ಪ್ರಕೃತಿಯಂತೆ…

ವಿಜಯಕಾಂತ ಪಾಟೀಲ
ಪ್ರಕೃತಿಯಂತೆ ತಾಯಿಯು
ನಮ್ಮ ದೇವತೆ;
ಕವಿತೆಯಂತೆ ಸತ್ಯವು
ಅವಳ ಘನಮಾನ್ಯತೆ!

ಅನ್ನವನು ಕೊಡುವವಳು
ತುತ್ತ ನೀಡಿ ಉಣಿಸುವವಳು
ಉಸಿರ ಊಡಿ
ಪೊರೆಯುವವಳು
ಅವಳೇ ಅಲ್ಲವೆ?

ಅಮ್ಮಾ.. ಎಂದು ಒಂದೇ ಬಾರಿ
ಕೂಗಿ ನೋಡೋ ತಮ್ಮ;
ತುಳುಕುವುದು ಹಂಡೆ ಹಾಲು
ತಟ್ಟೆ ತುಂಬ ಅನ್ನ ಸಾರು
ತೋಟ ಗದ್ದೆ ಹಚ್ಚ ಹಸಿರು
ಪಕ್ಕಸುಳಿವ ಗಾಳಿಯಲು
ಅಕ್ಕರೆಯ ತೇರು..!

ಕೇಳದೇ ಕೊಡುವವಳು
ತಾನೂನು ಉಣದವಳು
ಕರುಣೆಗಂತೂ ಎಣೆಯಿಲ್ಲ;
ದಯಾಳು ಎಂದರೇ ಅವಳು!
ಮೈ ಕೈ ನೋಯಿಸಿದರೆ
ಹಿಂಸೆ ಅತಿ ಎನಿಸಿದರೆ
ಕಾಳಿಯೂ ಆಗುವಳು!

ಗುಡ್ಡಗಳನು ಕೆಡುಗುವಳು
ಮಳೆಯಾಗಿ ಗುಡುಗುವಳು
ಬಿರಿದ ಮೈಯ ಕೊಡಗುವಳು
ಸಹನೆ ಶಾಂತಿ ತಾಳ್ಮೆ ಸಂಯಮ-
ಎಲ್ಲಾನೂ ಅವಳು;
ಮಿತಿಮೀರಿ ಆಡಿದರೆ, ಪಾಪ,
ಏನು ಮಾಡಿಯಾಳು?

ಅದಕೇ ತಮ್ಮಾ,
ಹೇಳುವರು ತಿಳಿದವರು
ಪದೇ ಪದೇ ಅರುಹುವರು :
‘ಕೊಡುವ ಕೈ ಸದಾ ಮೇಲೆ;
ಕೇಳುವ ಕೈ ಸದಾ ಕೆಳಗೆ..!’
ಅರ್ಥವಾಯಿತೋ..?

ಹೊತ್ತು ಮೆರೆಯೋ ಅವಳ
ನಿತ್ಯ ನಿನ್ನ ತಲೆಯ ಮೇಲೆ;
ಉಪಚರಿಸೋ ಅವಳತನವ
ಸದಾ ಇನ್ನು ಮೇಲೆ..!

Leave a Reply