‘ಮಹಿಳೆ’ಗೆ ಒಂದು ವಿಷ್ ಮಾಡಿ

ಭಾರತಿ ಬಿ ವಿ

ಪ್ರತಿ ವರ್ಷ ಮಾರ್ಚ್ 8 ‘ಮಹಿಳಾ ದಿನಾಚರಣೆ’ ಬಂದಾಗ ಫೇಸ್‌ಬುಕ್‌’ನ ಎಲ್ಲ ಗಂಡಸರು ಮತ್ತು ಗಂಡು ಮಕ್ಕಳು ನಮಗೆ ಪ್ರೀತಿಯಿಂದ ವಿಷ್ ಮಾಡುತ್ತಾರೆ ಅನ್ನುವುದೇನೋ ಸತ್ಯ. ಆದರೆ ಅವರ ನಾಸ್ಟಾಲ್ಜಿಯಾದಲ್ಲಿ
ಅರೆಹೊಟ್ಟೆ ಉಂಡು ಮಕ್ಕಳಿಗೆ ಉಣಿಸಿದ ತಾಯಿ ಇರುತ್ತಾಳೆ,
ತಮ್ಮಂದಿರ ತಿ _ ತೊಳೆದ ಅಕ್ಕ ಇರುತ್ತಾಳೆ, ಪ್ರೀತಿ ಉಣಿಸಿದ ಹೆಂಡತಿ ಇರುತ್ತಾಳೆ
ಪ್ರೀತಿಸಿದ ಮಗಳು ಇರುತ್ತಾಳೆ
ಆದರಿಸಿದ ಗೆಳತಿ ಇರುತ್ತಾಳೆ
ಕತೆ ಹೇಳಿದ ಅಜ್ಜಿ ಇರುತ್ತಾಳೆ

ಮಹಿಳಾ ದಿನಾಚರಣೆ ಎಂದರೆ ಮಹಿಳೆ ತನಗಾಗಿ ಏನಾದರೂ ಮಾಡಿಕೊಂಡಳಾ, ತನಗಾಗಿ ಯಾವುದಾದರೂ ಆಸಕ್ತಿ ಬೆಳೆಸಿಕೊಂಡಳಾ, ತನ್ನ ಇಚ್ಛೆಯಂತೆ ಅರೆ ಘಳಿಯಾದರೂ ಬದುಕಿದಳಾ ಅನ್ನುವ ಯಾವ ವಿಷಯವನ್ನೂ ಯೋಚಿಸದೆ ಹೆಣ್ಣು ‘ತಮಗೇನು ಮಾಡಿದಳು’ ಅನ್ನುವ ಎಂದಿನ ಗಂಡು ನೋಟವಿರುತ್ತದೆ ಅಷ್ಟೇ.

ಹೆಣ್ಣೆಂದರೆ ತ್ಯಾಗ, ಹೆಣ್ಣೆಂದರೆ ಅರೆಹೊಟ್ಟೆ, ಹೆಣ್ಣೆಂದರೆ ಜೀವನ ಸಂಸಾರಕ್ಕಾಗಿ ಮುಡುಪಿಟ್ಟವಳು ಎಂಬೆಲ್ಲ ಕತೆಗಳು ಕೇಳಲು ಹೃದಯ ತುಂಬಿ ಬರುವಂತೆ, ಮೆಲೋಡ್ರಾಮಾಟಿಕ್ ಆಗಿ ಇರುತ್ತದೆ ನಿಜ. ಸುಮಾರು ಹೆಣ್ಣುಮಕ್ಕಳೂ ಇದನ್ನು ಕೇಳಿ ಆನಂದ ಭಾಷ್ಷ ಸುರಿಸಿ ತ್ಯಾಗದ ಕಂಬಳಿ ಹೊದ್ದು ಬೆಚ್ಚಗಾಗುತ್ತಾರೆ ಅನ್ನುವುದೂ ನಿಜ.

ಆದರೆ ಆ ಸಮಯಕ್ಕೆ ಇಷ್ಟೆಲ್ಲ ಮಾಡಿದ ಅವಳಿಗೆ, ಮುಂದೆ ಬದುಕು ಸ್ವಲ್ಪ ಹಸನಾದಾಗ ನೀವು ‘ನಿಮಗೇನಾದರೂ ಬದುಕಿನ ಕನಸುಗಳಿವೆಯಾ’ ಎಂದು ಕೇಳಿದ್ದೀರಾ..?
ಕೇಳಿಲ್ಲದಿದ್ದರೆ ಈಗಲಾದರೂ ಕೇಳಿ

ಯಾರಿಗೋ ಚಿತ್ರಕಲೆ ಕಲಿಯುವ ಮನಸ್ಸಿರಬಹುದು
ಮತ್ಯಾರಿಗೋ ಒಬ್ಬಳೇ ಎಲ್ಲಿಯಾದರೂ ನಾಲ್ಕು ದಿನ ಹೋಗುವ ಕನಸಿರಬಹುದು,
ವೀಣೆ, ನೃತ್ಯ, ಹಾಡು, ಬರಹ, ನಟನೆ … ಹೀಗೆ ಯಾವುದೋ ಕೈಗೂಡದ ಆಸೆಯನ್ನು ಮತ್ತೆ ತಮ್ಮದಾಗಿಸಿಕೊಳ್ಳುವ ಹುಮ್ಮಸ್ಸಿರಬಹುದು…

ಹೊರಡು, ಅದನ್ನು ಪೂರೈಸಿಕೋ
ಈ ಮನೆ ಎಲ್ಲೂ ಓಡಿ ಹೋಗುವುದಿಲ್ಲ,
ನಾನು ಇಲ್ಲಿ ಸಂಭಾಳಿಸುತ್ತೇನೆ ಯೋಚಿಸಬೇಡ
ನೀನು ಅಕ್ಕ, ಅಮ್ಮ, ತಂಗಿ ಅಷ್ಟೇ ಅಲ್ಲ…
ನೀನೊಬ್ಬಳು ”ವ್ಯಕ್ತಿಯೂ” ಹೌದು ಎಂದು ಹೇಳಿದರೆ ಹೇಗಿರಬಹುದು ಆಕೆಯ ಪ್ರತಿಕ್ರಿಯೆ?

ವಿಜಯಕ್ಕ ನಿರ್ದೇಶಿಸಿದ ”ಒಂದು ಮುಷ್ಟಿ ಆಕಾಶ” ಕಿರುಚಿತ್ರವನ್ನು ಸಾಧ್ಯವಾದರೊಮ್ಮೆ ನೋಡಿ
ಮಗನೆಂಬ ಕೇಂದ್ರ ಬಿಂದುವಿನ ಸುತ್ತಲೇ ಸುತ್ತಿದ ತಾಯಿಯೊಬ್ಬಳಿಗೆ, ಮಗ ವಿದೇಶಕ್ಕೆ ಹೋದ ನಂತರ ಉಂಟಾಗುವ ಆ ಶೂನ್ಯದ ಕತೆಯಿದೆ ಅಲ್ಲಿ..
ಗೆಳತಿಯರು ಎಲ್ಲಿಗೇ ಕರೆದರೂ ಹೋಗದೆ ಮಗನಿಗಾಗೇ ಬದುಕಿದ ಆ ಅಮ್ಮ ಮಗ ಒಂದು ಕರೆ ಸ್ವೀಕರಿಸದೇ ಹೋದರೂ ತಲ್ಲಣಿಸಿ ಬಿಡುತ್ತಾಳೆ
ಅವಳಿಗೆ ಮಗನನ್ನು ಬಿಟ್ಟು ಬೇರೆ ಬದುಕೇ ಇಲ್ಲ
ಆದರೆ ಮಗನಿಗೆ ಬೇರೆ ಬದುಕಿದೆ…

ಇಂಥ ಸ್ಥಿತಿಯಲ್ಲಿ ಹತಾಶಳಾದ ಅವಳು ಆತ್ಮಹತ್ಯೆಯ ತಯಾರಿಯನ್ನೂ ನಡೆಸುತ್ತಾಳೆ. ಪುಣ್ಯಕ್ಕೆ ಅಷ್ಟರಲ್ಲಿ ಕರೆ ಮಾಡುವ ಗೆಳತಿ ಅವಳಿಗೆ ಸಾಂತ್ವನ ಹೇಳುತ್ತಾ ‘ಮಗನನ್ನೇ ಇಡೀ ಆಕಾಶ ಎಂಬಂತೆ ಬದುಕಿದವಳಿಗೆ, ಒಂದು ಮುಷ್ಟಿಯಷ್ಟಾದರೂ ಆಕಾಶ ತನ್ನದೂ ಆಗಿಸಿಕೊಳ್ಳಬೇಕು ಅಂತ ಯಾಕೆ ಅನ್ನಿಸಲಿಲ್ಲ’ ಎಂದೆಲ್ಲ ಹೇಳುವಾಗ ಮೊದಲ ಬಾರಿಗೆ ಅವಳು ಆ ದಿಕ್ಕಿನಲ್ಲಿ ಯೋಚಿಸಲು ಶುರು ಮಾಡುತ್ತಾಳೆ…
ಸುತ್ತಮುತ್ತಲಿನವರಿಗೆ ಪ್ರೀತಿ ಕೊಡಬೇಕು ನಿಜ. ಆದರೆ ನಮನ್ನು ಕೂಡಾ ನಾವು ಪ್ರೀತಿಸಿಕೊಳ್ಳಬೇಕಲ್ಲವೇ?

ನಾನು ಪ್ರವಾಸಗಳಿಗೆ ಆಗೀಗ ಹೋಗಿ ಬರುತ್ತೇನೆ ಅಂತ ಬರೆದಾಗ ಫೇಸ್‌ಬುಕ್‌ನಲ್ಲಿ ನನ್ನ ಫ್ರೆಂಡ್ ಲಿಸ್ಟಿನಲ್ಲಿ ಇದ್ದ ಒಬ್ಬಾಕೆ ‘ನಾವು ಜವಾಬ್ದಾರಿ ನಿರ್ವಹಿಸುವುದರಲ್ಲೇ ಸುಖ ಕಾಣುತ್ತೇವೆ. ನಿಮ್ಮ ಹಾಗಲ್ಲ’ ಎಂದಿದ್ದರು. ಆ ಮಾತಿನಲ್ಲಿ ಅವರು ನನಗಿಂತ ಎತ್ತರದ ಸ್ಥಾನ ಆಕ್ರಮಿಸಿಕೊಂಡ ಪೊಳ್ಳು ಹೆಮ್ಮೆಯೂ, ಇಲ್ಲಸಲ್ಲದ್ದನ್ನು ಹೇಳುವ ಗಂಡುಬೀರಿಯಾದ ನನ್ನೆಡೆಗೆ ತಾತ್ಸಾರವೂ ಇತ್ತು.

ಹೀಗೆ…
ಪ್ರತಿಯೊಂದು ಹೊಸತು ಏನಾದರೂ ಎದುರಾಗುವಾಗ ಸಮಾಜ ವಿಚಿತ್ರವಾಗಿ ಪ್ರತಿಕ್ರಯಿಸುತ್ತದೆ. ಹೆಂಗಸರೇ ಹೀಗೆ ಹೇಳುವಾಗ, ಇಂಥದ್ದಕ್ಕೆ ಒಗ್ಗಿಹೋದ ಗಂಡು ಕುಲಕ್ಕೆ ಆ ರೀತಿ ತ್ಯಾಗಮಯಿಯಾಗುವ ಹೆಣ್ಣು ಆದರ್ಶವೆನ್ನಿಸುತ್ತಾಳೆ ಮತ್ತು ನನ್ನಂತೆ ಮಾತನಾಡುವವಳು ಕಟುಕಿಯಂತೆ ಕಾಣಲಾರಂಭಿಸುತ್ತೇನೆ…

ನನ್ನ ಅಜ್ಜಿ ಅದೇ ಸಾಲಿನಲ್ಲಿದ್ದ ಗೆಳತಿಯ ಮನೆಗೂ ಹೋಗುತ್ತಿರಲಿಲ್ಲ. ಯಾಕೆಂದರೆ ಅದು ನನ್ನ ಅಜ್ಜನಿಗೆ ಇಷ್ಟವಿರಲಿಲ್ಲ. ಅಜ್ಜಿ ಎಂದೂ ಅಜ್ಜನ ಮಾತು ಮೀರಿ ನಡೆಯಲಿಲ್ಲ. ಆದರೆ ನಾವೂ ಅದನ್ನು ತುಂಬ ಸರಳವಾಗಿ “ಅದಿರುವುದೇ ಹಾಗೆ” ಎಂಬಂತೆ ಉಳಿದುಬಿಟ್ಟೆವಲ್ಲ ಆ ವಿಷಯಕ್ಕೆ ನನಗೀಗಲೂ ದುಃಖವಿದೆ. ನಮಗೂ ಅನುಕೂಲವಿತ್ತಲ್ಲ, ಹಾಗೆಂದೇ ಸುಮ್ಮನುಳಿದು ಬಿಟ್ಟೆವೇ ನಾವು ಸ್ವಾರ್ಥಿಗಳು…?

ಹೀಗೆಲ್ಲ ಆಲೋಚನೆಗಳು ಬರುವುದರಿಂದಲೇ ಮಹಿಳಾ ದಿನದಂದು ಹರಿದು ಬರುವ ಈ ಅಕ್ಕ, ಅಮ್ಮ, ತಂಗಿ, ಮಗಳು ಅನ್ನುವ ವಿಷ್‌ಗಳಿಗೆ ನಾನು ಯಾವ ಪ್ರತಿಕ್ರಿಯೆ ತೋರಿಸದೇ ಉಳಿದುಬಿಡುತ್ತೇನೆ….
ಅದರಿಂದ ಹಲವರು offend ಆಗುತ್ತಾರೆ. ಆದರೇನು ಮಾಡಲಿ ನನಗೇಕೋ ಥ್ಯಾಂಕ್ಸ್ ಅನ್ನಲು ಬಾಯೇ ಬರುವುದಿಲ್ಲ…

ಮಹಿಳಾ ದಿನಾಚರಣೆಯಂದು ”ಮಹಿಳೆಗೆ” ವಿಷ್ ಮಾಡಿ
ಆ ವಿಷ್ ಅನ್ನು ನಿಮ್ಮ ಮನೆಯಲ್ಲಿರುವ ಹೆಣ್ಣುಮಕ್ಕಳಿಗೂ ಮಾಡಿ
ಅವರಿಗೇನು ಬೇಕು ಅಂತ ಒಮ್ಮೆಯಾದರೂ ಕೇಳಿ…
ಅಡ್ವಾನ್ಸ್ ಆಗಿ ಅವರೆಲ್ಲರ ಪರವಾಗಿ ನನ್ನ ಥ್ಯಾಂಕ್ಸ್  🙂

8 comments

 1. Eshtu Chennagi barediddiya Bharati Adenu Hengasarige Nisvarthate Yo peddutanavo gottilla Ninna hage tiliheluvavaru ಎಲ್ಲಾ ಕಾಲದಲ್ಲೂ ಇರಬೇಕು ಕಣೇ ಇಲ್ಲದಿದ್ದರೆ ಕುರಿಗಳು ಸಾರ್ ಕುರಿಗಳೇ ಆಗಿ ಬಿಡ್ತಾರೆ ಚೆನ್ನಾಗಿದೆ ನಿನ್ನ ಆಶಯ

 2. *ಮಹಿಳೆ*!

  ಎಲ್ಲ ಪಾತ್ರಗಳ ಮನಸಿನ ಚೂರುಗಳನ್ನು ಆಯ್ದು ಜತನದಿಂದ ಜೋಡಿಸುವಲ್ಲಿಗೆ ಸಾಕಾಗಿ, ಈ ಬಾರಿಯೂ ತನ್ನ ಪಾಲಿನ ಮನಸಿನ ಚೂರನ್ನು ಕಡೆಗಣಿಸುತ್ತಾಳೆ, ಮತ್ತೆ ಅದನ್ನು ಬೆಳೆಸುವ ಶಕ್ತಿಯಿದೆಯೆಂಬ ಮಹಾ ಉದಾಸೀನತೆಯಲ್ಲಿ!

  -ಸುಮನ

  ಯಾಕೆ ಹೀಗೆ!? ನಂಗೂ ಅನಿಸೋದು ಇದು!

  • ನಿಮ್ಮೆಲ್ಲಾ ಮಾತುಗಳೂ ನಿಜ, ನನ್ನದೂ ಕೂಡ ಒಂದೇ ಜನ್ಮ . ನನ್ನಾಸೆಗಳನ್ನು ಕನಸುಗಳನ್ನೂ ನಾನೆ ಪೂರೈಸಿಕೊಳ್ಳಬೇಕಿದೆ. ನನದೇ ಆದ ನನ್ನ ಸಮಯ ಬೇಕಿದೆ ಎಂದು ಕಿರಿಚುವ ಹಾಗಾಗುತ್ತದೆ .ಆದರೇನು ಮಾಡುವುದು.. ನಾನೇ ಹಾಕಿಕೊಂಡ ಬೇಲಿಯೊಳಗೆ ಬಂಧಿ..
   ಭಾರತಿ ನಿಮ್ಮ ಬರಹಗಳನ್ನು‌ ಓದುತ್ತಾ ನನ್ನೊಳಗಿನ ನಾನು‌ ಎಚ್ಚೆತ್ತುಬಿಡುತ್ತಾಳೆ.. ಮತ್ತೆ ಸ್ವಲ್ಪ‌ಸ್ವಲ್ಪವೆ ತನಗಾಗಿ ಒಂದು ಮುಷ್ಟಿ ಆಕಾಶದ ಕನಸು ಕಾಣತೊಡಗುತ್ತಾಳೆ ❤❤❤❤

 3. ನನಗೆ ನೆನಪಾಗುವುದು, ನಮ್ಮಜ್ಜಿ. ತೊಂಭತ್ತು ವರ್ಷಕ್ಕೂ ಹಿಂದೆ, ಹಾಡು ಬರೆದು, ಬೆಂಗಳೂರು ನಾಟಕ ಕಂಪೆನಿಗಳಿಗೆ ಕಳಿಸಿ, ಗಂಡನ ಕೈಲಿ ಬಂದ ದುಡ್ಡನ್ನು ಹಕ್ಕೆಂದು ತೆಗೆದುಕೊಂಡು, ಸ್ವಂತವಾಗಿ ಊರು ತಿರುಗಬೇಕೆಂಬ ಛಲ ಸಾಧಿಸಿದವಳನ್ನ.
  ಹಾಗೆ ಆಕೆ ಕಾಶಿಗೆ ಹೋಗಿದ್ದಾಗ ಗಂಡ ಸತ್ತ. ಮತ್ತೆ ಗಂಡನ ಮುಖ ನೊಒಡಲಿಲ್ಲ, ನೆನೆಯಲಿಲ್ಲ. ಆದರೆ ಛಲದಿಂದ ಮಂಡೆ ಬೋಳಿಸಿಕೊಂಡಳು. ನನಗೇನಾಗಿದೆ. ನಾನೀಗಲೂ ಚೆನ್ನಾಗೇ ಇದ್ದೀನಿ ಎಂದು ಸತ್ತಾಗ ಅರವತ್ತೂ ಆಗಿರಲಿಲ್ಲ

 4. ದೊಡ್ಡ ದೊಡ್ಡ ವಿಷಯಗಳು ಇರಲಿ. ಆ್ಯಟ್‌ಲೀಸ್ಟ್ ಹೊಟೇಲ್‌ಗೆ ಹೋದಾಗ ತನಗೆ ಏನು ಬೇಕೋ ಅದನ್ನು ಆರ್ಡರ್ ಮಾಡುವಷ್ಟು ಹೆಣ್ಣು ಮನಸ್ಸು ಮಾಡಿದರೂ ಸಾಕು. ನೆಮ್ಮದಿ ಅವಳಾದ್ದಾಗುತ್ತದೆ. ಅದು ಬಿಟ್ಟು ಮಕ್ಕಳು ಬಿಟ್ಟಿದ್ದೋ, ಗಂಡನಿಗೆ ಸೇರದೇ ಹೋದದ್ದು ತಿನ್ನುವುದು ಮಾಡಿದರೆ, ಆತ್ಮವಿಶ್ವಾಸ ಎಲ್ಲಿಂದ ಬರಬೇಕು?

Leave a Reply