವಲ್ಪ ಸಮಾಧಾನವೆನಿಸಿತು. ಮನೆಗೆ ಹೊರಟಳು. ಮನೆಗೆ ಬಂದಾಗ ಅತ್ತೆಯವರು ಎಂದಿನಂತೆ ಟಿವಿ ಧಾರಾವಾಹಿಯೊಳಗೆ ಮುಳುಗಿದ್ದರು. ಇನ್ನೊಂದು ಕೋಣೆಯಲ್ಲಿ ಟ್ಯೂಷನ್ ಮೇಷ್ಟ್ರು ಮಕ್ಕಳಿಗೆ ಪಾಠ ಮಾಡ್ತಿದ್ದ. ತಮ್ಮ ಕೋಣೆಗೆ ಬಂದಳು. ಅನಿಲ್ ಲ್ಯಾಪ್ಟಾಪ್ ಮುಂದೆ ಕೂತಿದ್ದ. ಪಕ್ಕದಲ್ಲಿ ವೋಡ್ಕಾ ಬಾಟೆಲ್, ಗ್ಲಾಸಿನಲ್ಲಿ ಆಗಲೇ ಅರ್ಧ ಖಾಲಿಯಾಗಿದ್ದ ವೋಡ್ಕ.
ಯಾಕಷ್ಟು ತಡ ಆಯಿತು?
ಫ್ರೆಂಡ್ಸ್ ಮನೆಗೆ ಹೋಗಿದ್ದೆ. ಫ್ರೆಷಪ್ ಆಗಿ ಬರ್ತೀನಿ ಅನ್ನುತ್ತಾ ಬಾತ್ರೂಮಿಗೆ ಹೊರಟು ಬಿಟ್ಟಳು.
ಅನಿಲ್ಗೆ ಅಸಹನೆ ಉಕ್ಕಿದಂತಾಗಿ ಗ್ಲಾಸಿನಲ್ಲಿದ್ದ ವೋಡಾವನ್ನು ಗಟಗಟನೆ ಕುಡಿದುಬಿಟ್ಟ. ದಕ್ಷಿಣಾ ಸ್ನಾನ ಮುಗಿಸಿ, ಕನ್ನಡಿಯ ಮುಂದೆ ನಿಂತು ಬಿಂದಿ ಇಟ್ಟುಕೊಳ್ತಿದ್ದಳು.
ಅವಳ ಹಿಂದೆ ನಿಂತು ದೇವಸ್ಥಾನಕ್ಕೆ ಯಾಕೆ ಹೋಗಿದ್ದ? ಯಾರು ಆ ಪ್ರೆಂಡ್ಸ್
ಉತ್ತರಿಸಲು ಹೊರಟವಳನ್ನು ತಡೆದು ನನಗೆ ಅದೇನೂ ಬೇಕಾಗಿಲ್ಲ ಅಂದು ಅವಳನ್ನು ಕನ್ನಡಿಯಲ್ಲಿ ನೋಡ್ತಾ ಬಟ್. ಯೂ ಆರ್ ವೆರಿ ವೆರೀ ಇಂಟ್ರೆಸ್ಟಿಂಗ್.. ಅನ್ನುತ್ತಾ ಹಿಂದಿನಿಂದ ಅವಳನ್ನು ತಬ್ಬಿ ಅವಳ ಕುತ್ತಿಗೆಗೆ ಹಲ್ಲಿನಿಂದ ಕಚ್ಚಿಹಿಡಿದು ಮುದ್ದುಕೊಟ್ಟ. ಅವಳು ಕೊಸರಿಕೊಂಡು ಬಿಡಿಸಿಕೊಳೋಕೆ ನೋಡಿದರೆ, ಇನ್ನಷ್ಟು ಬಲವಾಗಿ ಅವಳನ್ನು ಗೋಡೆಗೆ ಒತ್ತಿ ಹಿಡಿದು ಯಾರು ಆ ಫ್ರೆಂಡ್ಸ್? ಕೇಳಿದ.
ಕುತ್ತಿಗೆಯ ಮೇಲೆ ಚುರುಚುರು ಉರಿಯುತ್ತಿದ್ದ ಗಾಯಕ್ಕಿಂತಾ ತನ್ನ ಕನಸಿನ ಹೊಸ ಬದುಕಿನ ಬಗ್ಗೆ ಇಟ್ಟಿದ್ದ ಭರವಸೆಗೆ ಪೆಟ್ಟು ಬಿದ್ದಂತೆನಿಸಿ ಅವಳು ನಿರ್ಭಾವುಕಳಾಗಿ ಅವನನ್ನೇ ನೋಡ್ತಾ ನಿಂತಳು. ಬೆಳಗಿನಿಂದ ಅವನಿಗಾಗ್ತಿರೋ ಅಸಹನೆಯ ಕಾರಣ ಸುಲಭವಾಗಿ ಗೊತ್ತಾಗಿತ್ತು. ತಮ್ಮಿಬ್ಬರಿಗೂ, ಈಗಾಗಲೇ ಮೊದಲೇ ಮದುವೆಯಾಗಿದ್ದು ಗೊತ್ತಿದ್ದೂ, ಅವನ್ಯಾಕೆ ಇಷ್ಟರ ಮಟ್ಟಿಗೆ ಡಿಸ್ಟರ್ಬ್ ಆಗಬೇಕು ಅರ್ಥವೇ ಆಗ್ತಿಲ್ಲ. ಅವನು ನನ್ನ ಹತ್ರ ಕೂತು ಸ್ವಲ್ಪ ಸ್ಪಷ್ಟವಾಗಿ ಮಾತಾಡಿದರೆ ಚೆನ್ನಾಗಿರುತ್ತೆ. ತಾನೂ ಎಲ್ಲಾ ವಿವರವಾಗಿ ಹೇಳಬಹುದು. ಅವನು ಮಾತಾಡ್ತಾ ಇಲ್ಲ. ಮಾತಾಡಕ್ಕೂ ಬಿಡ್ತಾ ಇಲ್ಲ…!
ಇಲ್ಲ ಮಾತಾಡಬೇಕು ಈ ಬಂಧವನ್ನು ಕಾಂಪ್ಲಿಕೇಟ್ ಮಾಡಿಕೊಳ್ಳಬಾರದು. ತನಗೂ ಇವತ್ತಿನ ದಿನ ವಿಶ್ವಾಸ್ನ ಫೋಟೋಗೆ ಹೂವಿಟ್ಟು ನೆನೆಸಿಕೊಳ್ಬೇಕು ಅನಿಸಿತ್ತು. ತಪ್ಪೇನು ಅಂತ ತಾನೇ ಕೇಳ್ಬಿಟ್ಟರೆ? ನಾನ್ಹಾಗೆ ಯಾವಾಗ ಹೇಳ್ದೆ ಅಂತ ಅವನು ತಿರುಗಿ ಪ್ರಶ್ನೆ ಕೇಳಿದ್ರೆ? ಇದೆಲ್ಲ ರಗಳೆಗಿಂತಾ ಸದ್ಯಕ್ಕೆ ಸುಮ್ನಿರೋದೇ ವಾಸಿ ಅಂತ ನಿರ್ಧಾರಕ್ಕೆ ಬಂದ್ಲು.
ಕೋಣೆಯಿಂದ ಹೊರಗೆ ಬಂದು ಅತ್ತೆಯವರ ಹತ್ರ ಸ್ವಲ್ಪ ಹೊತ್ತು ಕೂತಿದ್ದಳು. ಪರಿಸ್ಥಿತಿಯನ್ನು ತಿಳಿಯಾಗಿಸಬೇಕಂತ ಊಟದ ಹತ್ರ ಅತ್ತೆಯವರು ಅದೂ ಇದೂ ಮಾತಾಡ್ತಿದ್ರು.
ದಕ್ಷಿಣ ಅಡುಗೆಮನೆ ಕೆಲಸ ಮುಗಿಸಿ ಬಂದಾಗ ಅನಿಲ್ ಟಿ.ವಿ. ನೋಡ್ತಿದ್ದ, ಅವಳು ಮಂಚದ ಮೇಲೆ ಮಲಗಿ ಬ್ಲಾಂಕೆಟ್ ಹೊದ್ದುಕೊಳ್ಳೋಷ್ಟರಲ್ಲಿ ಅನಿಲ್ ಅದನ್ನು ತಪ್ಪಿಸಿ ಅವಳ ಹೊಟ್ಟೆ ಮೇಲೆ ತಲೆ ಇಟ್ಟುಕೊಂಡು ಟಿವಿ ನೋಡ್ತಾ ಇದ್ದ. ಎಂದಿನಂತೆ ಅವಳು, ಅವನ ತಲೆ ಕೂದಲ ಮೇಲೆ ಕೈಯಾಡಿಸದೆ ಸುಮ್ನಿದ್ದು ಬಿಟ್ಟಳು.
ಸುಮ್ನೆ ನಿದ್ದೆಹೋದರೆ ಸರಿಹೋಗುತ್ತೆ ಅಂದುಕೊಂಡು ಪಕ್ಕಕ್ಕೆ ತಿರುಗಿ ಮತ್ತೆ ಬ್ಲಾಂಕೆಟ್ ಮೈಮೇಲೆ ಹೊದ್ದುಕೊಳ್ಳೋಕೆ ಹೋದಳು. ಅವನಿಗೆ ಅವಮಾನವೆನಿಸಿ ಕೋಪ ಬಂತು. ಅವಳ ಕೈಬೆರಳುಗಳಿಗೆ ಬಲವಂತವಾಗಿ ಮುದ್ದುಕೊಟ್ಟ. ಹಾಗೆ ಅವಳ ಕೈ ಎಳೆದು ತನ್ನ ಕೂದಲಿಗೆ ತಾಕಿಸಿದ. ಅವಳು ಸುಮ್ಮನಿದ್ದಳು. ಅವನು ಅವಳ ಕಡೆ ಹೊರಳಿ ಬಲವಂತವಾಗಿ ತುಟಿಗೆ ಮುತ್ತಿಕ್ಕಿದ. ಅವಳಿಗೆ ನೋವಾಗಿ, ಅವನ ತೋಳು ಹಿಡಿದು ಹಿಂದಕ್ಕೆ ತಳ್ಳಿದಳು. ಅವನು ಆವೇಶದಿಂದ ಅವಳನ್ನು ಬಲವಂತವಾಗಿ ಆಕ್ರಮಿಸಿದ. ಅವಳು ನೋವಿನಿಂದ ಕೊಸರಿಕೊಳ್ತಿದ್ದಷ್ಟೂ ಅವನ ಕೋಪ ನಿಧಾನವಾಗಿ ಕಡಿಮೆಯಾಗ್ತಿತ್ತು. ಅವತ್ತು ಮೊಟ್ಟ ಮೊದಲ ಬಾರಿ ಅವಳಿಗೆ ಬಲಾತ್ಕಾರವೆಂಬುದು ಅನುಭವಕ್ಕೆ ಬಂತು.

***
ಎಂದಿನಂತೆ ಬೆಳಗಾಯಿತು. ಹಿಂದಿನ ರಾತ್ರಿಯ ನೋವಿನಿಂದ ದಕ್ಷಿಣ ಮೌನವಾಗಿದ್ದಳು. ಅನಿಲ್ ಮಾತ್ರ ಎಂದಿನಂತೆ ತನ್ನ ದಿನನಿತ್ಯದ ಕೆಲಸದಲ್ಲಿದ್ದ. ದಕ್ಷಿಣ ಅವನನ್ನು ನಿಲ್ಲಿಸಿ ಯಾಕೆ, ತನ್ನ ಮೈಮೇಲೆ ಬಿದ್ದು ಹಿಂಸೆ ಕೊಟ್ಟನೋ ಕೇಳಬೇಕೆನಿಸ್ತು. ಆದರೆ ಕೇಳಲಿಲ್ಲ. ಹೀಗೆ ಬಲವಂತವಾಗಿ ಅವಳನ್ನು ಹಿಂಸಿಸಿ ಸುಖಪಡೋದು ಅನುಭವಕ್ಕೆ ಬಂದ್ಮೇಲೆ, ಆಗಾಗ ಇದೇ ರೀತಿ ಹಿಂಸೆ ಕೊಡ್ತಿದ್ದ. ಕೆಲವೊಮ್ಮೆ ಚೆನ್ನಾಗಿಯೇ ನಡೆದುಕೊಳ್ತಿದ್ದ. ಅವಳು ಇದೆಲ್ಲ ಸಹಿಸಿಕೊಂಡು ಅವನಿಗೆ ಹೊಂದಿಕೊಳ್ಳೋ ಪ್ರಯತ್ನ ಮಾಡ್ತಾನೆ ಇದ್ಲು.
ನಿಧಾನವಾಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಬರ್ತಾ ಇತ್ತು.


ಒಂದು ದಿನ ಅವಳಿಗೆ ತಾನು ಗರ್ಭಿಣಿಯಾದಳೇನೋ ಅನ್ನೋ ಅನುಮಾನವಾಯಿತು. ಡಾಕ್ಟರ್ ಹತ್ರ ಪರೀಕ್ಷೆ ಮಾಡಿಸಿಕೊಂಡಾಗ ಎಷ್ಟು ವಾರದ ಪ್ರೆಗ್ನಿನ್ಸಿನೋ ಸಹ ಹೇಳಿದರು. ಸಂಜೆ ಮನೆಗೆ ಬಂದಾಗ ಅನಿಲ್ಗೆ ಈ ಸಂತೋಷದ ಸುದ್ದಿಯನ್ನು ತಿಳಿಸಿದಳು. ಅವನು ಏನೂ ಮಾತಾಡಲಿಲ್ಲ. ಸ್ವಲ್ಪ ಯೋಚಿಸಿ ನಮಗಾಗಲೇ ಇಬ್ಬರು ಮಕ್ಕಳಿದ್ದಾರಲ್ವಾ ಅಬಾರ್ಷನ್ ಮಾಡಿಸಿಕೊಂಡು ಬಿಡು. ಬೇಕಾದ್ರೆ ಅಮ್ಮ ಜೊತೆಗೆ ಬರ್ತಾರೆ ಅಂದುಬಿಟ್ಟ.
ಅವಳಿಗೆ ಮಾತೇ ಹೊರಡಲಿಲ್ಲ. ಅವನ ಉದ್ದೇಶ ಅರ್ಥವಾಯಿತು. ಇನ್ನೂ ಅಲ್ಲೇ ಇದ್ರೆ ಮಾತಿಗೆ ಮಾತು ಬೆಳೆಯುತ್ತೇನೋ. ಅನಿಲ್ ಕೋಣೆಯಿಂದ ಹೊರಟುಬಿಟ್ಟ. ಅತ್ತೆಯವರಿಗೆ ಹೇಳಿ ಪ್ರಯೋಜನವಿಲ್ಲ. ಈಗೇನು ಮಾಡೋದು.

***
ಮರುದಿನ ದಕ್ಷಿಣ ಆಫೀಸ್ಗೆ ಹೊರಟಾಗ ಹೈಮವತಿಯವರು ಆಸ್ಪತ್ರೆಗೆ ಹೋಗೋದರ ಬಗ್ಗೆ ಕೇಳಿದರು. ಎರಡು ದಿನದ ನಂತರ ಹೋಗೋಣಾಂತ ಹೇಳಿ ಆಫೀಸಿಗೆ ಹೊರಟಳು.
ಗೆಳತಿ ಸ್ವಾತಿಗೆ ಫೋನ್ ಮಾಡಿ ಈ ವಿಚಾರ ತಿಳಿಸಿದಳು ಅನಿಲ್ ಈ ವಿಚಾರದಲ್ಲಿ ಅದ್ಯಾಕೆ ಹೀಗೆ ಹಿಂಜರಿತಿದ್ದರೋ? ಇದು ಬಹಳ ಸೂಕ್ಷ್ಮ ವಿಚಾರ. ನಿಧಾನವಾಗಿ ಆಲೋಚನೆ ಮಾಡಬೇಕು. ಅಂದಳಾಗಲೀ, ಅವಳಿಗೂ ಅನಿಲ್ನ ಒಪ್ಪಿಸುವ ನಂಬಿಕೆ ಬರಲಿಲ್ಲ.

***
ಅವತ್ತು ರಾತ್ರಿ ಅನಿಲ್ ಮತ್ತೆ ಅಬಾರ್ಷನ್ ವಿಚಾರ ನೆನಪು ಮಾಡಿದ.
ನನಗೆ ಅಬಾರ್ಷನ್ ಮಾಡಿಸಿಕೊಳ್ಳೋಕೆ ಇಷ್ಟ ಇಲ್ಲ ಹೇಳಿಬಿಟ್ಟಳು.
ಅರೇ… ಮೂರನೇ ಮಗು ಯಾಕೆ ಬೇಕು?
ಮೂರನೇ ಮಗು ಬೇಕಿಲ್ಲದೇ ಇರಬಹುದು. ಆದರೆ ಈ ಮಗು ನಮ್ಮಿಬ್ಬರ ಪ್ರೀತಿಯ ಗುರುತಲ್ಲವೇ?
ಪ್ರೀತಿ ಹಂಚಿಕೊಳ್ಳೋಕೆ ಇಬ್ಬರು ಮಕ್ಕಳು ಇದ್ದಾರಲ್ವಾ?
ಇದ್ದಾರೆ, ಜೊತೆಗೆ ಮೂರನೆ ಮಗು ಇರಲಿ, ಏನಾಗುತ್ತೆ?
ಅಂದ್ರೇ.., ಈಗಿರೋ ನನ್ನಿಬ್ಬರು ಮಕ್ಕಳು ನಿನಗೆ ನಿನ್ನ ಮಕ್ಕಳು ಅನಿಸ್ತಿಲ್ವಾ? ದಢಗ್ಗನೆ ಕೇಳಿಬಿಟ್ಟ. ಅವನು ಈ ರೀತಿ ಮಾತಾಡಬಹುದೆಂದು ಒಂದು ಅಂದಾಜಿತ್ತು. ಅದಕ್ಕೇ, ಹೆದರದೆ, ಅವರಿಬ್ಬರೂ ನನ್ನ ಮಕ್ಕಳೇ ಅಂತ ನಾನೇನೂ ಎಲ್ಲರೆದುರೂ ಹೊಸದಾಗಿ ತೋರಿಸಬೇಕಾಗಿಲ್ಲ. ಆದರೂ ಇದು ನಮ್ಮ ದಾಂಪತ್ಯದ ಖುಷಿಯ ಘಳಿಗೆ. ಯೋಚನೆ ಮಾಡು ಅಂದು ಕೋಣೆಯಿಂದ ಹಾಲ್ಗೆ ಹೋಗಿ ಕೂತಳು.

***
ಮರುದಿನ ಸ್ವಾತಿಗೆ ನಡೆದ ವಿಚಾರ ಎಲ್ಲಾ ತಿಳಿಸಿದಳು ದಕ್ಷಿಣ.
ಆದರೆ ಇದೆಲ್ಲಾ ಕೇಳಿದ ಸ್ವಾತಿ ಅವನಲ್ಲಿರೋ ಭಯವನ್ನು, ಹಿಂಜರಿತನವನ್ನು ನಾವಾಗೇ ಯಾಕೆ ಜಾಸ್ತಿ ಮಾಡಬೇಕು. ಈಸಲ ಅವನು ಹೇಳಿದ ಹಾಗೆ ಕೇಳಿಬಿಡು. ಮತ್ತೆ ಹಾಗೂ ಮುಂದೆ ಇನ್ನೊಂದು ಅವಕಾಶ ಬಂದೇ ಬರುತ್ತೆ. ಆಗ ಗಟ್ಟಿಯಾಗಿ ನಿಲ್ಲಬಹುದು. ಒಮ್ಮೆ ಅವನ ಮಾತು ನಡೆಸಿಕೊಟ್ಟ ಬಲವೂ ನಮಗಿರುತ್ತೆ ಅಂದಳು.
ಮುಂದೆ ಅವಕಾಶ ಬರದೇನೇ ಇದ್ರೆ? ಆವಾಗಲೂ ಇದೇಹಠ ಮುಂದೆವರೆಯಬಹುದಲ್ವಾ? ಆದರೂ, ನನಗ್ಯಾಕೋ ಈ ಬೇಬಿ ಬೇಕನ್ನಿಸ್ತಾ ಇದೆ ಕಣೆ?
ನೋಡೇ, ಅವನಿಗಿಷ್ಟ ಇಲ್ಲದೆ ನೀನು ಬಲವಂತವಾಗಿ ನಿರ್ಣಯ ತಗೊಂಡ್ರೆ ಸಮಸ್ಯೆಗಳು ಜಾಸ್ತಿಯಾಗಬಹುದು. ದಕ್ಷಿಣ, ಈಗಿನ ಕಾಲದಲ್ಲೂ ನನ್ನ ನಿನ್ನಂಥ ಹೆಂಗಸರು ಮದುವೇನ ಒಂದು ಭವಿಷ್ಯದ ಭದ್ರತೆಯಾಗಿ ನೋಡಲೇಬೇಕಾಗಿದೆ. ಈ ವಿಚಾರದಲ್ಲಿ ನಮ್ಮ ಅಮ್ಮ, ಅಜ್ಜಿಗಳ ರೀತಿ ಯೋಚನೆ ಮಾಡಬೇಕನ್ನುತ್ತೆ ಅಂದಳು.
ದಕ್ಷಿಣ ಅವಳ ಮಾತಿನ ಬಗ್ಗೆ ಯೋಚನೆಗೆ ಬಿದ್ದಳು.


ಮರುದಿನ ಬೆಳಿಗ್ಗೆ ಇವತ್ತು 11.30ಕ್ಕೆ ಡಾಕ್ಟರ್ ಅಪಾಯಿಂಟ್ಮೆಂಟ್ ಸಿಕ್ಕಿದೆ. ಹೋಗೋಣವೇ ಹೈಮವತಿ ಹೇಳಿದರು. ಸಾರಿ, ಅತ್ತೆ.. ಇವತ್ತು ಆಗೊಲ್ಲ ಕ್ಯಾನ್ಸಲ್ ಮಾಡಿಬಿಡಿ ಅಂದು ಹೊರಟುಬಿಟ್ಟಳು. ದಕ್ಷಿಣಾಗೆ ಅಬಾರ್ಷನ್ ಮಾಡಿಸಿಕೊಳ್ಳೋದು ಇಷ್ಟವಿಲ್ಲ ಅನ್ನೋದು ಹೈಮವತಿಯವರಿಗೆ ಅರ್ಥವಾಗಿತ್ತು. ಚೊಚ್ಚಲು ಬಸಿರು ತೆಗೆಸೋದು ಯಾರಿಗೆ ಇಷ್ಟವಾಗುತ್ತೆ. ಮತ್ತೊಂದು ಕಡೆ ಮಗನ ಹಿಂಜರಿತ, ಭಯ ಯಾಕೇಂತ ಅರ್ಥವಾಗಿತ್ತು. ಆದರೆ ಅವನು ಈ ವಿಚಾರದ ಬಗ್ಗೆ ವಿವರವಾಗಿ ಮಾತಾಡ್ತಿಲ್ಲ. ಮಾತಾಡಕ್ಕೂ ಬಿಡ್ತಾ ಇಲ್ಲ. ಇದರಿಂದಾಗಿ ಇವರಿಬ್ಬರ ಮಧ್ಯೆ ಗೋಡೆಗಳು ನಿಲ್ಲಬಾರದು. ಏನು ಮಾಡಲು ತೋಚದೆ ಸುಮ್ನೆ, ಟಿವಿ ಧಾರಾವಾಹಿಗೆ ತಲೆ ಒಪ್ಪಿಸಿ ನೋಡ್ತಾ ಕೂತುಬಿಟ್ಟರು.

***
ಅವತ್ತು ಸಂಜೆ ದಕ್ಷಿಣ, ಗೌರಿಯ ತಾಯಿ ಗಂಗಾದೇವಿಯವರಿಗೆ ಫೋನ್ ಮಾಡಿ ಅವರ ಮನೆಗೆ ಹೊರಟಳು. ಅವರು ಆಗಾಗ್ಗೆ ಫೋನ್ ಮಾಡಿ ವಿಚಾರಿಸಿಕೊಳ್ತಿದದರು. ಕಾಫಿ ಕುಡಿತಾ ತನಗೆ ಪ್ರೆಗ್ನಿನ್ಸೀ ಬಂದ ವಿಷಯ ತಿಳಿಸಿದಳು. ಅವರು ಸಂತೋಷಪಟ್ಟು ಕಂಗ್ರಾಚುಲೇಷೆನ್ಸ್ ಅಂದರು.
ದಕ್ಷಿಣಾಗೆ ಅದೇ ಮೊದಲ ಅಭಿನಂದನೆ.
ಖುಷಿಯಾಗಿ ಥ್ಯಾಂಕ್ಸ್ ಅಮ್ಮ ಅಂದಳು. ಮಾತಿನ ನಡುವೆ, ಈ ವಿಚಾರದಲ್ಲಿ ತನ್ನ ಅನಿಲ್ ನಡುವೆ ನಡೆಯುತ್ತಿರೋ ಶೀತಲ ಯುದ್ಧದ ಬಗ್ಗೆ, ಹಾಗೇನೇ ಇದಕ್ಕೂ ಮುಂಚೆ ವಿಶಾಲ್ ಫೋಟೋ ಬಗ್ಗೆ ನಡೆದ ವಿಷಯವನ್ನು ನಿಧಾನವಾಗಿ ಹೇಳಿದಳು. ಇದನ್ನೆಲ್ಲಾ ಹ್ಯಾಗೆ ಸ್ವೀಕರಿಸಬೇಕು ನನಗೆ ಗೊತ್ತಾಗ್ತಾ ಇಲ್ಲಮ್ಮಾ ಅಂದು ಅವರನ್ನೇ ನೋಡ್ತಾ ಕೂತಳು. ಸ್ವಲ್ಪ ಹೊತ್ತು ಮೌನವಾಗಿದ್ರೂ, ಅವಳನ್ನು ನೋಡಿ ಇಂಥ ವಿಚಾರದಲ್ಲಿ, ಅಲ್ದೇ ಗಂಡು ಹೆಣ್ಣಿನ ಸಂಬಂಧದ ವಿಚಾರದಲ್ಲಿ ಇದು ಹೀಗೇ, ಇದು ಇಷ್ಟೇ ಅಂಥ ಹೇಳಾಕ್ಕಾಗಲ್ಲ. ಮುಂಚಿನಿಂದ ಬಂದ ನಂಬಿಕೆಗಳು, ಕೇಳಿದ ಕಥೆಗಳು ನಮ್ಮಲ್ಲಿ ಉಳಿದುಬಿಟ್ಟಿರುತ್ತೆ. ಅದಕ್ಕೆ ವಿಶಾಲ್ ಫೋಟೋ ಬಗ್ಗೆ ಅನಿಲ್ ಅಷ್ಟೊಂದು ಗಾಬರಿಯಾದನೆನಿಸುತ್ತೆ. ಹಾಗಾಗಿ ಆಗಾಗ ಇಂಥ ಘರ್ಷಣೆ ಉಂಟಾಗಬಹುದು. ಆದರೆ, ಜಗಳದಲ್ಲಿ ಕಾಲಕಳೆಯೊಕ್ಕೆ ಆಗಲ್ವಲ್ಲ. ಅದಕ್ಕೆ ಕೆಲವೊಮ್ಮೆ ಒಂದು ಹೆಜ್ಜೆ ಹಿಂದಕ್ಕೆ ಸರಿದು, ಮತ್ತೊಮ್ಮೆ ನಾವೇ ಎರಡು ಹೆಜ್ಜೆ ಮುಂದಕ್ಕೆ ಹೋಗಿ ಮಾಡಿರಬೇಕು. ಒಟ್ಟಿನಲ್ಲಿ ಸಾಮರಸ್ಯವಾಗಿ ಸಂಸಾರ ನಡೆಸೋದು ಮುಖ್ಯವಾಗಬೇಕು. ಈ ವಿಚಾರದಲ್ಲಿ ನಿನಗೆ ಇದಕ್ಕಿಂತ ಹೆಚ್ಚಿಗೆ ಏನು ಹೇಳಲಾರೆ ಅಂದು ಸುಮ್ಮನಾದರು.
ದಕ್ಷಿಣಾ ಅವರ ಮಾತಿನ ಬಗ್ಗೆ ಯೊಚಿಸುತ್ತಾ ಅಲ್ಲಿಂದಾ ಹೊರಟಳು.
ಇಷ್ಟು ಕಡಿಮೆ ಸಮಯದಲ್ಲಿ ಒಂದು ಕುಟುಂಬದಲ್ಲಿರುವ ಇಷ್ಟೊಂದು ಪಾರ್ಶ್ವ ಗಳನ್ನು ನೋಡಿದ ಹಾಗೆನಿಸಿತು. ಒಂದೇ ಸಲ ಮನೆಯಲ್ಲಿನ ಎಲ್ಲಾ ಕೋಣೆಗಳಲ್ಲೂ ದೀಪ ಹಾಕಿ ಒಮ್ಮೆಲೆ ನೋಡಿದ ಹಾಗೆ? ಇದರಿಂದೇನಾಯಿತು? ಬಹುಶ ಮನೆಯಲ್ಲಿ ಎಲ್ಲೆಲ್ಲಿ ಏನೇನು ಅಡೆತಡೆಗಳಿವೆ ಎನ್ನುವುದು ಗೊತ್ತಾಯಿತು. ಮುಂದೆ ಗೊತ್ತಿಲ್ಲದೆ ಎಡವೋದು ತಪ್ಪುತ್ತಾ? ಆದರೆ ತನ್ನಂಥವರ ಆಧುನಿಕ ಆಲೋಚನೆಗಳನ್ನು ಇದರಲ್ಲಿ ಹೊಂದಿಸುವುದು ಇನ್ನೂ ಗೊತ್ತಾಗಬೇಕು. ಬಹುಶ ಅದೂ ನಿಧಾನಕ್ಕೆ ಸಾಧ್ಯವಾಗುತ್ತೆ. ಇಷ್ಟು ಯೋಚಿಸಿದಾಗ, ಮನಸ್ಸಿಗೆ ಸ್ವಲ್ಪ ಸಮಾಧಾನವೆನಿಸಿತು ದಕ್ಷಿಣಾಳಿಗೆ. ಗಂಗಾದೇವಿಯವರಿಗೆ ಫೋನ್ ಮಾಡಿ ನನ್ನ ಸಮಸ್ಯೆಗಳಿಗೆ ಈಗಿಂದೀಗ್ಲೇ ಪರಿಹಾರ ಸಿಕ್ಕಿಲ್ಲದಿದ್ರೂ ಒಂದು ಮಾತ್ರ ಹೇಳಬಲ್ಲೆ. ನೀವು ಮತ್ತೊಮ್ಮೆ ಅಜ್ಜಿ ಆಗ್ತೀರಿ ಅಂದಳು ನಗುತ್ತಾ.
ಓಹ್, ಸಂತೋಷನಮ್ಮಾ ಅದರು ಅವರೂ ಖುಷಿಯಿಂದಲೆ.
ದಕ್ಷಿಣಾಳ ನಡಿಗೆಯಲ್ಲಿ, ಅವಳಿಗೇ ತಿಳಿಯದ ಹಾಗೆ ಒಂದು ದೃಢತೆ, ಲವಲವಿಕೆ ಬಂದು ಬಿಟ್ಟವು. ಬರುತ್ತಿರುವ ಒಳ್ಳೆಯ ಸಮಯದ ಸಂಕೇತವಾಗಿ ಎಲ್ಲಿಂದಲೋ ಬಂದ ಸಣ್ಣನೆ ಮಳೆಹನಿ ಅವಳನ್ನು ತೋಯಿಸಿತು.

 

Leave a Reply