ನಮ್ಮದೇ ಸೀತಾಯಣ?

ಶಿಲ್ಪಶ್ರೀ ಜಿ 

ಪರಿತ್ಯಕ್ತೆ ಸೀತೆಗೆ ಒಮ್ಮೆಯೂ
ರಾವಣನ ನೆನಪಾಗಲಿಲ್ಲವೆ..
ಹಾಗಾಗಿದ್ದಲ್ಲಿ
ಅವಳು ಸಾಧ್ವಿಯಾಗಿ
ಉಳಿಯುತ್ತಿರಲಿಲ್ಲವೆ!!

ಶಂಕೆಗೊಳಗಾದ ಶಕುಂತಲೆ
ಕ್ಷಮಿಸಿರಲಾರಳು ಇಂದಿಗೂ
ದುಷ್ಯಂತನನ್ನು
ಅಹಲ್ಯೆ ಮನನೊಂದು
ಕಲ್ಲಾದದ್ದು
ಗೌತಮನ ಮೌಢ್ಯ ಕಂಡು..

ಅಲ್ಲೊಬ್ಬಳು ದ್ರೌಪದಿ
ಇಲ್ಲೊಬ್ಬಳು ಶೂರ್ಪನಖಿ
ಇದ್ದರೂ
ಪುರಾಣದುದ್ದಗಲಕ್ಕೂ
ಪೂಜಿತರಾದವರು
ಸೀತೆ ಸಾವಿತ್ರೆಯರೆ..

ನಿಮ್ಮ ಕುಲೋದ್ಧಾರಕ್ಕೆ
ನಾವಾದೆವು ನಿಯೋಗ
ಕಟ್ಟೆಯೊಡೆವುದ ನಿಲಿಸಲು
ಕೆರೆಗೆ ನಾವೇ ಹಾರ
ಸತ್ತ ಮೇಲೂ ನಿಮ್ಮೊಂದಿಗೆ
ಚಿತೆಯಲ್ಲೇ ಸ್ವರ್ಗ

ನಿಮ್ಮ ದೌರ್ಜನ್ಯಕ್ಕೆ
ಬೆತ್ತಲಿಲ್ಲಿ
ಹಸುಕಂದಮ್ಮಗಳೂ
ಹರಿದ ನೆತ್ತರಿನಲ್ಲಿ
ಬೆರೆಯುತಿದೆ ಕಂಬನಿಗೊಳಗಳು
ಆಲಯಕ್ಕೆ ನಿಷಿದ್ಧವಾದಳು
ಗರ್ಭ ಹೊತ್ತವಳು
ಪಾಪ ಕೃತ್ಯಗಳ ತೊಳೆದ
ಗಂಗೆ ಮಲಿನವಾದಳು

ಇಲ್ಲಿ
ಧ್ವನಿ ನಮ್ಮದಾದರೂ
ಪದಗಳು ನಿಮ್ಮವೇ
ಆಲೋಚನೆ ನಮ್ಮದಾದರೂ
ದಿಕ್ಕು ನಿಮ್ಮದೇ
ಒಡಲ ಶಬ್ಧವ
ಕೊರಳಲ್ಲೇ ಅಡಗಿಸಿರುವ
ನಮಗೆ
ಇನ್ನಾದರೂ ಬೇಕಲ್ಲವೇ
ನಮ್ಮದೇ ಸೀತಾಯಣ??

2 comments

    • ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ

Leave a Reply