ಒಂದು ಒಂಟಿ ಹಸಿರು ಕಾಲುಹಾದಿ..

ರೇಣುಕಾ ರಮಾನಂದ

ಒಂದು ಒಂಟಿ ಹಸಿರು ಕಾಲುಹಾದಿ
ಈ ಕಾಲದಲ್ಲಿ ಬಲು ಅಪರೂಪದ್ದು
ಮೊನ್ನೆ ಅಕಸ್ಮಾತ್ ಕಣ್ಣಿಗೆ ಬಿದ್ದು
ಕಕ್ಕಾಬಿಕ್ಕಿಯೂ ರೋಮಾಂಚನವೂ ಒಟ್ಟೊಟ್ಟಿಗೆ ಆಯಿತು
ಅದು ಹೇಗೆ ಎಂದರೆ ಹೇಳಲು ಬಾರದು
ಎಲ್ಲಿ ಅಡಗಿತ್ತು ಇಷ್ಟು ದಿನ ಎಂದರೂ
ಮಾತಾಡಲಾಗದು

ಒಂಟಿ ಕಾಲುಹಾದಿ ಎಂದರೆ
ಒಬ್ಬರಷ್ಟೇ ಹೆಜ್ಜೆ ಮೇಲೆ ಹೆಜ್ಜೆಯಿಟ್ಟು
ನಡೆಯಬಹುದಾದದ್ದು
ಇಬ್ಬರಿದ್ದರೆ ಹಿಂದು ಮುಂದಾಗಿ ಹೋಗಬಹುದು
ಅಪ್ಪೂಟು ಅಂತೆಯೇ ಇದ್ದು
ಕನಸಿಗೆ ಬರುತ್ತಿತ್ತು ಆಗೊಮ್ಮೆ ಈಗೊಮ್ಮೆ
ಇಂದು ದರ್ಶನವಾಗಿ ಸಣ್ಣಗೆ ನಡುಕ ಹುಟ್ಟಿ
ನರನಾಡಿಗಳಲ್ಲಿ ರಕ್ತ ಜೋರಾಗಿ ಹರಿದು ತುಳುಕಲಾರಂಭಿಸಿತು
ಮೊದಲ ಬಾರಿ ಅವನನ್ನು ಕಂಡಾಗ
ಹೀಗೆ ಆಗಿತ್ತು

ಪ್ರಭಲ ವಿರೋಧದ ನಡುವೆಯೂ
ಎಲ್ಲ ಹೆದ್ದಾರಿ, ದಾರಿ, ಓಣಿ,ವೀಥಿ ಇತ್ಯಾದಿಗಳನ್ನು
ಬಿಟ್ಟು ನಾನೀಗ ಅಲ್ಲಿಯೇ ಖಾಯಂ ಸಂಚರಿಸುವ
ತೀರ್ಮಾನವನ್ನು ಮಾಡಿಬಿಟ್ಟಿದ್ದೇನೆ
ನನಗಿಷ್ಟೆ ಗೊತ್ತು
ಬಲಗಣ್ಣು ಹಾರುತ್ತಿದೆ
ಮುಂದಿನದು ದೇವರಿಗೆ ಅಥವಾ
ದೆವ್ವಕ್ಕೆ ಬಿಟ್ಟದ್ದು

ಒಂಟಿ ಕಾಲುಹಾದಿಯಲ್ಲಿ
ಎರಡೂ ಬದಿ ಹಸಿರು ಹುಲ್ಲು
ಕಾಲಕ್ಕೆ ತಕ್ಕಂತೆ ಸಣ್ಣ ಹೂಗಳು…
ಬಗ್ಗಿ ನೋಡಿದಾಗ ಕಂಡವುಗಳನ್ನು
ಕುಳಿತು ಮಾತಾಡಿಸದೇ ಇರಲಾಗದು
ಅಲ್ಲೇ ಇರುತ್ತವೆ ಐದಾರು ಸಣ್ಣ ಹುಳ
ಬೆನ್ನಟ್ಟಿಕೊಂಡಿರುವ ಜೋಡಿ ಹಳದಿ ಚಿಟ್ಟೆ
ಮತ್ತೊಂದಿಷ್ಟು ಸಾಲು ತನ್ನಷ್ಟಕ್ಕೆ ತಾನು ಹರಿವ ಇರುವೆ

ಮುಂದುವರಿದು
ಮುಂಜಾನೆಯಾಗಿದ್ದರೆ ಮುತ್ತಿಕ್ಕುವ ಇಬ್ಬನಿ
ಜಂಗ್ಲಿ ಜಾತಿಯ ನೆರಳು ಮದ್ಯಾಹ್ನ
ಸಂಜೆ ಹೊಳೆವ ಎಳೆಬಿಸಿಲ ರೇಕು
ಆಲಿಸಿದರೆ ಬಿದ್ದ ತರಗೆಲೆಗಳೂ
ತಕಧಿಮಿ ಕುಣಿವ ಸದ್ದು
ಒಂದು ಆರಾಮ ಕುರ್ಚಿ ಹಾಕಿಕೊಂಡರೆ ಮೂರೂ ಹೊತ್ತು ಮೌನವಾಗಿ ಕುಳಿತು ಇನ್ನಷ್ಟು
ಸಂಗತಿಗಳನ್ನು ಕಲೆಹಾಕಬಹುದು
ಅಷ್ಟಾದ ಮೇಲೆ ಎದ್ದು
ವಸಂತದಲ್ಲಿ ಹೂ ಬಿಟ್ಟ ಮುದಿ ವೃಕ್ಷದ
ಹೂಗಳನ್ನು ಮಡಿಲು ತುಂಬುವವರೆಗೂ ಹೆಕ್ಕಬಹುದು

ಈ ಒಂಟಿ ಕಾಲುಹಾದಿಯಲ್ಲಿ
ಮೌನಕ್ಕೆ ಮಾತು ಹಾಕುವ ಮಂದಿ
ಯಾರೂ ಸಿಕ್ಕುವುದಿಲ್ಲ
ನಾನಿಲ್ಲಿ ಹಾಡುಹೇಳುತ್ತ ಹೋಗಬಹುದು
ಏನನ್ನೋ ನೆನಪಿಸಿಕೊಂಡು
ಬೇಕಷ್ಟು ನಗಬಹುದು
ಜೊತೆಗೆರಡು ಹೆಜ್ಜೆ ಕುಣಿಯಬಹುದು
ಅಳುವುದಾದರೆ ಅತ್ತು ಹಗುರಾಗಬಹುದು
ದೊಡ್ಡ ದನಿಯಲ್ಲಿ ಸಮಾಧಾನ
ಮಾಡಿಕೊಳ್ಳಬಹುದು
ಆಗದವರಿಗೆ ವಾಚಾಮಗೋಚರ ಬಯ್ದುಕೊಳ್ಳಬಹುದು
ಸಂಜೆ ಕೊಂಚ ತಡವಾಗಿ ಮನೆಗೆ ಬಂದರೂ
ನನ್ನಿಷ್ಟದ ಕಾರಣ ಹೇಳಿಕೊಳ್ಳಬಹುದು

ನೋಡಿ..! ಇಷ್ಟೊಂದೆಲ್ಲ ಹೇಳಿಕೊಂಡರೂ
ಕೊಂಚವೂ ಸುಸ್ತೆಂಬುದಿಲ್ಲ ನನಗೆ
ಒಂಟಿ ಕಾಲುಹಾದಿಯ ಸುಖವಿರುವುದೇ
ಹಾಗೆ

ಬಿಸಿ ಡಾಂಬರು ಕರಗಿ ಕುದಿಯುವಾಗ
ಭಾರೀ ವಾಹನಗಳು ತಿರುವುಗಳಲ್ಲಿ ಮೆಟ್ಟಿ ನುರಿಯುವಾಗ
ಹೆದ್ದಾರಿಗಳು ಅಳುತ್ತವೆ
ಜಖಮ್ಮಿನ ಸದ್ದು ಇಲ್ಲಿಯವರೆಗೂ
ಕೇಳಿಸುತ್ತದೆ
ಆಗ ಮಾತ್ರ ಕಾಲುಹಾದಿ ಸಣ್ಣಗೆ ನಿಟ್ಟುಸಿರು ಬಿಟ್ಟು ಮಂಕಾಗುತ್ತದೆ
ಕವಲೊಡೆದು ಅಲ್ಲಿಯವರೆಗೆ ಹೋಗಿ
ಹಿಂಬಾಲಿಸಿ ಬಂದುಬಿಡು ಎಂದು ಹೆದ್ದಾರಿಯನ್ನು ದಿನಕ್ಕೊಂದಾವರ್ತಿ ಕೋರುತ್ತದೆ
ಇನ್ನುಳಿದ ಎರಡು ಕವಲುಗಳು
ಸಣ್ಣಗೆ ಜುಳು ಜುಳು ಹರಿವ ಹೊಳೆಯ ಕಡೆಗೆ, ಕಾಡುಹಣ್ಣುಗಳು ತುಂಬಿದ ಪುಟ್ಟ ಗುಡ್ಡಕ್ಕೆ
ಕರೆದೊಯ್ಯಲು ಸದಾ ಸಿದ್ಧವಾಗಿರುತ್ತವೆ

ನನಗೆ ಅನ್ನಿಸಿದ ಪ್ರಕಾರ
ಒಂದು ಒಂಟಿ ಕಾಲುಹಾದಿ
ಎಲ್ಲರದೂ ಸ್ವಂತದ್ದೊಂದು ಇದ್ದೇ ಇರುತ್ತದೆ
ಅವರೆಲ್ಲರಿಗೂ ಅದು ಒಂದಿಲ್ಲೊಂದು ದಿನ
ಕನಸಿಗೆ ಬಂದಿರುತ್ತದೆ
ಎಂದಾದರೊಂದು ದಿನ ಸಿಗಬಾರದೆಂದೇನೂ ಇಲ್ಲ
ಅದು

ಆಗ ಅವರೇನು ಮಾಡಬಹುದು..!!?
ಎಂಬುದೇ ಸಧ್ಯಕ್ಕಿರುವ ಉದ್ವೇಗ ನನಗೆ

 

11 comments

  1. ಒಂಟಿ ಹಾದಿಯ ಕವಿತೆ ಚೆನ್ನಾಗಿದೆ.. ಮೇಡಂ.. ಇಷ್ಟಪಟ್ಟೆ ಓದುತ್ತಾ…

    • ಪಲ್ಲವಿ ಮೇಡಂ..ಥ್ಯಾಂಕ್ಯೂ

    • ಥ್ಯಾಂಕ್ಯೂ ಪಲ್ಲವಿ ಮೇಡಂ

Leave a Reply