ಜಾಲಾರವಾಯ್ತು ‘ಘಮದ ಬಿಂದಿಗೆ’

ಜಾಲಾರ ಹೂವಿನ ಜಾಲ ಬೆಳೆಯುತ್ತಲೇ ಇದೆ.

ತುಮಕೂರಿನ ಲೇಖಕಿಯರ ಬಳಗ ದೇವರಾಯನದುರ್ಗಕ್ಕೆ ಜಾಲಾರ ನೋಡಲು ಹೋಗಿ ಬಂದ್ದದ್ದು, ಅದರ ಕುರಿತು ಲೇಖಕಿ ಶ್ವೇತಾರಾಣಿ . ಹೆಚ್ ಅವರು ಬರೆದ ಲೇಖನ ಪ್ರಕಟವಾಗಿತ್ತು.  ಅದು ಇಲ್ಲಿದೆ.

ಇದರಿಂದ ಪ್ರೇರೇಪಿತರಾದ ಎಂ.ಆರ್. ಕಮಲ ಅವರು ದೇವರಾಯನ ದುರ್ಗಕ್ಕೆ ಹೋಗಿ ಬಂದು ತಮ್ಮ ನೆನಪಿನ ಬುತ್ತಿಯನ್ನು ಹಂಚಿಕೊಂಡರು. ಅದು ಇಲ್ಲಿದೆ.

ಲೇಖಕಿಯರು ತೆಗೆದ ಜಾಲಾರದ ಫೋಟೊಗಳ ನೋಡಿ ಖ್ಯಾತ ಕವಯತ್ರಿ ಲಲಿತಾ ಸಿದ್ದಬಸವಯ್ಯ ಅವರು ಜಾಲಾರ ಹೂವನ್ನು ಘಮದ ಬಿಂದಿಗೆ ಯಾಗಿಸಿದ್ದಾರೆ. ಈ ಕವಿತೆ ಇನ್ನೂ ಬೆಳೆಯಲಿದೆ. ಸಧ್ಯಕ್ಕೆ ಇದ್ದಷ್ಟು ನಿಮ್ಮ ಮುಂದೆ. ಓದಿ- 

ಲಲಿತಾ ಸಿದ್ದಬಸವಯ್ಯ

ಜಾಲಾರವೆಂದರೆ ಬರಿಯ ಹೂವಲ್ಲ , ಅವಳು
ನೆನಪ ಸಂದೂಕದ ಬೀಗದೆಸಳು

ಘಮದ ಬಿಂದಿಗೆ ಅವಳು
ತದಿಗೆ ಚಂದಿರನಿಗು ಉದ್ದರಿಯ
ಕೊಡುವಾಕೆ , ಬೇಕೇನು ಕೇಳಿ ಪರಿಮಳದ ಸಾಲ

ಬಡ್ಡಿ ವಿಧಿಸುವುದಿಲ್ಲ
ಬೆವರಗಂಧವ ಕಟ್ಟಿ ಕಂತಿನಲಿ ತೀರಿಸಿ, ಮುಡಿದು ತೀರಿಸಿ, ಊರದೇವರ ಶಿರಕಿಟ್ಟು ತೀರಿಸಿ
ಅವಳ ಅಸಲು

ಊರ ಮಗಳಿವಳು,
ತಪ್ಪದಲೆ ಬರುವಳು
ಉರಿವ ಸೂರಪ್ಪ ಗಂಡನನು ಹಿಂದಿಕ್ಕಿಕೊಂಡು
ಶಿವರಾತ್ರಿ ಹಿಂದುಮುಂದು

ಜಾಲಾರವೆಂದರೆ
ಬರಿಯ ಹೂವಲ್ಲ
ಭಾವಕೋಶದ ಜೀವಕಣ ಇವಳು

2 comments

  1. ತ್ಯಾಂಕ್ಯೂ ಅವಧಿ, ತ್ಯಾಂಕ್ಯೂ ತುಮಕೂರು ಜಿಲ್ಲಾ ಲೇಖಕಿಯರ ಸಂಘ ( ನನ್ನ ಸಂಘ), ತ್ಯಾಂಕ್ಯೂ ಶ್ವೇತಾ ರಾಣಿ. ಜಾಲಾರ , ಬಿಲ್ವಪತ್ರೆ, ದವನ ಮತ್ತು ತಂಬಟ(ತಂಬಿಟ್ಟಿನ ರೂಪಾಂತರ! : ) ವಿಲ್ಲದೆ ನಮ್ಮ ಶಿವರಾತ್ರಿ ಹಬ್ಬ ಸಂಪೂರ್ಣವಾಗುತ್ತಿರಲಿಲ್ಲ. ನಮಗೆ , ಕೊರಟಗೆರೆಯ ಹೆಣ್ಣುಮಕ್ಕಳಿಗೆ ಜಾಲಾರ ಅರಳಿತೆಂದರೆ ಹತ್ತಿರದಲ್ಲೆ ಶಿವರಾತ್ರಿ ಬಂತೆಂದೇ ಅರ್ಥ. ನಮ್ಮ ಮನೆಗಳಲ್ಲಿ ಅದನ್ನು ಕಣ್ಣಿಗೊತ್ತಿಕೊಂಡು ಪೂಜೆಗಿಡುತ್ತಿದ್ದರು. ಈಗಲೂ ನಮ್ಮ ಜಾಲಾರ ಇಷ್ಟು ಪ್ರಿಯಳಾಗಿ ಉಳಿದಿದ್ದಾಳೆ, ಈಗ ಅವಳ ಘಮ್ಮತ್ತಿಗೆ ಚಿಂತಾಕ ಇಟ್ಟಂತಾಯ್ತು.

  2. ಅವಧಿಯ ಅಂಗಳದಲ್ಲಿ ಜಾಲಾರ ಜಾಡನ್ನು ಹುಡುಕಿಕೊಂಡು ಹೋದ ಶ್ವೇತಕ್ಕನವರು ಸಿಡಿಸಿದ ಜಾಲಾರ ಪರಿಮಳದ ಕಿಡಿಯೂ, ಅದಕ್ಕೆ ಇಂಬು ನೀಡುವಂತೆ ಕಮಲಕ್ಕನವರು ಹಬ್ಬಿಸಿದ ಜಾಲಾರ ಸುಗಂಧದ ಕಾಳ್ಗಿಚ್ಚು ತನ್ನ ಕೆನ್ನಾಲಿಗೆ ಚಾಚಿಕೊಂಡಾಗ, ಘಮದ ಬಿಂದಿಗೆಯಿಂದ ಲಲಿತಕ್ಕನವರು ಪ್ರೋಕ್ಷಿಸಿದ ಜಾಲಾರ ಸುವಾಸನೆಯಿಂದ ಕಾಡ್ಗಿಚ್ಚು ಸಧ್ಯಕ್ಕೆ ನಿಯಂತ್ರಣಕ್ಕೆ ಬಂದಿದೆಯಾದರೂ, ಅವಧಿಯಲ್ಲಿ ಶಿವತಾಂಡವ ಕುಣಿದ ಜಾಲಾರ ಘಮದ ಅಮಲು ಮೆದುಳಿನಿಂದ ಕರಗದಂತಾಗಿದೆ. ಸೋ… ಮುಂಬರುವ ಶಿವರಾತ್ರಿಯ ಆಸುಪಾಸಿನಲ್ಲಿ ಸಿದ್ಧರಬೆಟ್ಟಕ್ಕೆ ದಾಂಗುಡಿ ಇಕ್ಕಿ ನೆತ್ತಿ ತುಂಬ ಅವಳ ಗಂಧವನ್ನು ಅಡರಿಸಿಕೊಳ್ಳಬೇಕೆಂದು ಡಿಸೈಡ್‌ ಮಾಡಿದ್ದೇನೆ. ಅದ್ಹೆಂಗೇ ಘಮ ಘಮಿಸುತ್ತಾಳೆ ಈ ಊರ ಮಗಳು ಎಂಬುದನ್ನು ಪ್ರಾಯೋಗಿಕವಾಗಿ ಅನುಭವಿಸಲು ಪರಿತಪಿಸುವಂತಾಗಿದೆ. ಮುಂದಿನ ಶಿವರಾತ್ರಿಯವರೆಗೂ ಕಾಯಬೇಕಲ್ಲ.. ಎಂಬ ಕಟುಸತ್ಯವನ್ನು ಸಹಿಸಲಾಗುತ್ತಿಲ್ಲ! ಅವಧಿಗೂ ಮತ್ತು ತಮ್ಮೆಲ್ಲರಿಗೂ ಧನ್ಯವಾದ.

Leave a Reply