ಆ ಕಡೆಗೆ ಹೋದವರು ಈ ಅಂಗಡಿಯಲ್ಲಿ ಪುಸ್ತಕ ಖರೀದಿಸಿ..

ಗಾಣಧಾಳು ಶ್ರೀಕಂಠ 

ಚಿತ್ರದುರ್ಗ – ಹಿರಿಯೂರು ನಡುವೆ ಆತಿಥ್ಯ ಹೋಟೆಲ್ ಇದೆ. ಬೆಂಗಳೂರು – ಹುಬ್ಬಳ್ಳಿ ನಡುವೆ ಸಂಚರಿಸುವ ಬಹುತೇಕ ಲಕ್ಸುರಿ ಮತ್ತು ಕೆಲವು ವೇಗದೂತ ಬಸ್ ಗಳನ್ನು ಈ ಹೋಟಲ್ ಬಳಿ ನಿಲ್ಲಿಸುತ್ತಾರೆ. ಇವತ್ತು ನಾನು ಹೋಗುತ್ತಿದ್ದ ಬಸ್ ಕೂಡ ಅದೇ ಹೋಟೆಲ್ ಬಳಿ ನಿಂತಿತು‌.

ಹಿಂದೆ ಈ ಹೋಟೆಲ್‌ಗೆ ಹೋಗುತ್ತಿದ್ದಾಗ ಅಕ್ಕಪಕ್ಕ ಅದೇ ಜ್ಯೂಸ್‌ ಅಂಗಡಿ, ಬೇಕರಿ, ಚಾಟ್ಸ್ ಅಂಗಡಿ‌‌ ಇರುತ್ತಿದ್ದವು.

ಇವತ್ತು ಅದೇ ಹೋಟೆಲ್ ಪಕ್ಕ ಹಿರಿಯ ನಾಗರಿಕರೊಬ್ಬರು ಪುಸ್ತಕದ ಅಂಗಡಿ ತೆರೆದಿದ್ದಾರೆ‌. ಕೆ.ಜಿ. ಶಿವಮೂರ್ತಿ ಅಂತ ಅವರ ಹೆಸರು. ತುಂಬಾ ಖುಷಿಯಾಯ್ತು‌ ಅಂಗಡಿ ನೋಡಿ.

‘ಎಷ್ಟು ಸಮಯ ಆಯ್ತು, ಅಂಗಡಿ ತೆರದು’‌ಎಂದು ಕೇಳಿದೆ.‌

‘ ಇವತ್ತಿಗೆ ಸರಿಯಾಗಿ ಒಂದು ತಿಂಗಳಾಯ್ತು’ ಎಂದರು.

ಪಕದಲ್ಲಿದ್ದವರು ‘ ಇದು ಕಾಯಂ ಅಂಗಡಿನಾ ಅಥವಾ…’ ಎನ್ನುತ್ತಿದ್ದರು.

‘ಇಲ್ಲಪ್ಪ, ಕಾಯಂ ಅಂಗಡಿನೇ’ ಅಂದ್ರು.

‘ಈ ಅಂಗಡಿ‌ ಇಟ್ಟಿದ್ದು, ಒಳ್ಳೆದೋ.. ಅಥವಾ.. ‘ ಅಂದ್ರು‌ ಶಿವಮೂರ್ತಿಯವರ ಪ್ರಶ್ನೆ.

‘ಇಂಥದ್ದೊಂದು ಪುಸ್ತಕದ ಅಂಗಡಿ ಇಲ್ಲಿಗೆ ಬೇಕಿತ್ತು. ಒಳ್ಳೆ ಕೆಲಸ ಮಾಡಿದ್ದೀರಿ’ ಎಂದೆ.

ಯಜಮಾನ್ರು ಖುಷಿಯಾದ್ರು. ಎಸ್. ಷಡಕ್ಷರಿಯವರ ‘ಆಣಿಮುತ್ತು ಭಾಗ ೧’ ಪುಸ್ತಕ‌ ಕೊಟ್ಟು, ಇದನ್ನು ಓದಿ‌ ಸಾರ್, ಬಹಳ‌ ಚೆನ್ನಾಗಿದೆ’ ಎಂದು ಶಿಫಾರಸು ಮಾಡಿದರು. ನಾನು ಆ ಪುಸ್ತಕದಲ್ಲಿರುವ ಮಾಹಿತಿಯನ್ನು ಅಂಕಣವಾಗಿ ಪತ್ರಿಕೆಯಲ್ಲಿ ಪ್ರಕಟವಾದಾಗ ಓದಿದ್ದೆ. ಆದರೆ, ಅವರ ಪುಸ್ತಕ ಮಾರುವ ಉತ್ಸಾಹ‌ ಪ್ರೋತ್ಸಾಹಿಸಲು ಪುಸ್ತಕ ಖರೀದಿಸಿದೆ.

ಹೋಟೆಲ್ ಗೆ ಬಂದವರಲ್ಲಿ ಒಬ್ಬರು, ಇಂಥದ್ದೇ ಪುಸ್ತಕ‌ ಬೇಕು ಎಂದು ಕೇಳಿದರು. ಇನ್ನು ಕೆಲವರು ಪುಸ್ತಕಗಳನ್ನು ಖರೀದಿಸಿದರು‌.

ಕೆಲವರು ‘ಇನ್ನೂ ಪುಸ್ತಕ ಓದೋರು ಇದಾರಪ್ಪಾ’ ಎಂದು ಬಸ್ ಏರಿದರು.

ಆ ಕಡೆಗೆ ಹೋದವರು ಈ ಅಂಗಡಿಯಲ್ಲಿ ಪುಸ್ತಕ ಖರೀದಿಸಿ. ಪುಸ್ತಕ ಓದುವವರ ಸಂಖ್ಯೆ ವೃದ್ಧಿಯಾಗಲಿ..

Leave a Reply