ದಾಳಮ್ಮನ ಮಗ ದಲ್ಲಾಳಿ ನರಸಿಂಹನಿಗೂ ನನ್ನ ತಾತ ತಿಮ್ಮಯ್ಯನಿಗೂ

ಬಿಸ್ಮಿಲ್ಲಾ(ಹಲಾಲ್) ಬಡಾಗೋಶ್- ಅಂಬಾಭವಾನಿ -ದೊಡ್ಡ ಬಾಡಾಮ್ರ

ಡಾ.ವಡ್ಡಗೆರೆ ನಾಗರಾಜಯ್ಯ

ದಾಳಮ್ಮನ ಮಗ ದಲ್ಲಾಳಿ ನರಸಿಂಹನಿಗೂ ನನ್ನ ತಾತ ತಿಮ್ಮಯ್ಯನಿಗೂ ಗಳಸ್ಯ ಕಂಠಸ್ಯ ವಿಶ್ವಾಸವಿತ್ತು. ಜಾನುವಾರುಗಳ ವ್ಯಾಪಾರ ಸಾಪಾರದ ವ್ಯವಹಾರ ಕುದುರಿಸುವ ದಲ್ಲಾಳಿ ಕೆಲಸ ಮಾಡುತ್ತಿದ್ದ ಅವನು ಪ್ರತಿ ಶನಿವಾರ ಅಕ್ಕಿರಾಂಪುರದ ಮರಿ ಸಂತೆಗೆ ಕಡ್ಡಾಯವಾಗಿ ಹೋಗುತ್ತಿದ್ದ. ಸುತ್ತಲೂ ಹತ್ತಾರು ಹಳ್ಳಿಗಳ ರೈತಾಪಿ ಕುರಿಗಾರರು ಸಂತೆಯಲ್ಲಿ ಮಾರಲು ತಂದಿದ್ದ ಕುರಿ -ಮೇಕೆಗಳನ್ನು ಕೊಳ್ಳುವ ಮತ್ತು ಮಾರುವ ವಹಿವಾಟುಗಳಲ್ಲಿ ಮಧ್ಯವರ್ತಿಯಾಗಿ ನೆರವಾಗುತ್ತಿದ್ದನು. ಯಾವುದೇ ಆರ್ಥಿಕ ಬಂಡವಾಳ ಹೂಡದೆಯೇ ಹಣ ಸಂಪಾದನೆ ಮಾಡುತ್ತಿದ್ದ ಅವನು, ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಿದ್ದಕ್ಕೆ ಪ್ರತಿಯಾಗಿ ಮಾಲೀಕ ಮತ್ತು ಗಿರಾಕಿಗಳಿಬ್ಬರಿಂದಲೂ ‘ದಲ್ಲಾಳಿ ದುಡ್ಡು’ ಪಡೆದುಕೊಳ್ಳುತ್ತಿದ್ದನು. ಅದೇ ದುಡ್ಡಿನಲ್ಲಿ ಅವನು ವಾರಕ್ಕೆ ಬೇಕಾಗುವಷ್ಟು ಸಂತೆ ಸಾಮಾನು, ಮೀನು ಮಾಂಸ ಹೆಂಡ ಮುಂತಾದ ಖರ್ಚುಗಳನ್ನು ತೂಗಿಸಿಕೊಂಡು ಹೋಗುತ್ತಿದ್ದನು.

ನನ್ನ ತಾತನ ಮನೆಯಲ್ಲೊಂದು ನಾಟಿ ಹಸುವಿನ ಪಡ್ಡೆ ಇತ್ತು. ಈಗಿನಂತೆ ಆ ಕಾಲದಲ್ಲಿ ಸೀಮೆ ತಳಿಯ ದನಗಳಿರಲಿಲ್ಲ. ಎಲ್ಲಿ ನೋಡಿದರೂ ನಾಟಿ ದನಗಳಿದ್ದವು. ರೈತಾಪಿ ಜನರು ಕೃಷ್ಣ ತಳಿಯ ಅಥವಾ ಹಳ್ಳಿಕಾರ್ ತಳಿಯ ನಾಟಿ ದನಗಳನ್ನು ಮತ್ತು ನಾಟಿ ಎಮ್ಮೆಗಳನ್ನು ಮಾತ್ರ ಸಾಕುತ್ತಿದ್ದರು. ಈಗಿನಂತೆ ಸಂಕರ ತಳಿಯ ಸೀಮೆ ದನಗಳು ಆಗ ಕಾಣಿಸುತ್ತಿರಲಿಲ್ಲ. ಎಲ್ಲೋ ಅಪರೂಪಕ್ಕೆ ಸಾಹುಕಾರರ ಮನೆಗಳಲ್ಲಿ ಸೀಮೆ ಹಸುಗಳು ಕಾಣಸಿಗುತ್ತಿದ್ದವು. ನಾಟಿ ಹಸುವಿನ ಹೋರಿಗರುಗಳು ಹೆಚ್ಚು ಬೆಲೆಗೆ ಮಾರಾಟವಾಗುತ್ತಿದ್ದರೆ, ಎಮ್ಮೆಯ ಕ್ವಾಣಗರುಗಳು ತೀರಾ ಕಮ್ಮಿ ಬೆಲೆಗೆ ಮಾರಾಟವಾಗುತ್ತಿದ್ದವು. ತಾತನ ಮನೆಯಲ್ಲಿದ್ದ ನಾಟಿ ಹಸುವಿನ ಹೋರಿಗರುವೊಂದನ್ನು ಮಧುಗಿರಿ ದಂಡಿನ ಮಾರಮ್ಮನ ಪರಿಶೆಯಲ್ಲಿ ಹೆಚ್ಚಿನ ಬೆಲೆಕಟ್ಟಿ ಮಾರಿಸಿದ್ದ ನರಸಿಂಹ ಅದೇ ದುಡ್ಡಿನಲ್ಲಿ ನಾಟಿ ಹಸುವಿನ ಪಡ್ಡೆಯೊಂದನ್ನು ನನ್ನ ತಾತನಿಗೆ ಪರಿಶೆಯಲ್ಲಿ ಕೊಡಿಸಿಕೊಟ್ಟಿದ್ದ. ಕಳೆದೊಂದು ವರ್ಷದಿಂದ ಸದಾ ಕೈಮೇವು ತಿನ್ನಿಸಿಕೊಂಡು ಜೋಪಾನವಾಗಿ ಸಾಕುತ್ತಿದ್ದ ಆ ಪಡ್ಡೆಯನ್ನು ನಮ್ಮ ತಾತನು ನನ್ನ ಅಮ್ಮನಿಗೆ ತವರು ಮನೆ ‘ಬಳುವಳಿ’ ಕೊಡುವುದಾಗಿ ಹೇಳಿಕೊಳ್ಳುತ್ತಿದ್ದ. ಮನೆಯ ಮುಂದಿದ್ದ ಅಗಸೆ ಮರಕ್ಕೆ ಕಟ್ಟಿಹಾಕಿ ಸದಾ ನೆಲ್ಲುಗದ್ದೆ ಮತ್ತು ಕಬ್ಬಿನ ಗದ್ದೆಗಳ ಹಸಿರು ಮೇವು ಮತ್ತು ಕೈಮೇವನ್ನು ತಿನ್ನಿಸಿ ಸಾಕಾಣಿಕೆ ಮಾಡಿದ್ದರಿಂದಾಗಿ ಆ ಹಸುವಿನ ಪಡ್ಡೆಯು ಮೈದುಂಬಿಕೊಂಡು ಹೋರಿಯಂತೆ ಕಾಣಿಸುತ್ತಿತ್ತು.

ತಾತನೊಂದಿಗೆ ಬೀಡಿ ಸೇದುತ್ತಾ ನಿಂತಿದ್ದ ನರಸಿಂಹ, ‘ಅಕ್ಕಿರಾಂಪುರದ ಸುಬಾನು ಅಂಗಡಿನಾಗೆ ಬಾಡು ತರಾಕೆ ವೋತಿದ್ದೀನಿ.., ನಿಮಗೆಷ್ಟು ಗುಡ್ಡೆ ಬಾಡು ತರಲಿ ಹೇಳಜ್ಜಾ…? ಯಂಗೂ ಇವ್ನು ನಾಗರಾಜ ಬಂದವ್ನಲ್ಲಾ…!’ ಎಂದ. ನನ್ನ ಕೆನ್ನೆ ಹಿಂಡುತ್ತಾ, ‘ಕರಿಯಮ್ಮ ದೇವ್ರಿಗೆ ಕತ್ತರಿಸಿದ ಕ್ವಾಣನ ಒಮ್ಮಕ ನೀನೊಬ್ಬನೇ ಬೇಕಿದ್ರೂ ತಿಂದ್ಕಮ್ತಿಯಾ ಕಣಲೇ…. ಭಲೇ ಇಂಥೋನ್ ನೀನು’ ಎಂದು ಹೇಳುತ್ತಾ ಹಿಂಡುತ್ತಿದ್ದ ಕೆನ್ನೆಗಳನ್ನು ಹಿಡಿದು ಹಿಂದಕ್ಕೂ ಮುಂದಕ್ಕೂ ಕುಲುಮತೊಡಗಿದ್ದ. ಕೆನ್ನೆಗಳನ್ನು ಎರಡೂ ಕೈಗಳಿಂದ ಒಸಕಿಕೊಳ್ಳುತ್ತಾ, ‘ನರಸಿಂಹಣ್ಣಾ…. ಆ ಸಾಬರ ಸುಬಾನು ಅಂಗಡಿವರ್ಗೂ ಯಾಕ್ಹೋಗ್ತೀಯ… ನಮ್ಮ ಈ ಹಸಿನಪಡ್ಡೆ ಕೊಯ್ಯನಾ ಬಿಡು…. ಯಂಗೂ ಇದನ್ನ ನಮ್ಮ ತಾತ ನಮ್ಮ ಅಮ್ಮಂಗೆ ಬಳುವಳಿ ಕೊಡತೈತಂತೆ!’ ಎಂದು ಅಗಸೆ ಮರಕ್ಕೆ ಕಟ್ಟಲಾಗಿದ್ದ ಹಸುವಿನ ಪಡ್ಡೆಯ ಕಡೆಗೆ ತೋರಿಸಿದ್ದೆ. ‘ಭಲೆರೇ ಐನಾತಿ ಕುಳ ಕಣಲೇ ನೀನು…. ಇಂಗೇ ಬಿಟ್ಟರೆ ನಿನ್ನಾ… ಅಜ್ಜಿ ತಾತನ ಹೊಲಮನೆ ಇವಾಗ್ಲೇ ಬರಿಸ್ಕಬಿಡ್ತೀಯಾ…’ ಎಂದು ಜರಿದು ಮಾತಾಡಿ, ತಾತನಿಂದ ಎರಡು ರೂಪಾಯಿ ನೋಟು ಇಸಿದುಕೊಂಡು ಅಕ್ಕಿರಾಂಪುರದ ದಾರಿ ಹಿಡಿದಿದ್ದ ನರಸಿಂಹ.

ದನದ ಬಾಡು ವಹಿವಾಟುದಾರನಾಗಿದ್ದ ಸಾಬರ ಸುಬಾನು ನಮ್ಮ ಪಾಲಿನ ಆರಾಧ್ಯ ಮೂರ್ತಿಯಾಗಿದ್ದ. ಕುರಿ ಕೋಳಿ ಮೀನು ಮೇಕೆಗಳ ದುಬಾರಿ ಬೆಲೆಯ ಮಾಂಸಕ್ಕಿಂತ ಸುಲಭ ಬೆಲೆಗೆ ಸಿಗುತ್ತಿದ್ದ ದೊಡ್ಡಬಾಡು, ಬೀಳುಬಿದ್ದ ಜಾನುವಾರುಗಳ ಕಳೇಬರದ ಮತ್ತು ಊರಿನ ಪರಿಶೆಗೆ ದೇವರೆದುರು ಕತ್ತರಿಸಿದ ಕ್ವಾಣದ ದೊಡ್ಡಬಾಡು ನಮ್ಮ ಪ್ರಧಾನ ಮಾಂಸಾಹಾರವಾಗಿತ್ತು. ಅನಾರೋಗ್ಯದ ಕಾರಣಗಳಿಂದ ಸತ್ತು ವಿಸರ್ಜಿತವಾದ ಜಾನುವಾರುಗಳ ಮಾಂಸವನ್ನು ವೈದ್ಯರ ತಾಕೀತಿನ ಮೇಲೆ ಕ್ರಮೇಣವಾಗಿ ತಿನ್ನುವುದನ್ನು ಬಿಟ್ಟ ನಾವು, ಮಾಂಸಕ್ಕಾಗಿ ಅಕ್ಕಿರಾಂಪುರ, ಕೊರಟಗೆರೆ, ಮಧುಗಿರಿಯಲ್ಲಿದ್ದ ಸಾಬರ ಕಟುಕರ ಅಂಗಡಿಗಳನ್ನು ಆಶ್ರಯಿಸಿದ್ದೆವು. ಸಾಬರು ಬಿಸ್ಮಿಲ್ಲಾ (ಹಲಾಲ್) ಮಾಡಿದ ಬಡಾಗೋಶ್ ಎಂಬ ‘ಅಂಬಾಭವಾನಿ’ಯ ದೊಡ್ಡಬಾಡನ್ನು ನಮಗೆ ಒದಗಿಸುತ್ತಿದ್ದರು. ಸಾಬರ ಅಂಗಡಿಯ ಬಾಡು, ಚಿಕ್ಕನಹಳ್ಳಿಯ ಹಟ್ಟಿಯಲ್ಲಿ ಸತ್ತಿಗೆಪ್ಪನು ಅಪರೂಪಕ್ಕೊಮ್ಮೆ ಕೊಯ್ಯುತ್ತಿದ್ದ ಕ್ವಾಣ್ಮರಿಯ ಗುಡ್ಡೆಬಾಡಿನಷ್ಟು ರುಚಿ ಕಾಣಿಸುತ್ತಿರಲಿಲ್ಲ. ನಮ್ಮ ಜನ ಯಾವ ಪರಿ ಬಾಡುಪ್ರಿಯರಾಗಿದ್ದರೆಂದರೆ ಹಲ್ಲುದುರಿದ ಮುದುಕ ಮುದುಕಿಯರೂ ಸಹ ಮೆತ್ತನೆಯ ಚಿಚ್ಚಿ ತುಕ್ಕಡವನ್ನು ಹುಡುಕಿ ನಮುಲಲಾಗದಿದ್ದರೂ ಬಾಯಿಗಿರಿಸಿಕೊಂಡು ಅತ್ತಾಇತ್ತಾ ಬೊಚ್ಚುಬಾಯೊಳಗೆ ನಾಲಗೆಯಿಂದ ಹೊರಳಾಡಿಸಿಕೊಂಡು ರಸ ಚೀಪುತ್ತಿದ್ದರು. ಕೆಂಡದ ಮೇಲೆ ಸುಟ್ಟ ಕೊರಬಾಡಿನ ಒಂದು ತುಂಡಾದರೂ ಇಲ್ಲದ ಹೊರತು ಕೆಲವರ ಗಂಟಲಲ್ಲಿ ಮುದ್ದೆ ಅಥವಾ ಅನ್ನದ ತುತ್ತು ಇಳಿಯಲು ಹಿಂದೇಟು ಹಾಕುತ್ತಿತ್ತು.

ಬಾಡಾಮ್ರ ಬೇಯುವ ದಿನ ನನ್ನ ಸಂಭ್ರಮೋಲ್ಲಾಸ ಹೇಳತೀರದು. ಮಾಂಸವನ್ನು ಚಿಕ್ಕ ಚಿಕ್ಕ ತುಕ್ಕಡಗಳನ್ನಾಗಿ ಕತ್ತರಿಸುವಾಗಿನಿಂದ ಹಿಡಿದು ಊಟಕ್ಕೆ ಸಿದ್ಧವಾಗುವವರೆಗೆ ಪ್ರತಿಯೊಂದು ಹಂತವನ್ನು ಕುತೂಹಲದಿಂದ ಕಣ್ಣರಳಿಸಿ ಗಮನಿಸುತ್ತಿದ್ದೆ. ತಾತನ ಮನೆಯಲ್ಲಿ ಮನೆಗೆಲಸಗಳನ್ನು ಮಾಡದೆ ಹತ್ತಾರು ಸಬೂಬು ಹೇಳಿ ಕೆಲಸದಿಂದ ಕದ್ದುಬಿಡುವ ಸ್ವಭಾವ ಬೆಳೆಸಿಕೊಂಡಿದ್ದ ನಾನು, ಬಾಡಾಮ್ರ ಬೇಯಿಸುವ ಕೆಲಸಗಳಲ್ಲಿ ಮಾತ್ರ ಅತ್ಯಂತ ಮುತುವರ್ಜಿ ವಹಿಸುತ್ತಿದ್ದೆ. ನೀರು ಸೇದಿ ತರುವುದು, ಸೌದೆಪುಳ್ಳೆ ಮುರಿದುತಂದು ಒಲೆ ಮುಂದೆ ಜೋಡಿಸಿಡುವುದು, ಒಲೆ ಉರಿಸುವುದು ಇನ್ನೂ ಮುಂತಾದ ಕೆಲಸಗಳಲ್ಲಿ ನೆರವಾಗುತ್ತಿದ್ದೆ. ಯಾರಾದರೂ ಹುಡುಗರು ಆಟವಾಡಲು ಕರೆದರೂ ಸಹ ಆಟಕ್ಕೆ ಹೋಗಲು ನಿರಾಕರಿಸುತ್ತಿದ್ದೆ. ಆಟ ಪಾಠಗಳೇನಿದ್ದರೂ ಬಾಡಾಮ್ರ ಹೊಟ್ಟೆಗೆ ಬಿದ್ದ ಬಳಿಕವಷ್ಟೇ ಬೇಕಾಗುತ್ತಿದ್ದವು.

ದಾಳಮ್ಮನ ಅಳಿಯ ನರಸಿಂಹ ನನ್ನ ತಾತನಿಂದ ಬಾಡು ತರಲೆಂದು ಎರಡು ರೂಪಾಯಿ ನೋಟು ಇಸಿದುಕೊಂಡು ಅಕ್ಕಿರಾಂಪುರದ ದಾರಿ ಹಿಡಿದ ಬಳಿಕ, ನಾನು ನನ್ನ ಕೈ ಕೊಸರಿಕೊಂಡು ವಾರಿಗೆಯ ಹುಡುಗರೊಂದಿಗೆ ಆಟವಾಡಲು ಹೊರಟೆ. ಉಪ್ಪುನೀರು ಬಾವಿಯ ಹತ್ತಿರದ ಕರಿಯಮ್ಮ ದೇವರ ಬೇವಿನ ಮರದ ಕೆಳಗೆ ಹುಡುಗರು ಆಟವಾಡುತ್ತಿದ್ದರು. ಬಿಸಿಲೇರಿ ಮೈಚುರುಗುಟ್ಟುವವರೆಗೂ ಹುಡುಗರೊಂದಿಗೆ ಆಟವಾಡುತ್ತಿದ್ದ ನಾನು, ನರಸಿಂಹನು ಅಡಕೆಪಟ್ಟೆ ಬಾಳೆಲೆ ಸುತ್ತಿ ಕಟ್ಟಿಕೊಂಡು ತಂದ ಬಾಡಿನ ಪೊಟ್ಟಣವನ್ನು ಹಿಡಿದುಕೊಂಡು ನಡೆದು ಬರುತ್ತಿದ್ದದ್ದನ್ನು ನೋಡಿ ಆಟವಾಡುವುದನ್ನು ಬಿಟ್ಟು ಅಜ್ಜಿಯ ಬಳಿಗೆ ಓಡಿಬಂದಿದ್ದೆ.

ಅದಾಗಲೇ ಚಿಕ್ಕಮ್ಮಜ್ಜಿ ಬಾಡು ಬೇಯಿಸುವ ಮಣ್ಣಿನ ಮಡಕೆ, ಮರದ ಮುಚ್ಚಳ, ಮರದ ಸೌಟುಗಳೆಲ್ಲವನ್ನೂ ಬಿಸಿನೀರು ಬೂದಿಯಲ್ಲಿ ತೊಳೆದು ಅಂಗಳದ ಬಿಸಿಲಿನಲ್ಲಿ ಒಣಗಿಸಿ ಸಿದ್ಧಪಡಿಸಿ ಒಲೆಯ ಬಳಿ ಇರಿಸಿಕೊಂಡಿದ್ದಳು.ತೆಂಗಿನ ಮರದ ಬುಡದಲ್ಲಿ ಕುಳಿತಿದ್ದ ರಾಮಕ್ಕ ದೊಡ್ಡಮ್ಮ, ಬಾಡಿನ ವಾಸನೆ ಹಿಡಿದು ಮನೆಯ ಬಳಿ ಸುಳಿದಾಡುತ್ತಿದ್ದ ಬೀದಿನಾಯಿಗಳನ್ನು ಕುಳಿತಲ್ಲಿಂದಲೇ ಬೆದರಿಸಿ ಓಡಿಸುತ್ತಿದ್ದಳು. . ಕೊಟ್ಟಿಗೆಯಲ್ಲಿ ಕುಳಿತಿದ್ದ ತಾತನು ಚೂರಿಯಿಂದ ಬಾಡು ಕತ್ತರಿಸಿ ಚಿಕ್ಕ ತುಂಡುಗಳನ್ನಾಗಿ ಮಾಡುತ್ತಿದ್ದ ಸೋಜಿಗದ ದೃಶ್ಯವನ್ನು ನೋಡುತ್ತಾ ನಾನು ಅವನ ನೆರವಿಗೆ ಒದಗಿದ್ದೆ. ಕಳ್ಳು ಪಚ್ಚಿ ಈರಿ ದೊಮ್ಮೆ ಗುಂಡಿಗೆಕಾಯಿ ಹೀಗೆ ಎಲ್ಲವೂ ಸಮ ಬೆರಕೆಯಲ್ಲಿದ್ದ ಗುಡ್ಡೆಬಾಡು ಅದು. ಎಲ್ಲವನ್ನೂ ಒಪ್ಪವಾಗಿ ತೊಳೆದು ಬಾಡಿನ ಮಡಕೆಯಲ್ಲಿ ಸಾಕಷ್ಟು ಪ್ರಮಾಣದ ನೀರು ತುಂಬಿ, ಕೊಟ್ಟಿಗೆಯಲ್ಲಿ ಹೂಡಲಾಗಿದ್ದ ಪ್ರತ್ಯೇಕ ಬಾಡೊಲೆ ಮೇಲೆ ಮಡಗಿ ಬೆಂಕಿ ಹತ್ತಿಸಿದ್ದ. ಚಿಕ್ಕಮ್ಮಜ್ಜಿ ಆಗಿನ ಅಡುಗೆಗೆ ಬೇಕಾದ ಖಾರ ಮಸಾಲೆಯನ್ನು ಆಗಲೇ ತಯಾರಿಸುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಳು.

ಬಾಡಾಮ್ರಕ್ಕೆ ಅಗತ್ಯವಾದ ಖಾರಮಸಾಲೆ ಪದಾರ್ಥಗಳನ್ನು ತಾತ ಸಮಪ್ರಮಾಣದಲ್ಲಿ ತೆಗೆದು ಕೊಟ್ಟ. ಅಡುಗೆ ಮನೆಯ ಒಲೆಯ ಮೇಲೆ ಒಣ ಮೆಣಸಿನಕಾಯಿ, ಕೊತ್ತಂಬರಿ ದನಿಯಾ ಬೀಜ, ಜೀರಿಗೆ ಮೆಣಸು ಮೆಂತ್ಯಗಳನ್ನು ಬೋಕಿಯ ಓಡಿನಲ್ಲಿ ಕಮ್ಮಗೆ ಉರಿದುಕೊಂಡ ಚಿಕ್ಕಮ್ಮಜ್ಜಿ ಅವೆಲ್ಲವನ್ನೂ ಅಸೆಕಲ್ಲಿನ (ಕಾರಬಂಡೆ) ಮೇಲೆ ಮಡಗಿ ಅರಕಲ್ಲಿನಿಂದ (ರುಬ್ಬಗುಂಡು) ರುಬ್ಬುತ್ತಾ ಅಗತ್ಯವಾದ ಪೂರಕ ಉದಗರಣೆಗಳಾದ ಈರುಳ್ಳಿ ಬೆಳ್ಳುಳ್ಳಿ ಚಕ್ಕೆ ಲವಂಗ ಕಾಯಿಹೋಳು ಶುಂಠಿ ಬೆಳ್ಳುಳ್ಳಿ ಗಸಗಸೆ ಟೊಮೆಟೋ ಪುದೀನ ಮುಂತಾದವುಗಳನ್ನು ರುಬ್ಬಿಕೊಂಡಳು. ಅವಳಿಗೆ ಇವೆಲ್ಲಾ ಐಟಮ್ಮುಗಳು ಇರಲೇಬೇಕೆಂಬುದೇನು ಕಡ್ಡಾಯವಾಗಿರಲಿಲ್ಲ. ಕೇವಲ ಒಣ ಮೆಣಸಿನಕಾಯಿ ಈರುಳ್ಳಿ ದನಿಯಾ ಬೀಜಗಳಿದ್ದರೂ ಸಾಕು. ಒಳ್ಳೆ ರುಚಿಯಾದ ಬಾಡಾಮ್ರ ತಯಾರಾಗಿಬಿಡುತ್ತಿತ್ತು. ಖಾರಮಸಾಲೆ ರುಬ್ಬುತ್ತಿರುವಾಗಲೇ ಅದರ ವಿಶೇಷ ಪರಿಮಳ ನನ್ನನ್ನು ಸೆಳೆದು ನಿಲ್ಲಿಸಿ ಬಾಯಲ್ಲಿ ನೀರೂರಿಸಿತ್ತು. ಸೌದೆ ಉರಿಸುತ್ತಾ ಬಾಡು ಬೇಯಿಸಲೆಂದು ನನ್ನನ್ನು ಒಲೆ ಮುಂದೆ ಕೂರಿಸಿದ ತಾತ, ತಾನು ಬೆಳಗ್ಗೆಯೇ ಹುಡುಕಿ ತಂದಿದ್ದ ಮುತ್ತುಗದ ಹಸಿರೆಲೆಗಳಿಂದ ಐದಾರು ಇಸ್ತ್ರದೆಲೆಗಳನ್ನು ಮತ್ತು ಜೊನ್ನೆಗಳನ್ನು ಅಚ್ಚಿದ.

ಅಜ್ಜಿಯು ರುಬ್ಬಿ ಕೊಟ್ಟ ಖಾರಮಸಾಲೆಯನ್ನು ಬಾಡು ಅರ್ಧದಷ್ಟು ಬೆಂದಾಗ ಮಡಕೆಗೆ ಸುರಿದು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿದ ತಾತ ಇದೆಲ್ಲವನ್ನೂ ಸೌಟಿನಿಂದ ತಿರುಗಿಸಿ ಮುಚ್ಚಳ ಮುಚ್ಚಿ ಬೇಯಿಸತೊಡಗಿದ್ದ. ಈ ನಡುವೆ ಚಿಕ್ಕಮ್ಮಜ್ಜಿ ರಾಗಿಮುದ್ದೆ ತೊಳೆಸಿ ತಲೆಗಾತ್ರದ ಆರು ಚೆಂಡುಗಳನ್ನು ಕಟ್ಟಿ ಮಡಕೆಯಲ್ಲಿರಿಸಿ ಮುಚ್ಚಳದಿಂದ ಮುಚ್ಚಿಮಡಗಿದಳು. ತುಕ್ಕುಡಗಳಿಗೆ ಖಾರಮಸಾಲೆ ಹತ್ತಿ ಕುದಿಯುತ್ತಿರುವಾಗ ಇಡೀ ಹಟ್ಟಿ ಬಾಡಿನ ಘಮಲಿನಿಂದ ತುಂಬಿಕೊಂಡಿತ್ತು. ಮನೆಯಾಚೆ ನಾಯಿಗಳು ಬಾಲ ಅಲ್ಲಾಡಿಸುತ್ತಾ ಕುಂಞ್ಯುಗುಡುತ್ತಿದ್ದವು. ಬಾಡೆಸರು ಚೆನ್ನಾಗಿ ಕುದಿದ ಬಳಿಕ ಅಜ್ಜಿಯು ನೆಲ್ಲಕ್ಕಿಯನ್ನು ರುಬ್ಬಿ ಕೊಟ್ಟಿದ್ದ ‘ಒಂದಿಟ್ಟು’ ಕೂಡಿಸಿ ಮತ್ತೆ ಚೌಟಿನಿಂದ ಬಾಡೆಸರು ತಿರುಗಿಸಿ ಮತ್ತೊಂದು ಕುದಿಯಷ್ಟು ಕುದಿಸಿದ್ದ. ಅಜ್ಜಿಯು ಒಲೆ ಕೆಂಡದಲ್ಲಿ ಕುಡುಗೋಲಿನ ತುದಿಯನ್ನು ಕೆಂಪಗೆ ಕಾಯಿಸಿ ಬಾಡೆಸರಿನೊಳಗಿಟ್ಟು ಸುರ್ರೆನ್ನಿಸಿ ದೃಷ್ಟಿ ತೆಗೆದು ಬಾಡಿನ ಮಡಕೆಯನ್ನು ಕೆಳಗಿಳಿಸಿದಳು.

ಕೈ ತೊಳೆದುಕೊಂಡು ಎಲ್ಲರೂ ಕೊಟ್ಟಿಗೆಯ ಈಚಲ ಚಾಪೆ ಮೇಲೆ ಒಟ್ಟಿಗೆ ಕುಳಿತು ಮುತ್ತುಗದ ಎಲೆಯ ಮೇಲೆ ತಲಾ ಒಂದೊಂದು ರಾಗಿಮುದ್ದೆ ಮತ್ತು ದೊನ್ನೆಯಲ್ಲಿ ಬಾಡಾಮ್ರ ಮಡಗಿಕೊಂಡು ಕೈಗೂ ಬಾಯಿಗೂ ಪೈಪೋಟಿ ಏರ್ಪಡಿಸಿ ಉಣ್ಣತೊಡಗಿದ್ದೆವು. ಮಣ್ಣಿನ ಮಡಕೆಯಲ್ಲಿ ಕಮ್ಮಗೆ ತಯಾರಾದ ರಾಗಿಮುದ್ದೆ ಮತ್ತು ಮಣ್ಣಿನ ಮಡಕೆಯಲ್ಲಿ ಬೇಯಿಸಿದ ಬಾಡೆಸರಿನ ಘಮಲಿನೊಂದಿಗೆ ಮುತ್ತುಗದ ಹಸಿರೆಲೆಯ ಪತ್ರಾವಳಿಯ ಪರಿಮಳವೂ ಸೇರಿಕೊಂಡು ಬಾಡಿಟ್ಟು ಊಟ ನಮಗೆ ಮತ್ತೇರಿಸಿತ್ತು.

ಸಂಜೆಯಾಗುತ್ತಾ ಅಜ್ಜನ ಕಂಠದಲ್ಲಿ ಜೇನುಕಟ್ಟಿದ್ದ ಅನಾದಿ ಕಾಲದ ದುಂಬಿಹಾಡುಗಳು ಝೇಂಕರಿಸತೊಡಗಿದ್ದವು!

Leave a Reply