ನನ್ನನ್ನು ತಿಪ್ಪೆಗೆ ಎಸೆಯಲಿಲ್ಲ..

ಹೆಣ್ಣು ಮಾಂಸದ ಮುದ್ದೆಯೆ ??

ರೂಪಾ ಎಂ

ಹೌದಾ !? ಇಂದು ಮಹಿಳಾ ದಿನಾಚರಣೆಯಾ ? ಹೀಗೆ ಮೊನ್ನೆ ಎಲ್ಲೋ ಓದಿದ್ದೆ. ಇಂದು ನನ್ನ ಹೆತ್ತವರಿಗೆ ಕೋಟಿ ನಮನ ಸಲ್ಲಿಸಬೇಕು ನೋಡಿ, ಅದು ಭ್ರೂಣ ಹತ್ಯೆ ರಾರಾಜಿಸುತ್ತಿದ್ದ ಕಾಲದಲ್ಲೇ ನಾನು ಜನಿಸಿದ್ದಂತೆ. ಹಾಗಂತ ಯಾವಾಗ್ಲೂ ಅಜ್ಜಿ ಹೇಳ್ತಾರೆ.. ಆದರೆ ಅನ್ಯರಂತೆ ನನ್ನ ಹೆತ್ತವರು ಹೆಣ್ಣು ಎಂದು ಎಲ್ಲೋ ತಿಪ್ಪೆಗೆ ಎಸೆಯಲಿಲ್ಲ ನೋಡಿ, ಪುಟ್ಟ ಗುಬ್ಬಿ ಮರಿಯ ಪೋಷಿಸುವಂತೆ ಪೋಷಿಸಿ,ಇಷ್ಟು ದೊಡ್ಡವಳನ್ನಾಗಿ ಮಾಡಿದ್ದಾರೆ.

ಅವರಿಗೆ ಕಷ್ಟವೊ ಸುಖವೊ, ಆದರೆ ಈ ಕಷ್ಟವೆನ್ನುವ ಕೆಟ್ಟ ಛಾಯೆ ನನ್ನ ಮೇಲೆ ಬೀಳದಂತೆ ಕಾಯ್ದರು ನೋಡಿ.. ಇನ್ನೂ ಅಪ್ಪನೋ ಅವನ ಹೆಗಲು, ಅವನ ಕೈತುತ್ತು, ಕಣ್ಣಲ್ಲೇ ಹೆದರಿಸಿ ಮೂಲೆ ಸೇರಿಸಿ ಮತ್ತೆ ಮರುಗುತ್ತಿದ್ದ ಜೀವ.. ಯಾವುದನ್ನು ಮರೆಯುವ ಹಾಗಿಲ್ಲ. ಇನ್ನೂ ಅಮ್ಮನೂ ಆಕೆ ಯಾವ ಝಾನ್ಸಿ ರಾಣಿಗೂ ಕಡಿಮೆ ಇಲ್ಲದ ಗಟ್ಟಿಗಿತ್ತಿ.

ಇಷ್ಟೆಲ್ಲಾ ಪೀಠಿಕೆ ಏಕೆ ಎಂದು ಯೋಚಿಸುತ್ತಿದ್ದೀರಾ ಖಂಡಿತ, ಈ ಹೆಣ್ಣು ಎನ್ನುವ ಶಕ್ತಿಯನ್ನು ಸಾಕಿ ಸಲುಹಿದವರಿಗೆ ಒಂದು ಸೆಲ್ಯೂಟ್ ಮಾಡಬೇಕಾದ ದಿನವಿಂದು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಹಾಗೇ  ಹೆಣ್ಣೊಂದು ಜನಿಸಿದರೆ ಇಡೀ ಕುಟುಂಬವೆ ಉಳಿದಂತೆ.

ಹೆಣ್ಣನ್ನ ಪೂಜಿಸಿ ಎಂದು ಯಾರನ್ನು ಕೇಳುವುದಿಲ್ಲ, ಆದರೆ ದಯಮಾಡಿ ಗೌರವಿಸಿ.. ಹೆಣ್ಣು ಬರೀ ಮಾಂಸದ ಮುದ್ದೆಯಲ್ಲ ಆಕೆಗೂ ಜೀವವಿದೆ ಆಕೆಗೂ ಒಂದು ಮನಸಿದೆ. ಆಕೆಗೆ ಸರಿಯಾಗಿ ಪ್ರೀತಿ, ಮಮತೆ, ಬದುಕಿಗೆ ಒಳ್ಳೆಯ ಪಾಠ ಮತ್ತು ಪ್ರೋತ್ಸಾಹ ಸಿಕ್ಕರೆ, ಸುಂದರ ಹೆಣ್ಣಾಗುತ್ತಾಳೆ .ಅದೇ ಹೆಣ್ಣಿಗೆ ನೀವು ಅಗೌರವ, ಶೋಷಣೆ ಎಂದು ಉಸಿರು ಕಟ್ಟಿಸಿದರೆ ಮುನಿದು ಮಾರಿಯಾಗುತ್ತಾಳೆ. ಕೆಲ ಬಾರಿ ನಡೆಯಬಾರದ್ದು ನಡೆದುಬಿಡುತ್ತದೆ.

ಹೆಣ್ಣೆಂದರೆ ಬರೀ ರುಚಿ ನೋಡುವ ಹಣ್ಣೆಂದು…. ತಿಳಿದವರಿಗೆ ಆಕೆ ಬರೀ ಆಹಾರವೆ ಆಗಿ ಹೋಗಿದ್ದಾಳೆ. ಹಸುಳೆಯನ್ನೂ ಬಿಡದ ಪಾಪಿಗಳಿರುವ ಕಾಲ ಇದು. ಇಂತಹ ಎಷ್ಟೋ ಜೀವಗಳು ಇಂದು ಬರೀ ಮಾಂಸದ ಮುದ್ದೆಯಂತೆ ಕೆಲ ರಕ್ಕಸರ ಬಾಯಿಗೆ ಸಿಕ್ಕು ನಲುಗಿ ಹೋಗಿ, ಪ್ರಪಂಚದ ಯಾವುದೋ ಕತ್ತಲೆನ್ನುವ ಕೋಣೆಯಲ್ಲಿ ನಿಟ್ಟುಸಿರು ಬಿಡುತ್ತಿದ್ದಾರೆ, ಇನ್ನೂ ಕೆಲವರು ಮಣ್ಣಿನೊಳಗೆ ಮಣ್ಣಾಗಿ ಹೋಗಿದ್ದಾರೆ, ಇನ್ನಾದರೂ ನಿಲ್ಲಿಸಿ ರಕ್ಕಸರೆ ನಿಮ್ಮ ಪ್ರತಾಪ.. ಇಷ್ಟೇ ಈ ದಿನ ನಿಮ್ಮಲ್ಲಿ ಕೈಮುಗಿದು  ಕೋರಿಕೊಳ್ಳಲಾವುದು.

ಎಲ್ಲಿ ಹೆಣ್ಣು ನಿಜವಾಗಿಯು ಗೌರವ, ಪ್ರೀತಿ, ಮಮತೆ ಮತ್ತು ರಕ್ಷಣೆಯಿಂದ ಬೆಳೆಯುತ್ತಾಳೊ ಅಥವಾ ಯಾವ ಹೆಣ್ಣು ತನ್ನ ಮೈಯನ್ನೆಲ್ಲಾ ಮುಳ್ಳಾಗಿಸಿಕೊಂಡು ಬದುಕುತ್ತಾಳೊ ಅಲ್ಲಿ ಖಂಡಿತವಾಗಿಯು ಒಬ್ಬ ಕಲ್ಪನಾ ಚಾವ್ಲಾ ಅಲ್ಲ ಅಂತಹ ಎಷ್ಟೋ ಕಲ್ಪನಾ ಚಾವ್ಲಾರವರು ಹೊರಬರುವರು. ಹೆಣ್ಣು ಎಂದರೆ ಶಕ್ತಿ ಆಕೆ ಎಲ್ಲರೊಳಗೂ ಇರುತ್ತಾಳೆ. ಪ್ರತಿಯೊಬ್ಬ ಗಂಡಿನೊಳಗೂ ಒಬ್ಬ ಹೆಣ್ಣಿರುತ್ತಾಳೆ, ಹಾಗೇ ಪ್ರತಿಯೊಬ್ಬ ಮಹಿಳೆಯ ಒಳಗೆ ಒಬ್ಬ ಗಂಡಿರುತ್ತಾನೆ,  ಇದೆ ತಾನೆ ! ನಿಜಾ….

ಹೆಣ್ಣು ಏನು ಬೇಕಾದರೂ ಮಾಡಬಲ್ಲಳು, ತ್ಯಾಗ, ಮಮತೆ, ಪ್ರೀತಿ ಅಷ್ಟೆ ಅಲ್ಲ ಮನೆಯ ಹೊರಗೂ ಒಳಗೂ ಗಾಣದೆತ್ತಿನಂತೆ ದುಡಿವಳೂ. ಉದಾಹರಣೆಗೆ ಎಲ್ಲರ ಮನೆಯಲ್ಲೂ ಒಬ್ಬ ತಾಯಿ ಇರುತ್ತಾಳೆ ಆಕೆ ಡಾಕ್ಟರ್ ಆಗಬಲ್ಲಳು, ಗಂಡನ ದಾಸಿಯಾಗಬಲ್ಲಳು, ಮಕ್ಕಳ ಪೋಷಿಸುವ ತಾಯಿಯಾಗಬಲ್ಲಳು, ಮನೆ ಕೆಲಸದವಳಾಗಿ ಇರಬಲ್ಲಳು.

ತನ್ನ ಕುಟುಂಬಕ್ಕಾಗಿ ಹೆಣ್ಣು ಏನನ್ನಾದರು ತ್ಯಾಗ ಮಾಡಬಲ್ಲಳು, ತನಗೆ ಹಸಿವಿದ್ದರು ಅತ್ತೆ ಮಾವ, ಗಂಡ, ಮಕ್ಕಳಿಗೆ  ಕೈ ತುತ್ತು ನೀಡುವಳು, ಹೆತ್ತವರ ಖುಷಿಗಾಗಿ ತನ್ನ ತವರ ತೊರೆದು, ಆಡಿ ಬೆಳೆದ ಮನೆಯ ಮರೆತು, ಎಲ್ಲರ ಖುಷಿಗಾಗಿ ಗೊತ್ತೆ ಇರದವರ ಮನೆಗೆ ಸೊಸೆಯಾಗಿ ಹೋಗುವಳು, ಅದರಲ್ಲೆ ತನ್ನ ನಗು ನೋಡುವವಳು…. ಪ್ರತಿ ಹಬ್ಬಕ್ಕೂ ತನ್ನ ಮಗಳಿಗೆ ಹೊಸ ಬಟ್ಟೆ ಕೊಡಿಸಿ ತಾನು ಮಾತ್ರ ಹಳೆಯ ಸೀರೆಯಲ್ಲೆ ಹಬ್ಬ ಮಾಡಿ ಮುಗಿಸುವವಳು..

ಯಾರಿವಳು ???? ನಿಮ್ಮನ್ನೇ ಕೇಳಿಕೊಳ್ಳಿ ಇವಳು ಬೇರೆ ಯಾರು ಅಲ್ಲ ನಿಮ್ಮ ಮನೆಯಲ್ಲೆ ಇರುವ ತಾಯಿಯೋ, ಅಕ್ಕನೋ, ಅಮ್ಮನೋ, ತಂಗಿಯೋ, ಮಡದಿಯೊ ಯಾರಾದರೂ ಆಗಿರಬಹುದು…. ಎಲ್ಲರ ಭಾವನೆಗಳಿಗೂ ಬೆಲೆ ಕೊಡಿ.. ಹೆಣ್ಣನ್ನು ಗೌರವಿಸಿ ಮತ್ತು ಪ್ರೀತಿಸಿ, ಆಕೆಯನ್ನೂ ಪ್ರೋತ್ಸಾಹಿಸಿ ಆಕೆಗಾಗಿ ಅವಕಾಶಗಳು ಕಾದು ಕೂತಿವೆ.

ಎಲ್ಲರ ಮನೆಯಲ್ಲೂ ಒಂದೊಂದು ಮುತ್ತು ಜನಿಸಿ ಇಡೀ ದೇಶಕ್ಕೆ ಕೊಹಿನೂರ್ ಡೈಮಂಡ್ ನ ಕೊರತೆ ಕಾಡದಿರಲಿ.

Leave a Reply