ಆ ‘ಕಥೆ’ ಇಲ್ಲಿದೆ..

ನಿನ್ನೆಯ ‘ಅವಧಿ’ಯಲ್ಲಿ ರಾಜಾರಾಂ ತಲ್ಲೂರು ಅವರು ಕನ್ನಡಕ್ಕೆ ಅನುವಾದಿಸಿದ ‘ದಿ ಗಾರ್ಡಿಯನ್’  ಪತ್ರಿಕೆಯ ಒಂದು ವರದಿಯನ್ನು ಪ್ರಕಟಿಸಿದ್ದೆವು. ಅಮೆರಿಕಾದಲ್ಲಿ ಕಾರ್ಪೊರೇಟ್ ಕಂಪನಿಗಳು ಅಲ್ಲಿನ ಭೂಮಿಯನ್ನು ನುಂಗಿ ನೊಣೆದ ಕಥೆ ಅದು.

‘ಅಮೆರಿಕದ ಕಾರ್ಪೋರೇಟ್ ರಾಕ್ಷಸರು ಅಲ್ಲಿನ ಕೌಟುಂಬಿಕ ಕೃಷಿ ಭೂಮಿಗಳನ್ನು ನುಂಗಿದ್ದು ಹೀಗೆ…’ ಎಂಬ ವರದಿ ಇಲ್ಲಿದೆ.

ಆ ಕಥೆ ಅಮೆರಿಕಾದ್ದು ಮಾತ್ರವಲ್ಲ ಭಾರತದ್ದೂ ಕೂಡಾ, ಭಾರತದ್ದು ಮಾತ್ರವಲ್ಲ ಕರ್ನಾಟಕದ್ದೂ ಕೂಡಾ, ಕರ್ನಾಟಕದ್ದು ಮಾತ್ರವಲ್ಲ, ನಮ್ಮ ಉತ್ತರ ಕನ್ನಡದ್ದೂ ಕೂಡಾ…

ಬದುಕು ನುಂಗಿ ಹಾಕುವವರ ವೇಷ ಒಂದೇ..

ತಕ್ಷಣ ನಮ್ಮ ನೆನಪಿಗೆ ಬಂದದ್ದು ಡಾ ಅಜಿತ್ ಹರೀಶಿ ಅವರು ಪ್ರಕಟಿಸಿದ್ದ ಪರಿಧಾವಿ ಕಥಾ ಸಂಕಲನ. ಆ ಸಂಕಲನದ ಅದೇ ಹೆಸರಿನ ಕಥೆ ಮಾತನಾಡುತ್ತಿದ್ದದ್ದು ರಾಜಾರಾಂ ತಲ್ಲೂರು ತಂದು ಕೊಟ್ಟ ಕಥನವನ್ನೇ

ಹಾಗಾಗಿ ಅದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಓದಿ-

ಡಾ. ಅಜಿತ ಹರೀಶಿ- ಬಿಎಎಂಎಸ್ ವೈದ್ಯ, ಅಕ್ಯುಪಂಕ್ಚರ್ ಡಿಪ್ಲೊಮಾ ಕೋರ್ಸ್, ಸೈಕೋಥೆರಪಿ & ಕೌನ್ಸೆಲಿಂಗ್ ಅಧ್ಯಯನ.

ಹುಟ್ಟಿದ್ದು, ಬೆಳೆದಿದ್ದು ಮತ್ತು ಕಳೆದ ಹದಿನೈದು ವರ್ಷಗಳಿಂದ ವೈದ್ಯ ವೃತ್ತಿ ನಡೆಸುತ್ತಿರುವ ಊರು ಸೊರಬ ತಾಲೂಕಿನ ಹರೀಶಿ ಎಂಬ ಹಳ್ಳಿಯಲ್ಲಿ.

ಎರಡು ಕವನ ಸಂಕಲನಗಳು- ಬಿಳಿ ಮಲ್ಲಿಗೆಯ ಬಾವುಟ, ಸೂರು ಸೆರೆಹಿಡಿಯದ ಹನಿಗಳು. ಒಂದು ಕಥಾಸಂಕಲನ- ಪರಿಧಾವಿ ಕಥಾಸಂಕಲನ

‘ಸಂಪದ ಸಾಲು’ ಪತ್ರಿಕೆಯಲ್ಲಿ ಆರೋಗ್ಯ ಕಾಲಂ ಪ್ರಕಟವಾಗುತ್ತಿದೆ.  ‘ಬಿಳಿಮಲ್ಲಿಗೆಯ ಬಾವುಟ’ ಕವನ ಸಂಕಲನಕ್ಕೆ ಕಾವ್ಯ ಮಾಣಿಕ್ಯ ರಾಜ್ಯ ಪ್ರಶಸ್ತಿ.

ಪರಿಧಾವಿ
———–
ಡಾ. ಅಜಿತ್ ಹರೀಶಿ.

“ಮನುಷ್ಯನಿಗೆ ದೀರ್ಘಾಯುಷ್ಯ ದೊರೆತಂತೆ, ಆಪ್ತೇಷ್ಟರ ಅಕಾಲಿಕ ಸಾವು, ನೋವು ನೋಡುವುದೂ ಹೆಚ್ಚಾಗುತ್ತದೆ. ಅವೆಲ್ಲವನ್ನು ಹಿಮ್ಮೆಟ್ಟುತ್ತಾ ಮುಂದೆ ಧಾವಿಸಲೇ ಬೇಕು. ಸಂವತ್ಸರಗಳು ನಿಲ್ಲುವುದಿಲ್ಲ.”
ನಿತ್ಯಕರ್ಮಗಳಲ್ಲಿ ಒಂದಾದ ಕನ್ನಡಿ ನೋಡುತ್ತಾ, ಗಡ್ಡ ಕೆತ್ತುತ್ತಾ, ಸ್ವಗತದಲ್ಲಿ ನಾರಾಯಣ ನಾಗಪ್ಪ ಹೆಗಡೆಯವರು ಹೇಳಿಕೊಂಡರು.

ನಾ.ನಾ.ಹೆಗಡೇರ ಮನೆಯನ್ನು ಜನ, ‘ಮೂಲ್ಮನೆ’ ಎಂದು ಕರೆಯುತ್ತಿದ್ದರು. ಆ ಚತ್ರಾಶಾಡದಲ್ಲಿ ದಾಖಲಿಸಬಹುದಾದ ಅವಿಭಕ್ತ ಕುಟುಂಬದ ಮನೆಯದು.
‘ವೀರಪ್ಪ ಹೋಗೋದ್ನಡ. ರಾತ್ರಿ ಮಲಗಿದವ್ವ ಬೆಳಗ್ಗೆ ಆಪ್ಪದ್ರಲ್ಲಿ ಇಲ್ಯಡ’
‘ಆವಾಗ್ಲೆ ಗೊತ್ತಾಜು, ಸುಬ್ಬ ಬಂದು ಹೇಳಕಾದ್ರೆಯ..’
‘ಸ್ನಾನ‌ ಮಾಡದ್ರೊಳಗೆಯ ಹೋಗಿ ನೋಡಿಕೆ ಬಂದಿದ್ರೆ ಒಂದು ಕೆಲಸ ಆಗ್ತಿತ್ತೆನಾ’
‘ಹೌದು ಅಲ್ದ, ಯಂಗೆ ಹೊಳದ್ದೇ ಇಲ್ಲೆ… ಈ ಹಾಳಾದ್ದು ವಯಸ್ಸು’
ಬೋಳು ಹಣೆಯ ಸೊಸೆ ಸುಮಿತ್ರಾಳೊಂದಿಗೆ ಇಷ್ಟು ಹೇಳಿ – ಕೇಳಿಯಾದ ಮೇಲೆ, ಅವಳು ಬಾಗಿಲವಾರೆಯಿಂದ ಮರೆಯಾದಳು.
ಮುಖಮಾರ್ಜನವನ್ನಷ್ಟೇ ಮಾಡಿಕೊಂಡು, ಚಪ್ಪಲಿ ‌ಮೆಟ್ಟಿಕೊಂಡು, ದಣಪೆ ದಾಟಿ ಹೊರಬಿದ್ದರು ಹೆಗಡೇರು.
* *

ಎಂಬತ್ತು ದಾಟಿದ ಹೆಗಡೇರಿಗೆ ಸ್ವಾತಂತ್ರ್ಯ ಘೋಷಣೆಯಾದ ಸರ್ವಜಿತ್ ಸಂವತ್ಸರದ ದಿನ ಮಾಸಲು ಮಾಸಲಾಗಿ ನೆನಪಿದೆ. ತಂದೆ ನಾಗಪ್ಪ ಹೆಗಡೆ ಯಕ್ಷಗಾನದ ನಾಲ್ಕು ಹೆಜ್ಜೆಗಳನ್ನು ಥೈತ್ತ ಥೈತ್ತ ಎಂದು ಹೇಳುತ್ತಾ ಎದೆ ಸೆಟೆದು ಕುಣಿದಿದ್ದು ಮರೆತಿಲ್ಲ. ನಾಗಪ್ಪ ಹೆಗಡೇರ ತಾಯಿ, ಅಂದರೆ ನಾ.ನಾ.ಹೆಗಡೇರ ಅಜ್ಜಿ, ದೂರದ ಅಂಕೋಲೆಗೆ ಹೋಗಿ ಗಾಂಧೀಜಿಯ ಉಡಿಗೆ ಎರಡೆಳೆ ಬಂಗಾರದ ಸರ‌ ಹಾಕಿದ್ದರು. ನಾಗಪ್ಪ ಹೆಗಡೇರು ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ತಿರಸ್ಕರಿಸಿದ್ದರು. ಇದೆಲ್ಲಾ ಜನರೇ ಹೇಳುವುದುಂಟು.

ಬೆಳಗಿನ ಆದ್ಯ ಪ್ರಹರದಲ್ಲೇ ಎದ್ದು, ಪುಸು ಪುಸು ಬೀಡಿ ಎಳೆಯುತ್ತಾ, ಗಡಿಕಾಲುವೆಯ ಅಡಿಕೆಗಳನ್ನೇ ಮೊದಲು ಹೆಕ್ಕುತ್ತಾ, ಅವಕಾಶ ಮಾಡಿಕೊಂಡು, ಬೇರೆಯವರ ಬಣ್ಣದ ಅಡಿಕೆ ಗಳನ್ನೊಂದಿಷ್ಟು ಹೆಕ್ಕುತ್ತಾ ಕಾಲ ಕಳೆದ ಆಚೇ ದಿಂಬದ ಪುಟ್ಟಜ್ಜ ಮತ್ತು ತಮ್ಮ ಮನೆಗೆ ಅಮ್ಮನ ಹತ್ತಿರ ಸುದ್ದಿ ಸೊಗೆಯುವ ನೆಪದಲ್ಲಿ ಕೈಗೆ ಸಿಕ್ಕಷ್ಟು ತರಕಾರಿಗಳನ್ನು ಬಾಚಿಕೊಂಡು ಸೀರೆಯಂಚಲಿ ಕಟ್ಟಿಕೊಂಡು ಹೋಗುತ್ತಿದ್ದ ಪಕ್ಕದ ಮನೆ ಗೋದಾವರಿ ಅಜ್ಜಿ, ಸಾಯುವವರೆಗೂ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಯನ್ನು ಆಸ್ಥೆಯಿಂದ ನಿಯತ್ತಾಗಿ ಪಡೆದದ್ದು ನೆನಪಾಗಿ ವಿಷಾದದ ಉಸಿರು ಬಿಟ್ಟರು ಹೆಗಡೇರು.

ವೀರಪ್ಪನ ಮನೆಗೆ ಹೋಗಲು ದಾಟಬೇಕಿದ್ದ ಸಂಕ ಅವರ ಯೋಚನೆಗಳನ್ನು ತಡೆಯಿತು.
ವೀರಪ್ಪ ತನಗಿಂತ ಸಣ್ಣ ವಯಸ್ಸಿನವ. ಬಿಳಿಯರು ದೇಶಬಿಟ್ಟು ಹೋದ ವರ್ಷ ಹುಟ್ಟಿದವನಂತೆ. ಇತ್ತೀಚೆಗೆ ಒಂದಿಷ್ಟು ಬಾಗಿದ್ದ, ಮುಡುಗಿದ್ದ.

ಅವನ ದೇಹವನ್ನು ಹೊರತಂದು ಮಲಗಿಸಿದ್ದರು. ಒಮ್ಮೆ ಸುತ್ತ ಸೇರಿದವರತ್ತ‌ ಕಣ್ಣು ಹೊರಳಿಸಿದರು ಹೆಗಡೇರು. ಇಲ್ಲೂ ಬೆರಳೆಣಿಕೆಯ ಯುವಕರಿದ್ದರು, ಉಳಿದವರು ವೃದ್ಧರು. ಮತ್ತೆ ಚಿಂತೆ, ಉಳಿದೀತೆ ಊರು?
ಕರೋನ್ ಕಂಪನಿಯವರು ಇವತ್ತು ಸಂಜೆ ಮತ್ತೆ ಮೀಟಿಂಗ್ ಕರೆದಿದ್ದಾರಂತೆ. ಇನ್ನೇನು ಷಡ್ಯಂತ್ರವೋ? ಮೊದಲ ಮೀಟಿಂಗ್ ನಲ್ಲಿ ತನ್ನ ನಿಲುವಿಗೆ ಬಹುಮತವಿತ್ತು. ಕ್ರಮೇಣ ಸರಿ-ಸಮವಾಗಿ ಒಡೆದು ಹೋಯ್ತು ಊರು. ಪಂಚಾಯ್ತಿ ಚುನಾವಣೆಗೆ, ಅದೊಂದು ನೆಪ ಮಾತ್ರ. ಪ್ರಶ್ನೆಗಳ ಸುಳಿಯಲ್ಲಿ ಇದ್ದವನನ್ನು ಕೆರಿಯ ಎಚ್ಚರಿಸಿದ. ‘ಒಡೆಯ ಹೂವು ಹಾಕಿನಿ’.

ಹೂವು ಹಾಕಿ ವೀರಪ್ಪನ ಶರೀರಕ್ಕೆ ಕೈ ಮುಗಿದರು. ಅವನ ಹೆಂಡತಿ ಶಾರಿಯ ಕಡೆ ತಿರುಗಿ, ‘ಎಲ್ಲಿ ಗೋಕರ್ಣಕ್ಕೆ ಹೋಗ್ತ್ರ? ಕರ್ಮಾಂಗದಲ್ಲಿ ಏನೂ ನ್ಯೂನತೆ ಆಗದು ಬ್ಯಾಡ. ಯಾರನ್ನಾದರೂ ಮನೆ ಕಡೆ ಕಳಿಸು. ಖರ್ಚೆಲ್ಲಾ ನಾನು ನೋಡಿಕೊಳ್ತೆ. ಪುರಾಣಿಕರಿಗೂ ಫೋನ್ ಮಾಡಿ ಹೇಳ್ತೆ. ಕೆರಿಯ, ನೀನು ಜವಾಬ್ದಾರಿಯಿಂದ ಕೆಲಸ ಮುಗ್ಸು. ನಾಳಿಂದ ತಾತ್ಪೂರ್ತ ಒಬ್ಬನ್ನ ಕಳಿಸಿ.’
ಹೆಚ್ಚು ಹೊತ್ತು ನಿಲ್ಲುವುದು ಅವರಿಂದ ಸಾಧ್ಯವಾಗಲಿಲ್ಲ. ಈ ಇಳೀ ವಯಸ್ಸಿನಲ್ಲಿ ಸಮಸ್ಯೆಗಳ ಸುರುಳಿ ಭಾರವಾಗಿ ಹೈರಾಣ ಮಾಡಿತ್ತು.

ಸ್ನಾನ ಮಾಡಿ, ದೇವರ ಮುಂದೆ ಪ್ರವರ ಹೇಳುವಾಗ ಅವತ್ತಿನ ಪಂಚಾಂಗ ಉಚ್ಚರಿಸಿ ಪೂಜೆ ಮುಗಿಸುವುದರೊಳಗೆ ಸುಮಿತ್ರಾ ಆಸರಿಗೆ ಸಿದ್ಧಪಡಿಸಿದ್ದಳು. ಪ್ರಭಾಕರ, ರತ್ನಾಕರ, ಮನೋಹರ, ಪವನ ಎಲ್ಲಾ ಗಂಡು ಜೀವಗಳೂ ಅವರವರ ದಾರಿ ಹಿಡಿದು ಮನೆ ಗಂಡು ದಿಕ್ಕಿಲ್ಲವಾದಾಗ ಮತ್ತೆ ಮೂರು ಹೊತ್ತು ಆಹಾರ ಸೇವನೆಗೆ ತೊಡಗಿದ್ದರು ಹೆಗಡೇರು. ಕಾಲನೊಟ್ಟಿಗೆ ಧಾವಿಸಲೇ ಬೇಕಾದ ಅನಿವಾರ್ಯತೆ! ಅಂದು ಅವರ ಪ್ರೀತಿಯ ತಿಂಡಿ ವಡಪ್ಪೆ. ಅಕ್ಕಿ ಹಿಟ್ಟಿಗೆ ಉಳ್ಳಾಗಡ್ಡೆ, ಕೊತ್ತುಂಬರಿ ಸೊಪ್ಪು, ಕಾಯಿತುರಿ, ಮೇಲ್ಮುಖದ ಮೆಣಸು, ಶುಂಠಿ ಸಣ್ಣಗೆ ಹೆಚ್ಚಿ ತೆಂಗಿನೆಣ್ಣೆ, ರುಚಿಗಷ್ಟೇ ಉಪ್ಪು ಹಾಕಿ ಕಾಯಿನೀರಿನಲ್ಲಿ ಕಲಸಿ, ಬಾಡಿಸಿದ ಬಾಳೆಎಲೆಯ ಮೇಲೆ ತಟ್ಟುತ್ತಾ ಕಾದ ಬಂಡಿಯ ಮೇಲೆ ಮೃದುವಾಗಿ ಬಾಳೆಎಲೆಯಿಂದ ಬೇರೆ ಮಾಡುತ್ತಾ ಮಗುಚಿ ಬೇಯಿಸಿ, ಸ್ವಲ್ಪ ಗರಿ ಗರಿ ಮಾಡಿ ಹಾಗೇ ಬಿಸಿ ಬಿಸಿಯಾಗಿ, ಸುಮಿತ್ರಾ ಮಾವಯ್ಯನ ಬಾಳೆಗೆ ಬಡಿಸುತ್ತಿದ್ದಳು. ತಟ್ಟಿ, ಮಗುಚುವ ಖಾಲೀ ಸೊಟ್ಟುಗದ ಶಬ್ಧ ಮಾತ್ರ. ಮಾತಿಲ್ಲದ ಮೌನ ಇಬ್ಬರಲ್ಲೂ.
**

ಮೊದಲನೆಯ ಮಗ ಪ್ರಭಾಕರ. ಪ್ರಾಮಾಣಿಕ, ಸರಳ ಮನುಷ್ಯ. ಊರಿನಿಂದ ಸ್ವಲ್ಪ ದೂರದಲ್ಲಿಯೇ ಇದ್ದ ಕರೂರಿನಲ್ಲಿ ಹತ್ತನೆತ್ತಿ ಓದಿ, ಕಡೆಗೆ ಓದಿಗೇ ತಿಲಾಂಜಲಿಯಿತ್ತಿದ್ದ.

ವೀರಪ್ಪ, ಕರಿಯ ಮತ್ತು ಸುಬ್ಬುಶೇರುಗಾರರ ಉಸ್ತುವಾರಿಯನ್ನು ಪ್ರಭಾಕರನಿಗೆ ವಹಿಸಿಯಾದ ಮೇಲೆ ಜೀವನದಲ್ಲಿ ಸ್ವಲ್ಪ ಬಿಡುವಿನ ದಿನಗಳು ಸಿಕ್ಕಿದ್ದು. ನೆಂಟರಿಷ್ಟರ ಮನೆಯಲ್ಲಿ ಉಳಿಯಲು, ಒಂದಿಷ್ಟು ಯಕ್ಷಗಾನ, ತಾಳಮದ್ದಳೆಗಳನ್ನು ನೋಡಲು ಅವಕಾಶ ಸಿಕ್ಕಿದ್ದು ಹೆಗಡೇರಿಗೆ.

ಪ್ರಭಾಕರ ವಯಸ್ಸಿಗೆ ಬರುತ್ತಿರುವ ಮುನ್ಸೂಚನೆಯನ್ನು ಶಾರಿ ವೀರಪ್ಪನ ಮೂಲಕ ಕೊಡಿಸಿದ್ದಳೇನೋ? ಗುತ್ತಿ ಸೀಮೆಗೂ, ಬನವಾಸಿ ಸೀಮೆಗೂ ಅನೂಚಾನವಾಗಿದ್ದ ನಂಟನ್ನು ಹೆಗಡೇರೂ ಮುಂದುವರೆಸಿದ್ದರು. ಉತ್ತರಕಾನಿನ ಸೀತಾರಾಮನ ಮಗಳು ಸುಮಿತ್ರಾಳನ್ನು ಸೊಸೆಯಾಗಿ ತಂದೇ ಬಿಟ್ಟರು. ಅಂದು, ಇಂದೂ ಮುಗ್ಧೆಯೇ. ಅದೇ ಅವಳನ್ನು ಕಾಪಾಡಿದ್ದು ಅನಿಸುವುದಿದೆ. ಹಾಗಂತ ಕೆಲಸಗಳು ಚೊಕ್ಕು, ಕರಾರುವಾಕ್ಕು. ಹೊರಗಿನ ಕೆಲಸಕ್ಕೂ ಸೈ.

ಪ್ರಭಾಕರ ಅವನ ಅಮ್ಮ ಸರ್ವೇಶ್ವರಿಯ ಹಾಗೆ. ಮಿತಭಾಷಿ. ಹಳೆಯ ಐದು ಏಕರೆ ಭಾಗಾಯ್ತು ಅಲ್ಲದೇ, ಮತ್ತೈದು ಏಕರೆ ಗದ್ದೆಯನ್ನು ಹುಗಿದು ತೋಟ ಮಾಡಿದ್ದ. ಕೃಷಿಯನ್ನು ಧ್ಯಾನಸ್ಥನಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದ. ಕೃಷಿಯ ಕ್ಷೇತ್ರದಲ್ಲಿ ಆಗುತ್ತಿದ್ದ ಹೊಸ ಆವಿಷ್ಕಾರ, ಯಂತ್ರಗಳ ಬಗ್ಗೆ ವಿಶೇಷ ಆಸ್ಥೆಯಿತ್ತು. ಬೆಳಗ್ಗೆ ಐದಕ್ಕೇ ಎದ್ದು ಕೊಟ್ಟಿಗೆ ಕೆಲಸ ಪೂರೈಸಿ, ಸರ್ವೇಶ್ವರಿ ಎರೆದು ಕೊಟ್ಟ ‘ತೆಳ್ಳೇವು’ ತಿಂದು ತೋಟ, ಬ್ಯಾಣಕ್ಕೆ ಬಿದ್ದನೆಂದರೆ ಮತ್ತೆ ಬರುವುದು ಹನ್ನೊಂದು ಗಂಟೆಯ ‘ಸುಳ್ಳಾಸ್ರಿಗೆ’ಗೆ.

ರಾತ್ರಿ ಬೇಗ ಅಂದರೆ ಓಂಭತ್ತಕ್ಕೇ ಮಲಗಿ ಬಿಡುವವ. ಸುಮಿತ್ರೆ ಇವನ ದಿನಚರಿಗೆ ಬೇಗ ಹೊಂದಿಕೊಂಡ ಬಡವೆ. ಮದುವೆಯಾಗಿ ವರ್ಷ ತುಂಬುವ ಹೊತ್ತಿಗೇ ಹಡೆದಿದ್ದಳು. ಪವನ, ಹೆಗಡೇರನ್ನು ಅಜ್ಜನನ್ನಾಗಿಸಿದ. ಅವನನ್ನು ಹಡೆದು ಭೂಮಿಗೆ ತರುವ ಹೊತ್ತಿಗೆ ಸುಮಿತ್ರಾ ಬಳಲಿದ್ದಳು. ಹೆರಿಗೆಯ ಹೊತ್ತಿಗೆ ಮತ್ತು ನಂತರ ಗರ್ಭಾಶಯದ ತೊಂದರೆ ಪದೇ ಪದೇ ಕಾಣಿಸಿಕೊಂಡಿದ್ದರಿಂದ, ಶಿರಸಿಯ ಪ್ರಸೂತಿ ತಜ್ಞರ ಸಲಹೆಯ ಮೇರೆಗೆ ಆಪರೇಷನ್ ಮಾಡಿದ್ದರು.

ಈ ರಗಳೆಗಳ ಮಧ್ಯೆ ಪ್ರಭಾಕರನಿಗೆ ಹಾಲಿನ ಡೈರಿಯೊಂದನ್ನು ಮಾಡುವ ಉಮೇದಿ ಬಂದು ಬಿಟ್ಟಿತ್ತು. ಊರಿನ ಉತ್ಸಾಹಿ ಯುವಕರನ್ನೆಲ್ಲಾ ಸೇರಿಸಿ ಧಾರವಾಡಕ್ಕೆ ಕರೆದುಕೊಂಡು ಹೋಗಿ ಬಂದ. ಬ್ಯಾಂಕಿನ ಸವಲತ್ತಿನ ಆಧಾರದ ಮೇಲೆ, ಎಲ್ಲರೂ ಶಕ್ತ್ಯಾನುಸಾರ ಜರ್ಸಿ ಆಕಳು ಕಟ್ಟಿದರು. ಹಾಲನ್ನು ಶೇಖರಿಸುವ ಮತ್ತು ಸಾಗಿಸುವ ಕೆಲಸವನ್ನು ಬೇಡವೆಂದರೂ ಕೇಳದೆ ಪ್ರಭಾಕರನೇ ವಹಿಸಿಕೊಂಡ. ಬೆಳಗ್ಗೆ ಐದಕ್ಕೆ ಬದಲು ನಾಲ್ಕಕ್ಕೇ ಏಳತೊಡಗಿದನು.

ಹಾಲು ಸಾಗಾಟಕ್ಕೆ ಒಂದು ಪಿಕ್ಅಪ್ ಖರೀದಿಸಿದ್ದ. ಪ್ರಭಾಕರ, ಹೆಗಡೇರ ಒತ್ತಾಯಕ್ಕೆ ಸ್ಥಳೀಯ ಒಬ್ಬನನ್ನು ಡ್ರೈವರ್ ಆಗಿ‌ ನೇಮಿಸಿದ್ದ.

ಆವತ್ತು ಭೀಮನ ಅಮವಾಸ್ಯೆ. ಸರ್ವೇಶ್ವರಮ್ಮ ಮತ್ತು ಸುಮಿತ್ರಾ ಪೂಜೆಯ ತಯಾರಿಯಲ್ಲಿದ್ದರು.
‘ಡ್ರೈವರಂಗೆ ಜ್ವರನಡ, ಬೈಂದ್ನಿಲ್ಲೆ… ನಾನೇ‌ ಹೋಗಿಬರ್ತಿ’. ಮೊಳೆಗೆ ಸಿಗಿಸಿದ್ದ ಗಾಡಿಯ ಮತ್ತೊಂದು ಕೀ ಹಿಡಿದು ಲಗುಬಗೆಯಿಂದ ಹೊರಟ ಪ್ರಭಾಕರ, ಮತ್ತೆಂದೂ ತಿರುಗಿ ಬರದಂತೆ, ಸುಳಿವಿಲ್ಲದ ಲೋಕಕ್ಕೆ ಹೋಗಿಬಿಟ್ಟ.
ಆಗಲೇ ತಡವಾಗಿದ್ದರಿಂದ ಮತ್ತೊಂದು ಗಾಡಿಗೆ ಹಾಲನ್ನು ಮುಟ್ಟಿಸುವ ವ್ಯವಸ್ಥೆ ಮಾಡುವ ಧಾವಂತ ಪ್ರಭಾಕರನಿಗೆ ಇತ್ತು. ಹೀಗೆ ಸಕಾಲಕ್ಕೆ ಹಾಲು ಪ್ರಮುಖ ಘಟಕಕ್ಕೆ ಸಾಗಿಸುವ ವಾಹನಕ್ಕೆ ತಲುಪದಿದ್ದರೆ ಎಲ್ಲರಿಂದ ಸಂಗ್ರಹಿಸಿದ ಹಾಲು ಹಾಳು.

ಕಾನೇರಿಯಿಂದ ಮೂರನೇ ತಿರುವಿನಲ್ಲಿ ಬಸ್ ಮತ್ತು‌ ಪಿಕ್ ಅಪ್ ನಡುವೆ ಅಪಘಾತ. ಆಸ್ಪತ್ರೆಗೆ ಸಾಗಿಸುವ ಸಂದರ್ಭ ಕೂಡ ಒದಗಿ ಬರಲಿಲ್ಲ.

ಮೊಮ್ಮಗನಿಗೆ ಇನ್ನೂ ಉಪನಯನವಾಗದ ಕಾರಣ ಕ್ರಿಯಾಕರ್ಮಗಳನ್ನೆಲ್ಲಾ ಹೆಗಡೆಯವರೇ ಮಾಡಿದರು. ಅದು ಸೂಕ್ತ ಎನಿಸಿತ್ತು ಕೂಡ. ಈ ಪರಿ ಕಾಲನ ನಡುಗೆಯೇ !?
**

‘ನಾರ್ಣ ಬಾವ, ಕರೋನ್ ಕಂಪನಿಯ ದೊಡ್ಡ‌ ಆಫೀಸರ್ ನೇ ಬಂದಿಗಿದನಡ. ಬಹುಶಃ ಇದೇ ಕೊನೆಯ ಮೀಟಿಂಗ್. ನಿನ್ನ, ನನ್ನ ಬಿಟ್ಟು ಉಳಿದವ್ವೆಲ್ಲಾ ತಯಾರಾದಂಗೆ ಕಾಣ್ತು. ಮೆಂಬರ್ ಮಾಬ್ಲ ಭಟ್ಟರು ನಿನ್ನೆ ರಾತ್ರಿಡೀ ಸಮಾ ಕೆಲಸ ಮಾಡಿದ್ರು’.

‘ಓಹೋ… ನೋಡಾ ರಮಾಕಾಂತ, ನಿಂಗೂ ವಯಸ್ಸಾಜಿಲ್ಲೆ, ಪೇಟೆ ಪಟ್ಣಕ್ಕೆ ಹೋಗಿ ಬದಕಲಕ್ಕು. ನೀನು ಎರಡಕ್ಕೂ‌ ತಯಾರಾಗಿರ… ನಂದು ಮಾತ್ರ ಹೋರಾಟನೇಯ’ ಎಂದರು ಹೆಗಡೇರು.

ಮೂಲ್ಮನೆಯ ನಾಗಪ್ಪಜ್ಜನ ಅಜ್ಜನ ಅದ್ವರ್ಯದಲ್ಲಿ ಕಟ್ಟಿಸಿದ ದೇವಸ್ಥಾನವಂತೆ ಅದು. ಗೋಕರ್ಣದ ಹಿರೀ ಪುರಾಣಿಕರೇ, ಹದಿನೈದು ಜನ ಭಟ್ಟಕ್ಕಳೊಂದಿಗೆ ಬಂದು, ಉಳಿದು ಪ್ರತಿಷ್ಠಾಪಿಸಿದ‌ ಮೂರ್ತಿಯಂತೆ‌ ಲಕ್ಷ್ಮೀನಾರಾಯಣನದ್ದು. ಗಜಲಕ್ಷ್ಮಿ ಅಮ್ಮನವರ ಗುಡಿ ಅದರ ಪಕ್ಕದ್ದು.

ಆದರೆ ಮುಂದೆ ಆವತ್ತಿನ‌ ಗುರುಗಳು ಸೀಮೆಭಿಕ್ಷೆಗೆಂದು ಬಂದವರು, ದೇವಸ್ಥಾನದಲ್ಲಿ ಪೀಠ‌ ಹೂಡಿದವರು, ಇದು ಶಿಲ್ಪಕಲೆ‌ ಮತ್ತು ಆಗಮಶಾಸ್ತ್ರದ ಪ್ರಕಾರ‌ ‘ಧನ್ವಂತರೀ‌ ವಿಗ್ರಹ’. ದಕ್ಷಿಣಭಾರತದಲ್ಲಿಯೇ ಅಪರೂಪದ್ದು ಎಂದರಂತೆ. ಅಂದಿನಿಂದ ಅದು ಧನ್ವಂತರಿ ದೇವಸ್ಥಾನ.

ಈ ದೇವರೂ ಊರಿನಂತೆ ವೈಭವೋಪೇತವಾಗಿ ಮೆರೆದವನು. ಆರಾಮಿಲ್ಲದ್ದಕ್ಕೆ, ನಂತರ ಆರಾಮಾಗಿದ್ದಕ್ಕೆ ಪೂಜೆಗಳ ಸರಮಾಲೆ. ಇಂದು ಖಾಯಂ ಪೂಜಾರಿ, ದಿನವೂ ನೆಲ‌ ಒರೆಸಲು ಹೆಂಗಸೂ ಸಿಗದ ಸ್ಥಿತಿ. 

ದೇವರಿದ್ದಲ್ಲಿ ಜನರಿರದಿರಬಹುದು. ಊರಿದ್ದಲ್ಲೆಲ್ಲಾ ದೇವಸ್ಥಾನಗಳು. ಆದರೆ ಕಾನೇರಿ ಇಂದು ! ಅಥವಾ ‌ಎಲ್ಲಾ‌ ಊರುಗಳೋ? ಪೀಳಿಗೆಗಳು ಮುಂದುವರೆಯುತ್ತಾ ಎತ್ತೆತ್ತಲೋ ಸಾಗುವ ಮನೆಗಳು. ಎನ್ನುವಷ್ಟರಲ್ಲಿ ಹೆಗಡೇರು ದೇವಸ್ಥಾನ ತಲುಪಿದ್ದರು.

ಮಾಬ್ಲ ಭಟ್ರು ಉದ್ದೇಶಪೂರ್ವಕವಾಗಿ ಸಭೆ ಕರೆದು ಊರಿಗೆ ಶ್ರದ್ಧಾಂಜಲಿ ಮಾಡ ಹೊರಟವನು. ತನಗೆ ವೇದಿಕೆಯ ಮೇಲೆ ಮೊದಲ ಬಾರಿಗೆ ಅವಕಾಶ ಮಾಡಲಿಲ್ಲ ಎಂಬುದ ನೋಟದಲ್ಲೇ ಗ್ರಹಿಸಿದ ಹೆಗಡೇರು ಸಭಿಕರ ಸಾಲಿನಲ್ಲಿ ಆಸೀನರಾದರು.

‘ಇದು ಕರೋನ ಕಂಪನಿಯ ಕಡೆಯಿಂದ ಕೊನೆಯ ಸಭೆ. ಅದು ಎಷ್ಟು ಪ್ರತಿಷ್ಠಿತ ಕಂಪನಿಯೆಂದರೆ, ಬಂದ ಅಧಿಕಾರಿ ಶ್ರೇಷ್ಠರಿಗೆ ನಿಮಿಷಕ್ಕೂ ಭಾರೀ ಕಿಮ್ಮತ್ತು. ಈಗಾಗಲೇ ಸರಕಾರದ ಅಧಿಸೂಚನೆಯಡಿ ಬಹುಮತಕ್ಕೆ ಬೇಕಾಗುವಷ್ಟು ಭಾಗಾಯ್ತುದಾರರು ತಮ್ಮ ಜಮೀನುಗಳನ್ನು ಕರಾರಿಗೆ ಅನುಗುಣವಾಗಿ ಕಂಪನಿಗೆ ಬರೆದುಕೊಟ್ಟಿದ್ದಾರೆ.

ಬಲಗಡೆ ಕೌಂಟರ್ ನಲ್ಲಿ ಒಪ್ಪಿಗೆ ನೀಡಿದವರಿಗೆ ಕೆಲವೊಂದು ಮಾಹಿತಿ ನೀಡುವರು. ಸಿಬ್ಬಂದಿಗಳನ್ನು ಭೇಟಿ ಮಾಡಿ ಅವರು ಕೇಳುವ ಪೂರಕ ದಾಖಲಾತಿ ಮತ್ತು ನಿಯಮಗಳನ್ನು ಅರಿತು ಪಾಲಿಸಬೇಕು. ಇನ್ನು ಒಂದು ತಿಂಗಳು ಕಾಲಾವಕಾಶವಿದೆ.

ಎಡಕ್ಕೆ ಇರುವ ಕೌಂಟರ್ ನಲ್ಲಿ ಹೆಚ್ಚು ಜನರಿಲ್ಲ. ತಮ್ಮ ವಿರೋಧವನ್ನು ದಾಖಲಿಸಬೇಕು’ ಇಷ್ಟು ಹೇಳಿ ಕುಳಿತಿದ್ದರು ಭಟ್ಟರು.

ಹೆಗಡೇರಿಗೆ ಎದ್ದು ನಿಂತದ್ದು ನೆನಪಿದೆ. ರಕ್ತವು ಧಮನಿಗಳಲ್ಲಿ ನುಗ್ಗಿ ಬಿಸಿ ಬಿಸಿಯಾದ ನೆನಪು. ಆವೇಶದಲ್ಲಿ ಸಭಾ ಮರ್ಯಾದೆಯನ್ನೂ ಮರೆತು ಧಿಕ್ಕರಿಸಿ ತಾರಕದಲ್ಲಿ ಆಡಿದ ಮಾತುಗಳಾವುವೂ ನೆನಪಿಲ್ಲ. ‘ಬಿಳಿಮೂತಿ ಮಾತ್ರವಿರದ ಮತ್ತದೇ ಕಂಪನಿ ಸರಕಾರಕ್ಕೆ ಧಿಕ್ಕಾರ.’ ಎನ್ನುತ್ತಾ ಕುಸಿದವರನ್ನು, ನಾಲ್ಕುಜನ ಹೊತ್ತು ತಂದು ಮನೆಯಲ್ಲಿ ಮಲಗಿಸಿ ಹೋಗಿದ್ದರಂತೆ. 

ರಾತ್ರಿಯಿಡೀ ಕನವರಿಸಿದ್ದರು. ಮೈ ಕೈ ಬಡಿದಿದ್ದರು. ಬಟ್ಟೆಯೆಲ್ಲಾ ಅಸ್ತವ್ಯಸ್ತ. ಸುಮಿತ್ರೆಗೆ ಸಂಭಾಳಿಸುವುದರಲ್ಲಿ ಸುಸ್ತಾಗಿ ಹೋಗಿತ್ತು. ಬೆಳಗಿನ ಜಾವದಲ್ಲೂ ಹೆಗಡೇರ ಮೈ ಬಿಸಿಯಾಗಿತ್ತು. ಹಣೆಗೆ ತಣ್ಣೀರು ಪಟ್ಟಿ ಹಾಕುತ್ತಾ ಕಾಯುತ್ತಾ ಕುಳಿತಿದ್ದ ಸುಮಿತ್ರೆಗೆ ನಿದ್ರೆ. ಪೂರಾ ಬೆಳಗಾದ ಮೇಲೆ ಮೊದಲು ಎಚ್ಚರಾಗಿದ್ದು ಹೆಗಡೇರಿಗೆ.
‘ಸುಮಿತ್ರಾ, ಎದ್ದು ಕೆಲಸ ಎಂತ ನೋಡು, ನಂಗೆ ಆಸ್ರಿಗೆ ಬೇಡ, ಸೀದಾ‌ ಊಟಕ್ಕೆ ಎಬ್ಬಿಸಿ ಬಿಡು, ಸಾಕು. ಕರಿಯಾ ಒಂದಾಳು ಕಳಿಸ್ತಿ ಹೇಳಿದ್ದ.. ಬಂದ್ನ ನೋಡು’.

ಸುಮಿತ್ರಾ, ಅದ್ಯಾವಾಗಲೋ‌ ಪ್ರಭಾಕರನ ಜೊತೆ ಕಂಪನಿ‌ ನಾಟಕಕ್ಕೆ ಹೋದಾಗ‌ ಹೀಗೆ ಕೂತಲ್ಲೇ ನಿದ್ದೆ ಮಾಡಿದ್ದು ಬಿಟ್ಟರೆ ಇವತ್ತೇ ಹೀಗೆ ಆಗಿದ್ದು ಎಂದುಕೊಳ್ಳುತ್ತಾ ಕಣ್ಣೊರೆಸಿಕೊಂಡು ಎದ್ದಳು.
ಮೂಲ್ಮನೆಯ ಇತಿಹಾಸದಲ್ಲೇ ಬೆಳಗ್ಗೆ ಒಲೆ ಹೊತ್ತಿಸದ, ಚಹಾ – ಆಸ್ರಿಗೆ ಕುಡಿಯದ, ಮನಾರ್ತನೆ ಮಾಡದ ಮೊದಲ ದಿನವಂದು.
**

ಹೆಗಡೆಯವರು ಸಾವು-ನೋವುಗಳನ್ನೇ ಹೊದ್ದು ಬಂದವರು. ಕಾಲನ ಆಟ ಹೇಗೆ ನಡೆಯಿತೋ ಹಾಗೇ ದೌಡಾಯಿಸಿದವರು. ಆದರೆ ಇವತ್ತು ಹೊದೆದ ದುಪ್ಪಡಿಯನ್ನೂ ಸರಿಸಲಾಗುತ್ತಿಲ್ಲ. ಯಮಭಾರ ಅಂದುಕೊಂಡು, ಮಗ್ಗಲು‌ ಮಾತ್ರ ಬದಲಾಯಿಸಿದರು.

ಪ್ರಭಾಕರನಿಗೂ, ಎರಡನೆಯ ಮಗ ರತ್ನಾಕರನಿಗೂ ಒಂದೂವರೆ ವರ್ಷ ವ್ಯತ್ಯಾಸ. ಆದರೆ ರತ್ನಾಕರನಿಗೆ ಹುಟ್ಟಿದಾರಭ್ಯ ಅನಾರೋಗ್ಯ. ಒಂದಲ್ಲ ಒಂದು ಶೀಕು, ಜ್ವರ ತಪ್ಪಿದ್ದಲ್ಲ. ಅವನಿಗೆ ಘಟ್ಟದ ಕೆಳಗಿನ ಅಲಭಾಗದ ಹೆಣ್ಣು. ಮದುವೆಯಾಗಿ ಐದು ವರ್ಷವಾದರೂ ನಾಗರಕಟ್ಟೆ, ನಾಟೀ ಔಷಧ ಮಾಡಿದ್ದರೂ ಮಕ್ಕಳಾಗದಾಗ, ಹುಬ್ಬಳ್ಳಿಯ ತಜ್ಞವೈದ್ಯ ಡಾ.ಹತ್ತೂರರ ಬಳಿ ತೋರಿಸಿದ್ದು. ಆಗಲೇ ಸಮಸ್ಯೆಯ ಭೀಕರತೆ ಅರಿವಾಗಿದ್ದು. ಅವನ ನಿರಂತರ ಜಾಡ್ಯದ ಗುಟ್ಟು ಗೊತ್ತಾಗಿದ್ದುದು. ರತ್ನಾಕರನ ಜನನೇಂದ್ರಿಯದ ಮುಂದೊಗಲು ಹಿಂದೆ ಸರಿಯುತ್ತಲೇ ಇರಲಿಲ್ಲ. ಮೂತ್ರದ ಸಣ್ಣ ಝರಿ ಹೋಗುವಷ್ಟು ರಂಧ್ರ ಮಾತ್ರ ಅಲ್ಲಿತ್ತು. ಮೂತ್ರದ ಸೋಂಕು ಪದೇ ಪದೇ ಆಗುವುದು. ಕಡೆಗೆ ಸೋಂಕು ಕಡ್ನಿಗಳಿಗೂ ತಲುಪಿ, ಅದಾಗಲೇ ಒಂದು ಕಿಡ್ನಿ ಕೆಲಸ ಮಾಡುತ್ತಿರಲಿಲ್ಲ. ಇನ್ನೊಂದು ಮೂತ್ರಜನಕಾಂಗ ಕೈ ಕೊಡುವ ಹಂತದಲ್ಲಿತ್ತು. ಸದ್ಯಕ್ಕೆ ‘ಸರ್ಕಮ್ಸಿಷನ್’‌ ಮಾತ್ರ ಮಾಡುವುದಾಗಿ ಡಾ.ಹತ್ತೂರು ಹೇಳಿದ್ದರು. ಅಷ್ಟರೊಳಗಾಗಿ ಮುಂಬೈಗೂ ಒಯ್ಯಬೇಕಾಗಿ ಬರಬಹುದು ಎಂದಿದ್ದರು. ಆ ಕಾಲಕ್ಕೆ ‘ಡಯಾಲಿಸಿಸ್’ ಈ ಭಾಗದಲ್ಲೆಲ್ಲೂ ಲಭ್ಯವಿರಲಿಲ್ಲ.

ಮನೆಗೆ ಬಂದ ರತ್ನಾಕರನಿಗೆ ನಿಧಾನವಾಗಿ ಕೈ, ಕಾಲು, ಮುಖಕ್ಕೆ ನೀರು ತುಂಬ ತೊಡಗಿತು. ದೇಹಕ್ಕೂ ವ್ಯಾಪಿಸಿತು. ಮತ್ತೊಮ್ಮೆ ಹತ್ತೂರರ ಬಳಿ ಹೋಗಿ, ಮುಂಬೈಗಾದರೂ ಒಯ್ಯುವುದೆಂದು ತೀರ್ಮಾನ ಮಾಡಲಾಗಿತ್ತು. ಆದರೆ, ರತ್ನಾಕರ‌ ಹುಬ್ಬಳ್ಳಿಯನ್ನೇ ತಲುಪಲಿಲ್ಲ. ಬವಣೆ ಪಡುವವನ ಮೇಲೆ ಕಾಲನ ಕಾಲು ಮತ್ತೆ ತುಳಿದು ಸಾಗಿತ್ತು.

ರತ್ನಾಕರನ ಹಿಂದೆಯೇ ಅವನ ಹೆಂಡತಿ ಮಂಗಲೆ, ಲೆಕ್ಕಾಚಾರ ಮಾಡಿಸಿಕೊಂಡು ಮನೆಯಿಂದ ಹೊರಬಿದ್ದಳು. ಜೀವನದಲ್ಲಿ ಹೆಗಡೇರ ಹಣದ ಲೆಕ್ಕಾಚಾರ ಆವಾಗ ಲೆಕ್ಕ ತಪ್ಪಿತ್ತು. ಅವಳ ರಂಪಾಟ ಕೇಳಲಾಗದೆ ರಾತ್ರೋರಾತ್ರಿ ಅಡಿಕೆ ವಕಾರಿ ನಡೆಸುತ್ತಿದ್ದ ವಿಠಲರಾಯರ ಬಳಿ ಹೋಗಿ ದೇಹ ಮುದುಡಿಕೊಂಡು ನಿಂತು ದೊಡ್ಡ ಮೊತ್ತವನ್ನೇ ಸಾಲವಾಗಿ ತಂದು, ಮಂಗಲೆಯ ಋಣವನ್ನು ‘ಚುಕ್ತಾ’ ಮಾಡಿದ್ದರು. ಮತ್ತೆ ಅವಳನ್ನು ಕಂಡಿಲ್ಲ.
ರತ್ನಾಕರನ ನಂತರ ಸಾಲಾಗಿ ಹುಟ್ಟಿದವರು ಕಮಲಾಕ್ಷಿ ಮತ್ತು ವಿಶಾಲಾಕ್ಷಿ. ಕಮಲಾಕ್ಷಿಯನ್ನು ಸಾಗರಕ್ಕೆ ಕೊಟ್ಟಿದ್ದರು. ಸಾಧಾರಣ ಅನುಕೂಲಸ್ಥ ಕುಟುಂಬದಲ್ಲಿ ಆರಾಮಾಗಿದ್ದಳು. ವಿಶಾಲಾಕ್ಷಿ ಚೂರು ಕುಂಟುತ್ತಿದ್ದಳು. ಹೆಣ್ಣುಮಕ್ಕಳ ಮದುವೆ ಕಷ್ಟವಾಗಿದ್ದ ಕಾಲವದು. ಎಲ್ಲೂ ಕೂಡಿ ಬರದಿದ್ದಾಗ, ಕೊನೆಗೆ ಗಂಡು-ಹೆಣ್ಣಿನ ಗಂಟು ಹಾಕುವ ಕೆಲಸ ಪುಣ್ಯದ್ದು ಎಂದು ಮಾಡುತ್ತಿದ್ದ ಥಡಿಸಾಬನನ್ನು ಹೆಗಡೇರು ವಿಚಾರಿಸಿದರು. ಥಡಿಸಾಬ ಊರೂರಿಗೆ ಹತ್ತಿಯ ಹಾಸಿಗೆ ಮಾರುವವ. ಯಾವ ಜನ್ಮದ ಋಣವೋ.. ವಿಶಾಲಾಕ್ಷಿಗೆ ದೂರದ ಮಹಾರಾಷ್ಟ್ರದ ಸಂಬಂಧ ಮಾಡಿಸಿ ಮದುವೆಯಾಗಲು ನೆರವಾದ. ಅವರು ವರ್ಷಕ್ಕೊಮ್ಮೆ ಸಕುಟುಂಬ ಬಂದು ಹೋಗುತ್ತಿದ್ದರು ಅಷ್ಟೇ. ಕನ್ಯಾಪಿತೃವಾಗಿ ಈ ಎರಡು ಕನ್ಯಾದಾನ ಮಾಡಿ ಮುಗಿಸುವಷ್ಟರಲ್ಲಿ ಅವರ ಬದುಕಿನ ಬಂಡಿ ಹಳ್ಳ ದಿಣ್ಣೆಗಳ ದಾಟಿ ಮುನ್ನುಗ್ಗಿತ್ತು, ಮುಗ್ಗರಿಸಲಿಲ್ಲ.
ಮನೋನಿಗ್ರಹದ ದಿನಗಳಲ್ಲಿ ಹುಟ್ಟಿದವನು ಕೊನೆಯ ಚಿಗುರು ಮನೋಹರ. ಕೊನೆಯ ಪುತ್ರನ‌ ಮೇಲೆ ವ್ಯಾಮೋಹ ಜಾಸ್ತಿಯಂತೆ. ಯಾವ ಕಟ್ಟುಪಾಡುಗಳೂ, ಜವಾಬ್ದಾರಿಯೂ ಇಲ್ಲದೆ ಬೆಳೆದವ ಮನೋಹರ.
ಆದರೆ, ಅದೇನೋ ವರ್ಣಿಸಲಾಗದ ‘ಸಂಪರ್ಕ-ಸೇತು’ವೊಂದು ಅಪ್ಪ- ಮಗನ ನಡುವೆಯಲ್ಲಿತ್ತು. ಸಣ್ಣ ವಯಸ್ಸಿನಲ್ಲೇ ಬೀಡಿ ಸೇದಿದ ವಾಸನೆ ಮೂಗಿಗೆ ಬಡಿದು ಮೂಗು ಕೊಡವಿದ್ದರು ಹೆಗಡೇರು. ತಿರುಗಿ ಆ ಕಮಟು ವಾಸನೆ ಅವರಿಗೆ ಬಂದಿರಲಿಲ್ಲ.

ಕಾಲೇಜಿಗೆ ಹೋಗುವಾಗ ವಿಪರೀತ ಗುಟ್ಕಾ ಹಾಕುತ್ತಾನೆಂಬ ಸುದ್ದಿ ಹೆಗಡೇರ ಕಿವಿಗೆ ಬಿದ್ದಿತ್ತು. ವಯಸ್ಸಿಗೆ ಬಂದಾರಾಭ್ಯ ಹಾಕುತ್ತಿದ್ದ ‘ಚಪ್ಪೆಗವಳ’ವನ್ನು ಹೆಗಡೇರು, ಅದನ್ನೂ ಒಮ್ಮೆಲೇ ನಿಲ್ಲಿಸಿ ಬಿಟ್ಟರು. ಕೊನೆಗೆ ಅವರ ಮನೆಯ ಸುತ್ತ ನಾಲ್ಕೂ ದಿಕ್ಕಿನಲ್ಲೂ ಖಾಲಿ ಗುಟ್ಕಾ ಚೀಟಿ ಮತ್ತೆ ಕಾಣಸಿಗಲಿಲ್ಲ. 

ಡಿಗ್ರಿ ಮುಗಿಸಿದ ಮೇಲೆ ಮನೆಯಿಂದ ನಯಾ ಪೈಸೆಯನ್ನೂ ಮನೋಹರ ಕೇಳಲಿಲ್ಲ. ಬೆಳಗ್ಗೆ ಎದ್ದು ಪೇಟೆಗೆ ಹೋದವನು ಸಂಜೆ ಮನೆಗೆ ಬರುತ್ತಿದ್ದ. ಹತ್ತೆಂಟು ನೌಕರಿ, ಕೆಲಸಗಳನ್ನು ಬದಲಿಸಿದ್ದ ಎಂಬ ಅಡವಡ ಸುದ್ದಿಯಷ್ಟೇ ಇವರನ್ನು ತಲುಪಿತ್ತು‌.

ಬಹುಶಃ ಪ್ರಭಾಕರ ಸತ್ತ ಮೇಲೆ ಕುಡಿತಕ್ಕೆ ಶುರು ಹಚ್ಚಿಕೊಂಡನೇನೋ. ಅಥವಾ ನೆನಪಿಸಿ ಇಟ್ಟುಕೊಳ್ಳಲು‌ ಅದೊಂದು ಮೈಲಿಗಲ್ಲೇನೋ.

ಹೊಲೇರಕೇರಿಯ ಸಂಪರ್ಕ ಹೆಚ್ಚಿತ್ತು. ಯಾವುದೋ ಜಾವದಲ್ಲಿ ಬಂದು ಮಲಗಿ ಎದ್ದು ಹೋಗುತ್ತಿದ್ದ. ಯಾವುದೋ ಮಧ್ಯರಾತ್ರಿ ಮಾತ್ರ ಯಾರೋ ಆ ಕೇರಿಯಿಂದ ಹೊತ್ತು ತಂದು ಕಡಿರಾಡಿನಲ್ಲಿ ಮಲಗಿಸಿ ಹೋಗಿದ್ದರು. ಆಗ ಅದು ತುಂಬಿದ ಮನೆಯಾಗಿತ್ತು. ಆದರೂ ಯಾರೂ ಏನೂ ಮಾತಾಡಲಿಲ್ಲ. ಆವತ್ತು ಹೆಗಡೇರು ಊಟ-ಉಪಹಾರಗಳನ್ನು ಬಿಟ್ಟರು. ಮನೋಹರ ಮತ್ತೆ ಕುಡಿದದ್ದು ಕಂಡಿಲ್ಲ ಅಂದರು ಊರವರು. ನಾಲ್ಕನೇ ದಿನ ಹೆಗಡೇರು ಆಹಾರ ಸೇವಿಸಿದರು. ವ್ಯಸನಿಗಳಾದ ಮಕ್ಕಳ ಪೋಷಕರ ಗೋಳು, ಅವರ ಕಣ್ಣಲ್ಲಿ ಆವತ್ತು ರಾತ್ರಿ ಕಟ್ಟಿತ್ತು. ಹೀಗೊಂದು ಕಾಲ ಹಾಗೇ ಬಂದು ಹಾದು ಹೋಯಿತು.

ಎಲ್ಲವೂ ಸುಖಾಂತ್ಯ ಅನ್ನುವ ಹೊತ್ತಿಗೆ ಇಬ್ಬರು ಅಣ್ಣಂದಿರ ಸಾವು ಅವನನ್ನು ತಲ್ಲಣಗೊಳಿಸಿತ್ತೋ ಏನೋ… ವಿಪರೀತ ಅಂತರ್ಮುಖಿಯಾದ.

ಅದೆಲ್ಲಿಂದಲೋ ತಂದ ಆಧ್ಯಾತ್ಮದ ಪುಸ್ತಕಗಳು ಮನೆಯಲ್ಲಿ ಅಲ್ಲಲ್ಲಿ ಕಾಣುತ್ತಿದ್ದವು. ಅದೇ ವೇಳೆಗ ನಾಗಾಸಾಧುಗಳ ತಂಡವೊಂದು ಶಿರಸಿಯ ಮುಖಾಂತರ ಉತ್ತರದ ಕಡೆಗೆ ಸಾಗುತ್ತಿತ್ತಂತೆ. ಪಂಡಿತ ಜನರಲ್ ಲೈಬ್ರರಿಗೆ ಹೋಗಿ ಬರುತ್ತೇನೆ ಎಂದು ಅತ್ತಿಗೆಯ ಹತ್ತಿರ ಹೇಳಿ ಹೋದವನು ತಿರುಗಿ ಬರಲಿಲ್ಲ.

ಒಂದಿಷ್ಟು ದಿನಬಿಟ್ಟು ಹೆಗಡೇರ ವಿಳಾಸಕ್ಕೆ ಅಂತರ್ದೇಶಿ ಪತ್ರವೊಂದು ಬಂದಿತ್ತು.
‘ಹೆದರಬೇಡಿ, ಅನೇಕ ಮರುಹುಟ್ಟು ನನಗೆ ದಕ್ಕಿದೆ. ಜೀವವನ್ನಂತೂ ಕಳೆದುಕೊಳ್ಳುವುದಿಲ್ಲ. ಪರಮಾತ್ಮ ಅಪೇಕ್ಷೆ ಪಟ್ಟಾಗ ಲೀನವಾದೇನು’. ತಾರೀಖೊಂದನ್ನು ನಮೂದಿಸಿ ಅಲ್ಲಿಂದ ಹನ್ನೊಂದನೇ ದಿನಕ್ಕೆ ತನ್ನ ಕರ್ಮವಾಚರಿಸಬೇಕೆಂದು ಕೇಳಿಕೊಂಡಿದ್ದ.

ಹೆಗಡೇರು ಅವನಿಗೆ ಎಂದೂ ಏನನ್ನೂ ಹೇಳಿದವರಲ್ಲ. ಹೇಳಿದ್ದರೆ ಕೇಳುತ್ತಿದ್ದನಾ ಎಂಬ ಪರೀಕ್ಷೆಯೂ ಕೂಡ ನಡೆದಿರಲಿಲ್ಲ. ಅವನ ಕಠಿಣತೆಯ ಅರಿವಿತ್ತು. ತಮ್ಮ ಕಡೆಯಿಂದ ಮಗನಿಗೆ ಸಲ್ಲಬೇಕಾದ ಕರ್ಮಗಳನ್ನು ಮಾಡಿ ಎಳ್ಳುನೀರು ಬಿಟ್ಟಿದ್ದರು.
**

‘ಮಾವನೋರೆ…. ಸ್ನಾನ, ಪೂಜೆ ಮಾಡಿ ಊಟ ಮಾಡ್ತ್ರ? ಇಲ್ಲೇ ಎಂತಾರು ಫಳಾರ ತಂದು ಕೊಡ್ಲ’
ಸೊಸೆಯ ಧ್ವನಿಗೆ ಹೆಗಡೇರಿಗೆ ಎಚ್ಚರಾಯಿತು.
‘ಅಯ್ಯೋ ರಾಮ, ರಾಶೀ ಹೊತ್ತಾಗೋತಲೆ’ ಅಂತ‌ ಎದ್ದು ಹೊರಬಂದರು.
‘ಊಟಕ್ಕೆ ತಯಾರು ಮಾಡು, ಬಂದೇ ಬಿಟ್ಟಿ. ಮಜ್ಜಾನ ಮೇಲೆ ಶಿರಸಿಗೆ ಹೋಗಿ ವಕೀಲರ ಕಂಡು ಬರ್ತಿ. ಸ್ವಲ್ಪ ತಡ ಆಗಗು ಮನೆಗೆ ಬರ್ಲೆ’ ಅಂದರು.

ಒಂದೂವರೆಗೆ ಸರಿಯಾಗಿ ಬಂದ ಸರಕಾರಿ ಬಸ್ ಹತ್ತಿ ಕುಳಿತವರಿಗೆ ಯಾಕೋ‌ ಸರ್ವೇಶ್ವರಿಯ ನೆನಪು.
ಸರ್ವೇಶ್ವರಿ ತೋಟದ ಸೀಮೆಯ ತಲಗೋಡಿನ ತಿಮ್ಮಪ್ಪ ಹೆಗಡೆಯವರ ಮಗಳು. ಕಾನೇರಿಯ ನಾಗಪ್ಪ ಹೆಗಡೆಯ ಮಗ ಅಂದಕೂಡಲೇ ಏನೊಂದೂ ವಿಚಾರಿಸದೆ ಜಾತಕವನ್ನು‌ ಕೊಟ್ಟಿದ್ದರು. ಗೋಕರ್ಣದ ಕಿರಿ ಪುರಾಣಿಕರ ಹತ್ತಿರ ಮೇಳಾಮೇಳ ನೋಡಿಸಿ, ಜಾತಕ ಹನ್ನೆರಡಾಣೆ ಹೊಂದಾಣಿಕೆಯಾಗಿ ಗಟ್ಟಿಮೇಳ‌ ಊದಿದ್ದರು.

ಗರ್ಭಿಣಿ, ಬಾಳಂತನ ಅಂತ ತವರು‌ಮನೆಗೆ ಹೋಗಿದ್ದು ಬಿಟ್ಟರೆ, ಸೊಕಾಗಿನ ದಿನಗಳಲ್ಲಿ ಸರ್ವೇಶ್ವರಿ ಅಪ್ಪನಮನೆಯಲ್ಲಿ ಜಾಂಡಾ ಹೊಡೆದವಳಲ್ಲ. ಮನೆಯಲ್ಲಾದರೂ ಆ ಮೂರುದಿನ ಹೊರಗೆ ಕುಂತಿದ್ದು ಬಿಟ್ಟರೆ ಸದಾ ಮನೆಯೊಳಗಿನ ಕೆಲಸಗಳ ತೇರೆಳೆದವಳು. ಮುನಿದವಳಲ್ಲ, ಬೇಕು-ಬೇಡಗಳ ಬಿಡಿಸಿಟ್ಟವಳಲ್ಲ. ಎಲ್ಲೋ ಒಂದು ‌ಮೂರ್ತಿಯನ್ನು ಮದುವೆಯಾದೆನಾ ಅಂತ ಹೆಗಡೇರಿಗೆ ಅನಿಸಿದ್ದಿದೆ. ಆದರೆ ಅದೊಂದು ದೇವತೆಯ ಮೂರ್ತಿ ಎಂದು ಮುಂದೆ ಕಷ್ಟಕಾಲಗಳಲ್ಲಿ ಕೆನ್ನೆ ತಟ್ಟಿಕೊಂಡಿದ್ದರು.

ಕೊನೆಯ ಕುವರ ಮನೋಹರನ ಜನನದ ನಂತರ ಮನೋನಿಗ್ರಹದ ಜಾಗೃತಿಯಿಂದ ಹಾಸಿಗೆ ದೂರಸರಿಯಿತೇ ಹೊರತು, ಹೃದಯಗಳು ಮತ್ತಷ್ಟು ಹತ್ತಿರವಾದವು. ಪುಣ್ಯಾತಗಿತ್ತಿ, ಮುತ್ತೈದೆಯಾಗಿ ಹೋದಳು. ಅಂತಹ ಮುಗ್ಧೆ ತನಗಿಂತ ಮುಂಚೆ ಹೋಗಿದ್ದು ಒಳ್ಳೆದಾಯ್ತೇನೋ… ಅಂದುಕೊಳ್ಳುವ ವೇಳೆಗೆ ನೆನಪಾದಳು ಚಿತ್ರಕಲಾ.
ಮಾಡಗೇರಿ ನಾಟಕ ಕಂಪನಿಯವರು ಪ್ರತೀ ಜಾತ್ರೆಗೆ ಬರುವಂತೆ ಬಂದಿದ್ದರು. ಜೊತೆಗೊಬ್ಬಳು ಹೊಸನಟಿ ಚಿತ್ರಕಲಾ. ಆಹ್, ಎಂತಾ ಸೌಂದರ್ಯವತಿ. ಅಭಿನಯದಲ್ಲಿ ಶಾರದೆ. ಈ ಇಳೀವಯಸ್ಸಿನಲ್ಲೂ ಒಮ್ಮೆಲೆ ಬೆಚ್ಚಗಾದರು ಹೆಗಡೇರು.

ಶಿರಸಿಪೇಟೆಯಲ್ಲಿ ಆಗಲೇ ವಾಹನ ಸಂದಣಿ ಹೆಚ್ಚಿತ್ತು. ಬಸ್ಸಿನ‌ ಚಾಲಕನ ಹಾರ್ನಿಗೆ, ಸರಿಯಾಗಿ ನಾಟಕ ಕಂಪನಿಯವರು ಟೆಂಟ್ ಹಾಕುತ್ತಿದ್ದ ವಿಕಾಸಾಶ್ರಮದ ಎದುರಿಗೆ ಎದ್ದು ಕೂತರು ಹೆಗಡೇರು.
**

ಅವರು ತಲುಪುವ ಹೊತ್ತಿಗೆ ವಕೀಲರು ಕೋರ್ಟಿನ ಕಲಾಪಗಳನ್ನು ಮುಗಿಸಿ, ಮನೆಗೆ ತಾಕಿಯೇ ಇರುವ ಆಫೀಸಿನಲ್ಲಿ ಆಸೀನರಾಗಿದ್ದರು.

ಶಾಸಕರ ಹತ್ತಿರದ ಸಂಬಂಧಿಗಳೂ ಆದ ವಿಘ್ನೇಶ್ವರರು, ಹೆಗಡೇರು ಕೊಟ್ಟ ದಾಖಲೆಗಳನ್ನು ಪರಿಶೀಲಿಸಿದರು. ತಾಳ್ಮೆಯಿಂದ ಕೇಳಿದರು. ವಿಶದವಾಗಿ ಚರ್ಚಿಸಿದರು.

‘ನೋಡು ನಾರ್ಣಣ್ಣ, ಕೋರ್ಟಿನ‌ ಕೆಲಸ ನಾನು ಮಾಡ್ತೆ. ಅದರ ಯೋಚನೆ ಬಿಡು. ಲೋಕಲ್ ಅಲ್ಲಿ ಒಂದಿಷ್ಟು ಜನನಾದ್ರೂ ನಿನ್ನ ಪರ ಇರಂಗೆ ನೋಡ್ತ್ಯಾ. ಜನ ಯಾವಾಗ್ಲೂ ಗಾಳಿ ಬೀಸಿದ ಬದಿಗೆಯ. ಸತ್ಯ‌ ಮೆರವಣಿಗೆ ಹೊಂಟ್ರೆ ಮಾತ್ರ ಗೊತ್ತಪ್ಪ ಕಾಲ ಇದು. ಮಾಬ್ಲ ಭಟ್ರಿಗೂ ವಿರೋಧಿಗಳು ಇದ್ದಿಕ್ಕಲಾ. ನಮ್ಮ ಆ ಬದಿಯ ಕಾರ್ಯಕರ್ತರಿಗೂ ಹೇಳ್ತಿ. ಅರ್ಜೆಂಟಿಗೆ ಆಂದೋಲನ ಆಗವ್ವು, ಜನಾಂದೋಲನ. ಎಲ್ಲಾ ನಿಂಗೆ ಬಿಡಿಸಿ ಹೇಳವ್ವನ. ಲೋಕಾ ನೀತಿ.. ಮೇಲೆ ಹೇಳಿದ್ರೆ ಆಗ ಕೆಲಸಲ್ಲ‌ ಇದು’.

ಕಾನೂನಿನ ಅಂಶಗಳನ್ನೂ ವಿವರಿಸಿದ ಲಾಯರು, ಹೆಗಡೇರಿಗೆ ಅಗತ್ಯವಿದ್ದ ಆತ್ಮವಿಶ್ವಾಸ ತುಂಬಿ ಕಳಿಸಿದರು.
ಅಲ್ಲೇ ಪಕ್ಕಕ್ಕಿದ್ದ ಮನೂರು ಡಾಕ್ಟರರ ಬಳಿ ಜನರಲ್ ಚೆಕ್ ಅಪ್ ಮಾಡಿಸಿಕೊಂಡು, ಊರಿಗೆ ಹೋಗುವ ಕೊನೆಯ ಬಸ್ ಹತ್ತಿದರು.

ಚಿತ್ರಕಲಾ ಎಂಬ ಚಕೋರಿ ಮತ್ತೆ ನೆನಪಿನಾಳದಿಂದ ಎದ್ದು ಬಂದಳು. ಮತ್ತೆ ವಿಕಾಸಾಶ್ರಮದ ಬಯಲು ದಾಟಿತು ಬಸ್ಸು.

ಪ್ರಭಾಕರ ಮನೆಯ ಜವಾಬ್ದಾರಿಯನ್ನು ಸಂಪೂರ್ಣ ವಹಿಸಿಕೊಂಡು ಆಗಿತ್ತು. ವಾರಕ್ಕೊಮ್ಮೆ ಆಳುಗಳ ಪಗಾರ ಬಟವಾಡೆ ಮಾಡುವುದು‌ ಮಾತ್ರ ಹೆಗಡೇರ ಕೆಲಸವಾಗಿತ್ತು. ವಿಠಲರಾಯರ ವಕಾರಿಯ ಸಾಲ‌ ತೀರಿತ್ತು. ತೋಟಗಾರರ ಸಹಕಾರಿ ಸಂಘ ಅಸ್ತಿತ್ವಕ್ಕೆ ಬಂದು ಹೆಗಡೇರು‌ ಸಂಸ್ಥಾಪಕ ಸದಸ್ಯರಾಗಿದ್ದರಿಂದ ಮುಂಗಡ, ಅಸಾಮಿ ಖಾತೆ ಸಾಲಗಳಿಗೆಲ್ಲಾ ಏನೂ ತೊಂದರೆ ಇರಲಿಲ್ಲ. ಹಾಗಾಗಿ ಈ ಮನೋನಿಗ್ರಹದ ಕಾಲದಲ್ಲಿ ಆಹಾರದ ಮೇಲೂ‌ ಕಟ್ಟುನಿಟ್ಟಿನ ನಿಗ್ರಹವಿಟ್ಟಿದ್ದರು. ಒಂದೇ ಹೊತ್ತು ಆಹಾರ ಸಾಕೆಂದು ತಾಕೀತು ಮಾಡಿದ್ದರು. ಒಪ್ಪತ್ತು ಒಂದು ವೃತದಂತೆ ನಡೆಸುತ್ತಿದ್ದರು.

ಆ ವರ್ಷ ಶಿರಸಿಯ ಮಾರಿಕಾಂಬೆಯ ಜಾತ್ರೆ. ವರ್ಷ ಬಿಟ್ಟು ವರ್ಷ ಬರುವ ಜಾತ್ರೆಯಲ್ಲಿ ಹೆಗಡೇರು ಯಕ್ಷಗಾನವನ್ನು ತಪ್ಪಿಸುವವರಲ್ಲ. ಅದರಲ್ಲೂ ಚಿಟ್ಟಾಣಿಯ ಪ್ರತಿಭೆಗೆ ಮಾರುಹೋದವರು. ಪ್ರಭಾಕರ ಮತ್ತು ಸುಮಿತ್ರಾ ಕಂಪನಿಯ ನಾಟಕ ನೋಡಿ ಬಂದವರು ಪಾತ್ರಧಾರಿಗಳನ್ನು ಒಂದಿಷ್ಟು ಹೊಗಳಿದ್ದರು. ಆ ಕಾರಣಕ್ಕೋ, ಚಿಟ್ಟಾಣಿ ಅವತ್ತಿನ ಯಕ್ಷಗಾನದಲ್ಲಿ ಇಲ್ಲ ಎಂಬ ಕಾರಣಕ್ಕೋ ಕರಿಯನನ್ನು ಜೊತೆ ಮಾಡಿಕೊಂಡು ಟೆಂಟ್ ಗೆ ನಾಟಕ ಅರಸಿ ಹೋದರು.

ಸ್ವಲ್ಪ ಬೇಗ ಹೋಗಿದ್ದರಿಂದ ಮೊದಲನೇಯ ಸಾಲಿನಲ್ಲಿಯೇ ಆಸನ ಸಿಕ್ಕಿತು. ಚಿತ್ರಕಲಾ ಆಗಲೇ ಶಿರಸಿಯವರ ಬಾಯಲ್ಲಿ ರುಚಿಗವಳವಾಗಿದ್ದಳು. ಆವತ್ತಿನ ಸಾಮಾಜಿಕ ನಾಟಕದಲ್ಲಿ ಅವಳದ್ದು ಸಂದರ್ಭದ ಶಿಶುವಾಗಿ ‘ವೇಶ್ಯಾವೃತ್ತಿಗೆ ಇಳಿಯುವ ಯುವತಿಯ ಪಾತ್ರ’. ಅವಳ ಮನೋಜ್ಞ ಅಭಿನಯಕ್ಕೆ ಹೆಗಡೇರು ತಲೆದೂಗಿದರು.
ಆವತ್ತಿನ‌ ಕಾಲದಲ್ಲೇ ನೂರು ರೂಪಾಯಿ ಕರಿಯನ ಬಳಿ ಕಳಿಸಿ, ನಾಟಕದ ಮಧ್ಯೆ ಮ್ಯಾನೇಜರನ ಬಳಿ ಓಡಿಸಿದರು. ಆಗ ವಾರೆಗಣ್ಣಿನಿಂದ ನೋಡಿದ್ದಳು ಚಿತ್ರಕಲಾ. ದ್ವಿತೀಯಾರ್ಧದಲ್ಲಿ ಅವರದ್ದು ‘ಶ್ರೀಮಾನ್ ಮೂಕ’ವಾಗಿತ್ತು ಸ್ಥಿತಿ.

ನಾಟಕ ಮುಗಿದ ಮೇಲೆ ಗ್ರೀನ್ ರೂಮ್ ಗೆ ಬರಲು ಹೆಗಡೇರಿಗೆ ಹೇಳಿದ್ದು ಅವಳೋ, ಮ್ಯಾನೇಜರನೋ ಅವರಿಗೆ ಗೊತ್ತಾಗಲಿಲ್ಲ. ಕರಿಯನ ಕಡೆ ನೋಡಿ ಪೇಲವ ನಗೆ ಬೀರಿ, ಒಳಹೋದರು.

ಅದೆಷ್ಟು ಸುಕೋಮಲ ಧ್ವನಿ. ಲೋಕಾಭಿರಾಮದ ಮಾತುಗಳು. ಹಾಗೆಯೇ ಹತ್ತಿರ ಸರಿದವಳು ‘ಕಲಾ’ ಅನ್ನಿ ಸಾಕು ಅಂದಳು. ಹೆಗಡೇರು ಬೆವರಿದ್ದರು. ಚಿತ್ರಕಲಾಳ ಬಣ್ಣ ಅಳಿಸತೊಡಗಿತ್ತು.
ಮುಖವನ್ನು ಮೆತ್ತಗೆ ತಟ್ಟಿ, ಎದೆಯ ಮೇಲಿನ ಕೂದಲುಗಳೊಂದಿಗೆ ಆಟವಾಡಿ ಬೆರಳುಗಳು ನಾಭಿಯ ಕೆಳಗೆ…
ಧಿಡಗ್ಗನೆ, ಹಾವು ತುಳಿದಂತೆ ಎದ್ದರು ಹೆಗಡೇರು. ‘ಹೋಗ್ತೀನಿ’… ಎಂದಷ್ಟೇ ಹೇಳಿ ಹೊರಬಂದರು. ಅವಳ ಮುಖವನ್ನು ಹೆಚ್ಚು ಹೊತ್ತು ನೋಡಲು ಆಗಲಿಲ್ಲ. ಹೆಣ್ಣು ಇಂತಹ ವಿಷಯಗಳಲ್ಲಿ ತಿರಸ್ಕಾರಕ್ಕೆ ಒಳಗಾಗುವ ಸಾಧ್ಯತೆ ತೀರಾ ಕಮ್ಮಿ. ಆದರೆ ಅವಳ‌ ಮುಖಭಾವದಲ್ಲಿ ಯಾವ ಬದಲಾವಣೆಯನ್ನೂ ಗುರುತಿಸಲಾಗಲಿಲ್ಲ. ಎಷ್ಟಂದರೂ ಅವಳು ನಟಿ.

‘ಹೋಗಿ ಬರ್ತೀನಿ’ ಅನ್ನೋದು ಆಸ್ಪತ್ರೆ ಮತ್ತು ಪೋಲಿಸ್ ಸ್ಟೇಷನ್ ನಲ್ಲಿ ಹೇಳಬಾರದಂತೆ. ಅಂದು ಹಿರಿಯರು ಹೇಳುತ್ತಿದ್ದರು. ಆದರೆ ಆ ಶಬ್ದ ಎಷ್ಟು ರೂಢಿಯಾಗಿತ್ತೆಂದರೆ ಆ ಜಾಗಗಳಲ್ಲೂ ಅದು ಬಾಯಿಗೆ ಬಂದು ಬಿಡುತ್ತಿತ್ತು. ಅಂತಾಹುದ್ದರಲ್ಲಿ ‘ಹೋಗ್ತೀನಿ’ ಶಬ್ದದ ಕಾಠಿಣ್ಯತೆಗೆ ಸ್ವತಃ ಅವರೇ ದಂಗಾಗಿದ್ದರು. ಆ ಕ್ಷಣದಲ್ಲೂ ಅವರಿಗೆ ‌ಕಿರಿಯಮಗ ಮನೋಹರ ನೆನಪಾಗಿದ್ದ. ಇದು ಮತ್ತೂ ಸಖೇದಾಶ್ಚರ್ಯ ಉಂಟು ಮಾಡಿತ್ತು.
ಮನೆಗೆ ಬಂದವರು ಒಂದಿಡೀ ಹಂಡೆ ಬಿಸಿನೀರನ್ನು ಮಿಂದಿದ್ದರು.
ಪಾಪೋಹಂ… ಪಾಪನಾಶಾನಾಂ….

ರಾತ್ರಿ ಮಲಗುವಾಗ ಸರ್ವೇಶ್ವರಿಯನ್ನೊಮ್ಮೆ ಆಲಂಗಿಸಿದ್ದರು. ತನ್ನದೇ ಪರಿಧಿಯಲ್ಲಿ ಸುತ್ತುವ ಕಾಲ ಒಡ್ಡುವ ಪರೀಕ್ಷೆ!

ಕಾನೇರಿಯಲ್ಲಿ ಬಸ್ಸಿಳಿಯುವ ಹೊತ್ತಿಗೆ ಕಾರ್ಗತ್ತಲು. ಚೀಲದಿಂದ ಬ್ಯಾಟರಿ ತೆಗೆದು ಬಿಟ್ಟುಕೊಂಡು ದಾರಿಹಿಡಿದರು. ಕಣ್ಣಿನ‌ ಶಕ್ತಿ ಕುಂದಿದ್ದು ಮತ್ತೂ ಸ್ವಲ್ಪ ದೂರ ನಡೆಯುವಷ್ಟರಲ್ಲಿ ದೇಹಕ್ಕೆ ಆಯಾಸವೂ ಆಗುತ್ತಿರುವುದ ಗಮನಿಸಿದರು.

ಕರೆಂಟಿರಲಿಲ್ಲ. ಸುಮಿತ್ರೆ ದೀಪದ ಬುಡ್ನ ಹಚ್ಚಿ ಕಟಾಂಜರದ ಬಳಿ ಕಾಯುತ್ತಾ ನಿಂತಿದ್ದಳು. ಊಟಕ್ಕೆ ಕುಂತಾಗ ಸುಮಿತ್ರೆ ಅಪರೂಪಕ್ಕೆಂಬಂತೆ ಬಾಯ್ತೆಗೆದಳು.

‘ಮಾಣಿ ಫೋನ್ ಮಾಡಿದಿದ್ದ. ಅಜ್ಜನ‌ ಹತ್ರೇ ಮಾತಾಡವ್ವು ಅಂದ. ಇಲ್ಲಿ ಆದ ವಿಷಯ ಪೂರ್ತಿ ಅವಂಗೆ ಗೊತ್ತಿದ್ದು. ನಾಳೆ ಬೆಳಗಾ ಮುಂಚೆ ಮತ್ತೆ ಮಾಡ್ತ್ನಡ. ಮನೆ ಬದೀಗೆ ಇರಕ್ಕೆ ಹೇಳು ಹೇಳಿದ್ದ’.
‘ಹ್ಞುಂ , ದೇವರು ಕಣ್ತೆರೆದರೆ ಎಲ್ಲಾ ಸಲೀಸಾಗ್ತು’.
ಹೆಗಡೇರು ತಮ್ಮಲ್ಲೇ ಎಂಬಂತೆ ನುಡಿದರು.

ನಿರಮ್ಮಳ ಭಾವಕ್ಕೋ ಏನೋ ಹೆಗಡೇರಿಗೆ ಎಂದಿಗಿಂತ ಮುಂಚೆ ಬೆಳಗಾಗಿತ್ತು.
ನಿತ್ಯಕಾರ್ಯ ಮುಗಿಸಿ ಆಸ್ರಿಗೆ ತೆಳ್ಳೇವು ಕುಡಿದು ಏಳುವಷ್ಟರಲ್ಲಿ ಪವನನ ಫೋನು ಬಂತು.
‘ಅಜ್ಜಾ, ಅರಾಮಿದ್ಯಾ… ವಿಷಯ ಎಲ್ಲಾ ಗೊತ್ತಾತು. ನೀನು ತಲೆಬಿಸಿ ಮಾಡ್ಕ್ಯಳಡ’.
‘ಹಾ. ನೀ ಅರಾಮಿದ್ಯ ಪವನ…’
‘ಅರಾಮು ಇಲ್ಲಿ. ನಾನು ಭಾನುವಾರ ಮನೆಗೆ ಬರ್ತಾ ಇದ್ದಿ. ಅವತ್ತೇ ಸಂಜೆ ಒಂದು ಮೀಟಿಂಗ್ ಕರಿ. ಉಳಿದ ವಿಷಯ ಅಲ್ಲಿ ಬಂದು ಹೇಳ್ತಿ.
ಪವನ, ಪ್ರಭಾಕರ-ಸುಮಿತ್ರೆಯ ಮಗ ಮಾತ್ರ ಅಲ್ಲ. ಮೂಲ್ಮನೆಯ ಮತ್ತು ಕಾನೇರಿಯ ಭರವಸೆಯ ಕುಡಿ. ಇವನೊಬ್ಬನೇ ಈ‌ಗ ಈ ಮನೆ, ಮಣ್ಣು, ಉಳುಮೆಯ ಮುಂದಿನ‌ ಸೇತು.

ತನ್ನ, ಸರ್ವೇಶ್ವರಿಯ ಮತ್ತು ಎಲ್ಲಾ ಮಕ್ಕಳ ಅಲ್ಲದೇ ತೆರೆಯ ಹಿಂದೆ ತೀವ್ರ ಕಷ್ಟದ ದಿನಗಳಲ್ಲಿ ಕೋಳು ಕಂಬದಂತೆ ನಿಂತ ಸುಮಿತ್ರಾ; ಈ ಎಲ್ಲರ‌ ಗುಣಗಳನ್ನು ಎರಕ ಹೊಯ್ದಂತಿರುವ, ವಯಸ್ಸಿಗೆ ಮೀರಿದ ಪ್ರಬುದ್ಧತೆಯ ಯುವಕ. ಹಾಗೆಂದುಕೊಳ್ಳುವಾಗ ಮತ್ತೆ ನೆನಪಾದವ ಕೊನೆಯ ಮಗ ಮನೋಹರ.
ವಿಷಯ ತಿಳಿದ ಪವನ ಸುಮ್ಮನೆ ಕೂತಿರಲಿಲ್ಲ. ಕಾನೇರಿಯಲ್ಲಿ ಜಮೀನು ಹೊಂದಿರುವ ಜನರ ಮಕ್ಕಳೆಲ್ಲರನ್ನೂ ಸಂಪರ್ಕಿಸಿದ್ದ‌. ಒಂದು ವಾಟ್ಸಾಪ್ ಗ್ರೂಪ್ ರಚಿಸಿ ಪರ-ವಿರೋಧ ಚರ್ಚೆ ಏರ್ಪಡಿಸಿದ್ದ. ಕೊನೆಗೆ ಒಂದು ಪೋಲ್ ಕೂಡ ಕ್ರಿಯೇಟ್ ಮಾಡಿದ್ದ.

ಅಂತಿಮವಾಗಿ ಈ ಸಮಸ್ಯೆಯ ಪರಿಹಾರಕ್ಕಾಗಿ, ಪವನನ ನೇತ್ರತ್ವದಲ್ಲಿ ಒಂದು ಕರಡು ಸಮಿತಿಯನ್ನು ರಚಿಸಿದರು. ಅವರು ರಾಜ್ಯದ ಕೃಷೀ ತಜ್ಞರನ್ನು, ರೈತರ ಮುಖಂಡರನ್ನು, ಸಹಕಾರಿ ಧುರೀಣರನ್ನು ಭೇಟಿ ‌ಮಾಡಿ, ಅಭಿಪ್ರಾಯ ಸಂಗ್ರಹಿಸಿದರು.

ಇವೆಲ್ಲಾ ವಿಷಯಗಳು ನಾಡಿನಾದ್ಯಂತ ಸೋಷಿಯಲ್ ಮೀಡಿಯಾ, ಪತ್ರಿಕಾ ಮಾಧ್ಯಮಗಳ ಮೂಲಕ ವೈರಲ್ ಆದವು. ಅಂತಿಮವಾಗಿ ಪವನ‌ ಮತ್ತು ಕಾನೇರಿಯ ಯುವಪೀಳಿಗೆ ಭಾನುವಾರ ಊರಲ್ಲಿ ಸೇರುವುದೆಂದು ತೀರ್ಮಾನವಾಯಿತು.

ಇತ್ತ ಇವೆಲ್ಲವುದರ ಕ್ಷಣ-ಕ್ಷಣದ ಯಥಾವತ್ ವರದಿ ಮಾಬ್ಲ ಭಟ್ರಿಗೆ ತಲುಪುತ್ತಿತ್ತು. ಕರೋನ ಕಂಪನಿಯ ಸಾಕಷ್ಟು ದುಡ್ಡು ತಿಂದಿದ್ದ ಭಟ್ಟ ಏನಾದರೂ ಒಂದು ಮಾಡಲೇ ಬೇಕಿತ್ತು. ಅವನ ಕಡೆಯಿದ್ದ ಜನರು, ತಮ್ಮ ಮಕ್ಕಳು ಮಾತನ್ನು ಕೇಳುತ್ತಿಲ್ಲವೆಂದು ನಿಧಾನವಾಗಿ ಕರಗತೊಡಗಿದರು.
‘ಈಗ ನನ್ನ ಹತ್ತಿರ ಮೊದಲಿನಷ್ಟು ಜನರು ಇಲ್ಲದಿರಬಹುದು. ಮತ್ತೆ ಸೇರ್ತಾರೆ. ಜನ ಯಾವಾಗ್ಲೂ ಗಾಳಿ ಬೀಸೋ ಕಡೆ. ನೀವು ಯಾವುದಕ್ಕೂ ರೈತರ ಸೋಗಿನಲ್ಲಿ ನೂರಾರು ಜನರನ್ನು ಕಳುಹಿಸಿ. ಕೊನೆಗೆ ಆ ಮೂಲ್ಮನೆ ಮೇಲೆಯೇ ಬ್ರಹ್ಮಾಸ್ತ್ರ ಪ್ರಯೋಗಿಸುತ್ತೇನೆ’.

ಮಾಬ್ಲ ಭಟ್ಟ ಕಂಪನಿಯ ಅಧಿಕಾರಿಯೊಂದಿಗೆ ಮಾತನಾಡಿದ‌. ಜೊತೆಗೆ ಕೆಲವು ರಹಸ್ಯ ಸಂದೇಶಗಳು ಅವನ‌ ಮೊಬೈಲ್ ಗೆ ರವಾನೆಯಾಯಿತು.
**

ಅಂತೂ ಭಾನುವಾರ ಬಂದೇ ಬಿಟ್ಟಿತು. ಬೆಳಗ್ಗೆ ವಾಹನಗಳೊಂದಿಗೆ ಬಂದ ಕಾನೇರಿಯ ಯುವಕ, ಯುವತಿಯರು ತಮ್ಮ ತಮ್ಮ ಮನೆಗಳಿಗೆ ಹೋದರು. ಪವನ ತನ್ನ ಸಹೋದ್ಯೋಗಿಯನ್ನು ಕರೆತಂದಿದ್ದ. ಅವಳ ಜೊತೆ ಮೂಲ್ಮನೆಗೆ ಹೋದ. ಪವನನ ಬರುವಿಕೆಯನ್ನೇ ಕಾಯುತ್ತಿದ್ದ ಹೆಗಡೇರು ಹೊಸ ಉಮೇದಿನೊಂದಿಗೆ ತಯಾರಾಗಿದ್ದರು. ಅರಿವೆ ಕಟ್ಟಿನ ಆರಾಮು ಖುರ್ಚಿಯಲ್ಲಿ ಆಸೀನರಾಗಿದ್ದರು.

‘ಇವರು ನನ್ನ ಅಜ್ಜ’,
‘ಇವಳು ನನ್ನ ಸಹೋದ್ಯೋಗಿ ಸೌಮ್ಯ’.
ಹೆಗಡೇರಿಗೆ ಇಬ್ಬರೂ ಬಾಗಿ ಕಾಲುಮುಟ್ಟಿ ನಮಸ್ಕರಿಸಿದರು.

‘ಅಜ್ಜಯ್ಯ, ಕಾನೇರಿಯ ಸುದ್ದಿ ಇಡೀ ರಾಜ್ಯಾದ್ಯಂತ ಹರಡಿದೆ. ಎಲ್ಲೆಡೆಯಿಂದ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಇಲ್ಲಿಗೆ ಬರುವಾಗ ‘ಹಸಿರು ಸ್ವಾಮಿ’ ಎಂದೇ ಪ್ರಖ್ಯಾತರಾಗಿರುವ ವೃಕ್ಷಾನಂದ ಸ್ವಾಮಿಗಳು ನನ್ನನ್ನು ಸಂಪರ್ಕಿಸಿದ್ದರು. ಸಂಪೂರ್ಣ ವಿಷಯ ತಿಳಿದ ಅವರು, ತಮ್ಮೆಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಇಲ್ಲಿಗೆ ಇನ್ನೇನು ಬರುವವರಿದ್ದಾರೆ. ನಮ್ಮ ಮನೆಯಲ್ಲಿಯೇ ವಸತಿಗೆ ಏರ್ಪಾಡು ಮಾಡಬೇಕು’.
‘ನಮ್ಮ ಭಾಗ್ಯ, ಬರಲಿ… ವಿಘ್ನೇಶ್ವರ ವಕೀಲರೂ ಬರುವರಂತೆ’.

ಸುಮಿತ್ರೆಯ ಕಣ್ಣುಗಳಲ್ಲಿ ಆನಂದಬಾಷ್ಪವಿತ್ತು. ‘ಬನ್ನಿ ಮಕ್ಕಳೇ, ಕುಡಿಯಲ್ಲೆ ಚಾನ, ಕಾಫೀನ, ಕಷಾಯನ, ಬರೀ ಹಾಲ್ನೀರ, ನಿಂಗ ಹೇಳಿದ್ದು‌ ಕಾಸ್ತಿ.. ಆಸ್ರಿಗೆ ತೆಳ್ಳೇವು, ಬಂಡಿ ಇಡ್ತಿ. ಕೈಕಾಲು ಮುಖ ತೊಕ್ಕಳಿ’ ಅಂದಳು.
ಇಬ್ಬರೂ ಅಮ್ಮನ ಕಾಲಿಗೆ ನಮಸ್ಕರಿಸಿ ಒಳಗೆ ಹೋದರು.

ಅಮ್ಮನ ಆರೈಕೆ ಮುಗಿಯುವುದಕ್ಕೂ, ವೃಕ್ಷಾನಂದ ಸ್ವಾಮಿಗಳ ಆಗಮನವಾಗುವುದಕ್ಕೂ ಸರಿಯಾಯಿತು. ಸ್ವಾಮಿಗಳು ತಮ್ಮ ಪರಿವಾರವನ್ನು ದೇವಸ್ಥಾನದಲ್ಲಿಯೇ ಬಿಟ್ಟು ಬಂದು ಏಕಾಂಗಿಯಾಗಿಯೇ ನಡೆದು ಬಂದಿದ್ದರು.

ವೃಕ್ಷಾನಂದರನ್ನು ಸ್ವಾಗತಿಸಿ ಕೈಮುಗಿದು ನೋಡುವಾಗ ಹೆಗಡೇರಿಗೆ ಒಳಗೆ ಕರುಳಿನಲ್ಲಿ ಏನೋ ತಳಮಳ. ಸ್ವಾಮಿಗಳ ಹಸನ್ಮುಖ ಆ ಸಂದಿಗ್ಧತೆಯಿಂದ ಅವರನ್ನು ಬೇಗನೆ ಹೊರ ತರಲು ಸಹಾಯ ಮಾಡಿತು.
ಸ್ವಾಮಿಗಳು ಆಸೀನರಾದ ಮೇಲೆ ಹೆಗಡೇರು ಮತ್ತು ಪವನ ಎದುರಿಗೆ ಕುಳಿತರು. ಸುಮಿತ್ರೆ ಮತ್ತು ಸೌಮ್ಯ ಒಳಮನೆಯಲ್ಲಿದ್ದರು‌.

ಕಾನೂರಿನ ಕುರಿತಾದ ತಮ್ಮ ಪರಿಹಾರವನ್ನು ಇನ್ನೇನು ಬಿಚ್ಚಿಡಬೇಕು ಅನ್ನುವಷ್ಟರಲ್ಲಿ ಕರಿಯ ಬಂದ.
‘ಒಡೆಯಾ, ಒಂದು ಗುಟ್ಟಿನ ಸುದ್ದಿ. ಕಡಿರಾಡಿಗೆ ಬತ್ರಾ’.
‘ಅದೆಂತು, ಇಲ್ಲೇ ಹೇಳು… ಎಲ್ಲಾ ನಮ್ಮವರೆಯಾ’ ಅನ್ನುತ್ತಾ ಸುತ್ತಲೂ ವೃಕ್ಷಾನಂದರತ್ತಲೂ ಕಣ್ಣು ಹರಿಸಿದರು ಹೆಗಡೇರು.

ವೃಕ್ಷಾನಂದರ ಮುಖದಲ್ಲಿ ಸಂತೃಪ್ತಿ, ಕಣ್ಣಲ್ಲಿ ಆರ್ದ್ರತೆ ಗೋಚರಿಸಿದಂತಾಯಿತು.
‘ಅದು… ಒಡೆಯಾ… ಸಣ್ಣ ಹೆಗಡೇರ ಜೊತೆಗೆ ಬಂದ ಹುಡುಗಿ…’
‘ಹೇಳ ಮಾರಾಯ, ಅದೆಂತು ಹೇಳಿ… ಎಲ್ಲ ನಮ್ಮವ್ವೇ..’ ಮತ್ತಷ್ಟು ಒತ್ತಿ ವಿಶ್ವಾಸದಿಂದ ಹೇಳಿದರು.
‘ಆ ಕೂಸು ಹರಿಜನರ ಪೈಕಿದಂತೆ… ಅದರ ಅಣ್ಣ ಆಗಲೇ ಮತಾಂತರ ಆಗಿದ್ನಂತೆ.. ಪವನ ಹೆಗಡೇರು ಈ ಹುಡುಗೀನ ಇಟ್ಕಂಡು ಇದ್ರಂತೆ. ತಮ್ಮ ರೂಮಲ್ಲೇ. ಧರ್ಮಕ್ಕೆ ಅಪಚಾರ ಅಂತ ಮಾಬ್ಲ ಭಟ್ರು ಸುದ್ದಿ ಹಬ್ಸೀರು’…
‘ನಿಲ್ಸು ಕೆರಿಯಣ್ಣ… ನಾನೇ ಹೇಳ್ತೇ…’ ಪವನನ ಧ್ವನಿ ಸ್ಥಿರವಾಗಿತ್ತು. ಸುಮಿತ್ರಾ ಮತ್ತು ಸೌಮ್ಯ ಬಾಗಿಲ ಬಳಿ ಬಂದು ನಿಂತರು.
‘ಅಜ್ಜಯ್ಯ, ನಾನು- ಸೌಮ್ಯ ಲಿವಿಂಗ್‌ ಟುಗೆದರ್ ಸಂಬಂಧದಲ್ಲಿ ಇದ್ಯಾ. ಆರು ತಿಂಗಳಾತು. ಅದು ಈಗೆಲ್ಲಾ ದೊಡ್ಡ ಪಟ್ಟಣದಲ್ಲಿ ಕಾಮನ್. ಈಗ ಇಬ್ಬರು ಪರಸ್ಪರ ಹೊಂದಾಣಿಕೆ ಆಗ್ತು ಹೇಳಿ ತೀರ್ಮಾನಕ್ಕೆ ಬಂದ್ಯ. ಕಂಪನಿ ರಾಮಾಯಣ ಎಲ್ಲಾ ಮುಗಿದ ಮೇಲೆ ಮಾತಾಡವ್ವು ಮಾಡಿದಿದ್ದೆ…’
ಮೌನ ನೋಡಿ… ಮತ್ತೆ ಮುಂದುವರೆದ….
‘ಹೌದು, ಸೌಮ್ಯ ಅದೇ ಜಾತಿಯವಳು. ಜಾತಿ, ಧರ್ಮಗಳ ಮೇಲೆ ಒಡೆಯುವ ನೀಚ ಕೆಲಸಕ್ಕೆ ಇಳಿದರಾ ಭಟ್ಟರು?’…
‘ಹೆಗಡೇರು ಮೌನವಾಗಿ ಎಲ್ಲರ ಕಡೆಯೂ ನೋಡಿದರು. ವೃಕ್ಷಾನಂದರು ಬಾಯಿ ಒಡೆದರು.
‘ಏನಮ್ಮಾ ಸೌಮ್ಯ ನಿನಗೆ ಮದುವೆ ಒಪ್ಪಿಗೆ ಇದೆಯಾ?’

ಹೌದೆಂಬಂತೆ ತಲೆಯಾಡಿಸಿದಳು ಸೌಮ್ಯ. ಸುಮಿತ್ರೆ ಅವಳ ತಲೆನೇವರಿಸಿದಳು.
‘ಇಲ್ಲೇ ಹತ್ತಿರದಲ್ಲಿ ಗಜಲಕ್ಷ್ಮಿಯ ಬನವಂತೂ ಇದೆ. ಅದೇ ಪ್ರಕೃತಿಮಾತೆ- ದೇವರು. ಅದರ ಸನ್ನಿಧಾನದಲ್ಲೇ ಇವತ್ತಿನ ಸಭೆ ಮುಗಿದ ಮೇಲೆ, ಎಲ್ಲರ ಸಮ್ಮುಖದಲ್ಲಿ ಮದುವೆ ಜರುಗಲಿ. ಶುಭಸ್ಯ ಶೀಘ್ರಂ.’
‘ಕೆರಿಯಪ್ಪನವರೇ, ನಾನು ನೀನು‌ ಹೆಣ್ಣಿನ ಕಡೆಯವರು. ನೀವು ಹೋಗಿ ದೇವಸ್ಥಾನದ ಎದುರಿನ ಅಂಗಡಿಯಿಂದ ಹಾರ, ಹೂವು, ಹಣ್ಣುಗಳನ್ನು ತಂದು ವ್ಯವಸ್ಥೆ ಮಾಡಿ’
ಕೆರಿಯ ಹೆಗಡೇರ ಮುಖ ನೋಡಿ ಸಮ್ಮತಿಯ ಮುದ್ರೆ ಸಿಕ್ಕಿ ಓಡಿದ.

‘ಸುಮಿತ್ರಮ್ಮ ನೀವು ಮದುಮಗಳನ್ನು ಸಿಂಗರಿಸಿ, ಸೊಸೆಗೊಂದು ರೇಷ್ಮೆ ಸೀರೆ ಕೊಡಿ. ಹಾಗೇ ನೀವೂ ಸಿದ್ಧರಾಗಿ. ಮಗನ ಮದುವೆ.’
‘ಹೆಗಡೇರಂತೂ ಎಲ್ಲಾ ಗೊತ್ತಿದ್ದವರ ಹಾಗೆ ಸಿದ್ಧರಾಗಿ ಕುಳಿತಿದ್ದಾರೆ. ಪವನ ನೀನೂ….’ ಅಂತ ವೃಕ್ಷಾನಂದರು ಒಳಗಡೆ ಕೈ‌ ತೋರಿಸಿದರು.

ಊಟವಾದ ಮೇಲೆ, ಒಬ್ಬನನ್ನು ಮನೆಗಾವಲಿಗೆ ಇರಲು ಹೇಳಿ, ಎಲ್ಲರೂ ದೇವಸ್ಥಾನಕ್ಕೆ ಸಭೆಗೆ ತೆರಳಿದರು. ಮೊದಲೇ ಅಲ್ಲಿ ಹಾಜರಿದ್ದ ಯುವತಂಡ ವೇದಿಕೆಯ ಮೇಲೆ ಮಧ್ಯದಲ್ಲಿ ಹೆಗಡೇರಿಗೆ ಸ್ಥಾನವನ್ನು ಕಾಯ್ದಿರಿಸಿತ್ತು. ಆಚೀಚೆ ಮಾಬ್ಲ ಭಟ್ರು ಮತ್ತು ವಕೀಲರು.

ಮಾಬ್ಲ ಭಟ್ಟರು ರೈತರ ಸೋಗಿನಲ್ಲಿ ಹಲವು ಜನರ ದಂಡು ಕಟ್ಟಿಕೊಂಡು ಗದ್ದಲವೆಬ್ಬಿಸುತ್ತಾ ಬಂದರು. ವೃಕ್ಷಾನಂದರು ತಮ್ಮ ಪರಿವಾರದವರೊಡನೆ ಬಂದು ತಮ್ಮ ಪೀಠದಲ್ಲಿ ವೇದಿಕೆಯಲ್ಲಿ ಸಭೆಯ ಅಘೋಷಿತ ಅಧ್ಯಕ್ಷರಾಗಿ ಆಸೀನರಾದರು.

ಕ್ಷಣ-ಕ್ಷಣದ ವರದಿ ಪಡೆದಿದ್ದ ಮಾಬ್ಲ ಭಟ್ರಿಗೆ, ಬದಲಾದ ಸಂದರ್ಭದಲ್ಲಿಯೂ‌ ಏನೂ ಮಾಡಲು ಸಾಧ್ಯವಿಲ್ಲ ಎಂಬುದು ಮನವರಿಕೆಯಾಗಿದ್ದರೂ ಕೂಡ, ಸಾಗರದಿಂದ ಹೆಗಡೇರ ಮಗಳು ಕಮಲಾಕ್ಷಿ ಮತ್ತು ಅವಳ ಸಂಸಾರವನ್ನು ಆಸ್ತಿಯ ಬಟವಾಡೆಗೆಂದು ಕುಮ್ಮಕ್ಕು ಕೊಟ್ಟು ಕರೆಸಿದ್ದರು. ವೇದಿಕೆಯೇರುವ ಮುನ್ನ ಕಮಲಾಕ್ಷಿ ಹೆಗಡೇರ ಬಳಿ ಬಂದು ತನ್ನ ಭಾಗದ ಜಮೀನು ಕೊಟ್ಟು ಮುಂದಿನ ಮಾತು ಎಂದಳು. ಮಗಳು ಮನೆಗೂ ಬಾರದೆ, ಊರವರ ಮುಂದೆ ಹೀಗೆ ಅಂದಿದ್ದು ಹೆಗಡೇರಿಗೆ ನುಂಗಲಾಗದ ಬಿಸಿ ತುಪ್ಪವಾಯಿತು. ಅಂತೂ ಪವನನ ಮಧ್ಯಸ್ಥಿಕೆಯಲ್ಲಿ ಕಮಲಾಕ್ಷಿ ಮತ್ತು ವಿಶಾಲಾಕ್ಷಿ ಅತ್ತೆಯಂದಿರಿಗೂ ಸರಿಸಮನಾಗಿ ಆಸ್ತಿಯ ಬದಲು ಬಂಗಾರದ ಬೆಲೆ ಕೊಟ್ಟು ಹೆಗಡೇರು ಋಣಮುಕ್ತರಾದರು. ಈ ಸಭೆಯ ನಂತರ ಮೂಲ್ಮನೆಯಲ್ಲಿ ಅದರ ಮಾತುಕತೆ ಸೌಹಾರ್ದಯುತವಾಗಿ ಆಗಲಿ ಎಂದಿದ್ದಕ್ಕೆ ಮಗಳು ಒಪ್ಪಿಕೊಂಡಳು.

ಭಟ್ಟರ ಒಂದು ತಂತ್ರ ಫಲಿಸಲಿಲ್ಲವಾದರೂ ಹಾರಾಟ ಕಡಿಮೆಯಾಗಲಿಲ್ಲ. ಅವರ ಆ ಗುಂಪು ಊರಜನರ ನಡುವೆ ಜಾತಿಯಿಂದ ಒಡೆಯುವ ಕೆಲಸಕ್ಕೆ ನಿಂತಿತ್ತು. ಮಾತಿನ ಗದ್ದಲವೇ ಜೋರಾಯಿತು.
ವೃಕ್ಷಾನಂದರು ಮತ್ತೆ ಮೌನ ಸರಿಸಿದರು.

“ಸಭ್ಯರೇ, ವಿಷಯಗಳ ಪರಾಮರ್ಶೆಯಾಗಲಿ. ಶಾಂತಿಯುತ ಸಭೆಗೆ ಆಸ್ಪದ ಕೊಡಿ” ಅವರ ಗಂಭಿರ ಮಾತು ಪರಿಣಮಿಸಿತು.

ಹೆಗಡೇರು ಎದ್ದು ನಿಂತು ಸಭೆಗೆ ವಂದಿಸಿ, ‘ನಮ್ಮೂರು ಇವತ್ತು ನಿಜವಾಗಿ ಊರಾಯಿತು‌. ಬರೀ ಸಾವನ್ನು ಎದುರು ನೋಡುತ್ತಾ ಕಾಲಯಾಪನೆ ಮಾಡುವ ನನ್ನಂತಹ ವೃದ್ಧರ ವಾಸವಾಯಿತಲ್ಲ ಅನ್ನುವ ಕೊರಗು, ಇಂದು ದೂರಾಯಿತು. ನಮ್ಮ ಊರಿನ‌ ಯುವ ಪೀಳಿಗೆ ಕುಡಿ ಚಿಗುರಿ, ಊರಿನ ಭೂಮಿ, ಮನೆ, ಒಕ್ಕಲುತನ ಮುಂದುವರೆಯುತ್ತದೆ ಎಂಬ ನಂಬಿಗೆ ಬಂದಿದೆ. ಇಷ್ಟು ಸಾಕು ನನ್ನಂತಹ ಎಲ್ಲಾ ಇಳಿಜೀವಕ್ಕೆ. ಇನ್ನು ಕಂಪನಿಯ ವಿಷಯವಾಗಿ ಮುಂದಿನ ವಿವರವನ್ನು ಪವನ ಹೇಳುತ್ತಾನೆ.’ ಅನ್ನುತ್ತಾ ಕಣ್ಣು ತುಂಬಿಕೊಂಡು, ಕೈ‌ಮುಗಿದು ಕುಳಿತರು‌.

ಪವನ ಮಾತು ಶುರು ಮಾಡಿದ. ‘ನೋಡಿ ಮಹಾಜನರೇ, ಕಂಪನಿಯವರು ಸಿದ್ಧಪಡಿಸಿರುವ ಕಾಗದ ಪತ್ರಗಳಲ್ಲಿ ಕೆಲವು ಅಂಶಗಳು ಭವಿಷ್ಯದಲ್ಲಿ ಅನಾಹುತಕಾರಿ ಆಗಬಹುದಾಗಿವೆ. ಗೊತ್ತಿಲ್ಲದಂತೆ ನಮ್ಮ ಸ್ವಾತಂತ್ರ್ಯವನ್ನು ಕಸಿದ ಈಸ್ಟ್ ಇಂಡಿಯಾ ಕಂಪನಿಯಂತೆ ಇದು. ಒಟ್ಟಾರೆ ಕಾರ್ಪೋರೇಟ್ ಫಾರ್ಮಿಂಗ್ ನಂತೆಯೇ ಈ ಕಂಟ್ರಾಕ್ಟ್ ಫಾರ್ಮಿಂಗ್. ಇದರ ಬಗ್ಗೆ ಹೇಳುವುದಾದರೆ ಗುಂಪಿನಲ್ಲಿ ಬಲಿಯನ್ನು ಹರಕೆಗೆ ಒಪ್ಪಿಸಿದಂತೆ‌. ನಮ್ಮದೇ ಜಮೀನಾದರೂ, ಭೂಮಿ ಮತ್ತು ಕೃಷಿಗೆ ಸಂಬಂಧಿಸಿದ ನಿರ್ಧಾರಗಳನ್ನು ನಾವು ತೆಗೆದುಕೊಳ್ಳುವಂತಿಲ್ಲ. ಸಂಸ್ಕರಣೆ, ಮಾರಾಟ, ಮಾರುಕಟ್ಟೆ ಪ್ರತಿಯೊಂದೂ ಕಂಪನಿಯ ನಿರ್ಧಾರ. ಭೂಮಿಯಿಂದ ಕೃಷಿ ಮಾಡಿ ನಾವು ಉಣ್ಣಬೇಕು ನಿಜ. ಆದರೆ ಹಣ ಬೆಳೆಯಲೆಂದೇ ಭೂಮಿಯನ್ನು ಉತ್ತಬೇಕು ಅನ್ನುವ ನಿಯಮವಾದರೆ? ಈ ರೀತಿಯ ಹೇರಿಕೆಗಳು ವ್ಯಕ್ತಿ, ಮನೆ, ಊರಿನ ಸ್ವಾತಂತ್ರ್ಯವನ್ನು ತಡೆಹಾಕುವುದು ಖಚಿತ. ಅಷ್ಟೇ ಅಲ್ಲ, ನಮ್ಮತನ ನಮಗರಿವಿಲ್ಲದಂತೆ ಕೊನೆಯಾಗುತ್ತದೆ. ನಾವು ಈ ಊರಿನ ಯುವಸಮೂಹ ಮೊದಲೇ ಚರ್ಚಿಸಿದಂತೆ ಕೊ-ಆಪರೇಟಿವ್ ಫಾರ್ಮಿಂಗ್ ಮಾಡೋಣ. ಭೂಮಿಯನ್ನು ಗೇಯುವ ಮಾನವ ಸಂಪನ್ಮೂಲ ಕಡಿಮೆಯಾಗಿಲ್ಲ. ಊರಲ್ಲಿ ಯುವಜನಸಂಖ್ಯೆ ಕಡಿಮೆಯಿಲ್ಲ. ಆದರೆ, ಒಂದು ಸಹಕಾರ, ವ್ಯವಸ್ಥೆ, ಸಂಪರ್ಕ, ಒಗ್ಗಟ್ಟಿನ ಕೊರತೆ ಅಷ್ಟೇ. ಒಬ್ಬರೇ ನಡೆದರೆ ಬೇಗ ತಲುಪಬಹುದಾದ ಮಾರ್ಗವನ್ನು ಒಟ್ಟಾಗಿ ಕ್ರಮಿಸೋಣ‌. ಹಾಯಾಗಿ, ಹಗುರವಾಗಿ, ಸುಗಮವಾಗಿ ಇನ್ನೂ ಮುಂದೆ ಮುಂದೆ ಹೋಗಬಹುದು.

ಮೂಲತಃ ಚಿಂತನೆ ಮಾಡಿದರೆ ಕೃಷಿಕರೇ, ಕೃಷಿಯಿಂದಲೇ, ಕೃಷಿಗಾಗಿಯೇ ಎಲ್ಲಾ ಉದ್ಯೋಗ ಸೃಷ್ಟಿಯಾಗುವುದು. ಕಾಡಲ್ಲಿ ಅಲೆಮಾರಿಯಾಗಿದ್ದ ಮನುಷ್ಯ ಊರು ಕಟ್ಟಿ ಒಂದೆಡೆ ನೆಲೆ ನಿಲ್ಲಲು ಕಾರಣ ಭೂಮಿಯ ಉಳುಮೆ ಅಥವಾ ಕೃಷಿ ಮಾಡುತ್ತಾ ಊರು ಕಟ್ಟಿದ…. ಅಲ್ಲವೇ?…. ಇದು ಮನುಷ್ಯ, ಸಮಾಜವೆಂಬ ವ್ಯವಸ್ಥೆಗೆ ಹಾಕಿಕೊಂಡ ಪರಿಧಿ. ಈ ಪರಿಧಿಯಲ್ಲಿಯೇ ಪ್ರತೀ ಪೀಳಿಗೆಯು ಬದುಕಬೇಕು. ತಾಯ್ನೆಲವನ್ನು ಬಿಟ್ಟು ದೂರ ಹೋಗುವ ನಾಗಾಲೋಟದ ಬದುಕು ಅಲೆಮಾರಿಗಳನ್ನಾಗಿಸುತ್ತದೆ ಅಷ್ಟೇ…

ಈಗಾಗಲೇ, ನಮ್ಮ ಕಾರ್ಯಕರ್ತರು ಮನೆ-ಮನೆಗೂ ತೆರಳಿ ಮಾಹಿತಿ ನೀಡುವ ಕೆಲಸ ಮಾಡುತ್ತಿದೆ. ಎಲ್ಲರೂ ಒಪ್ಪಿದ್ದೀರಿ. ಸಹಕರಿಸಿಕೊಂಡು ಊರಿನಲ್ಲಿ ಮುಂದುವರೆಯೋಣ. ಯುವಕರು ಗ್ರಾಮಗಳತ್ತ ಮುಖಮಾಡುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆ.’ ಅನ್ನುತ್ತಾ ಕೈ ಮುಗಿದು ಕುಳಿತ.

ವಕೀಲರು ಇದಕ್ಕೆ ಸಂಬಂಧಿಸಿದ ಕಾನೂನಿನ‌ ವಿಷಯವನ್ನು ಮಾತಾಡಿ, ಸಹಕಾರಿ ತತ್ವಕ್ಕೆ ಸಂಪೂರ್ಣ ಬೆಂಬಲವಿತ್ತು ಪ್ರೋತ್ಸಾಹಿಸಿ ಮಾತು ಮುಗಿಸಿದರು.

ಕೊನೆಯದಾಗಿ ವೃಕ್ಷಾನಂದರು ಅಂದಿನ ಸಭೆಗೆ, ಸಂದರ್ಭಕ್ಕೆ ಇತಿಶ್ರೀ ಇತ್ತರು.
“ಸಹೃದಯರೇ, ಸನ್ಯಾಸಿಯಾಗಲಿ, ಸಂಸಾರಿಯಾಗಲಿ ಮನುಷ್ಯನ ಮೂಲ ಕರ್ತವ್ಯ ಸಮಾಜವ್ಯವಸ್ಥೆಯ ಈ ನಿರಂತರ ಚಕ್ರದಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದು. ಆಗಲೇ ನಮ್ಮ ಭೂಮಿಯ ಋಣ, ಪಿತೃಋಣ, ದೇವ ಋಣಗಳು ಸಂದಾಯವಾದೀತು. ಇಂದಿನ ನಿಮ್ಮ ಈ ಹೆಜ್ಜೆ ಮುಂದೆ ಬರುವ ಸಂತತಿಗಳಿಗೆ ಮಾರ್ಗದರ್ಶಕ.
ಕೊನೆಯದಾಗಿ ಇಂದು ಸಭೆಗೂ ಮುಂಚೆ ತಮ್ಮಲ್ಲೇ ಚರ್ಚೆಗೆ ಒಳಗಾದ ಅಂತರ್ಜಾತಿಯ ವಿವಾಹದ ಬಗ್ಗೆ ಒಂದು ದೃಷ್ಟಿಕೋನ. ನನ್ನ ಪ್ರಕಾರ ಇರುವುದು ಒಂದೇ ಧರ್ಮ. ಅದು ಮಾನವ ಧರ್ಮ. ಹೆಣ್ಣು- ಗಂಡು ಎಂಬ ಎರಡು ಜಾತಿಗಳಷ್ಟೇ. ಪ್ರಕೃತಿಮಾತೆಯೇ ದೇವರು. ಇದು ನನ್ನ ಆಚರಣೆ‌ ಮತ್ತು ಸಿದ್ಧಾಂತ ಕೂಡಾ. ಪವನ ಮತ್ತು ಸೌಮ್ಯ ಮದುವೆಯಾಗಲು ಎಲ್ಲರೂ ಒಪ್ಪಿ ಹಾರೈಸಿ.” ಎಂದು ಆಸೀನರಾದರು.
ಹೀಗೆ ಗಜಲಕ್ಷ್ಮಿಯ ಎದುರು ಹಾರ ಬದಲಿಸಿಕೊಂಡು ದಂಪತಿಗಳಾದರು ಪವನ -ಸೌಮ್ಯ. ಉಳಿದವರು ಅವರ ಮೇಲೆ ಹೂವಿನೆಸಳುಗಳ ಹಾಕಿದರು. ಹೆಗಡೇರು ಎರಡು‌ ಬಂಗಾರದ ಸರಗಳನ್ನು ತೆಗೆದು ಇಬ್ಬರ ಕೈಗೂ ಕೊಟ್ಟು ಪರಸ್ಪರ ಹಾಕಿಕೊಳ್ಳುವಂತೆ ಸೂಚಿಸಿದರು. ಸಭೆಯು ಸರ್ವಸಮ್ಮತವಾದಾಗ ಮಾಬ್ಲಭಟ್ಟರು ವಿಧಿಯಿಲ್ಲದೆ ತಟಸ್ಥರಾದರು. ಎಲ್ಲರೂ ಮನೆಯತ್ತ ಹೊರಟರು.

ಹೆಗಡೇರು ಬದುಕಿನಲ್ಲಿ ತಾನು ಪರಿ ಪರಿಯಾಗಿ ಧಾವಿಸಿದ್ದಕ್ಕೆ ಇಂದು ಒಂದು ಸ್ಥಗಿತವೇನೋ ಅಂದುಕೊಂಡರು. ಅಲ್ಲಿ ಮೊಮ್ಮಗನ ರೂಪದಲ್ಲಿ ತಾನು ಮುಂದುವರೆಯುವ ಖಾತ್ರಿ ಅವರೊಳಗೆ. ವಂಶವೆಂಬ ಚಕ್ರ ಇದೇ ಮಣ್ಣಲ್ಲಿ, ಊರಲ್ಲಿ ಚಿರಂತನವಾಗಿ ಸುತ್ತುತ್ತಿರಲಿ ಎಂಬ ಆಶಯ ಹೊತ್ತು ದಾಪುಗಾಲು ಇಡುತ್ತಿದ್ದರು.
ಮಾವನವರ ಜೊತೆಗೆ ಸಮನಾಗಿ ಹೆಜ್ಜೆ ಹಾಕುತ್ತಿದ್ದ ಸುಮಿತ್ರೆಗೆ ಹೆಗಡೇರು ಸಣ್ಣ‌ಧ್ವನಿಯಲ್ಲಿ ಹೇಳಿದರು.
‘ಪಚನಶಕ್ತಿ ಕಡಿಮೆ ಆಗ್ತಾ ಇದ್ದು. ನಂಗೆ ಸಾಕು ಇನ್ನು ಒಪ್ಪತ್ತು ’
ಪರಿಧಾವನದ ಪರಿಧಿಯನ್ನು ಬೇರೆಯ ಅಸ್ತಿತ್ವದತ್ತ ಸರಿಸುವ ತಯಾರಿಗಾಗಿ..
ಸುಮಿತ್ರಾ ಅವರನ್ನು ಹಿಂಬಾಲಿಸಿದಳು.

***

Leave a Reply