ಬೆಟ್ಟದ ಮೇಲಿನ ಬಟ್ಟಬಯಲು

ರಾಜೇಶ್ವರಿ ಚನ್ನಂಗೋಡ್ 

ಥಟ್ಟನೆ ಬಟ್ಟಬಯಲು
ಅದೆಷ್ಟು ಹೆಜ್ಜೆಗಳೋ ತುದಿಯ ಹುಡುಕಿ ಹೊರಟಾಗಿನಿಂದಿಟ್ಟಿದ್ದು
ಉಸಿರು ಮುಗಿದಂತನಿಸಿದ್ದೂ
ಎದೆಯೊಳಗೇ ಉಸಿರಿಗಾಗಿ ಸೇರಿಸಿಕೊಳ್ಳುತ್ತಲೇ ಹೋದ
ಖಾಲಿ ಜಾಗವದೆಷ್ಟೋ
ಹೌದು, ನಾನು ನಿಲ್ಲದೇ ನಡೇಯುವುದು ಕಲಿತೇ
ಉಸಿರು ಗಟ್ಟಿಯಾಗಿಸಿಕೊಳ್ಳುವುದೂ ಬಂತು
ಆದರೆ ಹೀಗೇ ನಡೇದರಷ್ಟೇ ಸಿಗುವುದಾಗಿದ್ದದ್ದು
ಇಷ್ಟು ಉಸಿರ ಶಕ್ತಿ ಬೇಕಿದ್ದದ್ದು
ನಿನ್ನ ತಲುಪಲು ಮಾತ್ರ
ನೀನೆಂಬ ತುದಿಗಾಗಿ,
ನನ್ನದೊಬ್ಬಳದೇ ಪಾದವೊಂದೇ ನಿಲುವಷ್ಟು ಜಾಗವಿರುವ
ಆ ನೀನೆಂಬ ತುದಿಗಾಗಿ ಮಾತ್ರ
ನಿನ್ನಲ್ಲಿ ಚಲನೆ ಮುಗಿದಂತೇ
ಬಾನು ಭೂಮಿಯ ಮುಟ್ಟುವಾ ಜಾಗದಲೆಂಬಂತೇ
ತಲ್ಲೀನವಾಗಲು ಮಾತ್ರ
ಆದರೀಗ!
ಥಟ್ಟನೆ ಬಟ್ಟಬಯಲು
ಅಲ್ಲಿ ಹುಲ್ಲು,
ಹಸಿರು, ನೀರು

ಬಾನು ಭುವಿಯನ್ನಪ್ಪಿ ಮಲಗಿದ ಅಮ್ಮನ
ಬೆಚ್ಚನೆ ಮಡಿಲು
ಆದರಲ್ಲಿ ನಾನು ಕಾಣಬೇಕೆಂದನಿಸಿದ ನೀನಿಲ್ಲ
ಅಲ್ಲಿ ನನಗನಿಸಿದಂಥಾ ತಲ್ಲೀನತೆಯೇನಿಲ್ಲ
ಗುನುಗು ಗಾಳಿ
ಗುಂಗಲ್ಲಿರುವ ಯಾರೋ ಭಾಷೆಯರಿಯದ
ಕುರುಬ, ಕುರಿಗಳು
ಮತ್ತೆ ಹೀಗೆ ಉಸಿರುಗಟ್ಟಿ ನಡೆದಾಗ ಜತೆಗಿದ್ದ
ನಾಯಿಯಿತ್ತಲ್ಲ, ನಡೆಯುತ್ತ ಹುಟ್ಟಿದ್ದ ಬಾಂಧವ್ಯವಿತ್ತಲ್ಲ
ಅದೂ ನನ್ನೊಳಗಿನಷ್ಟೇ ವಿಶೇಷವಾದದ್ದಾಗಿ
ಆ ನಾಯಿಯೊಳಗೇನೂ ಉಳಿದಿಲ್ಲವೆನಿಸಿದೆ
ನಾನಾ ನಾಯಿಗೆ ಈಗ ಬಂದು ಹಾಗೆ ಹೋಗುವ
ಯಾತ್ರಿಕಳಷ್ಟೇ, ನನಗನಿಸುವಂತೇ
ಅದರೊಳಗೂ ಮಾಯಾಜಾಲದ ವಿಚಿತ್ರ ಕುತೂಹಲವೇನಿರುವಂತಿಲ್ಲ
ಹೌದು,
ಬೆಟ್ಟದ ಮೇಲಿನ ಬಟ್ಟಬಯಲು
ನೀನು
ಅಲ್ಲಿ,
ನಾನೂ.

(ಮಾನಾ ಎಂಬ ಗ್ರಾಮ ಭಾರತದ ತುದಿಯ ತುಂಡು, ಅದರಾಚೆ ಗಡಿಯೆಂಬ ಗೆರೆ . ಮಾನಾದಿಂದ ಪಾಂಡವರು ಸ್ವರ್ಗಾರೋಹಣ ಶುರುಮಾಡಿದ್ದೆಂದು ಕಥೆ, ಅದರಾಚೆಗೆ ಹೊರಡುವ ಪರ್ವತಾರೋಹಣದ ದಾರಿಗೆ ಸ್ವರ್ಗಾರೋಹಣದ್ದೇ ಹೆಸರು. ೨೫ ಕಿಲೋಮೀಟರುಗಳಷ್ಟಿದೆಯಂತೆ ಆ ದಾರಿ, ನಾನು ಕಂಡಿದ್ದು ಅದರ ಮೊದಲ ಐದು ಕಿಲೋಮೀಟರುಗಳಷ್ಟೇ. ಅಲ್ಲಿ ಕಾಣುವುದು ಕಣಿವೆ, ಜಲಪಾತ, ಹುಚ್ಚು ಹಿಡಿವಷ್ಟು ಬೆಟ್ಟಗಳು, ಸುತ್ತಲೂ..)

Leave a Reply