ಮುಗಿದಿಲ್ಲ ಇನ್ನೂ ನನ್ನ ಕವಿತೆ..

ಚಿದಂಬರ ನರೇಂದ್ರ

ಅರ್ಥ ನಾಕಾಣೆ
ದನಿಗಳೊಂದೆಂಟಾಣೆ
ಮುಗಿದಿಲ್ಲ ಇನ್ನೂ, ನನ್ನ ಕವಿತೆ.

ಕಣ್ಣ ಹನಿ ಜಿನುಗಿಲ್ಲ
ಕೆನ್ನೆ ಕೆಂಪೇರಿಲ್ಲ
ಅರಳಿಲ್ಲ ಇನ್ನೂ ಹೂ, ಕಾದ ಮಮತೆ.

ಕೆಂಡಗಳ ಹಡೆದಿಲ್ಲ
ಮೋಡಗಳ ಒಡೆದಿಲ್ಲ
ಕೆತ್ತಿಲ್ಲ ಕರಿಶಿಲೆಗೆ ಹಾರು ರೆಕ್ಕೆ.

ಕೆಂಪು ನೆಲ ಒಣಗಿಲ್ಲ
ಕಪ್ಪು ಮೈ ನೆರೆದಿಲ್ಲ
ನೆಲದ ಮಾತಿದು ಒಗಟು, ಆಗಸಕ್ಕೆ.

ಕೋಟೆಗಳು ಉರುಳಿಲ್ಲ
ಸ್ತುತಿ ಗಾನ ನಿಂತಿಲ್ಲ
ನರಳಿಹವು ನೂರು ದನಿ, ಉಸಿರಿನೊಳಗೆ.

ಹುತ್ತಗಳ ಕಿತ್ತಿಲ್ಲ
ಕತ್ತುಗಳ ಎತ್ತಿಲ್ಲ
ಬಿತ್ತಿಲ್ಲ ಕಿರುನಗೆಯ, ಕತ್ತಲೊಳಗೆ.

ಹಾಡು ಮುಗಿಯುವುದಿಲ್ಲ
ಹಾಡುವವಗಳಿವಿಲ್ಲ
ಹಾಡೆ ಹಾಡಿನ ತಾಯಿ, ಗಂಧ ಶೀಲೆ.

ಮುಗಿದರದು ಹಾಡಲ್ಲ
ಮುಗಿಯಲದು ಕಥೆಯಲ್ಲ
ಮುಗಿದರೆ ಮುಗಿದಂತೆ, ಜಗದ ಲೀಲೆ.

1 comment

Leave a Reply