‘ಚಂದ್ರಗಿರಿಯ ತೀರದಲ್ಲಿ’ ‘ತಾಯವ್ವಗೌಡ್ತಿ’

ಪ್ರೊ. ಚಂದ್ರಶೇಖರ ಹೆಗಡೆ  ಇವರು  ಬಾಗಲಕೋಟ ಜಿಲ್ಲೆಯ ಬೀಳಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರೊ. ಚಂದ್ರಶೇಖರ ಹೆಗಡೆ 

ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭ. ಅಂತಿಮ  ವರ್ಷದ ಬಿ ಎ ತರಗತಿಯಲ್ಲಿ ( ಐಚ್ಛಿಕ ಕನ್ನಡ ವಿಷಯ) ಸ್ತ್ರೀ ಸಂವೇದನೆಯ, ಬಂಡಾಯ ಲೇಖಕಿಯರಾದ ಸಾರಾ ಅಬೂಬಕ್ಕರ್ ರವರ  “ಚಂದ್ರಗಿರಿಯ ತೀರದಲ್ಲಿ” ಕಾದಂಬರಿಯ ಕಥಾವಸ್ತುವನ್ನು ಕುರಿತು ಚರ್ಚಿಸುತ್ತಿದ್ದೆ.

ಸ್ತ್ರೀ ಶೋಷಣೆಯ ಕರಾಳ ಮುಖವನ್ನು ಬಯಲು ಮಾಡುವ ಕಾದಂಬರಿ ಧರ್ಮ, ಸಂಪ್ರದಾಯ, ಸಾಮಾಜಿಕ ವ್ಯವಸ್ಥೆ ಎಂಬ ಸ್ಥಾಪಿತ ಕಟ್ಟಳೆಗಳ ಮಧ್ಯೆ ನರಳುವ ಸ್ತ್ರೀಯ ದುಸ್ಥಿತಿಯನ್ನು ಇನ್ನಿಲ್ಲದಂತೆ ಕಟ್ಟಿಕೊಡುತ್ತದೆ. ಮಹಮ್ಮದ್ ಖಾನ್ ಎಂಬ ಒರಟು ಧರ್ಮಬೀರುವಿನ ಕೈಯ್ಯಲ್ಲಿ ಸಂಪ್ರದಾಯದ ಸಂಕೋಲೆಗೆ ಸಿಲುಕಿ ನಲುಗುವ ಫಾತೀಮಾಳ ಜೀವ ಮನೆಯ ಮುಂದೆ ನಿಶಾಂತವಾಗಿ ಹರಿಯುತ್ತಿದ್ದ ಚಂದ್ರಗಿರಿಯ ನದಿಗೆ ಅರ್ಪಣೆಯಾಗಬಾರದಿತ್ತೆ ಎಂದು ಹಂಬಲಿಸುವುದನ್ನು ನೆನೆದರೆ ಎಂಥವರ ಹೃದಯವೂ ಕರಗಿಹೋಗುತ್ತದೆ.

ವಿಶ್ವ ಮಹಿಳಾ ದಿನದಂದು ನನ್ನ ತರಗತಿಯಲ್ಲಿ ನಡೆಸಿದ ಈ ಚರ್ಚೆ ಒಂದು ಬಗೆಯಲ್ಲಿ ಔಚಿತ್ಯಪೂರ್ಣ ಹಾಗೂ  ಅರ್ಥಪೂರ್ಣತೆಗೆ ಕಾರಣವಾದರೂ ಪಟ್ಟಭದ್ರ ಧಾರ್ಮಿಕ ಸಮಾಜದಲ್ಲಿ ನಡೆಯುವ  ಮಹಿಳಾ ಶೋಷಣೆಯನ್ನು ಕುರಿತು ಗಂಭೀರವಾಗಿ ಚಿಂತಿಸುವಂತೆ ಮಾಡಿತು.

೨೮ ವರ್ಷದ ದೈತ್ಯ ಅಜಾನುಬಾಹು ಒರಟು ಸ್ವಭಾವದ ಮಹಮ್ಮದ್ ಖಾನ್ ನೊಂದಿಗೆ ಮದುವೆಯಾದಾಗ ಕುಸುಮದಂತಿದ್ದ ಫಾತೀಮಾಳ ವಯಸ್ಸು ಕೇವಲ ೧೧ ವರ್ಷ ಎಂದಾಕ್ಷಣವೇ  ಹಲ್ಲಿಯಂತೆ ಲೊಚಗುಟ್ಟಿ ಮರುಗಿದ ನನ್ನ ತರಗತಿಯ ವಿದ್ಯಾರ್ಥಿಗಳಲ್ಲಿರುವ ಮಾನವೀಯ ಅನುಕಂಪದ  ಸಂವೇದನೆ ಈ ಸಂಪ್ರದಾಯವಾದಿಗಳಲ್ಲೇಕಿಲ್ಲ ಎಂಬುದು ನನಗೆ ಈಗಲೂ  ಅಚ್ಚರಿಯಾಗಿ ಕಾಡುತ್ತದೆ. ಇದು ಯಾವುದೇ ಒಂದು ಧರ್ಮ, ಜಾತಿ, ಮತಕ್ಕೆ ಸಂಬಂಧಿಸಿದ ಸಂಗತಿಯೆಂದು ನಾನು ಚರ್ಚಿಸಲು ಬಯಸುವುದಿಲ್ಲ.

ಹುತ್ವದ ಸಂಸ್ಕೃತಿಯನ್ನು ಮಡಿಲಲ್ಲಿಟ್ಟುಕೊಂಡು ತೂಗುತ್ತಿರುವ ಭಾರತೀಯ ಸಮಾಜದಲ್ಲಿ ಅಲ್ಲಲ್ಲಿ ಬಾಲ್ಯವಿವಾಹಗಳು ಘಟಿಸುತ್ತಲೇ ಇವೆ. ನಿಷೇಧದ ಕಾನೂನಿದ್ದರೂ ಲೆಕ್ಕಿಸದೇ ಜವಾಬ್ದಾರಿಯುತವೆಂದು ಕೊಚ್ಚಿಕೊಳ್ಳುವ  ತಂದೆ ತಾಯಿಗಳೇ ಮುಂದೆ ನಿಂತು ಗುಪ್ತವಾಗಿ ನಡೆಸುವ ಬಾಲ್ಯವಿವಾಹಗಳು ಸ್ತ್ರೀ ಸಮಾಜವನ್ನು ಶೋಷಿಸುವ ಮತ್ತೊಂದು ಪರಿಯನ್ನು ಬಣ್ಣಿಸುತ್ತವೆ. ಇದು ಸಂಪ್ರದಾಯ ಪರಂಪರೆಯ ಹೆಸರಿನಲ್ಲಿ ಎಲ್ಲ ಮತ ಧರ್ಮಗಳಲ್ಲಿಯೂ ಅನೂಚಾನವಾಗಿ ನಡೆದುಕೊಂಡು ಬಂದಿದೆ.

ಜಗತ್ತಿನ ಮನುಕುಲದ ಕಲ್ಮಶಗಳನ್ನೆಲ್ಲಾ ತೊಳೆದು ನುಂಗಿ ವಿಷಕಂಠೆಯಾದ ಚಂದ್ರಗಿರಿಯ ನದಿಯಂತೆ, ಫಾತೀಮಾ ತನ್ನ ಗಂಡನ ಪಾಪಕರ್ಮಗಳನ್ನೆಲ್ಲಾ ಮೌನಿಯಾಗಿ ಸಹಿಸುತ್ತಲೇ ಅನುಭವಿಸಿ ಸಂಸಾರದ ಅನುಭಾವಿಯಾಗಿ ಹರಿದವಳು. ನದಿಯ ಒಂದು ಕಡವಿನಲ್ಲಿ, ಹೆಂಡತಿ ಫಾತೀಮಾಳನ್ನೇ ಕ್ರೂರವಾಗಿ ಬೆತ್ತದೇಟಿನಿಂದ ಹಿಂಸಿಸುವ ಧರ್ಮಬೀರುವಾಗಿ, ಕಟ್ಟಾ ಸಂಪ್ರದಾಯವಾದಿಯಾಗಿದ್ದ ಕಠಿಣ ಹೃದಯದ ಮಹಮ್ಮದ್ ಖಾನ್, ಬದಲಾವಣೆಯನ್ನು ಕನಸಿನಲ್ಲಿಯೂ ಬಯಸದ, ನಿಂತಲ್ಲಿಯೇ ನಿಂತ ಕೊಳದ ಜಲಧಿಯಂತೆ ಮಲೆತ ಧರ್ಮವೆಂಬ ಸ್ಥಾವರದ ಸಂಕೇತ.

ಅದೇ ನದಿಯ ಮತ್ತೊಂದು ದಂಡೆಯಲ್ಲಿ ಧಾರ್ಮಿಕ ಸಂಪ್ರದಾಯದ ಆವರಣದಲ್ಲಿದ್ದೂ ನವೋದಯದ ಕಡೆಗೆ ತುಡಿಯುವ ಪ್ರಗತಿಪರ ಚಿಂತನೆಯ ಜಂಗಮದ ಪ್ರತಿನಿಧಿಯಾಗಿ ಮಹಮ್ಮದ್ ಖಾನ್ ರ ಮಗಳು “ನಾದಿರಾ”ಳ ಗಂಡ ರಶೀದ್ ನೆಲೆ ನಿಲ್ಲುತ್ತಾನೆ ಎಂದು ಚರ್ಚಿಸುತ್ತಲೇ ಪಾಠದ ಮಧ್ಯೆ “ರಶೀದ್ ಹಾಗೂ ಮಹಮ್ಮದ್ ಖಾನ್ ಪಾತ್ರಗಲ್ಲಿ ನಿಮಗಿಷ್ಟವಾದ ಪಾತ್ರ ಯಾವುದು?” ಎಂಬ ಒಂದು ಪ್ರಶ್ನೆಯನ್ನೆಸೆದಾಗ ಬಂದ ಉತ್ತರ ನಿರೀಕ್ಷಿತವಾಗಿತ್ತು.

ಕತೆಯಲ್ಲಿ ಯಾರಿಗೂ ಬೇಡವಾದ ಮಹಮ್ಮದ್ ಖಾನ್ ನಿಗಿಂತ ತನ್ನ ಹೆಂಡತಿ  “ನಾದಿರಾ” ಎಂಬ ಹೆಣ್ಣನ್ನು ತನ್ನದೇ ಜೀವವೆಂಬಂತೆ ಪ್ರೀತಿಸುವ  ಮಾನವೀಯ ಹೃದಯವುಳ್ಳ “ರಶೀದ್” ನನ್ನ ವಿದ್ಯಾರ್ಥಿಗಳ ಹೃದಯವನ್ನಾಕ್ರಮಿಸಿದ್ದ. ಈ ಚರ್ಚೆ ಮುಂದುವರಿಯುತ್ತಿದ್ದಂತೆ ಸಮಯವಾಗಿದ್ದರಿಂದ ತರಗತಿಯಿಂದ ಹೊರಬಂದ ನಾನು ಕಾಲೇಜಿನ ಕಾರಿಡಾರಿನಲ್ಲಿ ನಡೆಯುತ್ತಿದ್ದ ವಿಶ್ವ ಮಹಿಳಾ ದಿನಾಚರಣೆಯ ಸಿದ್ಧತೆಗಳನ್ನು ಕಂಡು ಪುಳಕಗೊಂಡೆ.

ಅಲ್ಲಿಂದ ನೇರವಾಗಿ ಪ್ರಥಮ ವರ್ಷದ  ಬಿ.ಕಾಂ. ತರಗತಿಗೆ ಪ್ರವೇಶಿಸಿದ ನಾನು ಅವಶ್ಯಕ ಕನ್ನಡ ವಿಷಯದಲ್ಲಿ  ಅಪೂರ್ಣವಾಗಿದ್ದ  “ಅಕ್ಷರ ದೇವರು” ಎಂಬ ಕತೆಯ ಕುರಿತು ಚರ್ಚೆಯನ್ನು ಮುಂದುವರೆಸಿದೆ. ಉತ್ತರ ಕರ್ನಾಟಕದ ಭಾಷೆ ಹಾಗೂ ನೆಲದ ಸೊಗಡಿನ ಗ್ರಾಮೀಣ ಸಂಸ್ಕೃತಿಯ ಸೌರಭವನ್ನು ನಾಡಿನ ತುಂಬೆಲ್ಲಾ ಹರಡುತ್ತಿರುವ ನಮ್ಮದೇ ಬಾಗಲಕೋಟ ಜಿಲ್ಲೆಯ ಅನನ್ಯ ಕತೆಗಾರ ಡಾ. ಅಬ್ಬಾಸ್ ಮೇಲಿನಮನಿಯವರು ರಚಿಸಿದ ಕಥೆಯೇ “ಅಕ್ಷರ ದೇವರು”.

ಅತ್ತ ಸಭಾಭವನದಲ್ಲಿ ಮಹಿಳಾ ದಿನಾಚರಣೆಯ ರಾಗಬದ್ದ  ಗೀತೆಗಳು, ಭಾಷಣದ ಸದ್ದು ಕೇಳುತ್ತಿದ್ದರೆ, ಇತ್ತ ಹೆಣ್ಣುಮಕ್ಕಳ ಸಂಖ್ಯೆಯೇ ಹೆಚ್ಚಾಗಿದ್ದ ನನ್ನ ತರಗತಿಯಲ್ಲಿ ಸಂಕನಗೌಡ ಹಾಗೂ ವಸಂತ ದೇಸಾಯಿಯರೆಂಬ ಊಳಿಗಮಾನ್ಯ ಸಂಸ್ಕೃತಿಯ ಹೆಮ್ಮರಗಳು ಜನರನ್ನು  ಶೋಷಿಸುತ್ತಿದ್ದ ಪರಿಯನ್ನು ಕುರಿತು  ಚರ್ಚೆ ಸಾಗಿತ್ತು.

ಗೌಡರು ಹಾಗೂ ದೇಸಾಯಿಯಯರ ಶೋಷಣೆಯನ್ನು ದಿಟ್ಟತನದಿಂದ ಎದುರಿಸಿ ಗೆದ್ದ ಮಹಿಳೆ “ತಾಯವ್ವಗೌಡ್ತಿ” ಯ ಸಾಧನೆಯ ಕತೆಗೆ ವಿದ್ಯಾರ್ಥಿಗಳೂ ತಲೆದೂಗಿದರು. ತಾವು ಕಬಳಿಸಬೇಕೆಂದಿದ್ದ, ಬೆಲೆಬಾಳುವ  ಜಾಗೆಯನ್ನು, ತಾಯವ್ವ ಗೌಡ್ತಿ ಊರಿನ ಶಾಲೆಗೆ ದಾನ ಮಾಡಿದ್ದನ್ನು ಗೌಡರು ಹಾಗೂ ದೇಸಾಯಿಯರಿಗೆ ಸಹಿಸಿಕೊಳ್ಳಲಾಗಲಿಲ್ಲ. ಗಲಭೆ ಎಬ್ಬಿಸಿ ತಾಲ್ಲೋಕ್ ಕಛೇರಿಗೆ ದೂರು ಕೊಟ್ಟು  ಪಿತೂರಿ ನಡೆಸಿದರೂ ಜಗ್ಗದ ತಾಯವ್ವ ಗೌಡ್ತಿಯ, ಗೌಡರ ವಿರುದ್ಧದ  ಎದೆಗಾರಿಕೆಯನ್ನು ತರಗತಿಯಲ್ಲಿ ಬಣ್ಣಿಸುವಾಗಲಂತೂ ” ಅರ್ಥಪೂರ್ಣ ಸಂದರ್ಭಕ್ಕೆ ಔಚಿತ್ಯಪೂರ್ಣ ಕತೆ ” ಎಂದು ನನಗನ್ನಿಸಿತು. ಇದನ್ನೇ ಆಧಾರವಾಗಿಟ್ಟುಕೊಂಡು ಕತೆಯನ್ನು ಸಮಕಾಲೀನಗೊಳಿಸುವ ವಿಮರ್ಶೆಗೆ ತೊಡಗಿದೆ.

ಕತೆಯಲ್ಲಿ ಬರುವ ದುರ್ಬಲರನ್ನು ಕಪಿಮುಷ್ಠಿಯಲ್ಲಿಟ್ಟುಕೊಂಡು ಆಳುವ ಯಜಮಾನ ಸಂಸ್ಕೃತಿಯ ಸಂಕನಗೌಡ  ಹಾಗೂ ದೇಸಾಯಿಯರಂತಹ ನಾಯಕರುಗಳು ನಮ್ಮ ಸಮಕಾಲೀನ ಸಮಾಜದಲ್ಲಿ ಅಲ್ಲಲ್ಲಿ ಇನ್ನೂ  ಕಾಣಸಿಗುತ್ತಿರುವುದು ದುರಂತವೇ ಸರಿಯೆಂದು ವಿಷಾದಿಸಿದೆ. ಪೂರಕವಾಗಿ ವಿದ್ಯಾರ್ಥಿಗಳು ಜೀತಪದ್ಧತಿ, ಕಾರ್ಮಿಕರ ಶೋಷಣೆ, ರೈತರ ಸಂಕಷ್ಟ ಮುಂತಾದ  ಕೆಲವು ಉದಾಹರಣೆಗಳನ್ನು ನೀಡಿದ್ದು ಸಂತಸ ತಂದಿತು.

Leave a Reply