ಇಂದಿನಿಂದ ಹೊಸ ಅಂಕಣ : ಸಮೀವುಲ್ಲಾ ಪಾಲಿಟಿಕ್ಸ್

ಬೆಲಗೂರು ಸಮೀಉಲ್ಲಾ- ಕನ್ನಡ ಪತ್ರಿಕೋದ್ಯಮದ ಮುಖ್ಯ ಹೆಸರು. ರಾಜಕೀಯ ವರದಿಗಾರಿಕೆಗೆ ಹೆಸರುವಾಸಿ. ಎಂಜನಿಯರಿಂಗ್ ಓದುತ್ತಿದ್ದ ಸಮೀವುಲ್ಲಾ ದಿಢೀರನೆ ಅದಕ್ಕೆ ಗುಡ್ ಬೈ ಹೇಳಿ ಅಪ್ಪಿಕೊಂಡಿದ್ದು ಪತ್ರಿಕೋದ್ಯಮವನ್ನು. ‘ಅಭಿಮಾನಿ’ ಬಳಗ ಹೊರತಂದ ಅಷ್ಟೂ ಪತ್ರಿಕೆಗಳಿಗೆ ಒಂದು ಅಚ್ಚುಕಟ್ಟಾದ ರೂಪು ನೀಡುವುದರ ಮೂಲಕ ಸಮೀವುಲ್ಲಾ ರಾಜಕೀಯ ಪತ್ರಿಕೋದ್ಯಮಕ್ಕೆ ತಮ್ಮ ಬರವನ್ನು ಸಾರಿಬಿಟ್ಟರು.

ಆ ನಂತರ ದೃಶ್ಯ ಮಾಧ್ಯಮಕ್ಕೂ ಕಾಲಿಟ್ಟು ಅಲ್ಲಿಯೂ ಅಚ್ಚುಕಟ್ಟಾಗಿ ರಾಜಕೀಯ ವರದಿಗಾರಿಕೆಯನ್ನು ಮಾಡಿದ್ದೂ ಅಲ್ಲದೆ ತಮ್ಮ ದಶಕಗಳ ಅನುಭವವನ್ನು ಯುವ ವರದಿಗಾರರಿಗೆ ಧಾರೆ ಎರೆದರು. ಈಟಿವಿ, ಉದಯ ಹೀಗೆ ಹಲವಾರು ಚಾನಲ್ ಗಳನ್ನೂ ಮುನ್ನಡೆಸಿದ ಇವರು ಸದಾ ಹಸನ್ಮುಖಿ.

ಇದುವರೆಗೆ ‘ಅವಧಿ’ಯ ಓದುಗರಾಗಿದ್ದ ಸಮೀವುಲ್ಲಾ ಈಗ ‘ಸಮೀವುಲ್ಲಾ ಪಾಲಿಟಿಕ್ಸ್’ ಮೂಲಕ ಅಂಕಣಕಾರರಾಗಿ ‘ಅವಧಿ’ ಅಂಗಳವನ್ನು ಪ್ರವೇಶಿಸುತ್ತಿದ್ದಾರೆ. ಪ್ರತೀ ಸೋಮವಾರ ಅವರ ಅಂಕಣ ಪ್ರಕಟವಾಗಲಿದೆ

Official secret act

ಸರ್ಕಾರೀ ದಾಖಲೆಗಳ ಗೌಪ್ಯತಾ ಅಧಿನಿಯಮ…
ರಾಷ್ಟ್ರರಾಜಕಾರಣದಲ್ಲಿ ಹೆಡೆ ಎತ್ತಿ ಭುಸ್ ಎನ್ನುತ್ತಿರುವ ಭ್ರ ಹ್ಮಾಸ್ಥ್ರವಿದು.

ಈ ಪ್ರಖರ ಅಸ್ತ್ರವನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ತನ್ನ ವಿರೋಧಿ ದ್ವನಿಯ ಪತ್ರಿಕೆಗಳ ದಮನಕ್ಕೆ ಬಳಸುವ ಬೆದರಿಕೆ ಹಾಕುವ ಮೂಲಕ ಮತ್ತೊಂದು ದಾಖಲೆ ನಿರ್ಮಾಣವಾಗಿದ್ದು ಭಾರತ ಪ್ರಜಾಸತ್ತೆ ಇತ್ತೀಚಿನ ದಿನಗಳಲ್ಲಿ ಕಂಡ ಮತ್ತೊಂದು ವಿದ್ಯಮಾನ.

ಇಂಥ ಬೆದರಿಕೆಗೆ ಗುರಿಯಾದ ಪತ್ರಿಕೆ ಬೇರೆ ಯಾವುದೂ ಅಲ್ಲ..the Hindu.
ಮೋದಿ ಸರಕಾರದ ಕೆಂಗಣ್ಣಿಗೆ ಗುರಿಯಾದ ಈ ಹಿರಿಯ ಪತ್ರಕರ್ತ ಎನ್. ರಾಮ್.

ಸಾಂವಿಧಾನಿಕವಾಗಿ ಸ್ವಾಯುತ್ಥ್ತೆ ಪಡೆದ ಸಂಸ್ಥೆಗಳೆಂದೆ ಗುರುತಿಸಲ್ಪಟ್ಟ ಸಿಬಿಐ, ರಿಸರ್ವ್ ಬ್ಯಾಂಕ್ ಅಷ್ಟೆ ಅಲ್ಲ ನ್ಯಾಯಾಂಗ ವ್ಯವಸ್ಥೆಯಲ್ಲೇ ಬಿಕ್ಕಟ್ಟು ಮೂಡಿಸುವಂಥ ಕೃತ್ಯಗಳ ಬಳಿಕ ಇದೀಗ ಪತ್ರಿಕಾ ಸ್ವಾತಂತ್ರ ಹರಣಕ್ಕೆ ಮುಂದಾಗಿರುವುದು ಇಂದಿನ ಸರಕಾರದ ಆಡಳಿತ ಶೈಲಿಯ ವೈಖರಿಗೆ ಹಿಡಿದ ಕೈಗನ್ನಡಿ.

ಇಂಥ ಸ್ವಾತಂತ್ರ ದಮನಕ್ಕೆ ಪೂರಕವಾದ ಬೆದರಿಕೆ ರೂಪದ ಹೇಳಿಕೆಗೆ ಸುಪ್ರೀಕೋರ್ಟ್ ವೇದಿಕೆಯಾಯಿತು.

ರಫೆಲ್ ಯುದ್ದ ವಿಮಾನ ಖರೀದಿಯಲ್ಲಿ ನಿಯಾವಳಿಗಳನ್ನು ಗಾಳಿಗೆ ತೂರಿರುವ ಕುರಿತಂತೆ ಸಿಜೆ ನೇತೃತ್ವದ ಪೀಠ ವಿಚಾರಣೆ ನಡೆಸುವ ವೇಳೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ The Hindu ಪತ್ರಿಕೆಯ ತನಿಖಾ ವರದಿ ಮತ್ತು ದಾಖಲೆಗಳನ್ನು ಉಲ್ಲೇಖಿಸುತ್ತಿದ್ದಂತೆ ಸರಕಾರದ ಪರ ವಾದ ಮಂಡಿಸುತ್ಠಿದ್ದ ಹಿರಿಯ ವಕೀಲ ವೇಣುಗೋಪಾಲ್ ತಡಬಡಾಯಿಸಿದರು. ತಕ್ಷಣವೇ ತನ್ನ ವಿರುದ್ಧದ ಗಟ್ಟಿ ದ್ವನಿಯನ್ನು ಹತ್ತಿಕ್ಕಲು ಪತ್ರಿಕೆ ವಿರುದ್ದ ಸರ್ಕಾರಿ ದಾಖಲೆಗಳ ಗೌಪ್ಯತಾ ಕಾಯ್ದೆಯ ಪ್ರಹಾರ ನಡೆಸುವ ಘೋಷಣೆಯನ್ನು ಮಾಡಿ ಕೇಂದ್ರದ ಮತ್ತೊಂದು ಮುಖವನ್ನು ಬಯಲು ಮಾಡಿದರು.
ಪತ್ರಿಕೋದ್ಯಮವೇ ಸಮೂಹ ಸನ್ನಿಯ ಭಾಗವಾಗಿರುವ ಈ ದಿನಗಳಲ್ಲಿ ಇಂಥದ್ದೊಂದು ಘೋಷಣೆ ಪ್ರಾಮಾಣಿಕ ಪತ್ರಕರ್ತರನ್ನು ಹತ್ಠಿಕ್ಕಬಹುದೆಂಬ ಲೆಕ್ಕಾಚಾರವಿದು.

ವಾಸ್ತವದಲ್ಲಿ ಇಂತಹ ಬೆದರಿಕೆ ಹಾಕುವ ಮೂಲಕ ಕೇಂದ್ರ ಸರ್ಕಾರದ ಮತ್ತೊಂದು ಮುಖವಾಡ ಕಳಚಿತು. ಹಾಗೆ ನೋಡಿದರೆ ಎದುರಾಳಿಗಳನ್ನು ಸದೆಬಡಿಯಲು, ಮಾನಸಿಕ ಕಿರುಕುಳ ನೀಡಲು ಹೇಳಿಮಾಡಿಸಿದಂತೆ ಇರುವ ಈ ದಮನಕಾರಿ ಸರ್ಕಾರಿ ದಾಖಲೆಗಳ ಗೌಪ್ಯ ಕಾಯಿದೆ (official secrecy act) ಉಗಮಕ್ಕೂ, ಮೂಲಭೂತವಾದಿ ಮನಸ್ಥಿತಿಯೂ ಸಾಮ್ಯತೆ ಇರುವುದು ವಿಶೇಷ.

ಬ್ರಿಟಿಷರ ಕರಾಳ ಆಡಳಿತ ವ್ಯವಸ್ಥೆಯಲ್ಲಿ ತಮ್ಮ ವಿರುದ್ಧದ ಪ್ರತಿಭಟನೆಯ ದ್ವನಿಯನ್ನು ಮುಲಾಜಿಲ್ಲದೆ ಹತ್ತಿಕ್ಕಲು 1889 ರಲ್ಲಿ ಇದನ್ನು ತರಲಾಯಿತು. ಗುಲಾಮಿ ಸಂಸ್ಕೃತಿ ಪ್ರತಿಪಾದನೆಗೆ ಬ್ರಿಟಿಷರು ಇದನ್ನು ತಂದಿದ್ದು, ಪತ್ರಿಕೆಗಳ ಸದ್ದಡಗಿಸಲು ಅಸ್ತ್ರವಾಗಿ ಬಳಸಲಾಗಿತ್ತು. ನಂತರ ಲಾರ್ಡ್ ಕರ್ಜನ್ ವೈಸರಾಯ್ ಆಗಿದ್ದ ಅವಧಿಯಲ್ಲಿ ಇದನ್ನು ಇನ್ನಷ್ಟು ಕಠಿಣಗೊಳಿಸಿ ಆಫಿಸಿಯಲ್ ಸೀಕ್ರೆಟ್ ಆಕ್ಟ್ 1923 ಎಂದು ಹೊಸ ರೂಪುಕೊಟ್ಟು ಜಾರಿಗೆ ತರಲಾಯಿತು. ಅಂದರೆ ನೀವೇ ಅರ್ಥ ಮಾಡಿಕೊಳ್ಳಿ..

ಬ್ರಿಟಿಷರು ತಮ್ಮ ವಿರುದ್ಧದ ದ್ವನಿಯನ್ನು ದಮನ ಮಾಡಲು ತಂದಿದ್ದ ಕಾಯಿದೆಯನ್ನೆ, ಇದೀಗ ರಫೆಲ್ ನಲ್ಲಿ ಪ್ರಧಾನಿ ಮೋದಿ ಕಚೇರಿಯ ಅನುಮಾನಾಸ್ಪದ ವಹಿವಾಟಿನ ಬಗ್ಗೆ ವರದಿ ಮಾಡಿದ The Hindu ಪತ್ರಿಕೆಯ ವಿರುದ್ದ ಬಳಸುವ ಎಚ್ಚರಿಕೆ ನೀಡಲಾಗಿದೆ.
ಬ್ರಿಟಿಷ್ ಮನಸ್ಥಿತಿಯ ಈ ಭಾರತೀಯರ ಆಳ್ವಿಕೆಗೆ ಏನೆನ್ನಬೇಕು?

ಪತ್ರಿಕಾ ಸ್ವಾತಂತ್ರ್ಯ ಹರಣದ ಇಂಥ ಯತ್ನಗಳು ಭಾರತೀಯ ಪ್ರಜಾಸತ್ತೆಯಲ್ಲಿ ಹೊಸತೇನಲ್ಲ. ಆದರೆ ರಾಷ್ಟ್ರೀಯ ಭದ್ರತೆಯ ಹೆಸರಲ್ಲಿ , ಸರ್ಕಾರಿ ದಾಖಲೆಗಳ ಗೌಪ್ಯತೆಯ ನೆಪದಲ್ಲಿ ಪ್ರಾಮಾಣಿಕತೆಯ ಹುಟ್ಟಡಗಿಸುವ ಈ ಯತ್ನ ರಾಷ್ಟ್ರವ್ಯಾಪಿ ಖಂಡನೆಗೆ ಗುರಿಯಾಗಿದೆ.  ಬೇಹುಗಾರಿಕೆ, ಮಿಲಿಟರಿ ರಹಸ್ಯ ದಾಖಲೆಗಳನ್ನು , ಗುಪ್ತ ಸಂಕೇತವನ್ನು ರವಾನಿಸುವ ದ್ರೋಹಿಗಳ ವಿರುದ್ದ ಈ ಅಧಿನಿಯಮದ ಅಡಿ ಮೊಕದ್ದಮೆ ದಾಖಲು ಮಾಡುವ ಪರಿಪಾಠವಿದೆ. ಪತ್ರಕರ್ತರನ್ನು ಇದೇ ವ್ಯಾಪ್ತಿಗೆ ತರುವ ಮೂಲಕ ಮೋದಿ ನೇತೃತ್ವದ ಸರ್ಕಾರ ರಫೆಲ್ ವಹಿವಾಟಿನ ವಿರುದ್ದ ಬರೆದರೆ ಅದು ರಾಜದ್ರೋಹ ಎಂದು ಪರಿಗಣಿಸಲು ಹೊರಟಿರುವುದು ಸರ್ವಾಧಿಕಾರಿ ಸಂಸ್ಕೃತಿಯ ಪ್ರತೀಕ ಎನ್ನಬಹುದೇ?

ರಫೆಲ್ ವಿವಾದ ಇದೀಗ ಸರ್ಕಾರಿ ದಾಖಲೆಗಳ ಗೌಪ್ಯತಾ ಕಾಯಿದೆಯ ಕಠೋರತೆ ಮತ್ತು ದೌರ್ಬಲ್ಯ ಕುರಿತಾದ ಚರ್ಚೆಗೆ ಕಾರಣವಾಗಿದೆ.
ಭಾರತದ ಸಂವಿಧಾನ ಇಂಥ ದುರುಪಯೋಗಗಳನ್ನ ಸಹಿಸುವುದಿಲ್ಲ.

ಇದೇ ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಂತಂತ್ಯ, ಮಾಹಿತಿ ಹಕ್ಕು ಸ್ವಾಂತಂತ್ರ್ಯ ಕೂಡಾ ಇದೆ. ಯಾವ ಸಂವಿಧಾನದಲ್ಲಿ ಸರ್ಕಾರೀ ದಾಖಲೆಗಳ ಗೌಪ್ಯತಾ ಕಾಯಿದೆ ಇದೆಯೋ, ಅದೇ ಸಂವಿಧಾನದಲ್ಲಿ ಮಾಹಿತಿ ಹಕ್ಕು ಕಾಯಿದೆ ಇದೆ. ಗೌಪ್ಯತೆಯ ಹೆಸರಲ್ಲಿ ಕರ್ಮಕಾಂಡದ ದಾಖಲೆ, ಮಾಹಿತಿ ಮರೆಮಾಚುವ ಯತ್ನವನ್ನು ಇದು ವಿಫಲಗೊಳಿಸಲಿದೆ. ಇದನ್ನೇ beauty of Indian democracy ಎಂದು ಬಣ್ಣಿಸಲಾಗಿದೆ. ಸಂವಿಧಾನದ ಇಂಥ ಸದಾಶಯಗಳು ಪ್ರಾಮಾಣಿಕತೆಯನ್ನು, ಪ್ರತಿಭಟನೆಯ ಹಕ್ಕನ್ನು ಕಾಪಾಡಲಿವೆ.

ಹಾಗೆ ನೋಡಿದರೆ.. ಈ ಬ್ರಿಟಿಷ್ ರಾಜ್ ನ ಕರಾಳ ಮುಖಕ್ಕೆ ಸಾಕ್ಷಿಯಾಗಿರುವ ಈ ಕಾಯಿದೆಯನ್ನು ರದ್ದು ಪಡಿಸಿ ಬೇಹುಗಾರಿಕೆ, ಮಿಲಿಟರಿ ಮಾಹಿತಿ ರವಾನೆಯಂತಹ ತಪ್ಪಿಗೆ ಶಿಕ್ಷೆ ನೀಡಲು ಬೇರೆ ಕಾಯಿದೆಯ ಅಗತ್ಯವಿದೆ ಎನ್ನುವ ವಾದವೂ ಇದೆ. ಇಂಥ ಕಾಯಿದೆ ಇಟ್ಟುಕೊಂಡು ಪತ್ರಕರ್ತರಲ್ಲಿ ಭಯ ಹುಟ್ಟಿಸಲು ಕೇಂದ್ರ ಸರ್ಕಾರ ಹೊರಟಿರುವುದು ಅಚ್ಚರಿಯ ಸಂಗತಿ.

೨೦೦೨ರಲ್ಲೀ ‘ಕಾಶ್ಮೀರ ಟೈಮ್ಸ್’ನ ಹಿರಿಯ ಪತ್ರಕರ್ತ ಇಫ್ತೇಕಾರ್ ಜೆಲಾನಿ ವಿರುದ್ದ ಅಫೀಷಿಯಲ್ ಸೀಕ್ರೆಟ್ ಆಕ್ಟ್ ಪ್ರಕಾರ ಮೊಕದ್ದಮೆ ದಾಖಲು ಮಾಡಿ ಹಿಂಸಿಸಲಾಯಿತು. ಆದರೆ ಅವರು ಹೊಂದಿದ್ದ ರಹಸ್ಯ ದಾಖಲೆಗಳ ಬಗ್ಗೆ ಮಿಲಿಟರಿ ತನಿಖೆಯಲ್ಲಿ ವೈರುಧ್ಯ ಕಂಡು ಬಂದ ಕಾರಣ ೨೦೦೪ ಜುಲೈ ನಲ್ಲಿ ಮೊಕದ್ದಮೆ ವಾಪಸ್ ಪಡೆಯಯಾಯಿತು. ೨೦೦೯ರಲ್ಲು Financial Express ವಿರುದ್ದ ಕ್ಯಾಬಿನೆಟ್ ದಾಖಲೆ ಪ್ರಕಟಿಸಿದ್ದಕ್ಕೆ ಇದೇ ಕಾಯಿದೆ ಅಡಿ ಮೊಕದ್ದಮೆ ದಾಖಲಾಯಿತು. ಇದನ್ನು ವರದಿ ಮಾಡಿದ ಪತ್ರಕರ್ತ ಶಾಂತನು ಸೈಕಿಯ ಅವರನ್ನು ಬಂಧಿಸಲಾಯಿತು. ಆದರೆ ಅಭಿವ್ಯಕ್ತಿ ಸ್ವಾತಂತ್ಯ ಹಾಗೂ ಮಾಹಿತಿ ಹಕ್ಕು ಹೋರಾಟಕ್ಕೆ ಜಯ ಸಿಕ್ಕಿ ಅವರನ್ನು ಬಿಡುಗಡೆ ಮಾಡಲಾಯಿತು.

ಅಷ್ಟೆ ಯಾಕೆ. ನಾಸಿಕ್ ನ ಮಿಲಿಟರಿ ಕ್ಯಾಂಪಿ ನೊಳಗೆ ಹೋಗಿ ಅಲ್ಲಿ ಹಿರಿಯ ಅಧಿಕಾರಿಗಳು ಸಾಧಾರಣ ಸೈನಿಕರ ಮೇಲೆ ನಡೆಸುವ ಆಕ್ರಮಣಕಾರಿ ದೌರ್ಜನ್ಯದ ವರದಿ ಮಾಡಿದ The Quint ವರದಿಗಾರ್ತಿ ಅಗರ್ವಾಲ್ ಮೇಲೂ ಇದೇ ಕಾಯಿದೆ ಪ್ರಕಾರ ಮೊಕದ್ದಮೆ ದಾಖಲು ಮಾಡಲಾಗಿದೆ ಆದರೂ ಅಭಿವ್ಯಕ್ತಿ ಸ್ವಾತಂತ್ಯ ದ ಜೊತೆ ಮಾನವ ಹಕ್ಕುಗಳ ಪರವಾದ ವಾದಕ್ಕೆ ಮನ್ನಣೆ ಸಿಗುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ The Hindu ಪತ್ರಿಕೆ ಗೆ ಬೆದರಿಕೆ ಹಾಕಿರುವ ಇತರರಿಗೂ ಭಯಪಡಿಸುವ ತಂತ್ರವಿರಬಹುದೆಂದು ಭಾವಿಸಲಾಗಿದೆ.

ಈ ಕಾನೂನು ಕುಣಿಕೆಯ ಮತ್ತೊಂದು ಮುಖವನ್ನು ಗಮನಿಸಿ. ೨೦೧೨ ಆಗಸ್ಟ್ ತಿಂಗಳಲ್ಲಿ ಸಬ್ ಮೆರೀನ್ ಮತ್ತು ಸರ್ವೈಲೆನ್ಸ್ ಏರ್ ಕ್ರಾಫ್ಟ್ ವಹಿವಾಟು ಅಕ್ರಮದಲ್ಲಿ ಶಸ್ತ್ರಾಸ್ತ್ರ ಉದ್ಯಮಿ ಅಭಿಷೇಕ್ ವರ್ಮಾ ಅವರನ್ನು ಇದೇ ಕಾಯಿದೆಯ ಅನ್ವಯ ಮೊಕದ್ದಮೆ ದಾಖಲು ಮಾಡಿ ಬಂಧಿಸಲಾಗಿದೆ. ಅಷ್ಟೆ ಅಲ್ಲ ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಸಂಜಯ ಭಂಡಾರಿ ಎಂಬ ಶಸ್ತ್ರಾಸ್ತ್ರ ಖರೀದಿ ದಲ್ಲಾಲಿಯ ಮೇಲೂ ಇದೆ ಮೊಕದ್ದಮೆ ದಾಖಲಿಸಲಾಗಿದೆ.
ಶಸ್ತ್ರಾಸ್ತ್ರ ದಲ್ಲಾಳಿಗಳ ಅಕ್ರಮದ ವಿರುದ್ಧ, ರಹಸ್ಯ ದಾಖಲೆಗಳನ್ನು ಮಾರಿಕೊಳ್ಳುವವರ ವಿರುದ್ದ ಕೈಕೊಳ್ಳುವ ಉಗ್ರ ಕ್ರಮವನ್ನೇ The Hindu ವಿರುದ್ದ ಜರುಗಿಸುವುದಾಗಿ ಹೇಳಿರುವುದು ಯೋಚಿಸಬೇಕಾದ ವಿಚಾರ.

ಹಾಗೆ ನೋಡಿದರೆ ಯಾವುದು ರಹಸ್ಯ ಎನ್ನುವ ಬಗ್ಗೆ ಸ್ಪಷ್ಟ ವಿವರಣೆ ಸಂವಿಧಾನದಲ್ಲಿ ಇಲ್ಲ. ಇವತ್ತಿಗೂ ಬ್ರಿಟಿಷ್ ಕಾಲದ ಭಾಷೆ, ಆಳ್ವಿಕೆಯ ವೈಖರಿಯನ್ನು ಪರಿಪಾಲಿಸಿಕೊಂದು ಬರುತ್ತಿರುವ ಸರಕಾರಿ ಕಚೇರಿಗಳಲ್ಲಿ ಬಹುತೇಕ ದಾಖಲೆಗಳ ಮೇಲೆ ಗೌಪ್ಯವೆಂದೇ ಬರೆದಿರಾಲಾಗುತ್ಠದೆ. ಹೀಗಾಗಿ ನಿಜವಾಗಿಯೂ ಗೌಪ್ಯ ಯಾವುದು ಎನ್ನುವ ಪ್ರಶ್ನೆ ತಲೆದೋರುತ್ತದೆ.

ರಫೆಲ್ ವಿಚಾರಕ್ಕೆ ಬಂದಾಗ ಗಮನಿಸಿ.

ಸರ್ಕಾರ ಗೌಪ್ಯ ಎನ್ನುತ್ತಿರುವ ರಕ್ಷಣಾ ಇಲಾಖೆಯ ದಾಖಲೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿವೆ.
ನ್ಯಾಯಾಲಯ, ಪಾರ್ಲಿಮೆಂಟ್ ಮುಂದೆ ಮಂಡಿಸದೆ ಮರೆಮಾಚಲಾಗಿದ್ದ ರಹಸ್ಯ ದಾಖಲೆಗಳನ್ನು ಬಹಿರಂಗ ಪಡಿಸಿ ವಿವಾದದ ಬಿರುಗಾಳಿ ಎಬ್ಬಿಸಲಾಗಿದೆ. ಆಡಳಿತ ವ್ಯವಸ್ಥೆ ಬೆಚ್ಚಿಬಿದ್ದಿದೆ.

Once again ಇದೂ ಕೂ ಡ beauty of democracy. ಈ ಭಯ ಭೀತಿಯ ಯತ್ನ, ಸವಾಲುಗಳ ನಡುವೆ ಪ್ರಾಮಾಣಿಕ ಪತ್ರಿಕೋದ್ಯಮ ಗೆಲುವಿನ ಹೆಜ್ಜೆ ಹಾಕುತ್ತಲೇ ಇದೆ. ರಫೆಲ್ ವಿಚಾರದಲ್ಲೂ ದಿನಕ್ಕೊಂದು ಹೇಳಿಕೆ ನೀಡಿ ಗೊಂದಲಕ್ಕೆ ಸಿಲುಕಿರುವ ಕೇಂದ್ರ ತನ್ನದೇ ಬಲೆಗೆ ತಾನೇ ಸಿಕ್ಕಿಕೊಂಡಿದೆ

1 comment

  1. Good column, welcome. We will have pleasure of seeing such column, enables us to know and analyse….

Leave a Reply