ಕಾಡ್ಗಿಚ್ಚಂತೆ ಹಬ್ಬುವ ನಿನ್ನ ನೆನಪು..

ಮುಕ್ತಿಸಿಗದ ನೆನಪುಗಳಲ್ಲಿ

ಯಾವುದೋ ಗುರುತಿಲ್ಲದ ದಾರಿಯೊಳಗೆ ನಾ ನಡೆಯುವಾಗ
ದೂರದಲ್ಲೆಲ್ಲೂ ನೆಟ್ಟ ಕಂಬದ
ಬೆಳಕು ನನ್ನನ್ನೆ ನೋಡುತ್ತಿತ್ತು..
ಮುಂದೆ ಸಾಗಬೇಕು ಎಂದು ನಡೆಯುತಿರುವಾಗ
ಆ ಕವಲೊಡೆದ ದಾರಿಗಳು
ಯಾವ ಹಾದಿಯ ಆರಿಸಿಕೊಳ್ಳುವೆನೆಂದು
ಆಶ್ಚರ್ಯಚಕಿತವಾಗಿ ಕಾಯುತ್ತಿದ್ದವು..
ದಾರಿಗಂಟಿಕೊಂಡು ಸಂಗಾತಿಯಾಗಿದ್ದ
ಮೈಲು ಗಲ್ಲುಗಳು ಬಿಟ್ಟ ಕಣ್ಣ ಬಿಟ್ಟಂತೆ ನನ್ನನ್ನೆ ನೋಡುತ್ತಿದ್ದವು..!

ದೂರವಾದ ಮನಸುಗಳ ನಡುವೆ ಮೌನ ಸಾಗರ ಹಾಸಿಕೊಂಡು ಬಿದ್ದಿರುವಾಗ..
ಮೌನ ಸಾಗರದಲ್ಲಿ ಮಾತಲ್ಲದ ಮಾತಿನ ತರಂಗಗಳು ಒಂದರ ಹಿಂದೊಂದು ಒಂದರಂತೆ ಅಪ್ಪಳಿಸುತ್ತಿವೆ.. ನಿಶ್ಯಬ್ದದ ರಾತ್ರಿಯಲಿ ಆ ಮಾತಿನ ಚಕಮಕಿಯು ಕಿವಿಗಡಚಿಕ್ಕುವಂತೆ ನನಗಷ್ಟೇ ಕೇಳುತಿದೆ..!

ನುಚ್ಚುನೂರಾದ ಮನಸು
ಪದೆ ಪದೇ ಕಾಡುವ ಆ ನಿನ್ನ ಕನಸು.. ಹುಡುಕುಡುಕಿ ಬಚ್ಚಿಟ್ಟರು ಕಾಡ್ಗಿಚ್ಚಂತೆ ಹಬ್ಬುವ ನಿನ್ನ ನೆನಪು.. ಮುಖದ ಮೇಲಿನ ಕಣ್ಣೀರಿನ ಛಾಪು..
ಇದೆಲ್ಲಾ ಇರುವಾಗ ನೆಟ್ಟ ಕಂಬದ ಬೆಳಕು, ದಾರಿಗಂಟಿಕೊಂಡು ಕೂತ ಮೈಲಿಗಲ್ಲು ನೋಡುವುದರಲ್ಲಿ ಆಶ್ಚರ್ಯವೇನಿಲ್ಲ..!

ನೀ ಮರೆತೆ..! ನಾ ಮರೆತಂತೆಯಾದರೂ ನಟಿಸಬೇಕಿದೆ..! ಆ ನಟನೆಯಲ್ಲು ಕಾಡುವ ಹಳೇ ನೋವು.. ಹೃದಯಕ್ಕೆ ಕೊಟ್ಟಂತೆ ಇನ್ನಷ್ಟು ವಿರಹದ ಕಾವು..!

ಸುಮ್ಮನೆ ನಿಂತು ಬಿಡಲೆ..!?
ತಿರುಗಿಯಂತು ಹೋಗಲಾರೆ..
ಹೋದರೂ ನೀ ಸಿಗಲಾರೆ..!
ನೀ ಪರಿಚಿತವಿದ್ದ ದಾರಿಗಿಂತ..
ನೀನಿಲ್ಲದ ಅಪರಿಚಿತ ದಾರಿಯಲ್ಲೇ ನಾ ಸಾಗಿಬಿಡಬೇಕಿದೆ..!
ಅಲ್ಲಾದರೂ ನಿನ್ನ ನೆನಪುಗಳಿಂದ ಮುಕ್ತಿ ಸಿಗಬಹುದೇನೆಂದು..!

Leave a Reply