ಏನೂ ಮಾಡದ‌ ‘ಆ ದಿನ’

ಸದಾ ಬಿಡುವಿರದ ಕೆಲಸಗಳಲ್ಲಿ ಮುಳುಗಿ ಹೋಗಿರುತ್ತಿದ್ದ ಆತ,ಹಿಂದಿನ ರಾತ್ರಿ ತೀರ್ಮಾನ ಮಾಡಿದಂತೆಯೇ ತಾನು ಈ‌ ದಿನ ಏನೂ ಮಾಡುವುದಿಲ್ಲ ಎಂಬ ನಿರ್ಧಾರಕ್ಕೆ ಬದ್ದನಾಗಿಯೇ ಉಳಿದ. ಏನೆಂದರೆ ಏನೂ ಮಾಡಲಿಲ್ಲವೆ? ಎಂಬ ಪ್ರಶ್ನೆ ಹುಟ್ಟುವುದು ಸಹಜ.‌ ಜೈವಿಕವಾಗಿ ಮನುಷ್ಯ ಬದುಕಲು ಅಗತ್ಯವಿರುವ ಚಟುವಟಿಕಗೆಳನ್ನು ಹೊರತುಪಡಿಸಿ ಮತ್ತೇನೂ ಮಾಡಲಿಲ್ಲ ಎಂದು ನಾವು ತಿಳಿದುಕೊಳ್ಳಬೇಕಾಗುತ್ತದೆ.

ದಿನನಿತ್ಯ ಮಾಡುತ್ತಿದ್ದ ಧ್ಯಾನ ಮಾಡಲೂ ಆತ ನಿರಾಸಕ್ತನಾಗಿದ್ದ. ಯಾವುದೋ ಕಾರಣ ನೀಡಿ ರಜೆ ಪಡೆದು ಮನೆಯಲ್ಲೇ ಉಳಿದ. ಸಂಜೆ ಸಿನಿಮಾಕ್ಕೆ‌ ಹೋಗಬೇಕೆಂದು ಬುಕ್ ಮಾಡಿದ್ದ ಟಿಕೆಟ್ ಕೂಡ ಕ್ಯಾನ್ಸಲ್ ಮಾಡಿದ. ‘ಹೇಗೂ ರಜಾ ಹಾಕಿದ್ದೀರಲ್ಲ. ಬನ್ನಿ ಹೋಗಿ ರೇಷನ್ ತಗೋಂಡ್ ಬರೋಣ’ ಎಂದ ಹೆಂಡತಿಯನ್ನೂ ಸುಮ್ಮನಾಗಿಸಿದ. ಎಷ್ಟೋ ದಿನದಿಂದ ಒಂದು ರಜೆ ಸಿಕ್ಕರೆ ಸಾಕೆಂದು ಕಾಯುತ್ತಿದ್ದ ಸಣ್ಣ ಪುಟ್ಟ ಯಾವ ಕೆಲಸಗಳನ್ನೂ ಅವನು ಆ ದಿನ ಮಾಡಿಕೊಳ್ಳದಿರಲು ನಿರ್ಧರಿಸಿ ಒಂದಿಡೀ ದಿನ ಮನೆಯಲ್ಲೇ ಉಳಿದ.

ಟಿವಿ ಆನ್ ಮಾಡಿದರೆ ಮನರಂಜನೆಗಿಂತ ಮನೋವ್ಯಾಧಿಯೇ ಹೆಚ್ಚಾಗಬಹುದೆಂದು ತಿಳಿದು ರಿಮೋಟ್ ಮುಟ್ಟಲಿಲ್ಲ. ಇತ್ತೀಚೆಗೆ ತರಿಸಿಕೊಂಡಿದ್ದ ತನ್ನ ಫೇವರೇಟ್ ರೈಟರ್ ನ ನಾವೆಲ್ ನ್ನಾದರೂ ಓದಬಹುದಿತ್ತು. ಅದನ್ನೂ ಮಾಡಲಿಲ್ಲ. ಹೋಗಲಿ ಮನೆಯಲ್ಲಿದ್ದು ಹೆಂಡತಿಗಾದರೂ ನೆರವಾದನಾ ಅಂದುಕೊಂಡರೆ ಹಾಗೂ ಮಾಡಲಿಲ್ಲ. ಮನೆಯಲ್ಲಿನ ಒಂದು ಕಡ್ಡಿತುಂಡನ್ನೂ  ಆಚೀಚೆ ಮಾಡಲಿಲ್ಲ‌. ಇಡೀ ಜಗತ್ತು ದೈನೇಸಿ ದುಡಿಯುತ್ತಿರುವಾಗ, ತಾನೊಬ್ಬ ಒಂದು ದಿನ ಆಲಸಿಯಾಗಿದ್ದು ಕಳೆದರೆ ಯಾವ ನಷ್ಟವೂ ಆಗಲಾರದು ಎಂಬ ಲೆಕ್ಕಾಚಾರ ಅವನದ್ದಿರಬಹುದು. ಹೀಗೆ ಏನೊಂದನ್ನೂ ಮಾಡದ ಆಲಸಿಯ ಆ ದಿನ ಮುಗಿದೇ ಹೋಯಿತು…

ಹೀಗೆ ಏನನ್ನೂ ಮಾಡದೆ ಒಂದು ದಿನ ಇದ್ದವನ ಆ ದಿನದ ಬಗ್ಗೆ ಅವನಿಗೆ ಸಂಬಂಧಿಸಿದ ಯಾವುದಾದರೂ ಘಟನೆಗಳು ನಡೆದಿರಬಹುದೇ ಎಂದು ತನಿಖೆ ನಡೆಸಿದಾಗ ಈ ಕೆಳಕಂಡ ವಿಚಾರಗಳು ತಿಳಿದು ಬಂದವು.

*                 *                 *                  *
ಮಧ್ಯಾಹ್ನ ೧೨.೧೫ ರ ಸುಮಾರಿಗೆ ಅವನಿಗೆ ಬಂದ ಫೋನ್ ಕಾಲ್ ನಿಂದಾಗಿ ಪರ ಊರಿನಲ್ಲಿರುವ ಅವನ ತಂಗಿಗೆ ಹೆಣ್ಣು ಮಗು ಜನಿಸಿದ ಸುದ್ದಿ ತಿಳಿದು ಬಂತು.‌ ಇದರಿಂದಾಗಿ ಅವನು ‘ಮಾವ’ನಾಗಿ ಪ್ರಮೋಷನ್‌ ಸಿಕ್ಕಂತಾಯಿತು. ತನ್ನ ಸೊಸೆ ಹೇಗಿರಬಹುದು? ಅವಳಿಗೇನು‌ ಹೆಸರಿಡುವುದು ಎಂದೆಲ್ಲ ಲೆಕ್ಕ ಹಾಕಿದ.

ಮಧ್ಯಾಹ್ನ ೧.೩೦ ರ ನ್ಯೂಸ್ ನಲ್ಲಿ ಬಂದ ಸುದ್ದಿಯೊಂದು ಅವನಿಗೆ ಬಂಪರ್ ನೀಡಿದಂತಿತ್ತು. ಚುನಾವಣಾ ದೃಷ್ಟಿಯಿಂದ ಯೋಚಿಸಿದ ಕೇಂದ್ರ ಸರ್ಕಾರವು ವೈಯುಕ್ತಿಕ ಆದಾಯ ತೆರಿಗೆ ಮಿತಿಯನ್ನು ಹಲವು ಲಕ್ಷಗಳಿಗೆ ಏರಿಸಿತ್ತು.‌ ಇದರಿಂದ ಅವನಿಗೆ ತಾನಿನ್ನು ಟ್ಯಾಕ್ಸ್ ಕಟ್ಟಬೇಕಾದ ಪ್ರಮೇಯ ಬರುವುದಿಲ್ಲ ಎಂದು ತಿಳಿದು ಖುಷಿಯಾಯಿತು.

ಸಂಜೆಯ ಹೊತ್ತಿಗೆ ಒಂದು ಕೊರಿಯರ್ ಬಂತು. ಅದರಲ್ಲಿ ಆತ ಈ ಹಿಂದೆ ಮಾಡಿಸಿದ್ದ ವಿಮೆ ಪಾಲಿಸಿಯೊಂದು ಮೆಚ್ಯೂರ್ ಆಗಿದ್ದಾಗಿ ಮಾಹಿತಿ ಇತ್ತು.‌ ಇದೊಂದು ಸಕಾಲದಲ್ಲಿ ಬಂದ ಮಾಹಿತಿಯೆಂದು ಖುಷಿಪಟ್ಟ.

ವಿಚಿತ್ರವೆಂದರೆ ಅವನ ಆಫೀಸಿನಲ್ಲಿ ಬಹಳ ದಿನಗಳಿಂದ  Due ಇದ್ದ Appraisal ನ ಫಲಿತಾಂಶವನ್ನು ಅವತ್ತೇ ಡಿಕ್ಲೇರ್ ಮಾಡಲಾಗಿತ್ತು.‌ ಅದರ ಪ್ರಕಾರ ಆತ ಉದ್ಯೋಗದಲ್ಲಿ ಮೇಲಿನ ಹಂತದ ಸ್ಥಾನಕ್ಕೆ ಬಡ್ತಿ ಪಡೆದಿದ್ದ. ಇದನ್ನು ಅವನ ಸಹೋದ್ಯೋಗಿ ಕಾಲ್ ಮಾಡಿ ತಿಳಿಸಿದಾಗ, ‘ಛೇ ಇವತ್ತೇ ನಾನು ರಜಾ ಹಾಕ್ಬಿಟ್ನಲ್ಲ, ಆಫೀಸ್ ನಲ್ಲಿದ್ದಿದ್ದರೆ ತನ್ನ ಮೇಲೆ ಅಸೂಯೆ ಪಡುತ್ತಿದ್ದ ಕೆಲವರಿಗೆ ತಕ್ಕ ಉತ್ತರ ನೀಡಿದಂತಾಗುತ್ತಿತ್ತು’ ಎಂದು ಹಳಿದುಕೊಂಡ.

ಊಟ ಮಾಡುತ್ತಿದ್ದಾಗ ಅವನ ಕಾಲೇಜ್ ಗೆಳೆಯನೊಬ್ಬ ಬಹಳ ಅಪರೂಪಕ್ಕೆಂಬಂತೆ ಕರೆ ಮಾಡಿದ್ದ. “ಇವತ್ತು ಮಾರ್ಕೆಟ್ ಹತ್ರ ಸಿಗ್ನಲ್ ನಲ್ಲಿ ಸರೋಜ ಸಿಕ್ಕಿದ್ಲು. ಎರಡು ಮಕ್ಕಳಾದರೂ ಕಾಲೇಜಲ್ಲಿದ್ದಾಗ ಹೇಗಿದ್ಲೋ ಹಾಗೇ ಇದಾಳೆ ಕಣೋ. ಅದೇ ವೈಯ್ಯಾರ, ಒನಪು, ಸೊಕ್ಕು ಎಲ್ಲಾ ಇದ್ವು. ಕೊನೇಲಿ ಅದೇನೋ ನೆನಪು ಮಾಡ್ಕೊಂಡೋರ್ ಥರ ನಿನ್ನ ಹೆಸರು ಹೇಳಿ‌, ‘ಎಲ್ಲಿದಾನೋ ಅವ್ನು? ಮದ್ವೆ ಆಗಿದಾನೆ ತಾನೆ?’ ಅಂತ ಕೇಳಿದ್ಲು. ನಿನ್ನ ಹೆಸರು ಹೇಳೋವಾಗ ಏನೋ Missed Opportunity ಥರ ಇತ್ತು ಮುಖ. ಆಮೇಲೇ ಮಾಮೂಲಿಯಾಗೇ ಕಾರ್ ಹತ್ತಿ ಕೂತಕೊಂಡ್ಲು. ನಿನ್ನನ್ನು ಕೇಳ್ದೆ ಅಂತ ಏನೂ ಹೇಳ್ಲಿಲ್ಲ.‌ ಆದರೂ ಕೇಳ್ದಂಗೆ ಇತ್ತಪ. ಅದ್ಕೆ‌ ನಿನ್ಗೆ ತಿಳಿಸೋಣ ಅಂತ ಮಾಡಿದೆ.” ಎಂದು ಕಾಲ್ ಮುಗಿಸಿದ. ಊಟದ ಕೈ ಒಣಗಿಹೋಗಿದ್ದ ಇವನು,  ರಜಾ ಹಾಕಿದ್ದ ತಾನು ಮಾರ್ಕೆಟ್ ಕಡೆಯಾದರೂ ಹೋಗಬಾರದಿತ್ತೆ ಎಂದು ನೊಂದುಕೊಂಡ.

ಸರೋಜ ಮತ್ತು ಮಾರ್ಕೇಟ್ ಬಗ್ಗೆ ಯೋಚಿಸುತ್ತಿರುವಾಗಲೇ,ಇನ್ನೇನು ಮಲಗಬೇಕೆನ್ನುವಷ್ಟರಲ್ಲಿ ಮಲೆನಾಡಿನಲ್ಲಿದ್ದ ಅವನ ಅಜ್ಜಿ ಮನೆಯಿಂದ ಆಘಾತಕಾರಿ ಸುದ್ದಿಯೊಂದು ಬಂತು. ತೊಂಬತ್ತು ದಾಟಿದ್ದ ಅಜ್ಜಿ ಹಿಂದಿನ ದಿನವೇ ಮರಣಿಸಿದ್ದಾಗಿಯೂ, ತಿಥಿ ನಕ್ಷತ್ರಗಳನ್ನು ನೋಡಲಾಗಿ ವಿಧಿವಿಧಾನಗಳನ್ನು ತುರ್ತಾಗಿ ಮಾಡಬೇಕಿದ್ದರಿಂದ ದೂರದಲ್ಲಿರುವವರನ್ಯಾರು ಕರೆಯದೇ ಮುಗಿಸಿದ್ದಾಗಿಯೂ, ತಿಂಗಳ ಕಾರ್ಯಕ್ಕೆ ಎಲ್ಲರನ್ನೂ ಕರೆಯುವುದಾಗಿಯೂ ವಿಷಯ ತಿಳಿಸಿದರು ಅವನ ಮಾವ. ಬಾಲ್ಯ ಕಳೆದ ಅಜ್ಜಿ ಮನೆ ನೆನೆದು ದುಃಖಿತನಾದ.

ಒಂದೇ ದಿನ ಹುಟ್ಟು‌, ಸಾವು, ಸಂತಸ, ನಿರಾಸೆ, ತೃಪ್ತಿ ಎಲ್ಲವನ್ನೂ ಅನುಭವಿಸಿದವನಿಗೆ ‘ನಿನ್ನೆಗಳು ನಾಳೆಗಳನ್ನು ರೂಪಿಸುತ್ತವೋ ಅಥವಾ ಇಂದು ಎಂಬುದು ನಿನ್ನೆಯ ಸಂತಾನವೋ? ಇಲ್ಲವೆ ‘ಇಂದು’ ಮಾತ್ರ ಸತ್ಯವೋ?’ ಎಂಬುದು ಅರ್ಥವಾಗದೆ, ಏನೂ ಮಾಡದ ದಿನವೇ ತನ್ನ ಸುತ್ತ ಇಷ್ಟೆಲ್ಲ ನಡೆದಿದೆ ಎಂದಾದರೆ ತಾನು ಏನಾದರೂ ಮಾಡುತ್ತಲೇ ಇರಬೇಕಾದ ಅನಿವಾರ್ಯತೆ ಎಷ್ಟಿದೆ ಎಂದು ಯೋಚಿಸುತ್ತಲೇ ಹಾಸಿಗಿಗೆ ಒರಗಿದ.
ನಾಳೆಗೆ ಅವನ ಬಳಿ ಯಾವ ನೆಪಗಳೂ ಉಳಿದಿರಲಿಲ್ಲ!

1 comment

  1. ತಾನೊಂದು ಬಗೆದರೆ… ದೈವವೊಂದು ಬಗೆಯಿತಂತೆ… ಪಾಪ!
    ಸಂತಾನವೋ, ಸತ್ಯವೋ? ಯಾವುದೋ ಒಂದು. ಪಾಲಿಗೆ ಬಂದದ್ದು ಪಂಚಾಮೃತವೆಂದು ಮುಂದುವರಿಯುವುದರಲ್ಲೇ ಖುಷಿಯಿದೆ ಅಂತೀನಿ.

Leave a Reply