ಒಂದೇ ಎರಡೇ.. ಅವು ಮುಗಿಯದ ನೆನಪುಗಳು

ನೆನಪು ಈಗ ಗರಿಗೆದರಿದೆ…….

(ಸ)ರ್ಕಾರಿ (ಹಿ)ರಿಯ (ಪ್ರಾ)ಥಮಿಕ ಶಾಲೆ, ಕಾಸರಗೋಡು ಚಿತ್ರ ಬಂದಿದ್ದು ಎಲ್ಲರಿಗೂ ಗೊತ್ತು.

ಆದರೆ ಇಲ್ಲಿ ಹಳಿಮನಿ ಅವರು ತಮ್ಮ ಕಾಚೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪರಿಚಯಿಸುವ ಲೇಖನವನ್ನು ಅವಧಿಗೆ ಬರೆದಿದ್ದರು ಅವಧಿಯಲ್ಲಿ ಪ್ರಕಟವಾಗಿತ್ತು ಅದು ಇಲ್ಲಿದೆ

ಅದನ್ನು ಓದಿದ ವೃಂದಾ ಅವರು ಈಗ ನೆನಪನ್ನು ಮೆಲುಕು ಹಾಕಿದ್ದಾರೆ,  ಅವರು ಓದಿದ ಹಾನಗಲ್ ನ ಬಾಳಂಬೀಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪರಿಚಯಿಸಲು ಮುಂದಾಗಿದ್ದಾರೆ. ಅವರ ನೆನಪಿನ ಬುತ್ತಿ ಹೊತ್ತ ಲೇಖನ ನಿಮಗಾಗಿ,

ನೆನಪಿನ ಓಣಿಯಲ್ಲಿ ನಡೆಯಲು ನಿಮಗೂ ಆಹ್ವಾನ. ನಿಮ್ಮ ನಿಮ್ಮ ಸರ್ಕಾರಿ ಶಾಲೆಗಳ ಪರಿಚಯ ಮಾಡಿಕೊಡಿ ನಿಮ್ಮಪಿ ಫೋಟೋ ಸಮೇತ avadhimag@gmail.com ಗೆ ಕಳಿಸಿ

ವೃಂದಾ

ಹೆಚ್ ಪಿ ಎಸ್ ಬಾಳಂಬೀಡ

ಇದೇನು? ಅನ್ನುವಂತೆಯೇ ಇಲ್ಲ. ಹೈಯರ್ ಪ್ರೈಮರಿ ಸ್ಕೂಲ್ ಬಾಳಂಬೀಡ. ತಾಲೂಕು ಹಾನಗಲ್  ಅಂದು ನಾವೆಲ್ಲ ಓದುವಾಗ, ಧಾರವಾಡ. ಇಂದು ಹಾವೇರಿ ಜಿಲ್ಲೆ. ಒಂದರಿಂದ ಏಳನೇ ತರಗತಿವರೆಗೆ ಇರುವ ಶಾಲೆ. ಸ್ವಾತಂತ್ರ್ಯ ಪೂರ್ವದಲ್ಲೇ ಇದ್ದ ಶಾಲೆಯಂತೆ. ಆದರೆ ನಾವು ಓದುವಾಗ ಮಾತ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂದೇ ಹೆಸರಿತ್ತು, ಈಗಲೂ ಕೂಡಾ ಅದೇ ಹೆಸರು. ಆಗ ಏಳು ತರಗತಿಗಳಿದ್ದರೂ ಎರಡೇ ರೂಮು. ಉಳಿದ ಕ್ಲಾಸುಗಳೆಲ್ಲ ದ್ಯಾಮವ್ವನ ಗುಡಿ, ಲಕ್ಷ್ಮೀದೇವಿಯ ಗುಡಿ ಇಲ್ಲಿ ನಡೆಯುತ್ತಿದ್ದವು.  ಗುರುಗಳೂ ಏಳು ಕ್ಲಾಸಿಗೂ ಸೇರಿ ಮೂರು ಜನ. ಒಬ್ಬೊಬ್ಬರಿಗೂ ಎರಡೋ ಮೂರೋ ಕ್ಲಾಸುಗಳು. ನಾಲ್ಕು ಐದನೇ ಕ್ಲಾಸು ಒಬ್ಬ ಗುರುಗಳಿಗೆ, ಹೀಗೆ. ಆದರೂ ಕೂಡಾ ನಮ್ಮೂರಿನ ಹುಡುಗರು ತುಂಬಾ ಜಾಣರು. ಪ್ರತಿ ವರ್ಷ ನ್ಯಾಶನಲ್ ಮೆರಿಟ್ ಸ್ಕಾಲರ್ಷಿಪ್ ಪರೀಕ್ಷೆಯಲ್ಲಿ ಒಬ್ಬರಾದರೂ ರ್ಯಾಂಕ್ ಪಡೆದಿರುತ್ತಿದ್ದರು.

ನಾವೆಲ್ಲ ಎರಡೋ ಮೂರನೆಯ ಕ್ಲಾಸಿನಲ್ಲಿದ್ದಾಗ,  ಯಾರ್ಯಾರು ನ್ಯಾಶನಲ್ ಮೆರಿಟ್ ಸ್ಕಾಲರ್ಷಿಪ್ ಪಡೆದಿರುತ್ತಾರೋ ಅವರನ್ನು ದೇವ ಮಾನವರಂತೆ ನೋಡುತ್ತಿದ್ದೆವು. ನಮ್ಮೂರಲ್ಲಿ ಯಾವುದೇ ವಿದ್ಯಾರ್ಥಿ ಜಾಣನೆಂದು ಹೆಸರು ಪಡೆಯ ಬೇಕಾದರೆ ಅವನು ಐ ಎ ಎಸ್ ಪಾಸು ಮಾಡಿದರೂ, ನೊಬೆಲ್ ಪಾರಿತೋಷಕ ಪಡೆದರೂ ಸಾಧ್ಯವಿಲ್ಲ. ಅವನು ನ್ಯಾಶನಲ್ ಮೆರಿಟ್ ಸ್ಕಾಲರ್ಷಿಪ್ ಪರೀಕ್ಷೆ ಪಾಸಾಗಿದ್ದರೆ ಸಾಕು. ಒಟ್ಟಿನಲ್ಲಿ ನಮ್ಮೂರಿನ ಶಾಲೆಗೆ ಅದೇ ಐ ಎ ಎಸ್.

ನಮಗೆ ಎಷ್ಟೇ ವಯಸ್ಸಾಗಲಿ, ಶಾಲೆ ಮತ್ತು ಬಾಲ್ಯ ಎಂದರೆ ನಾವು ಮತ್ತೆ ಮುಗ್ಧರಾಗಿ ಬಿಡುತ್ತೇವೆ. ಬಾಲ್ಯದ ಗೆಳೆಯರು ಮತ್ತೊಮ್ಮೆ ಸೇರಿ ಶಾಲಾ ದಿನಗಳಲ್ಲಿನ ನೆನಪನ್ನು ಹಂಚಿಕೊಳ್ಳುವುದಿದೆಯಲ್ಲ ಅದಕ್ಕಿಂತ ಮಧುರವಾದುದು ಜೀವನದಲ್ಲಿ ಮತ್ತೊಂದಿಲ್ಲ. ನನ್ನ ಕ್ಲಾಸಿನಲ್ಲಿ ನಾಲ್ವರು ಗಂಡು ಹುಡುಗರು, ನಾನೊಬ್ಬಳೇ ಹುಡುಗಿ. ಒಂದನೇ ತರಗತಿಯಿಂದ ಒಟ್ಟಾಗಿ ಬೆಳೆದವರು. ನನ್ನ ಮದುವೆಯಾಗಿ, ಅವರಿಗಿನ್ನೂ ಮದುವೆಯಾಗದೇ ಇದ್ದಾಗ, “ನಿಮ್ಮ ಮುಖಕ್ಕೆ ಯಾರು ಹೆಣ್ಣು ಕೊಡುತ್ತಾರೆ, ಇರಿ, ನಾನೇ ಹೆಣ್ಣು ಹಡೆದು ಕೊಡಬೇಕು  ಪಾಪ ಅಂತ.’ ಎಂದು ರೇಗಿಸುತ್ತಿದ್ದೆ. ಮೊನ್ನೆ ನನ್ನ ಮಗಳ ಮದುವೆಯಲ್ಲಿ ಎಲ್ಲರೂ ಒಟ್ಟಾಗಿ ಸೇರಿದಾಗ ಈ ಮಧುರ ನೆನಪು ಮತ್ತೊಮ್ಮೆ ಮರುಕಳಿಸಿತ್ತು. ನನ್ನ ಸಹಪಾಠಿ, ಶಿವಾನಂದ, ತನ್ನ ಎಂ ಫಿಲ್ ಪ್ರಬಂಧದಲ್ಲಿ, ತನ್ನ ಪ್ರಾಥಮಿಕ ಶಾಲೆಯ ಗೆಳೆಯರ ನೆನಪನ್ನು ಹಂಚಿಕೊಡಿದ್ದಾನೆ. ಮಹರಾಷ್ಟ್ರದ ಮೂಲೆಯಲ್ಲಿನ ಯೂನಿವರ್ಸಿಟಿಗೆ ಸಲ್ಲಿಸಿದ ಪ್ರಬಂಧದಲ್ಲಿ, ನಮ್ಮ ಹೆಸರನ್ನೂ ನೋಡಿದಾಗ ಆದ ಖುಷಿಗೆ ಎಣೆಎಲ್ಲಿತ್ತು.

ಸರ್ಕಾರಿ ಶಾಲೆಗೆ ವರ್ಷಕ್ಕೊಮ್ಮೆ ಇನ್ಸಪೆಕ್ಷನ್ ಗೆಂದು ಸಾಹೇಬರು ಬರುವ ಸಂಭ್ರಮವನ್ನಂತೂ ಮರೆಯುವಂತಿಲ್ಲ. ಇರುವ ಎರಡೇ ರೂಮಿನಲ್ಲಿ ಎಲ್ಲಾ ಕ್ಲಾಸಿನ ಹುಡುಗರನ್ನು ಕೂಡಿಸಿ ಪ್ರಶ್ನೆ ಕೇಳಿದಾಗ, 7 ನೇ ಕ್ಲಾಸಿನವರಿಗೆ ಕೇಳಿದ ಪ್ರಶ್ನೆಗೆ 5 ನೆಯ ಕ್ಲಾಸಿನವಳಾದ ನಾನು ಉತ್ತರಿಸಿದ್ದಕ್ಕೆ, ಆ ಸಾಹೇಬರು ಇಡೀ ಹಾನಗಲ್ ತಾಲೂಕಿನ ತುಂಬಾ ಇನ್ಸಪೆಕ್ಷನ್ ಗೆಂದು ಹೋದಾಗ, ಎಲ್ಲರ ಮುಂದೆ,     “ ಬಾಳಂಬೀಡದಲ್ಲಿ ವೃಂದಾ ಅಂತ ಒಂದು ಹುಡುಗಿ ತುಂಬಾ ಜಾಣೆಯಿದ್ದಾಳೆ.” ಅಂತ ವರ್ಣಿಸಿ, ನನ್ನನ್ನು ಪ್ರಸಿದ್ಧಿ ಮಾಡಿ ಬಿಟ್ಟಿದ್ದರು. ಮುಂದೆ ನನಗೆ ಏಳನೇ ಕ್ಲಾಸಿನಲ್ಲಿ ನ್ಯಾಶನಲ್ ಮೆರಿಟ್ ಸ್ಕಾಲರ್ಷಿಪ್ ಪರೀಕ್ಷೆ ಪಾಸಾದಾಗ, ತಾಲೂಕಿನ ಎಲ್ಲಾ ಗುರುಗಳೂ ತಮ್ಮ ತಿಂಗಳ ಮೀಟಿಂಗಿನಲ್ಲಿ ನಮ್ಮ 7 ನೇ ಕ್ಲಾಸಿನ ಗುರುಗಳಿಗೆ ಶುಭಾಶಯ ಹೇಳಿದ್ದರಂತೆ.

ಶಾಲೆ ಎಂದರೆ, ಅಭ್ಯಾಸದ ಜೊತೆಗೆ ಆಟವೂ ಇರುತ್ತದಲ್ಲ. ನನಗಂತೂ ಒಂದೂ ಆಟ ಬರುತ್ತಿರಲಿಲ್ಲ. ಆದರೆ ಪಂದ್ಯಾಟದ ದಿನ ಮಧ್ಯಾಹ್ನದ ಕವಾಯತು, ಲೇಝಿಮ್, ಕೋಲಾಟ, ನೃತ್ಯಗಳಲ್ಲಿ ನನ್ನನ್ನು ಮೀರಿಸೋರಿರಲಿಲ್ಲ. ಅವುಗಳಿಗೆ ನಾನೇ ರಾಣಿ. ಪ್ರತಿ ವರ್ಷ  ಲೇಝಿಮ್ ಮತ್ತು ಕೋಲಾಟದಲ್ಲಿ ಜಿಲ್ಲಾ ಮಟ್ಟದ ವರೆಗೂ ಸ್ಫರ್ಧಿಸುತ್ತಿದ್ದೆವು.

ಆರನೆಯ ಕ್ಲಾಸಿನಲ್ಲಿದ್ದಾಗ, ಶನಿವಾರ ಮಧ್ಯಾಹ್ನ, ಆಕಾಶವಾಣಿಯ ಗಿಳಿವಿಂಡು ಕಾರ್ಯಕ್ರಮದಲ್ಲಿ ನನ್ನದೊಂದು ಲೇಖನ, ನನ್ನ ನೆಚ್ಚಿನ ಆಟ ಎಂಬುದು ಧಾರವಾಡ ಆಕಾಶವಾಣಿಯಿಂದ ಪ್ರಸಾರವಾಗಿ. ಮರುದಿನ ಅದು ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ ಬಂದಿದ್ದು, ಆಕಾಶವಾಣಿಯವರು ನನ್ನ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ತಿಳಿಸಿದ ಟೆಲಿಗ್ರಾಂ ಅದೇ ದಿನ ತಲುಪಿ, “ಟೆಲಿಗ್ರಾಂ ಬಂದಿದೆ. ವೃಂದಾ ಎಂದು ಹೆಸರು” ಎಂದು ಪೋಸ್ಟಮ್ಯಾನ್ ಹೇಳುತ್ತಿದ್ದಂತೆ, ನನ್ನ ಕ್ಲಾಸಿನ ಹುಡುಗರೆಲ್ಲಾ, ಪೇಪರಿನಲ್ಲಿ ಇವಳು ಬರೆದಿದ್ದರಲ್ಲಿ ಅಕ್ಷರ ತಪ್ಪಾಗಿದ್ದಕ್ಕೆ ಪೋಲೀಸರು ಬರುತ್ತಾರಂತೆ ಎಂದು ಹೆದರಿಸಿದ್ದು, ನಾನು ದಿನವಿಡೀ ಜೋರಾಗಿ ಅತ್ತಿದ್ದು. ಅಯ್ಯಪ್ಪಾ ಒಂದೋ ಎರಡೋ, ಮುಗಿಯದ ನೆನಪುಗಳು

ಪ್ರಾಥಮಿಕ ಶಾಲೆಎಂದರೆ ಮುಗ್ಧತೆಯ ಪ್ರತೀಕ. ನೆನಪುಗಳ ಮುಚ್ಚಿದ ಬುಟ್ಟಿ, ಮಾಯಾ ಬಝಾರ್. ಎಳೆದಷ್ಟೂ ಹೊರಗೆ ಬರುವ ನೆನಪುಗಳು. ಮನೆ ತುಂಬಾ ಮಾವಿನ ಹಣ್ಣಿದ್ದರೂ ರಸ್ತೆ ಬದಿಯ ನೇರಳೆ ಹಣ್ಣು ಮತ್ತು ಮಾವಿನ ಹಣ್ಣಿಗೆ ಕಚ್ಚಾಡುತ್ತಿದ್ದುದು, ಸಿಕ್ಕಾಪಟ್ಟೆ ನೇರಳೆ ಹಣ್ಣು ತಿಂದು ಬಾಯಿಯಲ್ಲ ನೇರಳೆ ಬಣ್ಣವಾದಾಗ ಗುರುಗಳು ಬಯ್ಯುತ್ತಾರೆಂದು ಪೆಟ್ಟಿಕೋಟ್ ನಿಂದ ನಾಲಿಗೆ ತಿಕ್ಕಿ ತಿಕ್ಕಿ ಒರೆಸಿಕೊಂಡು, ಪಕ್ಕದವರನ್ನು ಕೇಳುವುದು ‘ಬಣ್ಣ ಹೋಯಿತಾ” ಅಂತ. ಮುಗಿಯದ ಮಾಸದ ನೆನಪುಗಳು. ಈಗ ಮೂವತ್ತೈದು ವರ್ಷಗಳ ನಂತರ ಈ ನೆನಪುಗಳನ್ನು ಮತ್ತೊಮ್ಮೆ ನೆನಪಿಸಿದ್ದಕ್ಕೆ ಅವಧಿಗೆ ಧನ್ಯವಾದಗಳು.

2 comments

  1. ಒಂದೇ ಎರಡೇ.. ಅವು ಮುಗಿಯದ ನೆನಪುಗಳು

    ನೆನಪು ಈಗ ಗರಿಗೆದರಿದೆ……ವ್ರಂದಾ ಇವರ ಈ ಲೇಖನದಲ್ಲಿ ಧಾರವಾಡ ಭಾಷೆಯ ಸೊಗಡು ಮತ್ತು ಶಾಲಾ ಜೀವನದ ನೆನಪಿನ ಬುತ್ತಿ ಬಿಚ್ಚಿ ಮತ್ತೊಮ್ಮೆಸವಿದಿದ್ದಾರೆ.

  2. Amazing article.. reminds me of my childhood memories.. school memories… indeed a nostalgic feeling

Leave a Reply