ಜೀವಂತಿಕೆಯ ಊಟೆಯಾಗಿತ್ತು ‘ಶಿವೋತ್ಸವ’

ಉಮಾದೇವಿ ಕೆ ಎಸ್ ಗ್ಯಾರಳ್ಳ

ಮೊನ್ನೆ ಶಿವ ರಾತ್ರಿ ದಿನ ನಡೆದ ಶಿವೋತ್ಸವ ಒಂದು ವಿಶಿಷ್ಟ ಮತ್ತು ವಿಶೇಷ ಆಚರಣೆ ಅನಿಸಿತು.

ಶಿವೋತ್ಸವದ ಬಗ್ಗೆ ನನಗೆ ಗೊತ್ತಾದದ್ದೇ ಎರಡು ವರ್ಷಗಳಿಂದ ಈಚೆಗೆ. ಮಂಜುನಾಥ್ ರವರ ಪೋಸ್ಟ್ ನಿಂದ. ಆ ಪೋಸ್ಟ್ ಸೆಳೆಯಲು ಮತ್ತೊಂದು ಕಾರಣ ಆ ವರ್ಷ ಪ್ರಸನ್ನ ಅವರಿಗೆ ಗಣೆ ಗೌರವ ನೀಡಿದ್ದು.

ಜುಂಜಪ್ಪನ ಗುಡ್ಡೆ ಒಂದು ಸ್ಥಳದ ಹೆಸರು ಅನಿಸಿದರೂ ಜುಂಜಪ್ಪನ ಸಮಾಧಿ ಇರಬಹುದಾ ಅನಿಸಿತ್ತು. (ನಮ್ಮ ಕಡೆ ಸಮಾಧಿಗೆ ಗುಡ್ಡೆ ಎಂದೇ ಕರೆಯುವುದು ). ಮೇಲ್ಛಾವಣಿ ಇಲ್ಲದ ಜುಂಜಪ್ಪನ ಗುಡ್ಡೆ, ಅಲ್ಲಿ ಬೆಳ್ಳಗೆ ಹೂ ಅರಳಿಸಿ ಘಮ್ ಎನ್ನುತ್ತಿದ್ದ ಬೃಹತ್ ಬೇವಿನ ಮರ ತುಂಬಾ ಇಷ್ಟವಾಯಿತು. ಜೊತೆಗೆ ಬೆಳದಿಂಗಳೂ ಇದ್ದಿದ್ದರೆ ಇನ್ನೂ ಸೊಗಸೆನಿಸುತ್ತಿತ್ತು.

ಜುಂಜಪ್ಪನ ಗುಡ್ಡೆ ಕೆಂಕೆರೆಯ ಪುರದ ಮಠವನ್ನೇ ಕೆಲವು ರೀತಿಯಲ್ಲಿ ನೆನಪಿಸಿತು. ಬಯಲು, ಅಲ್ಲಿನ ಮರಗಳು, ಜೊತೆಗೆ ಅಲ್ಲಲ್ಲೇ ತಳಿಗೆ ಮಾಡುತ್ತಿದ್ದ ಜನ…..( ತಾವೇ ಅಡುಗೆ ಪರಿಕರ ತಂದು ಅಡುಗೆ ಮಾಡಿ ನೈವೇದ್ಯ ಮಾಡಿ ಊಟ ಬಡಿಸುವುದಕ್ಕೆ ತಳಿಗೆ ಮಾಡುವುದು ಅಂತಾರೆ ).

ಶಿವೋತ್ಸವದ ಬಗ್ಗೆ ಗೊತ್ತಾದ ಮೇಲೆ ಹೇಗಿರುತ್ತೆ ನೋಡಬೇಕೆನಿಸುತ್ತಿತ್ತು. ಈ ಸಲ ಹಬ್ಬಕ್ಕೆ ಅಮ್ಮನ ಊರಿಗೆ ಹೋಗಬೇಕೆಂದುಕೊಂಡಿದ್ದೆ. ಅಲ್ಲಿ ಚಿಕ್ಕಪ್ಪನ ಮಗಳು ರೂಪಾಗೆ ಇಂಥವುಗಳಲ್ಲಿ ಆಸಕ್ತಿ ಇರುವುದರಿಂದ ಹೇಗೂ ಜೊತೆಗೆ ಸಿಕ್ಕುತ್ತಾಳೆ ಹೋಗಿಯೇ ಬಿಡೋಣ ಅಂದುಕೊಂಡು ಸಿರಾದಿಂದ ಹೋಗುವ ಮಾರ್ಗ, ಬಸ್ ಮುಂತಾದ ಬಗ್ಗೆ ವಿಚಾರಿಸಿದೆ. ( ಆದರೆ ಊರಿಗೆ ಹೋಗಲಾಗಲಿಲ್ಲ ).

ನಾವು ಅಲ್ಲಿಗೆ ಹೋದಾಗ ಡಾ.ಕೆ. ತಿಮ್ಮನಹಳ್ಳಿ ವೇಣುಗೋಪಾಲ್ ಅವರು ಜುಂಜಪ್ಪನ ಕುರಿತು ಮಾತಾಡುತ್ತಿದ್ದರು. ವಿಶದವಾದ ಅವರ ಮಾತುಗಳಿಂದ ಜುಂಜಪ್ಪನ ಬಗ್ಗೆ ಇನ್ನೂ ತಿಳಿಯಲು ಅನುಕೂಲವಾಯಿತು. ಉಜ್ಜಜ್ಜಿ ರಾಜಣ್ಣನವರು ಮಾತು ಪ್ರಾರಂಭಿಸಿದಾಗ ನಾವು ಗುಡ್ಡೆ ಮತ್ತು ಊಟದ ಹತ್ತಿರಕ್ಕೆ ಹೋಗಿದ್ದರಿಂದ ಅವರ ಮಾತುಗಳನ್ನು ಕೇಳಲಾಗಲಿಲ್ಲ.

ಮತ್ತೊಮ್ಮೆ ನಾದ ಮಣಿನಾಲ್ಕೂರರ ಹಾಡು ಕೇಳುವ ಮತ್ತು ಭೇಟಿಯಾಗುವ ಅವಕಾಶ ಸಿಕ್ಕಿತು.

ಶಿವೋತ್ಸವದ ಮುಖ್ಯ ಭಾಗ ಗಣೆ ಗೌರವ. ಈ ಗೌರವಕ್ಕೆ ಭಾಜನರಾದವರನ್ನು ಅರೆ ವಾದ್ಯದೊಂದಿಗೆ ಗುಡ್ಡೆಯ ಹತ್ತಿರಕ್ಕೆ ಕರೆದುಕೊಂಡು ಹೋಗಿ. ಅಲ್ಲಿಂದ ಉತ್ಸವ ಮೂರ್ತಿಗಳ ಜೊತೆ ಸ್ವಲ್ಪ ದೂರದಲ್ಲಿ ಇದ್ದ ಮರವೊಂದರ ಬಳಿ ಹೋಗಿ ಅಲ್ಲಿಂದ ಜುಂಜಪ್ಪನ ಬಗ್ಗೆ ಹಾಡುತ್ತಾ.. ಕೂಗುತ್ತಾ.. ಕುಣಿಯುತ್ತಾ.. ಕರೆತರುವ ದೃಶ್ಯ ಎಲ್ಲರ ಮನ ಸೆಳೆಯುತ್ತೆ. ( ನಮ್ಮೂರ ಕಾಳಮ್ಮನ ಜಾತ್ರೆಯಲ್ಲಿ ಹೀಗೆಯೇ ಹಾಡುತ್ತಾರೆ ).

ವೇದಿಕೆಯಲ್ಲಿ ಕರಿಯ ಕಂಬಳಿ ಹಾಸಿ ಅದರ ಮೇಲೆ ಗೌರವಿಸುವವರನ್ನು ಕೂರಿಸಿ ಅವರ ಕೈಗೆ ಗಣೆ ಕೊಡುತ್ತಾರೆ. ಕೊಳಲಿನ ಮೂಲ ರೂಪವಾದ ಗಣೆ ಉದ್ದವಾದ ಒಂದು ಬಿದಿರಿನ ಕೋಲು. ಅದಕ್ಕೆ ಪವಿತ್ರ ಮತ್ತು ಮಹತ್ತ್ವದ ಸ್ಥಾನವಿದೆ. ಮುತ್ತುಗದ ಹೂಗಳ ಸೇಚನವೂ ವಿಶೇಷ ಅನಿಸಿತು.

ಸದಾ ಸೌಮ್ಯ ಮತ್ತು ಸಂಕೋಚದಿಂದಲೇ ಇರುವ ತೀ.ನಂ. ಶಂಕರ ನಾರಾಯಣರ ಸಾಧನಗೆ ಸಂದ ಅರ್ಥಪೂರ್ಣ ಗೌರವ ಇದು.
ಹೊನ್ನಗಾನಹಳ್ಳಿ ಕರಿಯಣ್ಣನವರ ಹಾಡು, ಕುಣಿತ ಮಣೇವು…ಎಲ್ಲಾ ಅಪ್ಪಟ ದೇಸಿಯೇ…
ಬಹಳ ದಿನಗಳ ನಂತರ ಚಿಕ್ಕಣ್ಣ ಎಣ್ಣೆ ಕಟ್ಟೆ ಮತ್ತು ನಾಗಪ್ಪ ನವರ ಮಾತುಗಳನ್ನು ಕೇಳಲು ಅವಕಾಶ ಸಿಕ್ಕಿತು.
ಮತ್ತೂ ಒಂದು ಮುಖ್ಯ ಅಂಶವೆಂದರೆ ವರ್ಷಗಳ ನಂತರ ಕಟಾವೀರನಹಳ್ಳಿ ನಾಗರಾಜ್ ರವರನ್ನು ನೋಡಿದ್ದು. ಗಜ್ಜೀರ ಹಳ್ಳಿ ಮಂಜುನಾಥ್ ಅವರನ್ನು ಪರಿಚಯಿಸದೇ ಇದ್ದರೆ ನನಗೆ ಗುರ್ತಿಸಲೂ ಆಗುತ್ತಿರಲಿಲ್ಲ.

‘ಆಟ -ಮಾಟ’ ತಂಡದ ‘ಮತ್ತೊಬ್ಬ ಮಾಯಿ’ ನಾಟಕವೂ ಚೆನ್ನಾಗಿತ್ತು. ಇಬ್ಬರೇ ಅಭಿನಯಿಸಿದ, ರಾಘವೇಂದ್ರ ಪಾಟೀಲರ ಕತೆ ಮನಸೆಳೆಯುವ ಮತ್ತು ಮನದಲ್ಲಿ ಉಳಿಯುವಂಥದ್ದು.

ಅಂದು ಮುಖಪುಟದ ಅನೇಕ ಸ್ನೇಹಿತರು ಸಿಕ್ಕಿ ಮಾತಾಡಿಸಿದ್ದೂ ಖುಷಿಯಾಯಿತು.

ಹಾಲ್ಕುರಿಕೆ ಶಿವಶಂಕರ್, ತಿಪಟೂರು ಸತೀಶ್, ಫೀನಿಕ್ಸ್ ರವಿ ಸಿಕ್ಕಿ ಮಾತಾಡಿಸಿದಾಗ ಎನ್. ಕೆ. ಹನುಮಂತಯ್ಯನ ನೆನಪು ಹಾಯದೇ ಇರುತ್ತದೆಯೇ?

ಶಿವೋತ್ವವದ ಕವಿಗೋಷ್ಠಿಯಲ್ಲಿ ಪದ್ಯ ಓದಲು ಅವಕಾಶ ಮಾಡಿಕೊಟ್ಟ ಮಂಜುನಾಥ್ ರವರಿಗೆ ಧನ್ಯವಾದಗಳು.
ಮಂಜುನಾಥ್ ಮೊದಲಿನಿಂದಲೂ ಕ್ರಿಯಾಶೀಲರೇ…ಅವರ ಕ್ರಿಯಾಶೀಲತೆಗೆ ಮತ್ತೊಂದು ಮುಖ್ಯ ಗರಿ ಈ ಶಿವೋತ್ಸವ.
(ಗೋಮಾರದ ಹಳ್ಳಿ ಮಂಜುನಾಥ್ ರವರೇ ಪಿ. ಮಂಜುನಾಥ್ ಎಂದು ಬಹಳ ದಿನಗಳವರೆಗೆ ನನಗೆ ಗೊತ್ತಿರಲೇ ಇಲ್ಲ. ಒಮ್ಮೆ ಗಂಡನ ಜೊತೆ ಮಾತಾಡುವಾಗ “ಯಾರೋ ಸಿರಾ ಕಡೆಯವರು ಮಂಜುನಾಥ್ ಎನ್ನುವವರ ಪೋಸ್ಟ್ ಚೆನ್ನಾಗಿರ್ತಾವೆ ” ಅಂದಾಗ “ಪಿ. ಮಂಜುನಾಥೇ ಅವರು” ಎಂದು ಹೇಳಿದಾಗಲೇ ಗೊತ್ತಾದದ್ದು. )

ನಾವು ಬೇಗನೇ ವಾಪಸ್ ಬಂದಿದ್ದರಿಂದ ‘ಸಾಲದ ಮಗು’ ಸಿನೆಮಾ ನೋಡಲು ಸಾಧ್ಯವಾಗಲಿಲ್ಲ.
ಇಂತಹ ಅಪರೂಪದ ಕಾರ್ಯಕ್ರಮಕ್ಕೆ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ, ಬೆಳಿಗ್ಗೆ ಮೈಸೂರಿಗೆ ಹೋಗುವ ಪ್ರೋಗ್ರಾಮ್ ಇದ್ದರೂ ಕವಿಗೋಷ್ಠಿವರೆಗೆ ಕಾದಿದ್ದು ಮತ್ತೆ ಸುರಕ್ಷಿತವಾಗಿ ಮನೆ ತಲುಪಿಸಿದ ಮಲ್ಲಿಕಾ ಮೇಡಂ ಮತ್ತು ಅವರ ಮಗನಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.

ಕಾರು ಹತ್ತಿದಾಗಿನಿಂದ ತುಮಕೂರಿಗೆ ವಾಪಸ್ ಬರುವವರೆಗೂ ನಮ್ಮ ಜೊತೆಯಲ್ಲೇ ಇದ್ದ, ಹಲವು ವಿಚಾರಗಳ, ಸ್ನೇಹಯುತ ಗಟ್ಟಿ ಮಾತುಗಳ ಪ್ರವೇಣಿ ಮೇಡಂನಂತೂ ಮರೆಯುವಂತೆಯೇ ಇಲ್ಲ.ಪದ್ಯ ಓದುವಾಗಿನ ನನ್ನ ಫೋಟೋ ಮತ್ತು ವಿಡಿಯೋದಿಂದ ಆ ಕ್ಷಣಗಳನ್ನು ದಾಖಲಿಸಿಕೊಟ್ಟ ನಾದರವರಿಗೂ ಧನ್ಯವಾದಗಳು.

ಒಟ್ಟಾರೆ ಎಲ್ಲಾ ರೀತಿಯಲ್ಲೂ ಜೀವಂತಿಕೆಯ ಊಟೆಯಾಗಿದ್ದ ಶಿವೋತ್ಸವ ಮೊದಲೇ ಹೇಳಿದಂತೆ ವಿಶಿಷ್ಟ ಮತ್ತು ವಿಶೇಷ ಆಚರಣೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಂಜುನಾಥ್ ಮತ್ತು ಅವರ ಸ್ನೇಹ ಬಳಗದ ಉತ್ಸಾಹ, ಊರಿನವರ ಪ್ರೋತ್ಸಾಹ ಹೀಗೆಯೇ ಇದ್ದು ಕಾರ್ಯಕ್ರಮ ಪ್ರತೀ ವರ್ಷವೂ ಯಶಸ್ವಿಯಾಗಲಿ…

1 comment

  1. ಶಿವೋತ್ಸವವು ದೇಶಿ ಸಂಸ್ಕೃತಿಯ ಜುಂಜಪ್ಪನ ಸನ್ನಿಧಿಯಲ್ಲಿ ಪ್ರತಿ ವರ್ಷ ಯಶಸ್ವಿಯಾಗಿ ನೆಡೆಯುತ್ತ ಬರುತ್ತಿದೆ. ಜನಪದರ ಜೀವಳ ಆಗಿರುವ ಜುಂಜಪ್ಪನ ಗುಡ್ಡೆ ಇಲ್ಲಿನ ಜನರ ಬಾಯಲ್ಲಿ ಜಾನಪದ ಹಾಡುಗಳು ಮತ್ತು ಸಂಬಂಧಿಸಿದ ಕಥೆಗಳು ಸದಾ ಗುನುಗುತ್ತವೆ. ಅಷ್ಟೇ ಅಲ್ಲ ಸಾಂಸ್ಕೃತಿಕ ವೀರ ಜುಂಜಪ್ಪನ ಯಶೋಗಾಥೆ ಬಹಳ ರೋಚಕವಾದುದ್ದು.

    ಜುಂಜಪ್ಪ ಒಬ್ಬ ಪಶುಪಾಲಕ. ಧನಗಳನ್ನು ಮೇಯಿಸಲು ಕಾಡಿಗೆ ಹೋಗುವುದು. ಆಗ ಜುಂಜಪ್ಪನ ಮಾವಂದಿರು ಅವನಿಗೆ ಕಿರುಕುಳ ಕೊಡುವುದು, ಇಂತಹ ಹಲವಾರು ಸಮಸ್ಯೆಗಳನ್ನು ಮೆಟ್ಟಿ ನಿಂತು ಜನಪದರ ಬಾಯಿಯಲ್ಲಿಂದು ಒಬ್ಬ ವೀರನಾಗಿ ನಿಲ್ಲುತ್ತನೆ.

    ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ಜುಂಜಪ್ಪನ ಗುಡ್ಡೆಯಲ್ಲಿ ಶಿವೋತ್ಸವವೆಂಬ ಉತ್ಸವ ಜಾನಪದದ ಬಗ್ಗೆ ಬೆಳಕು ಚೆಲ್ಲುತ್ತಿದೆ. ಈ ಶಿವೋತ್ಸವದ ಸಿದ್ಧತೆ, ವಿಶೇಷತೆ, ವೈಶಿಷ್ಟ್ಯತೆಯ ಕಂಡು ಉಮಾದೇವಿಯವರು ಪದಗಳ ರೂಪದಲ್ಲಿ ಓದುಗರಿಗೆ ತಲುಪಿಸಿದ್ದರೆ.

Leave a Reply