ಅವಳಲ್ಲವೇ ಎಲ್ಲವೂ..

ಸದಾಶಿವ್ ಸೊರಟೂರು

ಅರ್ಧಪ್ರಾಣ ಪೂರ್ಣ ತ್ರಾಣ
ಜೊತೆಗೆ ಕೊಟ್ಟು ಜೀವಕಣ
ಬಾಳನೆಲ್ಲಾ ಬಸಿದು ಕೊಟ್ಟು
ಮಗನೆ ಮಗನೇ ಎಂದು ನಲಿವ
ಅವ್ವ, ನೀನಲ್ಲವೇ ಹೆಣ್ಣು?

ತನ್ನ ಊಟ ನನಗೆ ಕೊಟ್ಟು
ಸ್ಲೇಟು ಬಳಪ ಬ್ಯಾಗಲಿಟ್ಟು
ಕಸ ಮುಸುರೆ ಕೂಲಿ ಮಾಡಿ
ಕಣ್ಣಿನಲ್ಲಿ ಕನಸನ್ನಿಟ್ಟ
ಅಕ್ಕ, ನೀನಲ್ಲವೇ ಹೆಣ್ಣು?

ಪ್ರೇಮಿಯಲ್ಲ ಬಂಧುವಲ್ಲ
ಸ್ನೇಹಕ್ಕಿಂತ ಮಿಗಿಲೆಯೆಲ್ಲಾ
ಭಾವವೊಂದೆ ಬಿಗಿದಿದ್ದೆಲ್ಲಾ
ಅಳಲು ನಗಲು ಹೆಗಲು ಕೊಟ್ಟ
ಗೆಳತಿ, ನೀನಲ್ಲವೇ ಹೆಣ್ಣು?

ಅರ್ಧ ಬಾಳು ನನಗೆ ಕೊಟ್ಟು
ಸುಖ ದುಃಖದ ಪಾಲು ಪಡೆದು
ಕಣ್ಣಿಗೊಂದು ದೃಷ್ಟಿ ನೀಡಿ
ಬಾಳಪೂರ್ತಿ ಜೊತೆಯಲ್ಲಿರೊ
ಅರ್ಧಾಂಗಿ, ನೀನಲ್ಲವೆ ಹೆಣ್ಣು?

ಇಲ್ಲಿ ಅವಳಲ್ಲವೇ ಎಲ್ಲವೂ?
ಹೆಣ್ಣಾ..? ಅಂತ ಮುಖವಿಂಡುವ
ನಾವೆಂತ ಗಾವಿಲರು?

Leave a Reply