ನನಗೆ ಸಿಕ್ಕ ಅಪ್ಪನೇ ಬೇರೆ! ತೇಜಸ್ವಿಯವರಿಗೆ ಸಿಕ್ಕ ಅಪ್ಪನೇ ಬೇರೆ!!


ಮಲ್ಲಿಕಾರ್ಜುನ ಹೊಸಪಾಳ್ಯ

ಇತ್ತೀಚಿಗೆ ನನ್ನದೊಂದು ಪುಸ್ತಕ ಬಿಡುಗಡೆಯಾಯಿತು. ಅದೊಂದು ಪ್ರಬಂಧಗಳ ಸಂಕಲನ. ನಮ್ಮೂರಿನಲ್ಲಿ ಕಂಡ ವ್ಯಕ್ತಿಗಳು, ಸನ್ನಿವೇಶಗಳು ಹಾಗೂ ನನ್ನ ವೃತ್ತಿ ಬದುಕಿನಲಿ ಕಂಡ ಅನುಭವಗಳನ್ನು ದಾಖಲಿಸುವ ಪ್ರಯತ್ನ. ಆದರೆ ಇಡೀ ಪುಸ್ತಕದಲ್ಲಿ ತುಂಬಾ ಬೈಗುಳ ಇದೆ ಅಂತ ಕೆಲವರು ತಕರಾರು ತೆಗೆದರು. ಮೊದಲ ತಕರಾರು ಬಂದಿದ್ದೆ ಮುನ್ನುಡಿ ಬರೆದ ಶ್ರೀ ಡಿ.ಎಸ್. ನಾಗಭೂಷಣ ಅವರಿಂದ!.

ನನ್ನ ಬರಹಗಳ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಕೊನೆಯಲ್ಲಿ “ಕೆಲವೆಡೆ ನಿರೂಪಣಾ ಶೈಲಿಯನ್ನು ಹೆಚ್ಚು ರೋಚಕ ಮತ್ತು ಅಥೆಂಟಿಕ್ ಮಾಡಲು ಹೋಗಿ ಅನಗತ್ಯವಾದೆಡೆಯೆಲ್ಲಾ ಹೇರಳವಾಗಿ ಅಶ್ಲೀಲ ಪದಗಳ ಸುರಿಮಳೆಯೇ ಆಗಿದೆ” ಎಂದು ಬರೆದ ಅವರು “ಬರಹಗಳಲ್ಲಿ ಹಾಸ್ಯ ಸ್ಫುರಿಸುವ ರೀತಿಯನ್ನು ತಿಳಿಯಲು ತೇಜಸ್ವಿಯವರ ಬರಹಗಳನ್ನು ಓದಿಕೊಳ್ಳಬೇಕೆಂಬ” ಸೂಚನೆಯನ್ನೂ ಕೊಟ್ಟರು. ಅವರು ಹೇಳಿದ್ದು ಸಕಾರಣವಾಗಿಯೇ ಇತ್ತು!

ಇದು ಇಲ್ಲಿಗೇ ಮುಗಿಯಲಿಲ್ಲ.

ಪುಸ್ತಕ ಬಿಡುಗಡೆಯಂದು ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಿರಿಯ ಪತ್ರಕರ್ತ ಶ್ರೀ ಜಿ.ಎನ್. ಮೋಹನ್ ಅವರು ಇಡೀ ಪುಸ್ತಕದಲ್ಲಿ ಒಟ್ಟು  ೩೫೦ ಬೈಗುಳಗಳಿವೆ ಎಂಬ ಪಕ್ಕಾ ಲೆಕ್ಕವನ್ನೂ ನೀಡಿ ಲೇಖಕರನ್ನೂ, ಸಭಿಕರನ್ನೂ ದಂಗುಬಡಿಸಿದರು. ಮುಂದುವರೆದು ಮಾತನಾಡಿದ ಅವರು ಇನ್ನೊಂದೆರಡು ಸಲ ಈ ಪುಸಕ ಓದಿದರೆ ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಸಿಕ್ಕಿಕೊಂಡಾಗ ನನ್ನ ಬಾಯಲ್ಲೂ ಇಂತಹ ಬೈಗುಳಗಳೇ ಬಂದುಬಿಡಬಹುದು ಎಂದು ಭಯಪಟ್ಟರು. ಅವರ ಭಯವೂ   ಸಕಾರಣವಾದದ್ದೇ!!

ಈ ಇಬ್ಬರ ಸಾಲಿಗೆ ಮತ್ತೊಬ್ಬರೂ ಸೇರಿಕೊಂಡರು.
ಪುಸ್ತಕ ಬಿಡುಗಡೆ ಮಾಡಿದ ತೇಜಸ್ವಿಯವರ ಒಡನಾಡಿ ಪ್ರೊಫೆಸರ್. ಬಿ.ಎನ್. ಶ್ರೀ ರಾಮ ಅವರು “ಯುವ ಲೇಖಕರು ಧ್ಯಾನಿಸಿ ಬರೆಯಬೇಕು, ಕಲಾತ್ಮಕತೆ ಇದ್ದಾಗ ಬರಹಗಳು ಗಟ್ಟಿಯಾಗುತ್ತವೆ” ಎಂದು ಹೇಳುತ್ತಾ, “ಇದು ಅರ್ಥವಾಗಬೇಕಾದರೆ ತೇಜಸ್ವಿಯವರ ಬರಹಗಳನ್ನು ಓದಿಕೊಳ್ಳಬೇಕು” ಎಂಬ ಸಲಹೆ ಕೊಟ್ಟರು. ಅವರು ಹೇಳಿದ್ದರಲ್ಲಿಯೂ ಸಕಾರಾಣಗಳೇ ಇದ್ದವು!!

ಇದೆಲ್ಲವನ್ನೂ ಕೇಳಿದ ಮೇಲೆ ಲಲಿತ ಪ್ರಬಂಧ, ಸಣ್ಣ ಕಥೆ ಇತ್ಯಾದಿ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಳ್ಳುವುದಕ್ಕಿಂತಲೂ ತೆಪ್ಪಗೆ ಕೃಷಿ ಲೇಖನಗಳನ್ನು ಬರೆದುಕೊಂಡು ಇರುವುದೇ ಲೇಸೆಂದು ನನಗೆ ಅನ್ನಿಸಿದ್ದು ಸುಳ್ಳಲ್ಲ.

ಆದರೂ ಇಷ್ಟೆಲ್ಲಾ ಹಿರಿಯರು ಹೇಳಿದ್ದು ಕೇಳಿದ ಮೇಲೆ ತುಂಬಾ ಯೋಚನೆ ಮಾಡಿದೆ. ನನ್ನ ಬರಹಗಳ-ಅದರಲ್ಲಿಯೂ ಬೈಗುಳಗಳ-ಹಿಂದಿನ ಮೂಲ  ಪ್ರೇರಣೆ ಎಲ್ಲಿದೆ ಅಂತ ಕೆದಕುತ್ತಾ ಹೋದೆ. ಕೆದಕುತ್ತಾ, ಕೆದಕುತ್ತಾ ನಾನು ಹೀಗೆ ಬರೆಯಲು ನನ್ನ ಅಪ್ಪನೇ ಕಾರಣ ಎಂಬುದು ಮನವರಿಕೆಯಾಯಿತು. ಏಕೆಂದರೆ ತೇಜಸ್ವಿಯವರಿಗೆ ಕುವೆಂಪು ಅವರಂತಹ ಸುಸಂಸ್ಕೃತ ತಂದೆ ಸಿಕ್ಕಿದ್ದರು. ಅವರ ಮನೆಯಲ್ಲಿ ಒಬ್ಬರೂ ಒಂದು ಕೆಟ್ಟ ಪದವನ್ನೂ ಮಾತಾಡುತ್ತಿರಲಿಲ್ಲ.

ಅಣ್ಣನ ನೆನಪು  ಪುಸ್ತಕದಲ್ಲಿ ತೇಜಸ್ವಿ  ಬರೆದಿರುವುದನ್ನು ನೆನಪಿಸಿಕೊಳ್ಳುವುದಾದರೆ, ಮೈಸೂರಿನಲ್ಲಿ ಒಮ್ಮೆ ಕುವೆಂಪು ಅವರು ಬಾಲಕರಾಗಿದ್ದ ತೇಜಸ್ವಿ ಮತ್ತು ಚೈತ್ರ ಅವರನ್ನು ಕರೆದುಕೊಂಡು ಹಿಂಡಿ ತರಲು ಗಾಣಕ್ಕೆ ಹೋಗುತ್ತಾರೆ. ಗಾಣ ಹೊಡೆಯುತ್ತಿದ್ದವನು ಒಂದು ಬೆಲೆ ಹೇಳುತ್ತಾನೆ, ಆಗ ತೇಜಸ್ವಿಯವರು ಅಮ್ಮ ಹೇಳಿಕೊಟ್ಟಂತೆ ಚೌಕಾಶಿ ಮಾಡುತ್ತಾರೆ. ಗಾಣದ ಮಾಲೀಕ “ಅಯ್ಯಾ ಇದ್ಯಾವ ಲೆಕ್ಕ ಬುಡಿ, ಇದು ನಿಮ್ಮಪ್ಪರ ಶಪ್ಪಕ್ಕೆ ಸಮಾನ” ಎಂದು ಅವನ ಸಹಜ ಭಾಷೆಯಲ್ಲಿ ಅಂದುಬಿಡುತ್ತಾನೆ. ಕೂಡಲೇ ಕುವೆಂಪು ಅವರು ಧಾವಂತದಿಂದ ಅವನಿಗೆ ದುಡ್ಡು ಕೊಟ್ಟು ಅಲ್ಲಿಂದ ಮಕ್ಕಳನ್ನು ಹೊರಡಿಸಿಕೊಂಡು ಬಂದುಬಿಡುತ್ತಾರೆ. ಮಕ್ಕಳ ಕಿವಿಗೆ ಕೆಟ್ಟ ಪದಗಳು ಬೀಳಬಾರದು ಎಂಬುದೇ ಅವರ ಧಾವಂತದ ಉದ್ದೇಶ

ತೇಜಯವರಿಗೆ ಸಿಕ್ಕಿದ್ದು ಇಂತಹಾ ಅಪ್ಪ. ಆದರೆ ನನಗೆ ಸಿಕ್ಕ ಅಪ್ಪನಾದರೋ ಇದಕ್ಕೆ ಸಂಪೂರ್ಣ ತದ್ವಿರುದ್ಧ. ಆವತ್ತು ಕುವೆಂಪು ಜಾಗದಲ್ಲಿ ನನ್ನ ಅಪ್ಪನೇನಾದರೂ ಇದ್ದಿದ್ದರೆ ಗಾಣದವನ ಮರ್ಮಕ್ಕೆ ತಾಗುವಂತೆ ಎದುರುತ್ತರ ಹೇಳಿ ಚೌಕಾಶಿ ಮಾಡಿದ ಮಗನನ್ನು ಹುರಿದುಂಬಿಸಿ ಬಿಡುತ್ತಿತ್ತು.
ಅಂಥಾವರ ಹೊಟ್ಟೆಯಲ್ಲಿ ಹುಟ್ಟಿದ ನನ್ನ ಬರವಣಿಗೆಯಲ್ಲಿ ಬೈಗುಳಗಳು ಬಾರದೇ ಇರುತ್ತವೆಯೇ?. ಇದು ಅರ್ಥವಾಗಬೇಕಾದರೆ ನನ್ನ ಬಾಲ್ಯದ ಬಗ್ಗೆ ಹೇಳಬೇಕು.

ನಮಗೆ ದಿನಾ ವತ್ತಿಲೆ ಬೆಳಕರಿಯುತ್ತಿದ್ದುದೇ ಅಪ್ಪನ ಬೈಗುಳಗಳ ಮೂಲಕ. ಕೋಳಿ ಕೂಗುವ ಹೊತ್ತಿಗೇ ಏಳುತ್ತಿದ್ದ ಅಪ್ಪನ ಮೊದಲ ಕೆಲಸ ದೂರದ ಹಳ್ಳದಿಂದ ನೀರು ತರುವುದು. ಅಷ್ಟೊತ್ತಿಗೆ ಅಮ್ಮನೂ ಸೇರಿದಂತೆ ನಾವೆಲ್ಲಾ ಮಲಗಿರುತ್ತಿದ್ದೆವು. ಒಂದೆರಡು ಸಲ ಮೆಲುದನಿಯಲ್ಲಿ “ಲೇ ಇವಳೇ, ಅಮ್ಮಯ, ಬಸುಲಿಂಗ, ಗಂಗಾದ್ರಿ, ಮಂಜಗ, ಮಲ್ಲಿ” ಎಂದು ಎಲ್ಲರ ಹೆಸರನ್ನು ಹೇಳುತ್ತಾ ಎಬ್ಬಿಸುತ್ತಿತ್ತು. ನಾವಾದರೋ ಮಲಗಿದ್ದ ಕಡೆಯೇ ಸುಮ್ಮನೇ ಮುಲುಕಾಡಿ ಮಗ್ಗುಲು ಬದಲಾಯಿಸುತ್ತಿದ್ದೆವೇ ಹೊರತು ಯಾರೂ ಏಳುತ್ತಿರಲಿಲ್ಲ. ಆಗ ಸುರುವಾಗುತ್ತಿತ್ತು ಬೈಗುಳಗಳ ಸರಮಾಲೆ. “ಸೂರ್ಯ ಹುಟ್ಟೊ ಹೊತ್ತಾದ್ರೂ ಬಿದ್‌ಗಂಡಿದಿರ ಏಳ್ರಿ ಮ್ಯಾಕ್ಕೆ. ಹೊತ್ತುಗ್ಮುಂಚೆ ಎದ್ದು ದನಕರ ಕಟ್ಟನ, ತಿಕಮಕ ತೊಳಕಮನ ಅನ್ನದು ಬಿಟ್ಟು ಮಲಗಿದ್ದ ಕಡೆನೆ ಮುಲಕಾಡ್ತಿರಾ” ಎಂಬಿತ್ಯಾದಿ ಪಲ್ಲವಿಯೊಡನೆ ಬರುತ್ತಿದ್ದ ವಾಕ್ಯಗಳು ಮೊದಲ ಚರಣ ತಲುುಪುವ ಹೊತ್ತಿಗೆ ಕರ್ಣಕಠೋರವಾಗುತ್ತಿದ್ದವು. ನಮ್ಮದು ಒಂಟಿ ಮನೆಯಾದುದರಿಂದ ಬಚಾವು. ಅಕ್ಕ-ಪಕ್ಕ ಸುಸಂಸ್ಕೃತ ಮನೆತನಗಳೇನಾದರೂ ಇದ್ದರೆ ನೇಣಾಕಿಕೊಳ್ಳುತ್ತಿದ್ದರು.

ಇವುಗಳನ್ನು ಬೈಗುಳಗಳೆಂದು ನಾವೆಂದೂ ಅಂದುಕೊಂಡೇ ಇರಲಿಲ್ಲ. ಅವೆಲ್ಲಾ ಬದುಕಿನ ಸಹಜ ಭಾಗವೇ ಆಗಿದ್ದವು. ಯಾವತ್ತಾದರೂ ಒಂದು ದಿನ ಅಪ್ಪ ಆ ರೀತಿ ಮಾತನಾಡದಿದ್ದರೆ “ಇವ್ವತ್ತೆನೋ ಗ್ರಾಚಾರ ಕಾದೈತೆ” ಎಂದು ನಮ್ಮ-ನಮ್ಮಲ್ಲೆ ಮಾತಾಡಿಕೊಳ್ಳುತ್ತಿದ್ದೆವು. ಅಷ್ಟರಮಟ್ಟಿಗೆ ಬೈಗುಳ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿತ್ತು.

ಪ್ರತಿದಿನವೂ ಬೆಳಿಗ್ಗೆ ಅಪ್ಪ ಶಿವ ಪೂಜೆ ಮಾಡುತ್ತಿತ್ತು (ನಮ್ಮ ಬಾಯಲ್ಲಿ ಸೀಪೂಜೆ). ಅದೂ ಬರೋಬ್ಬರಿ ಮುಕ್ಕಾಲು ಗಂಟೆ. ಅಷ್ಟು ಹೊತ್ತು ಬಾಯಲ್ಲಿ ‘ಓಂ ಗಂಗೇ ಜಯಾಮುನೇ ಜೈವ ಗೋದಾವರಿ’ ಎಂಬ ಮಂತ್ರಗಳೂ, ‘ಹೂವ ಚೆಲ್ಲಾಡುವೆನೂ ಎನ್ನಯನ ಮೇಲೊಂದುವ್ವ ಚೆಲ್ಲಾಡುವೆನೂ, ಕಲ್ಯಾಣದಣ್ಣ ಬಾರೋ ಬಸವಣ್ಣ’ ಎಂಬಿತ್ಯಾದಿ ದೇವರ ನಾಮಗಳೂ, ‘ಇಷ್ಟೊತ್ತಾದ್ರೂ ಒಬ್ ನನ್ನೆಂಡ್ತಿ ಮಗನೂ ಹೊಲದ ಕಡೆ ತಲೆ ಹಾಕಿಲ್ವಲ್ಲಾ, ಹೊಟ್ಟೆಗೇನ್ ತಿಂಥಿರಾ’ ಮುಂತಾದ ಆಶೀರ್ವಾದಗಳೂ ಪುಂಕಾನುಪುಂಖವಾಗಿ ಉದುರುತ್ತಿದ್ದವು.
ಭಕ್ತಿಯನ್ನೂ ಬೈಗುಳವನ್ನೂ ಒಂದೇ ಬದ್ಧತೆಯಿಂದ ಏಕಕಾಲಕ್ಕೆ ಪ್ರದರ್ಶಿಸುತ್ತಿದ್ದ ನೆಲಮೂಲದ ಪ್ರತಿಭೆ ಅದು. ಗಂಟೆ ಬಾರಿಸುತ್ತಾ, ಊದುಕಡ್ಡಿ ಬೆಳಗುತ್ತಾ, ಮಂಗಳಾರತಿ ಎತ್ತುತ್ತಾ??(ದೇವರಿಗೂ, ನರಮಾನವರಿಗೂ) ಎದುರಿಗೆ ಸಿಕ್ಕವರನ್ನು ಬೈಯುತ್ತಾ ಅವರ ಪೂಜಾ ಕೈಂಕರ್ಯ ಮುಗಿಯುತ್ತಿತ್ತು.

ಕೇವಲ ಸಿಟ್ಟು ಬಂದಾಗ ಮಾತ್ರವಲ್ಲ, ಸಂತೋಷವಾಗಿದ್ದಾಗಲೂ ಬೈಗುಳಗಳ ಮೂಲಕವೇ ಆ ಭಾವವನ್ನು ವ್ಯಕ್ತಪಡಿಸುತ್ತಿದ್ದುದು ಅವರ ಮತ್ತೊಂದು ವೈಶಿಷ್ಟ್ಯ.  ಒಮ್ಮೆ ಪಕ್ಕದೂರಿನ ದೊಡ್ಡತಿಮ್ಮಯ್ಯ ಅಪ್ಪ ಸಾಕಿದ್ದ ಎತ್ತುಗಳನ್ನು “ಬಲ್ ಚೆನಾಗ್ ಸಾಕಿದ್ದಿರ ಸ್ವಾಮೆ, ಒಳ್ಳೆ ರಾಮ-ಲಕ್ಷ್ಮಣ ಇದ್ದಂಗವೆ” ಎಂದು ಹೊಗಳಿ ಮಾತಾಡಿದರು. ಅದಕ್ಕೆ ಅಪ್ಪ “ನಾನೊಬ್ನೇ  ಸಾಯ್ ಬೇಕು ಕಣಯ್ಯ, ಯಾವನನ್ ಮಗನೂ ಅವುಗಳ್ ತಿಕನೂ ಮೂಸ್ ನೋಡಲ್ಲ” ಎಂದು ಉತ್ತರ ಕೊಟ್ಟರು.

ಉಪಚಾರವನ್ನೂ ಬೈಯುತ್ತಲೇ ಮಾಡುವ ಕುಶಲ ಕಲೆಯೂ ಅಪ್ಪನಿಗೆ ಸಿದ್ಧಿಸಿತ್ತು. ಒಮ್ಮೆ ಕಲ್ಲು ಕುಟ್ಟುವ ವೆಂಕಟರಮಣಪ್ಪ ಮನೆಗೆ ಬಂದಿದ್ದರು. ಅಮ್ಮ ಇರಲಿಲ್ಲ. ಅದೂ ಇದೂ ಮಾತಾಡಿದ ಅಪ್ಪ ಟೀ ಕಾಸಲು ಅಡುಗೆ ಮನೆಗೆ ಹೋಯಿತು. ಅದರ ಬಗ್ಗೆ ಅರಿವಿಲ್ಲದ ಆತ ಎದ್ದು ಹೋಗೇಬಿಟ್ಟ. ಲೋಟದಲ್ಲಿ ಟೀ ಹಿಡಿದು ಹೊರಬಂದು ನೋಡಿದರೆ ಅವರಾಗಲೇ ಪರ್ಲಾಂಗು ದೂರದಲ್ಲಿದ್ದರು. ಅಪ್ಪ ಜೋರಾಗಿ ಗಳ್ಳು ಹಾಕಿ ಕರೆಯಿತು. ಅವನು ವಾಪಸ್ಸು ಬಂದಿದ್ದೇತಡ “ಯೇಸ್ಜನುಕ್ಕುಟ್ದೋನಲೇ ನೀನು, ಕಾಪಿ ಕಾಸ್ತಾ ಇದ್ರೆ ಮೈಮೇಲೆ ನಿಟ್ಟಿಲ್ದೋನಂಗೆ ಎದ್ದೋಗ್ತಿಯಾ, ನಿನ್ ನೆಣುಕ್ ನನ್ ಮೆಟ್ಟಾಕ” ಎಂದು ಘನವಾಗಿ ಉಪಚಾರ ಮಾಡಿದರು. ಆತನಾದರೋ ಅಪ್ಪನ ಕಾಪಿ ಘಮಲಿಗೆ ಸಂಪೂರ್ಣ ಶರಣಾಗತಿ ವ್ಯಕ್ತಪಡಿಸಿ ನಗುನಗುತ್ತಲೇ ಸೊರ್ ಸೊರ್ ಅಂತ ಕಾಪಿ ಚಪ್ಪರಿಸಿ ‘ಓಗ್ ಬತ್ತಿನ್ ಸ್ವಾಮೇ’ ಎಂದು ಈಸಲ ಅಪ್ಪಣೆಯನ್ನು ಪಡೆದೇ ಮುಂದಡಿಯಿಟ್ಟ.

ಇನ್ನು ಅಪ್ಪ-ಅಮ್ಮನ ಬೈಮಾತುಗಳು ಮತ್ತೊಂದು ಎತ್ತರಕ್ಕೇಏರುತ್ತಿದ್ದವು. ಸಣ್ಣ-ಸಣ್ಣ ವಿಷಯಕ್ಕೂ ಅವರು ಜಗಳ ಕಾಯುತ್ತಿದ್ದರು. ಮರುಕ್ಷಣದಲ್ಲೇ  ನಗಾಡುತ್ತಿದ್ದರು. ಒಂದು ಸಲ ಏನಾಯಿಂತೆಂದರೆ, ಮನೆಯಲ್ಲಿ ಕುರ್ಚಿಗಳಿಲ್ಲದ ಬಗ್ಗೆ ಮಾತಿಗೆ ಮಾತು ಬೆಳೆಯಿತು. ಅಮ್ಮ “ಕಂಡೋರ ಮನೇಲಿ ಕುಂತ್ ಬತ್ತೀಯಲ್ಲಾ, ನಮ್ಮನೇಗೂ ತರಬೇಕು ಅಮ್ತ ತಿಗದಾಗೆ ಅರಾಸ್ ಇಲ್ವಾ ನಿಂಗೆ” ಅಂದು ಬಿಟ್ಟಿತು.

ಇಂತಹವು ನಡೆಯುತ್ತಲೇ ಇದ್ದವು, ಜೊತೆಗೆ ನಮ್ಮ ಬೈಗುಳ ಶಬ್ದ ಭಂಡಾರ ವಿಸ್ತರಿಸುತ್ತಲೇ ಇತ್ತು.
ಸುತ್ತ-ಮುತ್ತ ಮಕ್ಕಳಿದ್ದಾರೆ, ಅವರು ಕೇಳಿಸಿಕೊಳ್ಳುತ್ತಾರೆ ಎಂಬ ಯಾವ ಹಿಂಜರಿಕೆಗಳೂ ಅವರಲ್ಲಿ ಇರುತ್ತಿರಲಿಲ್ಲ. ಎಲ್ಲವೂ ಮುಕ್ತ-ಮುಕ್ತ. ಅಲ್ಲದೆ ಮಕ್ಕಳ ಜೊತೆಗೆ, ಊರವರ ಜೊತೆಗೆ, ಕೂಲಿಯವರೊಂದಿಗೆ, ನೆಂಟರಿಷ್ಟರ ಕೂಟೆ, ಸ್ನೇಹಿತರ ಜೊತೆಗೆಲ್ಲಾ ಹೀಗೇ ಮಾತಾಡುತ್ತಿದ್ದರು ಅನ್ನಿ.
ಇಂಥಾವರ ಹೊಟ್ಟೆಯಲ್ಲಿ ಹುಟ್ಟಿ, ಇಂತಹಾ ಮಾತಿನ ಸೊಬಗನ್ನು ನೋಡುತ್ತಾ, ಕೇಳುತ್ತಾ, ಅದರಲ್ಲೊಂದು ಭಾಗವಾಗಿಯೇ ಬೆಳೆದ ನನ್ನ ಬರವಣಿಗೆಗಳಲ್ಲಿ ಬೈಗುಳಗಳಿಲ್ಲದಿದ್ದರೆ ಯಾವ ನ್ಯಾಯ ನೀವೇ ಹೇಳಿ. ನಾನು ಏನೇ ಬರೆದರೂ ಅದು ನನ್ನ ಅಪ್ಪನ ಬಳುವಳಿ. ನಿಮ್ಮ ಅಸಮಾಧಾನ-ಸನ್ಮಾನ, ಮುನಿಸು-ಶಹಭಾಸುಗಳೇನಿದ್ದರೂ ಅವರಿಗೇ ಸಲ್ಲತಕ್ಕದ್ದು. ನಾನು ಕೇವಲ ನಿಮಿತ್ತ ಮಾತ್ರ.

8 comments

  1. ಅದೇನೋ ಸರಿ ಬಿಡಿ ಸರ್. ನಿಮ್ಮಿಂದ ಪ್ರೇರಿತನಾಗಿ ನಾನೀಗ ನಮ್ಮ ತಾತನ ಬಗ್ಗೆಯೂ ಬರಿಬೌದು. ನಾನು ಆಡುವ ಕೆಲವು ಮಾತುಗಳನ್ನು ಈಗಲೂ ನನ್ನ ಶ್ರೀಮತಿ ಖಂಡಿಸ್ತಾಳೆ. ಅಂದ್ರೆ ಅವುಗಳು ಬೈಯ್ಗುಳ ಪದಗಳು ಅಲ್ಲ, ನಮ್ಮ ಮನೆಯಲ್ಲಿ ಆಡುತ್ತಿದ್ದ ಮಾತುಗಳು. ಇನ್ನು ತೇಜಸ್ವಿಯವರ ವಿಷಯಕ್ಕೆ ಬಂದರೆ, ನನ್ನ ಶ್ರೀಮತಿಗೆ ಒಮ್ಮೆ ತೇಜಸ್ವಿಯವರಿಗೆ ಅವರ ಶ್ರೀಮತಿಯವರು ಸಿಗರೇಟ್ ತಂದು ಕೊಡುತ್ತಿದ್ದರಂತೆ ಅಂತ ಒಮ್ಮೆ (ನಾನು ಸೀದುವುದಿಲ್ಲ, ಸುಮ್ಮನೇ ತಮಾಷೆಗೆ) ರೇಗಸಿದೆ. ಅದಕ್ಕೆ ನಮ್ಮನೆಯವರು ಹೇಳಿದ್ರು ನಿಮಗಾದಂತೆ ಅವರಿಗೆ ಆಗಿದಿದ್ರೆ, ಅವರು ತೇಜಸ್ವಿ ಅಂತ ಜಗತ್ತಿಗೆ ಗೊತ್ತಾಗ್ತಿರ್ಲಿಲ್ಲ ಅಂತ. ನೀವು ಬರೀರಿ ಸರ್, ಓದಾಕೆ ನಾನು, ಮೋಹನ್ ಸರ್ ಅಂತಹವರು ಇದ್ದೇ ಇದ್ದೇವೆ 🙂

  2. ವ್ಯಕ್ತಿಗೆ ಜೀವನದಲ್ಲಿ ಕೋಪ ಹತಾಶೆ ಸಂಕಟ ಉಂಟಾದಾಗ , ಅದಕ್ಕೆ ಕಾರಣರಾದವರ ಮೈಮೇಲೆ ಹಲ್ಲೆ ಮಾಡುವುದರ ಬದಲು ಬಯ್ಗುಳದ ಮೂಲಕ ಹಲ್ಲೆ ಮಾಡಿದ ಮೊದಲ ವ್ಯಕ್ತಿ ಯನ್ನು ಸಂಸ್ಕೃತಿಯ ಹರಿಕಾರ ಎಂದು ಕರೆಯುತ್ತಾರೆ. ಏಕೆಂದರೆ ಬಯ್ದಾಡುವುದರ ಬದಲು ಹೊಡೆದಾಡಲು ತೊಡಗಿದರೆ ಪರಿಣಾಮ ಏನಾಗುತ್ತದೊ ಹೇಳಲಾಗದು. ನಿತ್ಯಜೀವನದ ಮಾತುಕತೆಗಳಲ್ಲಿ ಬಳಕೆಯಾಗುವ ಪ್ರತಿಯೊಂದು ಬಯ್ಗುಳದ ಹಿನ್ನೆಲೆಯಲ್ಲಿ ಅದನ್ನು ಆಡಿದವರ ಮನದ ಭಾವನೆಯೊಂದು ಇರುತ್ತದೆ. ಅಕ್ಷರ ವಿದ್ಯೆಯನ್ನು ಪಡೆದು ನಗರ ಜೀವನಕ್ಕೆ ತೊಡಗಿದವರು ಭಾವನೆಗಳನ್ನು ನಿಯಂತ್ರಿಸಿಕೊಂಡು ಮಾತನಾಡುವುದನ್ನು ರೂಢಿಸಿಕೊಂಡಿರುವುದರಿಂದ ಹಳ್ಳಿಗರು ಬಳಸುವ ಬಯ್ಗುಳವನ್ನು ಕಂಡು ಬೆಚ್ಚುತ್ತಾರೆ.

  3. ಅಪ್ಪನಿಗೆ ‘ಹೋಯಿತು ‘, ‘ಕೂತಿತು’ , ‘ ಬಂತು ‘ ಯಾವ ಭಾಷೆಯಲ್ಲಿ ??!! ಅರ್ಥವಾಗಲಿಲ್ಲ !

    • ನಮ್ಮ ಮನೆಯಲ್ಲೆ, ಮಧುಗಿರಿ ತಾಲ್ಲೂಕು

Leave a Reply