ಓಹ್! ಜಾಲಾರದ ಹೂವೇ..

ಜಾಲಾರ ಹೂ ಈಗ ಮಾಯಾಕಾರನಂತಾಗಿದೆ. ಜಾಲಾರ ಹೂ ಬಗೆಗಿನ ಪ್ರಬಂಧ ಓದಿದ ತುಮಕೂರಿನ ಸಾಹಿತಿಗಳು ಅದನ್ನು ನೋಡಲೇಬೇಕೆಂದು ಪಣ ತೊಟ್ಟರು. ದೇವರಾಯನದುರ್ಗದ ಕಾಡನ್ನೆಲ್ಲಾಅಲೆ ದು ಜಾಲಾರ ಹೂ ಘಮ ಹೊತ್ತುತಂದರು.

ಅದನ್ನು ಡಾ ಶ್ವೇತಾರಾಣಿ ಅವಧಿಗೆ ಬರೆದದ್ದೂ ಆಯ್ತು. ಅದು ಇಲ್ಲಿದೆ.

ಈಗ ಎಂ ಆರ್ ಕಮಲ ಅವರ ಸರದಿ. ಜಾಲಾರ ಹೂವಿನ ಬಗ್ಗೆ ತಮ್ಮ ಬಾಲ್ಯದ ನೆನಪಿನ ಎಳೆ ಹಿಡಿದು ಅವರೂ ದೇವರಾಯನದುರ್ಗ ಹೊಕ್ಕಿಯೇಬಿಟ್ಟರು.

ಇಲ್ಲಿದೆ ಆ ಅನುಭವ. ಓದಿ-

 

‘ಜಾಲಾರದ ಹೂ’ ಜಾಲದಲ್ಲಿ!

ಎಂ ಆರ್ ಕಮಲ

`ಶಿವರಾತ್ರಿ’ಯ ಸಮಯದಲ್ಲಿ ತುಮಕೂರಿನ ಲೇಖಕಿಯರು `ಜಾಲಾರ ತೋಪು’ ನೋಡಲು ದೇವರಾಯನದುರ್ಗಕ್ಕೆ ಹೋಗಿದ್ದು, ಕೈ ತುಂಬ ಎಲೆಸಹಿತವಾದ ಹೂಗಳನ್ನು ಹಿಡಿದು ಸಂಭ್ರಮಿಸುತ್ತ ಭಾವಚಿತ್ರಗಳನ್ನು ತೆಗೆಸಿಕೊಂಡಿದ್ದು, ನೃತ್ಯವಾಡಿದ್ದು ಸಹಜವಾಗಿಯೇ ನನ್ನ ಮನಸ್ಸಿಗೆ ಮುದ ಕೊಟ್ಟಿತ್ತು.

ಅದಕ್ಕೆ ಕಾರಣವೂ ಇದೆ. ನನ್ನ ಬಾಲ್ಯಕ್ಕೆ ಒಂದು ಘಮವನ್ನು ಕೊಟ್ಟ ಈ ಜಾಲಾರ ಎಂಬ ‘ಗೊಂಚಲುಹೂ’ಗಳಿಗೆ ಕಣ್ಣುಕುಕ್ಕುವ ಬಣ್ಣವೇನು ಇಲ್ಲ. ಅವು ಆಕರ್ಷಕವೂ ಅಲ್ಲ. ಹೂವಿನ ಹೊರರೂಪವನ್ನು ಮೀರಿದ ಅಂತಃಸತ್ವವಾದ ಪರಿಮಳದ ಗುಣದಿಂದಲೇ ನನ್ನನ್ನು ಅಂದು ಇಂದೂ ಹಿಡಿದಿಟ್ಟಿದೆ.

ಚಿಕ್ಕ ವಯಸ್ಸಿನಲ್ಲಿ ಮೇಟಿಕುರ್ಕೆಯ ತೋಟದಲ್ಲಿ ಸುತ್ತುವಾಗ ದೂರದಲ್ಲಿ ಕಾಣುತ್ತಿದ್ದ ‘ಸಿದ್ಧರ ಗುಡ್ಡ’ವನ್ನು ಅಣ್ಣ ತೋರಿಸುತ್ತಿದ್ದರು. ಆ ಗುಡ್ಡವನ್ನು ಹತ್ತಿ ಅಲ್ಲೇನಿದೆ ಎಂಬುದನ್ನು ನೋಡುವ ಬಯಕೆ ಅಪಾರವಾಗಿದ್ದರೂ, ಅದು ಇಂದಿಗೂ ಈಡೇರಿಲ್ಲ.

ಹಿಂದೆ ಅಲ್ಲಿರುವ ಗುಡ್ಡ, ಗವಿಗಳಲ್ಲಿ ಸಿದ್ಧರು ವಾಸಿಸುತ್ತಿದ್ದರಂತೆ! ಜಾತ್ರೆಯ ಸಮಯವನ್ನು ಬಿಟ್ಟು , ಉಳಿದ ದಿನಗಳಲ್ಲಿ ಅಷ್ಟು ಹತ್ತಿರವಿದ್ದರೂ ಆ ಗುಡ್ಡವನ್ನು ಯಾರೂ ಹತ್ತಲು ಹೋಗುತ್ತಿರಲಿಲ್ಲ. ಅಲ್ಲಿ ದರೋಡೆ ಮಾಡುತ್ತಾರೆ, ಒಂಟಿ ಸಿಕ್ಕವರನ್ನು ಹಿಂಸಿಸುತ್ತಾರೆ ಎಂದೆಲ್ಲ ಕತೆಗಳು ಪ್ರಚಲಿತವಿದ್ದವು.

ಹಾಗೆ ನೋಡಿದರೆ ನಮ್ಮೂರ ಸುತ್ತ ಮುತ್ತ ಅನೇಕ ಗುಡ್ಡಗಳಿದ್ದವು. ಅವನ್ನು ಜನರು ಮಲ್ಟಿ (ಮೊರಡಿ) ಎನ್ನುತ್ತಿದ್ದರು. ಆ ಗುಡ್ಡಗಳನ್ನು ಹತ್ತಿ ಬಂದ ಜನರು ಹೇಳುವ ಕತೆಗಳಿಗೆ ಮೈಯೆಲ್ಲಾ ಕಿವಿಯಾಗಿಸಿ ಜಗುಲಿಯಲ್ಲಿ ಕೂತಿರುತ್ತಿದ್ದೆ. ನಾನೆಂದೂ ಕಣ್ಣಾರೆ ನೋಡಿರದಿದ್ದ ನವಿಲುಗಳು ನೂರಾರು ಇವೆಯೆಂದು ಹೇಳುತ್ತಿದ್ದರು. ಸದಾ ಕಾಲ ಅಲ್ಲಿ ಚಿರತೆಗಳು ಓಡಾಡುತ್ತವೆ ಎಂದು ಬೇರೆ ಹೆದರಿಸುತ್ತಿದ್ದರು. ಹೆಣ್ಣುಮಗಳೊಬ್ಬಳನ್ನು ಅತ್ಯಾಚಾರ ಮಾಡಿದ ವಿಕಾರ ಪ್ರಸಂಗವು ಅಲ್ಲಿ ಸೇರಿತ್ತು.

ಈ ಎಲ್ಲ ಕಾರಣದಿಂದ ಸಿದ್ಧರ ಗುಡ್ಡವನ್ನು ಕಾಣುವ ಕನಸು ಕನಸಾಗಿಯೇ ಉಳಿಯಿತು. ಆದರೆ ಪ್ರತಿ ವರ್ಷ ಸಿದ್ಧರಗುಡ್ಡದಲ್ಲಿ ನಡೆಯುತ್ತಿದ್ದ ಜಾತ್ರೆಗೆ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ಧಮ್ಮ ಹೋಗುತ್ತಿದ್ದಳು. ಬರುವಾಗ ಅವಳು ಹೊತ್ತು ತರುತ್ತಿದ್ದ ಬಿದಿರಿನ ಬುಟ್ಟಿಯನ್ನು ನೋಡಲು ಕಾತರಳಾಗಿರುತ್ತಿದ್ದೆ.

ಆ ಬುಟ್ಟಿ ಮೊದಲು ಬರುತ್ತಿದ್ದುದೇ ನಮ್ಮ ಮನೆಗೆ! ಅದರಲ್ಲಿ ಬಣ್ಣಬಣ್ಣದ ಬೆಟ್ಟ ತಾವರೆಗಳಿರುತ್ತಿದ್ದವು. ಅದು ಯಾರಿಗೂ ಕಾಣದಂತೆ ಮೇಲೆ ಜಾಲಾರದ ಹೂಗಳನ್ನು ಸಿದ್ಧಮ್ಮ ಮುಚ್ಚಿ ತರುತ್ತಿದ್ದಳು. ಓಣಿಯಲ್ಲಿ ಸಿದ್ಧಮ್ಮ ಬರುತ್ತಿದ್ದಾಳೆ ಎಂದರೆ ಸಾಕು ಜಾಲಾರದ ಘಮ ಮೂಗಿಗೆ ಬಡಿಯುತ್ತಿತ್ತು. ಆ ವಯಸ್ಸಿಗೆ ಸಹಜವಾಗಿ ಬೆಟ್ಟ ತಾವರೆಗಳೇ ನನ್ನ ಆಯ್ಕೆಯಾಗಿದ್ದರು ಎದೆಯಲ್ಲಿ ಉಳಿದಿದ್ದು ಮಾತ್ರ ಜಾಲಾರವೇ!

ಮೊನ್ನೆ ತುಮಕೂರಿನ ಹೆಣ್ಣುಮಕ್ಕಳು ಜಾಲಾರ ತೋಪಿಗೆ ಲಗ್ಗೆ ಹಾಕಿ ಕೊಂಬೆಗಳನ್ನು ಕೈಯಲ್ಲಿ ಹಿಡಿದು ಖುಷಿಪಟ್ಟರಲ್ಲ. ಅದನ್ನು ನೋಡಿ ನೆನಪಿಗೆ ಬಂದಿದ್ದು ಮಾತ್ರ ಪಂಪನ ಆದಿಪುರಾಣದ ಒಂದು ಭಾಗ. ಭರತನ ಅಂತಃಪುರದ ಸ್ತ್ರೀಯರು ವನವಿಹಾರಕ್ಕೆ ಹೋಗಿ, ಗಿಡ, ಮರ, ಹೂ, ಹಣ್ಣು, ಕಾಯಿಗಳನ್ನೂ ಹರಿದು,ಮುಡಿದು, ತಿಳಿಯಾದ ಸರೋವರದ ನೀರನ್ನು ಕಲಕಿ ಸಂಭ್ರಮಿಸಿ, ಕೊನೆಗೆ ತಮ್ಮ ತಪ್ಪಿನ ಅರಿವಾಗಿ ಪ್ರಕೃತಿಯೊಂದಿಗೆ ಮಾತಾಡಿ ತಾವು ಮಾಡಿದ ತಪ್ಪಿಗೆ ಕ್ಷಮೆ ಕೇಳುವ ಪ್ರಸಂಗ. ನಿಸರ್ಗದೊಂದಿಗೆ ಮಾತಾಡುವ, ಸಂವಾದ ಮಾಡುವ ಈ ಸೂಕ್ಷ್ಮ ಮನಸ್ಸಿನ ಹೆಣ್ಣುಮಕ್ಕಳ ವರ್ತನೆ ಅದೆಷ್ಟು ಅಪರೂಪವಾದದ್ದು.

ಬಂಡೀಪುರದ ಅರಣ್ಯಕ್ಕೆ ಬೆಂಕಿ ಹಾಕುವ ಮನಸ್ಥಿತಿಯವರಲ್ಲ ಈ ಹೆಣ್ಣುಮಕ್ಕಳು. ಅಗ್ನಿಯಂತೆ ತನ್ನ ಹಸಿವಿಗಾಗಿ ಖಾಂಡವ ವನವನ್ನು ಉಂಡವರೂ ಅಲ್ಲ. ಅರ್ಜುನನಂತೆ ತಾನು ಕೊಟ್ಟ ಮಾತಿಗಾಗಿ ಸಕಲ ಸಚರಾಚರ ಜೀವಗಳನ್ನು ಬಲಿ ಕೊಡುವ ಸಂಕಷ್ಟಕ್ಕೆ ಸಿಕ್ಕಿದವರು ಅಲ್ಲ. ಈ ಹೆಣ್ಣುಮಕ್ಕಳು ವನದೇವತೆಯರಂತೆಯೇ ಕಾಡಿಗೆ ಕಾಲಿಟ್ಟವರು!

ಆದರೆ ಇವರೆಲ್ಲ `ಪಸದನದ ಬಸನಿ’ಯರು! (ಅಲಂಕಾರದ ವ್ಯಸನಿಯರು) ಹೊಸ ಮಾವಿನ ಮಿಡಿಯಲ್ಲಿ ಒಬ್ಬಳು `ಪಚ್ಚೆ ಸರ’ವನ್ನು ಮಾಡಿದಳಂತೆ ! ಮತ್ತೊಬ್ಬಳು ಸಂಪಿಗೆಯ ಹೂವನ್ನು ತರಿದು ಮುಡಿಗೇರಿಸಿಕೊಂಡಳಂತೆ! ಮತ್ತೊಬ್ಬಳು ಎಡಗಾಲಿನಿಂದ ಅಶೋಕ ವೃಕ್ಷವನ್ನು ಒದ್ದು `ದೋಹದ’ ( ಅಶೋಕ ವೃಕ್ಷವನ್ನು ಹೆಣ್ಣುಮಗಳು ಅಲಂಕೃತವಾದ ಎಡಗಾಲಿನಲ್ಲಿ ಒದ್ದರೆ ಹೂ ಬಿಡುತ್ತದೆ ಎನ್ನುವ ನಂಬಿಕೆ ಇದೆ). ಮಾಡಿದಳಂತೆ. ಕೆಲವರು ಕಾಯಿ ಕಿತ್ತು, ಹಣ್ಣು ಕಿತ್ತು ಕೊಂಬೆಯನ್ನೇ ಮುರಿದರು.

ಆದರೆ ತಾವು ಮಾಡಿದ ತಪ್ಪನ್ನು ಅರ್ಥಮಾಡಿಕೊಂಡು, ಕೇವಲ ಅಲಂಕಾರದ ಆಸೆಗಾಗಿ ಹೀಗೆ ಮಾಡಿದೆವು ಎಂದು ಕಾಡಿನ ಗಿಡಮರಗಳ ಕ್ಷಮೆ ಕೇಳಿದರು! ಕಾಡಿಗೆ ಕಾಡನ್ನೇ ಸುಡುವ ರಕ್ಕಸರ ನಡುವೆ ಮುರಿದ ಒಂದೆರಡು ಕೊಂಬೆಗಾಗಿ ಕ್ಷಮೆ ಕೇಳುವ ಈ ಹೆಣ್ಣುಮಕ್ಕಳು ಅದೆಷ್ಟು ವಿಶಿಷ್ಟವಾಗಿ ಕಾಣುತ್ತಾರೆ.

ಜಾಲಾರದ ತೋಪನ್ನು ನೋಡುವ ನನ್ನ ಸುಡುಬಯಕೆಗೆ ಇದೊಂದು ನೆಪವಾಗಿ ನಿನ್ನೆ ದೇವರಾಯನದುರ್ಗಕ್ಕೆ ಹೊರಟೆ. ನನ್ನ ಅಕ್ಕಂದಿರು ಬರುತ್ತೇನೆಂದರು. ಇಷ್ಟು ಹೊತ್ತಿಗೆ ಹೂಗಳೆಲ್ಲ ಉದುರಿಹೋಗಿರುತ್ತವೆ ಎಂದು ಅನುಮಾನವಿದ್ದರೂ ಜಾಲಾರದ ಸೆಳೆತ ಮಾತ್ರ ಬಿಟ್ಟಿರಲಿಲ್ಲ. ಕೊನೆಗೆ ನನ್ನ ಗಂಡ ನನ್ನ ವಿಚಿತ್ರ ಆಸೆಯನ್ನು ನೆರವೇರಿಸಲು ನನ್ನನ್ನು ಕರೆದುಕೊಂಡುಹೋಗಲು ನಿರ್ಧರಿಸಿದ.

‘ಇಲ್ಲಿ ಜಾಲಾರದ ತೋಪು’ ಎಲ್ಲಿ ಎಂದು ದಾರಿಯಲ್ಲಿ ಯಾರನ್ನೋ ಕೇಳಿದರೆ ಅದ್ಯಾವನೋ ವಿಚಿತ್ರವಾಗಿ ನಕ್ಕ. ನನಗೆ ವಿಪರೀತ ಕೋಪ ಬಂದು, `ಆ ತೋಪಿನಲ್ಲಿ ನಮ್ಮ ನೆಂಟರು ಇದ್ದಾರೆ’ ಎಂದೆ. ಅವನಿಗೆ ನಗು ತಡೆಯಲಾಗಲಿಲ್ಲ. `ತೋಪಿನಲ್ಲಿ ನೆಂಟರಾ? ಅಲ್ಲಿ ಯಾರು ವಾಸ ಮಾಡ್ತಾರೆ?’ ಎಂದು ಮತ್ತೆ ಗೊಳ್ಳನೆ ನಕ್ಕ. ಈ ಊರಿನ ಜನಕ್ಕೆ ಎಲ್ಲ ಹೂಗಳಂತೆ ಅದೂ ಒಂದು ಹೂವಷ್ಟೇ. ಅದನ್ನು ನೋಡಲು ಎಲ್ಲಿಂದಲೋ ಬರುವುದೇ ವಿಚಿತ್ರ ಅನ್ನಿಸಿತು. ಅದು ನನ್ನಲ್ಲಿ ಹುಟ್ಟಿಸಿದ ಅಲೌಕಿಕ ಪ್ರೇಮವನ್ನು ಕುರಿತು ಮಾತನಾಡಿದರೆ ಹಾಸ್ಯಾಸ್ಪದ ವಸ್ತುವಾಗಿ ಕಾಣಬಹುದು ಎನ್ನಿಸಿತು.

ಸರಿ, ಜಾಲಾರದ ಮರಗಳನ್ನು ನಾವೇ ಹುಡುಕಿಬಿಡೋಣ ಎಂದು ಗೆಳೆಯ ಗೆಳತಿಯರು ಹೇಳಿದ್ದ ಮಾರ್ಗದಲ್ಲಿ ಅಲೆದಾಡಿ ಎಲ್ಲೂ ಅರಸಿದ ಹೂ ಕಾಣದೆ ನಿರಾಶರಾದೆವು. ಅಲ್ಲಿ ಎಳನೀರು ಮಾರುತ್ತಿದ್ದ ವ್ಯಕ್ತಿಯೊಬ್ಬ, `ಅಯ್ಯೋ, ಈಗ ಬಂದಿದ್ದೀರಲ್ಲ, ಹೂವೆಲ್ಲ ಉದುರಿದೆ’ ಎಂದ. `ನಮಗೆ ಗಿಡ ತೋರಿಸಿ ಸಾಕು’ ಎಂದು ನನ್ನ ಅಕ್ಕ ಸರೋಜ ಕೇಳಿದಳು. ಅವನನ್ನು ಕಾರಿನಲ್ಲಿ ಕೂರಿಸಿಕೊಂಡು ಜಾಲಾರ ಗಿಡಗಳ ಬಳಿ ಬಂದೆವು. ಮರದ ಮೇಲೆ ಹೂವೆಲ್ಲ ಒಣಗಿ ಹೋಗಿತ್ತು. ಕೆಳಗೆ ಸುರಿದಿದ್ದ ಹೂಗಳನ್ನು ಬೊಗಸೆಯಲ್ಲಿ ಹಿಡಿದು ಬಾಲ್ಯವನ್ನೇ ಮೂಸಿದಂತೆ ಮೂಸಿದೆ. `ಜಾಲಾರ ತೋಪು’ ನೋಡಲು ಬಂದಿದ್ದು ನಿಜವಾಗಿಯೂ `ತೋಪಾಯಿತು’ ಅಂದು ತಮಾಷೆ ಮಾಡಿಕೊಂಡರೂ ಚಿಕ್ಕ ಹುಡುಗಿಯಂತೆ ಕೊಂಬೆ ಹಿಡಿದು ಆನಂದಿಸಿದೆ.

ನನ್ನ ಈ ಹುಚ್ಚನ್ನು ಗಮನಿಸಿದ ಎಳನೀರು ಮಾರುತ್ತಿದ್ದ ಹುಡುಗ ಇದ್ದಕ್ಕಿದ್ದಂತೆ ಮರವೇರಿ, ಎರಡು ದೊಡ್ಡ ಕೊಂಬೆಗಳನ್ನು ಮುರಿದು ಕೆಳಗೆಸೆದ. ಕೊಂಬೆಗಳನ್ನು ಮುರಿದರೆ ಕಸಿವಿಸಿಗೊಳ್ಳುವ ನಾನು ಅವನನ್ನು ಬೇಡಿಕೊಂಡು ಮರದಿಂದ ಕೆಳಗಿಳಿಸಿದ್ದಾಯಿತು. ಆ ಕೊಂಬೆಗಳಲ್ಲಿ ಇದ್ದ ಹೂಗಳು ಕಾಯಾಗುತ್ತಿದ್ದವು. ಆದರೂ ಅದನ್ನು ಹಿಡಿದು ಒಂದು ಭಾವಚಿತ್ರ ತೆಗೆಸಿಕೊಂಡೆವು. ಎಲ್ಲ ಶಾಲೆಯ ಗೆಳೆಯರು `ಸಿದ್ಧರ ಗುಡ್ಡ’ಕ್ಕೆ ಪ್ರವಾಸ ಹೋಗಿ, ಬಂದು ವರ್ಣನೆ ಮಾಡುತ್ತಿದ್ದ ಹೂವಲ್ಲವೇ? ಹೋಗಲಾಗದ್ದಕ್ಕೆ ಆಗ ಅದೆಷ್ಟು ಚಡಪಡಿಕೆಯಾಗುತ್ತಿತ್ತು.

ಶಿವರಾತ್ರಿಯಂದು ಶಿವನ ಪೂಜೆಗೆಂದು ಸಿದ್ಧರ ಗುಡ್ಡಕ್ಕೆ ಹೋಗಿ, ಬರುವಾಗ ಈ ದಿವ್ಯ ಪರಿಮಳವನ್ನು ಹಿಡಿದುತಂದು ಮನೆಯಂಗಳದಲ್ಲಿ ಸುರಿಯುತ್ತಿದ್ದ ಸಿದ್ಧಮ್ಮ, ಅವಳ ಮುಖದಲ್ಲಿ ಆಗ ಕಾಣುತ್ತಿದ್ದ ಒಂದು ಬಗೆಯ ಸಂತೃಪ್ತಿ ಮುಖದ ಮುಂದೆ ಬಂದು, ದಿವ್ಯತೆಯಲ್ಲಿ ಮತ್ತೊಮ್ಮೆ ಮಿಂದ ಅನುಭವ ನನಗಾಯಿತು.

1 comment

Leave a Reply