ಬಹಳ ಹೊತ್ತು ಮಾಡಲಾಗದು 

ಶ್ರೀದೇವಿ ಕೆರೆಮನೆ

ಸಿಕ್ಕೂ ಸಿಗದಂತಿರುವ ಮಿಂಚಿನ ಬಳ್ಳಿಗೆ ಕಾತರಿಸಿದ್ದೇನೆ ಬಹಳ ಹೊತ್ತು ಮಾಡಲಾಗದು
ಸಿಗುವ ಭರವಸೆಯಲ್ಲಿ  ಶತಮಾನಗಳಿಂದ ಕಾಯುತ್ತಿದ್ದೇನೆ ಬಹಳ ಹೊತ್ತು ಮಾಡಲಾಗದು

ಗೊತ್ತಾಗಲಿಲ್ಲ ನಾನು ಕೊಟ್ಟ ಪಡುವಣ ದಿಗಂತದ ವಿಳಾಸ ನಿನಗೆ ತಲುಪಿದ್ದು
ನಿನ್ನ ಮಾರೋಲೆಗೆ ವರ್ಷಗಟ್ಟಲೆ ಕಾದು ಬಸವಳಿದಿದ್ದೇನೆ ಬಹಳ ಹೊತ್ತು ಮಾಡಲಾಗದು

ಯಾರ ಕೈಗೂ ಸಿಗದ ಮಾಯಾವಿಗಾಗಿ ಹಗಲಿರುಳೂ ಹುಟುಕಾಟ ನಡೆದಿದೆ
ವಿಂಧ್ಯ ಕಣಿವೆಯ ಡಮರುಗದ ದನಿಗಾಗಿ  ಕನವರಿಸಿದ್ದೇನೆ ಬಹಳ ಹೊತ್ತು ಮಾಡಲಾಗದು

ಅಲ್ಲಲ್ಲಿ ಹರಿದ ಅಂಗಿಯಿಂದ ಇಣುಕಿದ ಬೆಳದಿಂಗಳ ಸವಿಯಲು ಸಾವಿರ ಕಣ್ಣುಗಳು
ಚರಕದ ನೂಲಲ್ಲಿ ಬಟ್ಟೆ ಹೊಲಿಯಲಾಗದೇ ದಣಿದಿದ್ದೇನೆ ಬಹಳ ಹೊತ್ತು ಮಾಡಲಾಗದು

ಕಡಲ ದಂಡೆಯ ಒಂಟಿ ಬಂಡೆಯೂ ಕರಗುತ್ತಿದೆ ನಿನಗಾಗಿ ನಾನು ಕಾಯುವುದ  ಕಂಡು
ದಿನವಿಡೀ  ಬೀಸಿದ ಉಪ್ಪಿನ ಗಾಳಿಗೆ ಕಪ್ಪಾಗಿದ್ದೇನೆ ಬಹಳ ಹೊತ್ತು ಮಾಡಲಾಗದು

ಯಾರೂ ಹೋಗದ ಕೇದಿಗೆ ಬನದಲ್ಲಿ ನಿನ್ನಂಥವರಿಗಾಗಿ ಮದಿರಾಲಯ ಕಟ್ಟಿಸಿದ್ದಾರೆ
ಮದಿರೆ ನಶೆಯೇರಿಸುತ್ತಿಲ್ಲ ಹಾವಿನ ವಿಷ ಕುಡಿದು ಅಮಲೇರಿದ್ದೇನೆ ಬಹಳ ಹೊತ್ತು ಮಾಡಲಾಗದು

ಬೇರೆ ಹೂವನ್ನೆಲ್ಲ ಬಿಟ್ಟು ಅದೇ ಮೊಗ್ಗಿಗಾಗಿ ಸುತ್ತುತ್ತಿದೆ ಚಿಟ್ಟೆಯೊಂದು ಬೆಳಿಗ್ಗೆಯಿಂದಲೇ
ಸುತ್ತ ಮುಳ್ಳುಗಳಿದ್ದರೂ ನಿನ್ನ ಕಣ್ಣೋಟದಿಂದಲೇ ಅರಳಿದ್ದೇನೆ ಬಹಳ ಹೊತ್ತು ಮಾಡಲಾಗದು

ಲೆಕ್ಕ ಹಾಕುತ್ತಿರಲಾಗದು ಅಮರಾವತಿಯ ಹಾದಿ ಹುಡುಕಿ ಸನ್ಯಾಸಿಯಾದದವರನ್ನು
ಐರಾವತದ ಬೆನ್ನೇರಿ ನಿನ್ನ ಪಲ್ಲಂಗದತ್ತ ನಡೆದಿದ್ದೇನೆ ಬಹಳ ಹೊತ್ತು ಮಾಡಲಾಗದು

ಆರ್ಭಟದ ಕಾಳಿಯೂ ಕಡಲು ಸೇರುವಾಗ ಸಣ್ಣಗೆ ನಾಚುವುದನು ಕಾಣುವುದೇ ಸೋಜಿಗ
ಯಾರೇನಾದರೂ ಅಂದುಕೊಳ್ಳಲಿ, ನಾನಂತೂ ಕಾನೇರಿಯಲ್ಲಿ ಮುಳುಗಿದ್ದೇನೆ ಬಹಳ ಹೊತ್ತು ಮಾಡಲಾಗದು

ನನ್ನ ಮನೆಯ ದಾರಿ ತೋರಲು ದೇವಗಡದ ದೀಪಸ್ಥಂಭದಲ್ಲಿ ಬೆಳಕನಿಟ್ಟವರಾರೋ
ಇರುಳ ಕರೆಗೆ ನಾಚಿದ ಸೂರ್ಯನೊಡನೆ ನಾನೂ ರಂಗೇರಿದ್ದೇನೆ ಬಹಳ ಹೊತ್ತು ಮಾಡಲಾಗದು

ಸಿರಿ ,  ತಿಂಗಳ ಸಮಯವಿದೆ ಮುಂಗಾರಿಗಾಗಿ, ಈಗಲೇ ಬೀಜ ಹದಗೊಳಿಸುವುದೇಕೆ?
ಮೊನ್ನೆಯ ಅಡ್ಡ ಮಳೆಗೆ
ಮೊಳಕೆಯೊಡೆದಿದ್ದೇನೆ ಬಹಳ ಹೊತ್ತು ಮಾಡಲಾಗದು

1 comment

Leave a Reply