ಚರಿತ್ರೆಯ ಮಣ್ಣಿನ ಹಂಗಿನಲ್ಲಿ..

ಮಂಜುಳಾ ಹಿರೇಮಠ

ಸೋಲುವ ಕವಿತೆ

ನಾ ಬರೆದ ಪದ್ಯದ ಪ್ರತಿ ಪದವೂ
ವಲಸೆ ಬಂದ ಹಕ್ಕಿಯಂತೆ
ನನ್ನ ಸೃಷ್ಟಿ ಎಂದು ಬೀಗುವ
ನನ್ನ ಬೆರಗಿನಿಂದ ನೋಡುತ್ತವೆ

ನಾ ಬರೆದ ಪದ್ಯದ ಪ್ರತಿ ಸಾಲೂ
ಕಡ ತಂದ ಯಾವುದೋ ಋಣ
ಭಾರಕ್ಕೆ ಜೋತುಬೀಳುತ್ತವೆ
ರೂಪಕಗಳಾಗಿ ಹಾದು ಹೋದ
ನದಿ, ಕಡಲ ಅಲೆಗಳು ಕವಿತೆಯ
ಸೋಗಲಾಡಿತನವನ್ನು ಹಂಗಿಸುತ್ತವೆ

ನಾ ಬರೆದ ಪದ್ಯದ ಲೇಪಿತ
ಪರಿಮಳವು ಯಾವುದೋ
ಚರಿತ್ರೆಯ ಮಣ್ಣಿನ ಹಂಗಿನಲ್ಲಿ
ನಗೆಪಾಟಲಿಗೀಡಾಗುತ್ತವೆ

ನಾ ಬರೆದ ಪದ್ಯದ ಕೊನೆಯ ಚರಣಗಳು
ಅಹಮಿಕೆಯಲಿ ಸವೆದು ಕೊನೆಗೊಮ್ಮೆ
ಬಾಳಿ ಬೇರಿಳಿಸಿದ ಕವಿತೆಗಳ
ಚರಣಕೆರಗಿ ಸೋಲೊಪ್ಪಿಕೊಳ್ಳುತ್ತವೆ

1 comment

Leave a Reply