‘ಈ ದೇಶದ ಗತಿ ಏನಪ್ಪ..?’ ಎಂದು ಖಿನ್ನರಾಗುತಿದ್ದರು..

ಖ್ಯಾತ  ಬರಹಗಾರರಾದ ಡಾ ಎಲ್ ಸಿ ಸುಮಿತ್ರಾ ಅವರು ನ್ಯಾಯಾಧೀಶರಾದ ದಿ ಎನ್ ಡಿ ವೆಂಕಟೇಶ್ ಕುರಿತ ಕೃತಿಯನ್ನು ಸಂಪಾದಿಸಿದ್ದಾರೆ.

ನಾಡಿನ ಸಾಕ್ಷಿಪ್ರಜ್ಞೆಯಂತಿದ್ದ, ಸಮಾಜವಾದಿ ಸೆಳೆತದ ವೆಂಕಟೇಶ್ ಅವರ ಕುರಿತ ಕೃತಿ ಇದೇ ೧೬ರಂದು ಬಿಡುಗಡೆಯಾಗುತ್ತಿದೆ.

ಈ ಕೃತಿಗೆ ಸಿ ಎಸ್ ದ್ವಾರಕಾನಾಥ್ಅವರು ಬರೆದ ಲೇಖನ ಇಲ್ಲಿದೆ

ಸಿ ಎಸ್ ದ್ವಾರಕಾನಾಥ್

ಮಾದರಿ ನ್ಯಾಯಾಧೀಶರು

ವಕೀಲಿ ವೃತ್ತಿಯ ಆರಂಭಿಕ ದಿನಗಳವು, ‘ಕಿಂಗ್ ಅಂಡ್ ಪ್ಯಾಟ್ರಿಡ್ಜ್’ ಎಂಬ ವಕೀಲರ ಸಂಸ್ಥೆಯಲ್ಲಿ ಯುವ ಆರಂಭಿಕ ವಕೀಲನಾಗಿ ಕಲಿಯುತಿದ್ದೆ.

ಗ್ರಾಮಾಂತರ ಪ್ರದೇಶದಿಂದ ಬಂದ ನನ್ನಂತಹ ಯುವ ವಕೀಲರು ಇಂಗ್ಲೀಷ್ ಸರಿಯಾಗಿ ಬಾರದ ಕಾರಣಕ್ಕೆ ಹೈಕೋರ್ಟಿಗೆ ಹೋಗಲು ಹಿಂಜರಿಯುತಿದ್ದೆವು. ಇಂತಹ ದೊಡ್ಡ ಲಾ ಫರ್ಮ್ ಗಳಲ್ಲಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಇಂಗ್ಲಿಷ್ ಚೆನ್ನಾಗಿ ಕಲಿತ ಹುಡುಗರನ್ನಷ್ಟೇ ಸೇರಿಸಿಕೊಳ್ಳುತಿದ್ದರು, ಅಂತಾ ಕಡೆ ಹೇಗೋ ಸೇರಿಕೊಂಡುಬಿಟ್ಟಿದ್ದೆ!

ಟ್ರಯಲ್ ಕೋರ್ಟಿಗಿಂತಲೂ  ಹೈಕೋರ್ಟಿಗೆ ಹೋಗುವುದು ಇಲ್ಲಿ ಅನಿವಾರ್ಯವಾಗಿತ್ತು. ಅತ್ಯಂತ ಭಯ ಮತ್ತು ಆತಂಕದಿಂದ ಹೈಕೋರ್ಟಿಗೆ ಹೋಗಿ ಇಂಗ್ಲಿಷ್ ಬಾರದೆ ಒದ್ದಾಡುವಂತ ಪರಿಸ್ಥಿತಿ, ಜಸ್ಟೀಸ್ ವೆಂಕಟೇಶ್ ಅವರ ಕೋರ್ಟಿನಲ್ಲಿ ಕೇಸ್ ಇದ್ದರೆ ಖುಷಿಯೋ ಖುಷಿ!

ಯಾಕೆಂದರೆ ನಮ್ಮಂತ ಮೊದಲ ತಲೆಮಾರಿನ ಅಕ್ಷರಸ್ತರು, ಕನ್ನಡಿಗರು ಮತ್ತು ಗ್ರಾಮಾಂತರ ಕಪ್ಪು ಹುಡುಗರನ್ನು ಅವರು ಪ್ರೋತ್ಸಾಹಿಸುತಿದ್ದರು. ನಾವು ಕನ್ನಡದಲ್ಲಿ ವಾದ ಮಾಡಿದರೆ ಖುಷಿಯಿಂದ ಕೇಳುತ್ತಾ ಕನ್ನಡದಲ್ಲೇ ಚರ್ಚಿಸುತಿದ್ದರು. ನಗುನಗುತ್ತಾ ನಮ್ಮ ಮುಜುಗುರಗಳನ್ನು ದೂರಮಾಡಿ, ಒಂದು ರೀತಿಯ ಸ್ನೇಹಮಯ ವಾತಾವರಣವನ್ನು ಸೃಷ್ಟಿಸುತಿದ್ದರು. ಆದ್ದರಿಂದ ಜಸ್ಟೀಸ್ ವೆಂಕಟೇಶ್ ರವರು ನಮಗೆ ಅತ್ಯಂತ ಅಚ್ಚುಮೆಚ್ಚಿನ ನ್ಯಾಯಮೂರ್ತಿಯಾಗಿದ್ದರು. ಅಂತೆಯೇ ನ್ಯಾಯಾಲಯದಲ್ಲಿ ಅಪಾರ ಮಾನವೀಯತೆ ಮೆರೆಯುತಿದ್ದರು.

ಒಮ್ಮೆ ಕುಟುಂಬ ವ್ಯಾಜ್ಯವೊಂದಕ್ಕೆ ಸಂಬಂದಿಸಿದಂತೆ ಮಹಿಳಾ ವಕೀಲರೊಬ್ಬರು ತಮ್ಮ ಕಕ್ಷಿದಾರರ ಪರ ಜಾಮೀನು ಅರ್ಜಿಯ ಮೇಲೆ ವಾದಿಸುತಿದ್ದರು. ಈ ಪ್ರಕರಣದಲ್ಲಿ ಗಂಡ ಹೆಂಡತಿಗೆ ಆಸಿಡ್ ಎರಚಿ ಕೊಲೆಗೆ ಯತ್ನಿಸಿ ಜೈಲು ಸೇರಿದ್ದ, ಜೈಲಿನಲ್ಲಿದ್ದ ಗಂಡನಿಗೆ ಜಾಮೀನು ನೀಡಬೇಕೆಂದು ಆ ಮಹಿಳಾ ವಕೀಲರು ವಾದಿಸುತಿದ್ದರು.

ಜಸ್ಟೀಸ್ ವೆಂಕಟೇಶ್ ಅವರು ಗಂಭೀರವಾಗಿ ವಾದವನ್ನು ಆಲಿಸುತ್ತಾ ಮಹಿಳಾ ವಕೀಲರಿಗೆ “ನೋಡಮ್ಮ ತಾಯಿ.. ನಿಮ್ಮ ಕಕ್ಷಿದಾರ ಆಸಿಡ್ ಹಾಕಿ ತನ್ನ ಪತ್ನಿಯನ್ನು ಕೊಲ್ಲಲು ಯತ್ನಿಸಿದ್ದಾನೆ.. ಆತ ಜೈಲಿನಲ್ಲಿರುವುದರಿಂದ ಆತನ ಅಸಹಾಯಕ ಪತ್ನಿ ಒಂದಷ್ಟು ದೈರ್ಯವಾಗಿ ಬದುಕುತಿದ್ದಾಳೆ.. ಹಾಗೇನಾದರು ನಿಮ್ಮ ಕಕ್ಷಿದಾರನಿಗೆ ನಾನು ಜಾಮೀನು ನೀಡಿದರೆ ಆ ಹೆಣ್ಣುಮಗಳನ್ನು ಆತ ಮತ್ತೆ ಕೊಲೆಗೆ ಪ್ರಯತ್ನಿಸುವುದಿಲ್ಲ ಎನ್ನುವುದು ಏನು ಗ್ಯಾರಂಟಿ..? ಇಂತಹ ಪರಿಸ್ಥಿತಿಯಲ್ಲಿ ನಾನೇನಾದರೂ‌ ಆತನಿಗೆ ಜಾಮೀನು ನೀಡಿದರೆ ಆಕೆ ನನಗೆ ಖಂಡಿತ ಶಾಪ ಹಾಕುತ್ತಾಳೆ.. ಆ ಹೆಣ್ಣುಮಗಳ ಶಾಪ ಕೇವಲ ನನ್ನನ್ನಲ್ಲ ಇಡೀ ಕೋರ್ಟಿನ್ನೇ ಸುಡುತ್ತದೆ.. ಬೇಡ ತಾಯಿ..” ಎಂದು  ಸ್ಪಂದಿಸುತ್ತಿದ್ದಾಗ ನ್ಯಾಯಮೂರ್ತಿಯೊಬ್ಬರ ಅಂತರಂಗದೊಳಗಿನ ಮಾನವೀಯತೆ ನನ್ನನ್ನು ಮೂಖನನ್ನಾಗಿಸಿತ್ತು!

ಇಂತಹ ಅನೇಕ ಪ್ರಕರಣಗಳು ನಮ್ಮಂತವರಿಗೆ ಜಸ್ಟೀಸ್ ವೆಂಕಟೇಶ್ ರವರೊಂದಿಗೆ ಆಪ್ತವಾಗಲು ಕಾರಣವಾದವು. ಈ ಕಾರಣಕ್ಕೆ ನಮಗೆ ಕೇಸ್ ಇಲ್ಲದಿದ್ದರೂ ನಾವು ಹೋಗಿ ಜಸ್ಟೀಸ್ ವೆಂಕಟೇಶ್ ಅವರ ಕೋರ್ಟಿನಲ್ಲಿ ಕೂತು ಆಲಿಸುತಿದ್ದೆವು.

ಅಂದು ದೇವರಾಜ ಅರಸರು ಕರ್ನಾಟಕದಲ್ಲಿ ತಂದ ಭೂಸುದಾರಣೆ ಮಸೂದೆ ಇಡೀ ದೇಶದಲ್ಲಿಯೇ  ಅರಸುರವರಿಗೆ ಖ್ಯಾತಿಯನ್ನು ತಂದುಕೊಟ್ಟಿತ್ತು. ಆದರೆ ಈ ಮಸೂದೆಯನ್ನು ತರಲು ಅರಸರ ಹಿಂದೆ ಕೆಲಸ ಮಾಡಿದ ರೂವಾರಿ ಜಸ್ಟೀಸ್ ವೆಂಕಟೇಶ್ ರವರು ಎಂಬುದು ಅನೇಕ‌ರಿಗೆ ಗೊತ್ತಿರಲಾರದು! ಅರಸುರವರ ಆಳ್ವಿಕೆಯ ಕಾಲದಲ್ಲಿ ಜಸ್ಟೀಸ್ ವೆಂಕಟೇಶ್ ರವರು ಕಾನೂನು ಕಾರ್ಯದರ್ಶಿಯಾಗಿ ಕೆಲಸ ಮಾಡುತಿದ್ದರು. ಭೂಸುದಾರಣಾ ಮಸೂದೆ ತರಬೇಕೆಂದಾಗ ಅರಸುರವರಿಗೆ ಈ ಬಗ್ಗೆ ಅಪಾರ ಜ್ಞಾನ ಇರುವಂತವರೊಬ್ಬರ ನೆರವು ಬೇಕಿತ್ತು. ಈ ಕಾರಣಕ್ಕೇ ಜಸ್ಟೀಸ್ ವೆಂಕಟೇಶ್ ರವರನ್ನು ಲಾ ಸೆಕ್ರೆಟರಿಯಾಗಿ ನೇಮಿಸಿಕೊಂಡಿದ್ದರು.

ಮೂಲತಃ ಜಸ್ಟೀಸ್ ವೆಂಕಟೇಶ್ ರವರು ಸಮಾಜವಾದಿ ಚಳುವಳಿಯಿಂದ ಪ್ರಭಾವಿತರಾಗಿದ್ದವರು, ಶಾಂತವೇರಿ ಗೋಪಾಲಗೌಡರ ಮುಖಂಡತ್ವದಲ್ಲಿ ನಡೆದ ‘ಕಾಗೋಡು ಚಳುವಳಿ’ ಎಂದೇ ಜನಜನಿತವಾದ ಗೇಣಿದಾರರ ಭೂಹೋರಾಟದ ಪರೋಕ್ಷ ಪ್ರಭಾವ ಮತ್ತು ಆಗಾಗ ಚಳುವಳಿಗೆಂದೇ ಸಾಗರಕ್ಕೆ ಬರುತ್ತಿದ್ದ ಡಾ. ರಾಮಮನೋಹರ ಲೋಹಿಯಾ ರವರ ಸನಿಹ, ಕುವೆಂಪುರೊಂದಿಗಿನ ಬಾಂಧವ್ಯ, ಎನ್.ಡಿ. ಸುಂದರೇಶ್,  ಕಡಿದಾಳ್ ಮಂಜಪ್ಪನಂತವರ ಪರಿಸರದ ಪ್ರಭಾವ ಇವೆಲ್ಲವೂ ಜಸ್ಟೀಸ್ ವೆಂಕಟೇಶ್ ರವರನ್ನು ಉತ್ತಮ ಜನಪರವಾದ ಮೌಲ್ಯಗಳುಳ್ಳ ಕಾನೂನು ಕಾರ್ಯದರ್ಶಿಯನ್ನಾಗಿ ಮತ್ತು ನ್ಯಾಯಮೂರ್ತಿಗಳನ್ನಾಗಿಯೂ ರೂಪಿಸಿರುವ ಸಾಧ್ಯತೆಗಳು ಇಲ್ಲದಿಲ್ಲ. ಇವೆಲ್ಲದರ ಹಿನ್ನೆಲೆಯಿಂದಾಗಿ ಜಸ್ಟೀಸ್ ವೆಂಕಟೇಶ್ ರವರಿಂದ ಸಧೃಡ ಭೂಸುದಾರಣಾ ಮಸೂದೆ ರೂಪಿಸಲು ಸಾದ್ಯವಾಯಿತು ಎನಿಸುತ್ತದೆ.

ಮುಂದೆ ಜಸ್ಟೀಸ್ ವೆಂಕಟೇಶ್ ರವರು ರಿಟೈರ್ ಆದರು, ಮನೆಯಲ್ಲೇ ಓದುತ್ತಾ, ಧ್ಯಾನಿಸುತ್ತಾ ಸರಳವಾಗಿ ಜೀವಿಸತೊಡಗಿದರು. ನಾನು ಆಗಾಗ ಅವರ ಸದಾಶಿವನಗರದ ಮನೆಗೆ ಹೋಗುತ್ತಿದ್ದೆ, ನನ್ನ ಲೇಖನಗಳ ಬಗ್ಗೆ ಮಾತಾಡುತ್ತಾ ನಮ್ಮಂತಹ ಹುಡುಗರ ಬರಹಗಳನ್ನು ಗಂಭೀರವಾಗಿ ಚರ್ಚಿಸುತ್ತಿದ್ದರು, ಪ್ರೊತ್ಸಾಹಿಸುತ್ತಿದ್ದರು, ‘ಲಂಕೇಶ್ ಪತ್ರಿಕೆ’ ಓದುತ್ತಲೇ ಲಂಕೇಶ್, ತೇಜಸ್ವಿ ಬರಹಗಳ ಬಗ್ಗೆಯೂ ಚರ್ಚಿಸುತ್ತಿದ್ದರು. ಎಲ್ಲಕಿಂತ ಮಿಗಿಲಾಗಿ ಕೋಮು, ಜಾತಿಗಳಿಂದ ಆವೃತ್ತವಾದ ಈಚೆಗಿನ ವಿಷಮಯ ಸನ್ನಿವೇಶ ಕುರಿತಂತೆ ಆತಂಕ ಪಡುತಿದ್ದರು! “ಈ ದೇಶದ ಗತಿ ಏನಪ್ಪ..?” ಎಂದು ಖಿನ್ನರಾಗುತಿದ್ದರು.

ಲಂಕೇಶ್, ತೇಜಸ್ವಿ, ನಂಜುಂಡಸ್ವಾಮಿ ಮುಂತಾದವರು ಹೊರಟು ಹೋದಂತೆಲ್ಲಾ ತೀರ ನೋವಿನಿಂದ ಬಳಲುತಿದ್ದ ಜಸ್ಟೀಸ್ ವೆಂಕಟೇಶ್ ರವರು, ನಿದಾನಕ್ಕೆ ರಾಮಕೃಷ್ಣರ, ವಿವೇಕಾನಂದರ, ಶಾರದಾದೇವಿಯವರ ಆದ್ಯಾತ್ಮಿಕ ಚಿಂತನೆಗಳಿಂದಾಗಿ ಎಲ್ಲಾ ನೋವುಗಳನ್ನು ಮರೆಯಲು ಯತ್ನಿಸುತಿದ್ದರು.

ಒಟ್ಟಾರೆಯಾಗಿ ಜಸ್ಟೀಸ್ ಎನ್.ಡಿ.ವೆಂಕಟೇಶ್ ರವರು ಕೇವಲ ವಕೀಲ ಅಥವಾ ನ್ಯಾಯಮೂರ್ತಿ ಮಾತ್ರ ಆಗಿರಲಿಲ್ಲ.. ಅವರೊಳಗೊಬ್ಬ ಸಮಾಜವಾದಿ ಮೌಲ್ಯಗಳ ತಣ್ಣನೆಯ ಹೋರಾಟಗಾರನಿದ್ದ ಅಂತೆಯೇ ಅಪ್ಪಟ ಭಾರತೀಯತೆಯನ್ನು ಮೈಗೂಡಿಸಿಕೊಂಡ ಅಧ್ಯಾತ್ಮದ ಅವದೂತನೂ ಇದ್ದ. ಇವೆಲ್ಲಕ್ಕಿಂತಲೂ ಮಿಗಿಲಾದ ಕುವೆಂಪುರವರಂತಹ ಒಬ್ಬ ವಿಶ್ವಮಾನವನೂ ಇದ್ದ…

 

Leave a Reply