‘ಬೆನ್ನಿಗೆಲ್ಲಿಯ ಕಣ್ಣು’ ನಿಜಕ್ಕೂ ಒಂದೊಳ್ಳೆಯ ಪ್ರಯತ್ನ.

ಪ್ರಸಾದ್ ನಾಯ್ಕ್ 

ಇಂದು ಕೂತು ನರೇಶ್ ಭಟ್ ಅವರ ‘ಬೆನ್ನಿಗೆಲ್ಲಿಯ ಕಣ್ಣು’ ಕಿರುಚಿತ್ರವನ್ನು ನೋಡಿದೆ.

ಬಹಳ ದಿನಗಳ ನಂತರ ಒಂದೊಳ್ಳೆಯ ಚಿತ್ರವನ್ನು ನೋಡಿದ ಅನುಭವವಾಯಿತು. ಅಸಲಿಗೆ ಗಂಡಸು ಮತ್ತು ಒಬ್ಬಂಟಿತನದ ಬಗ್ಗೆ ಒಂದೊಳ್ಳೆಯ ಚಿತ್ರವನ್ನು ಸದ್ಯ ನೋಡಿರುವ ನೆನಪೇ ನನಗಿಲ್ಲ. ಪುರುಷನ ಬಗ್ಗೆ ಎಂತೆಂಥದ್ದೋ ಈ ಹಿಂದೆ ಬಂದುಹೋಗಿರಬಹುದು. ಪುರುಷನ ಕಾಮ, ಬರ್ಬರತೆ, ಲಂಪಟತನ, ತ್ಯಾಗ, ರಕ್ಷೆ… ಇತ್ಯಾದಿಗಳು. ಆದರೆ ಆತನೊಳಗಿನ ಭಾವನಾತ್ಮಕ ತಲ್ಲಣಗಳನ್ನು ತೆರೆಯ ಮೇಲೆ ತರಲು ಪ್ರಯತ್ನಿಸಿದ ಉದಾಹರಣೆಗಳು ತೀರಾ ಕಮ್ಮಿಯೇನೋ. ನಮ್ಮ ನಡುವಿನಲ್ಲೂ ಸಾಮಾನ್ಯವಾಗಿ ಇಂಥಾ ವಿಷಯಗಳು ಚರ್ಚೆಗೂ ಲಾಯಕ್ಕಲ್ಲವೆಂಬಂತೆ ಉಳಿದುಬಿಡುತ್ತವೆ. ಈ ನಿಟ್ಟಿನಲ್ಲಿ ‘ಬೆನ್ನಿಗೆಲ್ಲಿಯ ಕಣ್ಣು’ ನಿಜಕ್ಕೂ ಒಂದೊಳ್ಳೆಯ ಪ್ರಯತ್ನ ಅನ್ನಿಸಿತು. ಅಂದಹಾಗೆ ಇಂಥದ್ದೊಂದು ಕಾನ್ಸೆಪ್ಟ್ ಅನ್ನು ಎಳೆಯಾಗಿ ಇಟ್ಟುಕೊಂಡಿದ್ದ ‘ದ ಲಂಚ್ ಬಾಕ್ಸ್’ ಕೂಡ ನನ್ನನ್ನು ಗಾಢವಾಗಿ ಕಾಡಿದ ಚಿತ್ರಗಳಲ್ಲೊಂದು.

ಈ ಚಿತ್ರವನ್ನು ‘ದ ಲಂಚ್ ಬಾಕ್ಸ್’ ನೊಂದಿಗೆ ಹೋಲಿಸುತ್ತಿಲ್ಲವಾದರೂ ಎರಡೂ ಚಿತ್ರಗಳಲ್ಲಿ ಒಂದು ಸಾಮ್ಯತೆ ಇದೆ. ಅದು ಪುರುಷನೊಬ್ಬನ ಏಕಾಂಗಿತನ. ಎರಡೂ ಚಿತ್ರಗಳಲ್ಲಿ ಬರುವ ಕಥಾನಾಯಕ ಏಕಾಂಗಿ. ಆದರೆ ಎಲ್ಲರ ಏಕಾಂಗಿತನವೂ ಒಂದೇ ರೀತಿಯಿರುವುದಿಲ್ಲ. ಇಲ್ಲೂ ಇಲ್ಲ. ಉದಾಹರಣೆಗೆ ಲಂಚ್ ಬಾಕ್ಸಿನ ಸಾಜನ್ ಫೆರ್ನಾಂಡಿಸ್ ನ ಏಕಾಂಗಿತನ ಒಂದು ಕ್ಷಣ ನಮ್ಮನ್ನು ಕಾಡಿದರೂ ಕ್ರಮೇಣ ಅದೇನು ದೊಡ್ಡ ಸಂಗತಿಯೇ ಅಲ್ಲವೇನೋ ಎಂದನ್ನಿಸುತ್ತದೆ. ಏಕೆಂದರೆ ಇಳಿವಯಸ್ಸಿನಲ್ಲಿ ಏಕಾಂಗಿಯಾಗಿರುವುದು ಸಾಮಾನ್ಯ ಎಂದು ಸಾಮಾಜಿಕ ಚೌಕಟ್ಟಿನಲ್ಲಿ ನಮಗೆ ನಾವೇ ಅರ್ಥೈಸಿಕೊಂಡಿದ್ದೇವೆ. ಇಳಿವಯಸ್ಸಿನ ಜೀವವೊಂದು ಅಪರೂಪಕ್ಕೆ ತನ್ನ ಏಕಾಂಗಿತನವನ್ನು ವ್ಯಕ್ತಪಡಿಸಿದರೂ ‘ಈ ವಯಸ್ಸಿನಲ್ಲಿ ಜಪ-ತಪ ಮಾಡೋದು ಬಿಟ್ಟು ಜೊತೆ ಬೇಕು ಅಂತಿದ್ದಾರಲ್ಲಾ…’ ಎಂದು ಸುಮ್ಮನೆ ತಳ್ಳಿಹಾಕುತ್ತೇವೆ. ಸಾಂಗತ್ಯವೆನ್ನುವುದು ದೇಹಕ್ಕೆ ಸಂಬಂಧಪಟ್ಟಿರುವುದು ಮಾತ್ರ ಎಂದು ಮನಸ್ಸು ತರ್ಕ ಮಾಡುತ್ತಿರುತ್ತದೆ.

ಹಾಗೆ ನೋಡಿದರೆ ಸಾಜನ್ ನಿಗೂ ಈ ಬಗ್ಗೆ ಅಂಥಾ ಚಿಂತೆಯೇನಿಲ್ಲ. ತಾನು ಏಕಾಂಗಿ ಎಂಬುದನ್ನು ಆತ ಅದ್ಯಾವತ್ತೋ ಒಪ್ಪಿಕೊಂಡಿದ್ದಾನೆ. ಹೀಗಾಗಿಯೇ ಅವನಿಗೆ ಬದುಕೆಂಬುದು ಸಹ್ಯ. ಬುದ್ಧಿಯು ಮಕಾಡೆ ಮಲಗಿ ಹಾರ್ಮೋನುಗಳು ಕುಣಿದಾಡುವಂಥಾ ವಯಸ್ಸೂ ಅವನದ್ದಲ್ಲ. ಹೀಗಾಗಿ ತನ್ನ ಏಕಾಂಗಿತನವನ್ನೊಪ್ಪಿಕೊಂಡು ಆತ ಬದುಕುತ್ತಲೇ ಇದ್ದಾನೆ. ಬಿಸಿರಕ್ತದ ವಯೋಮಾನಗಳಲ್ಲಿ ಅಕ್ಷರಶಃ ಬದುಕೇ ಅನ್ನಿಸುವ ಪ್ರೀತಿ-ಕನಸು-ಪ್ರೇಮಗಳನ್ನೆಲ್ಲಾ ದಾಟಿ ಬಂದಿರುವ ಮಾಗಿದ ಹಂತ ಆತನದ್ದು. ಹೀಗಾಗಿ ಅಲ್ಲಿ ಪಶ್ಚಾತ್ತಾಪ, ತಳಮಳ, ಕಿತ್ತು ತಿನ್ನುವ ಏಕಾಂಗಿತನಗಳಿಲ್ಲ. ಸಾಜನ್ ನಿಜಕ್ಕೂ ಸುಖವಾಗಿದ್ದಾನೆಯೋ, ಆತನಿಗೆ ಸಂಗಾತಿಯ ಅವಶ್ಯಕತೆಯಿಲ್ಲವೋ ಎಂಬುದು ಬೇರೆ ಮಾತು. ಆದರೆ ಬದುಕು ಮಾತ್ರ ಆತನಿಗೆ ಸಹನೀಯವೇ ಎಂಬುದರಲ್ಲಿ ಎರಡು ಮಾತಿಲ್ಲ. ಅದು ಮಾಗಿದ ವಯಸ್ಸು ನೀಡುವ ಒಂದು ಮಾನಸಿಕ ಕಂಫರ್ಟ್.

ಆದರೆ ಇತ್ತ ಬೆನ್ನಿಗೆಲ್ಲಿಯ ಕಣ್ಣಿನ ಗಂಗಣ್ಣನ ಸ್ಥಿತಿಯೇ ಬೇರೆ. ಆತ ಒಂದೆಡೆ ತೀರಾ ಬಿಸಿರಕ್ತದ ಯುವಕನೂ ಅಲ್ಲ, ಇತ್ತ ಮುದುಕನೂ ಅಲ್ಲ. ಆದರೆ ವಯಸ್ಸು ಕೈಮೀರಿ ಹೋಗುತ್ತಿದೆ ಎಂಬ ಬಗ್ಗೆ ಗಂಗಣ್ಣನಿಗೆ ಸಂಪೂರ್ಣ ಅರಿವಿದೆ. ಹಾಗೆಯೇ ಜಗತ್ತಿನ ವೇಗದೆದುರು ನಾನು ಹಿಂದೆ ಬೀಳುತ್ತಿದ್ದೇನೆ ಎಂಬ ಗಾಬರಿಯೂ ಕೂಡ. ಆತನಿಗೆ ಕುಟುಂಬವೂ ಬೇಕು, ತನ್ನ ಕನಸುಗಳೂ ಬೇಕು. ಅಪ್ಪನೆದುರು ರೆಬೆಲ್ ಆಗಲು ಮನಸ್ಸು ಒಪ್ಪುತ್ತಿಲ್ಲ. ಆದರೆ ಸಂತೃಪ್ತ ಬದುಕಿನ ಬಗ್ಗೆ ಒಂದು ಹಿಡಿ ಕನಸುಗಳನ್ನು ಬಿಟ್ಟರೆ ಬೇರೆ ಭರವಸೆಯಿಲ್ಲ. ಬಹುಷಃ ಕ್ಷೀಣವಾದ hope ಅನ್ನುವುದೊಂದು ಬಿಟ್ಟರೆ ಗಂಗಣ್ಣನ ಬದುಕಿನಲ್ಲಿ ಬೇರೇನೂ ಹೇಳಿಕೊಳ್ಳುವಂಥದ್ದಿಲ್ಲ.

ಏಕಾಂಗಿತನವು ಗಂಗಣ್ಣನ ಬದುಕನ್ನು ಇಷ್ಟಿಷ್ಟಾಗಿಯೇ ಕಬಳಿಸುತ್ತಾ ಹೋಗುವುದು ಇಲ್ಲಿಯ ಗಮನಾರ್ಹ ಅಂಶ. ಆತ ಗಂಡಾಗಿರುವ ತಪ್ಪಿಗೆ ಇದನ್ನು ಮುಕ್ತವಾಗಿ ಹೇಳುವಂತಿಲ್ಲ. ಕಣ್ಣೀರಾದರೂ ಕತ್ತಲಲ್ಲೇ ಆಗಬೇಕು. ಗಂಗಣ್ಣನಿಗೆ ಆಸುಪಾಸಿನಲ್ಲಿ ತನ್ನ ವಯಸ್ಸಿನ ಗೆಳೆಯರಿಲ್ಲ. ವಿವಾಹಿತರ ಗುಂಪುಗಳು ಗಂಗಣ್ಣನನ್ನು ನಾಜೂಕಾಗಿಯೇ ದೂರವಿರಿಸುತ್ತವೆ. ಇನ್ನು ಆತ ಆತ್ಮಹತ್ಯೆಗೆ ಪ್ರಯತ್ನಿಸಿದ್ದೋ ಅಥವಾ ಬಾವಿಗೆ ಜಾರಿಗೆ ಬಿದ್ದಿದ್ದೋ… ಸತ್ಯ ಏನೇ ಇರಲಿ. ಒಟ್ಟಿನಲ್ಲಿ ಈ ಘಟನೆಯಂತೂ ಗಂಗಣ್ಣನ ಮಾನಸಿಕ ಸ್ಥೈರ್ಯವನ್ನು ಮತ್ತಷ್ಟು ಕುಗ್ಗಿಸುವಂತೆ ಮಾಡಿದೆ. (ಈ ಘಟನೆಯ ಸತ್ಯಾಸತ್ಯತೆಗಳ ಬಗ್ಗೆ ಗಂಗಣ್ಣನ ಪಾತ್ರವು ಕ್ಯಾಮೆರಾ ಮುಂದೆ ಹೇಳುವುದರಿಂದ ಗಂಗಣ್ಣ ಸತ್ಯವನ್ನೇ ನುಡಿಯುತ್ತಿದ್ದಾನೆ ಎಂದು ಒಪ್ಪಿಕೊಳ್ಳಲು ನನಗೆ ಸ್ವಲ್ಪ ಕಷ್ಟವಾಗುತ್ತಿದೆ. ಈ ದೃಷ್ಟಿಕೋನದಲ್ಲಿ ಇದೊಂದು open ended ಅನ್ನಿಸುವ ಬುದ್ಧಿವಂತಿಕೆಯ ನಿರೂಪಣಾ ಶೈಲಿ)

ಏಕೆಂದರೆ ಗಂಗಣ್ಣನಿಗೆ ಈ ಘಟನೆಯಿಂದಾಗಿ ಆಘಾತಕ್ಕಿಂತ ಹೆಚ್ಚಾಗಿ ನಾಚಿಕೆಯೇ ಆಗಿದೆ. ಸಾಮಾನ್ಯವಾಗಿ ಪುರುಷರು ತಮ್ಮ ಸೋಲುಗಳ, ದೌರ್ಬಲ್ಯಗಳ, ನೋವು, ಆತಂಕಗಳ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳುವುದು ಕಮ್ಮಿ. ಹೀಗೆ ಹೇಳಿ ತಾನು ಇತರರ ದೃಷ್ಟಿಯಲ್ಲಿ ದುರ್ಬಲ ಅನ್ನಿಸಿಕೊಳ್ಳಲು ಪುರುಷರು ಇಷ್ಟಪಡುವುದಿಲ್ಲ. ಈ ಬಾವಿ ಎಪಿಸೋಡಿನ ವಿಚಾರದಲ್ಲಿ ಗಂಗಣ್ಣನ ಅಸಹಾಯಕತೆಯೂ ಈ ಧಾಟಿಯದ್ದೇ. ಆತನೊಳಗಿನ ದುಃಖ ಅಗಾಧವಾದದ್ದು. ಬದುಕು ಗಾಣದೆತ್ತಿನಂಥದ್ದು. ಜೀವನಪೂರ್ತಿ ನಾನು ಹೀಗೆಯೇ ಇರಬೇಕೇನೋ ಎಂಬ ಸಂಕಟವೇ ಅವನ ಆತ್ಮಸ್ಥೈರ್ಯವನ್ನು ದಿನೇ ದಿನೇ ಕುಗ್ಗಿಸುತ್ತಿದೆ. ಅವನನ್ನು ಮತ್ತಷ್ಟು ಒಬ್ಬಂಟಿಯನ್ನಾಗಿಸಿದೆ. ಹಾಗೆ ನೋಡಿದರೆ ಲಂಚ್ ಬಾಕ್ಸಿನ ಸಾಜನ್ ಸಾಹೇಬ್ರೇ ವಾಸಿ. ಏಕೆಂದರೆ ದಿನಗಳೆದಂತೆ ಗಂಗಣ್ಣನಿಗೆ ತಾನು ಎಲ್ಲೂ ಸಲ್ಲದವನಾಗುವ ಭಯವೀಗ ಕಾಡುತ್ತಿದೆ. ಒಬ್ಬಂಟಿತನವೆಂಬುದು ಈಗ ಉಸಿರುಗಟ್ಟಿಸುತ್ತಿದೆ.

ಇಲ್ಲಿಯ ಮತ್ತೊಂದು ಅಂಶವೇನೆಂದರೆ ಸಾಮಾನ್ಯವಾಗಿ ಸಾಂಗತ್ಯದ ವಿಚಾರಕ್ಕೆ ಬಂದಾಗಲೆಲ್ಲಾ ಬಹುತೇಕರು ದೇಹದ ಮಟ್ಟಿನಲ್ಲಷ್ಟೇ ಅವಲೋಕಿಸುವುದು. ಇಲ್ಲೂ ಗಂಗಣ್ಣ ತನ್ನ ವಿವಾಹದ ಬಗ್ಗೆ ತನ್ನ ತಂದೆಯ ಬಳಿ ಒತ್ತಾಯಪಡಿಸುವಂತಿಲ್ಲ. ಹಾಗೇನಾದರೂ ಮಾಡಿದರೆ ”ಅದೇನೋ ನಿನಗೆ ಅಷ್ಟು ಆತುರ?”, ಎಂದು ಅಪ್ಪನಿಂದ ಕೇಳಿಸಿಕೊಳ್ಳುವಂತಾಗಬಹುದು. ಪರಿಚಿತರಲ್ಲಿ ಹಂಚಿಕೊಂಡರೆ ”ಸದಾಶಿವನಿಗೆ ಅದೇ ಧ್ಯಾನ” ಎಂದು ವ್ಯಂಗ್ಯಕ್ಕೀಡಾಗುವ ಭಯ. ಹೀಗೆ ಗಂಗಣ್ಣನಿಗೆ ಹೇಳುವಂತಿಲ್ಲ, ಬಿಡುವಂತಿಲ್ಲ. ಅವನೇ ಹೇಳುವಂತೆ ಹೊಲ, ರೆಫ್ರಿಜರೇಟರ್ರು, ಟೈಮು ಎಲ್ಲವೂ ಇದೆ ಅವನ ಬಳಿ. ಆದರೆ ತನ್ನ ಸಂತಸ-ದುಃಖಗಳನ್ನು ವಿಸ್ತರಿಸಿಕೊಳ್ಳಲು ಮತ್ತೊಂದು ಆತ್ಮೀಯ ಜೀವವಿಲ್ಲ ಅಷ್ಟೇ. ಗಂಗಣ್ಣ ಅಂಥಾ ಆಧುನಿಕ ಮನೋಭಾವದ ವ್ಯಕ್ತಿಯೇನೂ ಅಲ್ಲ. ಅಷ್ಟಿದ್ದೂ ಆತ ಕ್ಯಾಮೆರಾ ಮುಂದೆ ತನ್ನ ಸಮಸ್ಯೆಗಳನ್ನು ಒಂದಷ್ಟು ಹೇಳಿಕೊಳ್ಳುವುದೆಂದರೆ ಆತನೊಳಗಿನ ದುಃಖ, ಹತಾಶೆಗಳು ಅದ್ಯಾವ ಮಟ್ಟಿನದ್ದು ಎಂಬುದನ್ನು ಊಹಿಸಿಕೊಳ್ಳಬಹುದು.

ಹೀಗಾಗಿಯೇ ಗಂಗಣ್ಣ ಕಣಿ ಹೇಳುವವನ ಮಾತು ಕೇಳುವುದು ಪೆದ್ದುತನ ಅನ್ನಿಸುವುದಿಲ್ಲ. ಆತ ಬೆಂಗಳೂರಿನತ್ತ ಹೆಜ್ಜೆಹಾಕುವುದು escapism ಅನ್ನಿಸೋದಿಲ್ಲ. ಓರಗೆಯವರೆಲ್ಲಾ ಕುಟುಂಬ, ಮಕ್ಕಳುಮರಿಯೆಂದು ಸಿಟಿಯಲ್ಲಿ ಸೆಟಲ್ ಆಗಿರುವ ಉದಾಹರಣೆಗೆ ಅವನ ಕಣ್ಣಮುಂದಿದೆ. ಇದು ಆತನ ಭ್ರಮೆಯೂ ಆಗಿರಬಹುದು. ಆದರೆ ತನ್ನ ನಿರೀಕ್ಷೆಯ ಒಂದು ಪ್ರತಿಶತವಾದರೂ ಬೆಂಗಳೂರು ಮಹಾನಗರಿಯಲ್ಲಿ ನೆರವೇರುವುದೇ ಆಗಿದ್ದಲ್ಲಿ ಅದನ್ನಾತ ಬಿಡಲು ತಯಾರಿಲ್ಲ ಎಂಬುದೂ ಅಷ್ಟೇ ಸತ್ಯ. ಇನ್ನು ಮೇಲ್ನೋಟಕ್ಕಿದು ಸಂಗಾತಿಯಿಲ್ಲದೆ ಕಾಡುವ ಒಬ್ಬಂಟಿತನ ಎಂದನ್ನಿಸಿದರೂ ಇದೊಂದು ಭಾಗವಷ್ಟೇ ಎಂಬುದು ಸತ್ಯ.

ಗಂಗಣ್ಣನಿಗೆ ಹಾಗನ್ನಿಸದಿರಬಹುದು. ಗಂಗಣ್ಣನ ವಯಸ್ಸಿನವರಿಗೂ ಹಾಗನ್ನಿಸದಿರಬಹುದು. ಆದರೆ ಕೆಲವೊಮ್ಮೆ ಸಂಗಾತಿಯಿರುವುದಷ್ಟೇ ಎಲ್ಲವೂ ಆಗಿರುವುದಿಲ್ಲ. ಕುಟುಂಬ, ಸ್ನೇಹಿತರ ವಲಯ ಇತ್ಯಾದಿ solid support system ಗಳಿದ್ದರೆ ಒಬ್ಬಂಟಿತನವೆಂಬುದು ಗಂಗಣ್ಣನಿಗೆ ಕಾಡುವಷ್ಟು ತೀವ್ರವಾಗಿ ಕಾಡಬೇಕೆಂದಿಲ್ಲ. ಖಡಾಖಂಡಿತವಾಗಿ ಇದೇ ಪರಿಹಾರವಲ್ಲದಿದ್ದರೂ ಕೆಲವೊಮ್ಮೆ ದುಃಖವನ್ನು ಸಹನೀಯವಾಗಿಸುವಲ್ಲಿ ಇಂಥಾ support system ಗಳು ಸಹಕಾರಿ. ಗಂಗಣ್ಣನ ಬದುಕಿನಲ್ಲಿ ಇವುಗಳ ಕೊರತೆಯಿರುವುದೂ ಕೂಡ ಗಮನಾರ್ಹ ಅಂಶ. ದ ಲಂಚ್ ಬಾಕ್ಸಿನಲ್ಲೂ ಸಾಜನ್ ಫೆರ್ನಾಂಡಿಸ್ ಹೀಗೆ ಪಕ್ಕದ ಮನೆಯ ತುಂಬುಕುಟುಂಬವನ್ನು ಸುಮ್ಮನೆ ನೋಡುತ್ತಿರುವ ದೃಶ್ಯವೊಂದನ್ನು ತೋರಿಸಲಾಗಿದೆ. ಮನುಷ್ಯ ತೀರಾ ಸೋತುಹೋಗುವುದು ಇಂಥಾ ಸಂದರ್ಭಗಳಲ್ಲೇ. ಹೀಗೆ ಚಿತ್ರದಲ್ಲಿ ವೀಕ್ಷಕನಾಗಿ ಗಂಗಣ್ಣನ ಪಾತ್ರದ ಹಲವು ಪದರಗಳಿಗೆ ಸಾಕ್ಷಿಯಾಗುವುದು ಖುಷಿಯೆನ್ನಿಸುತ್ತದೆ.

‘ಬೆನ್ನಿಗೆಲ್ಲಿಯ ಕಣ್ಣು’ ಒಂದೊಳ್ಳೆಯ honest ಪ್ರಯತ್ನ. ಪುರುಷನ ಒಬ್ಬಂಟಿತನ, ಒಳಗಿನ ತಲ್ಲಣಗಳಂಥಾ ಸೂಕ್ಷ್ಮ ವಿಚಾರಗಳನ್ನು ತೆರೆಯ ಮೇಲೆ ಚೊಕ್ಕವಾಗಿ ತರುವುದು ಅಷ್ಟು ಸುಲಭವೇನಲ್ಲ. ನರೇಶರ ಕಥೆ ಮತ್ತು ನಟನೆ ಇಷ್ಟವಾದರೆ ಹಿನ್ನೆಲೆ ಸಂಗೀತವು ಕಥೆಯ ಭಾವತೀವ್ರತೆಯನ್ನು ಮನಮುಟ್ಟಿಸುವಂತಿದೆ. ಇನ್ನು ಸಂದೇಶವನ್ನೋ, ಇನ್ನೇನನ್ನೋ ಹೇಳುವ ಅವಸರಕ್ಕೆ ಬಿದ್ದು ಅನಗತ್ಯ ಸಾಹಸಕ್ಕೆ ಕೈಹಾಕಿ ಎಡವಟ್ಟುಮಾಡಿಕೊಳ್ಳದೆ ಚಿತ್ರದ ಒಟ್ಟಾರೆ ಅಂದವನ್ನು ಕಾದುಕೊಳ್ಳುವಲ್ಲಿ ಚಿತ್ರತಂಡವು ಯಶಸ್ವಿಯಾಗಿದೆ.

7 comments

 1. Thanks a lot for an amazing review!!
  PrayatnagaLu heege munduvariyutte!

  Shortfilm link here:

  https://www.youtube.com/watch?v=5l-A0HG217k

  Cast: Naresh Bhat, Amar Holegadde, Shrisha Dodmari, Ishwar K Bhat, Krishnamurthy Dodmari, Krishnananda Bhat
  Written, Directed and Edited by: Naresh Hegde Dodmari
  Cinematography: Prakash S R & Abhishek Hegde Shirnala
  Music: Chethan Kumar & Manish Phukan

 2. ಒಳ್ಳೆಯ ನೋಡಲೇಬೇಕಾದ ವಾಸ್ತವಿಕ ಕಥನ.. Acting, direction, screenplay, cinematography

  • ಧನ್ಯವಾದಗಳು! ನಮ್ಮ ಪ್ರಯತ್ನ ಮುಂದುವರೆಯಲಿವೆ!

 3. ಒಂಟಿತನ ಒಂದಲ್ಲ ಒಂದು ಸಂದರ್ಭದಲ್ಲಿ ಪ್ರತಿಯೊಬ್ಬ ಮನುಷ್ಯನನ್ನು ಆವರಿಸುತ್ತದೆ. ಕೆಲವರಲ್ಲಿ ಈ ಒಂಟಿತನ ಯೋಚನೆ ಹುಟ್ಟುಹಾಕಿ ಮಾನಸಿಕವಾಗಿ ಕುಂದಲು ಕಾರಣವಾಗಬಹುದು. ಆದರೆ, ಇದೇ ಒಂಟಿತನ ಕೆಲವರಲ್ಲಿ ಉತ್ತಮ ಆಲೋಚನೆಗಳನ್ನ ಸೃಷ್ಟಿಸಬಹುದು.

Leave a Reply