ಮತ್ತೆ ಮತ್ತೆ ಓದಬೇಕಾದ ಕೃತಿ ‘ನಿಜ ರಾಮಾಯಣದ ಅನ್ವೇಷಣೆಯಲ್ಲಿ’

ಪ್ರಸಾದ್ ರಕ್ಷಿದಿ

ನಾಗರಾಜ್ ಪ್ರೀತಿಯಿಂದ ಕೊಟ್ಟ ಪುಸ್ತಕವನ್ನು ಬೆಂಗಳೂರಿನಿಂದ ಊರು ತಲುವಷ್ಟರಲ್ಲಿ ಓದಿದೆ.
ಓದಿದ ಮೇಲೆ ಅನ್ನಿಸಿದ್ದು..

ನಾಗರಾಜ್ ಅವರು ರಾಮಾಯಣ ದಲ್ಲಿ ಅನ್ವೇಷಿಸಿದ್ದು ಸೀತಾಯಣವನ್ನು…..

ಅನೇಕ ವರ್ಷಗಳ ಅಧ್ಯಯನದ ಈ ಸೀತಾಯಣ, ರಾಮಾಯಣದ ಮರು ಓದಿಗೆ… ಮರು ವ್ಯಾಖ್ಯಾನಕ್ಕೆ ಬರಿಯ ಮಾರ್ಗದರ್ಶಿ ಮಾತ್ರವೇ ಆಗಿ ಉಳಿಯುವುದಿಲ್ಲ. ರಾಮಾಯಣವೆಂಬ ಮಹಾಕಾವ್ಯ ಮಾತ್ರವಲ್ಲ ಎಲ್ಲ ಮಹಾಕಾವ್ಯಗಳ ಮರುವ್ಯಾಖ್ಯಾನದ ಅಗತ್ಯವನ್ನು ಸಾಧಾರವಾಗಿ ತೆರೆದಿಡುತ್ತದೆ.

ಪುಸ್ತಕದ ಮೊದಲ ಭಾಗದಲ್ಲಿ ಸಂಪೂರ್ಣವಾಗಿ ಸೀತಾಯಣವೆಂಬ ರಾಮಾಯಣದ ಗರ್ಭಾಂಕುರವನ್ನು ಸಮಗ್ರವಾಗಿ ಮಂಡಿಸಿದರೆ, ಉತ್ತರಕಾಂಡವೆಂಬ ಎರಡನೆಯ ಭಾಗ ರಾಮಾಯಣ ಹೇಗೆ ರಾಮಾಯಣ ಕಾವ್ಯ ರೂಪು ಪಡೆಯುತ್ತ, ಆಳುವವರ ಕೈಯ ಆಯುಧವಾಗಿ ಪರಿವರ್ತನೆಯಾಗುವುದನ್ನು ವಿವರಿಸುತ್ತದೆ.

ಜೊತೆಗೆ ಅನೇಕ ಪ್ರಬುದ್ಧ ಬರಹಗಾರರೂ ಕೂಡಾ ರಾಮಾಯಣದ ಪ್ರಭಾವಕ್ಕೊಳಗಾಗಿ ಅದರ ಸಮರ್ಥಕರಾಗಿರುವುದನ್ನು ನಿರೂಪಿಸುತ್ತಾರೆ. ಇಂದಿಗೂ ವ್ಯಾಪಿಸಿರುವ ಅದರ ಬಳಕೆ ಮತ್ತು ಪರಿಣಾಮ ಬಗ್ಗೆ ನಮ್ಮನ್ನು ಎಚ್ಚರಿಸುತ್ತಾರೆ.

ಎರಡನೆಯ ಭಾಗದಲ್ಲಿನ ಕೆಲವು ಹೇಳಿಕೆಯಂತಹ ವಾಕ್ಯಗಳನ್ನು ನಾಗರಾಜ್ ಅವರು ಇನ್ನಷ್ಟು ವಿಶದೀಕರಿಸಬಹುದಿತ್ತು ಅನ್ನಿಸಿದರೂ ಮುಂದಿನ ಆವೃತ್ತಿಗಳಲ್ಲಿ ಅದಕ್ಕೆ ಅವಕಾಶವಿದೆ.

ಇಂತಹ ವಿಷಯಗಳನ್ನು ರೋಚಕವಾಗಿ, ಪ್ರಚೋದಕವಾಗಿ ಹೇಳುವವರ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಹೇಳಬೇಕಾದ್ದನ್ನು ನೇರವಾಗಿ ಹೇಳಿ ಓದುಗರನ್ನು ವೈಚಾರಿಕ ಚಿಂತನೆಯತ್ತ ನಿರ್ಭಾವುಕವಾಗಿ ಪ್ರೇರೇಪಿಸುವ ನಾಗರಾಜ್ ಅವರು, ಸತ್ಯದ ಹಲವು ಮಗ್ಗಲುಗಳನ್ನು ವಿವೇಚಿಸುವಾಗಲೂ ವಿರೋಧಿಗಳನ್ನು ಹತರಾಗಿಸಲು ಪ್ರಯತ್ನಿಸದೇ, ಚಿಂತನೆಗೆ ಹಚ್ಚಲು, ನಿರ್ಮೋಹಿಯಾಗಿ ಓದಲು ಪ್ರೇರೇಪಿಸುತ್ತಾರೆ.

ಆ ಮೂಲಕ ರಾಮಾಯಣದ ಮಾತ್ರವಲ್ಲ ಎಲ್ಲ ಕಾವ್ಯಗಳ ನಿಜದ ಅನ್ವೇಷಣೆಯ ಅಗತ್ಯವನ್ನು ಸಮರ್ಥವಾಗಿ ಹೇಳುತ್ತಾರೆ. ಮತ್ತೆ ಮತ್ತೆ ಓದಬೇಕಾದ ಕೃತಿ.

ಈ ಕೃತಿಯನ್ನು ಕೊಳ್ಳಲು-

Bahuroopi

Leave a Reply