ಜಲವಳ್ಳಿ ವಂಕಟೇಶ್, ಜಲವಳ್ಳಿ, ಹೊನ್ನಾವರ ಎಂದು ಬರೆದು ಪೋಸ್ಟ್ ಮಾಡಿದ್ದೆ..

ಸುಧಾ ಆಡುಕಳ 

ಜಲವಳ್ಳಿ ವೆಂಕಟೇಶ್ ರಾವ್ ಯಕ್ಷಗಾನದಲ್ಲಿ ಪ್ರಸಿದ್ಧಿಗೆ ಬರುವ ಮೊದಲು ನನ್ನೂರಿನಲ್ಲಿ ಬಹಳ ದಿನ ಇರುತ್ತಿದ್ದರಂತೆ. ಹಾಗಾಗಿ ಯಕ್ಷಗಾನವೆಂದರೆ ಜೀವಬಿಡುತ್ತಿದ್ದ ನನ್ನಪ್ಪನ ದೋಸ್ತರಾಗಿದ್ದರು. ಮುಂದೆ ಯಕ್ಷಗಾನದ ಮೇರುನಟರಾದರೂ ಅವರ ಮೇಳದ ಯಕ್ಷಗಾನಕ್ಕೆ ಹೋದಾಗಲೆಲ್ಲ ಚೌಕಿಮನೆಯಲ್ಲಿ ಭೇಟಿಯಾಗುತ್ತಿದ್ದರು.

ಒಂದು ಕಳವಳದಿಂದ ವಿನಿಮಯವಂತೂ ಇದ್ದೇ ಇರುತ್ತಿತ್ತು. ತಮ್ಮ ಮುಂದೆ ಬೆಳೆದ ವ್ಯಕ್ತಿ ಪ್ರಸಿದ್ಧಿ ಪಡೆದ ಬಗ್ಗೆ ತಂದೆಯವರಿಗೆ ಬಹಳ ಹೆಮ್ಮೆಯಿತ್ತು. ‘ನೋಡು ಮಡಿವಾಳರ ಪೋರ ಹೇಗಾಗಿಹೋದ’ ಎಂದು ಅಪ್ಪ ಹೆಮ್ಮೆಪಡುತ್ತಿದ್ದರು. ಅವರ ಕುಣಿತವನ್ನು ಅಪ್ಪ ವರ್ಣಿಸುತ್ತಿದ್ದುದು ಹೀಗೆ-ಮೂರು ಸುತ್ತು, ಒಂದು ಗಚ್ಚು

ಅವರ ಶನಿಪಾತ್ರವನ್ನು ನಾನು ನೋಡಲಿಲ್ಲ. ಆದರೆ ಕಂಸವಧೆಯ ಕಂಸನ ಪಾತ್ರ ಮಾತ್ರ ಇಂದಿಗೂ ಕಣ್ಣಿಗೆ ಕಟ್ಟಿದೆ. ಮಲಗಿದ್ದ ಕಂಸನಿಗೆ ಕೃಷ್ಣನ ಕನಸು ಬಿದ್ದು ಎಚ್ಚರಗೊಳ್ಳುವ ದೃಶ್ಯದ ಅವರ ಅಭಿನಯ ಇಂದಿಗೂ ನೆನಪಿನಲ್ಲಿದೆ.

ಅವರ ಕಣ್ಣಿನಲ್ಲಿ ಅದೆಂಥದ್ದೋ ಮಾಂತ್ರಿಕತೆಯಿತ್ತು. ಕೊಳಗಿ ಅನಂತ ಹೆಗಡೆಯವರ ಕೃಷ್ಣ ಮತ್ತು ಅವರ ಕಂಸನ ಸಂಭಾಷಣೆ ಅದೊಂದು ಅಪ್ಪಟ ನಾಟಕದ ಸ್ಕ್ರಿಪ್ಟ್ ನಂತಿತ್ತು. ಅವರ ಗದಾಯುದ್ಧದ ಭೀಮನ ಪಾತ್ರವೂ ತುಂಬಾ ಹಿಡಿದಿತ್ತು. ಒಮ್ಮೆ ಬೇರೊಬ್ಬರ ಭೀಮನ ವೇಷ ನೋಡಿ ಅಪ್ಪ ಹೇಳಿದ್ದರು, ” ಥೂ, ಗದೆಯನ್ನು ಪ್ರಯಾಸಪಟ್ಟು ಎಳೆದುಕೊಂಡು ಹೋದಂತಿದೆ. ಭೀಮಂಗೆ ಏನಿದ್ರೂ ನಮ್ಮ ವೆಂಕಟೇಶನೇ ಸೈ” ಎಂದು.

ನಾನು ಡಿಗ್ರಿ ಓದುತ್ತಿರುವಾಗ ಕೆರೆಮನೆ ಮಹಾಬಲೇಶ್ವರನ ಹೆಗಡೆ ಮತ್ತು ಜಲವಳ್ಳಿ ಇಬ್ಬರಿಗೂ ಅದೇನೋ ಪ್ರಶಸ್ತಿ ಬಂದಿತ್ತು. ಅದಕ್ಕೆಂದು ಕಾಲೇಜಿನಲ್ಲಿ ಸನ್ಮಾನದ ಏರ್ಪಾಡಾಗಿತ್ತು. ಮಹಾಬಲೇಶ್ವರನ ಹೆಗಡೆಯವರು ಚಂದದ ಭಾಷಣ ಮಾಡಿದ್ದರೆ ಇವರು ಮಾತ್ರ ವೇದಿಕೆಯಲ್ಲಿ ತುಂಬಾ ಅತ್ತಿದ್ದರು.

ಒಂದು ಕೆರೆಮನೆಯವರಂತವರೊಂದಿಗೆ ತನಗೆ ಸನ್ಮಾನವಾಗುತ್ತಿದೆಯಲ್ಲ ಎಂಬುದಕ್ಕೆ, ಮತ್ತೊಂದು ಶಾಲೆಯ ಮುಖವನ್ನೇ ಕಾಣದ ತನಗೆ ಕಾಲೇಜಿನಲ್ಲಿ ಸನ್ಮಾನವಾಗುತ್ತಿರುವ ಬಗ್ಗೆ. ಆದರೆ ಈ ಬಗ್ಗೆ ತನ್ನ ಭಾಷಣದಲ್ಲಿ ಮಹಾಬಲ ಹೆಗಡೆಯವರು ಏನನ್ನೂ ಹೇಳಲಿಲ್ಲ.

ಅವರು ಹಾಗೆ ಬಿಕ್ಕಿ, ಬಿಕ್ಕಿ ಅತ್ತದ್ದು ನನ್ನನ್ನು ತುಂಬಾ ಕಾಡಿತ್ತು. ಹಾಗೆ ಸನ್ಮಾನಗೊಳ್ಳುವ ಎಲ್ಲ ಅರ್ಹತೆಯೂ ಅವರಿಗಿದೆಯೆಂದು ಹೇಳಬೇಕೆನಿಸಿತ್ತು. ತುಂಬಾ ಸಂಕೋಚ ಸ್ವಭಾವದ ನನಗೆ ಮುಖತಃ ಹೇಳುವ ಧೈರ್ಯವಿರಲಿಲ್ಲ. ಅದಕ್ಕಾಗಿ ಅವರಿಗೊಂದು ಪತ್ರ ಬರೆದೆ. ಬರೆದಾದ ಮೇಲೆ ವಿಳಾಸ ತಿಳಿಯದೇ ಗೊಂದಲಗೊಂಡೆ. ಯಾರಲ್ಲಿಯಾದರೂ ಕೇಳಿದರೆ ಏನೆಂದಾರೋ ಎಂಬ ಮುಜುಗರ.

ಹಾಗಾಗಿ, ಜಲವಳ್ಳಿ ವಂಕಟೇಶ್, ಜಲವಳ್ಳಿ, ಹೊನ್ನಾವರ ಎಂದು ಬರೆದು ಪೋಸ್ಟ್ ಮಾಡಿದ್ದೆ. ತಲುಪಿತ್ತೋ, ಇಲ್ಲವೋ ತಿಳಿಯದು. ನಾನಂತೂ ಹಗುರಾಗಿದ್ದೆ.

ಜಲವಳ್ಳಿಯವರ ಸಾವು ಮತ್ತೆ ಹಳೆಯದನ್ನು ನೆನಪಿಸಿತು.

3 comments

Leave a Reply