ಅಚಾನಕ್ಕು ಎಚ್ಚರಾಗಿ ತಡಕಾಡುತ್ತದೆ ತೋಳು..

ನಂದಿನಿ ವಿಶ್ವನಾಥ ಹೆದ್ದುರ್ಗ

ಸನ್ಮಾನ

ಒಂದು ಪರವಶದಲಿ ಬಿತ್ತಿದ
ಕನಸ ಬೀಜಗಳು
ಮೊಳೆಯುವುದ ಮರೆತು
ಅಡಗಿ ಕುಳಿತಿವೆ.
ಘಳಿಗೆಗೊಮ್ಮೆ ಗಾಢವಾಗಿ
ಅವನ ಕಣ್ಣು ನೋಡಿ
ಕಾವು ಪಡೆಯುವೆ.

ಆಕಳಿಸಿ
ಹೊರಳಿ ಮಲಗಿದ ಮುತ್ತೊಂದು
ಅಚಾನಕ್ಕು ಎಚ್ಚರಾಗಿ
ತಡಕಾಡುತ್ತದೆ ತೋಳು.
ಖಾಲಿ ಹಾಸಿಗೆಯ ತುಂಬಾ
ಹಾಸಿನ
ಚಿಟ್ಟೆ ದುಂಬಿಗಳು.

ಮತ್ತೆ ಎದುರಾಗುತ್ತಿ ನೀ ಅಲ್ಲಿ.,
ಅದೇ ಆ ಪರಾಕು
ಮರದಡಿಯಲಿ.
ಉದುರಿದ
ನೀಲಿ ಹೂವಿನೊಳಗೊಂದು
ಕವಿತೆ ಹೊಮ್ಮುವುದು.
ನಮ್ಮಿಬ್ಬರ ಕಣ್ಣು ಕೂಡಿದ
ಸಮಯ.
ನಾಚಿದ ಸಾಲು ಹೇಳಿದೆ ಹಾಡು.

ಕಾಲದಷ್ಟು ಕೃತಕ
ಯಾವುದಿಲ್ಲ ನೋಡು.
ಮೂರನೇ ಚರಣ ಖಾಲಿ ಕಲ್ಪನೆ…
ಇದೀಗ ಮೊಳೆಯದ ಕನಸುಗಳು
ಕೊಳೆತು ಮತ್ತೆ ಮಣ್ಣು.
ಮುತ್ತಿಗೋ.,
ಅದಾವ
ಹೊತ್ತಿನಲೊ ಗಾಢ ನಿದ್ದೆ.

ಅನಾಥ ಅಕ್ಷರಗಳೂ
ಆಗಾಗ ಹಲುಬಿ
ಮೊರೆಯುತ್ತವೆ ಪ್ರೇಮ.
ಅಸ್ತುವೆಂದರೆ ನಿರಾಸಕ್ತಿ.
ಸಮಯ ಕೋರಿದರೆ
ಅನುನಯ.
ಒಲ್ಲೆ ಎಂದರೆ
ಒಪ್ಪು ಎನ್ನುತ
ಊರುತ್ತವೆ ಮಂಡಿ.

ದಾಖಲಿಸಿದ ಖುಷಿಗೆ ಆತು ಕುಳಿತ
ಸಾಲು
ಅಕ್ಕರೆಯಲಿ
ಹೂವು ನೀಡಿ,ಶಾಲು ಹೊದಿಸಿ
ಬದುಕಲು ಹರಸುವಾಗ
ಬಾಳು ನಿರಾಳ.
ಕಾಗದದ ಹೂವಿಗೂ ಭಾರಿ ಪರಿಮಳ.

 

2 comments

 1. ಕಾಲದಷ್ಟು ಕೃತಕ ಯಾವುದಿಲ್ಲ ನೋಡು
  ಮೂರನೇ ಚರಣ ಖಾಲಿ ಕಲ್ಪನೆ
  ಭಾವವಿಲ್ಲ ನೋಡು
  ಜೀವದಿ
  ಪಲ್ಲವಿ ಬರೆದೆನೆಂದೆಯಾ
  ಅದೂ
  ಹಾಗೇ ಸುಮ್ಮನೆ!!

  ತುಂಬಾ ಚೆನ್ನಾಗಿದೆ!

Leave a Reply