ಇವರ ಕವಿತೆಗಳು ಕೊಳಕ್ಕೆ ಎಸೆದ ಕಲ್ಲು..

ಕವಿತೆ ಬಂಚ್

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ.

ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಈ ವಾರದ POET OF THE WEEK ನಲ್ಲಿ ಕಿರಸೂರ ಗಿರಿಯಪ್ಪ ಅವರ ಕವಿತೆಗಳು ನಿಮಗಾಗಿ..

ನನ್ನದು ಬರದನಾಡು ಬಾಗಲಕೋಟೆ ಎನ್ನುತ್ತಾರೆ ಗಿರಿಯಪ್ಪ ಆಸಂಗಿ. ಕಿರಸೂರ ಗಿರಿಯಪ್ಪ ಇವರ ಪ್ರೀತಿಯಕಾವ್ಯನಾಮ . ಅವಧಿಯ ಓದುಗರಿಗೆ ಈಗಾಗಲೇ ಸಾಕಷ್ಟು ಪರಿಚಿತರಾಗಿರುವ ಗಿರಿಯಪ್ಪ ಅವರ  ಕವಿತೆಗಳು ಕೊಳದೊಳಗೆ ಎಸೆದ ಕಲ್ಲು. ಸಮಾಜವೆಂಬ ಕೊಳಕ್ಕೆ ಎಸೆದ ಪ್ರಶ್ನೆಗಳೆಂಬ ಕಲ್ಲು. ಸಮಾಜದ ಒಳಗಿನ ನೋವುಗಳು ಇವರ ಕಾವ್ಯದ ಉಸಿರು. ತನ್ನೊಳಗಿನ ತಲ್ಲಣಗಳನ್ನು ಎಲ್ಲರೆದುರು ತೆರೆದಿಡುವ ಇವರ ಕವಿತೆಗಳು ಆರಾಮು ಖುರ್ಚಿಯಲ್ಲಿದ್ದವರನ್ನು ಕಲಕಿ ಹಾಕುತ್ತದೆ.

ಬಾಗಲಕೋಟೆಯಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕರಾಗಿರುವ ಗಿರಿಯಪ್ಪ ಅವರ ಕವಿತೆಗಳಿಗೆ ಸಂಚಯ ಬೇಂದ್ರೆ ಸ್ಮೃತಿ ಕಾವ್ಯ  ಪ್ರಶಸ್ತಿ, ಸಂಕ್ರಮಣ ಕಾವ್ಯಪ್ರಶಸ್ತಿ, ತುಷಾರ ಚಿತ್ರಕಾವ್ಯ ಬಹುಮಾನ, ದಲಿತ ಯುವ ಕಾವ್ಯ ಪ್ರಶಸ್ತಿ ಸಂದಿದೆ. 

                                                                      ಕಿರಸೂರ ಗಿರಿಯಪ್ಪ

ಕಣ್ಣೆವೆಗಳಲಿ ಮಿಂದ ಅಳು

ಕಾಶ್ಮೀರ ಕಣಿವೆಗಳುದ್ದು ದಾರಿ ತಪ್ಪಿದ

ಅಸಾಯಕ ಹೂವಿನ ದನಿ
ಮೋಡದ ಮುಸುಕಿನೊಳಗೆ ಚುಕ್ಕಿಗಳ ಅಪ್ಪಿಕೊಳ್ಳಲು ಒದ್ದಾಟ..
ಮಂಜಿನ ನಿಶ್ಯಬ್ದ ಸದ್ದಿನಲಿ ಮುಳುಗಿದಂತೆ
ಗೋಚರಿಸುವ ಎಳೆಯ ಪಾದಗಳು
ಕಾಶೀಲಿಂಗನ ಸಾಕ್ಷಿಯಾಗಿ
ಕಲ್ಲು ಬಂಡೆಯ ಚಿತ್ರವಾಗಿ ಗೋಚರ

ಅವಳು ಕಿರಚುವ ಎಳೆಯ ರೆಂಬೆಯ ನಾಲಿಗೆಯೊಳಗೆ
ರಕ್ತದ ನೆಲೆಯ ಗುಪ್ತ ಚಹರೆಗಳು
ಹಿಮಾಲಯ ಪರ್ವತದಂತೆ ಹೆಪ್ಪುಗಟ್ಟಿದ
ನೆನಪುಗಳು ಮಾತ್ರ ನೀರವ ಯಾತ್ರೆ

ಕಣ್ಣ ಬೆಳಕಿನಲಿ ಕಾಡ ರೆಕ್ಕೆಯೊಂದು
ದೇವರ ಸನ್ನಿಧಿಯಲ್ಲಿ ಬೆತ್ತಲಾಗಿದ್ದು
ದೇವರನ್ನೆ ಬೆತ್ತಲಾಗಿಸಿದಂತೆ
ದಿಗಿಲುಗೊಂಡ ಅಂಗಳದ ಸುತ್ತ
ನಾಚಿ ನೀರಾಗಬೇಕಿದ್ದ ಬಯಲು
ಅವಳ ಹೆಜ್ಜೆಗಳ ಗೌಪ್ಯವನು ಗೋಡೆಗಳಿಗೆ ಒಪ್ಪಿಸಿ ಮೌನವಾಗಿದ್ದು
ಕಣ್ಣೆವೆಗಳಲಿ ತೇಲೋ ನೋವಿನ ಅಳಕು
ಈಗಲೂ ತಿವಿದಂತೆ ಬಾಸ

(ಕಾಶ್ಮೀರದಲ್ಲಿ ದೇವಸ್ಥಾನದಲ್ಲಿ  ಕಾಮಪಿಶಾಚಿಗಳಿಗೆ ಬಲಿಯಾಗಿ ಉಸಿರು ಕಳೆದುಕೊಂಡ ಆಸೀಫಾ ಎಂಬ ಆತ್ಮಸಾಕ್ಷಿ ನೆನೆಯುತ್ತ)

 

ನಕ್ಷತ್ರದ ನದಿ

ಇರುಳ ಜಾತ್ರೆಯಾಗಿ  ಗೋಚರಿಸುವ ಚುಕ್ಕಿಗಳ ಕಡಲೊಳಗೆ
ಗಲ್ಲದ ಮ್ಯಾಲೊಂದು ಸಿಹಿಮುತ್ತು ಕೊಟ್ಟು ಎಳೆಯ ನಗುವಿನ
ಗುಂಗಲಿ ಮುಳಿಗೇಳುವ ಚಂದಿರನ ಪಿಸುಮಾತು

ಊರ ತುಂಬಾ ಅಲೆದಾಡಿ ಖಾಲಿ ಜೋಳಿಗೆಯ್ಹೊತ್ತು
ಬೆವರ ಬೇಗುದಿಯಲಿ ಕನವರಿಸುವ
ಅವಳ ಧ್ಯಾನದ ಕಣ್ಣೊಳಗೆ
ಮಿಂಚಿನ ಹುಳ ಸಂಚರಿಸಿದಂತೆ!
ಚುಕ್ಕಿಗಳು ಕಚಗುಳಿ ಇಕ್ಕಿ ನೆನಪುಗಳ ನೇಗಿಲು
ಊಳುತ್ತಿದ್ದವು ಆಯಾಸದ ರೆಕ್ಕೆಗೆ

ನಕ್ಷತ್ರಗಳು ರಾತ್ರಿಯಾದಂತೆ ಮರದ ತುಂಬಾ
ಆಕಾಶಕ್ಕೆ ತೂಗುಯ್ಯಾಲೆ ಕಟ್ಟಿದಂತೆ
ಅಂಗಳದ ಕಟ್ಟೆಯಲಿ ಅಂಗಾತ ಮಲಗಿದ ನನ್ನೊಳಗೆ
ಚುಕ್ಕಿಗಳ ನಾವೆಯೊಂದು  ಅಕ್ಕನ ಕಸುವೊಳಗೆಬದುಕಿನ ಅಸ್ತಿತ್ವ ಹುಡುಕುತ್ತಿದ್ದಂತೆ ಗೋಚರ!

ಚಿಟ್ಟನೇ ಚೀರಿದ ಅವ್ವನ ಕಣ್ಣೊಳಗೆ ಚುಕ್ಕಿಯೊಂದು
ಸ್ಮಶಾನದ ಗೋರಿಯಾಗಿ ಹಣೆಯ ತಿಲಕದಲ್ಲಿ ತೇಲುವ ಚಿತ್ರ

ಅಪ್ಪನ ಶವದ ಮುಂದೆ ಚುಕ್ಕಿಯೊಂದು ಬಿದ್ದಾಗ
“ಸತ್ತವರು ಚುಕ್ಕಿಗಳಾಗಿ ಸಂಚರಿಸುತ್ತಾರೆ” ಅಕ್ಕನ  ಉತ್ತರದಲಿ
ಚುಕ್ಕಿಗಳು ನಮ್ಮ ಪೂರ್ವಜರ ನಕ್ಷೆ ಹಿಡಿದಂತೆ

ಚುಕ್ಕಿಗಳ ಎದೆಗೊತ್ತಿಕೊಳ್ಳುವ ನನ್ನ ತವಕದಲಿ
ಹೆಜ್ಜೆಗಳ ಬಡಿತವಾಗಿ ಮೌನದ ನದಿಯಾಗಿರುವ ಅಕ್ಕ
ಜೋಗುಳದ ಮಿಡಿತವಾಗಿ ಗೋಚರ

ಕೌದಿಯ ತುಂಬಾ ನೆತ್ತರಿನ ಕನಸಾಗಿ ಹೊರಳಾಡುವ
ಚುಕ್ಕಿಗಳ ನೆನಪೊಳಗೆ
ಈಗವಳು ಕಾಲು ಹಾದಿಯ ಎಲೆಗಳ ತೆಕ್ಕೆಗೆ
ನಕ್ಷತ್ರದ ನದಿಯಾಗಿ ವಸಂತದ ಚಿತ್ರ ಬಿಡಿಸುವ ತವಕ

ಬಿಸಿಲು ನೋಟದ ರೆಕ್ಕೆಗಳು

ಬಿಸಿಲ ನೋಟದ ರೆಕ್ಕೆಗಳು
ಬೆಳಕ ಪೊರೆಯ ಸೆಳುವಿನಲಿ
ಬತ್ತದ ಗರಿ ನುಂಗಿ
ಮಣ್ಣ ಪದರಿನ ತೊಳ್ತೆಕ್ಕೆ ಹೊಕ್ಕು
ಹೊಲ ಗದ್ದೆಯ ಬದುವಿನ ಗರಿಕೆಯಲಿ
ಸೆಡವುಗೊಂಡು
ಬಯಲ ದರ್ಪದ ಕೊಡೆಯಾಗಿ ತೋರಿಕೆ

ಮೋಡದ ನೋಟಗಳು
ಬಾಯಿ ಸೆಳುವಿನ ಗದ್ದಲದಲಿ
ಒಂಟಿ ಕಡ್ಡಿಗಳ ಒಡಲು ನುಂಗಿ
ಚಂದ್ರ ತಾರೆಗಳ ಬಯಲು ಹೊಕ್ಕು
ಬರದ ತಾಣದಲಿ
ಒಣಗಿದ ಎದೆಯಾಗಿ
ಕಲ್ಲುಗಂಬದ ನದಿಯಾಗಿ ಬಿದ್ದಿವೆ

***
ಹಗಲ ಕಣ್ಣುಗಳು
ನಂಜಿನ ತಟ್ಟೆಗಳಾಗಿ
ಬಂಜರು ನೆಲದ ಬಯಕೆಗಳ ನುಂಗಿ
ಅನಾಥ ಕಂಬಿಗಳ ಕನಸುಗಳಲಿ ಹೊಕ್ಕು
ರಸ್ತೆಯ ಚಿತ್ತಗಳಲಿ
ಮೌನದ ತೊರೆಯಾಗಿ
ಮನಸು ಮುಸುಕುವ ನಡಿಗೆಯಾಗಿದೆ

ರಾತ್ರಿಯ ದ್ವನಿಗಳು
ಆಪ್ತ ನಗುವಿನ ಮೋಡಿಯಾಗಿ
ಎದೆಯ ಪಿಸುಮಾತು ತಿಂದವು
ಹಸಿವಿನ ನೆತ್ತಿಯ ಹೆಜ್ಜೆಗಳ ಹೊಕ್ಕು
ನೆಲೆಯ ತಳದ ನೆಮ್ಮದಿಯ ಬಳೆದುಕೊಂಡು
ಬೆಸುಗೆಯಲಿ ಬೆಂದುಂಡ ಮಾಸದ ಗುರುತುಗಳಲಿ
ಗುಪ್ತ ತೊರೆಯಾಗಿ
ತೊಗಲ ಗೊಂಬೆಯ ಬಾವಲಿಯಾಗಿ ಕಂಡವು

***
ಈ ಹಗಲು ಈ ಇರುಳ ನಾಲಿಗೆಗಳು
ನೋಟಿನ ಗೋಪುರಗಳಾಗಿ
ಮನುಷ್ಯ ಮನುಷ್ಯರ ಬೀಕರಿಗಿಟ್ಟವು
ತೊಗಲ ಕೆರಿಕೆಯಲಿ
ಹುಣ್ಣಿನ ಬಟ್ಟಲು  ಬೀದಿಯಂಗಳ ಚಲ್ಲಿ
ಓಟಿನ ಸಂತೆಯಲಿ ಹರಾಜಿಗಿಳಿದವು

ಕಾವೇರಿದ ಬಯಲ ಮಿಡಿಗಾಗಿ
ಒಡಲ ತೇಪೆಯ ಬಿರುಕಿಗಾಗಿ
ಯಾವ ಭರವಸೆ ಮೊಳಗಿಸದೆ
ತೆಪ್ಪಗೆ ಕುಳಿತವು ರಾಜಧಾನಿಯ ಬೀದಿಗಳು

ಮರುಗಲಿಲ್ಲ ಮಮತೆಯ ತೆಪ್ಪ ಕಟ್ಟಲಿಲ್ಲ
ಜನರ ನಾಡಿಯಾಗಬೇಕಿದ್ದ
ನ್ಯಾಯದ ಕಣ್ಣಿಗೆ
ಅಸಮಾನತೆಯ ಪೊರೆ ಬಿದ್ದಿದೆ

***
ಕಾಲದ ನದಿಯೊಳಗೆ ತೇವಗಟ್ಟಿ
ಉಸುರೊ ಗುರುತುಗಳು
ಹೊಸದೀಪದ ತೈಲವಾಗಿ ಬೆಳಗಬೇಕಿದೆ

ಅಲೆಯ ನಗೆಯೊಳಗೆ ಉಸುರುಗಟ್ಟಿ
ನೆನಪುಗಳ ನೆಲಕ್ಕುರುಳಿಸಿದ ಮರಗಳು
ಹಾದಿ ಜಂಗಮರ ದನಿಯಾಗಿ
ಮತ್ತೆ ಮತ್ತೆ ಚಿಗುರಲಿ

ಮುಗ್ದ ಕೈಗಳ ಬೆರಳಲಿ
ಮುಗ್ಧ ಕೈಗಳ ಬೆರಳಲಿ ಮಧರಂಗಿ ರೇಖೆಗಳು ನಡುಗ್ಯಾವೊ
ಬೆವರಿನ ಹನಿಯಾಗ ಮುಂಗೈ ನಾಡಿಗಳು ನಡುಗ್ಯಾವೊ
ಕೈಯಾಗ ಸುತ್ತಿದ ಜೋಳಿಗೆಯಲಿ ಸ್ತಬ್ದ ಚಿತ್ರದ ಬಿಂಬಗಳು
ಅಲೆದಲೆದು ನಿಸ್ತೇಜಗೊಂಡ ನೆರಳುಗಳು ನಡುಗ್ಯಾವೊ
ಸೂಜಿಯೊಳಗೆ ಪೋಣಿಸುವ ಕೈಗಳ ನೀರವ ಮೌನದಲಿ
ಬಳಲಿ ಬತ್ತಿಯೋದ ಹೂವಿನ ಕೆಂದುಟಿಗಳು ನಡುಗ್ಯಾವೊ
ಮಣ್ಣು ಮಗುವಾಗಿಸುವ ಮಡಿಕೆಯ ಧ್ಯಾನದ ಕೈಗಳಲಿ
ಗುರುತು ಸಿಗದ ತತ್ರಾಣಿಯ ಮುಖಗಳು ನಡುಗ್ಯಾವೊ
ಹೆಂಟೆಗಳ ಕರಗಿಸಿ ಬೀಜಗಳ ಊರುವ ಕೈಗಳ ಉಡಿಯಲಿ
ಗೆದ್ದಲಿಡಿದ ಬಳ್ಳಿಯ ಒಡಲಾಗ ನೆಲೆಗಳು ನಡುಗ್ಯಾವೊ
ಮೂಟೆಗಳ ಹೊರುವ ಬೆನ್ನೆ ಮ್ಯಾಲಿನ  ನೆರಿಗೆಳಲಿ
ಹಮಾಲಿಯ ಕನಸಿನ ರಟ್ಟೆಯ ಕಸುವುಗಳು ನಡುಗ್ಯಾವೊ
ಯಂತ್ರಗಳ ನೆತ್ತಿಗೆ ಸಿಲುಕುವ ಬೆರಳುಗಳ ದುಡಿಮೆಯಲಿ
ಬೆವತು ಬೆಂಡಾಗಿ ನೆನೆಯಿಟ್ಟ ಆಶೆಗಳು ನಡುಗ್ಯಾವೊ
ಕೈ ಬೆರಳಲಿ ನಯವಾಗಿ ಕುಣಿವ ಅಕ್ಷರಗಳ ತಾಣದಲಿ
ಕುಬ್ಜಮಾಗಿ ಮೆರೆಯೊ ಗಿರಿ ಬೇಲಿಗಳು ನಡುಗ್ಯಾವೊ
ಉಯ್ಯಾಲೆ ಮೀಟುವ ಅಲೆಮಾರಿ
ಚುಮು ಚುಮು ಚಳಿಯಾಗ ನಿನ್ನ ನೋಟ ಮಂಜಿನ ಹನಿಯ್ಹಂಗ
ಜೊತೆಯಾಗಿ ನಗುವಿರಿಸಿ ಕ್ಷಣದಾಗ ಮಾಯಮಾಗುವ ನೆರಳಿನ್ಹಂಗ
ರಟ್ಟೆಗಳ ಕಸುವಿನ್ಯಾಗ ಬುತ್ತಿಯ ದಿಂಬಿನ ಚಿತ್ತ ಮೂಡಿಸಿ
ಮಧರಂಗಿ ಕೈಗಳ  ಉಯ್ಯಾಲೆ ಮೀಟುವ ಅಲೆಮಾರಿಯ್ಹಂಗ
ಚದುರಿದ ಎಲೆಗಳ ಸಮಾಧಿಯ ಮ್ಯಾಲೆ ಕರುಣೆಯ ದೀಪವಿರಿಸಿ
ಮಣ್ಣಾದ ನೆನಪುಗಳ ಅಗೆದು ಬರಡು ಬಡ್ಡೆಗೆ ಚಿಗುರ ಮೂಡಿದ್ಹಂಗ
ಎದೆ ಅದುಮಿಟ್ಟು ಕನವರಿಸಿ ರೆಕ್ಕೆ ಸೋತ ಕಟುಕರ ಬಜಾರಿನಲಿ
ಅಸಹಾಯಕ ಜೋಳಿಗೆಯ ಮೈತುಂಬಾ ಅಕ್ಷರ ತೆನೆಗಳ ತೆಕ್ಕೆಯ್ಹಂಗ
ದಿಕ್ಕೆಟ್ಟ ನಡಿಗೆಯ ಇಕ್ಕೆಲಗಳಲಿ ನೆದರುಗೊಂಬೆಯ ನೋಟದಾಗ
ಕಣ್ಣಳತೆಗೂ ಸಿಗದ ತಿರುವುಗಳ ದಾರಿಯಲಿ ಹೂವಿನ ಹೆಜ್ಜೆಗಳ್ಹಂಗ
ಸಾಲು ದೀಪದ ಬೆಟ್ಟದ ಹಾಗೆ ಏರಿಳಿಯುವ ಅಲೆಗಳ ಅಬ್ಬರದಾಗ
ಸೋಲರಿಯದ ರೆಕ್ಕೆಗಳ ಬೆನ್ನೊಳಗೂ  ಮುನ್ನುಗ್ಗುವ ಹಕ್ಕಿಯ್ಹಂಗ
ಸುಡುವ ನೆಲದ ತೆಕ್ಕೆಯೊಳಗೆ ಬಂಡೆಗಲ್ಲಿನ ಎದೆಗಳ ನಗಿಸಿ
ಬಾಯಾರಿದ ತುಟಿಗಳ ಚಲನೆಗೆ ತೇವ ಲೇಪಿಸೊ ಓಯಾಸಿಸ್ಸನ್ಹಂಗ
ಜೊಳ್ಳು ಮಾತುಗಳ ಬೀದ್ಯಾಗ  ಕಿರಸೂರ ಅರಿವಿನ ಜೋಳಿಗೆ
ದೀರ್ಘ ನಿಟ್ಟುಸಿರಿನ ಬೆನ್ನ ಮ್ಯಾಲೆ ನಕ್ಪತ್ರ ಚಿತ್ರಿಸುವ ಆಕಾಶದ್ಹಂಗ
ಬೀಜಗಳು ಕೂಡಿ
ಬಂಜೆ ಮಣ್ಣೊಳಗೂ ಪ್ರೀತಿ ತುಂಬುವವವು ಹನಿಗಳು ಕೂಡಿ
ಬಿರಿದ ಎದೆಯಲು ಫಸಲು ತುಂಬುವವು ಬೀಜಗಳು ಕೂಡಿ
ಮುರಿವ  ಟೊಂಗೆಯಲಿ ಚಿಗುರಿನ ಪಾದಗಳು ತಾಜಾವಿರಲು
ಬಾಡಿದ ಬೇರೊಳಗೂ ಅರಿವಿನ ಹಣತೆಯಾಗಲಿ ಬೆಸುಗೆಗಳು ಕೂಡಿ
ಉರಿದು ಬೀಳುವ ಇರುವೆಯ ಹೆಜ್ಜೆಗಳಲಿ ಮರಗಿನ ನೆಲೆಯಿರಲು
ಕಾಲದ ಗಳಿಗೆ ಕಾಯದೆ ಮನುಷ್ಯನ ನೆಲೆ ಗಟ್ಟಿಗೊಳ್ಳಲಿ ದನಿಗಳು ಕೂಡಿ
ಬಿರುಕ ನೆಲೆಗಳಲಿ ಒದ್ದಾಡುವ ಕಾದ ಎರೆಹುಳುವಿನ ಒಡಲಲಿ
ಬಯಲು ಪಾದದ ಗಟ್ಟಿತನ ಒಡಮೂಡಲಿ ಸಂಬಂಧಗಳು ಕೂಡಿ
ಬತ್ತಿದ ದೀಪದ ಬುಡದೊಳಗೆ ಉಸಿರುತೆತ್ತ ನೆನಪುಗಳಿರಲು
ಪಿಸುಮಾತಿನ ಗಳಿಗೆ  ತೈಲದ ನಗೆಯಾಗಲಿ ನಕ್ಷತ್ರಗಳು ಕೂಡ
ಒಡೆದ ಮಣ್ಣ ಮಡಿಕೆಯಲಿ ಗಿರಿ ನೊಂದ ಕಣ್ಣೀರುಗಳಿರಲು
ಚದುರಿದ ಎದೆಯೊಳಗೂ ಪ್ರೀತಿ ಚಿಗುರಲಿ ಕನಸುಗಳು ಕೂಡಿ
ಗಡಿಗಳ ದಾಹ ಅಳಿಸಲು
ಸಂಪತ್ತಿನ ಗುಂಗು ತೊರೆದು ಬಯಲು ನಗೆ ಬೀರಿದ ಬಾಹುಬಲಿ
ಒಳಗೆ ಮೆರೆಯೊ ಅಹಂ ಕಿತ್ತು ಮನುಷ್ಯತ್ವ ಮೆರೆದ ಬಾಹುಬಲಿ
ಯಾರ ಹಂಗಿನ ಬಿಡೆ ಇರದೆ ಸ್ವಾಭಿಮಾನದ ನಡಿಗೆ ಮೈಗೂಡಿಸಿಕೊಂಡು
ಹೆಗಲ ಮ್ಯಾಲೆ ಶಾಂತಿ ಬೀಜಗಳ ಕರುಣೆಯ ದೀಪವಿರಿಸಿದ ಬಾಹುಬಲಿ
ಹೊಸ್ತಿಲು ಬಳಿ ಗಿರಗಿರನೇ ಸುತ್ತುವ ಚಕ್ರರತ್ನಕ್ಕೆ ಪ್ರೀತಿ ತುಂಬಿ
ವಾತ್ಸಲ್ಯದ ನಯ ವಿನಯತೆಯ ಜೋಗುಳ ಹಾಡಿದ ಬಾಹುಬಲಿ
ಯುದ್ಧದಲಿ ಹೆಗಲು ಸುಟ್ಟುಕೊಂಡ ಜನತೆಯ ಮಿಡಿತವಾಗಿ
ಹಾದಿ ಬೀದಿಯ ಗೋರಿಗಳ ಕಣ್ಣೀರಿಗೆ ಏಕಾಂಗಿ ಹೋರಾಡಿದ ಬಾಹುಬಲಿ
ತೋಳ್ಬಲದ ತೆಕ್ಕೆಯಲಿ ಸಹೋದರನ ಅಹಂಕಾರವ ಎತ್ತಿತೋರಿಸಿ
ಗಡಿಗಳ ದಾಹ ಅಳಿಸಲು ಸರ್ವ ತ್ಯಾಗಕ್ಕೂ ಸಿದ್ದನಾದ ಬಾಹುಬಲಿ
ಹೆಣ್ಣು ಹೊನ್ನು ಮಣ್ಣಿನ ಗರಡಿಯಲಿ ಗಿರಿ ಬೀದಿಗಳು ತೇಲುವಾಗ
ಈ ನೆಲದ ಋಣದಲಿ ಎಲ್ಲವು ನಶ್ವರವೆಂದು ತೋರಿದ ಬಾಹುಬಲಿ

9 comments

 1. ಕಿರಶೂರ ಗಿರಿಯಪ್ಪ ಕವಿತೆಗಳು, ಮಾಗಿಯ ಜನನ ಕಾಲದಲ್ಲೂ ಕೂಗುವ ಕೋಗಿಲೆಗಳಂತೆ, ಚೌಕಟ್ಟನ್ನು ಬಯಲುಗೊಳಿಸುವ ಇರಾದೆ ಅವರ ಕವಿತೆ ಗಳ ಕೇಂದ್ರ ಶಕ್ತಿಯಾಗಿದೆ. – ಮಹಾಂತೇಶ ಪಾಟೀಲ್.

  • ನಿಮ್ಮ ಕಾವ್ಯ ಪ್ರೀತಿಗೆ ದನ್ಯವಾದಗಳು

 2. ಗಿಯಪ್ಪನ ಕವಿತೆಗಳು ಒಂದೇ ಗುಕ್ಕಿಗೆ ನುಂಗುವಂತಹವು ಅಲ್ಲ. ವ್ಯವಧಾನವನ್ನು ಬೇಡುವ ಕವಿತೆಗಳು

 3. ಅಲ್ಲೊಂದು ಇಲ್ಲೊಂದು ಓದಿದ್ದು ಬಿಟ್ರೆ ಗಿರಿಯಪ್ಪನವರ ಕವಿತೆಗಳು ಹೀಗೆ ಒಟ್ಟಾರೆಯಾಗಿ ಓದಲು ಸಿಕ್ಕಿರಲಿಲ್ಲ…ರೂಪಕ ಉಪಮೆ ಹೋಲಿಕೆಗಳನ್ನು ದಂಡಿದಂಡಿಯಾಗಿ ಒಳಗೊಂಡಿರುವ ಅವರ ಕವಿತೆಗಳು ಕವಿಯ ಸೂಕ್ಷ್ಮ ಅವಲೋಕನವನ್ನ ನಮಗೆ ಅರಿವುಮಾಡಿಸುತ್ತವೆ..ಎಲ್ಲ ಕವಿತೆಗಳೂ ಉತ್ತಮವಾಗಿವೆ..ಈಗಿನ ಹುಡುಗರ ಕವಿತಾ ಶಕ್ತಿಗೆ ಅಚ್ಚರಿಗೊಳ್ಳುತ್ತಿದ್ದೇನೆ ನಾನು

 4. ಕವಿತೆಗಳನ್ನು ಪ್ರಕಟಿಸಿದ ಅವಧಿ ಸಂಪಾದಕರಿಗೆ ತುಂಬಾ ದನ್ಯವಾದಗಳು

 5. ಕಿರಸೂರು ಗಿರಿಯಪ್ಪನವರ ಕವಿತೆಗಳು ಓದುತ್ತಸಾಗಿದಂತೆ ಎದೆಯೊಳಗೊಂದು ಪ್ರಪಂಚವೇ ಜೀವಪಡೆದುಕೊಳ್ಳುತ್ತದೆ. ಇಲ್ಲಿ ಹರಿತವಾದ ಮೊನಚಾದ ಪದಗಳ ರೂಪಕ, ಪ್ರತಿಮೆಗಳು ಹೇರಳವಾಗಿ ದೊರೆಯುತ್ತವೆ. ಕವಿತೆಗಳ ಆಳಾಗಲಗಳಿಗೆ ಗಡಿಹಾಕಲು ಸಾಧ್ಯವೇ ಇಲ್ಲ. ಒಂದಕ್ಕಿಂತ ಒಂದು ಅರ್ಥಪೂರ್ಣ ಮತ್ತು ವ್ಹಾ..! ಎನ್ನುವಷ್ಟು ಚಂದದ ಕವಿತೆಗಳು.
  ವಾರದಕವಿಯಾಗಿ ಆಯ್ಕೆಯಾದ ಗಿರಿಯಪ್ಪನವರಿಗೆ ಅಭಿನಂದನೆಗಳು.. ಸಾಹಿತ್ಯದ ಹಾದಿ ಹೀಗೆ ವಿಶಾಲಗೊಳ್ಳುತ್ತಲೇ ಸಾಗಲಿ…

 6. ಗೆಳೆಯ ಗಿರಿಯಪ್ಪನ ಸೂಕ್ಷ್ಮ ಮನಸಿನ ಹಾಗೆಯೇ ಅವರ ಕವಿತೆಗಳು, ಆಳಕ್ಕೆ ಹೊಕ್ಕರೆ ಮಾತ್ರ ನಮ್ಮನಸಿನ ಕದ ತಟ್ಟುತ್ತವೆ, ಅವರ ಕನ್ನಡ ಗಜಲ್ ಗಳು ಕೂಡ ಅದ್ಭುತವಾಗಿವೆ ಮುಂದೆ ಅದು ಕೂಡ ಓದುಗರಿಗೆ ಸಿಗುವಂತಾಗಲಿ.

  ಅಭಿನಂದನೆಗಳು ಗೆಳೆಯ ಗಿರಿಯಪ್ಪ ರವರಿಗೆ

  ಎಸ್.ಎಸ್.ಅಲಿ
  ತೋರಣಗಲ್ಲು

 7. ಕಿರಸೂರ ಗಿರಿಯಪ್ಪ ಅವರ ಕವಿತೆಗಳು ಅಂದರೆ ರೂಪ ರೂಪಕಗಳ ಜಗತ್ತು. ಕವಿಗೂ, ಕವಿಯನ್ನು ಓದಿಸಿದ ಅವಧಿಗೆ ನಮನಗಳು.

Leave a Reply