ಅಗ್ರಹಾರದಲ್ಲೊಂದು ಸಂಜೆ..

ಹರ್ಷಿತಾ ಕೆ.ಟಿ

ಅವಳ ಕಿರು ಬೆರಳ ಬೆಸೆದು
ಅಲೆಯುತ್ತಿದ್ದ ಅಗ್ರಹಾರದೊಂದು ಬೀದಿಗೆ
ವಿಧಿ ಇಲ್ಲದೆ
ಕಾಲಿರಿಸಿದ್ದೆ ಇಂದು

ಇಲ್ಲ !ಏನೂ ಬದಲಾಗಿಲ್ಲ

ನಮ್ಮ ಪಿಸುಮಾತುಗಳಿಗೆ
ಕಿವಿಗೊಡುತ್ತಿದ್ದ
ಅದೇ ಮೋಟು ಗೋಡೆಗಳು
ಅವಳ ದುಪ್ಪಟ್ಟವನ್ನು
ಚಿತ್ರಪಟವಾಗಿ  ಮೆರೆಸಿದ್ದ ಕಂಬಗಳು

ಇನ್ನೂ ಅರ್ಧ ಜೀರ್ಣವಾದ
ನಮ್ಮ ಗಾಳಿಪಟದ ಸೂತ್ರ
ಸಿಕ್ಕಿಕೊಂಡಿದೆ ಶೆಟ್ರಂಗಡಿ ಚಾವಡಿಯಲಿ
ಅವಳ ಕೈಬಳೆ ಸದ್ದುಗಳೂ
ಕೇಳುವುದು ಗಲ್ಲಿಯ
ಯಾವುದೋ ಮೂಲೆಯಲಿ

ಲಲ್ಲೆಗರೆದು ಹರಟುತ್ತಿದ್ದ
ಆ ಪೆಟ್ಟಿಯಂಗಡಿ
ಅದರ ಚಹಾ,ಸುತ್ತಲಿನ ನೊಣಗಳೂ
ಬೀರಿದವು ಪರಿಚಿತ ನೋಟವ

ಯಾರೋ ಹಿಂದೆ
ಗರಡಾಗಿ ನಿಂತಂತೆ ಭಾಸ
ಥಟ್ಟನೆ ತಿರುಗಿದೆ

ಸಂವತ್ಸರಗಳಿಂದ ನನಗಾಗಿಯೇ
ಮೊಣಕಾಲ ಮೇಲೆ
ಕಾದು ಕೂತಿದ್ದವೇ?
ಈಗ ಹುಬ್ಬು ಕೂಡಿಸಿ
ಧಿಟ್ಟಿಸುತ್ತಿವೆ ಅಂತರಾಳಕ್ಕೇ ಗುರಿನೆಟ್ಟು
ನೆನಪುಗಳು:
ಬುದ್ಧಿವರ್ಧಕ ಚೂರ್ಣವೇನಾದರೂ ಗುಳುಕಿಸಿರಬಹುದೇ

ನೆನಪುಗಳದ್ದೇ ನೂಕು ನುಗ್ಗಲು
ಈ ಗಲ್ಲಿಯಲಿ
‘ಅವಳೆಲ್ಲಿ’ ಎಂಬ ಸವಾಲೊಂದೇ
ಅವೆಲ್ಲರ ಬಾಯಲ್ಲಿ

ಅವುಗಳ ದೃಷ್ಟಿಯ ದಿಟ್ಟಿಸಲಾಗದೆ
ದಿಗಂತದತ್ತ ನೋಟ ಎಸೆದು
ದಾಪುಗಾಲಿಟ್ಟೆ ಬಿರುಸಾಗಿ
ಇಲ್ಲ!ಆದರೂ ಸವೆಯುತಿಲ್ಲ
ಅಂಗುಲದಷ್ಟೂ ಈ ಹಾದಿ
ಅಳೆದಷ್ಟು ದೂರವೇ

ವೃತ್ತವಾಯಿತು ಹಾದಿ
ಅಂತ್ಯಕ್ಕೆ ಹುಟ್ಟಿದಂತೆ ಆದಿ
ನೆನಪುಗಳ ಚಕ್ರವ್ಯೂಹ
ಎಡೆ  ಮಾಡಿಯೇಕೊಂಡು ಬಿಟ್ಟಿತು
ಹಾದಿಯಲಿ ; ಎದೆಯಲಿ

 

1 comment

  1. ತುಂಬಾ ಅರ್ಥಗರ್ಭಿತವಾಗಿವೆ ನಿಮ್ಮ ರಚನೆಯ ಸಾಲುಗಳು…

Leave a Reply